ಊರಿಗೊಬ್ಬಳೇ ಪದ್ಮಾವತಿ ಅಂತ ರಮ್ಯಾ ಸ್ಯಾಂಡಲ್ ವುಡ್‌ನ ಮೋಹಕ ರಾಣಿಯಾಗಿರುವಾಗ ಮತ್ತೊಬ್ಬ ರಮ್ಯಾ ಕೇರಳದಿಂದ ಹಾರಿ ಬಂದಿದ್ದಾಳೆ. ರಿಮ್ಯಾ ನಂಬೀಸನ್‌ ಎನ್ನುವ ಈ ಮಲೆಯಾಳಿ ಕುಟ್ಟಿ ಈಗಾಗಲೇ ಮಲೆಯಾಳಂ ಚಿತ್ರರಂಗದಲ್ಲಷ್ಟೇ ಅಲ್ಲ ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದ್ದಾಳೆ. ಈ ಬೆಡಗಿಯನ್ನು ಕನ್ನಡಕ್ಕೆ ಕರೆತಂದಿರುವವರು ನಿರ್ದೇಶಕರಾದ ಪಿ.ಸಿ. ಶೇಖರ್‌. ಗಣೇಶ್‌ ಅಭಿನಯಿಸುತ್ತಿರುವ ವಿಭಿನ್ನ ಗೆಟಪ್‌ನ `ಸ್ಟೈಲ್ ‌ಕಿಂಗ್‌’ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಿದ್ದಾಳೆ.

ಚೈತ್ರದ ಚಿಗುರಿನಂತಿರುವ ರಮ್ಯಾ ನಂಬೀಸನ್‌ ಉತ್ತಮ ಕಲಾವಿದೆ ಎಂದು ಈಗಾಗಲೇ ಬೇರೆ ಭಾಷೆಗಳಲ್ಲಿ ಪ್ರೂವ್ ಮಾಡಿರುವಂಥ ನಟಿ. ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಟಿಸುವ ಆಸೆ ಆಕೆಗಿತ್ತು. ಕನ್ನಡ ಚಿತ್ರಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದ ರಮ್ಯಾಳಿಗೆ ಕನ್ನಡದಲ್ಲಿ ಉತ್ತಮ ಪ್ರಯೋಗವಾಗುತ್ತಲೇ ಇರುತ್ತೆ ಎಂದು ಬಹಳ ದಿನಗಳಿಂದ ಅಂಥವೊಂದು ಚಿತ್ರರಂಗದಲ್ಲಿ ತಾನೂ ತನ್ನ ಪ್ರತಿಭೆಯನ್ನು ತೋರಿಸಬೇಕೆಂದು ಆಸೆಪಡುತ್ತಿದ್ದಳು.

`ಸ್ಟೈಲ್ ‌ಕಿಂಗ್‌’ ಮೂಲಕ ಗಣೇಶ್‌ ಹೊಸ ರೂಪ ಧರಿಸಿದ್ದಾರೆ. ಈ ಪಾತ್ರದ ಸಲುವಾಗಿ ಮೇಕ್‌ ಓವರ್‌ ಮಾಡಿಸಿಕೊಂಡಿದ್ದಾರೆ. ಗಣೇಶ್‌ `ಮುಂಗಾರು ಮಳೆ’ ನಂತರ ಗೋಲ್ಡನ್‌ ಸ್ಟಾರ್‌ ಆಗಿ ಸ್ಯಾಂಡಲ್ ವುಡ್‌ನ ಜನಪ್ರಿಯ ಹೀರೋಗಳ ಪಟ್ಟಿಗೆ ಸೇರಿದಂಥ ನಟ. ಇತ್ತೀಚೆಗೆ `ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದ ಯಶಸ್ಸಿನ ನಂತರ ಗಣೇಶ್‌ ಸೆಕೆಂಡ್‌ ಇನ್ನಿಂಗ್ಸ್ ಶುರುವಾಗಿತ್ತು. `ದಿಲ್ ‌ರಂಗೀಲಾ’ ಕೂಡಾ ಯಶಸ್ಸು ತಂದುಕೊಟ್ಟಿತು.

