ಶಿಲ್ಪಾ ಮುಡಬಿ, ಕೊರೋನಾ ಕಾಲದಲ್ಲಿ ಜನಪದ ಹಾಡುಗಳ ಮೂಲಕ ಬಹಳ ಪ್ರಸಿದ್ಧಿಗೆ ಬಂದರು. ಅವರು ಹಾಡಿದ ಅನೇಕ ಹಾಡುಗಳು ಬಹಳಷ್ಟು ಜನರನ್ನು ಜನಪದ ಹಾಡುಗಳತ್ತ ತಿರುಗುವಂತೆ ಮಾಡಿತು. ಅವರ ಇಂಗ್ಲಿಷ್ ವಿವರಣೆಯೊಂದಿಗೆ ಹಾಡುಗಳು ಶುರುವಾಗುತ್ತಿದ್ದವು. ಹೀಗಾಗಿ ಶಿಲ್ಪಾ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದರು.
ಶಿಲ್ಬಾ ಮೂಲತಃ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಡಬಿಯವರು. ತಂದೆ ಬಾಬುರಾವ್ ಮುಡಬಿ ಜಿಲ್ಲಾಧಿಕಾರಿಯಾಗಿದ್ದರು. ಡಿಗ್ರಿ ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.
ಶಿಲ್ಪಾರಿಗೆ ಆರಂಭದಿಂದಲೇ ರಂಗ ಚಟುವಟಿಕೆ ಹಾಗೂ ಕಿರುಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇತ್ತು. ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆಯೇ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಲು ಆಸ್ಟ್ರೇಲಿಯಾಗೆ ಹೋದರು. ಅದು ಎರಡು ವರ್ಷಗಳ ಕೋರ್ಸ್. ಅಲ್ಲಿ ಬಹಳಷ್ಟು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಅವಕಾಶ ದೊರಕಿತು.
ಕೃಷಿಕರೊಂದಿಗೆ ಒಡನಾಟ
ಆಸ್ಟ್ರೇಲಿಯಾದಿಂದ ವಾಪಸ್ಸಾದ ಬಳಿಕ ದೂರದರ್ಶನದ ಚಂದನ ವಾಹಿನಿಗೆ ಕೆಲಸ ಮಾಡಲು ಅವಕಾಶ ಶಿಲ್ಪಾರಿಗೆ ದೊರಕಿತು. ಅದೂ ಕೂಡ ಪಿ.ಎಚ್. ವಿಶ್ವನಾಥ್‌ರಂಥ ಹೆಸರಾಂತ ನಿರ್ದೇಶಕರ ಜೊತೆ ಕೆಲಸ ಮಾಡುವುದು ಶಿಲ್ಪಾರಿಗೆ ಬಹಳ ಖುಷಿ ಕೊಟ್ಟಿತು. ವಿಶ್ವನಾಥ್ ಆಗ ಕೃಷಿಗೆ ಸಂಬಂಧಪಟ್ಟ ಕೆಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದರು. ಆ ಪ್ರಾಜೆಕ್ಟ್ ಗೆ ಅಸಿಸ್ಟೆಂಟ್‌ಡೈರೆಕ್ಟರ್ ಆಗಿ ನೇಮಕಗೊಂಡ ಶಿಲ್ಪಾರಿಗೆ ಹಳ್ಳಿ ಹಳ್ಳಿ ಸುತ್ತಾಡಬೇಕಿತ್ತು. ರೈತರೊಂದಿಗೆ ಹೊಲದಲ್ಲಿ ಸುತ್ತಾಡುತ್ತಾ, ಅವರೊಂದಿಗೆ ಊಟ ಮಾಡುತ್ತಾ ಕಾಲ ಕಳೆದದ್ದು ಅವರಿಗೆ ಬಹಳ ಖುಷಿ ಕೊಟ್ಟಿತು.
