ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮನೆಗಳಲ್ಲಿ ಪ್ರಾಣಿಗಳನ್ನು ಸಾಕುವ ಅಭ್ಯಾಸ ಹೊಂದಿರುತ್ತಾರೆ. ಅದರಲ್ಲೂ ಹೆಚ್ಚಿನವರು ಸಾಕುವುದು ನಾಯಿಯನ್ನೇ. ಮತ್ತೆ ಕೆಲವರು ಬೆಕ್ಕುಗಳನ್ನು ಸಾಕುತ್ತಾರೆ. ಅಂದಹಾಗೆ ನಿಮ್ಮ ಸಾಕುಪ್ರಾಣಿ ಕುಟುಂಬದ ಒಂದು ಸದಸ್ಯನಂತಿರುತ್ತದೆ. ಹೀಗಾಗಿ ಅದರ ಸುಖ ಸೌಲಭ್ಯ, ಆಹಾರ, ಅದರ ತೊಂದರೆ ತಾಪತ್ರಯಗಳ ಬಗ್ಗೆ ನೀವು ಎಚ್ಚರದಿಂದಿರಬೇಕು.

ಸಾಕು ನಾಯಿ ದೇಹ ಭಾಷೆಯ ಮೂಲಕ ತನ್ನ ತೊಂದರೆಗಳನ್ನು ವ್ಯಕ್ತಗೊಳಿಸುತ್ತದೆ. ಅದರ ಮೇಲೂ ಹವಾಮಾನದ ಏರುಪೇರುಗಳ ಪರಿಣಾಮವಾಗುತ್ತದೆ. ಅವುಗಳಿಗೂ ಬಿಸಿಲಿನ ಪ್ರಖರತೆ ಹಾಗೂ ಚಳಿಯ ಮರಗುಟ್ಟುವಿಕೆಯ ಅರಿವಾಗುತ್ತದೆ. ಅದರಿಂದ ಅವು ವಿಚಲಿತವಾಗುತ್ತವೆ. ಸಾಕುಪ್ರಾಣಿಯನ್ನು ಬಿಸಿಲು ಹಾಗೂ ಚಳಿಯಿಂದ ರಕ್ಷಿಸುವುದು ಮಾಲೀಕನ ಆದ್ಯ ಕರ್ತವ್ಯವಾಗಿದೆ. ಸಾಕುಪ್ರಾಣಿಗಳು ಕಾರಣವಿಲ್ಲದೆಯೇ ಬೊಗಳುವುದಿಲ್ಲ ಹಾಗೂ ರೋದಿಸುವುದಿಲ್ಲ. ಅದರ ಹಿಂದೆ ಏನಾದರೊಂದು ಕಾರಣವಿದ್ದೇ ಇರುತ್ತದೆ. ಮಾಲೀಕ ಅದರ ಆಕ್ರಂದನ ಹಾಗೂ ಬೊಗಳುವುದನ್ನೇ ಸಂಕೇತವೆಂದು ಭಾವಿಸಬೇಕು.

ಪಟಾಕಿಗಳಿಂದಲೂ ತೊಂದರೆ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನಬಂದಂತೆ ಪಟಾಕಿ ಹಚ್ಚಲಾಗುತ್ತದೆ. ತೀವ್ರ ಶಬ್ದವನ್ನುಂಟು ಮಾಡುವ ಪಟಾಕಿಗಳನ್ನು ಹಾರಿಸುತ್ತಾರೆ. ಅದರಿಂದ ಸಾಕುಪ್ರಾಣಿಗಳಿಗೆ ತೊಂದರೆಯಾಗಬಹುದು. ಪಟಾಕಿಯ ವಿಷಕಾರಕ, ಹೊಗೆ ನಮಗೆ ತೊಂದರೆ ಕೊಡುವ ಹಾಗೆ, ಸಾಕುಪ್ರಾಣಿಗಳಿಗೂ ಸಮಸ್ಯೆಯುಂಟು ಮಾಡುತ್ತದೆ. ಅದರಿಂದ ಉಸಿರಾಟಕ್ಕೆ ತೊಂದರೆ ಉಂಟಾಗಬಹುದು. ಉರಿಯುತ್ತಿರುವ ಪಟಾಕಿ ಅದರ ಮೈಮೇಲೆ ಬಿದ್ದು ಗಾಯ ಉಂಟಾಗಬಹುದು. ಅದು ಹೆದರಿ ಮುದುರಿ ಕುಳಿತುಕೊಳ್ಳುತ್ತದೆ.

ಪಟಾಕಿಗಳಿಂದ ಪ್ರಾಣಿಗಳಿಗೆ ತುರಿಕೆಯ ಸಮಸ್ಯೆ ಉಂಟಾಗಬಹುದು. ಅದರಿಂದ ಅದು ಅಸಮಾಧಾನದಿಂದ ಅತ್ತಿತ್ತ ಓಡಾಡುತ್ತದೆ. ಅಂತಹ ಸಂದರ್ಭದಲ್ಲಿ ಅದಕ್ಕೆ ಪಶು ಚಿಕಿತ್ಸಾಲಯದಿಂದ ಚಿಕಿತ್ಸೆ ಕೊಡಿಸಬೇಕು.

