ಸಂಜಯನಿಗೆ ಆಗ ತಾನೇ ಹೊಸದಾಗಿ ಮದುವೆಯಾಗಿತ್ತು. ಸಂಜೆ ಆಫೀಸ್‌ ಸಮಯ ಮುಗಿದರೂ ಅವನೆಂದೂ ಬೇಗ ಮನೆಗೆ ಹೊರಡುವ ಅವಸರ ತೋರುತ್ತಿರಲಿಲ್ಲ. ಬಹಳ ಹೊತ್ತು ಆಫೀಸ್‌ನಲ್ಲಿಯೇ ಕುಳಿತು 8 ಗಂಟೆ ನಂತರ ಹೊರಡುತ್ತಿದ್ದ.

ಬಹಳ ದಿನ ಹೀಗೇ ಮುಂದುವರಿದಾಗ, ಅವನ ಬಾಸ್‌ ಕರೆಸಿ ನೇರವಾಗಿ ಕೇಳಿದರು, “ಯಾಕ್ರಿ ಸಂಜಯ್‌, ಹೊಸದಾಗಿ ಮದುವೆ ಆಗಿದೆ…. ಆದ್ರೂ ಬೇಗ ಆಫೀಸ್‌ ಮುಗಿಸಿ ಮನೆಗೆ ಹೊರಡಲು ಉತ್ಸಾಹವೇ ತೋರಿಸಲ್ಲ ನೀವು…. ಎಲ್ಲಾ ಸರಿಯಾಗಿದೆ ತಾನೇ ಅಥವಾ….?”

“ಸರ್‌…. ವಿಷಯ ಅದಲ್ಲ. ನನ್ನ ಹೆಂಡತಿಯೂ ಕೆಲಸಕ್ಕೆ ಹೋಗುತ್ತಾಳೆ. ನಮ್ಮಲ್ಲಿನ ಒಪ್ಪಂದವೆಂದರೆ ಯಾರು ಮೊದಲು ಮನೆಗೆ ಬರುತ್ತಾರೋ ಅವರೇ ರಾತ್ರಿಯ ಅಡುಗೆ ಮಾಡಬೇಕು ಅಂತ….”

 

ಸೋಮು : ಒಬ್ಬ ವರ್ತಕ ತನ್ನ ಹೆಂಡತಿಗಾಗಿ ಅಮೂಲ್ಯವಾದ 1 ಕೋಟಿ ರೂ. ಬೆಲೆ ಬಾಳುವ ರತ್ನಹಾರ ತಂದುಕೊಟ್ಟನಂತೆ. ಅದಾದ ಮೇಲೆ 6 ತಿಂಗಳು ಅವಳು ಅವನನ್ನು ಮಾತನಾಡಿಸಲೇ ಇಲ್ಲವಂತೆ.

ರಾಮು : ಛೇ….ಛೇ! ಅಂಥ ಅಮೂಲ್ಯ ಉಡುಗೊರೆ ತಂದುಕೊಟ್ಟ ಗಂಡನೊಂದಿಗೆ ಹಾಗಾ ನಡೆದುಕೊಳ್ಳುವುದು?

ಸೋಮು : ಅದು ಹಾಗಲ್ಲ…. ಅವರಿಬ್ಬರ ನಡುವೆ ಒಪ್ಪಂದ ನಡೆದದ್ದೇ ಹಾಗೇ!

 

ಮನೋಹರನಿಗೆ ನಾನ್‌ವೆಜ್‌ ತಿನ್ನುವ ಆಸೆಯಾಗಿ ಎದುರಿಗೆ ಸಿಕ್ಕಿದ ಹೋಟೆಲ್‌ನ ನುಗ್ಗಿದ. ಮಾಣಿಯನ್ನು ಕರೆದು ಚಿಕನ್‌ ತರುವಂತೆ ಆರ್ಡರ್‌ ಮಾಡಿದ.

ಮಾಣಿ : ಸಾರ್‌, ನಿಮಗೆ ಫ್ರೆಂಚ್‌ ಚಿಕನ್‌ ಬೇಕೋ ಸ್ಪ್ಯಾನಿಶ್‌ ಚಿಕನ್ನೋ?

