ಕೊರೋನಾ ಕುರಿತು ಅತಿ ಕಾಳಜಿ ವಹಿಸುತ್ತಿದ್ದ ರತ್ನಾ ಡಾಕ್ಟರ್‌ಗೆ ಫೋನ್ ಮಾಡಿ ಕೇಳಿಯೇ ಬಿಟ್ಟಳು, ``ಡಾಕ್ಟ್ರೇ, ಬಸ್ಸುಗಳು ಓಡಾಡುತ್ತಿವೆ ಎಂದು ನಮ್ಮ ಯಜಮಾನರು ಆಫೀಸಿಗೆ ಹೋಗಿ ಬರುತ್ತಿದ್ದಾರೆ. ಆಫೀಸಿನಿಂದ ಬಂದ ತಕ್ಷಣ ಅವರ ಕೈಕಾಲು ತೊಳೆಯಲು ಸ್ಯಾನಿಟೈಸರ್‌ನ್ನು ಮಗ್ಗಲ್ಲಿ ಸುರಿಯುತ್ತೇನೆ. ಬಿಸಿ ನೀರಲ್ಲಿ ಅವರಿಗೆ ಸ್ನಾನ ಮಾಡಿಸಿ, ಅವರ ಬಟ್ಟೆ ಹಿಂಡಿ ಹಾಕ್ತೀನಿ. ನಂತರ ಬಾಯಿ ಮುಕ್ಕಳಿಸಲು ಸೈಂಧವ ಲವಣ, ನಿಂಬೆ, ಕಪ್ಪು ಮೆಣಸು ಹಾಕಿದ ಬಿಸಿ ಬಿಸಿ ನೀರು ಕೊಡ್ತೀನಿ. ಚಳಿ ಅನ್ನಬಾರದು ಅಂತ ಬಿಸಿ ಐರನ್ ಬಾಕ್ಸಿನಿಂದ ಲೈಟಾಗಿ ಟಚ್ ಕೊಡ್ತೀನಿ.... ಸದ್ಯಕ್ಕೆ ಇಷ್ಟು ಸಾಕಾ? ಇನ್ನೂ ಏನಾದ್ರೂ ಮಾಡಬೇಕಾ?''
ಅದಕ್ಕೆ ಡಾಕ್ಟರ್, ``ಒಂದೇ ಒಂದು ಬಾಕಿ ಇದೆ. ಇಷ್ಟೆಲ್ಲ ಆದ ಮೇಲೆ ಸ್ನಾನದ ನಂತರ ಅವರನ್ನು ಕುದಿ ಕುದಿಯುತ್ತಿರುವ ನೀರಿಗೆ ಹಾಕಿ ಮರಳಿಸಿಬಿಡಿ!''
ಲಾಕ್ ಡೌನ್ ಇದ್ದಾಗಲೂ ಭಂಡ ಗುಂಡ ಕಾರ್ ತೆಗೆದುಕೊಂಡು ಊರು ಸುತ್ತಲೂ ಹೊರಟ. ಆಗ ಅವನು ಮುಂದಿನ ದಾರಿ ಗೊತ್ತಾಗಲೆಂದು ಗೂಗಲ್ ಮ್ಯಾಪ್ ಆನ್ ಮಾಡುತ್ತಾನೆ, ಅದರಿಂದ ಈ ತರಹ ಸೂಚನೆಗಳು ಬರತೊಡಗಿದವು:
ಸರಿಯಾದ ರೂಲ್ ದೊಣ್ಣೆ ಸೇವೆ ಬೇಕೇ? ಹಾಗಿದ್ದರೆ ಬಲಗಡೆ ತಿರುಗಿ. 100 ಸಲ ಬಸ್ಕಿ ಹೊಡೆದು ಬೆವರಿಳಿಸಬೇಕೇ? ಹಾಗಿದ್ದರೆ ಎಡಗಡೆ ತಿರುಗಿ. ಎರಡೂ ದಿಕ್ಕಿನಲ್ಲಿ ಪೊಲೀಸರಿಂದ ಓತಪ್ರೋತವಾಗಿ ಹಿತನುಡಿಗಳ ಮುತ್ತು ಉದುರುತ್ತದೆ. ಎರಡೂ ಕಡೆ ತಿರುಗುವುದು ಬೇಡ ಅಂದ್ರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಯೂಟರ್ನ್ ತೆಗೆದುಕೊಂಡು ಮನೆಗೆ ಹೋಗಿ!
