ಮಗಳ ಮದುವೆಯನ್ನು ತಂದೆತಾಯಿಯರ ಒಬ್ಬನೇ ಮಗನೊಂದಿಗೆ ನಿಶ್ಚಯಿಸಿದಾಗ ಅವಳಿಗೆ ಸುಖ ಸಮೃದ್ಧಿ ಗ್ಯಾರಂಟಿ ಎಂದು ತಿಳಿಯಾಗುತ್ತದೆ. ಒಬ್ಬ ದಂಪತಿ ತಮ್ಮ ಮಗಳ ಮದುವೆಯ ಇನ್ವಿಟೇಶನ್‌ ಹಂಚುವಾಗ ಎಲ್ಲರೊಂದಿಗೆ ತಮ್ಮ ಮಗಳು ಅತ್ತೆ ಮಾವನ ಒಬ್ಬನೇ ಮಗನನ್ನು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡರು. ಆಗ ಒಬ್ಬ ನೆಂಟರು ಹಾಗಾದರೆ ಅವರ ಮನೆಯಲ್ಲಿ ನಮ್ಮ ಮನೆಯಲ್ಲಿರುವಂತೆ ಕಾಂತಿ ಇರುವುದಿಲ್ಲ. ನಮ್ಮ ಮನೆಯಲ್ಲಂತೂ ಮಾಮೂಲಿ ದಿನಗಳಲ್ಲಿಯೂ ಬಹಳಷ್ಟು ಜನ ಸೇರಿರುತ್ತಾರೆ. ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ ಎಂದರು. ಆಗಲೂ ಅವರು ಒಬ್ಬನೇ ಮಗನ ಗುಣಗಳನ್ನು ಹೊಗಳತೊಡಗಿದಾಗ ಆ ನೆಂಟರು ಆಕ್ರೋಶದಿಂದ ನಿಮಗೆ ಒಂಟಿ ಮಗನ ಬಗ್ಗೆ ಅಷ್ಟೊಂದು ಕ್ರೇಝ್ ಇದ್ದರೆ ನೀವು ಮಗನನ್ನು ಮಾತ್ರ ಹೆರಬೇಕಿತ್ತು. ಆಗ ಅವನ ಹೆಂಡತಿಯ ಕಡೆಯವರಿಗೂ ಇದೇ ರೀತಿಯ ಸುಖ ಸಿಗುತ್ತಿತ್ತು ಎಂದರು.

ಎಲ್ಲ ಅವನದೇ ಮದುವೆ ಮಾತುಕಥೆ ನಡೆಸುವಾಗ ಹುಡುಗಿ ಮನೆಯವರು ಇದೇ ವಿಷಯಕ್ಕೆ ಮಹತ್ವ ಕೊಡುತ್ತಾರೆ. ಹುಡುಗನ ಮನೆಯವರೂ ಸಹ ಒಪ್ಪಿಗೆ ಹೇಳುವಾಗ ಇದನ್ನೇ ಹೇಳುತ್ತಾರೆ. ಇದು ನಿಜವಾಗಿದ್ದರೂ ಈ ರೀತಿಯ ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪು.

