ಬಹಳಷ್ಟು ಮಕ್ಕಳು ಊಟ ತಿಂಡಿಯ ಬಗ್ಗೆ ಬಹಳಷ್ಟು ಚ್ಯೂಸಿ ಆಗಿರುತ್ತಾರೆ. ಆ ಆಹಾರ ಎಷ್ಟೇ ಆರೋಗ್ಯಕರವಾಗಿದ್ದರೂ ಅವರಿಗೆ ಜಂಕ್‌ಫುಡ್‌ ಇಷ್ಟವಾಗುತ್ತದೆ. ಮಕ್ಕಳ ಈ ಇಷ್ಟದ ಕುರಿತಂತೆ ಪೋಷಕರಿಗೆ ಬಹಳಷ್ಟು ಆತಂಕವಾಗುತ್ತದೆ. ಏಕೆಂದರೆ ಮಕ್ಕಳ ಈ ವಯಸ್ಸು ಅವರ ಬೆಳವಣಿಗೆಗೆ ಮಹತ್ವದ್ದಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಸೂಕ್ತ ಪೋಷಣೆ ದೊರಕದೇ ಹೋದರೆ ಅವರ ದೈಹಿಕ ಮಾನಸಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತದೆ. ಅದೇ ಮುಂದೆ ಹಲವು ರೋಗಗಳಿಗೂ ಕಾರಣವಾಗುತ್ತದೆ. ಮಕ್ಕಳಿಗೆ ಸೂಕ್ತ ಪೋಷಕಾಂಶ ಕೊಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅವರಿಗೆ ಕೊಡುವ ಆಹಾರದಲ್ಲಿ ಹಾಲಿನ ಉತ್ಪನ್ನ, ಬೇಳೆ, ಮೊಟ್ಟೆ, ಕಾಳು, ಬೀನ್ಸ್ ಮುಂತಾದವು ಸೇರಿರಲಿ.

ಕಾರ್ಬೋ ಹೈಡ್ರೇಟ್ಸ್ : `ಕಟ್‌ ದಿ ಕಾರ್ಬ್ಸ್ ಇನ್‌ ಯುವರ್‌ ಡಯೆಟ್‌’ ಇದು ಇಂದಿನ ಟ್ರೆಂಡ್‌ ಆಗಿದೆ. ಆದರೆ ಒಂದು ಸಂಗತಿ ನಿಮ್ಮ ನೆನಪಿನಲ್ಲಿರಲಿ. ಬೆಳೆಯುತ್ತಿರುವ ಮಕ್ಕಳಿಗೆ ಸೂಕ್ತ ಎನರ್ಜಿ ಹಾಗೂ ಕ್ಯಾಲೋರಿಗಳ ವಿಶೇಷ ಅವಶ್ಯಕತೆ ಇರುತ್ತದೆ. ಅದು ಕಾರ್ಬೋಹೈಡ್ರೇಟ್ಸ್ ನಿಂದ ದೊರಕುತ್ತದೆ. ಕೊಬ್ಬು ಮತ್ತು ಪ್ರೋಟೀನ್‌ಗಳ ನೆರವಿನಿಂದಲೇ ನಮ್ಮ ದೇಹದಲ್ಲಿ ಊತಕಗಳ ನಿರ್ಮಾಣ ಹಾಗೂ ಅವುಗಳ ದುರಸ್ಥಿ ಕಾರ್ಯ ನಡೆಯುತ್ತಿರುತ್ತದೆ. ಕಾರ್ಬೋಹೈಡ್ರೇಟ್ಸ್ ಯುಕ್ತ ಆಹಾರಗಳೆಂದರೆ ಬ್ರೆಡ್‌, ಆಲೂಗಡ್ಡೆ, ಹಸಿರು ಬಟಾಣಿ, ಬ್ರೌನ್‌ ರೈಸ್‌, ಕಾಳುಗಳು, ರಾಜ್ಮಾ, ಬಾಳೆಹಣ್ಣು ಮುಂತಾದವು. ಈ ವಯಸ್ಸಿನಲ್ಲಿ ಅವರ ಡಯೆಟ್‌ನಿಂದ ಕಾರ್ಬೋಹೈಡ್ರೇಟ್‌ ಕೊರತೆಯ ಬಗ್ಗೆ ಯೋಚಿಸಬೇಡಿ.

