ಯಾವ ಸ್ಥಳದಲ್ಲಿ ನಾವು ಕುಟುಂಬದವರಿಗೆ ಪೌಷ್ಟಿಕ ಆಹಾರವನ್ನು ಬಡಿಸುತ್ತೇವೋ, ಅಲ್ಲಿ ರೋಗಾಣುಗಳು ಇದ್ದರೆ ನಮ್ಮವರು ಆರೋಗ್ಯದಿಂದಿರಲು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ವಿಶೇಷ ಸ್ವಚ್ಛತೆಯ ಅಗತ್ಯ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಬ್ಯಾಕ್ಟೀರಿಯಾಗಳು ಎಲ್ಲೆಲ್ಲಿ ಅಡಗಿ ಕುಳಿತಿರುತ್ತವೆ ಆ ಸ್ಥಳವನ್ನು ಕಂಡುಹಿಡಿಯುವ ಅಗತ್ಯ ಇರುತ್ತದೆ. ರೋಗಾಣು ಹಾಗೂ ಬ್ಯಾಕ್ಟೀರಿಯಾಗಳ ಹಾಟ್ ಸ್ಪಾಟ್ ಮತ್ತು ಸ್ವಚ್ಛಗೊಳಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳಿ :
ಬ್ಯಾಕ್ಟೀರಿಯಾದ ಮೂಲ ಕಿಚನ್ ಟವೆಲ್
ಪ್ರತಿಯೊಂದು ಮನೆಯಲ್ಲಿ ಅಡುಗೆಮನೆಯ ಸ್ಲ್ಯಾಬ್‌ನ್ನು ಸ್ವಚ್ಛಗೊಳಿಸುವ ಟವೆಲ್ಸ್ ಇದ್ದೇ ಇರುತ್ತವೆ. ಎಷ್ಟೋ ಸಲ ನಾವು ಸ್ಲ್ಯಾಬ್ ಸ್ವಚ್ಛಗೊಳಿಸುತ್ತೇವೆ. ಒಮ್ಮೊಮ್ಮೆ ಆತುರಾತುರದಲ್ಲಿ ಪಾತ್ರೆಗಳನ್ನು ಕೂಡ ಸ್ವಚ್ಛಗೊಳಿಸುತ್ತೇವೆ. ನೀವು ಹೀಗೆಯೇ ಮಾಡುವವರಾಗಿದ್ದರೆ ಸ್ವಲ್ಪ ಜಾಗೃತರಾಗಿರಿ. ಏಕೆಂದರೆ ಅಡುಗೆಮನೆಯ ಟವೆಲ್ ಒದ್ದೆಯಾಗಿರುವ ಕಾರಣದಿಂದ ಅದರಲ್ಲಿ ಕ್ಯಾಲಿಫಾರ್ಮ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ. ಅವು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಅಡುಗೆಮನೆಯ ಟವೆಲ್‌ನ್ನು ಬಳಸಿದ ಬಳಿಕ ಡಿಶ್ ವಾಶ್ ಜೆಲ್ ಮಿಶ್ರಿತ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ, ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ಕೈಯಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಬಟ್ಟೆಗಳನ್ನು ಕೂಡ ಅದೇ ರೀತಿಯಲ್ಲಿ ಸ್ವಚ್ಛಗೊಳಿಸಿ, ಕೊರೋನಾ ಕಾಲದಲ್ಲಂತೂ ಪ್ರತಿದಿನ ಈ ನಿಯಮ ಅನುಸರಿಸಿ.
ಮೈಕ್ರೋವೇವ್ ಪ್ಲೇಟ್‌ನಲ್ಲಿ ರೋಗಾಣುಗಳು
ಮಾಡರ್ನ್ ಕಿಚನ್‌ನ ಇಂದಿನ ದಿನಗಳಲ್ಲಿ ಪ್ರತಿಯೊಂದು ಅಡುಗೆಮನೆಯಲ್ಲಿ ಮೈಕ್ರೋವೇವ್ ಇದ್ದೇ ಇರುತ್ತದೆ. ಇಂತಹದರಲ್ಲಿ ನಾವು ಚಿಕ್ಕಪುಟ್ಟ ಸಂಗತಿಗಳಿಗಾಗಿ ಸ್ಟವ್‌ನ್ನು ಅವಲಂಬಿಸದೆ ಮೈಕ್ರೋವೇವ್‌ನ್ನೇ ಅವಲಂಬಿಸಿದ್ದೇವೆ. ಉದಾಹರಣೆಗಾಗಿ ಅಡುಗೆ ಬಿಸಿ ಮಾಡುವುದು ಇತರೆ ಚಿಕ್ಕಪುಟ್ಟ ಡಿಶ್‌ಗಳನ್ನು ತಯಾರಿಸಲು ಅದನ್ನು ಬಳಸುತ್ತೇವೆ. ಒಂದು ವೇಳೆ ನೀವು ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸದೆ ಇದ್ದರೆ ನೀವು ಅನಾರೋಗ್ಯ ಪೀಡಿತರಾಗಬಹುದು.
