ಮನೆ ಹಾಗೂ ಆಫೀಸಿನ ಕೆಲಸದ ಹೊರೆ, ಗಂಡ ಹಾಗೂ ಮಕ್ಕಳ ಜವಾಬ್ದಾರಿಗಳನ್ನು ಹೊತ್ತ ಮಹಿಳೆಯರು ತಮ್ಮ ಕನಸುಗಳು, ಬಯಕೆಗಳು, ಒಲವನ್ನು ಬಲಿ ಕೊಡುತ್ತಾರೆ. ಹೀಗೆ ಮಾಡುವುದು ತಪ್ಪು. ಅವರು ತಮ್ಮ ಬಗ್ಗೆ ಕಾಳಜಿ ವಹಿಸುವುದು, ತಮ್ಮನ್ನು ಸದಾ ಪ್ರೆಸೆಂಟೆಬಲ್ ಆಗಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ಅದಕ್ಕೆ ಅವರು ಕೊಂಚ ಸಮಯ ಮೀಸಲಿಡಬೇಕು.

ನಾನಿನ್ನೂ ಯುವತಿ! ಕೆಲವು ಮಹಿಳೆಯರು ಮದುವೆಯಾದ ಸ್ವಲ್ಪ ಸಮಯದ ನಂತರ, ಮತ್ತೆ ಕೆಲವರು ಮಕ್ಕಳಾದ ನಂತರ ತಮಗೆ ವಯಸ್ಸಾಯಿತು ಎಂದುಕೊಳ್ಳುತ್ತಾರೆ. ಆದರೆ ವಾಸ್ತವವೇನೆಂದರೆ, ಅವರ ಆಲೋಚನೆ ಅವರನ್ನು ವೃದ್ಧರನ್ನಾಗಿಸುತ್ತದೆ. ಈ ವಿಷಯದ ಬಗ್ಗೆ ಕಾಸ್ಮೆಟಾಲಜಿಸ್ಟ್ ಮತ್ತು ಬ್ಯೂಟಿ ಅಂಡ್‌ ಹೇರ್‌ ಎಕ್ಸ್ ಪರ್ಟ್‌ ಸುನೀತಾ ಹೀಗೆ ಹೇಳುತ್ತಾರೆ, ಮನೋವೈಜ್ಞಾನಿಕ ರೂಪದಲ್ಲಿ ನೋಡಿದರೆ ಮಾನಸಿಕವಾಗಿ ವೃದ್ಧರಾದರೇ ದೈಹಿಕವಾಗಿಯೂ ವೃದ್ಧರಾಗಿರುತ್ತಾರೆ.

ಆದ್ದರಿಂದ ಸಮಯದ ಜೊತೆ ಜೊತೆಗೆ ನಮ್ಮ ಆಲೋಚನೆಯಲ್ಲೂ ಬದಲಾವಣೆ ತರಬೇಕು. ಹೀಗೆ ಮಾಡದಿದ್ದಲ್ಲಿ ಒತ್ತಡದ ರೇಖೆಗಳು ಮುಖದ ಮೇಲೆ ನೆರಿಗೆಗಳ ರೂಪದಲ್ಲಿ ಕಂಡುಬರುತ್ತವೆ. ಹೀಗಿರುವಾಗ ನಮ್ಮ ಆಲೋಚನೆ ಹೇಗೆ ಬದಲಾಯಿಸುವುದು, ಯಂಗ್‌ ಸ್ಟರ್‌ ಗ್ಯಾಂಗ್‌ನಲ್ಲಿ ಸೇರಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಅತ್ಯಂತ ಅಗತ್ಯವಾದದ್ದು ತನ್ನನ್ನು ತಾನು ಮೋಹಿಸುವುದು. ಎಲ್ಲ ಮಹಿಳೆಯರೂ ಆಗಾಗ್ಗೆ ಬ್ಯೂಟಿ ಪಾರ್ಲರ್‌ಗೆ ಹೋಗಬೇಕು. ಬ್ಯೂಟಿ ಪಾರ್ಲರ್‌ಗೆ ಹೋಗಲಾಗದವರು ತಮ್ಮನ್ನು ಸುಂದರವಾಗಿಟ್ಟುಕೊಳ್ಳಲು ಮನೆಯಲ್ಲೇ ಬ್ಯೂಟಿ ಟ್ರೀಟ್‌ ಮೆಂಟ್‌ ಪಡೆಯಬೇಕು.