“ರೈತರ ಹೆಣ್ಣುಮಕ್ಕಳಿಂದ ತಲೆಗೆ ಎಣ್ಣೆ ಹಚ್ಚಿಸಿಕೊಳ್ಳುವುದು ನನಗೆ ಬಹಳ ಇಷ್ಟವಾಗುತ್ತಿತ್ತು,” ಎಂದು ಶಿಲ್ಪಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಪಿ.ಎಚ್. ವಿಶ್ವನಾಥ್ ಕಮರ್ಷಿಯಲ್ ಸಿನಿಮಾಗಳತ್ತ ತಿರುಗಿದಾಗ, ಇತ್ತ ಶಿಲ್ಪಾರಿಗೆ ಕೃಷಿ ವಿ.ವಿ.ಯಿಂದ ಕೆಲವು ಪ್ರಾಜೆಕ್ಟ್ ಗಳು ದೊರೆತವು. ಈ ಮಧ್ಯೆ ಅವರು ಕೃಷಿ ಕುರಿತಾದ ಅಧ್ಯಯನಕ್ಕೆಂದು ಇಸ್ರೇಲ್‌ಗೂ ಹೋಗಿ ಬಂದರು.
ಉಪನ್ಯಾಸದ ಆಸಕ್ತಿ
ಇಸ್ರೇಲ್ ವಾಪಸಾತಿ ಬಳಿಕ ಶಿಲ್ಪಾರಿಗೆ ಶಾರ್ಟ್ ಫಿಲ್ಮ್ ಗಳ ಬಗೆಗಿನ ಆಸಕ್ತಿ ಕಡಿಮೆ ಆಗಿ, ಟೀಚಿಂಗ್ ಬಗೆಗೆ ಒಲವು ಮೂಡಿತು. ತಾವು ಕಲಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಜರ್ನಲಿಸಂ ಡಾಕ್ಯುಮೆಂಟೇಶನ್ ಬಗ್ಗೆ ಉಪನ್ಯಾಸಕರಾಗಿ ನೇಮಕಗೊಂಡರು.
ಇದಾದ ಮೇಲೆ ಅನಿತಾ ರತ್ನಂರವರ `ಸಂವಾದ’ದಲ್ಲಿ ಮೀಡಿಯಾ ಕನ್ಸಲ್ಟೆಂಟ್ ಆಗಿ ಸೇರಿಕೊಂಡರು. ಅಲ್ಲಿಂದಾಚೆಗೆ ಪಾಂಡಿಚೆರಿಗೆ ತೆರಳಿ ಅಲ್ಲಿನ `ಇಂಡಿಯನ್ ನಾಸ್ಟ್ರಂ ಥಿಯೇಟರ್’ನ ಕುಮಾರನ್ ಲನ್‌ರವರ ಬಳಿ ರಂಗ ತರಬೇತಿ ಪಡೆದರು. `ರಂಗಶಂಕರ’ಕ್ಕೂ ಕೆಲವು ಕಾಲ ಕೆಲಸ ಮಾಡಿದರು.
ಶಿಲ್ಪಾ ಮುಡಬಿಯವರ ಕಾರ್ಯ ಕ್ಷೇತ್ರಗಳು ಅನೇಕ. ಅವರು ಯಾವ ಒಂದು ಕ್ಷೇತ್ರದಲ್ಲೂ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.
ಗ್ರಾಮ್ಯ ಕಲೆಗಳತ್ತ ಚಿತ್ತ
ನಗರದ ಥಿಯೇಟರ್ ಜೀವನದ ಬಗ್ಗೆ ಅವರಿಗೇಕೊ ಅನಾಸಕ್ತಿ ಉಂಟಾಗಿ, ಗ್ರಾಮ ಜೀವನ ಹಾಗೂ ಗ್ರಾಮ್ಯ ಕಲೆಗಳ ಬಗ್ಗೆ ಆಸಕ್ತಿ ಮೊಳೆಯಿತು. ತಮ್ಮೂರಿನ ಅಜ್ಜನೊಂದಿಗೆ ಸಂಬಂಧದ ಬೇರು ಬಹಳ ಗಟ್ಟಿಯಾಗಿತ್ತು. ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಯಲ್ಲಮ್ಮನಾಟದ ಪದಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿಲ್ಪಾರಿಗೆ, ಆ ಹಾಡುಗಳನ್ನು ಹೇಗಾದರೂ ಮಾಡಿ ದಾಖಲಿಸಬೇಕು, ಮುಂದಿನ ಪೀಳಿಗೆಗೆ ಅವನ್ನು ಉಳಿಸಿ ಬೆಳೆಸಬೇಕು ಎನ್ನುವ ಧ್ಯೇಯ ಅವರಲ್ಲಿ ಮನೆ ಮಾಡಿತು.
