ವಿಕಿ ಡೋನರ್‌’ ಸಿನಿಮಾದಿಂದ ಖ್ಯಾತರಾದ ನಟಿ ಯಾಮಿ ಗೌತಮ್ ಟಿ.ವಿ ಹಾಗೂ ಸಿನಿಮಾ ನಟಿ. ಯಾಮಿ ಮೊದಲು ಐಎಎಸ್‌ ಆಫೀಸರ್‌ ಆಗಲು ಬಯಸಿದ್ದರು, ಆಕೆ ಅಷ್ಟು ಬುದ್ಧಿವಂತೆ. ಆದರೆ ಆಮೇಲೆ ಆಕೆ ನಟನೆಯನ್ನೇ ತಮ್ಮ ಕೆರಿಯರ್‌ಆಗಿಸಿಕೊಂಡರು.

ಹಿಮಾಚಲ ಪ್ರದೇಶದ ಯಾಮಿ ದೂರದರ್ಶನದ `ಚಾಂದ್‌ ಕೆ ಪಾರ್‌ ಚಲೋ’ ಧಾರಾವಾಹಿಯಿಂದ ತಮ್ಮ ಕೆರಿಯರ್ ಆರಂಭಿಸಿದರು. ಇದಾದ ನಂತರ ಆಕೆ ಹಲವು ಕಂಪನಿಗಳಿಗೆ ಬ್ರ್ಯಾಂಡ್‌ ಅಂಬಾಸಡರ್‌ ಹಾಗೂ ಬ್ರ್ಯಾಂಡ್‌ ಫೇಸ್‌ ಆಗಿದ್ದರು. ಹೇರ್‌ ಕೇರ್‌ ಬ್ರ್ಯಾಂಡ್‌ ಪ್ಯಾಂಟೀನ್‌ನ ಹೊಸ ಲಾಂಚ್‌ ಸಂದರ್ಭದಲ್ಲಿ ಅಚ್ಚ ಬಿಳಿ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.

ನೀವು ಯಾವುದೇ ಬ್ರ್ಯಾಂಡ್‌ಗೆ ಕೈ ಜೋಡಿಸುವ ಮುನ್ನ ಯಾವ ಯಾವ ವಿಷಯಗಳತ್ತ ಗಮನಹರಿಸುತ್ತೀರಿ? ಎಂಬ ಪ್ರಶ್ನೆಗೆ ಯಾಮಿ ಮುಗುಳ್ನಗುತ್ತಾ ಉತ್ತರಿಸುತ್ತಾರೆ, “ಯಾವುದೇ ಬ್ರ್ಯಾಂಡಿಗೆ ಸಪೋರ್ಟ್‌ ಮಾಡುವ ಮೊದಲು ಆ ಪ್ರಾಡಕ್ಟ್ ಎಷ್ಟು ಮಾತ್ರ ಚೆನ್ನಾಗಿ ಕೆಲಸ ಮಾಡುತ್ತದೆ, ಅವರ ಹೇಳಿಕೆಗಳು ಎಷ್ಟು ನಿಜ ಎಂಬುದನ್ನು ಪರಿಶೀಲಿಸುತ್ತೇನೆ. ಅವುಗಳ ಗುಣಮಟ್ಟವನ್ನು ಸ್ವತಃ ನಾನೇ ಪರೀಕ್ಷಿಸುತ್ತೇನೆ. ನನಗೆ ಸಂಪೂರ್ಣ ಸಮಾಧಾನ ಎನಿಸುವುದನ್ನು ಮಾತ್ರವೇ ಒಪ್ಪಿಕೊಳ್ತೀನಿ. ಎಷ್ಟೋ ಸಲ ಹೊಸ ಹೊಸ ಬ್ರ್ಯಾಂಡ್‌ಗಳು ನನ್ನನ್ನು ಹುಡುಕಿಕೊಂಡು ಬರುತ್ತವೆ, ಅವರಿಂದ ಸಮಯ ಪಡೆದು ಆ ಪ್ರಾಡಕ್ಟ್ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸುತ್ತೇನೆ.”