ಬ್ಯೂಟೀಶಿಯನ್‌ ರೇಣು ಹೀಗೆ ಹೇಳುತ್ತಾರೆ, “ಮನೆಯ ಕೆಲಸದಿಂದ ಬಿಡುವು ಸಿಕ್ಕ ಕೂಡಲೇ ಮಹಿಳೆಯರು ತಮ್ಮ ಬಗ್ಗೆ ಹಾಗೂ ತಮ್ಮ ಸೌಂದರ್ಯದ ಬಗ್ಗೆ ಯೋಚಿಸಬೇಕು. ನಿಯಮಿತವಾಗಿ ಸ್ಕಿನ್‌ ಕ್ಲೀನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡಿಸಿಕೊಳ್ಳಬೇಕು.

“ಇದರ ಜೊತೆಗೆ ತೆಳುವಾಗಿ ಮೇಕಪ್‌ ಮಾಡಿಕೊಳ್ಳಬೇಕು. ಅದಕ್ಕೆ ಎಸ್‌ಪಿಎಫ್‌ಯುಕ್ತ ಕ್ರೀಮ್ ನಲ್ಲಿ 3-4 ಹನಿ ಫೌಂಡೇಶನ್ ಬೆರೆಸಿ ಮುಖ ಹಾಗೂ ಕತ್ತಿನ ಮೇಲೆ ಹಚ್ಚಿ. ಅದರಿಂದ ಮುಖದಲ್ಲಿ ಕಾಂತಿ ಬರುತ್ತದೆ. ಅದು ಸನ್‌ಸ್ಕ್ರೀನ್‌ ಕೆಲಸವನ್ನೂ ಮಾಡುತ್ತದೆ. 30-40 ವಯಸ್ಸಿನ ಮಹಿಳೆಯರಂತೂ ತಮ್ಮ ತ್ವಚೆಯ ಬಗ್ಗೆ ವಿಶೇಷ ಗಮನ ಕೊಡಬೇಕು. ಏಕೆಂದರೆ ಈ ವಯಸ್ಸಿನಲ್ಲಿ ತಮ್ಮ ಬಗ್ಗೆ ಕೊಂಚ ನಿರ್ಲಕ್ಷ್ಯ ವಹಿಸಿದರೂ ಮುಖದ ಮೇಲೆ ತೆಳುವಾದ ನೆರಿಗೆಗಳು ಮೂಡಲಾರಂಭಿಸುತ್ತವೆ. ಸಣ್ಣಪುಟ್ಟ ಕಪ್ಪು ಕಲೆಗಳು ಶುರುವಾಗುತ್ತವೆ.”

ಇದರ ಬಗ್ಗೆ ಸುನೀತಾ ಹೀಗೆ ಹೇಳುತ್ತಾರೆ, “ಮುಖದಲ್ಲಿ ಬರುತ್ತಿರುವ ಈ ಬದಲಾವಣೆಗಳನ್ನು ಅಲಕ್ಷಿಸಬೇಡಿ. ಏಕೆಂದರೆ ಇದು ಹೆಚ್ಚುತ್ತಿರುವ ನಿಮ್ಮ ವಯಸ್ಸನ್ನು ತಡೆಯಬಹುದಾದ ವಯಸ್ಸು. ಆದ್ದರಿಂದ 30 ವಯಸ್ಸಿನ ನಂತರ ಫೇಶಿಯಲ್ ಮತ್ತು ಹಗುರವಾದ ಸ್ಕಿನ್‌ ಟ್ರೀಟ್‌ಮೆಂಟ್‌ ಅಗತ್ಯವಾಗಿ ಮಾಡಿಸಿ, ಫ್ರೂಟ್‌ ಫೇಶಿಯಲ್ ಟ್ರೈ ಮಾಡಿ. ಮನೆಯಲ್ಲಿ ರಸಭರಿತ ಹಣ್ಣುಗಳ ತಿರುಳನ್ನು ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಅದರಿಂದ ನೆರಿಗೆಗಳು ಕಡಿಮೆಯಾಗುತ್ತವೆ.”

