ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ಬುದ್ಧಿವಂತ ಖ್ಯಾತಿಯ ಉಪೇಂದ್ರ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಭಾರ್ಗವ’. ನಾಗಣ್ಣ ನಿರ್ದೇಶನದ ಸಿನಿಮಾದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ಈ ಚಿತ್ರದ ಟೀಸರ್ ಬಿಡುಗಡೆಗೊಳ್ಳಲು ಮುಹೂರ್ತ ಫಿಕ್ಸ್ ಆಗಿದೆ.
ಇದೇ ಗುರುವಾರ, ಸೆಪ್ಟೆಂಬರ್ 18ರಂದು ದಿ.ನಟ ವಿಷ್ಣುವರ್ಧನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನ. ಹುಟ್ಟುಹಬ್ಬದ ಆಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಂದು ‘ಭಾರ್ಗವ’ ಚಿತ್ರತಂಡದಿಂದ ವಿಶೇಷ ಉಡುಗೊರೆ ಸಿಗಲಿದೆ. ಈ ಬಗ್ಗೆ ಆನಂದ್ ಆಡಿಯೋ ತನ್ನ ಅಫೀಶಿಯಲ್ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಸದ್ಯ ಅನಾವರಣಗೊಂಡಿರುವ ಪೋಸ್ಟರ್ನಲ್ಲಿ ಉಪೇಂದ್ರ ಜೊತೆಗೆ ವಿಷ್ಣುವರ್ಧನ್ ಫೋಟೋ ಇದ್ದು, ಅಭಿಮಾನಿಗಳ ಕುತೂಹಲ ಕೆರಳಿದೆ. ಪೋಸ್ಟ್ ಶೇರ್ ಮಾಡಿದ ಆನಂದ್ ಆಡಿಯೋ, ಇಬ್ಬರು ಲೆಜೆಂಡರಿ ನಟರ ಹುಟ್ಟುಹಬ್ಬದ ಆಚರಣೆಗೆ ಸಿದ್ಧರಾಗಿ. ಭಾರ್ಗವ ಬರ್ತ್ಡೇ ಟೀಸರ್ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಪೋಸ್ಟರ್ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಾದ ಉಪೇಂದ್ರ ಹಾಗೂ ಶ್ರುತಿ – ಮೂವರ ಜನ್ಮದಿನ ಸೆಪ್ಟೆಂಬರ್ 18ರಂದು ಎಂಬುದು ಅಭಿಮಾನಿಗಳಿಗೆ ತಿಳಿದೇ ಇದೆ.
ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಭಾರ್ಗವ‌ ಸಿನಿಮಾ ಸದ್ದಿಲ್ಲದೇ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಆಗಿತ್ತು. ಗುರುವಾರ, ಬರ್ತ್ಡೇ ಟೀಸರ್ ಅನಾವರಣಗೊಳ್ಳಲಿದೆ.]
ನಾಗಣ್ಣ ನಿರ್ದೇಶನದಲ್ಲಿ ಉಪೇಂದ್ರ ಅವರು ಈಗಾಗಲೇ 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 3 ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಹಾಗಾಗಿ, ಈ ಇಬ್ಬರ ಕಾಂಬಿನೇಷನ್ ಕನ್ನಡಿಗರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಇನ್ನೂ, ಕಿರುತೆರೆ ನಟಿ ಅಂಕಿತಾ ಅಮರ್ ಅವರು ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿದ್ದಾರೆ. ಟೈಟಲ್ನೊಂದಿಗೆ ವೈಲೆಂಟ್ ಫ್ಯಾಮಿಲಿ ಮ್ಯಾನ್ ಎನ್ನುವ ಟ್ಯಾಗ್‌ಲೈನ್ ಇದ್ದು, ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿ ಮೂಡಿಬರುವ ಭರವಸೆ ಇದೆ.
ಉಪೇಂದ್ರ ಹಾಗೂ ಅಂಕಿತಾ ಅಮರ್ ಜೊತೆಗೆ ರಂಗಾಯಣ ರಘು, ಅವಿನಾಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಕೋಟಿಗೊಬ್ಬ 2 ಹಾಗೂ ವಿಷ್ಣುವರ್ಧನ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ರಾಜ ರತ್ನಂ ಅವರು ಈ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
ಉಪ್ಪಿ ಹಾಗೂ ನಾಗಣ್ಣ ಈ ಹಿಂದೆ ಮಾಡಿದ್ದ ಗೋಕರ್ಣ, ಗೌರಮ್ಮ, ಕುಟುಂಬ ಹಾಗೂ ದುಬೈ ಬಾಬು ಎಲ್ಲವೂ ರೀಮೆಕ್ ಸಿನಿಮಾಗಳಾಗಿತ್ತು. ಆದರೆ, ಈ ಬಾರಿ ತಮ್ಮದೇ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷವೇ ಕನ್ನಡದಲ್ಲಿ ಮಾತ್ರ ಈ ಚಿತ್ರ ಬಿಡುಗಡೆ ಆಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