ತಮ್ಮ ಫಿಟ್‌ನೆಸ್‌, ಮೇಕಪ್‌ ಹಾಗೂ ಹೇರ್‌ ಕೇರ್‌ ಬಗ್ಗೆ ಯಾಮಿ ಹೇಳುತ್ತಾರೆ, “ಎಲ್ಲಕ್ಕೂ ಕಷ್ಟಕರವಾದುದು ಎಂದರೆ ಕೇಶ ಸಂರಕ್ಷಣೆ. ನಮ್ಮಂಥ ಮಾಡೆಲ್ಸ್ ಬೇಸಿಗೆ, ಮಳೆ, ಥಂಡಿಯ ವಾತಾವರಣದಲ್ಲಿ ಶೂಟಿಂಗ್‌ ನಡೆಸಬೇಕಾಗುತ್ತೆ. ಎಷ್ಟೋ ತರಹದ ಹೇರ್‌ ಸ್ಟೈಲ್ ‌ಹಾಗೂ ಬಣ್ಣಗಳ ಪ್ರಯೋಗವನ್ನು ನಮ್ಮ ಕೂದಲಿನ ಮೇಲೆ ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಕೂದಲಿನ ಕೆರೋಟಿನ್‌ ಹಾಗೂ ಪ್ರೋಟೀನ್‌ ಅಂಶಗಳು ನಾಶವಾಗುತ್ತವೆ. ಎಷ್ಟೋ ಸಲ ಗಡಸು ನೀರು ಸಹ ಕೂದಲಿಗೆ ಹಾನಿ ತರುತ್ತದೆ. ಹೀಗಿರುವಾಗ ಪ್ರೋಟೀನ್‌ ಹಾಗೂ ಕೆರೋಟಿನ್‌ಯುಕ್ತ ಶ್ಯಾಂಪೂ ಕಂಡೀಶನರ್‌ ಕೂದಲಿಗೆ ಒಳ್ಳೆಯದು ಎನಿಸುತ್ತದೆ. ಇದರ ಹೊರತಾಗಿ ವಾರದಲ್ಲಿ 1 ದಿನ ಕೂದಲಿಗೆ ಆಯಿಲ್ ‌ಹಚ್ಚಿ ಮಸಾಜ್‌ ಮಾಡ್ತೀನಿ, ಧಾರಾಳವಾಗಿ ನೀರು ಕುಡಿಯುತ್ತೀನಿ.

“ನಾನು ಸ್ಪೈಸಿ ಆಹಾರ ಇಷ್ಟಪಡುವುದಿಲ್ಲ. ನನ್ನ  ಸ್ಕಿನ್‌ ಬಹಳ ಸೆನ್ಸಿಟಿವ್‌. ಹೀಗಾಗಿ ಸ್ಪೈಸಿ ಅಲ್ಲದ ಮನೆಯ ಆಹಾರವನ್ನಷ್ಟೇ ತಿನ್ನುತ್ತೀನಿ. ಇದರಲ್ಲಿ ಪ್ರೋಟೀನ್‌, ವಿಟಮಿನ್‌, ಮಿನರಲ್ಸ್ ಹೆಚ್ಚಾಗಿರುವಂತೆ ನೋಡಿಕೊಳ್ಳುತ್ತೇನೆ. ನನಗೆ ಗಾಢ ಮೇಕಪ್‌ ಅಂದ್ರೆ ಅಲರ್ಜಿ, ಹೀಗಾಗಿ ವೈಟ್‌ ಪ್ರಿಫರ್‌ ಮಾಡ್ತೀನಿ. ಸದಾ ಫಿಟ್‌ ಆಗಿರಲು ಜಿಮ್ ಗೆ ಹೋಗುತ್ತೇನೆ, ಮನೆಯಲ್ಲಿ ಯೋಗ ಮಾಡುತ್ತೇನೆ.”

