ಶಿಲ್ಪಾ ಮುಡಬಿ, ಕೊರೋನಾ ಕಾಲದಲ್ಲಿ ಜನಪದ ಹಾಡುಗಳ ಮೂಲಕ ಬಹಳ ಪ್ರಸಿದ್ಧಿಗೆ ಬಂದರು. ಅವರು ಹಾಡಿದ ಅನೇಕ ಹಾಡುಗಳು ಬಹಳಷ್ಟು ಜನರನ್ನು ಜನಪದ ಹಾಡುಗಳತ್ತ ತಿರುಗುವಂತೆ ಮಾಡಿತು. ಅವರ ಇಂಗ್ಲಿಷ್ ವಿವರಣೆಯೊಂದಿಗೆ ಹಾಡುಗಳು ಶುರುವಾಗುತ್ತಿದ್ದವು. ಹೀಗಾಗಿ ಶಿಲ್ಪಾ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದರು.
ಶಿಲ್ಬಾ ಮೂಲತಃ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಡಬಿಯವರು. ತಂದೆ ಬಾಬುರಾವ್ ಮುಡಬಿ ಜಿಲ್ಲಾಧಿಕಾರಿಯಾಗಿದ್ದರು. ಡಿಗ್ರಿ ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.
ಶಿಲ್ಪಾರಿಗೆ ಆರಂಭದಿಂದಲೇ ರಂಗ ಚಟುವಟಿಕೆ ಹಾಗೂ ಕಿರುಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇತ್ತು. ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆಯೇ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಲು ಆಸ್ಟ್ರೇಲಿಯಾಗೆ ಹೋದರು. ಅದು ಎರಡು ವರ್ಷಗಳ ಕೋರ್ಸ್. ಅಲ್ಲಿ ಬಹಳಷ್ಟು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಅವಕಾಶ ದೊರಕಿತು.
ಕೃಷಿಕರೊಂದಿಗೆ ಒಡನಾಟ
ಆಸ್ಟ್ರೇಲಿಯಾದಿಂದ ವಾಪಸ್ಸಾದ ಬಳಿಕ ದೂರದರ್ಶನದ ಚಂದನ ವಾಹಿನಿಗೆ ಕೆಲಸ ಮಾಡಲು ಅವಕಾಶ ಶಿಲ್ಪಾರಿಗೆ ದೊರಕಿತು. ಅದೂ ಕೂಡ ಪಿ.ಎಚ್. ವಿಶ್ವನಾಥ್‌ರಂಥ ಹೆಸರಾಂತ ನಿರ್ದೇಶಕರ ಜೊತೆ ಕೆಲಸ ಮಾಡುವುದು ಶಿಲ್ಪಾರಿಗೆ ಬಹಳ ಖುಷಿ ಕೊಟ್ಟಿತು. ವಿಶ್ವನಾಥ್ ಆಗ ಕೃಷಿಗೆ ಸಂಬಂಧಪಟ್ಟ ಕೆಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದರು. ಆ ಪ್ರಾಜೆಕ್ಟ್ ಗೆ ಅಸಿಸ್ಟೆಂಟ್‌ಡೈರೆಕ್ಟರ್ ಆಗಿ ನೇಮಕಗೊಂಡ ಶಿಲ್ಪಾರಿಗೆ ಹಳ್ಳಿ ಹಳ್ಳಿ ಸುತ್ತಾಡಬೇಕಿತ್ತು. ರೈತರೊಂದಿಗೆ ಹೊಲದಲ್ಲಿ ಸುತ್ತಾಡುತ್ತಾ, ಅವರೊಂದಿಗೆ ಊಟ ಮಾಡುತ್ತಾ ಕಾಲ ಕಳೆದದ್ದು ಅವರಿಗೆ ಬಹಳ ಖುಷಿ ಕೊಟ್ಟಿತು.