ಸಂಶೋಧನೆಗಳಿಂದ ಸಾಬೀತಾದ ಸಂಗತಿಯೆಂದರೆ, ಮೈಕ್ರೋವೇವ್ ಪ್ಲೇಟ್‌ನಲ್ಲಿ 100 ಪಟ್ಟು ರೋಗಾಣುಗಳು ಇರುತ್ತವೆ. ಮೈಕ್ರೋವೇವ್ ಬಿಸಿ ಮಾಡಿದಾಗ ಬ್ಯಾಕ್ಟೀರಿಯಾಗಳು ಕೂಡ ಸತ್ತು ಹೋಗುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವ ಸಂಗತಿ ಹೀಗಿಲ್ಲ. ಕೆಲವು ಬ್ಯಾಕ್ಟೀರಿಯಾಗಳು ಸತ್ತು ಹೋದರೆ, ಇನ್ನು ಕೆಲವು ಬ್ಯಾಕ್ಟೀರಿಯಾಗಳು ಮತ್ತಷ್ಟು ಬಲಿಷ್ಠವಾಗುತ್ತವೆ. ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ.
ಮೈಕ್ರೋವೇವ್ ಬಳಸುವ ಮುನ್ನ ಹಾಗೂ ಉಪಯೋಗಿಸಿದ ಬಳಿಕ ಅದರ ಪ್ಲೇಟ್‌ನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ವಾರದಲ್ಲಿ ಒಂದು ದಿನ ಮೈಲ್ಡ್ ಕ್ಲೀನರ್‌ನಿಂದ ಮೈಕ್ರೋವೇವ್‌ನ್ನು ಸ್ವಚ್ಛಗೊಳಿಸಿ ಮತ್ತು ಶುಷ್ಕಗೊಳ್ಳಲು ಬಿಡಿ. ಬ್ಯಾಕ್ಟೀರಿಯಾವನ್ನು ಸಾಯಿಸಲು ನೀವು ಮೈಕ್ರೋವೇವ್‌ನಲ್ಲಿ ನಿಂಬೆಹಣ್ಣನ್ನು 30 ಸೆಕೆಂಡ್‌ಗಳ ಮಟ್ಟಿಗೆ ಇಟ್ಟು ಅದನ್ನು ಚಾಲ್ತಿಗೊಳಿಸುವ ಟ್ರಿಕ್‌ನ್ನು ಕೂಡ ಉಪಯೋಗಿಸಬಹುದು. ಅದರಿಂದ ಹೊರಹೊಮ್ಮಿದ ಹಬೆ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡುತ್ತದೆ.
ಚಾಪಿಂಗ್ ಬೋರ್ಡ್ ನಿರ್ಲಕ್ಷ್ಯ ಬೇಡ
ಚಾಪಿಂಗ್ ಬೋರ್ಡ್ ಹಣ್ಣು, ತರಕಾರಿ ಮುಂತಾದವುಗಳನ್ನು ಕತ್ತರಿಸುವುದರ ಹೊರತಾಗಿ ಬಹಳಷ್ಟು ಕೆಲಸಗಳಿಗೆ ಉಪಯೋಗವಾಗುತ್ತದೆ. ಬಹಳಷ್ಟು ಗೃಹಿಣಿಯರು ಉಪಯೋಗಿಸಿದ ಬಳಿಕ ಅದನ್ನು ಕೇವಲ ನೀರಿನಿಂದ ಸ್ವಚ್ಛಗೊಳಿಸಿ ಇಟ್ಟುಬಿಡುತ್ತಾರೆ. ನೀವು ಕೂಡ ಹಾಗೆಯೇ ಮಾಡುವವರಾಗಿದ್ದರೆ ಅದು ಆರೋಗ್ಯದ ಜೊತೆಗೆ ಚೆಲ್ಲಾಟ ಆಡಿದಂತೆ.
