ಉಣ್ಣೆ ವಸ್ತ್ರಗಳ ಅಂದಚೆಂದ ಖಾಯಂ ಆಗಿರಿಸಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ :
ಉಲ್ಲನ್ ಡ್ರೆಸೆಸ್ ಎತ್ತಿರಿಸುವ ಮೊದಲು, ಅವನ್ನು ಸದಾ ಮೈಲ್ಡ್ ಡಿಟರ್ಜೆಂಟ್‌ನಲ್ಲಿ ಚೆನ್ನಾಗಿ ಒಗೆದು, ಒಣಗಿಸಿ ಎತ್ತಿಡಿ.
ಇವನ್ನು ಎತ್ತಿಡುವಾಗ ಸ್ವಲ್ಪ ತೇವಾಂಶ ಇರಲೇಬಾರದು, ಇಲ್ಲದಿದ್ದರೆ ಬೂಷ್ಟು ಹಿಡಿದೀತು.
ಸಾಧ್ಯವಾದಷ್ಟೂ ಉಣ್ಣೆಯ ಉಡುಗೆಗಳನ್ನು ಬೆತ್ತದ ಪೆಟ್ಟಿಗೆಗಳಲ್ಲೇ ಇರಿಸಲು ಯತ್ನಿಸಿ, ಅವುಗಳ ದೀರ್ಘ ಬಾಳಿಕೆಗೆ ಇದು ಪೂರಕ.
ಹಳೆಯ ಟ್ರಂಕುಗಳಿದ್ದರೆ ಅವುಗಳಲ್ಲಿ ನ್ಯೂಸ್ ಪೇಪರ್ ಹರಡಿ, ಉಣ್ಣೆಯ ಉಡುಗೆಗಳಿರಿಸಿ, ಮಧ್ಯೆ ನುಸಿ ಗುಳಿಗೆಗಳನ್ನು ಹಾಕಿಡಬೇಕು. ಯಾವುದೇ ಕೀಟ ಅದರೊಳಗಿಳಿದು ಮೊಟ್ಟೆ ಇಡದಂತೆ ಆಗಾಗ ಪರೀಕ್ಷಿಸುತ್ತಿರಿ.
ಉಣ್ಣೆಯ ಉಡುಪಗಳನ್ನೆಂದೂ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಡಬೇಡಿ. ಇದರಿಂದ ಈ ಉಡುಪುಗಳಿಗೆ ತೇವಾಂಶ ತಗುಲುವ ಸಂಭವವಿದೆ, ಮುಂದೆ ಕ್ರಿಮಿಕೀಟಗಳಿಗೆ ಬಲಿಯಾಗಬಹುದು.
ಇರುವೆ, ಜೇಡ, ಜಿರಲೆ ಮುಂತಾದ ಕ್ರಿಮಿಕೀಟಗಳು ಆಕ್ರಮಿಸದಂತೆ ಅಗತ್ಯವಾಗಿ ಅವುಗಳ ನಡುವೆ ನುಸಿಗುಳಿಗೆ ಹರಡುತ್ತಿರಬೇಕು.
ಫರ್ ಕೋಟ್ ಮತ್ತು ಲೆದರ್ ಜಾಕೆಟ್ ಬಹಳಷ್ಟು ನಾಜೂಕಾಗಿರುತ್ತವೆ, ಹೀಗಾಗಿ ಇನ್ನು ಮಖಮಲ್ ಬಟ್ಟೆಯಲ್ಲಿ ಸುತ್ತಿಡಿ.
ಉಣ್ಣೆಯ ಉಡುಗೆಗಳನ್ನೆಂದೂ ಹ್ಯಾಂಗರ್‌ಗಳಲ್ಲಿ ನೇತುಹಾಕಿ ಬಹಳ ಕಾಲ ಇಡಬೇಡಿ, ಇದರಿಂದ ಅವು ಹರಡಿಕೊಂಡು ಲೂಸ್ ಆಗುತ್ತವೆ, ಚೆನ್ನಾಗಿ ಮಡಿಚಿಡಿ.
ಅಕಸ್ಮಾತ್ ಸ್ವೆಟರ್‌ನಲ್ಲಿ ಎಲ್ಲಾದರೂ ರಂಧ್ರ ಉಂಟಾಗಿದ್ದರೆ, ಬಟನ್ ಕಿತ್ತುಹೋಗಿದ್ದರೆ, ಅವನ್ನು ಎತ್ತಿರಿಸುವ ಮೊದಲೇ ಸರಿಪಡಿಸಬೇಕು, ಇಲ್ಲದಿದ್ದರೆ ರಂಧ್ರ ದೊಡ್ಡದಾದೀತು.