ರಘು ಹಾಗೂ ಸೀಮಾ ದಂಪತಿಗಳು ಒಂದು ಟ್ರಸ್ಟ್ ಆರಂಭಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ ಅವರು ಮಗನನ್ನು ಟ್ರಸ್ಟಿ ಮಾಡದಿದ್ದಾಗ ಅವನು ತನ್ನ ಸಂಬಂಧಿಕರಿಗೆ ತನ್ನ ಅಪ್ಪ, ಅಮ್ಮನಿಗೆ ತಿಳಿಹೇಳಲು ಒತ್ತಡ ಹಾಕುತ್ತಾನೆ. ಆಗ ಅವನಿಗೆ ಅಪ್ಪ ಅಮ್ಮನ ಮಾತುಗಳಿಂದ ಸ್ಪಷ್ಟವಾಗುವುದೇನೆಂದರೆ ತಮ್ಮದೆಲ್ಲ ಮಗ ಸೊಸೆಯದು ಎಂದು. ಅವರ ಸಂಪಾದನೆ ಬಹಳಷ್ಟಿದೆ. ಆದರೂ ಅವರು ತಾವು ಕಾಯಿಲೆ ಬಿದ್ದಾಗಲೂ ಯಾರನ್ನೂ ಕೇಳುವುದಿಲ್ಲ. ನಮ್ಮ ಪಾಲನೆ, ಪೋಷಣೆಯಲ್ಲೇನಾದರೂ ಕೊರತೆ ಅನುಭವವಾಯಿತೇ? ನಮ್ಮ ಸಂಪೂರ್ಣ ಹಣವನ್ನು ಬಡವರ ಶಿಕ್ಷಣ ಮತ್ತು ಸಂಸ್ಕಾರಕ್ಕಾಗಿ ಖರ್ಚು ಮಾಡುತ್ತೇವೆ ಎಂದರು. ಸ್ವಲ್ಪ ದಿನಗಳಲ್ಲಿ ಮಗ ಸೊಸೆ ಸುಧಾರಿಸಿದರು. ಆಗ ತಾಯಿ ತಂದೆ ವಿಲ್‌ನ್ನು ಕೊಂಚ ಬದಲಿಸಿದರು. ತಮ್ಮ ಮಗ ಸೊಸೆಗೆ ಕೊಂಚ ಲಾಭ ಕೊಟ್ಟರು. ಆದರೆ ಟ್ರಸ್ಚ್ ವಿಷಯ ಬದಲಿಸಲಿಲ್ಲ.

ಎಲ್ಲವನ್ನೂ ತಮ್ಮದೆಂದುಕೊಳ್ಳುವ ಮಾನಸಿಕತೆ ಕರ್ತವ್ಯ ನಿಭಾಯಿಸುವಲ್ಲಿ ಭಾಧಕವಾಗಿರುತ್ತದೆ. ಕುಮಾರ್‌ ಚೆನ್ನಾಗಿ ಸಂಪಾದಿಸುತ್ತಿದ್ದರೂ, ಆಗಾಗ್ಗೆ ಅಪ್ಪ ಅಮ್ಮನಿಂದ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿರುತ್ತಾನೆ. ಅದರ ಬಗ್ಗೆ ಕೇಳಿದಾಗ ಈಗ ತಗೊಂಡ್ರೆ ಏನು, ಆಮೇಲೆ ತಗೊಂಡ್ರೆ ಏನು? ಅದರಲ್ಲಿ ವ್ಯತ್ಯಾಸ ಏನಿದೆ? ಎಲ್ಲ ನಂದೇ ತಾನೇ ಎಂದು ವಾದಿಸುತ್ತಾನೆ. ಅಪ್ಪ ಅಮ್ಮನಿಗೆ ಅದು ಇಷ್ಟವಿಲ್ಲ. ಈಗ ಅವರು ಬೇರೊಂದು ರೀತಿಯಲ್ಲಿ ಯೋಚಿಸತೊಡಗಿದ್ದಾರೆ.

male-female

ಹುಡುಗಿ ಕಡೆಯವರು ಚುರುಕು

ಹೆಚ್ಚಿನ ಕಡೆ ಹುಡುಗನ ಕುಟುಂಬ ಚಿಕ್ಕದಾದ್ದರಿಂದ ಹುಡುಗಿಯ ತವರುಮನೆಯವರು ಚುರುಕಾಗುತ್ತಾರೆ. ಅವರಿಗೆ ಇನ್ಯಾರು ನಾವೇ ತಾನೇ ಎಂದು ಯೋಚಿಸುತ್ತಾರೆ. ಅಂತಹ ಸ್ಥಿತಿಯಿಂದ ಹುಡುಗಿಯ ಅತ್ತೆಮನೆಯಲ್ಲಿ ಉತ್ಸಾಹಭಂಗವಾಗುತ್ತದೆ.

