ನಿಮಗೆ ನೆನಪಿರಬಹುದು, 2010ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾದ ಸೆಕೆಂಡ್ ರನ್ನರ್ ಅಪ್ ಎನಿಸಿದ ಯಶಸ್ವೀ ಮಾಡೆಲ್, ನಟಿ ಪೂಜಾ ಹೆಗಡೆ `ಮೊಹೆಂಜೋದಾರೋ’ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದಳು. ಮೂಲತಃ ಮಂಗಳೂರಿನ ತುಳು ಹುಡುಗಿ ಪೂಜಾ ಹೆಗಡೆ ನಂತರ ಬೆಳೆದಿದ್ದು, ಓದಿದ್ದು ಎಲ್ಲಾ ಮುಂಬೈ ನಿವಾಸಿಯಾಗಿ. ಈಕೆ ಮೊದಲು ದಕ್ಷಿಣದ ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿ ಸೈ ಎನಿಸಿದಳು. ಕನ್ನಡಕ್ಕೆ ಎಂಟ್ರಿ ಕೊಡು ಮೊದಲೇ ಬಾಲಿವುಡ್ ಇವಳನ್ನು ಕೈ ಬೀಸಿ ಕರೆದಿತ್ತು.
ಮೊಗಮುಡಿ, ರಂಗಸ್ಥಳಂ, ಇತ್ತೀಚಿನ ಅಲಾ ವೈಕುಂಠಪುರಂ ಲೋ ಚಿತ್ರಗಳಿಂದ ಕಾಲಿ/ಟಾಲಿವುಡ್‌ನಲ್ಲಿ ಮನೆಮಾತಾಗಿದ್ದ ಈ ಬೆಡಗಿ ಹೃತಿಕ್ ರೋಶನ್ ಜೊತೆ ಹಿಂದಿಯಲ್ಲಿ `ಮೊಹೆಂಜೋದಾರೋ’ ಚಿತ್ರದಲ್ಲಿ ಅದ್ಭುತ ವೆಲ್‌ಕಂ ಪಡೆದಳು.
ಕಾಲೇಜಿನ ದಿನಗಳಿಂದಲೇ ಫ್ಯಾಷನ್ ಶೋ, ಕ್ಯಾಟ್ ವಾಕ್, ರಾಂಪ್ ಶೋ ಸ್ಟಾಪರ್, ಮಾಡೆಲಿಂಗ್, ನಟನೆಯ ಹುಚ್ಚು ಬೆಳೆಸಿಕೊಂಡಿದ್ದ ಪೂಜಾ ಸಹಜವಾಗಿಯೇ ಮುಂದೆ ಚಿತ್ರರಂಗಕ್ಕೆ ಬಂದಳು. ತನ್ನ ಸಖತ್ ಸೌತ್ ಲುಕ್ಸ್ ನಿಂದಾಗಿ ತಮಿಳು, ತೆಲುಗಿನಲ್ಲಿ ಯಶಸ್ವೀ ಎನಿಸಿದಳು. ಕಾಲೇಜಿನಲ್ಲಿದ್ದಾಗಲೇ ಇವೆಲ್ಲ ಚಟುವಟಿಕೆಗಳಲ್ಲಿ ಸಹಜವಾಗಿ ಭಾಗವಹಿಸುತ್ತಿದ್ದಳು. ಆದರೆ ಪೂಜಾಳ ಕೌಟುಂಬಿಕ ಹಿನ್ನೆಲೆಯಲ್ಲಿ ಯಾರೂ ಚಿತ್ರರಂಗದವರು ಇರಲಿಲ್ಲ. ಅವಳ ಈ ಆಯ್ಕೆಗೆ ಮನೆಯವರು ಸಹಕಾರ, ಪ್ರೋತ್ಸಾಹ ನೀಡಿದರು. ಅವಳ ಈ ಕೆರಿಯರ್‌ಗೆ ತಾಯಿ ಲತಾ ಹೆಗಡೆ, ತಂದೆ ಮಂಜುನಾಥ್ ಹೆಗಡೆ ಒತ್ತಾಸೆಯಾಗಿ ನಿಂತರು.