ಉಣ್ಣೆಯ ಉಡುಗೆಗಳ ಮೇಲೆ ಉಲ್ಲನ್ ಎಳೆಗಳು ಅಲ್ಲಲ್ಲಿ ಬಿಟ್ಟುಕೊಂಡಿದ್ದರೆ, ರೇಝರ್‌ಗೆ ಹೊಸ ಬ್ಲೇಡ್ ಹಾಕಿ, ಒಂದು ಬದಿಯಿಂದ ಇದರ ಮೇಲೆ ಕೈಯಾಡಿಸಿ. ಇದರಿಂದ ಎಳೆಗಳು ಸಮನವಾಗುತ್ತವೆ, ಸ್ವೆಟರ್ ಮಟ್ಟಸವಾಗಿ ಕಾಣುತ್ತದೆ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆಲ್ ಪೈನ್, ಜ್ಯಾನ್ ಪ್ಯಾಕ್ಸ್, ಫ್ಯಾಬ್ರಿಕೇನ್, ಇಕೋಸ್ಮಾರ್ಟ್ ಇತ್ಯಾದಿ ಹಲವು ಬಗೆಯ ಮೆಡಿಕಲ್ ಸ್ಪ್ರೇಗಳು ಲಭ್ಯವಿವೆ. ಉಲ್ಲನ್ ವಸ್ತ್ರಗಳನ್ನು ಕ್ರಿಮಿ ಕೀಟಗಳಿಂದ ಕಾಪಾಡಿಕೊಳ್ಳಲು ಅವುಗಳ ಮೇಲೆ ಇವನ್ನು ಸ್ಪ್ರೇ ಮಾಡಿ.
ಉಣ್ಣೆಯ ಉಡುಗೆಗಳನ್ನು ಎತ್ತಿಡುವಾಗ ಅದರ ಬಣ್ಣಗಳ ಕಡೆಯೂ ಗಮನವಿಡಿ. ಎಂದೂ ಲೈಟ್ ಕಲರ್ ಜೊತೆ ಡಾರ್ಕ್ ಕಲರ್ ಮಿಕ್ಸ್ ಮಾಡಬೇಡಿ. ಸಾಧ್ಯವಾದಷ್ಟೂ ವೈಟ್ ಜೊತೆ ಕ್ರೀಂ, ಸ್ಕೈ ಬ್ಲೂ ಜೊತೆ ಪರ್ಪಲ್, ಪಿಂಕ್ ಜೊತೆ ರೆಡ್, ಮೆರೂನ್ ಜೊತೆ ಗ್ರೀನ್, ಯೆಲ್ಲೋ ಕಲರ್‌ಗಳು ಬರುವಂತೆ ಜೋಡಿಸಿ.
ಸ್ಟೋರ್ ಮಾಡಲಾದ ಇಂಥ ಉಣ್ಣೆಯ ವಸ್ತ್ರಗಳನ್ನು ಸದಾ ಹೆಚ್ಚಿನ ಬೆಳಕು ಬೀಳದಂತೆ ಮರೆಯಾಗಿರಿಸಿ. ಏಕೆಂದರೆ ಹೆಚ್ಚಿನ ಬೆಳಕು ಅದರ ಬಣ್ಣದ ಮೇಲೆ ಪ್ರಭಾವ ಬೀರಬಹುದು.
ಸ್ವೆಟರ್ ಅಥವಾ ಜಾಕೆಟ್ ಜೊತೆ ಎಂದೂ ಟೋಪಿ, ಕುಲಾವಿ, ಸಾಕ್ಸ್, ಮಫ್ಲರ್ ಇತ್ಯಾದಿಗಳನ್ನು ಬೆರೆಸಬೇಡಿ.
ಉಣ್ಣೆಯ ವಸ್ತ್ರಗಳೊಂದಿಗೆ ಖಾಲಿ ಪರ್ಫ್ಯೂಂ ಬಾಟಲಿ ಇರಿಸಿ, ಆಗ ಈ ಬಟ್ಟೆಗಳಲ್ಲಿ ಸುಗಂಧ ತುಂಬಿರುತ್ತದೆ.
ಡೊಮೆಸ್ಟಿಕ್ ಟಿಪ್ಸ್
ಉಣ್ಣೆಯ ವಸ್ತ್ರಗಳನ್ನು ಕ್ರಿಮಿಕೀಟ, ತೇವಾಂಶದಿಂದ ರಕ್ಷಿಸಲು ಅದರ ಮೇಲೆ ಸ್ಛಟಿಕ (ಆ್ಯಲಂ) ಪುಡಿ ಮಾಡಿ ಉದುರಿಸಿ.
ಈ ವಸ್ತ್ರಗಳ ನಡುವೆ ನುಸಿಗುಳಿಗೆ ಮಾತ್ರವಲ್ಲದೆ, ಕರ್ಪೂರವನ್ನೂ ಸುತ್ತಿಡಬಹುದು, ಆಗ ಕೀಟಗಳ ಬಾಧೆ ಇರುವುದಿಲ್ಲ.