ಮನೋಹರ : ಯಾವುದೋ ಒಂದು ತಗೊಂಬಾ ಮಾರಾಯ, ನಾನೇನು ಅವುಗಳ ಜೊತೆ ಆ ಭಾಷೆಯಲ್ಲಿ ಮಾತನಾಡಬೇಕಿದೆಯೇ?

 

ಸುರೇಶ್‌ ತನ್ನ ಹೆಂಡತಿ ಜೊತೆ ಜಗಳ ಆಡದ ದಿನವೇ ಇಲ್ಲ. ಕೊನೆಗೆ ರೋಸಿಹೋಗಿ ತನ್ನ ಅತ್ತೆಗೆ ಅವಳ ಬಗ್ಗೆ ದೂರಿತ್ತ.

ಸುರೇಶ್‌ : ನಾನು ನಿಮ್ಮ ಮಗಳನ್ನೇನೋ ಮದುವೆ ಆದೆ, ಆದರೆ ಅವಳಲ್ಲಿ ನೂರಾರು ಕುಂದುಕೊರತೆಗಳಿವೆ.

ಅತ್ತೆಮ್ಮ (ನಿಟ್ಟುಸಿರು ಬಿಡುತ್ತಾ) : ಹೂಂ, ಅದೇನೋ ನಿಜ ಕಣಪ್ಪ, ಅವಳ ಈ ಕುಂದುಕೊರತೆಗಳ ಕಾರಣದಿಂದಲೇ ಯಾವ ಒಳ್ಳೆಯ ವರನೂ ಅವಳ ಕೈ ಹಿಡಿಯಲಿಲ್ಲ.

 

ಮೋಹನ್‌ : ಛೇ…ಛೇ….! ಎಂಥ ಕೆಲಸ ಆಯ್ತು ಗೊತ್ತಾ? ನನ್ನ 4 ವರ್ಷದ ಮಗ ನನ್ನ ಎಲ್ಲಾ ಕವಿತೆಗಳನ್ನೂ ಹರಿದುಬಿಟ್ಟ!

ವಿವೇಕ್‌ : ಅಭಿನಂದನೆಗಳು! ಇಷ್ಟು ಸಣ್ಣ ವಯಸ್ಸಿನಲ್ಲೇ ನಿನ್ನ ಮಗ ಸಾಹಿತ್ಯದಲ್ಲಿ ಇಷ್ಟೊಂದು ಕೃಷಿ ಮಾಡ್ತಿದ್ದಾನೆ…..

 

ಹೆಂಡತಿ : ಅಲ್ಲ, ಜೀವನದಲ್ಲಿ ಯಾವತ್ತಾದರೂ ಒಂದೇ ಒಂದು ಒಳ್ಳೆಯ ಕೆಲಸ ಅಂತ ಮಾಡಿದ್ದುಂಟಾ ನೀವು?

ಗಂಡ : ಓಹೋ….. ನಿನಗೆ ತಾಳಿ ಕಟ್ಟಿ ಮದುವೆ ಆಗಲಿಲ್ಲವೇ?

 

ಮನೋಜ್‌ : ನಿನ್ನ ಆ ಹಳಿ ಟ್ರಂಕಿನ ಬೀಗದಕೈ ಕಳೆದುಹೋಗಿತ್ತಲ್ಲ, ಮನೆಯ ಕಾಗದ ಪತ್ರ ಭದ್ರವಾಗಿರಿಸಿದ್ದು, ಈಗಲೂ ತೆರೆಯಲು ಆಯ್ತೋ ಇಲ್ಲವೋ?

ಮುಕುಂದ್‌ : ಅಂತೂ ತೆರೆದಿದ್ದಾಯ್ತು. ಮನೆ ಮಾರಾಟಕ್ಕೆ ಬೇಕಾದ ಪತ್ರ ಸಿಕ್ಕಿತು, ಬಹಳ ಕಷ್ಟಪಡಬೇಕಾಯ್ತು.

ಮನೋಜ್‌ : ಏನಂಥ ಕಷ್ಟಪಟ್ಟೆ?

ಮುಕುಂದ್‌ : ನಮ್ಮ ಕೆಲಸದವಳ ಕೈಲಿ, ನನ್ನ ಹೆಂಡತಿಗೆ ಅದರಲ್ಲಿ ನನ್ನ ಮಾಜಿ ಪ್ರೇಯಸಿ ನನಗೆ ಬರೆದ ಪ್ರೇಮಪತ್ರಗಳಿವೆ ಅಂತ ಸುದ್ದಿ ಮುಟ್ಟಿಸಲು 500/ ರೂ. ಖರ್ಚು ಮಾಡಬೇಕಾಯ್ತು.

