ಬೆಂಗಳೂರಿನ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿರುವ ನಾನು, ಹಲವು ಹಿಮ ಪರ್ವತಗಳಲ್ಲಿ ಚಾರಣ ಮಾಡಿದ ಅನುಭವಿದ್ದ ನನಗೆ, ಈ ಬಾರಿಯ ಚಾರಣ ವಿಭಿನ್ನತೆಯಿಂದ ಕೂಡಿತ್ತು. ಕಾರಣ ಪ್ರತಿ ಸಾರಿ ಚಾರಣದ ಚಿತ್ರಗಳ ವಿಡಿಯೋಗಳನ್ನು ಮಕ್ಕಳಿಗೆ ತೋರಿಸಿ ಪಾಠಗಳಲ್ಲಿ ಬಳಸಿಕೊಳ್ಳುತ್ತಿದ್ದೆ. ಚಿತ್ರಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಮ್ಮನ್ನೂ ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುತ್ತಿದ್ದರು.

ಯಾವುದೇ ತರಬೇತಿ ಇಲ್ಲದ ಈ ಮಕ್ಕಳನ್ನು ಕರೆದುಕೊಂಡು ಹೋಗುವುದು ಸುಲಭದ ಮಾತಲ್ಲ ಎಂದು ಯೋಚಿಸುತ್ತಿರುವಾಗ ಸಹಾಯಕ್ಕೆ ಬಂದದ್ದು ಹಿರಿಯ ಉಪನ್ಯಾಸಕಿ ಪ್ರಶಾಂತಿ ಮೇಡಂ ಹಾಗೂ ಸಹೋದ್ಯೋಗಿಗಳು. ನೋಡಿಯೇಬಿಡೋಣ ಎಂಬ ಸಾಹಸಕ್ಕೆ ಕೈ ಹಾಕಿದೆ. ಆಗ ಎದುರಾದದ್ದು ಹಣದ ಸಮಸ್ಯೆ. ತಟ್ಟನೆ ನೆನಪಾದದ್ದು ಬೆಂಗಳೂರು ಉತ್ತರ ವಲಯದ ರೋಟರಿ ಸಂಸ್ಥೆ. ಇವರ ಧನ ಸಹಯೋಗದೊಂದಿಗೆ ಪ್ರವೇಶ ಶುಲ್ಕವನ್ನು ಭರಿಸಲಾಯಿತು. ನಂತರ ಚಾರಣಕ್ಕೆ ಅಗತ್ಯವಾದ ಪೋಷಕರ ಒಪ್ಪಿಗೆ ಪತ್ರ, ಇಲಾಖಾ ಅನುಮತಿ ಪಡೆದು ಚಾರಣದ ಸಿದ್ಧತೆ ಪ್ರಾರಂಭವಾಯಿತು. ಮಕ್ಕಳಿಗೆ ಪ್ರಥಮ ಚಾರಣವಾದ್ದರಿಂದ ತರಬೇತಿಯನ್ನು ಸಹ ನೀಡಲಾಯಿತು. 7 ದಿನದ ನಮ್ಮ ಚಾರಣದಲ್ಲಿ 20 ವಿದ್ಯಾರ್ಥಿಗಳು, ಇಬ್ಬರು ಉಪನ್ಯಾಸಕರು, ಹಳೆಯ ವಿದ್ಯಾರ್ಥಿ ಸೇನೆಯಲ್ಲಿರುವ ಸಂತೋಷ್‌ ಹಾಗೂ ವಿವಿಧ ರಾಜ್ಯಗಳಿಂದಲೂ ಸಹಚಾರಣಿಗರು ಭಾಗವಹಿಸಿದ್ದರು. ನಮ್ಮ ತಂಡದಲ್ಲಿ ಒಟ್ಟು 39 ಜನ ಚಾರಣಿಗರಿದ್ದರು.

ಡಿಸೆಂಬರ್‌ 15ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೋ ರೈಲಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಬೀಳ್ಕೊಡಲು ಪೋಷಕರು ಸ್ನೇಹಿತರ ದಂಡೇ ಆಗಮಿಸಿತ್ತು. ಶಿವ ಮತ್ತು ಸ್ನೇಹಿತರು ಚಾರಣಿಗರಿಗೆ ಅನುಕೂಲವಾಗಲೆಂದು ಒಂದು ಮೂಟೆ ಖಾರಪುರಿ ನೀಡುವುದರ ಮೂಲಕ ಶುಭ ಹಾರೈಸಿದ್ದರು. ವಾಸ್ಕೋ ತಲುಪಿದ ನಮ್ಮನ್ನು ಕರೆದುಕೊಂಡು ಹೋಗಲು ಅಲ್ಲಿನ ಮುಖ್ಯಸ್ಥರಾದ ರೋಹಿದಾಸ್‌ ಬಸ್ಸಿನ ವ್ಯವಸ್ಥೆ ಮಾಡಿದ್ದರು.

