ಕೊರೋನಾ ಕುರಿತು ಅತಿ ಕಾಳಜಿ ವಹಿಸುತ್ತಿದ್ದ ರತ್ನಾ ಡಾಕ್ಟರ್‌ಗೆ ಫೋನ್‌ ಮಾಡಿ ಕೇಳಿಯೇ ಬಿಟ್ಟಳು, “ಡಾಕ್ಟ್ರೇ, ಬಸ್ಸುಗಳು ಓಡಾಡುತ್ತಿವೆ ಎಂದು ನಮ್ಮ ಯಜಮಾನರು ಆಫೀಸಿಗೆ ಹೋಗಿ ಬರುತ್ತಿದ್ದಾರೆ. ಆಫೀಸಿನಿಂದ ಬಂದ ತಕ್ಷಣ ಅವರ ಕೈಕಾಲು ತೊಳೆಯಲು ಸ್ಯಾನಿಟೈಸರ್‌ನ್ನು ಮಗ್ಗಲ್ಲಿ ಸುರಿಯುತ್ತೇನೆ. ಬಿಸಿ ನೀರಲ್ಲಿ ಅವರಿಗೆ ಸ್ನಾನ ಮಾಡಿಸಿ, ಅವರ ಬಟ್ಟೆ ಹಿಂಡಿ ಹಾಕ್ತೀನಿ. ನಂತರ ಬಾಯಿ ಮುಕ್ಕಳಿಸಲು ಸೈಂಧವ ಲವಣ, ನಿಂಬೆ, ಕಪ್ಪು ಮೆಣಸು ಹಾಕಿದ ಬಿಸಿ ಬಿಸಿ ನೀರು ಕೊಡ್ತೀನಿ. ಚಳಿ ಅನ್ನಬಾರದು ಅಂತ ಬಿಸಿ ಐರನ್‌ ಬಾಕ್ಸಿನಿಂದ ಲೈಟಾಗಿ ಟಚ್‌ ಕೊಡ್ತೀನಿ…. ಸದ್ಯಕ್ಕೆ ಇಷ್ಟು ಸಾಕಾ? ಇನ್ನೂ ಏನಾದ್ರೂ ಮಾಡಬೇಕಾ?”

ಅದಕ್ಕೆ ಡಾಕ್ಟರ್‌, “ಒಂದೇ ಒಂದು ಬಾಕಿ ಇದೆ. ಇಷ್ಟೆಲ್ಲ ಆದ ಮೇಲೆ ಸ್ನಾನದ ನಂತರ ಅವರನ್ನು ಕುದಿ ಕುದಿಯುತ್ತಿರುವ ನೀರಿಗೆ ಹಾಕಿ ಮರಳಿಸಿಬಿಡಿ!”

ಲಾಕ್‌ ಡೌನ್‌ ಇದ್ದಾಗಲೂ ಭಂಡ ಗುಂಡ ಕಾರ್‌ ತೆಗೆದುಕೊಂಡು ಊರು ಸುತ್ತಲೂ ಹೊರಟ. ಆಗ ಅವನು ಮುಂದಿನ ದಾರಿ ಗೊತ್ತಾಗಲೆಂದು ಗೂಗಲ್ ಮ್ಯಾಪ್‌ ಆನ್‌ ಮಾಡುತ್ತಾನೆ, ಅದರಿಂದ ಈ ತರಹ ಸೂಚನೆಗಳು ಬರತೊಡಗಿದವು:

ಸರಿಯಾದ ರೂಲ್ ‌ದೊಣ್ಣೆ ಸೇವೆ ಬೇಕೇ? ಹಾಗಿದ್ದರೆ ಬಲಗಡೆ ತಿರುಗಿ. 100 ಸಲ ಬಸ್ಕಿ ಹೊಡೆದು ಬೆವರಿಳಿಸಬೇಕೇ? ಹಾಗಿದ್ದರೆ ಎಡಗಡೆ ತಿರುಗಿ. ಎರಡೂ ದಿಕ್ಕಿನಲ್ಲಿ ಪೊಲೀಸರಿಂದ ಓತಪ್ರೋತವಾಗಿ ಹಿತನುಡಿಗಳ ಮುತ್ತು ಉದುರುತ್ತದೆ. ಎರಡೂ ಕಡೆ ತಿರುಗುವುದು ಬೇಡ ಅಂದ್ರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಯೂಟರ್ನ್‌ ತೆಗೆದುಕೊಂಡು ಮನೆಗೆ ಹೋಗಿ!

