ಪ್ರಮೋದ್‌ ವಿದೇಶದಲ್ಲಿ ವ್ಯಾಸಂಗ ಮುಗಿಸಿ 4 ವರ್ಷಗಳ ನಂತರ ಭಾರತಕ್ಕೆ ಬಂದಾಗ, ತಮ್ಮ ನೆರೆಮನೆಯಲ್ಲಿದ್ದ ಅನೂಷಾಳನ್ನು ಕಂಡು ಬೆಕ್ಕಸಬೆರಗಾದ. ಬಾಲ್ಯದಲ್ಲಿ ಎಲ್ಲರಿಂದಲೂ ಡುಮ್ಮಿ  ಅನ್ನಿಸಿಕೊಂಡು ಮೊದ್ದು ಮೊದ್ದಾಗಿದ್ದ ಅನೂಷಾ, ಈಗ ಬಳುಕುವ ಬಳ್ಳಿಯಂತೆ ಎಲ್ಲೆಡೆ ಓಡಾಡುತ್ತಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಿಂಚುತ್ತಿದ್ದರೆ, ಒಬ್ಬ ಪ್ರಸಿದ್ಧ ಶಿಲ್ಪಿ ಅವಳ ಅಂಗಾಂಗಗಳನ್ನು ಸೂಕ್ಷ್ಮವಾಗಿ ಕೆತ್ತಿ ಸರಿಪಡಿಸಿದನೇನೋ ಎಂದು ಆಶ್ಚರ್ಯಪಟ್ಟ. ಅತ್ಯಾಕರ್ಷಕ ಮೈಕಟ್ಟು, ಸ್ಛುರದ್ರೂಪಿ ವ್ಯಕ್ತಿತ್ವದಿಂದ ಹ್ಯಾಂಡ್‌ ಸಮ್ ಬ್ಯಾಚುಲರ್‌ ಆಗಿ ಮಿಂಚುತ್ತಿದ್ದ ಪ್ರಮೋದ್‌ನನ್ನು ಕಂಡು ಮಾರುಹೋದ ಅನೂಷಾ, ಅವನನ್ನು ಮನದಲ್ಲೇ ಮೆಚ್ಚಿದಳು.

ಯಾವುದೋ ನೆಪದಿಂದ 1-2 ಬಾರಿ ಅವರು ಭೇಟಿಯಾದರು. ನಂತರ ಅದು ಕ್ರಮೇಣ ಹೆಚ್ಚಾಗಿ ಅವರು ಪ್ರತಿದಿನ ಭೇಟಿಯಾಗತೊಡಗಿದರು. ಕ್ರಮೇಣ ಈ ಸ್ನೇಹ ಪ್ರೇಮವಾಗಿ ಮಾರ್ಪಡಲು ಹೆಚ್ಚು ದಿನ ಬೇಕಾಗಲಿಲ್ಲ. ಮುಂದೆ ತಾವು ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂಬ ಹಂತ ತಲುಪಿದರು. ಈ ಮಧುರ ಬಾಂಧವ್ಯ ಮದುವೆಯಲ್ಲಿ ಮುಕ್ತಾಯವಾಗಲಿ ಎಂದು ದೃಢ ನಿರ್ಣಯ ಕೈಗೊಂಡರು.

ಮದುವೆಯ ಸುದ್ದಿ ಎತ್ತಿದ ಮೇಲೆ ಎರಡೂ ಮನೆಗಳಲ್ಲಿ ಅಂಥ ಪ್ರೋತ್ಸಾಹಕರ ಬೆಂಬಲವೇನೂ ಸಿಗಲಿಲ್ಲ. ಇಬ್ಬರ ಜಾತಿ ಬೇರೆ ಆಗಿದ್ದುದೇ ಸಮಸ್ಯೆಗೆ ಮೂಲವಾಯ್ತು. ಎಷ್ಟು ಹೇಳಿದರೂ ಇಬ್ಬರ ಮನೆತನದವರೂ ಮದುವೆಗೆ ರಾಜಿ ಆಗಲಿಲ್ಲ. ಕೊನೆಗೆ ಇವರು ರಿಜಿಸ್ಟರ್ಡ್‌ ಮದುವೆ ಆಗುವುದೆಂದು ನಿರ್ಧರಿಸಿದಾಗ, ಬೆಳೆದ ಮಕ್ಕಳನ್ನು ಎದುರುಹಾಕಿಕೊಳ್ಳುವುದು ಬೇಡವೆಂದು ಒಲ್ಲದ ಮನದಿಂದಲೇ ಇಬ್ಬರ ಮನೆಯವರೂ ಮದುವೆಗೆ ಒಪ್ಪಿಗೆ ನೀಡಿದರು. ಅಂತೂ ಹಿರಿಯರ ಸಮ್ಮುಖದಲ್ಲೇ ಮದುವೆ ನೆರವೇರಿತು.

ಪ್ರಮೋದ್‌ ಹಾಗೂ ಅನೂಷಾ ಈ ಮದುವೆಯಿಂದ ಬಹಳ ಸಂತೋಷಗೊಂಡಿದ್ದರು. ಈ ಮಧ್ಯೆ ಪ್ರಮೋದನಿಗೆ ಆಸ್ಚ್ರೇಲಿಯಾದ ಸಿಡ್ನಿ ನಗರದ ಪ್ರಖ್ಯಾತ ಕಂಪನಿಯೊಂದರಿಂದ ಉನ್ನತ ಹುದ್ದೆಗಾಗಿ ಆಫರ್‌ ಬಂದಿತು. ಅನೂಷಾಳಿಗೂ ಈ ಸುದ್ದಿಯಿಂದ ತುಂಬಾ ಖುಷಿಯಾಯ್ತು,  ಏಕೆಂದರೆ ಸಿಡ್ನಿಯಲ್ಲಿ ಅವಳ ಸೋದರಮಾವ ವಾಸವಾಗಿದ್ದರು. ವೃತ್ತಿಯಿಂದ ಅವರು ವಕೀಲರಾಗಿದ್ದರು.

ರಾಮರಾವ್ ‌ಈ ದಂಪತಿಗಳನ್ನು ಬಹಳ ಆತ್ಮೀಯತೆಯಿಂದ ಎದುರು ನೋಡುತ್ತಿದ್ದರು.