ಫ್ಯಾಟ್ಸ್ : ಸಾಮಾನ್ಯವಾಗಿ ಫ್ಯಾಟ್ಸ್ ಅಂದರೆ ಕೊಬ್ಬಿನ ಬಗ್ಗೆ ಪ್ರಸ್ತಾಪ ಬಂದಾಗ ಅದು ಅವರ ದೇಹಕ್ಕೆ ಹಾನಿಕರ ಎಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಅದನ್ನು ಅವರ ಆಹಾರದಿಂದ ತೆಗೆದು ಹಾಕಲು ಯೋಚಿಸುತ್ತೇವೆ. ಏಕೆಂದರೆ ಎಲ್ಲ ಬಗೆಯ ಫ್ಯಾಟ್‌ಗಳು ದೇಹಕ್ಕೆ ಹಾನಿಕರ ಆಗಿರುವುದಿಲ್ಲ. ನೀವು ನಿಮ್ಮ ಮಕ್ಕಳಿಗೆ ಗುಡ್‌ ಫ್ಯಾಟ್‌ ಕೊಡಿ, ಏಕೆಂದರೆ ಅವು ಅವರ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀವಕೋಶಗಳ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬು ಮಕ್ಕಳ ದೇಹದಲ್ಲಿ ಸುಲಭವಾಗಿ ಸಂಗ್ರಹಗೊಂಡು ಅಗತ್ಯವಿದ್ದಾಗ ದೇಹಕ್ಕೆ ಅದನ್ನು ಬಳಸಿಕೊಳ್ಳಲು ನೆರವಾಗುತ್ತದೆ. ನೀವು ಅದಕ್ಕಾಗಿ ಮಗುವಿಗೆ ಹಾಲಿನ ಉತ್ಪನ್ನ, ಕಾಳು, ಒಮೇಗಾ-3 ಫ್ಯಾಟಿ ಆ್ಯಸಿಡ್‌ಯುಕ್ತ ಆಹಾರಗಳು, ಮೀನು, ಮಾಂಸ ಇತ್ಯಾದಿ ಕೊಡಿ.

ಕ್ಯಾಲ್ಶಿಯಂ : ಮಕ್ಕಳಿಗೆ ಕ್ಯಾಲ್ಶಿಯಂ ಹಲ್ಲುಗಳು ಮತ್ತು ಮೂಳೆಗಳ ನಿರ್ಮಾಣಕ್ಕೆ ಅತ್ಯವಶ್ಯ. ಜೊತೆಗೆ ಇದು ಸ್ನಾಯುಗಳು ಮತ್ತು ಹೃದಯದ ಚಟುವಟಿಕೆಗಳಿಗೂ  ಅತ್ಯವಶ್ಯಕ. ಅದು ಚಯಾಪಚಯ ಕ್ರಿಯೆಯನ್ನು ಸಮರ್ಪಕಾಗಿ ನೆರವೇರಿಸಲು ಅತ್ಯವಶ್ಯಕ ಎಂದು ಭಾವಿಸಲಾಗಿದೆ. ಹೀಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸೂಕ್ತ ಪ್ರಮಾಣದಲ್ಲಿ ಕ್ಯಾಲ್ಶಿಯಂ ಕೊಡುವುದು ಅತ್ಯವಶ್ಯ. ಕ್ಯಾಲ್ಶಿಯಂಯುಕ್ತ ಆಹಾರ ಪದಾರ್ಥಗಳೆಂದರೆ ಹಾಲು, ಮೊಸರು, ಪನೀರ್‌, ಸೋಯಾ, ಹಸಿರು ತರಕಾರಿ, ಕಾಳು ಹಾಗೂ ಧಾನ್ಯ ಇತ್ಯಾದಿಗಳನ್ನು ಅವರ ಆಹಾರದಲ್ಲಿ ಸೇರಿಸಿ.