40-50 ವಯಸ್ಸಿನ ಮಹಿಳೆಯರು ಆ ವಯಸ್ಸಿಗೆ ಬಂದ ಕೂಡಲೇ ತಮ್ಮ ಕಾಲ ಮುಗಿದೇ ಹೋಯಿತೆಂದು ತಿಳಿದುಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ದೊಡ್ಡವರಾಗುತ್ತಿರುತ್ತಾರೆ, ಗಂಡ ಮನೆಗೆ ಬೇಕಾದ ಸೌಲಭ್ಯಗಳನ್ನು ಹೊಂದಿಸುತ್ತಿರುತ್ತಾರೆ. ಹೀಗಿರುವಾಗ ಮಹಿಳೆಯರು ತಮ್ಮನ್ನು ನೋಡುವವರು ಯಾರು ಎಂದು ಯೋಚಿಸಿ ಅಲಂಕರಿಸಿಕೊಳ್ಳುವುದಿಲ್ಲ. ಅದು ತಪ್ಪು, ಈ ವಯಸ್ಸಿನಲ್ಲೂ ಮಹಿಳೆಯರು ಸುಂದರವಾಗಿ ಕಾಣಬಹುದು.

50 ದಾಟಿದ ಮಹಿಳೆಯರು ತಾವು ವೃದ್ಧೆಯಾಗಿಬಿಟ್ಟೆ ಎಂದುಕೊಳ್ಳುತ್ತಾರೆ. ಆದರೆ ಬಾಲಿವುಡ್‌ನ ಅನೇಕ ನಟಿಯರು ಈ ಭಾವನೆಯನ್ನು ತೊಡೆದುಹಾಕಿದ್ದಾರೆ. ಉದಾಹರಣೆಗೆ ರೇಖಾ, ಹೇಮಾಮಾಲಿನಿ, ಶ್ರೀದೇವಿ ಮುಂತಾದ ಹೀರೋಯಿನ್‌ಗಳು ವೃದ್ಧಾಪ್ಯಕ್ಕೆ ಸವಾಲು ಹಾಕಿದ್ದಾರೆ. ಆ ವಯಸ್ಸಿನ ಮಹಿಳೆಯರು ಅಂಥವರಿಂದ ಪ್ರೇರಣೆ ಪಡೆದು ತಮ್ಮ ರೂಪದ ಬಗ್ಗೆ ಗಮನ ಕೊಡಬೇಕು. ಅದಕ್ಕಾಗಿ ತಮ್ಮ ಡಯೆಟ್‌ ಬಗ್ಗೆ ವಿಶೇಷ ಗಮನ ಕೊಡಬೇಕು. ಏಕೆಂದರೆ ಒಳ್ಳೆಯ ಆಹಾರದಿಂದಲೇ ತ್ವಚೆಯಲ್ಲಿ ಬಿಗಿತ ಉಂಟಾಗುತ್ತದೆ.

ಏಜಿಂಗ್‌ಗೆ ಹೆದರದಿರಿ

ನಿಮ್ಮ ತ್ವಚೆ ಬೇಗನೆ ಏಜಿಂಗ್‌ಗೆ ಬಲಿಯಾಗದಿರಲು ಒಳ್ಳೆಯ ಡಯೆಟ್‌ ತೆಗೆದುಕೊಳ್ಳಿ. ಏಕೆಂದರೆ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿರುವ ನಿಮ್ಮ ಡಯೆಟ್‌ ಫ್ರೀ ರಾಡಿಕ್ಸ್‌ ಸ್ವಸ್ಥ ಟಿಶ್ಯೂಗಳನ್ನು ಡ್ಯಾಮೇಜ್‌ ಮಾಡುವುದನ್ನು ತಪ್ಪಿಸುತ್ತವೆ. ಇದರಿಂದಾಗಿ ಏಜಿಂಗ್‌ ಸಮಸ್ಯೆ ತಡವಾಗಿ ಶುರುವಾಗುತ್ತದೆ. ಗ್ರೀನ್‌ ಟೀ ಮತ್ತು ಹಣ್ಣುಗಳಲ್ಲದೆ, ಹಸಿರು ತರಕಾರಿಗಳು ಕೂಡ ಆ್ಯಂಟಿ ಆಕ್ಸಿಡೆಂಟ್‌ ಡಯೆಟ್‌ನ ಒಳ್ಳೆಯ ಸೂತ್ರವಾಗಿವೆ.

ಅವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇದರೊಂದಿಗೆ ಕಲುಷಿತ ವಾತಾವರಣ, ಸ್ಮೋಕಿಂಗ್‌, ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳು ಕೂಡ ಏಜಿಂಗ್‌ಗೆ ಆಹ್ವಾನ ನೀಡುತ್ತವೆ. ಅದರಿಂದ ರಕ್ಷಿಸಿಕೊಳ್ಳಿ. ಸೂರ್ಯನ ಅಲ್ಟ್ರಾ ವೈಲೆಟ್‌ ಕಿರಣಗಳು ಸ್ಕಿನ್ ಟ್ಯಾನಿಂಗ್‌ ಮಾಡುವುದಲ್ಲದೆ, ತ್ವಚೆಯನ್ನು ಒಳಗಿನವರೆಗೂ ಡ್ಯಾಮೇಜ್‌ ಮಾಡುತ್ತವೆ. ಆದ್ದರಿಂದ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಕೊಡಿ.

ಫಿಟ್‌ ಆಗಿದ್ದರೆ ಹಿಟ್‌

ಸಾಮಾನ್ಯವಾಗಿ ಮಹಿಳೆಯರು ವ್ಯಸ್ತರಾಗಿದ್ದೇವೆಂದು ನೆಪ ಹೇಳಿ ಬ್ಯೂಟಿ ಟ್ರೀಟ್‌ ಮೆಂಟ್ಸ್ ಇರಲಿ, ತಮ್ಮ ಶರೀರದ ಸ್ವಚ್ಛತೆ ಹಾಗೂ ಫಿಟ್‌ನೆಸ್‌ಗೂ ಗಮನ ಕೊಡುವುದಿಲ್ಲ. ಅದರ ಪರಿಣಾಮವಾಗಿ ಕೈಗಳಲ್ಲಿ ಟ್ಯಾನಿಂಗ್‌, ಒಡೆದ ಹಿಮ್ಮಡಿ ಇತ್ಯಾದಿ ಅವರಿಗೆ ಬೇಸರ ಮೂಡಿಸುತ್ತದೆ. ರೇಣು ಹೀಗೆ ಹೇಳುತ್ತಾರೆ, “ಕಾಸ್ಮೆಟಿಕ್ಸ್ ಉಪಯೋಗಿಸದಿದ್ದರೂ ಪರವಾಗಿಲ್ಲ. ಆದರೆ ಶರೀರದ ಸ್ವಚ್ಛತೆಯನ್ನು ಎಂದಿಗೂ ಅಲಕ್ಷಿಸಬಾರದು. ಕೈಕಾಲುಗಳ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಕೊಡಿ. ಸ್ವಲ್ಪ ದಿನಗಳ ವ್ಯತ್ಯಾಸದಲ್ಲಿ ಪೆಡಿಕ್ಯೂರ್‌ ಮತ್ತು ಮೆನಿಕ್ಯೂರ್‌ ಮಾಡಿಸಿಕೊಳ್ಳಿ. ಕೈಕಾಲುಗಳನ್ನು ಚೆನ್ನಾಗಿ ಮಸಾಜ್‌ ಮಾಡಿಕೊಳ್ಳಿ. ಆಯಾಸ ದೂರವಾಗುವುದು.”

ವಯಸ್ಸು ಹೆಚ್ಚಾದಾಗ ಹಾರ್ಮೋನ್‌ಗಳ ಬದಲಾವಣೆಯಿಂದ ಕೂದಲಿನ ಮೇಲೂ ಪ್ರಭಾವ ಬೀರುತ್ತದೆ. ಕೂದಲಿನ  ಥಿಕ್‌ ನೆಸ್‌ಕೂಡ ಕಡಿಮೆಯಾಗುತ್ತದೆ. ಅದಕ್ಕೆ ಸುನೀತಾ ಹೀಗೆ ಹೇಳುತ್ತಾರೆ, “ಮಹಿಳೆಯರು ಹೇರ್‌ ಸ್ಟೈಲ್ ಬದಲಾಯಿಸಿಕೊಳ್ಳಲು ಹೆದರುತ್ತಾರೆ. ವಯಸ್ಸು ಹೆಚ್ಚಾಗುವುದರ ಜೊತೆ ಜೊತೆಗೆ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುತ್ತದೆ. ಅದರಿಂದ ಕೂದಲಿನ ಥಿಕ್‌ ನೆಸ್‌ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಿರುವಾಗ ಕೂದಲಿಗೆ ಹೊಸ ಹೇರ್‌ ಸ್ಟೈಲ್ ಕೊಟ್ಟರೆ  ಮಹಿಳೆಯರು ಕೂದಲು ತೆಳ್ಳಗಾಗುವ ಸಮಸ್ಯೆಯಿಂದ ಬಿಡುಗಡೆ ಹೊಂದುತ್ತಾರೆ.”