ಸ್ವಭಾತಃ ಶಾಂತ, ಸ್ನೇಹಮಯಿ, ಹಸನ್ಮುಖಿ ಪೂಜಾಳಿಗೆ ಅಭಿನಯದ ಪ್ರತಿ ಮಜಲೂ ಬಲು ಇಷ್ಟವಂತೆ. ದಕ್ಷಿಣದವಳಾದ್ದರಿಂದ ಲೀಲಾಜಾಲವಾಗಿ ತಮಿಳು, ತೆಲುಗಿನಲ್ಲಿ ಗೆಲ್ಲುವಂತಾಯಿತು. ಮುಂಬೈನಲ್ಲಿ ಕಲಿತಿದ್ದರಿಂದ ಹಿಂದಿ, ಮರಾಠಿಯ ಉಚ್ಚಾರಣೆಯಲ್ಲೂ ಯಾವುದೇ ಲೋಪದೋಷಗಳಿಲ್ಲದೆ ಬಾಲಿವುಡ್‌ನಲ್ಲಿ ನೆಲೆಯೂರಲು ದಾರಿಯಾಯಿತು.
ಅವಳು ನಿರ್ಮಾಪಕ, ನಿರ್ದೇಶಕರಾದ ಆಶುತೋಷ್ ಗೋರ್‌ಕರ್ ಜೊತೆ ಹಿಂದಿಯ ಡೆಬ್ಯು ನಟಿ ಆಗಲು ಅವಕಾಶ ಸಿಕ್ಕಾಗ ಅದನ್ನು ಚೆನ್ನಾಗಿಯೇ ಬಳಸಿಕೊಂಡಳು. ಏಕೆಂದರೆ ಅವಳಿಗೆ ಹಿಂದಿಯ ಸ್ಟಾರ್ ನಟ ಹೃತಿಕ್ ರೋಶನ್‌ಗೆ ನಾಯಕಿಯಾಗಿ ನಟಿಸುವ ಸದವಕಾಶ ದೊರೆತಾಗ ಅದನ್ನು ಚೆನ್ನಾಗಿಯೇ ಬಳಸಿಕೊಂಡಳು. ಆದರೆ ದುರದೃಷ್ಟವಶಾತ್ ಆ ಚಿತ್ರ ಫ್ಲಾಪ್ ಆಯಿತು. ಹೀಗಾಗಿ ಆರಂಭದಲ್ಲಿಯೇ ಬಾಲಿವುಡ್‌ನಲ್ಲಿ ಪೂಜಾಳಿಗೆ ಗೆಲುವಿನ ಮನ್ನಣೆ ದೊರಕಲಿಲ್ಲ.
ಭರವಸೆಯ ಪರಿಶ್ರಮ
ಪೂಜಾ ಈ ಫ್ಲಾಪ್ ಕುರಿತು ವಿವರಿಸುತ್ತಾ, ಈ ಚಿತ್ರ ಸಕ್ಸಸ್ ಎನಿಸಿದ್ದರೆ ಬಾಲಿವುಡ್‌ನಲ್ಲಿ ನನ್ನ ವರ್ಚಸ್ಸು ವಿಭಿನ್ನವಾಗಿ ಇರುತ್ತಿತ್ತು. ಮೊದಲ ಚಿತ್ರ ಯಶಸ್ವಿ ಆಗುವುದು ಯಾವುದೇ ಕಲಾವಿದರಿಗಾದರೂ ಅನಿವಾರ್ಯ. ಅದು ಅವರ ಕೆರಿಯರ್ ಗ್ರಾಫ್‌ನ್ನೇ ಬದಲಿಸಿಬಿಡುತ್ತದೆ. ನನ್ನ ವಿಷಯದಲ್ಲಿ ಅದು ಆಗದೇ ಹೋದುದು ದುರಾದೃಷ್ಟ. ಚಿತ್ರ ಸಕ್ಸಸ್ ಆಗಲಿ ಬಿಡಲಿ, ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಯಾವುದೇ ಚಿತ್ರದ ಪ್ರೊಸೆಸಿಂಗ್ ಇದೆಯಲ್ಲ, ಅದನ್ನು ನಾನು ತುಂಬಾ ಎಂಜಾಯ್ ಮಾಡ್ತೀನಿ.