ಅಂತೂ ಪ್ರಮೋದ್‌-ಅನೂಷಾ ಸಿಡ್ನಿಗೆ ಹೊರಟಿದ್ದಾಯ್ತು. ಮಾವನ ನೆರವಿನಿಂದ ಅವರು ಬಾಡಿಗೆಗೆ ಪ್ರತ್ಯೇಕ ಫ್ಲಾಟ್‌ ಒಂದನ್ನು ಹಿಡಿದು, ಹೊಸ ಸಂಸಾರ ಶುರು ಮಾಡಿದರು. ಅನೂಷಾ ಮುಂದೆ ಕಲಿಯಬೇಕು ಎಂದು ಬಹಳ ಶ್ರದ್ಧೆಯಿಂದ, ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಂಡಳು. ಪ್ರಾರಂಭದಲ್ಲಿ ಇಬ್ಬರೂ ಅತಿ ಉತ್ಸಾಹಿಗಳಾಗಿದ್ದರು…. ಆದರೆ ನಿಧಾನವಾಗಿ ಇಬ್ಬರಲ್ಲೂ ಮೆಲ್ಲಗೆ ಅಸಮಾಧಾನದ ಹೊಗೆ ಆಡತೊಡಗಿತು. ಇವರ ಜಗಳದ ಕಾರಣ ಇಷ್ಟೆ. ಪ್ರಮೋದ್‌ ಮನೆಗೆಲಸದಲ್ಲಿ ಎಂದಿಗೂ ಅನೂಷಾಳಿಗೆ ನೆರವಾಗುತ್ತಿರಲಿಲ್ಲ. ಅದು ಹೆಂಗಸರ ಕೆಲಸ, ಅದೇನಿದ್ದರೂ ಅನೂಷಾಳ ಜವಾಬ್ದಾರಿ. ಅದನ್ನು ಮುಗಿಸಿ ಸಮಯ ಉಳಿದರೆ ಅವಳು ಓದು ಮುಂದುವರಿಸಲಿ ಎನ್ನತೊಡಗಿದ.

ಆದರೆ ಅನೂಷಾಳಿಗೆ ಮಾತ್ರ ಯಾವ ಮಹಾ ಮನೆಗೆಲಸ ಬರುತ್ತಿತ್ತು? ಅವಳ ಕೈ ಅಡುಗೆ ಅವನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಊಟದ ಸಮಯದಲ್ಲಿ ಏನಾದರೂ ಒಂದು ರಾದ್ಧಾಂತ ಇದ್ದೇ ಇರುತ್ತಿತ್ತು. ಅಡುಗೆಯನ್ನು ಹೇಗೋ ಕಷ್ಟಪಟ್ಟು ಮುಗಿಸುತ್ತಿದ್ದ ಅವಳಿಗೆ, ಮನೆಯ ಉಳಿದ ಕೆಲಸಗಳನ್ನೂ ಸಂಭಾಳಿಸುವುದರಲ್ಲಿ ಸಾಕು ಸಾಕಾಗುತ್ತಿತ್ತು. ಭಾರತದ ತರಹ ಅಲ್ಲಿ ಮನೆಗೆಲಸದವರು ಖಂಡಿತಾ ಸಿಗುತ್ತಿರಲಿಲ್ಲ. ಹೀಗಾಗಿ ಎಲ್ಲವನ್ನೂ ಅವಳೇ ನಿಭಾಯಿಸಬೇಕಿತ್ತು. ಆದ್ದರಿಂದೀ ಅವಳು ಮನೆಗೆಲಸದಲ್ಲಿ ಗಂಡನ ನೆರವನ್ನು ಬಯಸುತ್ತಿದ್ದಳು. ಅಂತೂ ಮನೆಗೆಲಸ ಮುಗಿಸಿ ಅವಳು ಯೂನಿರ್ಸಿಟಿಗೆ ಹೋಗಿ ಬಂದು ಹೇಗೋ ಮಾಡಿದರೂ, ಅಭ್ಯಾಸಕ್ಕಾಗಿ ಅವಳು 3-4 ತಾಸು ಮನೆಯಲ್ಲಿ ಕಲಿಯಲೇಬೇಕಿತ್ತು. ಗೃಹಿಣಿಯ ಕರ್ತವ್ಯ, ವಿದ್ಯಾರ್ಥಿನಿಯ ಬದುಕು ಅವಳಿಗೆ ಒಟ್ಟೊಟ್ಟಿಗೆ ನಿಭಾಯಿಸುವುದು ಅತಿ ಕಷ್ಟಕರವಾಯ್ತು. ಇದರಿಂದ ಅವಳ ಸಿಟ್ಟು ನೆತ್ತಿಗೇರುತ್ತಿತ್ತು. ಪ್ರೇಮಲೋಕದಲ್ಲಿ ಮುಳುಗಿದ್ದಾಗ ಎಲ್ಲವೂ ರಮ್ಯವಾಗಿಯೇ ಕಾಣುವ ಪ್ರೇಮಿಗಳಿಗೆ, ದಾಂಪತ್ಯ ಶುರುವಾದ ಮೇಲಷ್ಟೇ ವಾಸ್ತವದ ಅರಿವಾಗುವುದು. ಪ್ರೇಮ ಕುರುಡು, ಆದಕಾರಣ ಇಬ್ಬರ ವ್ಯವಹಾರಗಳೂ ಪರಸ್ಪರ  ಅತಿ ಶಿಷ್ಟಾಚಾರದ ಪರಾಕಾಷ್ಠೆ ತಲುಪಿ ಸಂಗಾತಿಯ ಬೇಕೂ ಬೇಡಗಳನ್ನು ನಿಷ್ಠೆಯಿಂದ ನೆರವೇರಿಸುತ್ತಾರೆ. ಆದರೆ ಅದೇ ವ್ಯಕ್ತಿಗಳು ಮದುವೆಯಾದಾಗ, ತಮ್ಮ ಹಕ್ಕು, ತಮ್ಮ ಸೌಲಭ್ಯಗಳ ಕುರಿತಾಗಿಯೇ ಚಿಂತಿಸುತ್ತಾರೆ. ಆಗ ದಿನನಿತ್ಯದ ಜಂಜಾಟದಿಂದ ಇಬ್ಬರಲ್ಲೂ ತಿಕ್ಕಾಟ ಶುರುವಾಗುತ್ತದೆ, ಪ್ರೇಮದ ತೀವ್ರತೆ ಇಳಿದು ವಾಸ್ತವದ ಬದುಕು ಅಸಹನೀಯ ಎನಿಸುತ್ತದೆ. ಪರಸ್ಪರರ ಅಭ್ಯಾಸಗಳು ಈಗ ಹಿಂಸೆ ಎನಿಸುತ್ತದೆ.