“ಅಜ್ಜಿಯ ಯಲ್ಲಮನಾಟ ನನಗೆ ಗ್ರಾಮ್ಯ ಕಲೆಗಳ ಬಗ್ಗೆ ಉತ್ಸಾಹ ಮೊಳೆಯುವಂತೆ ಮಾಡಿತು. ಕಲಾವಿದರು ಮತ್ತು ಪ್ರೇಕ್ಷಕರ ನಡುವಿನ ಒಡನಾಟ ಹೇಗಿರುತ್ತದೆ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಲಾವಿದರ ಪ್ರಯತ್ನ ಪ್ರೇಕ್ಷಕರ ಅನ್ಯೋನ್ಯತೆಯ ಬಗೆಗೆ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ,” ಎಂದು ಶಿಲ್ಪಾ ಹೇಳುತ್ತಾರೆ.
ಯಲ್ಲಮ್ಮನಾಟದಲ್ಲಿ ಏನೋ ಚಮತ್ಕಾರವಿದೆ ಎಂದು ಅರಿತ ಅವರು, ಅದನ್ನು ರಂಗದ ಮೇಲೆ ತರಲು ಪ್ರಯತ್ನಿಸಿದರು. ಆದರೆ, ಹಳ್ಳಿಗಳಲ್ಲಿನ ಹಾಗೆ ಇಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗದು ಎಂದು ಮನದಟ್ಟಾಗಿ ತಮ್ಮ ಟ್ರ್ಯಾಕ್‌ನ್ನು ಪುನಃ ಬದಲಿಸಿಕೊಂಡರು.
ವಾದ್ಯಕ್ಕಾಗಿ ಓಡಾಟ
ಮಂಜಮ್ಮ ಜೋಗತಿಯಿಂದ ಚೌಡಕಿ ವಾದ್ಯ ಬಾರಿಸುವುದನ್ನು ಕಲಿತು, ಹಾಡುಗಳನ್ನು ಅದೇ ಧಾಟಿಯಲ್ಲಿ ಹಾಡಲು ಕಲಿತರು. ಚೌಡಕಿ ವಾದ್ಯಕ್ಕಾಗಿ ಅವರ ಹುಡುಕಾಟ ಗಮನ ಸೆಳೆಯುವಂಥದ್ದು. ಚೌಡಕಿ ಪದ ಹಾಡುವವರು ಸವದತ್ತಿ ಹಾಗೂ ಇತರೆಡೆ ಕಂಡುಬರುತ್ತಾರೆ. ಆದರೆ ಚೌಡಕಿ ವಾದ್ಯ ಮಾತ್ರ ಅಲ್ಲೆಲ್ಲೂ ಸಿಗುವುದಿಲ್ಲ, ತಯಾರಾಗುವುದಿಲ್ಲ. ಅದು ತಯಾರಾಗುವುದು ಮಹಾರಾಷ್ಟ್ರದ ಸಾಂಗುಲಿ ಜಿಲ್ಲೆಯ ಮೀರಜ್‌ನಲ್ಲಿ. ಶಿಲ್ಪಾ ಅಲ್ಲಿಗೇ ಹೋಗಿ ಅನೇಕ ವಾದ್ಯಗಳನ್ನು ಖರೀದಿಸಿಕೊಂಡು ಬಂದರು.
ಕಬ್ಬನ್ ಪಾರ್ಕ್ನಲ್ಲಿ ಪ್ರದರ್ಶನ
ಮನೆಯಲ್ಲಿ ಚೌಡಕಿ ಬಾರಿಸುತ್ತ ಹಾಡುವುದು ಅಷ್ಟು ಖುಷಿ ಕೊಡುತ್ತಿರಲಿಲ್ಲ. ಹೀಗಾಗಿ ಶಿಲ್ಪಾ ತಮ್ಮ ಹಾಡುಗಳಿಗೆ ವೇದಿಕೆ ಕಂಡುಕೊಂಡಿದ್ದು ಕಬ್ಬನ್ ಪಾರ್ಕ್‌ನ ಕಲ್ಲು ಹಾಸಿನ ಮೇಲೆ. ಪ್ರತಿದಿನ ಮುಂಜಾನೆ ಜಾಗಿಂಗ್‌ಗೆ ಹೋಗುತ್ತಿದ್ದ ಅವರು, ಕೈಯಲ್ಲೊಂದು ದೊಡ್ಡ ಚಾಪೆ ತೆಗೆದುಕೊಂಡು ಹೋಗಿ, ಅಲ್ಲಿ ಕುಳಿತು ಜೋರು ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದರು.