ಅದರಲ್ಲಿ ನನ್ನ ನಟನೆ ಇನ್ನಷ್ಟು ಮತ್ತಷ್ಟು ಸುಧಾರಿಸಬೇಕೆಂದು ಬಹಳ ಶ್ರಮಿಸುತ್ತೇನೆ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ. ಎಷ್ಟೋ ಸಲ ನಮಗೆ ನೀಡಿದ ಸ್ಕ್ರಿಪ್ಟ್ ಒಂದು ತರಹ ಇರುತ್ತದೆ, ಚಿತ್ರ ಪೂರ್ತಿ ಆಗಿ ರಿಲೀಸ್ ಆಗುವಷ್ಟರಲ್ಲಿ ಅದು ಇನ್ನೇನೋ ಆಗಿಹೋಗಿರುತ್ತದೆ. ಹಾಗಾದಾಗ ಚಿತ್ರ ಫ್ಲಾಪ್ ಆಗುವುದು ಗ್ಯಾರಂಟಿ. ಅಂದುಕೊಂಡಂತೆ ಎಲ್ಲ ನೀಟಾಗಿ ನಡೆದರೆ ಆಗ ನಾವು ಸಕ್ಸಸ್ ಎದುರು ನೋಡಬಹುದು.
ಲಾಕ್ ಡೌನ್‌ನಲ್ಲಿ ಪೂಜಾ ಸದಾ ಮನೆಯಲ್ಲೇ ಇದ್ದು ತನ್ನ ಅಭಿಮಾನಿಗಳೊಂದಿಗೆ ಚಾಟಿಂಗ್‌ನಲ್ಲಿ ತೊಡಗಿರುತ್ತಾಳೆ. ಯಾವುದೇ ಪೆಂಡಿಂಗ್ ಕೆಲಸವಿದ್ದರೂ ಅದನ್ನು ಪೂರ್ತಿ ಮಾಡಿಕೊಟ್ಟಳು. ಈ ಸಮಯದಲ್ಲಿ ಎಲ್ಲರೂ ಹೆಚ್ಚು ಸಕಾರಾತ್ಮಕವಾಗಿ ಯೋಚಿಸಬೇಕು. ಹೆಚ್ಚು ಕ್ರಿಯೇಟಿವ್ ಆಗಿ ಕೆಲಸ ಮಾಡಲು ನನಗೆ ಇಷ್ಟ. ಶೂಟಿಂಗ್ ಇಲ್ಲದೆ ಅದನ್ನು ನಾನು ಬಹಳ ಮಿಸ್‌ಮಾಡಿಕೊಳ್ಳುತ್ತಿದ್ದೇನೆ. ಆದರೆ ಈ ಕೊರೋನಾ ಮಹಾಮಾರಿಯ ಕಾಟದ ಮಧ್ಯೆ ಮನೆಯಲ್ಲೇ ಸುರಕ್ಷಿತರಾಗಿ ಉಳಿಯಬೇಕಾದುದು ಅನಿವಾರ್ಯ. ಇದರ ಜೊತೆಗೆ ನನಗೆ ಮೆಡಿಟೇಶನ್, ಕುಕಿಂಗ್, ಪುಸ್ತಕ ಓದುವ ಹವ್ಯಾಸಗಳು ಇದ್ದೇ ಇವೆ.
ನನಗೆ ಇನ್ನೂ 2 ಚಿತ್ರಗಳ ಆಫರ್ ಇತ್ತು. ಈ ಲಾಕ್ ಡೌನ್ ಕಾರಣ ನಿಂತುಹೋಯ್ತು. ಆದರೆ ನಾನು ನಿರಾಸೆಗೊಳ್ಳಲಿಲ್ಲ. ನಾವೆಲ್ಲರೂ ಒಂದೇ ದೋಣಿಯ ಪ್ರಯಾಣಿಕರು. ನಾನು ಈಗ ಕೆಲಸ ಮಾಡುತ್ತಿಲ್ಲ ಎಂದರೆ ಅದೇನೂ ಅಂಥ ದೊಡ್ಡ ವಿಷಯವಲ್ಲ. ಏಕೆಂದರೆ ಬಹುತೇಕ ಯಾವ ತಾರೆಯರೂ ಈಗ ಕೆಲಸ ಮಾಡುತ್ತಿಲ್ಲ.