ಮೊದಲನೇ ದಿನ : ತಂಡದ ಚಾರಣಿಗರ ನೋಂದಣಿ, ಉದ್ಘಾಟನೆ, ಕ್ಯಾಂಪ್‌ ಫೈರ್‌ ಇರುತ್ತದೆ. ಕ್ಯಾಂಪ್‌ ಫೈರ್‌ನಲ್ಲಿ ತಂಡದ ಚಾರಣಿಗರ ಪರಿಚಯ ಹಾಗೂ ಚಾರಣದ ಪೂರ್ಣ ವಿವರ ನೀಡಲಾಯಿತು. ಗೋವಾದ ಮುಖ್ಯಮಂತ್ರಿ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. 7 ದಿನದ ಈ ಚಾರಣದಲ್ಲಿ 2 ದಿನ ಕಡಲ ತೀರದ ನಡಿಗೆ, 3 ದಿನ ಕಾಡಿನಲ್ಲಿ ಚಾರಣ, ಸುಮಾರು 10 ಕಿ.ಮೀ. ದೂರ ಕ್ರಮಿಸಬೇಕಾಗುವುದು.

ಎರಡನೇ ದಿನ : ಎರಡನೆ ದಿನ ಚಾರಣ ಪ್ರಾರಂಭವಾದದ್ದೇ ಮಧ್ಯಾಹ್ನದ ನಂತರ. ಪಣಜಿಯ ಬೇಸ್‌ ಕ್ಯಾಂಪ್‌ನಿಂದ 1 ಗಂಟೆ ಬಸ್ಸಿನಲ್ಲಿ ಪ್ರಯಾಣಿಸಿ `ಮೊಬರ್‌’ ಎಂಬ ಸ್ಥಳವನ್ನು ತಲುಪಿದೆವು. ಇಲ್ಲಿಂದ ಸುಮಾರು 12 ಕಿ.ಮೀ. ದೂರದ `ಬೆನೋಲಿಮ್’ ಕ್ಯಾಂಪ್‌ ತಲುಪುದು ನಮ್ಮ  ಗುರಿ. ತಂಪಾದ ಗಾಳಿ ಅಬ್ಬರಿಸಿ ಬರುತ್ತಿರುವ ಅಲೆಗಳ ದಡದಲ್ಲಿ ಒದ್ದೆಯಾದ ಮರಳಿನ ಮೇಲೆ ಹೆಜ್ಜೆ ಹಾಕಿದೆವು. ಮೊದಲ ಎರಡು ದಿನದ ಚಾರಣವನ್ನು ರಾತ್ರಿ ಚಾರಣ ಎಂದರೆ ತಪ್ಪಾಗಲಾರದು. ಸಂಜೆ 6 ಗಂಟೆಗೆ ಶಿವ ಕೊಟ್ಟ ಖಾರಪುರಿ ತಿಂದು ಸೂರ್ಯಾಸ್ತ ವೀಕ್ಷಿಸಿ ಮೊಬೈಲ್ ‌ಬೆಳಕಿನಲ್ಲಿ ನಡಿಗೆ ಪ್ರಾರಂಭಿಸಿದೆವು. ಕ್ಯಾಂಪ್‌ ತಲುಪಿದಾಗ ರಾತ್ರಿ 9 ಗಂಟೆಗೆ ಕ್ಯಾಂಪ್‌ ಲೀಡರ್‌ ನಮಗಾಗಿ ರುಚಿಯಾದ ಊಟದ ವ್ಯವಸ್ಥೆ ಮಾಡಿಸಿದ್ದರು. ಅನುಭವವಿಲ್ಲದ ಮಕ್ಕಳಿಗೆ ಮೊದಲ ದಿನ ಆಯಾಸವಾದ್ದರಿಂದ ಬೇಗ ನಿದ್ರೆಗೆ ಜಾರಿದರು.