ಒಂದು ದಿನ ಪ್ರಮೋದ್‌ ಆಫೀಸ್‌ನ ಯಾವುದೋ ಗಂಭೀರ ಸಮಸ್ಯೆಯಿಂದ ತಲೆನೋವು ತರಿಸಿಕೊಂಡು ಹಿಂಸೆಪಡುತ್ತಿದ್ದ. ಶೂ ಕಳಚಿ ಅಲ್ಲೇ ಸೋಫಾದಲ್ಲಿ ಒರಗಿಬಿಟ್ಟ. ಅರ್ಧ ಗಂಟೆ ನಂತರ ಅನೂಷಾ ಸಹ ಕಾಲೇಜಿನಿಂದ ಸುಸ್ತಾಗಿ ಬಂದಳು. ರಾತ್ರಿಯ ಅಡುಗೆಗೆ ಅವಳು ಆರಂಭಿಸಿದಳು. ಕೆಲಸ ಬೇಗ ಮುಗಿಯಲಿ ಎಂದು ಗಂಡನನ್ನು ಸಹಾಯಕ್ಕೆ ಕೂಗಿದಳು. ತನ್ನದೇ ಚಿಂತೆಯಲ್ಲಿ ಮುಳುಗಿದ್ದ ಅವನಿಗೆ ಹೆಂಡತಿಯ ದನಿ ಕೇಳಿಸಲಿಲ್ಲ. ಆದರೆ ಅವನು ಬೇಕೆಂದೇ ತನ್ನ ಮಾತನ್ನು ಧಿಕ್ಕರಿಸುತ್ತಿದ್ದಾನೆ ಎನಿಸಿತು. ಹೀಗಾಗಿ ಹೊರಗೆ ಧಪಧಪ ಹೆಜ್ಜೆ ಹಾಕುತ್ತಾ ಬಂದ ಅಳು, ಅವನನ್ನು ಅಲುಗಿಸಿ ಪ್ರಶ್ನೆಗಳ ಮಳೆ ಸುರಿಸಿದಳು.

ತನ್ನ ಹೆಗಲು ಹಿಡಿದು ಪ್ರಶ್ನಿಸುತ್ತಿರುವ ಅವಳ ಮೇಲೆ ಅವನಿಗೆ ಕೆಂಡಾಮಂಡಲ ಸಿಟ್ಟು ಬಂತು. ಕೋಪದಿಂದ ಅವಳ ಕೈಯನ್ನು ಕೊಡವಿದ. ಆಯ ತಪ್ಪಿ ಹಿಂದಕ್ಕೆ ವಾಲಿದ ಅವಳು ಶೋಕೇಸ್‌ ತುದಿಗೆ ಹಣೆ ಬಡಿಸಿಕೊಂಡು, ಧೊಪ್ಪನೆ ಕೆಳಗೆ ಕುಸಿದಳು. ಅವಳ ಹಣೆಯಿಂದ ರಕ್ತ ತೊಟ್ಟಿಕ್ಕಿತು.

ಆಗ ಅವಳನ್ನು ಸರಿಯಾಗಿ ಗಮನಿಸಿದ ಪ್ರಮೋದ್‌ ಗಾಬರಿಗೊಂಡ. ತಾನೇ ಮುಂದಾಗಿ ನುಗ್ಗಿ ಅವಳ ಹಣೆಯನ್ನು ಗಟ್ಟಿಯಾಗಿ ಒತ್ತಿಹಿಡಿದ, ರಕ್ತ ಸೋರದಂತೆ ತಡೆಯಲು ಯತ್ನಿಸಿದ. ಸಿಟ್ಟಿನಲ್ಲಿ ವಿವೇಕ ಕಳೆದುಕೊಂಡ ಅವಳು ಅವನನ್ನು ತಳ್ಳಿಹಾಕಿ, ಮಲಗುವ ಕೋಣೆಗೆ ಓಡಿದಳು.

ಅವಳ ಹಿಂದೆ ಓಡುತ್ತಾ ಬಂದ ಪ್ರಮೋದ್‌ ಕ್ಷಮೆ ಯಾಚಿಸಿದ, “ಐ ಆ್ಯಮ್ ವೆರಿ ಸಾರಿ ಅನೂ….. ನಾನು ಬೇಕೆಂದೇ ನಿನ್ನನ್ನು ತಳ್ಳಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು…. ನಡಿ, ತಕ್ಷಣ ಡಾಕ್ಟರ್‌ ಬಳಿಗೆ ಹೋಗೋಣ…..” ಎಂದು ಧಾವಂತ ಪಟ್ಟುಕೊಂಡ. ಆದರೆ ಅನೂಷಾ ಕೇಳಿಸಿಕೊಳ್ಳುವ ಸಹನೆ ತೋರಲಿಲ್ಲ. ಅವಳು ರಪ್ಪೆಂದು ಕೋಣೆಯ ಕದ ಹಾಕಿದಳು.

ಪ್ರಮೋದ್‌ ಮತ್ತೆ ಮತ್ತೆ ಅವಳನ್ನು ಕೂಗುತ್ತಾ, ಬಾಗಿಲು ತೆರೆಯುವಂತೆ ಹೇಳುತ್ತಿದ್ದ. ಬಹಳ ಹೊತ್ತಿನ ನಂತರ ಬಾಗಿಲು ತೆರೆಯಿತು, ಅವಳೀಗ ಒಂದು ಸೂಟ್‌ ಕೇಸ್‌ ಹಿಡಿದು ಹೊರಬಂದಿದ್ದಳು. ಅವಳ ಹಣೆಯಿಂದ ಸಣ್ಣದಾಗಿ ರಕ್ತ ಜಿನುಗುತ್ತಲೇ ಇತ್ತು. ಅವನನ್ನು ದೂರ ತಳ್ಳುತ್ತಾ ಅವಳು ಹೇಳಿದಳು, “ನಾನೀಗ ಮಾವನ ಮನೆಗೆ ಹೊರಟೆ. ಅವರೆ ನಿನ್ನ ಬಳಿ ಮಾತನಾಡುತ್ತಾರೆ.”

ಹೊರಗಿನ ಬಾಗಿಲನ್ನು ರಪ್ಪೆಂದು ಎಳೆದು ಹಾಕಿಕೊಂಡ ಅನೂಷಾ, ಅವನ ಮನೆ ಬಿಟ್ಟು ಹೊರ ನಡೆದಿದ್ದಳು. ಅಸಹಾಯಕನಾಗಿ ಪ್ರಮೋದ್‌ ಅವಳನ್ನೇ ನೋಡುತ್ತಾ ನಿಂತ. ಇವಳು ರಾಮರಾಯರ ಮನೆಗೆ ಸರಿ ರಾತ್ರಿಯಲ್ಲಿ ಟ್ಯಾಕ್ಸಿಯಲ್ಲಿ ಬಂದಾಗ, ಆ ಹಿರಿಯ ದಂಪತಿಗಳು ದಂಗಾದರು, “ಅನೂಷಾ…. ಇದೇನಮ್ಮ ಹೀಗೆ ಗಾಯ ಆಗಿದೆ…..?”

