ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕರಾಗಿರುವ ಡಾ. ಸಿ.ಆರ್‌. ಜಯಂತಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಹಾಗೂ ಮಿಂಟೊ ಕಣ್ಣಿನ ಆಸ್ಪತ್ರೆ ಸೇರಿದಂತೆ 5 ಆಸ್ಪತ್ರೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಬೆಂಗಳೂರು ನಗರ ಕೊರೋನಾದ ಕಪಿಮುಷ್ಟಿಗೆ ಸಿಲುಕುತ್ತಿದ್ದಂತೆ, ಆಸ್ಪತ್ರೆಯನ್ನು ಪರಿಪೂರ್ಣವಾಗಿ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲು ಸರ್ಕಾರ ಆದೇಶ ಹೊರಡಿಸಿತು. ಅದರ ಜೊತೆಗೆ ಡಾ ಸಿ.ಆರ್‌. ಜಯಂತಿಯವರನ್ನು ಕೋವಿಡ್‌ ಟಾಸ್ಕ್ ಫೋರ್ಸ್ ಕಮಿಟಿಯ ಮುಖ್ಯಸ್ಥರನ್ನಾಗಿ ನೇಮಿಸಿತು.

ಟಾಸ್ಕ್ ಫೋರ್ಸ್‌ ಕಮಿಟಿಯ ಮುಖ್ಯಸ್ಥರೆಂದರೆ ಅದೊಂದು ಅತ್ಯಂತ ಸೂಕ್ಷ್ಮ ಜವಾಬ್ದಾರಿಯ ಕೆಲಸವಾಗಿತ್ತು. ಅದನ್ನು ಅತ್ಯಂತ ಚಾಲೆಂಜ್‌ ಆಗಿ ಸ್ವೀಕರಿಸಿ ಕೊರೋನಾ ರೋಗಿಗಳ ಚಿಕಿತ್ಸೆಯ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಏಳು ಜನರ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಮೂರು ಜನ ಮಹಿಳೆಯರಿರುವುದು ವಿಶೇಷ.

ಗೃಹಶೋಭಾ ಪ್ರತಿನಿಧಿ ಡಾ. ಜಯಂತಿಯವರನ್ನು ಭೇಟಿಯಾಗಿ ಮಾತನಾಡಿದಾಗ ಅವರು ತಮ್ಮ ಕಾರ್ಯವೈಖರಿ ಹಾಗೂ ಮುಂಬರುವ ದಿನಗಳಲ್ಲಿ ನಾವು ಹೇಗಿರಬೇಕು ಎಂಬುದರ ಬಗ್ಗೆ ಬಹಳಷ್ಟು ಸಂಗತಿಗಳನ್ನು ತಿಳಿಸಿದರು.

ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೋನಾ ರೋಗವನ್ನು ಹತೋಟಿಯಲ್ಲಿಡುವುದು ಹೇಗೆ ಸಾಧ್ಯವಾಯಿತು?

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಎಲ್ಲ ಕಡೆಗೂ `ಫೇವರ್‌ ಕ್ಲಿನಿಕ್‌’ಗಳನ್ನು ಆರಂಭಿಸಿದ್ದರಿಂದ ನಾನ್‌ ಕೋವಿಡ್‌ ರೋಗಿಗಳನ್ನು ಪ್ರತ್ಯೇಕಿಸಲು ಸಾಧ್ಯವಾಯಿತು. ಇದರ ಹೊರತಾಗಿ ಐದು `ಟಿವಿ’ಗಳು ಕೂಡ ಅದಕ್ಕೆ ಕಾರಣವಾದವು.

ಟೆಸ್ಟಿಂಗ್‌, ಟ್ರೇಸಿಂಗ್‌, ಟ್ರ್ಯಾಕಿಂಗ್‌, ಟ್ರೀಟ್‌ಮೆಂಟ್‌ ಹಾಗೂ ಟೀಮ್ ವರ್ಕ್‌ನಿಂದ ನಾವು ಅದರ ಪಸರಿಸುವಿಕೆಯನ್ನು ತಡೆಯಲು ಸಾಧ್ಯವಾಯಿತು.

