ನಾನು 28 ವರ್ಷದ ಗೃಹಿಣಿ. ಮದುವೆಯಾಗಿ 9 ವರ್ಷಗಳಾದವು. ನಾವಿಬ್ಬರೂ ಸೇರಿ ತಿಂಗಳಿಗೆ 1 ಲಕ್ಷ ರೂ. ಗಳಿಗೂ ಹೆಚ್ಚು ಗಳಿಸುತ್ತೇವೆ. ಆದರೆ ಒಂದು ರೂಪಾಯಿ ಕೂಡ ಉಳಿತಾಯ ಮಾಡಲು ಆಗುತ್ತಿಲ್ಲ. ನಾನು ಈ ಕುರಿತಂತೆ ಪತಿಗೆ ಸಾಕಷ್ಟು ತಿಳಿಸಿ ಹೇಳಿದೆ. ಆದರೆ ಅವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಕೊನೆಗೊಮ್ಮೆ ನಾನು ಅಮ್ಮನ ಬುದ್ಧಿಮಾತಿಗೆ ಓಗೊಟ್ಟು 2009ರಲ್ಲಿ ಗುಟ್ಟಾಗಿಯೇ ಒಂದು ಉಳಿತಾಯ ಖಾತೆ ತೆರೆದು ಅದರಲ್ಲಿ ಹಣ ಉಳಿತಾಯ ಮಾಡುತ್ತಿರುವೆ. ಅದೇ ಮುಂದೆ ಇಬ್ಬರು ಮಕ್ಕಳಿಗೆ ಒಳ್ಳೆಯ ಆಸರೆಯಾಗುತ್ತದೆ ಎಂದು ಮನಸ್ಸಿಗೆ ಸಮಾಧಾನವಾಗುತ್ತಿದೆ. ಆದರೆ ಗಂಡನಿಗೆ ಈ ವಿಷಯ ಗೊತ್ತಾದರೆ ಏನು ಗತಿ ಎಂದು ಭಯ ಕೂಡ ಆಗುತ್ತಿದೆ. ಆ ಖಾತೆಗೆ ಸಂಬಂಧಪಟ್ಟ ಯಾವುದೇ ಪತ್ರಗಳನ್ನು ಮನೆಗೆ ಕಳಿಸಬಾರದೆಂದು ನಾನು ಬ್ಯಾಂಕಿಗೆ ಲಿಖಿತವಾಗಿ ಮನವಿ ಮಾಡಿಕೊಂಡಿರುವೆ.
ಮುಂದೆಂದಾದರೂ ಅವರಿಗೆ ಈ ವಿಷಯ ಗೊತ್ತಾದರೆ ನಾನು ಏನು ತಾನೇ ಉತ್ತರ ಕೊಡಬಲ್ಲೆ. ಏಕೆಂದರೆ ಅವರು ನನ್ನಿಂದ ಯಾವುದೇ ವಿಷಯ ಬಚ್ಚಿಡುವುದಿಲ್ಲ. ನಾನು ಮಾತ್ರ ಆ ಅಕೌಂಟ್‌ಗೆ ಸಂಬಂಧಪಟ್ಟ ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಚ್ಚಿಡುತ್ತಿದ್ದೇನೆ. ಇದೆಲ್ಲ ಮಾಡುವುದು ನನಗೇಕೊ ಸರಿ ಕಾಣುತ್ತಿಲ್ಲ. ಒಂದುವೇಳೆ ಹೀಗೆ ಮಾಡದೇ ಇದ್ದರೆ ಹಣ ಉಳಿತಾಯ ಆಗುವುದೇ ಇಲ್ಲ. ದಯವಿಟ್ಟು ನಾನೇನು ಮಾಡಬೇಕು ತಿಳಿಸಿ.
ನಿಮ್ಮ ಪತಿಗೆ ಈ ವಿಷಯ ಗೊತ್ತಾದಾಗ ಅವರಿಗೆ ಸ್ವಲ್ಪ ಬೇಸರವಾಗಬಹುದು. ಆದರೂ ನೀವು ಈ ಕುರಿತಂತೆ ನಿಶ್ಚಿಂತರಾಗಿ. ಏಕೆಂದರೆ ನೀವು ಬಹಳ ತಿಳಿವಳಿಕೆಯ ಕೆಲಸ ಮಾಡಿರುವಿರಿ. ಉಳಿತಾಯ ಮಾಡಿ ನಾವು ನಮ್ಮ ಭವಿಷ್ಯವನ್ನು ಭದ್ರಗೊಳಿಸುತ್ತೇವೆ. ಯಾರ ಜೀವನದಲ್ಲಾದರೂ, ಯಾವಾಗ ಬೇಕಾದಾಗ ಏನು ಬೇಕಾದರೂ ಸಂಭವಿಸಬಹುದು. ಇಂತಹ ಸಮಯದಲ್ಲಿ ನಾವು ಉಳಿತಾಯ ಮಾಡಿದ ಹಣವೇ ನೆರವಿಗೆ ಬರುತ್ತದೆ.
ಬಚ್ಚಿಡುವ ಸಂಗತಿಯ ಬಗ್ಗೆ ಹೇಳಬೇಕೆಂದರೆ, ಒಳ್ಳೆಯ ಕೆಲಸಕ್ಕಾಗಿ ಬಚ್ಚಿಡುವುದು ಕೆಟ್ಟದ್ದೇನಲ್ಲ. ಒಳ್ಳೆಯದಕ್ಕಾಗಿ ಬಚ್ಚಿಟ್ಟ ಸತ್ಯ ಕೂಡ ಕಹಿ ಎನಿಸುವುದಿಲ್ಲ. ಇದನ್ನು ನಿಮ್ಮ ಪತಿ ಕೂಡ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ನೀವು ಉಳಿತಾಯ ಮಾಡಿದ ಈ ಹಣದ ಮೇಲೆ ತೆರಿಗೆ ಕೂಡ ಹಾಕಲಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಹಾಗೂ ಮಹಿಳೆಯರಿಗೆ ಉಳಿತಾಯ ಮಾಡಲು ಪ್ರೋತ್ಸಾಹ ದೊರೆಯಬೇಕು. ಈ ಕುರಿತಂತೆ ಹೆಚ್ಚಿನ ವಿಚಾರಣೆ ಮಾಡಬಾರದು. ಅದನ್ನು `ಸ್ತ್ರೀ ಧನ’ವೆಂದೇ ಪರಿಗಣಿಸಬೇಕು.
ಓದುಗರಿಗೆ ನಾವು ಕೊಡುವ ಸಲಹೆಯೆಂದರೆ, ನೀವು ಕೂಡ ನಿಮ್ಮ ಪತಿ ಅಥವಾ ಮನೆಯವರಿಗೆ ಗೊತ್ತಾಗದಂತೆ ಸಾಧ್ಯವಾದಷ್ಟು ಉಳಿತಾಯ ಮಾಡಿ. ಅದೇ ನಿಮಗೆ ಮುಂದೆ ತುರ್ತುನಿಧಿಯಾಗುತ್ತದೆ.