ಅವಳ ಬಾಯಿಂದ ಒಂದೇ ಮಾತು ಹೊರಬಂತು, “ಪ್ರಮೋದ್‌…..” ನಂತರ ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಬಹುಶಃ ಪ್ರಮೋದ್‌ ಇವಳ ಮೇಲೆ ಕೈ ಮಾಡಿರಬಹುದು ಎಂದು ರಾಮರಾಯರು ಭಾವಿಸಿದರು. ಅವರಿಗೆ ಕೆಟ್ಟ ಕೋಪ ಬಂದಿತು. ಹಲ್ಲು ಕಡಿಯುತ್ತಾ ಅವರು ರೇಗಿದರು, “ಓಹೋ…. ಆ ಪ್ರಮೋದ್‌ ನಿನಗೆ ಹೀಗೆ ಮಾಡಿದನೇ? ನಿನ್ನ ಮೇಲೆ ಅವನು ಕೈ ಮಾಡುವಂಥ ಕೆಟ್ಟ ಕೆಲಸ ಏಕೆ ಮಾಡಿದ? ಅವನಿಗೆ ಅಷ್ಟೊಂದು ಧೈರ್ಯವೇ? ನೋಡ್ತಾ ಇರು. ನಾನು ಅವನಿಗೆ ಎಂಥ ಗತಿ ಕಾಣಿಸ್ತೀನಿ ಅಂತ….!”

ಅವರಿಬ್ಬರ ಸಾಂತ್ವನದ ನುಡಿಗಳು ಅವಳ ನೊಂದ ಮನಸ್ಸಿಗೆ ಸಮಾಧಾನ ನೀಡಿದವು. ಅವರ ಸಹಾನುಭೂತಿಯ ನುಡಿಗಳು ಹಿತಕರವಾಗಿತ್ತು, ಹೀಗಾಗಿ ತನ್ನ ಮನೆಯಲ್ಲಿ ನಡೆದಿದ್ದ ನಿಜ ಘಟನೆಯನ್ನು ಅವಳು ಹೇಳಲೇ ಇಲ್ಲ.

ಏನೋ ಒಂದು ಚಿಕ್ಕ ಅಸಮಾಧಾನದ ಘಟನೆಯಿಂದ ಅವಳು ಮನೆ ತೊರೆದೇ ಹೋಗಿಬಿಡುತ್ತಾಳೆ ಎಂದು ಪ್ರಮೋದ್‌ಅಂದುಕೊಂಡಿರಲಿಲ್ಲ. ಅದರಿಂದ ತನಗೆ ದೊಡ್ಡ ಅಪಮಾನ ಆಯಿತು ಎಂದು ಅವಳ ಮೇಲೆ ಇನ್ನೂ ಕೋಪ ಜಾಸ್ತಿಯಾಯ್ತು. ತಾನಂತೂ ಅವಳನ್ನು ಮನೆ ಬಿಟ್ಟು ಹೋಗಬೇಕೆಂದು ಹೇಳಲಿಲ್ಲ, ಬದಲಿಗೆ ಪೆಟ್ಟಾಗಿದ್ದವಳ ಕ್ಷಮೆ ಕೋರಿ, ಡಾಕ್ಟರ್‌ ಬಳಿ ಹೋಗೋಣವೆಂದು ಹೇಳಿದ, ಆದರೂ ಅವಳು ಬೇಕೆಂದೇ ಮನೆ ಬಿಟ್ಟು ಹೋಗಿದ್ದಾಳೆಂದರೆ…… ಬೇಕಾದಾಗ ತಾನೇ ವಾಪಸ್ಸು ಬರಲಿ ಎಂದು ಮನದಲ್ಲೇ ಯೋಚಿಸತೊಡಗಿದ. ಅವಳನ್ನು ತಡೆಯಲು ತಾನು ಎಷ್ಟು ಯತ್ನಿಸಿದರೂ ತನಗೆ ಅವಮಾನ ಮಾಡಲೆಂದೇ ಅವಳು ಬಂಧುಗಳ ಮನೆ, ಹುಡುಕಿಕೊಂಡು ಹೋದಳಲ್ಲ ಎಂದು ಅವನಿಗೆ ಕ್ಷಣ ಕ್ಷಣಕ್ಕೂ ಮೈ ಪರಚಿಕೊಳ್ಳುವಂತಾಯಿತು. ತಾನಾಗಿ ಅವರ ಮನೆಗೆ ಇವಳನ್ನು ಕರೆಯಲು ಹೋಗುವುದಿಲ್ಲ…. ಏನಾದರೂ ಆಗಲಿ ಎಂದು ನಿರ್ಧರಿಸಿದ. ಅನೂಷಾಳ ಹಣೆಯ ಗಾಯಕ್ಕೆ ಹೊಲಿಗೆ ಹಾಕಿಸಬೇಕಾಯಿತು. ಮನೆಯಿಂದ ಹೊರಡುವಾಗ ತನ್ನ ಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂದು ಅವನಿಗೆ ಗೊತ್ತಿದೆ, ಹಾಗಿದ್ದೂ ಒಮ್ಮೆಯಾದರೂ ಅವನು ತನ್ನ ಆರೋಗ್ಯದ ಬಗ್ಗೆ ಫೋನ್‌ ಮಾಡಿ ವಿಚಾರಿಸಬಾರದೇ? ತನ್ನನ್ನು ನೋಡಲು ಇಲ್ಲಿಗೆ ಬರಬಾರದೇ? ಅವನು ಹುಡುಕಿಕೊಂಡು ಬರುವವರೆಗೂ ಖಂಡಿತಾ ತಾನಾಗಿ ಆ ಮನೆಗೆ ಹೋಗಲೇಬಾರದು ಎಂದು ನಿರ್ಧರಿಸಿದಳು. ಈ ರೀತಿ ಇಬ್ಬರ ಅಹಂ ಎಲ್ಲಾ ನಿರ್ಧಾರಗಳಿಗೂ ಅಡ್ಡ ಬಂದು, ಇಬ್ಬರೂ ಪರಸ್ಪರ ಸೋಲಲು ಅವಕಾಶ ನೀಡದೇ ಹೋಯಿತು. ಯಾರೂ ಮಣಿಯದ ಸ್ಥಿತಿಯಾಯಿತು.

