ಕೊನೆಗೂ ಮುಳುಗಿಸಿದ ಅತಿ ಮಹತ್ವಾಕಾಂಕ್ಷೆ
ಮಹಿಳೆಯರು ತಮ್ಮ ಮಕ್ಕಳಿಗಾಗಿ ಹೆಚ್ಚು ಹೆಚ್ಚು ಸಂಪಾದಿಸುವಂತೆ ಗಂಡಂದಿರನ್ನು ಪ್ರೇರೇಪಿಸುತ್ತಾರೆಂದು ಸಾಮಾನ್ಯವಾಗಿ ನಂಬಲಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಮಕ್ಕಳಿಲ್ಲದ, ಅವಿವಾಹಿತ ನಾಯಕಿ. 1991 ರಿಂದ 1996ರ ಮಧ್ಯೆ ಕೋಟಿ ಕೋಟಿ ರೂ. ಅಕ್ರಮವಾಗಿ ಸಂಪಾದಿಸಿದರೆಂಬ ಆರೋಪದಲ್ಲಿ ಅವರನ್ನು ಅಪರಾಧಿಯೆಂದು ತೀರ್ಮಾನಿಸಲಾಗಿದೆ. ಅವರ ಮೇಲೆ ಬಹಳಷ್ಟು ಮೊಕದ್ದಮೆಗಳನ್ನು ನಡೆಸಲಾಯಿತು. ಇತರ ಮೊಕದ್ದಮೆಗಳಲ್ಲಿ ಉಳಿದುಕೊಂಡರೂ ಅಕ್ರಮವಾಗಿ ಹಣ ಸಂಪಾದಿಸಿದರೆಂಬ ಆರೋಪದಲ್ಲಿ ಸಿಕ್ಕಿಕೊಂಡರು. ಬೆಂಗಳೂರಿನ ವಿಶೇಷ ಕೋರ್ಟ್ 66 ಕೋಟಿ ರೂ. ಗಳಿಸಿದ ಆರೋಪದಲ್ಲಿ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡ ವಿಧಿಸಿತು.
18 ವರ್ಷದಿಂದ ನಡೆಯುತ್ತಿದ್ದ ಈ ಮೊಕದ್ದಮೆ ಸುಪ್ರೀಂ ಕೋರ್ಟ್‌ಗೆ 2-3 ವರ್ಷಗಳಲ್ಲಿ ಬರುತ್ತದೆ. ಅದುವರೆಗೆ ಬಹುಶಃ ಜಯಲಲಿತಾ ಜೈಲಿನಲ್ಲಿರುತ್ತಾರೆ. ಮಧ್ಯೆ ಮಧ್ಯೆ ಬಿಡುಗಡೆಯಾದರೂ ಅವರ ರಾಜಕಾರಣದ ಕೆರಿಯರ್ ಬಹಳ ಮಟ್ಟಿಗೆ ಮುಗಿದುಹೋಗಿರುತ್ತದೆ.
ಜಯಲಲಿತಾ ಹೀಗೇಕೆ ಮಾಡಿದರು ಎಂಬ ಪ್ರಶ್ನೆಯನ್ನು ಯಾವಾಗಲೂ ಕೇಳಲಾಗುತ್ತದೆ. ಏಕೆಂದರೆ ಅವರು ರಾಜಕಾರಣಕ್ಕೆ ಬಂದಾಗಲೇ ಹಣವಂತರಾದ ಯಶಸ್ವಿ ತಮಿಳು ಹೀರೋಯಿನ್ ಆಗಿದ್ದರು. ರಾಜಕಾರಣ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದು ಹಣ ಸಂಪಾದಿಸುವ ಮೆಷಿನ್ ಆಗಿರಲಿಲ್ಲ. ಅದನ್ನು ಅವರು ಹೇಗೆ ಉಪಯೋಗಿಸಿದರೆಂದರೆ, ಇಂದು ಪತ್ನಿಯರು ತಮ್ಮ ಪತಿಯಂದಿರಿಗೆ ಇನ್ನಷ್ಟು ಕೊಡಿ ಇನ್ನಷ್ಟು ಕೊಡಿ ಎಂದು ಪೀಡಿಸುವಂತೆ, ಆ ದಿನಗಳಲ್ಲಿ ಅವರು ತಮ್ಮ ಸಾಕುಮಗನ ಮದುವೆಗೆ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡಿದರು. ಆ ಮದುವೆಯಲ್ಲಿ ಜಯಲಲಿತಾ ಮತ್ತು ಅವರ ಗೆಳತಿ ಶಶಿಕಲಾ ಲಕ್ಷಾಂತರ ರೂ. ಬೆಲೆ ಬಾಳುವ ಸೀರೆಗಳನ್ನು ಧರಿಸಿ ಲಕ್ಷಾಂತರ ರೂ.ಗಳ ಒಡವೆಗಳನ್ನು ಹೇರಿಕೊಂಡು ಅತಿಥಿಗಳನ್ನು ಸ್ವಾಗತಿಸುತ್ತಿದ್ದರು.