ಲಾಕ್ ಡೌನ್ ಪರಿಣಾಮ ಗಮನಿಸಿ :
ಗುಂಡನಿಗೆ ಮನೆಯಲ್ಲೇ 2 ತಿಂಗಳಿನಿಂದ ಇದ್ದು ಸಾಕಾಯ್ತು. ಟಿ.ವಿ. ನೋಡಿ ನೋಡಿ ಹುಚ್ಚು ಹಿಡಿಯುವುದೊಂದು ಬಾಕಿ. ಮನೆ ಮುಂದಿನ ಜಗುಲಿಯಲ್ಲಿ ಬಂದು ಕುಳಿತ. ಎದುರಿಗೆ ತರಕಾರಿ ಗಾಡಿಯವನು ತಲೆಗೊಂದು ಟವೆಲ್ ಸುತ್ತಿಕೊಂಡು, ಮಾಸ್ಕ್ ಹಾಕಿಕೊಂಡು, ಲುಂಗಿ ಎತ್ತಿ ಕಟ್ಟಿ ತನ್ನ ಮಾಮೂಲಿ ಸ್ಟೈಲ್‌ನಲ್ಲಿ ಕಿವಿಯ ಬಳಿ ಎಡಗೈ ಹಿಡಿದು `ತರಕಾರಿ....' ಎಂದು ತಳ್ಳಿಕೊಂಡು ಬರುತ್ತಿದ್ದ. ಅವನನ್ನು ನೋಡಿದ್ದೇ ಗುಂಡನಿಗೆ ಥಟ್ಟನೆ ಒಂದು ಐಡಿಯಾ ಹೊಳೆಯಿತು. ``ಏನಪ್ಪ, ನೀನು ಈ ಬಿಸಿಲಲ್ಲಿ ಎಷ್ಟು ಅಂತ ಹೊರಗೆ ಸುತ್ತಾಡುತ್ತೀಯಾ? ನಮ್ಮ ಮನೆಯಲ್ಲಿ ಕುಳಿತು ಟಿ.ವಿ ನೋಡು. ನಾನು 4 ರೌಂಡ್ ಸುತ್ತಾಡಿ ಬರ್ತೀನಿ. ತರಕಾರಿ ಮಾರಿದ ದುಡ್ಡನ್ನು ಪ್ರಾಮಾಣಿಕವಾಗಿ ನಿನಗೆ ತಂದುಕೊಡ್ತೀನಿ ನೀನು ಸ್ವಲ್ಪ ವಿಶ್ರಾಂತಿ ಪಡೆ,'' ಎಂದ.
ಆಗ ತರಕಾರಿಯವನು ತನ್ನ ಮಾಸ್ಕ್, ಪೇಟ ಸರಿಸಿ ಮುಖ ಸರಿಯಾಗಿ ತೋರಿಸುತ್ತಾ, ``ಏ ಗುಂಡ, ನಾನು ಕಿಟ್ಟಿ ಕಣೋ! ಈ ಐಡಿಯಾ ನನಗೆ ಹೊಳೆದಿಲ್ಲ ಅಂದುಕೊಳ್ತೀಯಾ? ಅಸಲಿ ತರಕಾರಿಯವನ್ನ ನಮ್ಮ ಮನೆಯಲ್ಲಿ ಕೂರಿಸಿ, 3 ಬೀದಿ ಬಿಟ್ಟು ನಿಮ್ಮ ರಸ್ತೆಗೆ ಬಂದಿದ್ದೀನಿ....'' ಎಂದಾಗ ಗುಂಡ ಸುಸ್ತೋ ಸುಸ್ತು!