ಮೂರನೇ ದಿನ : ಬೆಳಗ್ಗೆ ಎದ್ದ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ! ಕಾರಣ ಸುಂದರ ಕಡಲತೀರ…. ಎಲ್ಲಿ ನೋಡಿದರೂ ನೀರೇ ನೀರು….. ಆಗ ತಾನೇ ಮೂಡಿಬರುತ್ತಿದ್ದ ನೇಸರನ ಕಂಡು ಇವರ ಆನಂದಕ್ಕೆ ಪಾರವೇ ಇಲ್ಲ. ಈ ದಿನದ ಚಾರಣ ಪ್ರಾರಂಭವಾಗುವುದು ಮಧ್ಯಾಹ್ನದ ನಂತರ, ಈ ಚಾರಣದಲ್ಲಿ ಒಂದು ಕಾರ್ಯಾಗಾರವಿತ್ತು. ಇದರಲ್ಲಿ ಸಮುದ್ರದಲ್ಲಿ ಆಟವಾಡಲು ಹೋದಾಗ ಆಗುವ ಅನಾಹುತದ ಬಗ್ಗೆ ಯಾವ ರೀತಿ ಎಚ್ಚರ ವಹಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸುವರು. ಇಂದಿನ ಚಾರಣ `ಬೆನೋಲಿಮ್’ನಿಂದ 10 ಕಿ.ಮೀ. ದೂರದ ವ್ಯಾಸಿಲೋನ್‌ ತಲುಪಬೇಕು. ಈ ಕಡಲತೀರ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರಾದದ್ದು. ವ್ಯಾಸಿಲೋನ್ ಕ್ಯಾಂಪ್‌ ತಲುಪಿದಾಗ ರಾತ್ರಿ 9 ಗಂಟೆ.

ನಾಲ್ಕನೇ ದಿನ : ಇಂದಿನ ಚಾರಣ ಪ್ರಾರಂಭವಾಗುವುದು ಮುಂಜಾನೆ 7 ಗಂಟೆಗೆ, ಕೂಲೆಮ್ನಿಂದ ದೂಧ್‌ಸಾಗರ್‌ಗೆ ವ್ಯಾಸಿಲೋನ್‌ನಿಂದ 2 ಕಿ.ಮೀ. ಚಾರಣ ಮಾಡಿ ಕೊಲೆಮ್ ನಿಂದ ರೈಲಿನಲ್ಲಿ ದೂಧ್‌ಸಾಗರ್‌ ತಲುಪಿದೆವು. ಇನ್ನು ನಮ್ಮ ಮೂರು ದಿನದ ಚಾರಣ ಕಾಡಿನಲ್ಲಿಯೇ! ಯಾವುದೇ ಜನಸಂದಣಿ, ಮೊಬೈಲ್ ‌ಹಾವಳಿ, ವಾಹನದ ಗದ್ದಲವಿಲ್ಲದೆ ಪ್ರಕೃತಿಯ ಮಡಿಲಿನಲ್ಲಿ ಅಂಕುಡೊಂಕಾದ ಕಾಲು ದಾರಿ….. ಅಲ್ಲಲ್ಲಿ ಹರಿಯುವ ಹೊಳೆಗಳು ಎಂತಹ ಸುಂದರ ತಾಣ! ಆದರೆ ಕಾಡಿನಲ್ಲಿ ದಾರಿ ತಪ್ಪಿದರೆ ಹೊರಬರುವುದು ಅಷ್ಟು ಸುಲಭದ ಮಾತಲ್ಲ. ದಟ್ಟವಾದ ಕಾಡಿನ ನಡುವೇ ಉಳಿದುಕೊಳ್ಳಲು ಅವರಿಂದ ವ್ಯವಸ್ಥೆ ಮಾಡಲಾಗಿತ್ತು.