ಶೃತಿಗೆ ಆಗಾಗ್ಗೆ ಕೇಳಿಬರುವುದೇನೆಂದರೆ ನಮ್ಮ ಮನೆಯಲ್ಲಿ ಬರೀ ನಿಮ್ಮ ಮನೆಯವರೇ ತುಂಬಿಕೊಂಡಿದ್ದಾರೆ. ಏನಾದರೂ ಸಂದರ್ಭ ಸಿಕ್ಕರಾಯಿತು ಇಡೀ ಸೈನ್ಯ ಹಾಜರಾಗಿರುತ್ತದೆ ಎಂದು. ಶೃತಿ ತನ್ನ ತವರುಮನೆಯವರಿಗೆ, ಕರೆದರೆ ಇಷ್ಟು ಜನ ಬಂದ್ಬಿಡೋದೇ, ಇಲ್ಲೇ ಅಡ್ಡಾ ಮಾಡಿಕೊಂಡುಬಿಡೋದೇ ಎನ್ನುತ್ತಿದ್ದಳು. ಆಗೆಲ್ಲಾ ಮಾತಿಗೆ ಮಾತು ಬೆಳೆಯುತ್ತಿತ್ತು.

ಒಬ್ಬನೇ ಮಗನಿರುವ ಅಪ್ಪ ಅಮ್ಮ ದೊಡ್ಡ ಕುಟುಂಬದ ಜೊತೆ ಸಂಬಂಧ ಮಾಡಿ ಖುಷಿಯಾಗಿರುತ್ತಾರೆ. ಸೊಸೆಯ ಕಡೆಯವರು ಆಗಾಗ್ಗೆ ತಮ್ಮ ಮನೆಗೆ ಬರಲಿ ಎಂದು ಆಶಿಸುತ್ತಾರೆ. ಏಕೆಂದರೆ ಸಣ್ಣ ಕುಟುಂಬದ ಕೊರತೆಗಳನ್ನು ಅವರು ನೋಡಿರುತ್ತಾರೆ. ಆದರೂ ಅವರ ಮನೆಗೆ ಗುಂಪಾಗಿ ಹೋಗಲು ಕೆಲವು ಹೆಣ್ಣಿನವರಿಗೆ ಸರಿಹೋಗುವುದಿಲ್ಲ. ಗಂಡಿನ ಕಡೆಯವರೇ ಆದರಿಸಬೇಕು ಹಾಗೂ ಅವರು ಇಚ್ಛಿಸಿದಾಗ ಅವರ ಮನೆಗೆ ಹೋಗಿಬರುವುದು ಗೌರವಯುತವಾಗಿರುತ್ತದೆ ಎಂದುಕೊಂಡಿರುತ್ತಾರೆ. ತಮ್ಮ ಮಗಳು ಅಥವಾ ತಂಗಿ ವ್ಯಂಗ್ಯದ ಮಾತುಗಳನ್ನು ಕೇಳಬೇಕಾಗುತ್ತದೆ ಎಂದು ಅವರಿಗೆ ಗೊತ್ತು.

ಒಬ್ಬನೇ ಮಗ ಒಂದು ವೇಳೆ ತನ್ನ ಅತ್ತೆಯ ಮನೆಯೊಂದಿಗೆ ಹೆಚ್ಚು ಹೊಂದಿಕೊಂಡಿದ್ದರೆ ಅವನ ಮನೆಯವರಿಂದ ಕುಹಕದ ಮಾತುಗಳನ್ನು ಕೇಳಬೇಕಾಗುತ್ತದೆ. ಸುರೇಶನ ಚಿಕ್ಕಮ್ಮನ ಮಕ್ಕಳು ಅವನನ್ನು ಚುಡಾಯಿಸುತ್ತಿರುತ್ತಾರೆ, “ನೀನು ಬಿಡಪ್ಪಾ, ಈಗ ಅತ್ತೆಮನೆಯವರೇ ನಿನ್ನ ಕಣ್ಣಿಗೆ ಬೀಳೋದು. ನಮ್ಮನ್ನೆಲ್ಲಾ ಮರೆತು ಬಿಟ್ಟಿದ್ದೀಯ…..” ಆಗ ಸುರೇಶನಿಗೆ ಹೆಂಡತಿಯ ಮೇಲೆ ಕೋಪ ಬರುತ್ತದೆ.