ಹೀಗೆ ಹಲವಾರು ದಿನಗಳು ಕಳೆದವು. ತನ್ನ ಫೋನ್‌ ಮೊಳಗಿದಾಗ, ಬಾಗಿಲ ಬಳಿ ಕರೆಗಂಟೆ ಬಾರಿಸಿದಾಗ ಬಹುಶಃ ಅದು ಪ್ರಮೋದ್‌ನದೇ ಇರಬೇಕೆಂದು ಅನೂಷಾ ಭಾವಿಸಿದಳು. ಅದೇ ತರಹ ಪ್ರಮೋದ್‌ ಸಹ ಅವಳನ್ನು ನಿರೀಕ್ಷಿಸುತ್ತಿದ್ದ. ಆಫೀಸ್ ನಿಂದ ಮನೆಗೆ ಮರಳಿದಾಗ, ಖಾಲಿ ಖಾಲಿಯಾಗಿ ಭಣಗುಟ್ಟುತ್ತಿದ್ದ ಮನೆ ಅವನ ನಿರಾಸೆಯನ್ನು ಹೆಚ್ಚಿಸುತ್ತಿತ್ತು. ಆದರೆ ಇಬ್ಬರಲ್ಲಿ ಯಾರೊಬ್ಬರೂ ತಮ್ಮ ಅಹಂ ಬಿಟ್ಟುಕೊಡಲು, ಪರಸ್ಪರ ತಾವಾಗಿ ಮುಂದೆ ಬಂದು ಭೇಟಿಯಾಗಲು ಸಿದ್ಧರಿರಲಿಲ್ಲ. ಅನೂಷಾಳ ಮಾವ ಸ್ವಯಂ ವಕೀಲರಾಗಿದ್ದರು. ಅವರು ಡೈಮೋರ್ಸ್‌ ಕೊಡಿಸುವುದರಲ್ಲಿ ಸಿದ್ಧಹಸ್ತರು. ಹಲವು ತಿಂಗಳು ಕಳೆದಾಗ, ಅನೂಷಾ ಮುಂದೆ ಅವರು ವಿಚ್ಛೇದನದ ಕಾಗದಪತ್ರ ಇರಿಸಿದರು, “ಮೊದಲು ನೀನು ಇದಕ್ಕೆ ಸಹಿ ಹಾಕಮ್ಮ….. ಉಳಿದಿದ್ದನ್ನು ನಾನು ನೋಡಿಕೊಳ್ತೀನಿ!” ಎಂದು ಗುಡುಗಿದರು.

ಅದನ್ನು ನೋಡಿ ಅನೂಷಾ ಮೊದಲು ಕೊಂಚ ಹಿಂಜರಿದಳು. ಈ ಡೈವೋರ್ಸ್‌ ಪೇಪರ್ಸ್‌ ಕಂಡು ಪ್ರಮೋದ್‌ ಹೆದರಿಬಿಡುತ್ತಾನೆ, ಆಗ ತಾನಾಗಿ ನನ್ನ ಬಳಿ ಬರುತ್ತಾನೆ ಎಂದು ಭಾವಿಸಿ ಅದರ ಮೇಲೆ ಸಹಿ ಮಾಡಿದಳು. ಪ್ರಮೋದ್‌ ಬಳಿ ಈ ವಿಚ್ಛೇದನದ ಕಾಗದಪತ್ರ ಬಂದಾಗ ಅವನು ದಂಗಾಗಿ ಹೋದ. ಒಂದಕ್ಕಿಂತ ಒಂದು ಹೀನಾಯವಾದ ಆರೋಪಗಳನ್ನು ಅವನ ಮೇಲೆ ಹೊರಿಸಿ ವಿಚ್ಛೇದನಕ್ಕೆ ಕಾರಣ ನೀಡಲಾಗಿತ್ತು. ಅಷ್ಟು ಮಾತ್ರವಲ್ಲದೆ, ಜೀವನಾಂಶಕ್ಕಾಗಿ ಅಲ್ಲಿ ಕೇಳಲಾಗಿದ್ದ ಮೊತ್ತ ಕಂಡು ಅವನ ಜಂಘಾಬಲವೇ ಉಡುಗಿಹೋಯಿತು. ಪ್ರತಿ ತಿಂಗಳೂ ಅಷ್ಟು ಹಣ ಪೂರೈಸುವಷ್ಟರಲ್ಲಿ ಅವನು ಬರಿಗೈ ದಾಸನಾಗಿ ಹೋಗುತ್ತಿದ್ದ. ಪ್ರಮೋದನಿಗೆ ದೊಡ್ಡ ಶಾಕ್‌ ತಗುಲಿದಂತಾಗಿತ್ತು. ಅನೂಷಾ ಇಂಥ ದಾಷ್ಟೀಕ ಹೆಜ್ಜೆ ಇಡಬಹುದೆಂದು ಅವನೆಂದೂ ನೆನೆಸಿರಲಿಲ್ಲ. ನನಗಿಂತಲೂ ನಾನು ಗಳಿಸುವ ಡಾಲರ್‌ ಅವಳಿಗೆ ಹೆಚ್ಚು ಪ್ರಿಯವಾಯಿತೇ? ಅವಳಿಗೆ ನಿಜಕ್ಕೂ ಅದೇ ಬೇಕಿದ್ದರೆ ತನ್ನೆಲ್ಲ ಹಣ ಅವಳಿಗೇ ಹೋಗಲಿ ಎಂಬ ಬೇಸರದಲ್ಲಿ ಅವನು ಆ ಕಾಗದಕ್ಕೆ ಸಹಿ ಹಾಕಿ ವಾಪಸ್ಸು ಕಳುಹಿಸಿದ. ಆದರೆ ವಾಸ್ತವ ಸಂಗತಿ ಎಂದರೆ, ಜೀವನಾಂಶದ ಹಣ ಈ ಪಾಟಿ ದೊಡ್ಡದು ಎಂದು ಅನೂಷಾಳಿಗೆ ಗೊತ್ತೇ ಇರಲಿಲ್ಲ. ಅದು ಅವಳ ಮಾವನ ಕುತಂತ್ರವಾಗಿತ್ತು. ಇಬ್ಬರೂ ಒಪ್ಪಿಗೆಯ ಸಹಿ ಮಾಡಿದ ಮೇಲೆ ಇನ್ನೇನಿದೆ? ಭಾರತದಲ್ಲಾಗಿದ್ದರೆ ಇನ್ನೂ ತಡವಾಗುತ್ತಿತ್ತೇನೋ, ಅಲ್ಲಿ ವಿಚ್ಛೇದನದ ಪ್ರಕರಣಗಳು ಬೇಗನೇ ಮುಗಿಯುತ್ತವೆ. ನಮ್ಮ ದೇಶದಲ್ಲಿ ಕೆಲವೊಮ್ಮೆ ವರ್ಷಗಳೇ ಹಿಡಿಯುತ್ತವೆ. ಅಂತೂ ಅವರ ಮಧ್ಯೆ ಇದ್ದ ಬೆಸುಗೆಯ ಕೊಂಡಿ ಮುರಿದಿತ್ತು. ಈ ಆಘಾತಕರ ಘಟನೆಯಿಂದ ಪ್ರಮೋದ್‌ ನಿಜಕ್ಕೂ ಜರ್ಝರಿತನಾಗಿದ್ದ.