ಅವರ ಗ್ರಾಮೀಣ ಸೊಗಡಿನ ಕಂಠ ಕೇಳಿಸಿಕೊಂಡು ವಾಕಿಂಗ್‌ಗೆಂದು ಬಂದರು, ಅಲ್ಲಿಯೇ ನಿಂತು ನೋಡುತ್ತಿದ್ದರು. ಅದರಲ್ಲಿ ಅವರ ಅಭಿಮಾನಿಗಳಾದರು ಅನೇಕರು. ಕೆಲವರಂತೂ ಇವರಂತೆ ಹಾಡಲು ಅಭ್ಯಾಸ ಶುರು ಮಾಡಿಕೊಂಡರು. ಅವರಿಗೆ ಶಿಲ್ಪಾ ಮೀರಜ್‌ನಿಂದ ತಂದಿದ್ದ ಚೌಡಕಿ ವಾದ್ಯವನ್ನು ಕೊಟ್ಟರು.
ಬೆಂಗಳೂರಿಗೆ ಧರಣಿ ಸತ್ಯಾಗ್ರಹ ಮಾಡಲೆಂದು ಬಂದ ಅದೆಷ್ಟೋ ಮಹಿಳೆಯರು ಇವರ ವಿಶಿಷ್ಟ ಕಂಠಕ್ಕೆ ಮರುಳಾಗಿ ಆಶೀರ್ವದಿಸಿ ಹೋಗಿದ್ದಾರೆ.
ಅದೊಂದು ಸಲ ಶಿಲ್ಪಾರವರು ಕೆಲವು ಮಹಿಳೆಯರನ್ನು ಮಾತಾಡಿಸಿದಾಗ ಅವರು ಉಪವಾಸ ಇರುವುದು ತಿಳಿಯಿತು. ಅವರಿಗೆ ಉಪಾಹಾರದ ವ್ಯವಸ್ಥೆ ಮಾಡಬೇಕೆಂದು ಶಿಲ್ಪಾ ವಿಚಾರ ಮಾಡುತ್ತಿದ್ದಾಗ, ಆ ಮಹಿಳೆಯರು ನಮಗೆಲ್ಲ ಇದು ರೂಢಿ, ನೀವೇನೂ ಕಷ್ಟ ತೆಗೆದುಕೊಳ್ಳಬೇಡಿ. ನೀವು ಹಾಡಿದ ಪದಗಳು ನಮಗೆ ಹೊಟ್ಟೆ ತುಂಬಿಸಿವೆ. ನೀವು ಖುಷಿಯಿಂದ ಇರಬೇಕು ಎಂದು ಹೇಳಿ ಚೌಡಕಿಯೊಳಗೆ ನೋಟುಗಳನ್ನಿಟ್ಟು ಹೊರಟುಹೋದರು.
“ಆ ಒಂದು ಘಟನೆಯೇ ತಾನು ಕಲಾವಿದರಿಗಾಗಿ ಏನನ್ನಾದರೂ ಮಾಡಬೇಕೆಂಬ ಛಲ ಮೂಡಿಸಿತು,” ಎಂದು ಶಿಲ್ಪಾ ಹೇಳುತ್ತಾರೆ.
ವಿಶಿಷ್ಟ ಕಾರ್ಯಾಗಾರ
ಮಂಜಮ್ಮ ಜೋಗತಿಯವರು ಹಾಡುಗಳ ಬಗ್ಗೆ ಶಿಲ್ಪಾ ಬಹಳ ಪ್ರಭಾವಿತರಾಗಿದ್ದರು. ತಮ್ಮ ಹಾಗೆಯೇ 20 ಸಮಾನ ಮನಸ್ಕರನ್ನು ಸೇರಿಸಿ, ಮಂಜಮ್ಮರಲ್ಲಿರುವ ಕಲೆಯನ್ನು ತಾವೆಲ್ಲ ಕರಗತ ಮಾಡಿಕೊಳ್ಳಬೇಕೆಂಬ ಅಪೇಕ್ಷೆಯಿಂದ ದೇವರಾಯನ ದುರ್ಗದಲ್ಲಿ ಮೂರು ದಿನಗಳ ಒಂದು ವಿಶಿಷ್ಟ ಕಾರ್ಯಾಗಾರ ಏರ್ಪಡಿಸಿದ್ದರು.