ಮಗ ಒಬ್ಬನೇ ಅಲ್ಲ

ಒಬ್ಬ ದಂಪತಿ ತಮ್ಮ ಒಬ್ಬನೇ ಮಗನ ಮದುವೆ ನಿಶ್ಚಿತಾರ್ಥ ಮುಗಿಸಿ ನಮಗೀಗ ಒಬ್ಬ ಮಗಳೂ ಸಿಕ್ಕಳು ಎಂದು ಹೇಳಿದರು. ತಮ್ಮ ಮಗನ ಮಾನಸಿಕತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೆ ಮಾಡಿದೆ ಎಂದರು. ನಾವು ಬೇರೆ ಯಾವುದಾದರೂ ಮಗುವನ್ನು ಎತ್ತಿಕೊಂಡರೆ ಅವನು ತುಂಬಾ ಹಠ ಮಾಡುತ್ತಿದ್ದ, ಆ ಮಗುವಿಗೆ ಹೊಡೆಯುತ್ತಿದ್ದ, ಅದನ್ನು ಅಳಿಸುತ್ತಿದ್ದ, ಅದರ ಆಟದ ಸಾಮಾನುಗಳನ್ನು ಒಡೆದುಹಾಕುತ್ತಿದ್ದ. ನಾವು ಅವನಿಗೆ ಚಿಕಿತ್ಸೆ ಮಾಡಿಸಿದೆವು. ಆದರೂ ಅವನಲ್ಲಿ ಈ ಭಾವನೆ ಕೊಂಚ ಉಳಿದೇ ಇದೆ ಎನ್ನುತ್ತಾರೆ.

ಇನ್ನೊಬ್ಬ ದಂಪತಿ ಹೀಗೆ ಹೇಳುತ್ತಾರೆ, “ನಮ್ಮ ಮಗನೂ ಅಂತಹ ಮನೋಪ್ರವೃತ್ತಿಯನ್ನೇ ಹೊಂದಿದ್ದ. ಅವನ ಮಗ ಮತ್ತು ಮಗಳನ್ನು ನಾವು ಪ್ರೀತಿಸಿದರೂ ಅವನಿಗೆ ಸರಿಹೋಗುತ್ತಿರಲಿಲ್ಲ. ಅವನನ್ನು ಹೇಗೆ ಸರಿಪಡಿಸುವುದೆಂದು ಅರ್ಥವಾಗುತ್ತಿಲ್ಲ. ಅವನಿಗೆ ತಿಳಿ ಹೇಳುವುದು ಸುಲಭವಾಗಿರಲಿಲ್ಲ. ನಮ್ಮ ಮನೆಯಲ್ಲಿ ಮಾತು ಮಾತಿಗೂ ಜಗಳವಾಗುತ್ತಿರುತ್ತದೆ.”