ಅನೂಷಾಳ ತಾಯಿ ತಂದೆಯರಿಗೆ ಅವಳ ಸೋದರಮಾವ ಏನು ಕಾರಣ ನೀಡಿ ಒಪ್ಪಿಸಿದ್ದರೋ ಏನೋ…. ಮೇಲ್ನೋಟಕ್ಕೆ ಪ್ರಮೋದನನ್ನು ಮಹಾಕ್ರೂರಿ ಎಂದು ಬಿಂಬಿಸಲಾಗಿತ್ತು. ಅನೂಷಾಳಿಗೆ ಅಂಥ ಪಾಪಿಯಿಂದ ಮುಕ್ತಿ ಕೊಡಿಸಿದ್ದೇ ಒಳ್ಳೆಯದೆಂದು ತಿಳಿಸಿದ್ದರು.

ಪ್ರಮೋದನ ತಾಯಿತಂದೆಯರಿಗೆ ಈ ವಿಷಯ ತಿಳಿದಾಗ ಶಾಕ್‌ ಹೊಡೆದಂತಾಗಿತ್ತು. ಇಬ್ಬರೂ ಸ್ವಲ್ಪ ತಡಮಾಡದೆ, ಮಗನ ಬಳಿ ಸಿಡ್ನಿಗೆ ಹಾರಿಬಂದರು. ಪ್ರಮೋದ್‌ ಮಾನಸಿಕವಾಗಿ ಕುಸಿದುಹೋಗಿದ್ದ. ಸುದೀರ್ಘ ರಜೆಯ ಮೇಲೆ ಅವನು ತಾಯಿ ತಂದೆ ಜೊತೆ ಬೆಂಗಳೂರಿಗೆ ಹೊರಟುಬಂದಿದ್ದ. ಅಂತೂ ಒಂದು ತಿಂಗಳಲ್ಲಿ ತಾಯಿ ತಂದೆಯರ ಅಕ್ಕರೆಯ ಕಾರಣ, ಪ್ರಮೋದ್‌ ಎಷ್ಟೋ ಸುಧಾರಿಸಿಕೊಂಡ. ಅದರ ಮರು ತಿಂಗಳು ಅನಿವಾರ್ಯವಾಗಿ ಕೆಲಸಕ್ಕಾಗಿ ಅವನು ಸಿಡ್ನಿಗೆ ಮರಳಲೇಬೇಕಿತ್ತು. ಅವನ ದುಃಖ ಪೂರ್ತಿ ಕಡಿಮೆ ಆಗಿರಲಿಲ್ಲ, ಆದರೆ ತನ್ನನ್ನು ತಾನು ನಿಯಂತ್ರಿಸಿಕೊಂಡು ಕೆಲಸದಲ್ಲಿ ತೊಡಗಿಕೊಳ್ಳುವಷ್ಟು ಚುರುಕಾದ. ಅನೂಷಾಳ ನೆನಪು ಮಾಡಿಕೊಳ್ಳಲಿಕ್ಕೂ ಅವನಿಗೆ ಇಷ್ಟವಿರಲಿಲ್ಲ. ಬೆಳಗ್ಗಿನಿಂದ ರಾತ್ರಿ 8 ಗಂಟೆವರೆಗೂ ಆಫೀಸಿನಲ್ಲಿ ಹೇಗೋ ಕೆಲಸದ ಒತ್ತಡದಿಂದ ಸಮಯ ಕಳೆಯುತ್ತಿತ್ತು. ಆದರೆ ರಾತ್ರಿ ಮನೆಗೆ ಬಂದಾಗ ಒಂಟಿತನ ಕಾಡುತ್ತಿತ್ತು. ವಿಚ್ಚೇದನದ ಬಳಿಕ ಪ್ರಮೋದನಿಂದ ಪಡೆದ ಹಣದ ಮೊತ್ತವನ್ನು ರಾಮರಾವ್ ‌ಅನೂಷಾಳಿಗೆ ಒಪ್ಪಿಸಿದಾಗ, ಅವಳು ಹೌಹಾರಿದಳು. ಮಾವ, `ನೋಡಿದೆಯಾ…. ನಾನೆಂಥ ಸಮರ್ಥ ವಕೀಲ, ನಿನಗೆ ಸೇರಬೇಕಾದ ಹಣವನ್ನು ಹೇಗೆ ಕಷ್ಟಪಟ್ಟು ಕೊಡಿಸಿದ್ದೇನೆ,’ ಎಂಬಂತೆ ಅವಳಿಂದ ಹೊಗಳಿಕೆ ಸ್ವೀಕರಿಸಲು ನಸುನಗುತ್ತಾ ನಿಂತರು.

ಆದರೆ ಇದು ತನಗೆ ದೊರೆತ ಗೆಲುವಲ್ಲ… ಕೇವಲ ಸೋಲು ಎನಿಸಿತವಳಿಗೆ. ಅವಳು ಚಡಪಡಿಸುತ್ತಾ ವೇದನೆಯಿಂದ ಹೇಳಿದಳು, “ಮಾಮ….. ನೀವು ಇದೇನು ಮಾಡಿಬಿಟ್ಟಿರಿ, ನನಗೆ ಪ್ರಮೋದ್‌ ಹಣ ಖಂಡಿತಾ ಬೇಕಿರಲಿಲ್ಲ!”

“ಅವನಿಗೆ ನಾವು ಸರಿಯಾಗಿ ಪಾಠ ಕಲಿಸಿದ್ದೇವೆ, ನಿನಗೆ ದೊಡ್ಡ ಮೊತ್ತದ ಹಣ ಸಿಕ್ಕಿದೆ ಅಂತ ನೀನು ಖುಷಿ ಪಡಬೇಕಲ್ಲವೇನಮ್ಮ….? ನಿನಗೆ ಸಿಕ್ಕಿರುವ ದೊಡ್ಡ ಮೊತ್ತದಿಂದ ನಿನ್ನ ಮುಂದಿನ ವಿದ್ಯಾಭ್ಯಾಸ, ಸುಭದ್ರ ಭವಿಷ್ಯ…. ಯಾವುದಕ್ಕೂ ತೊಂದರೆ ಇಲ್ಲ. ಅದಕ್ಕಾಗಿ ನೀನು ಯಾರನ್ನೂ ಅವಲಂಬಿಸಬೇಕಿಲ್ಲ.”

“ಮಾಮ, ನೀವು ನನ್ನನ್ನು ಕೇಳದೆ ಈ ಜೀವನಾಂಶಕ್ಕೆ ಯಾಕೆ ಕ್ಲೇಮ್ ಮಾಡಿದ್ರಿ? ಪ್ರಮೋದ್‌ ನನ್ನ ಬಗ್ಗೆ ಎಷ್ಟು ಚೀಪಾಗಿ ಭಾವಿಸರಬಹುದು….?”