ಐದನೇ ದಿನ : ಹಕ್ಕಿಗಳ ಚಿಲಿಪಿಲಿ ನಿನಾದ ಮರಗಳ ಮಧ್ಯದಿಂದ ನುಸುಳಿ ಬರುತ್ತಿರುವ ಸೂರ್ಯ ಕಿರಣಗಳ ನಡುವೆ ಬೆಳಗಿನ ಉಪಾಹಾರ ಮುಗಿಸಿ ದೂಧ್‌ಸಾಗರ್‌ ಜಲಪಾತವನ್ನು ವೀಕ್ಷಿಸಲು ರೈಲು ಹಳಿಗಳನ್ನು ದಾಟಿ, ಸುರಂಗಗಳ ಮೂಲಕ ಕಾಡಿನ ಮಧ್ಯೆ ಚಾರಣ ಪ್ರಾರಂಭವಾಯಿತು. ನಾಲ್ಕು ಹಂತದಲ್ಲಿ 310 ಮೀ. ಎತ್ತರ, 30 ಮೀ. ಅಗಲವನ್ನು ಹೊಂದಿರುವ ಈ ಜಲಪಾತ ತನ್ನ ವೈಭವದ ದರ್ಶನ ಮಾಡಿಸುತ್ತಿತ್ತು. ಜಲಪಾತ ವೀಕ್ಷಿಸುತ್ತಾ ಕುಳಿತ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಜಲಪಾತಕ್ಕೆ ವಿದಾಯ ಹೇಳಿ, 12 ಕಿ.ಮೀ. ದೂರದ ಅಡವಿಯ ನಡುವೆ ಇರುವ ಕ್ಯಾರನ್‌ ಜೋಲ್ ತಲುಪಿದಾಗ ಸಂಜೆ 6 ಗಂಟೆ. ಪಕ್ಕದಲ್ಲಿಯೇ ಹರಿಯುತ್ತಿರುವ ಹೊಳೆಯಲ್ಲಿ ಸ್ನಾನ ಮಾಡಲು ಕ್ಯಾಂಪ್‌ ಲೀಡರ್‌ ತಿಳಿಸಿದಾಗ ಎಲ್ಲರಿಗೂ ಎಲ್ಲಿಲ್ಲದ ಆನಂದ. ಸೇನೆಯಲ್ಲಿರುವ ಸಂತೋಷ್‌ ಹಿಮಪಾತದಿಂದಾಗಿ ತಡವಾಗಿ ಬಂದು ದಟ್ಟಡವಿಯಲ್ಲಿ ಒಬ್ಬನೇ ಚಾರಣ ಮಾಡಿ ಕ್ಯಾಂಪ್ ಸೇರಿದ್ದು, ಮಕ್ಕಳ ಆನಂದಕ್ಕೆ ಪಾರವೇ ಇಲ್ಲದಂತೆ ಮಾಡಿತು.

ಆರನೇ ದಿನ : ಬೆಳಗಿನ ತಿಂಡಿ ಮುಗಿಸಿ 14 ಕಿ.ಮೀ. ದೂರದ ಜಂಬೋಲಿ ತಲುಪಲು ಸಿದ್ಧರಾದೆವು. ಹಸಿರಿನಿಂದ ಕೂಡಿದ ದಟ್ಟ ಅರಣ್ಯ. ಅಲ್ಲಲ್ಲಿ ಹರಿಯುವ ಹೊಳೆಗಳು… ಯಾವುದೇ ಸಾಹಸಕ್ಕೆ ಹೋಗದಂತೆ ಗುಂಪಿನಲ್ಲಿಯೇ ಚಾರಣಿಸಬೇಕು, ದಾರಿ ತಪ್ಪಿದರೆ ಹೊರಬರುವುದು ಕಷ್ಟವಾಗುತ್ತದೆ ಎಂದು ಕ್ಯಾಂಪ್‌ ಲೀಡರ್‌ ತಿಳಿಸಿದರು. ಮಕ್ಕಳಿಗೆ ಹುರಿದುಂಬಿಸುತ್ತಾ ಜಂಬೋಲಿ ತಲುಪಿದಾಗ ಸಂಜೆ 5 ಗಂಟೆ. ನಮಗಾಗಿ ಕಾಯುತ್ತಿದ್ದ ಕ್ಯಾಂಪ್‌ ಲೀಡರ್‌ ನಮ್ಮನ್ನು ಸ್ವಾಗತಿಸಿದರು.

ಏಳನೇ ದಿನ : ನಮ್ಮ ಚಾರಣದ ಕೊನೆಯ ದಿನ ಜಂಬೋಲಿಯಿಂದ 7 ಕಿ.ಮೀ. ದೂರದ ತಂಬಿದ್ದ ಸುರ್ವಲಾವನ್ನು ಅರಣ್ಯದ ಮೂಲಕವೇ ತಲುಪುದು. ಅಗಲವಾದ ಕಾಲುದಾರಿ, ವಿವಿಧ ರೀತಿಯ ಸಸ್ಯ ಪ್ರಭೇದಗಳು, ಬೃಹದಾಕಾರದ ಮರದ ಬಿಳಿಲುಗಳು, ಸಂತೋಷ್‌ನ ಸೇನೆಯ ಅನುಭವದ ಮಾತಿನಲ್ಲಿ ಅರಣ್ಯ ದಾಟಿದ್ದೇ ತಿಳಿಯಲಿಲ್ಲ. ರಸ್ತೆಗೆ ಬಂದಾಗ ನಮ್ಮನ್ನು ಕರೆದೊಯ್ಯಲು ವಾಹನ ಸಿದ್ಧವಾಗಿತ್ತು. ಅಲ್ಲಿಯೇ ಇದ್ದ ಶಿವ ದೇವಾಲಯವನ್ನು ಸಂದರ್ಶಿಸಿ ಚಾರಣಕ್ಕೆ ವಿದಾಯ ಹೇಳಿದೆವು.

ತಿಪಟೂರು ಎಸ್‌. ಲೀಲಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