ರೇಣು ಹೀಗೆ ಹೇಳುತ್ತಾರೆ, “ಉದ್ದ ಕೂದಲುಳ್ಳ ಮಹಿಳೆಯರು ಅತ್ಯಂತ ಸುಲಭವಾದ ಬನ್‌ (ಕೊಂಡೆ) ಮಾಡಿಕೊಳ್ಳಬೇಕು. ಇದರಲ್ಲೇನೂ ತಪ್ಪಿಲ್ಲ. ಒಂದು ವೇಳೆ ಬನ್‌ ಮಾಡಬೇಕೆಂದಿದ್ದರೆ ಮೊದಲು ಫ್ರೆಂಚ್‌ ಜಡೆ ಹಾಕಬೇಕಾಗುತ್ತದೆ ಅಥವಾ ಕೂದಲನ್ನು ವರ್ಕ್‌ ಮಾಡಿಕೊಳ್ಳಬೇಕು.

“ಫಿಟ್‌ ನೆಸ್‌ ಲೆವೆಲ್ ‌ಕಡಿಮೆ ಇರುವ ಮಹಿಳೆಯರಿಗೆ ಬಹಳಷ್ಟು ಕಾಯಿಲೆಗಳು ಬರುತ್ತವೆ. ವಾರಕ್ಕೆ 3 ಬಾರಿ ವ್ಯಾಯಾಮ ಮಾಡುವ ಮಹಿಳೆಯರು ಫಿಟ್‌ ಆಗಿರುತ್ತಾರೆ. ವ್ಯಾಯಾಮ ಮಾಡಲು ಜಿಮ್ ಗೆ ಹೋಗಲೇಬೇಕು ಎಂದೇನಿಲ್ಲ. ಮನೆಯಲ್ಲೇ ಹಗುರವಾದ ವ್ಯಾಯಾಮಗಳನ್ನು ಮಾಡಬಹುದು.”

ಬಯಕೆಯನ್ನು ಪೂರ್ಣಗೊಳಿಸಿ

ಮದುವೆ ಮತ್ತು ಮಕ್ಕಳಾಗುವುದರ ಅರ್ಥ ನಿಮ್ಮ  ಸ್ಟೈಲ್‌, ಫ್ಯಾಷನ್‌ ಮತ್ತು ಟ್ರೆಂಡ್‌ನೊಂದಿಗೆ ಸಂಬಂಧ ಮುರಿದುಬಿದ್ದಿದೆ ಎಂದಲ್ಲ. ಈಗ ನೀವು ಇನ್ನಷ್ಟು ಸ್ಟೈಲಿಶ್‌ ಉಡುಪು ಮತ್ತು ಫುಟ್‌ವೇರ್‌ ಟ್ರೈ ಮಾಡಬೇಕು. ನಿಮ್ಮನ್ನು ನೋಡಿದವರಿಗೆ ನಿಮ್ಮ ವಯಸ್ಸು ತಿಳಿಯಬಾರದು. ಆದರೂ ಅನೇಕ ಮಹಿಳೆಯರು ಈ ವಯಸ್ಸಿಗೆ ಬಂದ ಮೇಲೆ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಸಂಕೋಚಪಡುತ್ತಾರೆ.

ಲೋಕಲ್, ನ್ಯಾಷನಲ್ ಮತ್ತು ಇಂಟರ್‌ ನ್ಯಾಷನಲ್ ಲೆವೆಲ್‌ನಲ್ಲಿ ಅನೇಕ ಸ್ಪರ್ಧೆಗಳು ನಡೆಯುತ್ತಿದ್ದು ಅನೇಕ ವಿವಾಹಿತೆಯರು ಹಾಗೂ ಹೆಚ್ಚಿನ ವಯಸ್ಸಿನ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಶ್ರೀದೇವಿ ಮತ್ತು ಚಿತ್ರಾಂಗದಾರಂತಹ ವಿವಾಹಿತ ಹೀರೋಯಿನ್‌ಗಳ ಉದಾಹರಣೆ ನೋಡಬಹುದು. ಈ ನಟಿಯರು ವಿವಾಹಿತರಾಗಿದ್ದಾರೆ, ಅವರಿಗೆ ಮಕ್ಕಳೂ ಇದ್ದಾರೆ. ಅವರ ವಯಸ್ಸೂ ಹೆಚ್ಚಾಗಿದೆ. ಇಷ್ಟೆಲ್ಲಾ ಆದರೂ ಅವರು ಆರೋಗ್ಯವಾಗಿಯೂ, ಸುಂದರವಾಗಿಯೂ ಇದ್ದಾರೆ.