ಲಾಕ್‌ ಡೌನ್‌ ಪರಿಣಾಮ ಗಮನಿಸಿ :

ಗುಂಡನಿಗೆ ಮನೆಯಲ್ಲೇ 2 ತಿಂಗಳಿನಿಂದ ಇದ್ದು ಸಾಕಾಯ್ತು. ಟಿ.ವಿ. ನೋಡಿ ನೋಡಿ ಹುಚ್ಚು ಹಿಡಿಯುವುದೊಂದು ಬಾಕಿ. ಮನೆ ಮುಂದಿನ ಜಗುಲಿಯಲ್ಲಿ ಬಂದು ಕುಳಿತ. ಎದುರಿಗೆ ತರಕಾರಿ ಗಾಡಿಯವನು ತಲೆಗೊಂದು ಟವೆಲ್ ‌ಸುತ್ತಿಕೊಂಡು, ಮಾಸ್ಕ್ ಹಾಕಿಕೊಂಡು, ಲುಂಗಿ ಎತ್ತಿ ಕಟ್ಟಿ ತನ್ನ ಮಾಮೂಲಿ ಸ್ಟೈಲ್‌ನಲ್ಲಿ ಕಿವಿಯ ಬಳಿ ಎಡಗೈ ಹಿಡಿದು `ತರಕಾರಿ….’ ಎಂದು ತಳ್ಳಿಕೊಂಡು ಬರುತ್ತಿದ್ದ. ಅವನನ್ನು ನೋಡಿದ್ದೇ ಗುಂಡನಿಗೆ ಥಟ್ಟನೆ ಒಂದು ಐಡಿಯಾ ಹೊಳೆಯಿತು. “ಏನಪ್ಪ, ನೀನು ಈ ಬಿಸಿಲಲ್ಲಿ ಎಷ್ಟು ಅಂತ ಹೊರಗೆ ಸುತ್ತಾಡುತ್ತೀಯಾ? ನಮ್ಮ ಮನೆಯಲ್ಲಿ ಕುಳಿತು ಟಿ.ವಿ ನೋಡು. ನಾನು 4 ರೌಂಡ್‌ ಸುತ್ತಾಡಿ ಬರ್ತೀನಿ. ತರಕಾರಿ ಮಾರಿದ ದುಡ್ಡನ್ನು ಪ್ರಾಮಾಣಿಕವಾಗಿ ನಿನಗೆ ತಂದುಕೊಡ್ತೀನಿ ನೀನು ಸ್ವಲ್ಪ ವಿಶ್ರಾಂತಿ ಪಡೆ,” ಎಂದ.

ಆಗ ತರಕಾರಿಯವನು ತನ್ನ ಮಾಸ್ಕ್, ಪೇಟ ಸರಿಸಿ ಮುಖ ಸರಿಯಾಗಿ ತೋರಿಸುತ್ತಾ, “ಏ ಗುಂಡ, ನಾನು ಕಿಟ್ಟಿ ಕಣೋ! ಈ ಐಡಿಯಾ ನನಗೆ ಹೊಳೆದಿಲ್ಲ ಅಂದುಕೊಳ್ತೀಯಾ? ಅಸಲಿ ತರಕಾರಿಯವನ್ನ ನಮ್ಮ ಮನೆಯಲ್ಲಿ ಕೂರಿಸಿ, 3 ಬೀದಿ ಬಿಟ್ಟು ನಿಮ್ಮ ರಸ್ತೆಗೆ ಬಂದಿದ್ದೀನಿ….” ಎಂದಾಗ ಗುಂಡ ಸುಸ್ತೋ ಸುಸ್ತು!