ಒಂದು ಶೋಧದಿಂದ ತಿಳಿದು ಬಂದ ಸಂಗತಿಯೆಂದರೆ, ಚಾಪಿಂಗ್ ಬೋರ್ಡ್ ಮೇಲೆ ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ರೋಗಾಣುಗಳು ಉದ್ಭವಿಸುತ್ತವೆ. ಕೆಲವು ಬ್ಯಾಕ್ಟೀರಿಯಾಗಳು ಫುಡ್ ಪಾಯಿಸನಿಂಗ್‌ಗೆ ಕಾರಣವಾಗುತ್ತವೆ.
ಹೀಗಾಗಿ ಕಚ್ಚಾ ಹಾಗೂ ಹಣ್ಣಾದ ವಸ್ತುಗಳನ್ನು ಕತ್ತರಿಸಲು ಬೇರೆ ಬೇರೆ ಚಾಪಿಂಗ್ ಬೋರ್ಡ್ ಬಳಸಿ.
ಚಾಪಿಂಗ್ ಬೋರ್ಡ್‌ನ್ನು ಬಳಸಿದ ಬಳಿಕ ನಿಂಬೆ ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಬೇಕು. ಇದರ ಹೊರತಾಗಿ ಬಿಸಿ ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಇದರಿಂದ ಎಲ್ಲ ಬ್ಯಾಕ್ಟೀರಿಯಾಗಳು ಸತ್ತುಹೋಗುತ್ತವೆ.
ಕಿಚನ್ ಸಿಂಕ್
ಸಂಶೋಧನೆಯಿಂದ ಸಾಬೀತಾದ ಸಂಗತಿಯೆಂದರೆ, ಕ್ಯಾಲಿಫಾರ್ಮ್ ಬ್ಯಾಕ್ಟೀರಿಯಾ ಕಿಚನ್ ಸಿಂಕ್‌ನಲ್ಲಿ ಜನ್ಮ ತಳೆಯುತ್ತವೆ. ಏಕೆಂದರೆ ನಾವು ಇಲ್ಲಿಯೇ ಹಣ್ಣು ತರಕಾರಿಗಳು, ಮುಸುರೆ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತೇವೆ. ಇಂತಹ ಸ್ಥಿತಿಯಲ್ಲಿ ಸಿಂಕ್‌ನ ನಿರ್ಲಕ್ಷ್ಯ ಕುಟುಂಬದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದಕ್ಕಾಗಿ ಸಿಂಕ್‌ನಲ್ಲಿ ಬಿಸಿ ನೀರು ಹಾಕಿ ಸ್ಪಾಂಜ್‌ಗೆ ಒಂದು ಚಮಚ ಬ್ಲೀಚ್ ಪೌಡರ್ ಹಾಕಿ ಚೆನ್ನಾಗಿ ಉಜ್ಜಬೇಕು. ಆ ಬಳಿಕ 5 ನಿಮಿಷ ಹಾಗೆಯೇ ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಬೇಕು.
ಸ್ಟವ್ ನಾಬ್ಸ್
ನೀವು ಗ್ಯಾಸ್ ಬಳಿ ಕೆಲಸ ಮಾಡಲು ಹೋದಾಗ ಅದರ ನಾಬ್ಸ್ ನ್ನು ಓಪನ್ ಮಾಡಲೇಬೇಕಾಗುತ್ತದೆ. ಆ ಕಾರಣದಿಂದ ಮೇಲಿಂದ ಮೇಲೆ ಅದಕ್ಕೆ ಕೈ ತಗುಲಿಸಲೇ ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸ್ಟವ್ ನಾಬ್‌ನಲ್ಲಿ ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾಗಳು ಉತ್ಪನ್ನವಾಗುತ್ತವೆ. ಸ್ಟವ್ ನಾಬ್‌ನ್ನು ಟಾಪ್ 10 ಜರ್ಮ್ಸ್ ಸ್ಥಳ ಎಂದು ಹೇಳಲಾಗುತ್ತದೆ.
ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಪ್ರವೇಶಿಸದಿರಲು 3-4 ಸಲಾದರೂ ನೀವು ಬಿಸಿನೀರಿನಲ್ಲಿ ಡಿಶ್ ವಾಶ್ ಜೆಲ್ ಹಾಕಿ ಅದನ್ನು ಸ್ವಚ್ಛಗೊಳಿಸಿ. ಜೊತೆಗೆ ಗ್ಯಾಸ್ ಸ್ಟವ್‌ನ್ನು ಸ್ವಚ್ಛಗೊಳಿಸಿ. ಅದನ್ನು ಸ್ವಚ್ಛಗೊಳಿಸಿದ ಬಳಿಕವೇ ಬಳಸಿ.
ಡಸ್ಟ್ ಬಿನ್ ರೋಗಾಣುಗಳ ತಾಣ
ಹೆಚ್ಚಿನ ಮನೆಗಳಲ್ಲಿ ಡಸ್ಟ್ ಬಿನ್‌ಗಳು ಇದ್ದೇ ಇರುತ್ತವೆ. ಅವನ್ನು ವ್ಯವಸ್ಥಿತಗೊಳಿಸಲು ಕುಟುಂಬದ ಸದಸ್ಯರು ವಿಶೇಷ ಆಸಕ್ತಿ ವಹಿಸುತ್ತಾರೆ. ಎಷ್ಟೋ ಸಲ ಹಸಿ ಕಸ ಅದರಲ್ಲಿಯೇ ಹಾಗೆಯೇ ಇರುತ್ತದೆ. ನಿಮ್ಮ ಮನೆಯಲ್ಲಿಯೂ ಡಸ್ಟ್ ಬಿನ್‌ನ ಸ್ಥಿತಿ ಹೀಗೆಯೇ ಇದ್ದರೆ ಅದರಲ್ಲಿ ಬಹುಬೇಗ ರೋಗಾಣುಗಳು ಉದ್ಭವಿಸುತ್ತವೆ. ವಾರದಲ್ಲಿ 2 ಸಲ ವಿನಿಗರ್‌ನಲ್ಲಿ ನೀರು ಮಿಶ್ರಣಗೊಳಿಸಿ ಡಿಸ್ಇನ್ಫೆಕ್ಟೆಂಟ್ ಲಿಕ್ವಿಡ್ ಹಾಕಿ ಅದನ್ನು ಸ್ವಚ್ಛಗೊಳಿಸಿ. ಅದರಲ್ಲಿ ಕಡಿಮೆ ಕಸ ಇದ್ದರೂ ದಿನ ಅದನ್ನು ಸ್ವಚ್ಛಗೊಳಿಸಿ.
ಹ್ಯಾಂಡ್ಸ್ ಸ್ವಚ್ಛತೆಯ ನಿಟ್ಟಿನಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗುವುದೆಂದರೆ ಅವು ಅಡುಗೆಮನೆಯ ಕ್ಯಾಬಿನೆಟ್ಸ್ ಮತ್ತು ಫ್ರಿಜ್ ಹ್ಯಾಂಡ್‌ಗಳು. ಆಹಾರ ಸಿದ್ಧಪಡಿಸುವಾಗ ನಾವು ಅವನ್ನು ಮೇಲಿಂದ ಮೇಲೆ ತೆರೆಯುತ್ತೇವೆ ಮತ್ತು ಮುಚ್ಚುತ್ತಿರುತ್ತೇವೆ. ಪ್ರತಿಸಲ ಸ್ವಚ್ಛ ಕೈಗಳಿಂದ ಹೀಗೆ ಮಾಡುವುದು ಅಸಾಧ್ಯ. ಈ ರೀತಿಯಾಗಿ ಅಡುಗೆಮನೆಯ ರೋಗಾಣುಗಳು ಹ್ಯಾಂಡ್‌ಗಳ ಮುಖಾಂತರ ಕುಟುಂಬದ ಸದಸ್ಯರ ಕೈಗೆ ತಗಲುತ್ತವೆ. ಹೀಗಾಗಿ ಅವನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸುವುದು ಅತ್ಯವಶ್ಯ. ಹ್ಯಾಂಡಲ್‌ಗಳನ್ನು ಡಿಸ್‌ಇನ್‌ಫೆಕ್ಟೆಂಟ್ ಅಥವಾ ಬಿಸಿನೀರಿನಿಂದ ಸ್ವಚ್ಛಗೊಳಿಸಿ. ಅದರಿಂದ ಸೋಂಕಿನ ಅಪಾಯ ಇರುವುದಿಲ್ಲ.