ಮಂಜಮ್ಮರವರ ಜೀವನಶೈಲಿಗೆ ತಕ್ಕಂತೆಯೇ ಒಗ್ಗಿಕೊಳ್ಳಬೇಕು ಎನ್ನುವುದು ಆ ಮೂರು ದಿನಗಳ ಕಾರ್ಯಾಗಾರದ ವಿಶಿಷ್ಟ ಥೀಮ್ ಆಗಿತ್ತು. ಸುತ್ತಲಿನ ಗ್ರಾಮಗಳ ಬಗ್ಗೆ ಕಲಾಸಕ್ತರು ಅದರ ಅನುಭವ ಪಡೆದುಕೊಂಡು ಧನ್ಯತೆಯ ಭಾವ ಅನುಭವಿಸಿದರು.
ಪಾರ್ಕ್ನಿಂದ ಕೆರೆಯ ಏರಿವರೆಗೂ
ಚೌಡಕಿಯ ತಂತಿ ಮೀಟುತ್ತ ಶಿಲ್ಪಾ ಜೋರು ಧ್ವನಿಯಲ್ಲಿ ಹಾಡು ಹಾಡು ಬಹಿರಂಗ ಪ್ರದರ್ಶನಗಳು ಕೇವಲ ಪಾರ್ಕ್‌ನಲ್ಲಷ್ಟೇ ಅಲ್ಲ, ಹಳ್ಳಿಗಳ ಬಯಲು ಪ್ರದೇಶ, ಕೆರೆಯ ಏರಿ ಮೇಲೆ ಹೀಗೆ ಎಲ್ಲೆಲ್ಲೂ ನಡೆದವು. ತಮಿಳುನಾಡಿನ ಕೊತ್ತಗಿರಿ, ಬಡಗ, ಹೈದರಾಬಾದ್, ಕೊಯಂಬತ್ತೂರು, ಮುಂಬೈ ಹೀಗೆ ಅನೇಕ ನಗರಗಳಲ್ಲಿ ಗ್ರಾಮ ಸೊಗಡನ್ನು ಬೀರಿದರು.
“ಬೇರೆ ರಾಜ್ಯಗಳ ಕನ್ನಡೇತರರು ಕನ್ನಡದ ಹಾಡುಗಳನ್ನು ಅದು ಹೇಗೆ ಆಸ್ವಾದಿಸುತ್ತಾರೆ?” ಎಂಬ ಪ್ರಶ್ನೆಗೆ
“ಜನಪದ ಹಾಡುಗಳಿಗೆ ಅನೇಕ ಮುಖಗಳಿರುತ್ತವೆ. ಆ ಮುಖಗಳನ್ನು ಅರಿತು, ಅರಗಿಸಿಕೊಳ್ಳುವ ತುಮುಲ ಬೇರೆ ರಾಜ್ಯಗಳ ಕಲಾಸಕ್ತರಿಗೆ ಇರುತ್ತದೆ,” ಎನ್ನುವುದು ಶಿಲ್ಪಾರ ಅಭಿಪ್ರಾಯ.
ಯೂಟ್ಯೂಬ್ ಜನಪ್ರಿಯತೆ
2020ರ ಫೆಬ್ರವರಿ-ಮಾರ್ಚ್‌ವರೆಗೆ ಶಿಲ್ಪಾ ಹಾಗೂ ತಂಡದವರು ಕಬ್ಬನ್ ಪಾರ್ಕ್‌ನ ಕಲ್ಲುಹಾಸುಗಳ ಮೇಲೆ ನಿಯಮಿತವಾಗಿ ಪ್ರದರ್ಶನಗಳನ್ನು ನೀಡಿದರು. ಕೊರೋನಾ ಬಂದ ಬಳಿಕ ಒಡನಾಟದಲ್ಲಿದ್ದವರು ದೂರಾದರು. ಆಗ ಯೂಟ್ಯೂಬ್ ಚಾನೆಲ್ ಮೂಲಕ ಶಿಲ್ಪಾ ಇಂಗ್ಲಿಷ್ ವಿವರಣೆಯ ಜೊತೆಗೆ ಕನ್ನಡ ಜನಪದ ಹಾಡುಗಳನ್ನು ಹಾಡಿದರು. `ಎಣ್ಣೆ ಹಚ್ಚಲು ಬನ್ನಿರೀ,’ `ಬಾಗಿಲ ಮುಂದ ರಂಗೋಲಿ,’ `ಇಬ್ಬರಕ್ಕ ತಂಗ್ಯೇರ ಕೂಡಿ….’ ಈ ಮುಂತಾದ ಹಾಡುಗಳು ಅವರನ್ನು ಜನಪ್ರಿಯರಾಗಿಸಿದವು.