ನಾಣಿ ಸ್ನಾನಕ್ಕೆ ಹೊರಟ. ಅವನ ಹೆಂಡತಿ ರಾಣಿಗೆ ಮಹಾ ಅನುಮಾನದ ರೋಗ. ಗಂಡನ ಮೆಸೇಜ್‌, ಫೋನ್‌ ಹಿಸ್ಟರಿ ಪರೀಕ್ಷಿಸ ತೊಡಗಿದಳು. ಅಲ್ಲಿ ಒಂದು ಕಡೆ `ಕೊರೋನಾ’ ಎಂದು ಹೆಸರು ಸೇವ್ ‌ಆಗಿತ್ತು. ಬಹಳ ಕುತೂಹಲದಿಂದ ಆ ನಂಬರ್‌ಗೆ ಡಯಲ್ ಮಾಡಿದಳು.

ಮರುಕ್ಷಣವೇ ಅಡುಗೆಮನೆಯಲ್ಲಿದ್ದ ಅವಳ ಫೋನ್‌ ರಿಂಗ್‌ ಆಗತೊಡಗಿತು. ಕೋಪದಿಂದ ಬೆಂಕಿ ಉಗುಳುತ್ತಾ ಅವಳು ಬಚ್ಚಲುಮನೆ ಕದಕ್ಕೆ ಚಿಲಕ ಹಾಕಿ, 3 ಬೀದಿ ಹಿಂದಿನ ತನ್ನ ತವರುಮನೆಗೆ ಹೊರಟುಹೋದಳು. 3 ದಿನಗಳಾದರೂ ನಾಣಿ ಅಲ್ಲೇ ಚಳಿಯಲ್ಲಿ ನಡುಗುತ್ತಾ, ಹಸಿವಿನಿಂದ ಕಂಗೆಟ್ಟು ನಿಂತಿದ್ದಾನಂತೆ!

ಗಂಡ : ನೀನಂತೂ ದಿನೇದಿನೇ ಅನಗತ್ಯ ಖರ್ಚಿನ ಪಟ್ಟಿ ಹನುಮಂತನ ಬಾಲದ ತರಹ ಬೆಳೆಸುತ್ತಾ ಇದ್ದೀಯ!

ಹೆಂಡತಿ : ಓಹೋ…. ನಾನು ಮಾಡುವ ಖರ್ಚು ಮಾತ್ರ ದಂಡದ್ದು, ನೀವು ಮಾಡುವ ಖರ್ಚು ಬಹಳ ಒಳ್ಳೆಯದ್ದೇ?

ಗಂಡ : ಅಂದ್ರೆ…. ನಾನೆಲ್ಲಿ ವ್ಯರ್ಥದ ಖರ್ಚು ಮಾಡಿದೆ?

ಹೆಂಡತಿ : ವರ್ಷ ವರ್ಷ ಎಲ್ಐಸಿ ಪ್ರೀಮಿಯಂ ಹಣ ಕಟ್ತಾನೇ ಇದ್ದೀರಿ…. ಕೊರೋನಾ ಬಂದಿದ್ರೂ ಹೊರಗೇ ಹೋಗೋಲ್ಲ!

ಅಂಗಡಿಯವನು : ಇವತ್ತಿಗೆ ನನ್ನ ಸೇಡು ಪೂರ್ತಿ ಆಯ್ತು, ನಿಜಕ್ಕೂ ಸಮಾಧಾನ ಆಯ್ತು.

ಗ್ರಾಹಕ : ಅದೇನು ಅಂಥದ್ದು…..?

ಅಂಗಡಿಯವನು : ಇವತ್ತು ಸರ್ಕಾರಿ ಬ್ಯಾಂಕಿನ ಒಬ್ಬ ಗುಮಾಸ್ತ ರೇಶನ್‌ ಸಾಮಗ್ರಿ ಕೊಳ್ಳಲು ಬಂದಿದ್ದ. ಆಗ ನಾನು ಅವನಿಗೆ ನೇರ ಗಲ್ಲಾಪೆಟ್ಟಿಗೆ ಬಳಿ ಬಂದು ಕೇಳುವುದಲ್ಲ, ಹೋಗಿ ಕ್ಯೂನಲ್ಲಿ ನಿಂತುಕೋ ಅಂದೆ. ಅವನ ಸರದಿ ನನ್ನೆದುರು ಬಂದಾಗ, ಬಾಗಿಲು ಹಾಕುತ್ತಾ, ಅರ್ಧ ಗಂಟೆ ಇಲ್ಲೇ ಇರು… ಈಗ ಲಂಚ್‌ ಟೈಂ ಅಂದೆ!