 

ಕಬ್ಬಿಣಾಂಶ : ದೇಹದಲ್ಲಿ ರಕ್ತ ರೂಪುಗೊಳ್ಳಲು ಕಬ್ಬಿಣಾಂಶ ಬೇಕೇಬೇಕು. ಅದು ಇಡೀ ದೇಹಕ್ಕೆ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತದೆ. ಮಕ್ಕಳ ದೇಹದಲ್ಲಿ ಕಬ್ಬಿಣಾಂಶದ ಪೂರೈಕೆಯಿಂದ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಅದಕ್ಕಾಗಿ ನೀವು ಮಕ್ಕಳಿಗೆ ಕಾಳು, ಬೀನ್ಸ್, ಕಾಯಿ, ಹಸಿರು ಸೊಪ್ಪುಗಳನ್ನು ಕೊಡಿ. ಈ ಆಹಾರ ಪದಾರ್ಥಗಳು ಮಕ್ಕಳ ದೇಹದ ಕಬ್ಬಿಣಾಂಶದ ಕೊರತೆ ನೀಗಿಸುವ ಕೆಲಸ ಮಾಡುತ್ತವ.

ಫಾಲೆಟ್‌ : ಇದು ತಾಯಂದಿರಿಗೆ ಎಷ್ಟು ಅತ್ಯವಶ್ಯವೋ ಮಕ್ಕಳಿಗೂ ಕೂಡ ಅಷ್ಟೇ ಅವಶ್ಯ.  ಇದು ಮಕ್ಕಳ ಜೀವಕೋಶಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗಿದೆ. `ಫಾಲೆಟ್‌’ ಒಂದು ಬಗೆಯ ವಿಟಮಿನ್‌ ಕೂಡ ಆಗಿದೆ. ಒಂದು ವೇಳೆ ಮಕ್ಕಳ ದೇಹದಲ್ಲಿ ಇದರ ಕೊರತೆ ಉಂಟಾದರೆ ರಕ್ತಹೀನತೆಯ ಸಮಸ್ಯೆಗೆ ತುತ್ತಾಗಬಹುದು. ಹಾಗಾಗಿ ಫಾಲೆಟ್‌ ರಿಚ್‌ ಫುಡ್ಸ್ ಅಂದರೆ ಕಾಳು, ಬೇಳೆ, ಪಾಲಕ್‌ ಮುಂತಾದವುಗಳನ್ನು ಅವರ ದೇಹದಲ್ಲಿ ಸೇರಿಸಿ.

ಹಣ್ಣು ಹಾಗೂ ತರಕಾರಿಗಳು : ಹಣ್ಣು ಹಾಗೂ ತರಕಾರಿಗಳಲ್ಲಿ ವಿಟಮಿನ್‌ ಹಾಗೂ ಖನಿಜಾಂಶದ ಪ್ರಮಾಣ ಹೇರಳವಾಗಿರುತ್ತದೆ. ನಿಮಗೊಂದು ವಿಷಯ ಗೊತ್ತಿರಬೇಕು. ಅದೇನೆಂದರೆ, ವಿಟಮಿನ್‌ ಹಾಗೂ ಖನಿಜಗಳು ನಿಮ್ಮ ಮಗುವಿನ ಆರೋಗ್ಯಕರ ತ್ವಚೆಯ ಬೆಳವಣಿಗೆ ಹಾಗೂ ರೋಗದಿಂದ ರಕ್ಷಿಸುವ ಕೆಲಸ ಮಾಡುತ್ತವೆ. ಏಕೆಂದರೆ ಇವು ನಾರಿನಂಶ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುತ್ತವೆ. ಹಣ್ಣುಗಳಲ್ಲಿ ವಿಟಮಿನ್‌ `ಎ’ ಮತ್ತು `ಸಿ’ ಇರುತ್ತದೆ. ಅದರಿಂದ ನಿಮ್ಮ ಮಕ್ಕಳಿಗೆ ಕ್ಯಾನ್ಸರ್‌ ಮತ್ತು ಹೃದ್ರೋಗದ ಅಪಾಯ ಕಡಿಮೆ ಆಗುತ್ತದೆ. ಅದಕ್ಕಾಗಿ ನೀವು ನಿಮ್ಮ ಮಕ್ಕಳಿಗೆ ಹಣ್ಣು ಹಾಗೂ ತರಕಾರಿ ಸೇವನೆಯ ಅಭ್ಯಾಸ ರೂಢಿಸಬೇಕು.