ಕೇರಿಂಗ್ಶೇರಿಂಗ್ಅಭ್ಯಾಸವಿಲ್ಲ

ಒಬ್ಬನೇ ಮಗನೊಂದಿಗೆ ಮದುವೆ ಮಾಡಿಸುವುದು ಸುಲಭವಲ್ಲ, ಸವಾಲಿನಿಂದ ಕೂಡಿರುತ್ತದೆ. ಅಂತಹ ಹುಡುಗನನ್ನು ಬಹಳ ಮುದ್ದಿನಿಂದ ಸಾಕಿರುತ್ತಾರೆ. ಅದರಲ್ಲೂ ಅದೊಂದೇ ಮಗುವಾಗಿದ್ದರಂತೂ ಕೇಳುವುದೇ ಬೇಡ. ಅವರನ್ನು ಹೆಚ್ಚು ಕೇರ್‌ಮಾಡಲಾಗುತ್ತದೆ. ಇತರ ಮಕ್ಕಳನ್ನು ಕೇರ್‌ ಮಾಡಲು ಅಷ್ಟು ಉತ್ಸುಕರಾಗಿರುವುದಿಲ್ಲ. ಅವರಿಗೆ ಎಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತದೆ. ಹೀಗಾಗಿ ಅವರಿಗೆ ಶೇರ್‌ ಮಾಡಿಕೊಳ್ಳುವ ಅಭ್ಯಾಸ ಇರುವುದಿಲ್ಲ. ಆದ್ದರಿಂದ ಹೆಂಡತಿಯೇ ಆಗಲಿ, ಅವರಿಷ್ಟದಂತೆಯೇ ಅವರ ಜೀವನದಲ್ಲಿ ಪ್ರವೇಶಿಸುತ್ತಾರೆ. ಆದರೂ ಅವಳನ್ನು ಅವರು ಮನಸಾರೆ ಸ್ವಾಗತಿಸುವುದಿಲ್ಲ. ಅಂತಹ ವ್ಯಕ್ತಿಯ ಬದುಕಿನಲ್ಲಿ ಸ್ಪೇಸ್‌ ಪಡೆಯುವುದು ಹೆಂಡತಿಯಾದವಳಿಗೆ ಸವಾಲಾಗಿರುತ್ತದೆ.

thoughts

ಇಂತಹ ಒಬ್ಬನೇ ಮಗನನ್ನು ಮದುವೆಯಾದ ಹೆಣ್ಣೊಬ್ಬಳು ಹೀಗೆ ಹೇಳುತ್ತಾಳೆ, “ಇವರಿಗೆ ರಾತ್ರಿ ಹೊತ್ತು ಬಿಟ್ಟು ಬೇರೆ ಸಮಯದಲ್ಲಿ ನನ್ನ ರೂಮಿನಲ್ಲಿರುವುದು ಇಷ್ಟವಿಲ್ಲ. ಇವರ ಮನಸ್ಸು ಅಥವಾ ಇಚ್ಛೆ ಏನೇ ಇರಲಿ, ಭಾವನೆಗಳನ್ನು ಗೌರವಿಸಲು ಇವರಿಗೆ ಬರುವುದೇ ಇಲ್ಲ. ಇವರು ಜನರನ್ನು ವಸ್ತುಗಳೆಂದು ತಿಳಿಯುತ್ತಾರೆ.”

ಅಂತಹುದೇ ಇನ್ನೊಬ್ಬ ಹೆಣ್ಣು ಹೀಗೆ ಹೇಳುತ್ತಾಳೆ, “ನಾನು ತುಂಬಿದ ಕುಟುಂಬದಿಂದ ಬಂದವಳು. ಇಲ್ಲಿ ಬಂದು ಒಬ್ಬಂಟಿಯಾದೆ. ನನ್ನ ಗಂಡನಿರಲಿ, ಅವರ ತಂದೆತಾಯಿಗೂ ನಾನು ಯಾರೊಂದಿಗಾದರೂ ಶೇರ್‌ ಮಾಡುವುದು ಇಷ್ಟವಿಲ್ಲ. ಯಾರ ಜೊತೆಗಾದರೂ ಮಾತಾಡುವುದು, ಕೊಡುಕೊಳ್ಳುವುದು, ಕಷ್ಟಸುಖಗಳನ್ನು ಹಂಚಿಕೊಳ್ಳುವುದು, ಸಂಬಂಧಗಳನ್ನು ಗೌರವಿಸುವುದು ಇಷ್ಟವಿಲ್ಲ.

