ನಾಗು ನನ್ನ ಮುಂದೆ ಕಾಫಿ ಲೋಟ ಇಟ್ಟಳು. ಅಷ್ಟರಲ್ಲಿ ಪಕ್ಕದ ಮನೆಯ ಮಾಲತಿ ಕರೆದಳು, ``ಸುಮಾ, ಇಲ್ಲಿ ಬಾ ನಿನಗೆ ಏನೋ ತೋರಿಸ್ಬೇಕು.''
``ಬಂದೆ,'' ನಾನು ಕೂಡಲೇ ಉತ್ತರಿಸಿದೆ. ನಾನು ಉತ್ತರಿಸಲಿಲ್ಲವೆಂದರೆ ಅವಳು ಬಾಗಿಲು ತಟ್ಟಲು ಶುರು ಮಾಡುತ್ತಾಳೆಂದು ನನಗೆ ಗೊತ್ತಿತ್ತು. ನಿನ್ನೆ ತಾನೆ ಅವಳ ಗಂಡ ಮುಂಬೈನಿಂದ ಬಂದಿದ್ದಾರೆ. ಅವಳಿಗೆ ಒಂದಷ್ಟು ವಸ್ತುಗಳನ್ನು ತಂದಿರಬಹುದು. ಅವನ್ನು ನನಗೆ ತೋರಿಸಬಹುದು. ನಾನು ನಾಗುವಿಗೆ, ``ಇನ್ನೊಂದು ಕಪ್ ಕಾಫಿ ಮಾಡಿಕೊಂಡು ಮಾಲತಿಯ ಮನೆಗೇ ತೆಗೆದುಕೊಂಡು ಬಾ. ಇಬ್ರೂ ಅಲ್ಲೇ ಕುಡೀತೀವಿ,'' ಎನ್ನುತ್ತಾ, ನನ್ನ ಕಾಫಿ ಲೋಟ ಹಿಡಿದು ಮಾಲತಿಯ ಮನೆಗೆ ಹೋದೆ.
``ಬಾ....ಬಾ ಕೂತ್ಕೋ.... ನೋಡು ಈ ಸೀರೆ ಎಷ್ಟು ಚೆನ್ನಾಗಿದೆ ಅಲ್ವಾ!''
``ಹೌದು. ತುಂಬಾ ಚೆನ್ನಾಗಿದೆ. ಮುಂಬೈನಿಂದ ಕಿರಣ್ ಇದನ್ನು ತಂದುಕೊಟ್ರಾ?'' ನಾನು ಕೇಳಿದೆ.
``ಇನ್ಯಾರು ತರ್ತಾರೆ? ನನಗೆ ಇರೋದು ಅವರೊಬ್ಬರೇ. ಎದ್ರೆ ಕೂತರೆ ಅವರಿಗೆ ನನ್ನದೇ ಚಿಂತೆ. ನೋಡು ಈ ಸಾರಿ 3-3 ನೈಟಿಗಳನ್ನೂ ತಂದಿದ್ದಾರೆ. ಇದನ್ನು ನಿನ್ನೆ ರಾತ್ರಿ ಹಾಕ್ಕೊಂಡಿದ್ದೆ. ಏನು ಸೆಕ್ಸಿ ನೈಟಿ ಅಂತೀಯ. ಮಜಾ ಬಂತು. ತಿಂಗಳಿಗೆ 1 ಸಾರಿ ಇವರು ಬರ್ತಾರೆ. ಇವರು ತಂದುಕೊಟ್ಟಿದ್ದನ್ನು ಹಾಕ್ಕೊಂಡು ತೋರಿಸ್ತೀನಿ,'' ಮಾಲತಿ ಖುಷಿಯಿಂದ ಹೇಳುತ್ತಿದ್ದಳು.
``ನೈಟಿಗಳು ತುಂಬಾ ಚೆನ್ನಾಗಿವೆ. ಬಹಳ ರಿಚ್ ಲುಕ್ ಕೊಡ್ತಿವೆ,'' ನಾನು ನಗುತ್ತಾ ಹೇಳಿದೆ.