ಯಾವುದೇ ಸಾಕುಪ್ರಾಣಿಗೆ ಅದಕ್ಕೆ ಇಷ್ಟವಾಗುವ ಆಹಾರವನ್ನು ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಕೊಡಬೇಕು. ಬೇಸಿಗೆ ದಿನಗಳಲ್ಲಿ ಅದಕ್ಕೆ ಬಹಳ ನೀರಡಿಕೆಯಾಗುತ್ತದೆ.

health

ನಿಮ್ಮ ಸಾಕು ನಾಯಿ ಮನೆಯಲ್ಲಿಯೇ ಇದ್ದರೆ, ಅದನ್ನು ನೀವು ಸದಾ ಕಟ್ಟಿ ಹಾಕಬೇಕೆಂದೇನೂ ಇಲ್ಲ. ಸದಾ ಕಟ್ಟಿ ಹಾಕಿದರೆ, ಅದು ಸ್ವಲ್ಪ ಗಲಿಬಿಲಿಗೊಳ್ಳುತ್ತದೆ. ಹೊರಗೆ ಕರೆದುಕೊಂಡು ಹೋಗುತ್ತಿದ್ದರೆ, ಅದಕ್ಕೆ ಕೊರಳಪಟ್ಟಿ ಹಾಕಿ ಕರೆದುಕೊಂಡು ಹೋಗಿ. ಏಕೆಂದರೆ ಅದರಿಂದ ಯಾರಿಗೂ ತೊಂದರೆಯಾಗಬಾರದು.

ಸಾಕುಪ್ರಾಣಿಗೂ ಲೈಂಗಿಕ ಚಟುವಟಿಕೆಯ ಅವಶ್ಯಕತೆ ಇರುತ್ತದೆ. ಅವುಗಳಿಗೆ ತಮ್ಮದೇ ಆದ ಒಂದು ಸಮಯವಿರುತ್ತದೆ. ಆಗ ಅವು ಸಂತಾನೋತ್ಪತ್ತಿಗಾಗಿ ಕಾತುರದಿಂದಿರುತ್ತವೆ. ಅಂತಹ ಸಂದರ್ಭದಲ್ಲಿ ಗಂಡು ಹೆಣ್ಣಿನ ಮಿಲನ ಮಾಡಿಸಬೇಕು. ಇಲ್ಲದಿದ್ದರೆ ಅದು ಹೇಗ್ಹೇಗೊ ವರ್ತಿಸುತ್ತದೆ. ನೀವು ಸಾಕಿರುವುದು ಹೆಣ್ಣು ನಾಯಿಯಾಗಿದ್ದರೆ, ಅದು ಗರ್ಭ ಧರಿಸಿದ್ದರೆ ಆಗ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ನೀವು ಸಾಕಿದ ನಾಯಿಗೆ ಸುಸ್ತಾಗಿದೆ, ಅದರ ಚಟುವಟಿಕೆ, ಓಡಾಟ ಕಡಿಮೆಯಾಗಿದೆ ಎನಿಸಿದರೆ, ಅದರ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಅದಕ್ಕೆ ಸೂಕ್ತ ಪ್ರಮಾಣದಲ್ಲಿ ಆಹಾರ ದೊರಕುತ್ತದೊ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅದು ನಿಮ್ಮ ಜೊತೆಗೆ  ಸಾಕಷ್ಟು ಪ್ರಮಾಣದಲ್ಲಿ ಆಟ ಆಡಲು ಅಥವಾ ಏಕಾಂಗಿಯಾಗಿರಲು ಪ್ರಯತ್ನಿಸುತ್ತಿದೆಯೇ?

ಫಿಟ್‌ನೆಸ್‌ ಸಾಕುಪ್ರಾಣಿಗೆ ಕಾಲಕಾಲಕ್ಕೆ ಚುಚ್ಚುಮದ್ದುಗಳನ್ನು ಹಾಕಿಸುತ್ತಿರಬೇಕು. ಏಕೆಂದರೆ ಅದು ರೋಗಗಳಿಂದ ದೂರ ಇರಬೇಕು. ಸಾಕುಪ್ರಾಣಿಗೆ ಬೊಜ್ಜು ಕೂಡ ಒಂದು ಸಮಸ್ಯೆ. ಹೀಗಾಗಿ ಅದರ ಫ್ಯಾಟ್‌ ಹಾಗೂ ಬಾಡಿ ಶೇಪಿಂಗ್‌ ಬಗ್ಗೆ ಚಿಂತಿಸಬೇಕು. ಅಮೆರಿಕದಲ್ಲಿ ಈಗ ನಾಯಿಗಳಿಗೂ ಟ್ರೆಡ್‌ಮಿಲ್‌ಗಳು ಬಂದಿವೆ. ಅಮೆರಿಕದ ಅನೇಕ ಕಂಪನಿಗಳು ನಾಯಿಗಳಿಗೆಂದೇ ಮಿನಿ ಟ್ರೆಡ್‌ ಮಿಲ್‌ಗಳನ್ನು ತಯಾರಿಸಿವೆ.