 

ಸರೋಜಾ : ಅಬ್ಬಾ, ಅಂತೂ SSLC ಪರೀಕ್ಷೆ ಮುಗಿಯಿತು. ನೀನು ಹೇಗೆ ಮಾಡಿದ್ದೀಯಾ?

ರೇವತಿ : ನಾನು ಫೇಲಾದರೆ ಸಾಕಪ್ಪ ಅಂದುಕೊಂಡಿದ್ದೀನಿ.

ಸರೋಜಾ : ಅದೇಕೆ ಹಾಗೆ….? ಎಲ್ಲರೂ ಹೆಚ್ಚಿನ ಅಂಕಗಳು ಬರಲಿ ಅಂತಾರೆ.

ರೇವತಿ : 80% ಗಿಂತ ಹೆಚ್ಚು ಬಂದರೆ ವಿಜ್ಞಾನ, 60%ಗಿಂತ ಹೆಚ್ಚು ಬಂದರೆ ವಾಣಿಜ್ಯ, 45% ಬಂದರೆ ಕಲಾ ವಿಭಾಗದಲ್ಲಿ PUCಗೆ ಸೇರು ಅಂತ ನಮ್ಮ ತಂದೆ ಅಂತಿದ್ರು. ಫೇಲಾದರೆ ಮದುವೆ ಮಾಡಿಬಿಡಿ ಅಂತ ನಮ್ಮ ತಾಯಿ ಅಂದ್ರು.

 

ಪತ್ನಿ : ಹೊಸ ಕಾರು, ಹೊಸ ಗಂಡ ಎರಡೂ ಒಂದೇ. ಮೊದಲ 2-3 ತಿಂಗಳು ಎಲ್ಲಾ ಸರಿ ಇರುತ್ತದೆ.

ಪತಿ : ಹಾಂ, ಅದೇ ತರಹ ಹಳೇ ಕಾರು, ಹಳೆಯ ಹೆಂಡತಿ ಸಹ ಎರಡೂ ಒಂದೇ. ಎರಡೂ ಬಹಳ ಸದ್ದು ಮಾಡುತ್ತವೆ.

 

ಮಂಜು : ಮದುವೆ ಆದ ಮೇಲೆ ಮಾಡುವ ತಪ್ಪನ್ನು ಗಂಡಸರು ನೆನಪಿಟ್ಟುಕೊಳ್ಳುವ ಅಗತ್ಯವೇನಿಲ್ಲ.

ರಾಜು : ಅದೇಕೆ ಹಾಗೆ ಹೇಳ್ತೀಯಾ?

ಮಂಜು : ಒಂದೇ ವಿಷಯವನ್ನು ಇಬ್ಬಿಬ್ಬರು ನೆನಪಿಟ್ಟುಕೊಂಡು ಏನಾಗಬೇಕಿದೆ?

 

ಭಾರೀ ದೇಹದ ಜಲಜಮ್ಮ ನಿಧಾನವಾಗಿ ರಸ್ತೆ ದಾಟುತ್ತಿದ್ದರು. ಅಷ್ಟರಲ್ಲಿ ಕಾರು ಓಡಿಸುತ್ತಿದ್ದ ಯುವಕನೊಬ್ಬ ಹಿಂದಿನಿಂದ ಬಂದು ಅವರಿಗೆ ಗುದ್ದಿಬಿಡುವುದೇ? ಕೆಳಗೆ ಬಿದ್ದವರು ಮೇಲೆದ್ದು ಸುಧಾರಿಸಿಕೊಳ್ಳಲು ಅರ್ಧ ಗಂಟೆ ಆಯ್ತು. ಟ್ರಾಫಿಕ್‌ ಜ್ಯಾಮ್ ನಿಂದ ಜನ ಕಂಗೆಟ್ಟು ಹೋಗಿದ್ದರು.

ಮೇಲೆದ್ದ ಜಲಜಮ್ಮ ಆ ಯುವಕನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. “ಯಾಕಯ್ಯಾ, ನಿನಗೇನು ಕಣ್ಣು ಕುರುಡೇ? ನನ್ನನ್ನು ಬಳಸಿಕೊಂಡು ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಾರದಿತ್ತೇ?”