ಕೊರೋನಾ ರೋಗಿಗಳ ಸಂಪರ್ಕಕ್ಕೆ ಬಂದ ವೈದ್ಯರಿಂದ ಕೊರೋನಾ ಸೋಂಕು ಹರಡಬಹುದೆಂದು ಅನೇಕರು ಹೇಳುತ್ತಾರೆ. ಸಾಧ್ಯತೆ ಇದೆಯಾ?

ಖಂಡಿತ ಇಲ್ಲ. ನಮ್ಮ ವೈದ್ಯರು ಬಹಳ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುತ್ತಾರೆ. ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಧರಿಸುವುದರಿಂದ ಅದು ವೈದ್ಯರಿಗೆ ಹರಡುವುದಿಲ್ಲ. ಪಿಪಿಇ ಕಿಟ್‌ನ್ನು ಒಂದೇ ಸಲ ಉಪಯೋಗಿಸುತ್ತಾರೆ. ಉಪಯೋಗದ ಬಳಿಕ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಹೀಗಿದ್ದಾಗ್ಯೂ ನಮ್ಮ ವೈದ್ಯರು 1 ವಾರ ಕಾರ್ಯನಿರ್ವಹಿಸಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಮನೆಗೆ ತೆರಳುತ್ತಾರೆ. ಈ ಎಲ್ಲ ಕಾರಣಗಳಿಂದ ವೈದ್ಯರಿಂದ ಸೋಂಕು ತಗುಲುವ ಸಾಧ್ಯತೆ ಇರುವುದಿಲ್ಲ.

ಲಾಕ್ಡೌನ್ನಂತರ ನಾವು ಎಂದಿನಂತೆ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದೇವೆ. ಇಂತಹ ಸ್ಥಿತಿಯಲ್ಲಿ ನಾವು ಹೇಗೆ ಎಚ್ಚರದಿಂದ ಇರಬೇಕು?

ಸ್ವಯಂ ಕಾಳಜಿ ಒಂದೇ ಇದಕ್ಕೆ ಮದ್ದು. ಮಾಸ್ಕ್ ಧರಿಸದೆ ಹೊರಗಡೆ ಹೋಗಬೇಡಿ. ಕಾಟನ್‌ ಮಾಸ್ಕ್ ಗಳನ್ನು ಉಪಯೋಗಿಸಿ. ಅವನ್ನು ಒಗೆದು ಪುನಃ ಬಳಸಬಹುದು. ಮುಂದಿನ ದಿನಗಳಲ್ಲಿ ಆದಷ್ಟು ಮಾಲ್, ಜಾತ್ರೆಗಳಿಗೆ ಜನದಟ್ಟಣೆ ಇರುವ ಕಡೆ ಹೋಗಬೇಡಿ. ಜನರ ಸಂಪರ್ಕಕ್ಕೆ ಬರುವ ಉದ್ಯೋಗಗಳಲ್ಲಿ ನಿರತರಾಗಿರುವವರು ಮನೆಗೆ ಬಂದ ನಂತರ ಬಟ್ಟೆಗಳನ್ನು ತೆಗೆದು ನೆನೆಸಬೇಕು. ಸಾಧ್ಯವಾದರೆ ಸ್ನಾನ ಮಾಡುವುದು ಸೂಕ್ತ. ಕೈ ತೊಳೆದುಕೊಳ್ಳುವ ಅಭ್ಯಾಸವನ್ನು ಚೆನ್ನಾಗಿ ರೂಢಿಸಿಕೊಳ್ಳಿ. ಹಣ್ಣು ತರಕಾರಿಗಳನ್ನು ಆದಷ್ಟೂ ಚೆನ್ನಾಗಿ ಸ್ವಚ್ಛಗೊಳಿಸಿಯೇ ಅಡುಗೆಮನೆಗೆ ತೆಗೆದುಕೊಂಡು ಹೋಗಬೇಕು. ಕೊರೋನಾ ಸಂಪೂರ್ಣವಾಗಿ ಹೊರಟು ಹೋಗುತ್ತದೆ ಎಂದು ಹೇಳುವುದು ಕಷ್ಟಕರ. ಆದರೆ ನಾವು ಅದರ ಜೊತೆಗೆ ಎಚ್ಚರಿಕೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು.

ಇಷ್ಟೆಲ್ಲ ಜವಾಬ್ದಾರಿಗಳ ನಡುವೆ ಕುಟುಂಬದೊಂದಿಗೆ ಹೇಗೆ ಸಮನ್ವಯತೆ ಸಾಧಿಸುತ್ತೀರಾ?