ಬಿಡುವಿಲ್ಲದ ಕೆಲಸಗಳಿಂದಾಗಿ ಯಾಮಿ ತಮ್ಮ ಮನೆಯವರಿಗಾಗಿ ಹೆಚ್ಚಿನ ಸಮಯ ನೀಡಲು ಆಗುವುದಿಲ್ಲ. ಇದರ ಕುರಿತಾಗಿ ಆಕೆಗೆ ದುಃಖವಿದೆ. ಆದರೆ ಆಕೆ ಹೇಳುವುದೆಂದರೆ, ಕುಟುಂಬದ ಜನ ಈಗಲೂ ಅವರನ್ನು ಬಹಳ ಗಮನಿಸಿಕೊಂಡು ನೋಡಿಕೊಳ್ಳುತ್ತಾರೆ, ಬದಲಿಗೆ ಇವರು ಅವರನ್ನು ನೋಡಿಕೊಳ್ಳಲಾಗದು. ಸಮಯಾವಕಾಶ ಸಿಕ್ಕಾಗೆಲ್ಲ ಕುಟುಂಬದವರನ್ನು ಭೇಟಿಯಾಗಲು ಚಂಡೀಗಢಕ್ಕೆ ಹೋಗುತ್ತಾರಂತೆ. ಇದಲ್ಲದೆ ಆಗಾಗ ಫೋನ್ ನಲ್ಲೇ ಮಾತುಕಥೆ ನಡೆಯುತ್ತಿರುತ್ತದೆ. ಯಾಮಿ ಬಹಳ ನಾಚಿಕೆ ಸ್ವಭಾವದವರು. ಹೆಚ್ಚು ಜನರೊಡನೆ ಬೆರೆಯುವ ಗುಣದವರಲ್ಲ. ಆಯ್ದ ಕೆಲವೇ ಕೆಲವು ಗೆಳತಿಯರು ಇದ್ದಾರಂತೆ. ಹೆಚ್ಚಾಗಿ ಪಾರ್ಟಿ, ಫಂಕ್ಷನ್‌ಗಳಿಗೆ ಹೋಗುವುದಿಲ್ಲ ಎನ್ನುತ್ತಾರೆ.

ಮುಂದಿ ತಮ್ಮ ಕೆರಿಯರ್‌ನಲ್ಲಿ ಬಹಳ ಮುನ್ನೇರಬೇಕೆಂಬುದು ಈಕೆಯ ಬಯಕೆ. “ಇಲ್ಲಿಯವರೆಗೂ ನಾನು ಮಾಡಿದ ಟಿ.ವಿ., ಸಿನಿಮಾ ಕೆಲಸಗಳನ್ನು ಜನ ಮೆಚ್ಚಿದ್ದಾರೆ. ನನ್ನ ಮುಂದಿನ ಸಿನಿಮಾ ಅಂದ್ರೆ, ಪ್ರಭುದೇವ್ ನಿರ್ದೇಶನದ `ಆ್ಯಕ್ಷನ್‌ ಜ್ಯಾಕ್ಷನ್‌.’ ಇದರಲ್ಲಿ ಅಜಯ್‌ ದೇವಗನ್‌ ನನಗೆ ಹೀರೋ. ಇನ್ನೂ ಕೆಲವು ಸಿನಿಮಾ, ಸೀರಿಯಲ್ಸ್ ಫೈನೈಲ್ಸ್ ಆಗಬೇಕಿವೆ.”

ಎಂದಾದರೂ ನಿಮಗೆ ಆರಿಸಿಕೊಂಡ ಕೆಲಸ ಸರಿಹೋಗಲಿಲ್ಲ, ತಪ್ಪಾಗಿದೆ ಅನಿಸಿದೆಯೇ?

ಇದಕ್ಕೆ ಉತ್ತರಿಸುತ್ತಾ ಆಕೆ, “ಇಲ್ಲ, ಹಾಗೇನೂ ಆಗಿಲ್ಲ. ನನಗೆ ಯಾವಾಗಲೂ ಉತ್ತಮ ಜನರೊಂದಿಗೆ ಕೆಲಸ ಮಾಡುವ ಅವಕಾಶವೇ ಸಿಕ್ಕಿದೆ. ಎಲ್ಲಾ ಕೆಲಸಗಳಲ್ಲೂ ನನ್ನ ತಾಯಿ ತಂದೆಯರ ಸಹಕಾರವಿತ್ತು,” ಎನ್ನುತ್ತಾರೆ.

ಆಕೆಗೆ ಊಟ ತಿಂಡಿಯಲ್ಲಿ ಹೆಚ್ಚಿನ ಅಕ್ಕರೆ ಇದೆ. ಆಹಾರದ ವಿಷಯಕ್ಕೆ ಎಂದೂ ಫಸ್‌ ಮಾಡುವುದಿಲ್ಲ. ಅವರಿಗೆ ದಾಲ್‌, ಚಿಕನ್‌, ಪನೀರ್‌, ರೊಟ್ಟಿ ಇತ್ಯಾದಿ ಎಲ್ಲಾ ತರಹದ ಅಡುಗೆ ಮಾಡಲಿಕ್ಕೂ ಬರುತ್ತದೆ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