ಈಜಿಪ್ಟ್ ನ ರಾಜಧಾನಿ ಕೈರೊದಲ್ಲಿ ನಾಯಿಗಳಿಗಾಗಿಯೇ ಔಟ್‌ಡೋರ್‌ ಜಿಮ್ ತೆರೆಯಲಾಗಿದೆ. ಅಲ್ಲಿಗೆ ನಾಯಿಗಳೊಂದಿಗೆ ಆಗಮಿಸುವ ಜನರು ತಮ್ಮ ಸಾಕುಪ್ರಾಣಿಗಳ ಕಸರತ್ತು ಮಾಡಿಸುತ್ತಾರೆ.

ನಿಮ್ಮ ಮನೆಯಲ್ಲಿ ನಾಯಿಯಿದ್ದು ನಿಮಗೆ ಅದರ ಆರೋಗ್ಯದ ಬಗ್ಗೆ ಚಿಂತೆಯಿದ್ದರೆ, ಈಗ ನೀವು ಹಾಯಾಗಿರಬಹುದು. ಈಗ ಸಾಕುಪ್ರಾಣಿಯ ಆರೋಗ್ಯದ ಮಾಹಿತಿ ನೀಡು ಫಿಟ್‌ನೆಸ್‌ ಟ್ರ್ಯಾಕರ್‌ಗಳು ಲಭ್ಯವಿವೆ. ಅಮೆರಿಕದ ಹ್ಯೂಮನ್‌ ಸೊಸೈಟಿ ವೆಟರ್ನರಿ ಮೆಡಿಕಲ್ ಅಸೋಸಿಯೇಶನ್ ನ ವಿಎಂಡಿ ಬೆರ್ರಿ ಕೆಲಾಗ್‌ ಹೀಗೆ ಹೇಳುತ್ತಾರೆ, “ನೀವು ಆಫೀಸ್‌ನಲ್ಲಿದ್ದರೆ, ನಿಮ್ಮ ನಾಯಿ ಬೊಜ್ಜಿಗೆ ತುತ್ತಾಗಿದೆಯೇ ಎನ್ನುವುದನ್ನು ಕಂಡುಕೊಳ್ಳಬಹುದು. ಅದರ ಹೃದಯ ಗತಿ ಎಷ್ಟಿದೆ, ಅದರ ಆಗುಹೋಗುಗಳು ಸಾಮಾನ್ಯವಾಗಿವೆಯೇ ಎಂಬುದನ್ನು ಫಿಟ್‌ನೆಸ್‌ ಟ್ರ್ಯಾಕರ್‌ ಮುಖಾಂತರ ತಿಳಿಯಬಹುದು. ಅದನ್ನು ನಾಯಿಗಳಿಗೆಂದೇ ವಿನ್ಯಾಸಗೊಳಿಸಲಾಗಿದ್ದು, ಅದನ್ನು ಸ್ಮಾರ್ಟ್‌ ಫೋನ್‌ಗಳಿಗೆ ಕನೆಕ್ಟ್ ಮಾಡಬಹುದು.”

ಒಳ್ಳೆಯ ಆರೋಗ್ಯಕ್ಕೆ ನಾಯಿಗಳಿಗೆ ಕೇವಲ ವ್ಯಾಯಾಮ ಮಾಡಿಸಿದರಷ್ಟೇ ಸಾಲದು, ಅದಕ್ಕೆ ಚೆನ್ನಾಗಿ ಸ್ನಾನ ಕೂಡ ಮಾಡಿಸಬೇಕು. ಜಪಾನ್‌ನಲ್ಲಿ ನಾಯಿಗಳಿಗೆಂದೇ ಆಟೊಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ ಲಭ್ಯವಿದೆ. ಟೊಕೀಯೋದ ಪೆಟ್‌ ವರ್ಲ್ಡ್ ನಲ್ಲಿ ವಾಷಿಂಗ್‌ ಮೆಷಿನ್‌ ಸೌಲಭ್ಯವಿದ್ದು, ಅಲ್ಲಿ ನಾಯಿಗಳಿಗೆ ಶ್ಯಾಂಪೂ ಶವರ್‌ ಬಾಥ್‌ ನೀಡಲಾಗುತ್ತದೆ. ಆ ಬಳಿಕ ಬ್ಲೊ ಡ್ರೈಯರ್ ನಿಂದ ಒಣಗಿಸುವ ವ್ಯವಸ್ಥೆ ಕೂಡ ಇದೆ. ಸಾಕುಪ್ರಾಣಿಯ ಆರೋಗ್ಯಕ್ಕಾಗಿ ಮಾಲೀಕನ ಜಾಗರೂಕತೆ ಅತ್ಯಂತ ಅವಶ್ಯ. ಹೀಗಾಗಿ ಮನೆಯ ಪ್ರತಿಯೊಬ್ಬರೂ ಅದರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.

– ಡಾ. ವಿನೋದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