ನನ್ನ ಪತಿ ಕೆಪಿಟಿಸಿಎಲ್‌ನಲ್ಲಿ ಡೈರೆಕ್ಟರ್‌ ಆಗಿದ್ದು, ಅವರು ನನಗೆ ಜವಾಬ್ದಾರಿ ಹೊರು, ಅದನ್ನು ನೀನು ಯಶಸ್ವಿಯಾಗಿ ನಿಭಾಯಿಸುತ್ತೀಯಾ, ಎಂದು ಹೇಳಿ ನನ್ನ ಉತ್ಸಾಹ ಹೆಚ್ಚಿಸುತ್ತಾರೆ. ನನಗೆ ಇಬ್ಬರು ಪುತ್ರಿಯರು. ಒಬ್ಬಳು ನೇತ್ರತಜ್ಞೆ, ಇನ್ನೊಬ್ಬಳು ಕೂಡ ವೈದ್ಯೆ. ಅವಳು (ಶ್ವೇತಾ) ಕೂಡ ಇತ್ತೀಚೆಗೆ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಮಗ್ನಳಾಗಿದ್ದಾಳೆ.

–  ಅಶೋಕ ಚಿಕ್ಕಪರಪ್ಪಾ

ಸ್ಮಿತಾ ಸೇಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥೆ, ಕೋವಿಡ್‌ ಟಾಸ್ಕ್ ಫೋರ್ಸ್‌ನಲ್ಲಿ ನೇಚರ್‌ ಅಧಿಕಾರಿಯಾಗಿ ಸಮರ್ಪಣಾಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೈದ್ಯರಿಗೆ ಸರದಿ ಪ್ರಕಾರ ಡ್ಯೂಟಿ ಹಂಚಿಕೆ, ದೈನಂದಿನ ಡಾಟಾ ರವಾನೆ, ಕ್ವಾರಂಟೈನ್‌ ವ್ಯವಸ್ಥೆ, ಪಿಪಿಇ ಕಿಟ್‌ಗಳ ಗುಣಮಟ್ಟ ಪರಿಶೀಲಿಸಿ, ಗುಣಮುಖರಾಗಿ ಬಿಡುಗಡೆಗೊಂಡರ ವಾಸ್ತವ್ಯದ ವ್ಯವಸ್ಥೆಯಂತಹ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಈ ಹಿಂದೆ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿಗೆ ವೈದ್ಯರ ತಂಡವನ್ನು ಕರೆದುಕೊಂಡು ಹೋಗಿದ್ದರು. ಸುನಾಮಿ ದುರಂತ, ಕೊಡಗು ಮಳೆ ಅನಾಹುತದ ಸಂದರ್ಭದಲ್ಲೂ ಅವರು ವೈದ್ಯ ತಂಡದೊಂದಿಗೆ ತೆರಳಿದ್ದರು. ಬಿದ್ದು ಹೋದ ಶಾಲಾ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.

ಡಾ. ಸಂಧ್ಯಾ ಇವರು ಬೆಂಗಳೂರು ಮೆಡಿಕಲ್ ಕಾಲೇಜಿನ ಅನಸ್ಥೇಶಿಯಾ ವಿಭಾಗದಲ್ಲಿ ಪ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೋವಿಡ್‌ ಟಾಸ್ಕ್ ಫೋರ್ಸ್‌ ಕಮಿಟಿಯಲ್ಲಿ ಇವರು ಕೋ ಆರ್ಡಿನೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಯಾ ಬಗೆಯ ರೋಗಿಗಳು ಕೊರೊನಾ ವಾರ್ಡ್‌ನಲ್ಲಿ ಅಡ್ಮಿಟ್‌ ಆಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವ ಬಗೆಯ ವೈದ್ಯರನ್ನು ಡ್ಯೂಟಿಗೆ ಕಳಿಸಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಮುಂದಿನ ದಿನಗಳಲ್ಲಿ ಡ್ಯೂಟಿಗೆ ಹೋಗಲಿರುವ ವೈದ್ಯರು, ನರ್ಸ್‌ಗಳಿಗೆ ತರಬೇತಿ ವ್ಯವಸ್ಥೆ ಕೂಡ ಮಾಡುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