ಅನೂಷಾಳ ಈ ಆಪಾದನೆಯಿಂದ ರಾಮರಾವ್ ಗೆ ಬಹಳ ಕಸಿವಿಸಿ ಅನಿಸಿತು. ಗಂಡನನ್ನು ಖಳನಾಗಿ ತೋರಿಸಿಕೊಟ್ಟವಳಿಗೆ ಅವಳ ಕಷ್ಟಗಳಿಂದ ಮುಕ್ತಿ ಕೊಡಿಸಿದರೆ, ಈಗ ತನ್ನನ್ನೇ ದೋಷಿ ಎಂಬಂತೆ ಹೀಗೆ ಹೇಳುವುದೇ?

ಅನೂಷಾಳಿಗೆ ಈಗ ಸ್ಪಷ್ಟವಾಗಿ ತನ್ನ ತಪ್ಪುಗಳ ಅರಿವಾಗತೊಡಗಿತು. ಕೋಪಾವೇಶದಲ್ಲಿ ತಾನು ತನ್ನ ಕಾಲುಗಳ ಮೇಲೆ ಕೊಡಲಿ ಹಾಕಿಕೊಂಡೆ ಎನಿಸಿತು. ಆ ದಿನ ನಡೆದ ವಿಷಯವನ್ನು ಮಾಮ ಮಾಮಿಗೆ ಸ್ಪಷ್ಟವಾಗಿ ಹೇಳದೆ, ಗಂಡನೇ ಅಪರಾಧಿ ಎಂಬಂತೆ ಬಿಂಬಿಸುತ್ತಾ, ಒಂದು ದಿನ ಅವನನ್ನು ನೋಡಲು ಹೋಗದೆ, ಅವನಿಗೆ ಫೋನ್‌ ಸಹ ಮಾಡದೆ ತಾನು ತಪ್ಪು ಮಾಡಿದೆ ಅನಿಸಿತು. ಈಗ ಪ್ರಮೋದನ ಒಳ್ಳೆಯ ಗುಣಗಳು ಕಾಣಿಸತೊಡಗಿತು.

ಮನೆಯ ಕೆಲಸಗಳಿಗೆ ಅವನು ಸಹಾಯ ಮಾಡದೆ ಇರಬಹುದು, ಆದರೆ ಪ್ರಮೋದ್‌ ಎಂದೂ ಅವಳ ಮೇಲೆ ರೇಗಾಡಿ ಕಿರುಚಾಡಿ ಬೈದಿರಲಿಲ್ಲ. ಆಗ ಉಂಟಾಗಿದ್ದ ಸಮಸ್ಯೆ, ಪರಿಹಾರವೇ ಇಲ್ಲದಂಥ ಗಂಭೀರ ಸ್ವರೂಪದ್ದೇನೂ ಆಗಿರಲಿಲ್ಲ…….ಅಷ್ಟಲ್ಲದೆ ತಾನು ಮನೆಬಿಟ್ಟು ಬರುವಾಗ ಪ್ರಮೋದ್‌ ಹಲವಾರು ಸಲ ಹೀಗೆ ಮಾಡಬಾರದೆಂದೂ, ಡಾಕ್ಟರ್‌ ಬಳಿ ಹೋಗೋಣ ಎಂದು ಹೇಳುತ್ತಿದ್ದುದೆಲ್ಲ ಮತ್ತೆ ಮತ್ತೆ ನೆನಪಿಗೆ ಬಂದು, ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ತಾನು ಆವೇಶಪಟ್ಟು ಇಂಥ ದೊಡ್ಡ ಹೆಜ್ಜೆ ಇಡಬಾರದಿತ್ತು. ಇದರಿಂದ ತನ್ನ ಭವಿಷ್ಯದ ಒಂಟಿತನದ ಬಗ್ಗೆ ಯೋಚಿಸಬೇಕಿತ್ತು ಎಂದು ತನ್ನ ಮೂರ್ಖತನದ ಬಗ್ಗೆ ಹಳಿದುಕೊಂಡಳು. ಮುರಿದುಹೋದ ತನ್ನ ಸಾಂಸಾರಿಕ ಜೀವನ ಮತ್ತೆ ಹಿಂದಿನಂತೆ ಸರಿಹೋಗುವುದೋ ಇಲ್ಲವೋ ಎನಿಸಿತು. ಅನೂಷಾಳ ಮನದಲ್ಲಿ ಇಂಥದೇ ವಿಚಾರಗಳು ಮತ್ತೆ ಮತ್ತೆ ತಾಕಲಾಟ ನಡೆಸಿದವು.

ತಾನೇ ಒಮ್ಮೆ ಖುದ್ದಾಗಿ ಹೋಗಿ ಪ್ರಮೋದನ ಬಳಿ ಕ್ಷಮೆ ಕೇಳಬೇಕು ಎನಿಸಿತು. ಆದರೆ ಈಗ ಕ್ಷಮೆ ಕೇಳಿ ಲಾಭವಾದರೂ ಏನು? ಇಷ್ಟೆಲ್ಲ ಅವಮಾನಗಳಾದ ಮೇಲೆ ಅವನು ಖಂಡಿತಾ ತನ್ನನ್ನು ಕ್ಷಮಿಸಲಾರ ಎನಿಸಿತು. ಹೀಗೆ ಬರಿದೇ ಯೋಚಿಸುತ್ತಾ ಕೂರುವ ಬದಲು, ತಾನು ಅವನನ್ನು ಭೇಟಿಯಾಗುವುದೇ ಒಳ್ಳೆಯದು ಎಂದುಕೊಂಡಳು. ಹೀಗಾಗಿ ಅವಳು ಹೇಗೋ ಧೈರ್ಯ ಮಾಡಿ ಅವನಿಗೆ ಇಮೇಲ್ ‌ಮೂಲಕ ಕ್ಷಮಾಪಣಾ ಪತ್ರ ಕಳುಹಿಸಿದಳು.

ಅನೂಷಾಳ ಮೇಲ್ ಕಂಡು ಪ್ರಮೋದ್‌ ಚಕಿತನಾದ. ಹೀಗಾಗಿ ಅದನ್ನು ಓದುವ ಗೊಡವೆಗೂ ಹೋಗದೆ, “ಈಗ ನಿನಗೂ ನನಗೂ ಯಾವ ವಿಧವಾದ ಸಂಬಂಧ ಇಲ್ಲ. ಬಹಳ ಕಷ್ಟುಪಟ್ಟು, ಅಪಮಾನಗಳನ್ನು ಸಹಿಸಿ, ನೀನು ಕೇಳಿದ ಜೀವನಾಂಶ ಹೊಂದಿಸಿ ಕೊಟ್ಟಿದ್ದೇನೆ. ಆದ್ದರಿಂದ ನನ್ನ ಜೀವನದಲ್ಲಿ ಮತ್ತೆ ಇಣುಕುವ ವ್ಯರ್ಥ ಪ್ರಯತ್ನ ಮಾಡಬೇಡ!” ಎಂದು ಉತ್ತರಿಸಿದ.