ಲಾಕ್‌ ಡೌನ್‌ನ ಹಿಂಸಾತ್ಮಕ ದಿನಗಳನ್ನು ಅನುಭವಿಸಿ ಸಾಕಾದ ಗುಂಡ ಯಾವಾಗ ವರ್ಕ್‌ಫ್ರಂ ಹೋಮ್ ಮುಗಿಯುತ್ತದೋ, ಬಸ್ಸು ಯಾವಾಗ ರಸ್ತೆಗೆ ಬರುತ್ತದೋ ಎಂದು ಕಾದಿದ್ದ. ಕೊನೆಗೆ ಅವನು ತನ್ನ ಮೇನೇಜರ್‌ಗೆ ಇಮೇಲ್ ಕಳುಹಿಸಿಯೇ ಬಿಟ್ಟ : ಸಾರ್‌, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ನೀವು ಹೃದಯವೇ ಇಲ್ಲದ ಕಲ್ಲುಬಂಡೆ, ಬಹಳ ಗೋಳು ಹೊಯ್ದುಕೊಳ್ಳುತ್ತೀರಿ ಎಂದೆಲ್ಲ ನಿಮ್ಮ ಬಗ್ಗೆ ಆಡಿಕೊಳ್ಳುತ್ತಿದ್ದೆ. ಈಗ ಮನೆಯಲ್ಲಿ ಹೆಂಡತಿ ಎಂಬ ಹೆಮ್ಮಾರಿ ಬಳಿ ಸಿಕ್ಕಿಹಾಕಿಕೊಂಡ ಬಳಿಕ ಆಫೀಸ್‌ ಸ್ವರ್ಗ ಸಮಾನ ಎಂದು ತಿಳಿಯುತ್ತಿದೆ, ಆದಷ್ಟು ಬೇಗ ಬಸ್ಸಿನಲ್ಲಿ ಬಂದು ನಿಮ್ಮನ್ನು ನೇರ ಭೇಟಿ ಮಾಡಲು ತುದಿಗಾಲಲ್ಲಿ ಕಾಯುತ್ತಿರುವ ಸಿಬ್ಬಂದಿ.

ಯಾವುದೋ ಜ್ಞಾನದಲ್ಲಿ ಬಹಳ ಬೋರ್‌ ಎಂದು ಕಿಟ್ಟಿ ಮನೆಯ ಫ್ರಿಜ್‌, ಹಳೆ ಟ್ರಂಕು, ಮಂಚ ಸರಿಸಿ ಅದರ ಹಿಂದೆ ತಿಂಗಳುಗಳಿಂದ ಅಡಗಿದ್ದ ಕಸ, ಕೊಳೆ ಏನೆಂದು ಹೆಂಡತಿಯನ್ನು ಕೇಳಿಯೇಬಿಟ್ಟ…. ಆ ಇಡೀ ದಿನ ತಿಂಡಿ, ಊಟ ಇಲ್ಲದೆ ಬರಿದೇ ಹೆಂಡತಿಯ ಬೈಗುಳ ಕೇಳುತ್ತಾ ಅವನು ಹೇಗೆ ದಿನ ಕಳೆದ ಎಂದು ಕೇಳಲೇಬೇಡಿ!

ಕರಿಯ ತನ್ನ ಚೀನೀ ಗೆಳೆಯ ಹ್ವಾಂಗ್‌ ಹೋ ಕೊರೋನಾದಿಂದ ಅಡ್ಮಿಟ್‌ ಆಗಿದ್ದಾನೆಂದು ನೋಡಲು ಹೋದ. ಭಾಷೆ ಬಾರದಿದ್ದರೂ ಇಬ್ಬರೂ ಗುಂಡಿನ ಕಾರಣ ಗಮ್ಮತ್ತಿನ ಗೆಳೆಯರಾಗಿದ್ದರು.