ಕಲಬುರ್ಗಿಯಲ್ಲಿ ಜನಪದ ಕಲರವ ಕಲ್ಯಾಣ
ಕರ್ನಾಟಕದ ಕೇಂದ್ರ ಸ್ಥಳ ಕಲಬುರ್ಗಿಯಲ್ಲಿ ಎರಡೆಕರೆ ಜಾಗದಲ್ಲಿ ಜನಪದ ಕಲೆಗಳ ಬೇರು ರಕ್ಷಿಸುವ ಆಶ್ರಯ ತಾಣ `ಪೇಕ್‌ಸ್ಪೇಸ್’ ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಶಿಲ್ಪಾ, ಪತಿ ಆದಿತ್ಯ ಕೊತ್ತಕೋಟಾ ಜೊತೆಗೆ ಓಡಾಡುತ್ತಿದ್ದಾರೆ. ಇದರ ಜೊತೆಗೆ ಸೂರು ಇಲ್ಲದೆ ಸಂಕಷ್ಟದಲ್ಲಿರುವ ಮಂಜಮ್ಮ ಅವರಿಗೆ ಒಂದು ಮನೆ ಕಟ್ಟಿಸಿಕೊಡಲು ಹಣ ಸಂಗ್ರಹಿಸುವ ಕಾರ್ಯದಲ್ಲಿಯೂ ನಿರತರಾಗಿದ್ದಾರೆ. ಅಷ್ಟೇ ಅಲ್ಲ, ಜನಪದ ಅಕಾಡೆಮಿಗೆ (ಬೀದರ್ ಜಿಲ್ಲೆಯ ಪ್ರತಿನಿಧಿಯಾಗಿ) ಸದಸ್ಯೆಯಾಗಿ ನೇಮಕಗೊಂಡಿದ್ದು, ಜನಪದ ಕಲೆ ಕಲಾವಿದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅನುಕೂಲ ಕಲ್ಪಿಸಿದೆ. ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ.
ನಿರಂತರ ಸಂಚಾರ
ಪತಿ ಆದಿತ್ಯ ಕೊತ್ತಕೋಟಾರವರಿಗೂ ಪ್ರಯಾಣವೆಂದರೆ ಬಲು ಖುಷಿ. 1000-2000 ಕಿ.ಮೀ. ಪ್ರಯಾಣವನ್ನು ಇಬ್ಬರೂ ಸೇರಿ ಸಹಜವಾಗಿ ಮಾಡುತ್ತಿರುತ್ತಾರೆ. ರಾತ್ರಿ ಸಂಚಾರದಲ್ಲಿ ಯಾವುದಾದರೊಂದು ಊರಿನಿಂದ ಯಾವುದೇ ವಾದ್ಯ ನುಡಿಸುವ, ಜನಪದ ಹಾಡಿನ ಸದ್ದು ಕೇಳಿದರೆ ಸಾಕು, ಅವರ ಕಾರು ಅತ್ತ ಕಡೆಯೇ ತಿರುಗಿ ಬಿಡುತ್ತದೆ. ಕಲಾವಿದರು, ವಾದ್ಯಗಳ ಬಗೆಗಿನ ಅವರ ಆಸಕ್ತಿ ಅದೆಷ್ಟು ಉನ್ನತವಾಗಿದೆ ಎನ್ನುವುದನ್ನು ಇದು ತೋರಿಸಿಕೊಡುತ್ತದೆ.
ಕಲಬುರ್ಗಿಯಲ್ಲಿ ಸ್ಥಾಪನೆಗೊಳ್ಳಲಿರುವ ಕಲಾ ಕುಟೀರದಲ್ಲಿ ಚೌಡಿಕೆ ಸೇರಿದಂತೆ ಅಪರೂಪದ ವಾದ್ಯಗಳನ್ನು ಸಿದ್ಧಪಡಿಸುವ ಯೋಚನಾ ಯೋಜನೆಯೂ ಶಿಲ್ಪಾ ಅವರಿಗಿದೆ.
– ಅಶೋಕ ಚಿಕ್ಕಪರಪ್ಪ