“ನಾವು ನಮ್ಮ ನಮ್ಮ ರೀತಿಯಲ್ಲಿ ಬದುಕೋಣ. ನಾನೂ ಮನುಷ್ಯಳು. ನನಗೂ ಆಲೋಚನೆಗಳಿವೆ, ಎಂದು ಸ್ಪಷ್ಟವಾಗಿ ಹೇಳಿದೆ. ಅವರಿಗೆ ಇದೆಲ್ಲಾ ಇಷ್ಟವಾಗುವುದಿಲ್ಲ. ಆದರೆ ಸಹಿಸಿಕೊಳ್ಳಲು ಕಲಿತಿದ್ದಾರೆ.”

ಎಲ್ಲರೂ ಒಂದೇ ತರಹ ಅಲ್ಲ

ಪಾಂಡು ತುಂಬಿದ ಅತ್ತೆಮನೆ ಪಡೆದು ಖುಷಿಯಾಗಿದ್ದಾನೆ. ಅತ್ತೆಮನೆಯವರು ತನ್ನ ಜೀವನದ ಕೊರತೆಯನ್ನು ಪೂರೈಸಿದರು ಎನ್ನುತ್ತಾನೆ. ತನ್ನ ನಾದಿನಿಯರು ಮತ್ತು ಪತ್ನಿಯ ಕಸಿನ್‌ಗಳನ್ನೂ ಕುಟುಂಬದ ಭಾಗವೆಂದು ಕೊಂಡಿದ್ದಾನೆ. ಅವರನ್ನು ಭೇಟಿಯಾಗಲು ಪಾರ್ಟಿಗಳನ್ನು ಕೊಡುತ್ತಾನೆ. ಎಲ್ಲರೂ ಅವನನ್ನು ಭಾವ, ಭಾವಾಜಿ ಎಂದು ಕರೆಯುತ್ತಾರೆ. ಅವನ ಹೆಂಡತಿ ಅದನ್ನು ಹುಚ್ಚುತನ ಎನ್ನುತ್ತಾಳೆ.  ಅವನ ತಾಯಿ ತಂದೆ, “ಪಾಂಡುಗೆ ಮೊದಲಿನಿಂದಲೂ ಹೊಂದಿಕೊಳ್ಳುವ ಸ್ವಭಾವ. ಅವನು ಎಂದಿಗೂ ಒಂಟಿಯಾಗಿರಲು ಇಚ್ಛಿಸಲಿಲ್ಲ. ಚಿಕ್ಕಂದಿನಲ್ಲಿ ಆಸ್ಪತ್ರೆಯ ಮುಂದೆ ಹೋಗುವಾಗೆಲ್ಲಾ ನನಗೆ ಚೆನ್ನಾಗಿರೋ ತಮ್ಮ, ತಂಗಿಯರನ್ನು ಕರೆದುಕೊಂಡು ಬನ್ನೀಂತ ನಮಗೆ ಹೇಳುತ್ತಿದ್ದ. ನಾನು ಒಬ್ಬಂಟಿಯಾಗಿದ್ದೀನೀಂತ ನಮಗೆ ಪದೇ ಪದೇ ಹೇಳ್ತಿದ್ದ.  “ನಾವು ಮತ್ತೆ ಮಕ್ಕಳನ್ನು ಪಡೆಯೋಣಾಂತ ಪ್ರಯತ್ನಪಟ್ಟೆ. ಆದರೆ ಯಶಸ್ವಿಯಾಗಲಿಲ್ಲ. ನಮಗೂ ಪಶ್ಚಾತ್ತಾಪವಾಗಿದೆ. ನಾವು ಯಾವುದಾದರೂ ಅನಾಥ ಹುಡುಗೀನ ದತ್ತು ತೆಗೆದುಕೊಳ್ಳಬೇಕಾಗಿತ್ತು. ಪಾಂಡುವಿನ ಬದುಕಿನಲ್ಲಿ ಅಸಹಾಯತೆಯಿಂದ ಒಂಟಿತನ ಬಂದಿದೆ. ಆದರೆ ಅವನು ಮಾನಸಿಕವಾಗಿ ಒಂಟಿಯಲ್ಲ,” ಎನ್ನುತ್ತಾರೆ.