`ಸ್ಟೈಲ್ ಕಿಂಗ್‌’ ಚಿತ್ರದಲ್ಲಿ ಯಾವ ನಾಯಕಿ ನಟಿಸುತ್ತಾಳೆಂಬ ಕುತೂಹಲ ಎಲ್ಲರಿಗೂ ಇತ್ತು. ಸಾಕಷ್ಟು ಜನಪ್ರಿಯ ತಾರೆಯರ ಹೆಸರು ಕೇಳಿಬಂದಿತ್ತು. ಆದರೆ ಕಡೆಗೆ ರಮ್ಯಾ ಆಯ್ಕೆ ಆಗಿರೋದು ಕಂಡು ಗಣೇಶ್‌ ರಮ್ಯಾ ಜೋಡಿ ಹೇಗಿರಬಹುದು ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ. ಚಿತ್ರದ ಮುಹೂರ್ತವನ್ನು ಶಂಕರ್‌ನಾಗ್‌ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ಶೇಖರ್‌ ಅವರಿಗೆ ಶಂಕರ್‌ನಾಗ್‌ ಮೆಚ್ಚಿನ ನಿರ್ದೇಶಕರಾಗಿರೋದ್ರಿಂದ ಅವರ ಹೆಸರಿನ ಚಿತ್ರಮಂದಿರದಲ್ಲೇ `ಸ್ಟೈಲ್ ‌ಕಿಂಗ್‌’ ಪ್ರಾರಂಭಿಸಿದರೋ ಏನೋ…. ಒಟ್ಟಿನಲ್ಲಿ ಶೇಖರ್‌ ಈ ಚಿತ್ರಕ್ಕಾಗಿ ತುಂಬಾನೆ ತಯಾರಿ ಮಾಡಿಕೊಂಡಂತಿದೆ.

ರಮ್ಯಾ ಪಾತ್ರದ ಬಗ್ಗೆ ಹೇಳಬೇಕೆಂದರೆ, ನಾಯಕಿ ಎಂದಕೂಡಲೇ ಬರೀ ಗ್ಲಾಮರ್‌ ಗೊಂಬೆಯಾಗಿ ನಾಲ್ಕೈದು ಸೀನ್‌ ಎರಡು ಮೂರು ಹಾಡುಗಳಲ್ಲಿ ಬಂದುಹೋಗುವಂಥ ಪಾತ್ರ ಈ ನಟಿಯದಾಗಿಲ್ಲ. ಗಟ್ಟಿಯಾದ ಪಾತ್ರ, ನಾಯಕಿ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡಲಾಗಿದೆಯಂತೆ.

remya-nambeesan1

`ಸ್ಟೈಲ್ ಕಿಂಗ್‌’ ಚಿತ್ರದ ಬಗ್ಗೆ ಮಾತನಾಡುತ್ತಾ, “ನಾನು ಈ ಚಿತ್ರದ ಬಗ್ಗೆ ತುಂಬಾನೆ ಎಗ್ಸೈಟ್‌ ಆಗಿದ್ದೀನಿ. ಕನ್ನಡದಲ್ಲಿ ಇದು ನನ್ನ ಮೊದಲನೆಯ ಚಿತ್ರ. ಇಂಥವೊಂದು ಪ್ರಾಜೆಕ್ಟ್ ನಲ್ಲಿ ನಾನಿದ್ದೀನಲ್ಲ ಎನ್ನುವುದು ಹೆಮ್ಮೆಯ ವಿಚಾರ. ಇದೊಂದು ಲವ್ ಸ್ಟೋರಿ. ಆದರೆ ಮಾಮೂಲಿ ಲವ್ ಸ್ಟೋರಿಗಿಂತ ವಿಭಿನ್ನವಾಗಿದ್ದು ನನ್ನ ಪಾತ್ರ ಹೇಗೆ ತನ್ನ ಪ್ರೇಮವನ್ನು ನಾಯಕ ಹಾಗೂ ತನ್ನ ಕುಟುಂಬ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಾಳೆಂಬುದನ್ನು ಪ್ರತಿನಿಧಿಸುತ್ತದೆ,” ಎಂದು ಹೇಳುವ ರಮ್ಯಾ ಸದ್ಯದಲ್ಲೇ ಚಿತ್ರತಂಡ ದೊಂದಿಗೆ ಸೇರಿಕೊಳ್ಳಲಿದ್ದಾಳೆ. ಕೊಚ್ಚಿನ್‌ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ಬಿಝಿಯಾಗಿರುವ ರಮ್ಯಾ ತನ್ನಲ್ಲಡಗಿರುವ ಮತ್ತೊಂದು ಪ್ರತಿಭೆಯನ್ನು ಮೆಲ್ಲಗೆ ಹೊರಹಾಕಿದ್ದಾಳೆ. ಅದೇನೆಂದರೆ ತಾನೊಬ್ಬ ಉತ್ತಮ ಹಿನ್ನೆಲೆ ಗಾಯಕಿಯಾಗಿ ಈಗಾಗಲೇ ಮಲೆಯಾಳಂ ಮತ್ತು ತಮಿಳಿನಲ್ಲಿ ಹಾಡಿರುವುದಾಗಿಯೂ ಹೇಳುತ್ತಾಳೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ  ಚಿಗುರುತ್ತಿರುವ ಆಲಿಯಾ ಭಟ್‌, ಶ್ರದ್ಧಾ ಕಪೂರ್‌ ನಾಯಕಿಯರಾಗಷ್ಟೇ ಜನಪ್ರಿಯರಾಗಿಲ್ಲ, ತಮ್ಮ ಗಾಯನದ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ. ಇದೊಂದು ಯಂಗ್‌ ಟ್ರೆಂಡ್‌ ಆಗಿದೆ. ಕನ್ನಡದಲ್ಲಿ ಈಗಾಗಲೇ ನಿತ್ಯಾ ಮೆನನ್‌ `ಮೈನಾ’ ಚಿತ್ರದಲ್ಲಿ ಸೊಗಸಾಗಿ ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ನಟಿ ಮೇಘನಾ ರಾಜ್‌ ಕೂಡಾ ತನ್ನಲ್ಲಡಗಿದ್ದ ಗಾಯಕಿಯ ಪ್ರತಿಭೆಯನ್ನು `ಬಹು ಪರಾಕ್‌’ ಮೂಲಕ ಹೊರಹಾಕಿ ಎಲ್ಲರಿಂದ ಹೊಗಳಿಕೆ ಮಾತನ್ನು ಪಡೆದಿದ್ದಳು.