ಸ್ಲ್ಯಾಬ್ ಹಾಗೂ ನೆಲದ ಸ್ವಚ್ಛತೆ
ನಾವು ಅಡುಗೆ ಮಾಡುವಾಗ ಗೋಡೆಗಳ ಮೇಲೆ ಜಿಡ್ಡು ಅಂಟಿಕೊಳ್ಳುತ್ತದೆ. ನೆಲದ ಮೇಲೆ ಏನಾದರೂ ಬೀಳುತ್ತಿರುತ್ತದೆ. ಅಂತಹ ಸ್ಥಳಗಳನ್ನು ದಿನ ಸ್ವಚ್ಛಗೊಳ್ಳಬೇಕು. ಬಿಸಿನೀರಿನಲ್ಲಿ ಡಿಸ್‌ಇನ್‌ಫೆಕ್ಟೆಂಟ್ ಹಾಕಿ ನೆಲ ಹಾಗೂ ಗೋಡೆಯ ಭಾಗ ಸ್ವಚ್ಛಗೊಳಿಸಿ. ಅದರಿಂದ ಅಡುಗೆ ಕೋಣೆ ರೋಗಾಣುಗಳಿಂದ ಮುಕ್ತವಾಗಿರುತ್ತದೆ.
ಲಟ್ಟಣಿಗೆ ಮಣೆಗಳು
ಚಪಾತಿ, ರೊಟ್ಟಿಗಳನ್ನು ಪ್ರತಿಯೊಂದು ಮನೆಯಲ್ಲೂ ತಯಾರಿಸಲಾಗುತ್ತದೆ. ಅದಕ್ಕಾಗಿ ಲಟ್ಟಣಿಗೆ, ಮಣೆಗಳನ್ನು ಉಪಯೋಗಿಸಲಾಗುತ್ತದೆ. ಚಪಾತಿ ಮತ್ತು ರೊಟ್ಟಿ ನಮಗೆ ಶಕ್ತಿ ಸ್ಛೂರ್ತಿ ಕೊಡುತ್ತವೆ. ಒಂದು ವೇಳೆ ನಾವು ಲಟ್ಟಣಿಗೆ ಹಾಗೂ ಮಣೆಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಅದು ಸೋಂಕಿಗೆ ಕಾರಣವಾಗುತ್ತದೆ. ಚಪಾತಿ ಲಟ್ಟಿಸಿದ ಬಳಿಕ ಲಟ್ಟಣಿಗೆ ಹಾಗೂ ಮಣೆಗಳನ್ನು ಚಾಕು ನೆರವಿನಿಂದ ಸ್ವಚ್ಛಗೊಳಿಸಿದರೆ ಅಲ್ಲಿ ಬ್ಯಾಕ್ಟೀರಿಯಾ ಉದ್ಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಚಮಚದ ಸ್ಟ್ಯಾಂಡ್
ಚಮಚದ ಸ್ಟ್ಯಾಂಡ್‌ನಿಂದ ನೀರು ಹೊರಹೋಗಲು ಅವಕಾಶವಿರುತ್ತದೆ. ಆದಾಗ್ಯೂ ಅಲ್ಲಿ ಅಷ್ಟಿಷ್ಟು ನೀರು ಉಳಿಯುತ್ತದೆ. ಹೀಗಾಗಿ ಅಲ್ಲಿ ಇಕೋಲಿ ಬ್ಯಾಕ್ಟೀರಿಯಾ, ಯೀಸ್ಟ್ ಉತ್ಪತ್ತಿಯಾಗುತ್ತದೆ. ಅದರಿಂದಾಗಿ ಯಾವುದೇ ತೆರನಾದ ಸೋಂಕು ಉಂಟಾಗಬಹುದು. ಹೀಗಾಗಿ ಚಮಚ ಇಡುವ ಮುಂಚೆ ಆ ಸ್ಟ್ಯಾಂಡ್‌ನ್ನು ಸ್ವಚ್ಛಗೊಳಿಸಿ. ಪ್ರತಿವಾರ ಅದನ್ನು ಡಿಸ್‌ಇನ್‌ಫೆಕ್ಟೆಂಟ್‌ನಿಂದ ಸ್ವಚ್ಛಗೊಳಿಸಿಯೇ ಬಳಸಿ.
– ಪಾರ್ವತಿ ಸುರೇಶ್