ವಿಟಮಿನ್ಸ್ : ಈ ವಿಟಮಿನ್ಸ್ ಮಕ್ಕಳ ಆಹಾರದಲ್ಲಿ ಅವಶ್ಯವಾಗಿ ಸೇರ್ಪಡೆಗೊಳಿಸಿ.

ವಿಟಮಿನ್‌`‘ : ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕಣ್ಣುಗಳಿಗೂ ಕೂಡ ಉಪಯುಕ್ತ.

ವಿಟಮಿನ್‌ `ಸಿ‘ : ಇದು ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ರಕ್ತನಾಳಗಳನ್ನು ಆರೋಗ್ಯದಿಂದ ಇಡಲು ನೆರವಾಗುತ್ತದೆ.

ವಿಟಮಿನ್‌`ಬಿ3′ : ಇದು ನರವ್ಯೂಹ, ಆರೋಗ್ಯಕರ ತ್ವಚೆ, ಕೂದಲು, ಕಣ್ಣುಗಳ ಆರೋಗ್ಯಕ್ಕೆ ಅತ್ಯವಶ್ಯ.

ಈ ರೀತಿಯಾಗಿ ನಿಮ್ಮ ಮಕ್ಕಳಿಗೆ ಅತ್ಯವಶ್ಯ ಪೋಷಕಾಂಶಗಳು ದೊರೆತರೆ ನೀವು ಟೆನ್ಷನ್‌ಫ್ರೀ ಆಗಿರಬಹುದು.

ಪ್ರಜ್ಞಾ

ಪ್ರತಿಯೊಬ್ಬ ಪೋಷಕರಿಗೂ ಒಂದು ಸಮಸ್ಯೆ ಉಂಟಾಗುತ್ತದೆ. ಅದೇನೆಂದರೆ, ರುಚಿಕರ ಆಹಾರ ತಯಾರಿಸಿದಾಗಲೂ ಮಕ್ಕಳು ಆಹಾರದ ಬಗ್ಗೆ ಆಸಕ್ತಿ ತೋರಿಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀವು ಅವರಿಗೆ ಪೋಷಕಾಂಶಯುಕ್ತ ಆಹಾರ ತಿನ್ನುವಂತೆ ಮಾಡಲು ಈ ಕೆಳಕಂಡ ಉಪಾಯ ಅನುಸರಿಸಿ.

ಆಹಾರವನ್ನು ಬಡಿಸುವ ಮುನ್ನ ಅದನ್ನು ಅವಶ್ಯವಾಗಿ ಡೆಕೋರೇಟ್‌ ಮಾಡಿ.

ಆಟ ಆಡುತ್ತಿರುವಾಗಲೇ ಅವರಿಗೆ ತಿನ್ನಿಸಲು ಪ್ರಯತ್ನಿಸಿ.

ತರಕಾರಿಗಳ ಸ್ಯಾಂಡ್‌ವಿಚ್‌ ಮಾಡಿಕೊಡಿ. ಅದು ಅವರಿಗೆ ಬಹಳ ಇಷ್ಟವಾಗುತ್ತದೆ.

ಮಕ್ಕಳಿಗೆ ಯಾವಾಗಾದರೊಮ್ಮೆ ಹಣ್ಣುಗಳ ಬದಲಿಗೆ ಜ್ಯೂಸ್‌ ಮಾಡಿಕೊಡಿ.

ತರಕಾರಿ ಹಾಕಿದ ಅಕ್ಕಿ ರೊಟ್ಟಿ, ಪರೋಟಾ ಕೂಡ ಮಾಡಿಕೊಡಿ.

ಡ್ರೈಫ್ರೂಟ್ಸ್ ಬೆರೆಸಿದ ಕೇಸರಿಭಾತ್‌, ಹಲ್ವಾ ಮುಂತಾದವುಗಳನ್ನು ಮಾಡಿಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