ಈಗ ರಮ್ಯಾ ನಂಬೀಸನ್‌ ಕೂಡಾ ಒಬ್ಬ ಉತ್ತಮ ಗಾಯಕಿಯಾಗಿರೋದ್ರಿಂದ ನಿರ್ದೇಶಕ ಶೇಖರ್‌ ಕೂಡಾ ರಮ್ಯಾಳಿಂದ ಒಂದು ಹಾಡನ್ನು `ಸ್ಟೈಲ್ ಕಿಂಗ್‌’ ಚಿತ್ರದಲ್ಲಿ ಹಾಡಿಸಲು ನಿರ್ಧರಿಸಿದ್ದಾರಂತೆ.

“ಹೌದು, ಇಲ್ಲಿಯವರೆಗೂ ನಾನು ನಟಿಸಿದ್ದ ಮಲೆಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಾನೇ ಹಾಡನ್ನು ಹಾಡಿದ್ದೆ. ಶೇಖರ್‌ ಅವರು ಕನ್ನಡದಲ್ಲೂ ಹಾಡಬೇಕು ಎಂದು ಸಲಹೆ ಕೊಟ್ಟಾಗ ಕನ್ನಡ ಭಾಷೆ ನನಗೆ ಹೊಸದಾಗಿರೋದ್ರಿಂದ ಸಾಕಷ್ಟು ಕಲಿಯಬೇಕಿದೆ. ನನ್ನಲ್ಲಿ ಕಲಿಯುವ ಉತ್ಸಾಹವಿದೆ. ಅಷ್ಟೇ ಅಲ್ಲ ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ ಎನ್ನುವುದೂ ಗೊತ್ತಿದೆ. ಹಾಗಾಗಿ ಕನ್ನಡದಲ್ಲಿ ಹಾಡುವಾಗ ನಾನು ಭಾಷೆಗೆ ನ್ಯಾಯ ಸಲ್ಲಿಸುವೆ ಎನ್ನುವ ವಿಶ್ವಾಸ ನನಗಿದೆ,” ಎನ್ನುತ್ತಾಳೆ.

ಕನ್ನಡ ಚಿತ್ರರಂಗಕ್ಕೆ ಪ್ರತಿಭಾವಂತೆ ರಮ್ಯಾಳ ಆಗಮನದಿಂದ ನಾಯಕಿ ಜೊತೆಗೆ ಒಬ್ಬ ಗಾಯಕಿಯೂ ಸಿಕ್ಕಂತಾಗುತ್ತದೆ. `ಸ್ಟೈಲ್ ಕಿಂಗ್‌’ನ ಈ ಸ್ಟೈಲ್ ರಾಣಿ ಕನ್ನಡ ಪ್ರೇಕ್ಷಕರನ್ನು ಯಾವ ರೀತಿ ಆಕರ್ಷಿಸುತ್ತಾಳೇ ಎಂದು ಕಾದು ನೋಡೋಣ.

ಆಲ್ ದಿ ಬೆಸ್ಟ್ ರಮ್ಯಾ!

– ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