ಆದರೆ ಇದನ್ನು ಸಹಜವಾಗಿಯೇ ನಿರೀಕ್ಷಿಸಿದ್ದ ಅನೂಷಾ, ಅದರಿಂದ ವಿಚಲಿತಗೊಳ್ಳದೆ, ಅವನಿಗೆ ಮತ್ತೆ ಮತ್ತೆ ಕ್ಷಮಾಪಣಾ ಪತ್ರಗಳನ್ನು ಕಳುಹಿಸತೊಡಗಿದಳು. ಅವಳು ತಾನೆಂದೂ ಅವನ ಆಸ್ತಿ, ಹಣ ಬಯಸಿರಲಿಲ್ಲ, ತಾನು ವಿಚ್ಛೇದನದ ಪತ್ರ ಪರಿಶೀಲಿಸದೆ ಸುಮ್ಮನೆ ಹಾಗೆ ಅದರ ಮೇಲೆ ಸಹಿ ಮಾಡಿದ್ದೆ ಎಂದು ವಿವರಿಸಿದಳು. ಪ್ರಮೋದ್‌ ಇವಳ ಮೇಲ್ಸ್ ಓದುತ್ತಿದ್ದ, ಆದರೆ ಎಂದೂ ಜವಾಬು ಕೊಡುತ್ತಿರಲಿಲ್ಲ.

ಹೀಗೆ ಒಂದು ವಾರದ ಮೇಲೆ ಕಳೆಯಿತು. ಒಮ್ಮೆ ಪ್ರಮೋದ್‌ ಕೆಲಸ ಮುಗಿಸಿ ರಾತ್ರಿ 8 ಗಂಟೆ ಹೊತ್ತಿಗೆ ಮನೆಗೆ ಮರಳಿದಾಗ, ಬಾಗಿಲ ಬಳಿ ಅನೂಷಾ ಅವನಿಗಾಗಿ ಕಾದು ನಿಂತಿದ್ದಳು. ಅವನು ಹೊರಗೆ ನಿಂತು ಯಾವ ಗಲಾಟೆಯನ್ನೂ ಮಾಡಲು ಬಯಸಲಿಲ್ಲ. ಹೀಗಾಗಿ ಅವಳು ಒಳಗೆ ಬರಲು ಅವಕಾಶ ಮಾಡಿಕೊಟ್ಟ.ಒಳಗೆ ಬಂದ ಅನೂಷಾ ಅವನ ಕೈ ಹಿಡಿದು ಬಿಕ್ಕಳಿಸತೊಡಗಿದಳು, “ಪ್ರಮೋದ್‌, ದುಡ್ಡಿನ ವಿಷಯವಾಗಿ ನನಗೆ ಬಹಳ ನಾಚಿಕೆ ಆಗಿದೆ. ಏನೇ ನಡೆದಿರಲಿ, ಅದನ್ನು ಒಂದು ಕೆಟ್ಟ ಕನಸು ಎಂದು ದಯವಿಟ್ಟು ಮರೆತುಬಿಡು….. ನಾವಿಬ್ಬರೂ ನಮ್ಮ ಸಾಂಸಾರಿಕ ಬದುಕಿಗೆ ಮತ್ತೊಂದು ಅವಕಾಶ ಕೊಟ್ಟು ನೋಡಬಾರದೇಕೆ? ಅಂದ್ರೆ…. ನಾವು ಮತ್ತೆ ಮದುವೆ ಆಗಬಾರದೇಕೆ?”

“ಆಗ ನೀನು ನನ್ನನ್ನು ಮತ್ತೆ ಲೂಟಿ ಮಾಡಬಹುದಲ್ಲವೇ?” ಅವನ ವ್ಯಂಗ್ಯ ತೀವ್ರವಾಗಿತ್ತು. ಪ್ರಮೋದನ ಉತ್ತರದಿಂದ ಅನೂಷಾ ಬಸವಳಿದು ಹೋದಳು. ಆದರೆ ತಕ್ಷಣ ಅವಳು ತನ್ನನ್ನು ತಾನು ಸಂಭಾಳಿಸಿಕೊಂಡಳು.

ತನ್ನ ಅಹಂಕಾರವನ್ನು ಬದಿಗೊತ್ತಿ ಅವಳು ಶಾಂತವಾಗಿ ಹೇಳಿದಳು, “ಪ್ರಮೋದ್‌, ದಯವಿಟ್ಟು ಖಂಡಿತಾ ಹಾಗೆ ಹೇಳಬೇಡ. ಆ ಕುರಿತಾಗಿ ನಾನು ಗ್ಯಾರಂಟಿ ನೀಡುತ್ತೇನೆ,” ಎನ್ನುತ್ತಾ ಅವನು ತನ್ನ ಹೆಸರಲ್ಲಿ ಕಳುಹಿಸಿದ್ದ ಚೆಕ್ಕನ್ನು ವಾಪಸ್ಸು ನೀಡಿದಳು. ಆದರೂ ಪ್ರಮೋದ್‌ ಒಂದಿಷ್ಟೂ ಪ್ರತಿಕ್ರಿಯೆ ತೋರಲಿಲ್ಲ. ಅನೂಷಾ ಮೌನವಾಗಿ ಎದ್ದು ನಿಂತಳು. ಅವಳು ಅವನನ್ನು ಒಮ್ಮೆ ಆಪಾದಮಸ್ತಕವಾಗಿ ನೋಡಿದಳು. ಏನೂ ಮಾತನಾಡದೆ ಅವಳು ಮೌನವಾಗಿ ಹೊರಗಡೆ ನಡೆಯತೊಡಗಿದಳು. ಒಂದು ಕ್ಷಣದಲ್ಲಿ ಅಲ್ಲಿಂದ ಎದ್ದು ಬಂದ ಪ್ರಮೋದ್‌, “ಅನೂ…. ದಯವಿಟ್ಟು ನನ್ನನ್ನು ಕ್ಷಮಿಸು….. ನನ್ನ ಕಡೆಯಿಂದಲೂ ತಪ್ಪಿದೆ…. ಏನೇ ನಡೆದಿರಲಿ, ಅದನ್ನು ಮರೆತು ನಾವು ಹೊಸ ಜೀವನ ಆರಂಭಿಸೋಣ…… ನಮ್ಮ ಹೊಸ ಜೀವನ ಇನ್ನಷ್ಟು ಉತ್ತಮವಾಗಿರುವಂತೆ ಪ್ರಯತ್ನಪಟ್ಟು ನಡೆದುಕೊಳ್ಳೋಣ…. ಅಂದ್ರೆ ನಾವಿಬ್ಬರೂ ಮತ್ತೆ ಮದುವೆ ಆಗೋಣ….” ಎನ್ನುತ್ತಾ ಅವಳನ್ನು ಬರಸೆಳೆದು ಅಪ್ಪಿಕೊಂಡ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