ಒಬ್ಬನೇ ಮಗನಾಗಿರುವುದನ್ನು ಲಾಟರಿ ಎಂದುಕೊಳ್ಳದೆ ಸಹಜತೆಯಿಂದ ಸ್ವೀಕರಿಸಿ. ಎಲ್ಲವನ್ನೂ ತಮ್ಮದೆಂದು ತಿಳಿದು ನಡೆದರೆ ದುಃಖ ಹೆಚ್ಚಿಸುತ್ತದೆ. ಅಧಿಕಾರದ ಜೊತೆ ಜೊತೆಗೆ ಕರ್ತವ್ಯದ ಭಾವನೆ ಜವಾಬ್ದಾರಿಯನ್ನು ಉಂಟು ಮಾಡುತ್ತದೆ. ಒಬ್ಬನೇ ಮಗ ಅಥವಾ ಮಗಳ ಮದುವೆ ನೋಡಲು ಚೆನ್ನಾಗಿರುತ್ತದೆ. ಆದರೆ ಮುಳ್ಳುಗಳ ಕಿರೀಟದಂತಿರುತ್ತದೆ. ಏಕೆಂದರೆ ಅವರಿಗೆ ಸಹಜ ಸಂಬಂಧಗಳಲ್ಲೂ ಪರಸ್ಪರರಲ್ಲಿ ಮತ್ತು ಪರಸ್ಪರರ ಕುಟುಂಬ ವರ್ಗದವರಲ್ಲಿ ತಿರಸ್ಕಾರದ ಭಾವನೆ ಅನುಭವವಾಗುತ್ತದೆ.

ಹುಡುಗಿ ತಂದೆ ತಾಯಿಯ ಒಬ್ಬನೇ ಮಗನನ್ನು ಮದುವೆಯಾಗಿ ಕೇವಲ ಪತ್ನಿಯಾಗುವುದಷ್ಟೇ ಅಲ್ಲ ಅವನ ತಾಯಿ, ತಂಗಿ, ಸಂಬಂಧಿ, ಗೆಳತಿ ಎಲ್ಲ ಆಗುವ ಹೊಣೆಗಾರಿಕೆಯನ್ನೂ ತೆಗೆದುಕೊಳ್ಳಬೇಕು. ಗಂಡನ ನಖರಾಗಳನ್ನು ಸಹಿಸಿಕೊಳ್ಳಬೇಕು. ಅವನ ಮೂಡ್‌ಗೆ ತಕ್ಕಂತೆ ನಡೆದುಕೊಳ್ಳಬೇಕು. ಅವನ ಇಚ್ಛೆಗಳ ಮುಂದೆ ತಲೆ ಬಾಗಿಸಬೇಕಾಗುತ್ತದೆ. ಪತ್ನಿಯಾಗಿ ಅವನ ಮೇಲೆ ಅಧಿಕಾರ ಚಲಾಯಿಸಲು ಆಗುವುದಿಲ್ಲ. ಅವನ ಸ್ವೇಚಾಚಾರದ ಮನಸ್ಸನ್ನು ಗೆಲ್ಲಲು ಕೆಲವು ವಿಶೇಷವಾದ ಉಪಾಯಗಳನ್ನು ಮಾಡಲು ನಿಮ್ಮನ್ನು ನೀವು ಸಿದ್ಧಗೊಳಿಸಬೇಕು. ಆಗಲೇ ಒಬ್ಬನೇ ಮಗನೊಂದಿಗೆ ಮದುವೆಯನ್ನು ಚೆನ್ನಾಗಿ ನಿಭಾಯಿಸಬಹುದು.

–  ಮಂಗಳಾ ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