ಅದಕ್ಕೆ ಅವನು, “ನಿಮ್ಮನ್ನು ಸುತ್ತು ಹಾಕುವಷ್ಟು ನನ್ನ ಕಾರಿನಲ್ಲಿ ಪೆಟ್ರೋಲ್ ಇರಲಿಲ್ಲ. ಇನ್ನೇನು ಮಾಡಲಿ?” ಎನ್ನುವುದೇ?

 

ವಿಮಾ ಕಂಪನಿಯ ಏಜೆಂಟ್‌ನನ್ನು, ಹೊಸದಾಗಿ ಮದುವೆಯಾದ ಗುಂಡ ಕೇಳಿದ, “ನಾನು ಇವತ್ತೇ ನನ್ನ ಹೆಂಡತಿಯ ಹೆಸರಿನಲ್ಲಿ 50 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿ, ಅವಳು ನಾಳೆಯೇ ಸತ್ತುಹೋದರೆ ನನಗೇನು ಸಿಗುತ್ತದೆ?”

ಅದಕ್ಕೆ ಏಜೆಂಟ್‌ ಶಾಂತನಾಗಿ ಉತ್ತರಿಸಿದ, “ಕೈಗೆ ಕೋಳ….”

 

ಎಂಟನೇ ಮಹಡಿಯಿಂದ ಜಾರಿಬಿದ್ದ ಮಧುಕರನ ಹೆಂಡತಿ ಪ್ರಜ್ಞೆ ಕಳೆದುಕೊಂಡು ಎಷ್ಟು ಹೊತ್ತಾದರೂ ಎಚ್ಚರಗೊಳ್ಳಲೇ ಇಲ್ಲ. ಮಧುಕರ್‌ ಅವಳನ್ನು ಆಸ್ಪತ್ರೆಗೆ ಕರೆದೊಯ್ದಾಗ, ಡಾಕ್ಟರ್‌ ಪರೀಕ್ಷಿಸಿ ಸತ್ತಿದ್ದಾಳೆ ಎಂದರು. ಹೆಣವನ್ನು ಸುಡಲು ಸ್ಮಶಾನಕ್ಕೆ ಕೊಂಡೊಯ್ಯುವಾಗ, ಅದರ ಮುಖ್ಯ ದ್ವಾರದಲ್ಲೇ ಅವಳು ಎದ್ದು ಕೂರಬೇಕೇ?

“ಅಯ್ಯೋ…. ನಾನು ಸತ್ತಿಲ್ಲ!” ಎಂದು ಅವಳು ಕಿರುಚಾಡಿದಳು.

ಮಧುಕರ್‌ ಅವಳನ್ನು ಗದರಿಸಿದ, “ಏ, ನೀನು ಸುಮ್ಮನೆ ಮಲಗು…. ಡಾಕ್ಟರ್‌ಗಿಂತ ನಿನಗೇನು ಗೊತ್ತಾಗುತ್ತೆ?”

 

ಸರ್ಕಾರಿ ಗುಮಾಸ್ತರ ಕೆಲಸಕ್ಕೆ ಸಂದರ್ಶನ ನಡೆಯುತ್ತಿತ್ತು.

ಅಧಿಕಾರಿ : ಏನಯ್ಯ ಗುಂಡ, 5-5 ಕೂಡಿದರೆ ಎಷ್ಟು?

ಗುಂಡ : ಅಲ್ಲಿಂದ ಎದ್ದು ಬಂದು ಹೊರಗೆ ಬಗ್ಗಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಕೋಣೆ ಒಳಗೂ ಬೇರೆ ಯಾರೂ ಇರಲಿಲ್ಲ. ಅವರ ಬಳಿ ಹೋಗಿ ಮೆಲ್ಲಗೆ ಹೇಳಿದ, “ಅದೆಷ್ಟಾದರೂ ಆಗಲಿ, ನೀವು ಎಷ್ಟು ಮಾಡಿಸಬೇಕು ಅಂತೀರಿ?”

ಸಂದರ್ಶನದಲ್ಲಿ ಗುಂಡನೇ ಆಯ್ಕೆಯಾದ ಎಂದು ತಿಳಿಸಬೇಕಿಲ್ಲ ಅಲ್ಲವೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