ಅಷ್ಟರಲ್ಲಿ ನಾಗು ಇನ್ನೊಂದು ಕಪ್ ಕಾಫಿ ತಂದಳು. ನಾನೂ ಮಾಲತಿ ಕಾಫಿ ಕುಡಿಯತೊಡಗಿದೆ. ಮಾಲತಿ ಒಂದೊಂದಾಗಿ ನನಗೆ ಎಲ್ಲ ವಸ್ತುಗಳನ್ನೂ ತೋರಿಸತೊಡಗಿದಳು. ಆದರೆ ನನ್ನ ಮನಸ್ಸು ನೈಟಿಗಳಲ್ಲೇ ಮುಳುಗಿತ್ತು.
ನಾನು ಆಶ್ಚರ್ಯಚಕಿತಳಾಗಿದ್ದೆ. ಅಂತಹ ನೈಟಿ ನನ್ನ ಬಳಿ ಇಲ್ಲವೆಂದಲ್ಲ. ಆದರೆ ನಾವಿರುವ ಮನೆ ಅಥವಾ ನಮ್ಮ ಅಂತಸ್ತಿನವರ ಮನೆಗಳಲ್ಲಿ ಇಂತಹ ನೈಟಿಗಳಿಂದ ಯಾವುದೇ ಪ್ರಯೋಜನವಿಲ್ಲ. ಆದರೂ 2 ಕೋಣೆಗಳಿರುವ ಫ್ಲ್ಯಾಟ್‌ಗಳಲ್ಲಿರುವ ನಮ್ಮಂತಹವರು ಇಂತಹ ಡ್ರೆಸ್‌ಗಳನ್ನು ಧರಿಸಲು ಹಂಬಲಿಸುತ್ತೇವೆ. ಯಾವುದೇ ಡ್ರೆಸ್ ಧರಿಸಲು ನಮಗೆ ಒಂದು ಪರಿಸರ ಬೇಕು. ಅದು ನಮಗೆ ಸಿಗುವುದಿಲ್ಲ. ರಾತ್ರಿ ಏಕಾಂತವಾಗಿ ಗಂಡನೊಂದಿಗೆ ಇರಲೂ ಸಾಧ್ಯವಿಲ್ಲ. ಏಕೆಂದರೆ ಯಾವುದೇ ಹೊತ್ತಿನಲ್ಲಿ ನೆಂಟರು ಗಂಡ ಹೆಂಡತಿಯ ನಡುವೆ ವಕ್ಕರಿಸುತ್ತಾರೆ. ನಾವು ನಮ್ಮ ಮನೆಯನ್ನು ದೊಡ್ಡದು ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾವು ನಮ್ಮ ಪ್ರೀತಿಯ ಎಲ್ಲೆಗಳನ್ನು ಬಂಧಿಸಿದ್ದೇವೆ. ಮತ್ತೆ ಕಿರಣ್‌ಗೆ ಈ ಆಲೋಚನೆ ಹೇಗೆ ಬಂತು? ಕಿರಣ್‌ನ ಬ್ಯಾಕ್ ಗ್ರೌಂಡ್ ಅಷ್ಟು ಚೆನ್ನಾಗಿಲ್ಲ. ಅದಲ್ಲದೆ ಅವನು ಪ್ರಾಪರ್ಟಿ ಡೀಲಿಂಗ್ ಕೆಲಸ ಮಾಡುತ್ತಾನೆ. ಅದೊಂದು ಡ್ರೈ ಬಿಸ್‌ನೆಸ್.
ಅದರಲ್ಲಿ ಗ್ಲಾಮರ್ ಹೆಸರೇ ಇರುವುದಿಲ್ಲ. ಮತ್ತೆ ಇದೆಲ್ಲಾ....? ಮಾಲತಿ ಎಂದಿನಂತೆ ಕಿರಣ್‌ನ ಗುಣಗಾನ ಮಾಡುತ್ತಲೇ ಇದ್ದಳು. ಅಷ್ಟರಲ್ಲಿ ನಮ್ಮ ಮನೆಯಲ್ಲಿ ಫೋನ್ ರಿಂಗ್ ಆಯಿತು. ನನಗೆ ಅಲ್ಲಿಂದ ಏಳಲು ನೆಪ ಸಿಕ್ಕಿತು.
``ಫೋನ್ ರಿಂಗ್ ಆಗ್ತಿದೆ. ನಾನು ಬರ್ತೀನಿ,'' ಎಂದು ಹೇಳಿ ಮಾಲತಿಯ ಉತ್ತರಕ್ಕೂ ಕಾಯದೆ ಮನೆಗೆ ಹಿಂತಿರುಗಿದೆ.