``ರೈತರ ಹೆಣ್ಣುಮಕ್ಕಳಿಂದ ತಲೆಗೆ ಎಣ್ಣೆ ಹಚ್ಚಿಸಿಕೊಳ್ಳುವುದು ನನಗೆ ಬಹಳ ಇಷ್ಟವಾಗುತ್ತಿತ್ತು,'' ಎಂದು ಶಿಲ್ಪಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಪಿ.ಎಚ್. ವಿಶ್ವನಾಥ್ ಕಮರ್ಷಿಯಲ್ ಸಿನಿಮಾಗಳತ್ತ ತಿರುಗಿದಾಗ, ಇತ್ತ ಶಿಲ್ಪಾರಿಗೆ ಕೃಷಿ ವಿ.ವಿ.ಯಿಂದ ಕೆಲವು ಪ್ರಾಜೆಕ್ಟ್ ಗಳು ದೊರೆತವು. ಈ ಮಧ್ಯೆ ಅವರು ಕೃಷಿ ಕುರಿತಾದ ಅಧ್ಯಯನಕ್ಕೆಂದು ಇಸ್ರೇಲ್‌ಗೂ ಹೋಗಿ ಬಂದರು.
ಉಪನ್ಯಾಸದ ಆಸಕ್ತಿ
ಇಸ್ರೇಲ್ ವಾಪಸಾತಿ ಬಳಿಕ ಶಿಲ್ಪಾರಿಗೆ ಶಾರ್ಟ್ ಫಿಲ್ಮ್ ಗಳ ಬಗೆಗಿನ ಆಸಕ್ತಿ ಕಡಿಮೆ ಆಗಿ, ಟೀಚಿಂಗ್ ಬಗೆಗೆ ಒಲವು ಮೂಡಿತು. ತಾವು ಕಲಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಜರ್ನಲಿಸಂ ಡಾಕ್ಯುಮೆಂಟೇಶನ್ ಬಗ್ಗೆ ಉಪನ್ಯಾಸಕರಾಗಿ ನೇಮಕಗೊಂಡರು.
ಇದಾದ ಮೇಲೆ ಅನಿತಾ ರತ್ನಂರವರ `ಸಂವಾದ'ದಲ್ಲಿ ಮೀಡಿಯಾ ಕನ್ಸಲ್ಟೆಂಟ್ ಆಗಿ ಸೇರಿಕೊಂಡರು. ಅಲ್ಲಿಂದಾಚೆಗೆ ಪಾಂಡಿಚೆರಿಗೆ ತೆರಳಿ ಅಲ್ಲಿನ `ಇಂಡಿಯನ್ ನಾಸ್ಟ್ರಂ ಥಿಯೇಟರ್'ನ ಕುಮಾರನ್ ಲನ್‌ರವರ ಬಳಿ ರಂಗ ತರಬೇತಿ ಪಡೆದರು. `ರಂಗಶಂಕರ'ಕ್ಕೂ ಕೆಲವು ಕಾಲ ಕೆಲಸ ಮಾಡಿದರು.
ಶಿಲ್ಪಾ ಮುಡಬಿಯವರ ಕಾರ್ಯ ಕ್ಷೇತ್ರಗಳು ಅನೇಕ. ಅವರು ಯಾವ ಒಂದು ಕ್ಷೇತ್ರದಲ್ಲೂ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.
ಗ್ರಾಮ್ಯ ಕಲೆಗಳತ್ತ ಚಿತ್ತ
ನಗರದ ಥಿಯೇಟರ್ ಜೀವನದ ಬಗ್ಗೆ ಅವರಿಗೇಕೊ ಅನಾಸಕ್ತಿ ಉಂಟಾಗಿ, ಗ್ರಾಮ ಜೀವನ ಹಾಗೂ ಗ್ರಾಮ್ಯ ಕಲೆಗಳ ಬಗ್ಗೆ ಆಸಕ್ತಿ ಮೊಳೆಯಿತು. ತಮ್ಮೂರಿನ ಅಜ್ಜನೊಂದಿಗೆ ಸಂಬಂಧದ ಬೇರು ಬಹಳ ಗಟ್ಟಿಯಾಗಿತ್ತು. ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಯಲ್ಲಮ್ಮನಾಟದ ಪದಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿಲ್ಪಾರಿಗೆ, ಆ ಹಾಡುಗಳನ್ನು ಹೇಗಾದರೂ ಮಾಡಿ ದಾಖಲಿಸಬೇಕು, ಮುಂದಿನ ಪೀಳಿಗೆಗೆ ಅವನ್ನು ಉಳಿಸಿ ಬೆಳೆಸಬೇಕು ಎನ್ನುವ ಧ್ಯೇಯ ಅವರಲ್ಲಿ ಮನೆ ಮಾಡಿತು.