ಸದಾ ಫಿಟ್ ಆಗಿರುವೆ
ಪೂಜಾ ಈ ದಿನಗಳಲ್ಲಿ ಮನೆಯಲ್ಲಿ ಹೆಚ್ಚಾಗಿ ವರ್ಕ್ ಔಟ್ ಮಾಡುತ್ತಾಳೆ. ಬೆಳಗಿನ ಜಾಗಿಂಗ್, ಬ್ರಿಸ್ಕ್ ವಾಕ್ ನಂತರ 1 ಗಂಟೆ ಕಾಲ ಕಟ್ಟುನಿಟ್ಟಾಗಿ ವ್ಯಾಯಾಮ ಮಾಡುತ್ತಾಳೆ. ಅದರಿಂದ ದೇಹಕ್ಕೆ ಲವಲವಿಕೆ, ಸ್ಛೂರ್ತಿ ದೊರೆತು, ರಕ್ತ ಸಂಚಾರ ಸುಗಮವಾಗುತ್ತದೆ. ಇದರ ಜೊತೆಗೆ ಸದಾ ಎಚ್ಚರಿಕೆಯಿಂದ ಪೌಷ್ಟಿಕ ಆಹಾರ ಮಾತ್ರ ಸೇವಿಸುತ್ತಾಳೆ. ಯಾವುದೇ ಜಂಕ್ ಫುಡ್, ಫಾಸ್ಟ್ ಫುಡ್ ಮುಟ್ಟುವುದಿಲ್ಲ. ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇದು ಮುಖ್ಯ.
ಪೂಜಾ ತಾನು ನಟಿಸಿದ ಎಲ್ಲಾ ಚಿತ್ರಗಳನ್ನೂ ಬಹಳ ಇಷ್ಟಪಟ್ಟಿದ್ದಾಳೆ, ಅದರಲ್ಲಿ ಶೂಟಿಂಗ್ ಮಾಡುವಾಗ ಎಂಜಾಯ್ ಮಾಡಿದ್ದಾಳೆ. ಇದರಿಂದ ಅವಳಿಗೆ ಹೆಚ್ಚಿನ ತೃಪ್ತಿ ಇದೆ. ಒಂದು ಮಗು ಆಸಕ್ತಿಯಿಂದ ಕಲಿಯುವ ಹಾಗೆ ಈ ಚಿತ್ರರಂಗದ ಚಟುವಟಿಕೆಗಳನ್ನು ಕಲಿಯುತ್ತಿದ್ದಾಳೆ. ನಾನು ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುವುದರಿಂದ ವಿಭಿನ್ನ ವರ್ಗದ ಪ್ರೇಕ್ಷಕರ ಜೊತೆ ಏಕಕಾಲಕ್ಕೆ ಸ್ಪಂದಿಸುವಂತಾಗಿದೆ. ಎಲ್ಲಾ ಚಿತ್ರಗಳಲ್ಲೂ ಎಮೋಶನ್ಸ್ ಒಂದೇ ಆದರೂ ಸಂಭಾಷಣೆ ಮಾತ್ರ ಬೇರೆ ಬೇರೆ ಆ್ಯಕ್ಸೆಂಟ್‌ನಲ್ಲಿ ಇರಬೇಕಾಗುತ್ತದೆ. ನಟನೆ ಮೇಲೆ ಅದರ ಪ್ರಭಾವ ಆಗದು. ನಾನು ದಕ್ಷಿಣದಲ್ಲಿ ಕನ್ನಡ, ಮುಂಬೈನಲ್ಲಿ ಮರಾಠಿ, ವೆಬ್ ಸಿರೀಸ್ ಚಿತ್ರಗಳಲ್ಲಿ ನಟಿಸ ಬಯಸುತ್ತೇನೆ. ನಾನು ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಬಯಸುತ್ತೇನೆ.