ಈ ವಸ್ತ್ರಗಳ ಮಧ್ಯೆ ಅಲ್ಲಲ್ಲಿ ಚಂದನದ ಚೂರುಗಳನ್ನೂ ಇಡಬಹುದು. ಇದರಿಂದ ಅವುಗಳಿಗೆ ಉತ್ತಮ ಸುಗಂಧ ತುಂಬಿಕೊಳ್ಳುತ್ತದೆ.
ಇವುಗಳ ಮಧ್ಯೆ ಒಣಗಿದ ಬೇವಿನೆಲೆ, ಪೇಪರ್‌ನಲ್ಲಿ ಸುತ್ತಿದ ತಂಬಾಕು ಇರಿಸುವುದರಿಂದಲೂ ಕೀಟಗಳ ಬಾಧೆ ಇರುವುದಿಲ್ಲ.
ಅಂಟವಾಳಕಾಯಿ ರಸ ಬೆರೆತ ನೀರಲ್ಲಿ ಉಣ್ಣೆಯ ವಸ್ತ್ರಗಳನ್ನು ನೆನೆಸಿ ಒಗೆಯುವುದರಿಂದ ಅವುಗಳ ಬಾಳಿಕೆ ಹೆಚ್ಚತ್ತದೆ.
ಚಳಿಗಾಲದಲ್ಲಿ ಇವನ್ನು ಗಮನಿಸಿ
ಯಾವುದೇ ಉಣ್ಣೆಯ ವಸ್ತ್ರವನ್ನೂ ಸತತ 10-12 ಗಂಟೆಗಳಿಗಿಂತ ಹೆಚ್ಚು ಹೊತ್ತು ಧರಿಸಿರಬೇಡಿ.
ಈ ವಸ್ತ್ರಗಳನ್ನು ಧರಿಸುವ ಮೊದಲು, ಬ್ರಶ್‌ನಿಂದ ಅದರ ಮೇಲೆ ಶುಚಿಗೊಳಿಸಿ. ಆಗ ಅಲ್ಲಿರುವ ಧೂಳು, ಮಣ್ಣು, ಕತ್ತರಿಸಿದ ಕೂದಲು, ಡ್ಯಾಂಡ್ರಫ್ ಇತ್ಯಾದಿ ದೂರವಾಗುತ್ತದೆ.
5-6 ಸಲ ಧರಿಸಿದ ನಂತರ ಉಣ್ಣೆಯ ಉಡುಪುಗಳನ್ನು ಅಗತ್ಯವಾಗಿ ಒಗೆಯಿರಿ.
ಹಾರ್ಶ್ ಡಿಟರ್ಜೆಂಟ್ ಬದಲು `ಈಝಿ’ ಲಿಕ್ವಿಡ್ ಕ್ಲೀನರ್ ಮುಂತಾದ ಉಲ್ಲನ್ ಡ್ರೆಸ್‌ಗಳಿಗಾಗಿಯೇ ಇವರು ಕ್ಲೀನಿಂಗ್ ಐಟಮ್ಸ್ ಬಳಸಿರಿ.
ಅಕಸ್ಮಾತ್ ಒಗೆದಿಲ್ಲದ ಸ್ವೆಟರ್, ಶಾಲು ಧರಿಸಬೇಕಾಗಿ ಬಂದರೆ, ಅಗತ್ಯವಾಗಿ ಅವನ್ನು ಬಿಸಿಲಿಗೆ ಒಡ್ಡಿ ನಂತರ ಬಳಸಿರಿ.
ಅಕಸ್ಮಾತ್ ಇವುಗಳ ಮೇಲೆ ಕಲೆ ಗುರುತುಗಳಾದಲ್ಲಿ ತಕ್ಷಣ ತಣ್ಣೀರಿನಿಂದ ತೊಳೆಯಿರಿ ಹಾಗೂ ಆದಷ್ಟೂ ವಾಷಿಂಗ್ ಮೆಷಿನ್ ಬಳಸಬೇಡಿ.
ಅಕಸ್ಮಾತ್ ಜಿಡ್ಡಿನಂಶ ತಗುಲಿದರೆ, ಆ ಭಾಗಕ್ಕೆ ಧಾರಾಳ ಟ್ಯಾಲ್ಕಂ ಪೌಡರ್ ಚಿಮುಕಿಸಿ, ಮಡಿಚಿಡಿ. 2 ದಿನಗಳ ನಂತರ ಜಿಡ್ಡು ತಾನಾಗಿ ಹೋಗಿರುತ್ತದೆ. ನಂತರ ಒಗೆದು ಬಳಸಿರಿ.
– ಎನ್. ಅಮೃತಾ