ಈ ವಯಸ್ಸಿನಲ್ಲಿ ಅನೇಕ ಮಹಿಳೆಯರಿಗೆ ವೆಸ್ಟರ್ನ್‌ ಔಟ್‌ ಫಿಟ್‌ ಧರಿಸಲು ಬಹಳ ಇಷ್ಟವಿರುತ್ತದೆ. ಆದರೆ ಅವರು ಸಂಕೋಚದಿಂದ ಈ ಇಚ್ಛೆಯನ್ನು ಮನದಲ್ಲಿಯೇ ಹತ್ತಿಕ್ಕುತ್ತಾರೆ. ಆದರೆ ವೆಸ್ಟರ್ನ್‌ ಔಟ್‌ಫಿಟ್‌ನ್ನು ಯಾವುದೇ ವಯಸ್ಸಿನ ಮಹಿಳೆ ಧರಿಸಬಹುದು. ನಿಮಗೆ ಯಾವ ರೀತಿಯ ಡ್ರೆಸ್‌ ಸೂಟ್‌ ಆಗುತ್ತದೆ ಎಂದು ಅಗತ್ಯವಾಗಿ ಗಮನಿಸಬೇಕು. ಒಂದು ವೇಳೆ ನೀವು ಸೀರೆ ಉಡುವುದಿದ್ದರೆ ಅದನ್ನು ಬೇರೆ ವಿಧವಾಗಿ ಡ್ರೇಪ್‌ ಮಾಡಿ.

ರೇಣು ಡ್ರೇಪಿಂಗ್‌ ವಿಧಾನ ಹೇಳುತ್ತಾ, “ಸೆರಗನ್ನು ತಿರುವಿ ಹೊದ್ದು ಸೀರೆಯನ್ನು ಬೇರೆ ರೀತಿ ಡ್ರೇಪ್‌ ಮಾಡಬಹುದು. ಸೀರೆಯ ಸೆರಗಿನೊಂದಿಗೆ ಎಕ್ಸ್ ಪೆರಿಮೆಂಟ್‌ ಮಾಡಬಹುದು. ಸೆರಗನ್ನು ಕೈ ಮೇಲೆ ತಿರುವಿಹಾಕಿ ಹಿಂದಿನಿಂದ ಮುಂದೆ ತನ್ನಿ ಮತ್ತು ನೇರವಾಗಿ  ಮೇಲೆ ಟಕ್‌ ಮಾಡಿ. ಹೀಗೆಯೇ ನೀವು ಸೆರಗಿಗೆ ಪ್ಲೇಟರ್‌ ಟೈಪ್‌ ಕೂಡ ಮಾಡಬಹುದು. ಅದನ್ನು ಚೆನ್ನಾಗಿ ಪಿನ್‌ ಅಪ್ ಮಾಡಬೇಕು,” ಎನ್ನುತ್ತಾರೆ.

ಕೆಲವು ಮಹಿಳೆಯರ ಸಮಸ್ಯೆ ಇಲ್ಲಿಗೇ ಮುಗಿಯುವುದಿಲ್ಲ. ಅವರಿಗೆ ಬಣ್ಣಗಳೂ ಬೇಸರವಾಗುತ್ತವೆ. ಯಾವುದೇ ಬಣ್ಣ ಎಷ್ಟೇ ಚೆನ್ನಾಗಿದ್ದರೂ ಸರಿಯಿಲ್ಲವೆಂದು ತಿರಸ್ಕರಿಸುತ್ತಾರೆ. ಸಾಧಾರಣ ಬಣ್ಣವನ್ನು ಆಯ್ಕೆ ಮಾಡುತ್ತಾರೆ. ಅಂದಹಾಗೆ ಬಣ್ಣಗಳ ಆಯ್ಕೆ ವಯಸ್ಸನ್ನಲ್ಲ, ಪರ್ಸನಾಲಿಟಿಯನ್ನು ಆಧರಿಸುತ್ತದೆ.

– ಪಿ.ಕೆ. ವಿನುತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