ಕರಿಯ ಕೈಯಲ್ಲಿ 4 ಕಿತ್ತಳೆ ಹಣ್ಣು ಹಿಡಿದು ಅವನ ಯೋಗಕ್ಷೇಮ ವಿಚಾರಿಸಿದ್ದೂ ವಿಚಾರಿಸಿದ್ದೇ!

ಆ ಗೆಳೆಯ `ಕ್ವಾಂಗ್‌ ಹೋ… ಜಾಂಗ್‌ ಜೋ….’ ಎಂದು ಏನೇನೋ ಕೂಗಿಕೊಂಡ. ಇವತ್ತು ಕಿತ್ತಳೆಹಣ್ಣು ತಗೋ, ನಾಳೆ ಮೂಸಂಬಿ ತರ್ತೀನಿ, ಎಂದು ಕರಿಯ ಅಲ್ಲಿಂದ ಹೊರಟು ಮನೆಗೆ ಬರುವಷ್ಟರಲ್ಲಿ ಅವನು ಸತ್ತೇಹೋಗಿದ್ದಾನೆಂದು ಆಸ್ಪತ್ರೆಯಿಂದ ಮೆಸೇಜ್‌ ಬಂದಿತ್ತು.

ಗೆಳೆಯ ತನಗೇನೋ ಉಯಿಲು ಕುರಿತು ಹೇಳಿರಬೇಕೆಂದು ಆ ಮಾತಿನ ಅರ್ಥ ಹುಡುಕಲು ಕರಿಯ ದಾರಿ ಮಧ್ಯೆ ಚೀನೀ ಲೈಬ್ರೆರಿಗೆ ಹೋಗಿ ನೋಡಿದರೆ, `ಪಾಪಿ, ನನ್ನ ಆಕ್ಸಿಜನ್‌ ಪೈಪ್‌ ಮೇಲಿನಿಂದ ನಿನ್ನ ಕಾಲು ತೆಗಿ!’ ಎಂದು ಬರಬೇಕೇ?

ತಾತಾ : ಈಗಿನ ನಿಮ್ಮ ಕಾಲದವರು ಊಟಕ್ಕೆ ಮುಂಚೆ ನೆಟ್ಟಗೆ ಕೈ ತೊಳೆಯದೆ ಹೋದ್ರೂ, ಊಟ ಆದ ಮೇಲೆ ಮಾತ್ರ 4-5 ಸಲ ಕೈ ತೊಳೆಯುತ್ತಾರಲ್ಲ…. ಯಾಕೆ?

ಮೊಮ್ಮಗ : ನಮ್ಮ ಮೊಬೈಲ್ ‌ಟಚ್‌ ಸ್ಕ್ರೀನ್‌ ಹಾಳಾಗಬಾರದು ಅಂತ!

ಕಸ್ಟಮರ್‌ ಕೇರ್‌ ಹುಡುಗಿ : ಯಾಕ್ರಿ ಸಾರ್‌, ಪದೇ ಪದೇ ನಮ್ಮ ಡಿಪಾರ್ಟ್‌ಮೆಂಟ್‌ಗೆ ಫೋನ್‌ ಮಾಡ್ತಾನೇ ಇರ್ತೀರಿ?

ಕಲ್ಲೇಶಿ : ಕೆಲಸವಿಲ್ಲದ ನನ್ನಂಥ ನಿರುದ್ಯೋಗಿಗೂ ಮರ್ಯಾದೆ ಕೊಟ್ಟು `ಸಾರ್‌’ ಅಂತೀರಲ್ಲ….. ಅದನ್ನು ಕೇಳಿಸಿಕೊಳ್ಳೋಕ್ಕೆ! ಗುಂಡ : ಅಕೌಂಟ್ಸ್ ನವರಿಗೆ ದುಂಡಗಿರುವ ನಾಯಕಿಯರೇ ಇಷ್ಟ. ಯಾಕೆ?

ಕಿಟ್ಟಿ : ಯಾಕಂದ್ರೆ `ದೇವರು ಲೈಕ್‌ ರೌಂಡ್‌ ಫಿಗರ್ಸ್‌!’

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