ಬಾಲಿವುಡ್‌ನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಪ್ರಕರಣಗಳ ಕುರಿತಾಗಿ ಪೂಜಾ, ನಾನು ಅವರ ವೈಯಕ್ತಿಕ ನಿರ್ಧಾರಗಳ ಬಗ್ಗೆ ಏನು ತಾನೇ ಹೇಳಲಿ? ಆದರೆ ನನ್ನಷ್ಟಕ್ಕೆ ಹೇಳುವುದಾದರೆ, ಎಂಥದೇ ಟೆನ್ಶನ್ ಇದ್ದರೂ ಅದನ್ನು ನಿಭಾಯಿಸುವುದು ನನಗೆ ಗೊತ್ತು. ಈ ಸ್ಟ್ರೆಸ್ ಹೆಚ್ಚಿದಾಗ ಹೇಗಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇನೆಯೇ ಹೊರತು ನಾನು ಸಾವಿಗೆ ಶರಣಾಗುವುದಿಲ್ಲ ಎಂದು ಖಚಿತವಾಗಿ ಹೇಳುತ್ತಾಳೆ.
ಟೆನ್ಶನ್ ಹೆಚ್ಚಿದಷ್ಟೂ ನಾನು ಅತ್ಯಧಿಕ ಕೆಲಸ ಮಾಡುತ್ತಾ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇನೆ. ಅದರಿಂದ ಅದು ಸಹಜವಾಗಿ ತಗ್ಗುತ್ತದೆ. ನೀವು ಕಿಕ್ ಬಾಕ್ಸಿಂಗ್, ಪಂಚಿಂಗ್‌ನಂಥ ಸ್ಪೋರ್ಟ್ಸ್ ನಲ್ಲಿ ಪಳಗಿದ್ದರೆ ಸಹಜವಾಗಿಯೇ ನೀವು ನಿಮ್ಮ ಫ್ರಸ್ಟ್ರೇಶನ್‌ನ್ನು ಸುಲಭವಾಗಿ ಹೊರದೂಡಬಹುದು ಎನ್ನುತ್ತಾಳೆ ಪೂಜಾ.
ವಿಭಿನ್ನ ನಾಯಕರ ಜೊತೆ ನಟಿಸಿದ ಅನುಭವ ಹೇಗಿತ್ತು?
ಮೊದಲ ತಮಿಳು ಚಿತ್ರ ಮೊಗಮುಡಿಯಲ್ಲಿ ಜೀವ ಜೊತೆ ತುಂಬಾನೇ ಕಲಿತಿದ್ದೇನೆ. ವೆರಿ ಸ್ಪೋರ್ಟಿವ್ ನೇಚರ್, ತಾಳ್ಮೆಯಿಂದ ತುಂಬಾ ಸಪೋರ್ಟ್ ಮಾಡಿದರು. ನಾಗಚೈತನ್ಯ ಜೊತೆ, ಒಕ ಲೈಲಾ ಕೋಸಂ ತೆಲುಗು ಚಿತ್ರ ವಿಭಿನ್ನವಾಗಿತ್ತು. ಆತ ತುಂಬಾ ಜಾಲಿ ಮೂಡ್‌ನ ಜೋವಿಯಲ್ ಫೆಲೋ. ರಾಮ್ ಚರಣ್ ತೇಜಾ (ಚಿರಂಜೀವಿ ಮಗ) ಜೊತೆ ರಂಗಸ್ಥಳಂ, ಜೂ. ಎನ್.ಟಿ.ಆರ್‌ಜೊತೆ ಅರವಿಂದ ಸಮೇತ ವೀರ ರಾಘವ, ಮಹೇಶ್ ಬಾಬು ಜೊತೆ ಮಹರ್ಷಿ, ವರುಣ್ ತೇಜ ಜೊತೆ ಗಡ್ಡಾಲಕೊಂಡ ಗಣೇಶ್ ಹಾಗೂ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಂ ಲೋ ಸಂತಸದ ಅನುಭವ ನೀಡಿದ್ದ. ಹೃತಿಕ್ ಜೊತೆ ಮೊಹೆಂಜೊದಾರೋ ಟರ್ನಿಂಗ್ ಪಾಯಿಂಟ್ ಆದರೆ, ಬರಲಿರುವ ಕಭೀ ಈದ್ ಕಭೀ ದೀವಾಲಿ, ಸಲ್ಮಾನ್ ಖಾನ್ ಜೊತೆ ಹೊಸ ಅನುಭವ ನೀಡಿತು ಎನ್ನುತ್ತಾಳೆ.
– ಪ್ರತಿನಿಧಿ