ಮೊದಲ ಬಾರಿ ಜಯಲಲಿತಾ ಜೈಲಿಗೆ ಹೋಗಿದ್ದಾಗ ಅವರ ಮನೆಯಲ್ಲಿ ಸಿಕ್ಕ ಅವರ ಉಡುಪುಗಳು, ಪಾದರಕ್ಷೆಗಳು, ಆಭರಣಗಳು ಇತ್ಯಾದಿ ತಿಂಗಳುಗಟ್ಟಲೇ ಸುದ್ದಿಯಲ್ಲಿದ್ದವು. ಮಕ್ಕಳಿಲ್ಲದ, ಅವಿವಾಹಿತೆಯಾದ, ಸಂಬಂಧಿಕರಿಲ್ಲದ ಜಯಲಲಿತಾರಿಗೆ ಇಷ್ಟು ಹಣ, ಒಡವೆ, ಸೀರೆಗಳ ಮೋಹ ಯಾಕಿತ್ತು ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು.
ಮಹಿಳೆಯರು ಇವುಗಳನ್ನು ತಮ್ಮ ಶಕ್ತಿಯ ಪ್ರತೀಕವೆಂದು ತಿಳಿಯುತ್ತಾರೆ. ಈ ಧನವನ್ನು ಅವರು ತಮ್ಮ ವಶದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅವರು ಇದನ್ನು ಕಡಿಮೆಗೊಳಿಸಲು ಅಥವಾ ಇನ್ನೊಬ್ಬರೊಂದಿಗೆ ಷೇರ್ ಮಾಡಿಕೊಳ್ಳಲು ಬಯಸುವುದಿಲ್ಲ. ಆ ಹಣವನ್ನು ಅವರು ಖುದ್ದಾಗಿ ಮ್ಯಾನೇಜ್ ಮಾಡುತ್ತಾರೆ. ಆದರೆ ಮನೆ, ಅಂಗಡಿ, ಉದ್ಯೋಗ, ಜಮೀನು ಇತ್ಯಾದಿಗಳನ್ನೂ ಮ್ಯಾನೇಜ್ ಮಾಡಲು ಅವರಿಗೆ ಬೇರೆಯವರ ಅಗತ್ಯ ಬೀಳುತ್ತದೆ. ಯಾವುದರ ಬಗ್ಗೆ ವಿಶ್ವಾಸ ಇಡಬೇಕು ಯಾವುದರ ಬಗ್ಗೆ ವಿಶ್ವಾಸ ಇಡಬಾರದು ಎಂದು ತಿಳಿದಿರುವುದಿಲ್ಲ.
ಮಹಿಳೆಯರ ಅತ್ಯಂತ ದೊಡ್ಡ ಶಕ್ತಿ ಅವರ ಶರೀರವಾಗಿದೆ. ಅವರು ತಮ್ಮ ಶರೀರದ ಉಪಯೋಗ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ. ಹೀಗೆಯೇ ಅವರು ತಮ್ಮ ಶರೀರಕ್ಕೆ ಹತ್ತಿರವಿರುವ ಧನವನ್ನು ಉಳಿಸಿಕೊಳ್ಳುತ್ತಾರೆ. ಗಂಡಸರಂತೆ ಅವರಿಗೆ ಟಾಟಾ, ಬಿರ್ಲಾ, ಅಂಬಾನಿಗಳಂತೆ ಆಗುವ ಸುಖ ಸಿಗುವುದಿಲ್ಲ.
ಜಯಲಲಿತಾ ಏನೇ ಸಂಪಾದಿಸಿದರೂ ತಮಗಾಗಿ ಸಂಪಾದಿಸಿದರು. ಒಂದುವೇಳೆ ಅದು ಸಂಪಾದನೆಯೇ ಆಗಿದ್ದರೆ ಅವರು ಈ ಸಂಪಾದನೆಯನ್ನು ಬಿಡಲು ಯಾವುದೇ ಕಾರಣವಿರಲಿಲ್ಲ. ರಾಜಕಾರಣದಲ್ಲಿ ಹಣವಿದೆ, ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿರುವವರು ತಮ್ಮ ಹೆಸರಿನಲ್ಲಿ ಜನ ತಿನ್ನುತ್ತಾರೆ ಹಾಗೂ ತಿನ್ನಿಸುತ್ತಾರೆ ಎಂಬುದನ್ನು ಮರೆಯುತ್ತಿದ್ದಾರೆ. ನರೇಂದ್ರ ಮೋದಿಯನ್ನು ಗೆಲ್ಲಿಸಿದ ಲಕ್ಷಾಂತರ ವ್ಯಾಪಾರಿಗಳು ವಿಶ್ವದೆಲ್ಲೆಡೆ ಹರಡಿಕೊಂಡಿದ್ದಾರೆ. ಅವರು ಭಾರತದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕೋಟ್ಯಂತರ ರೂ.ಗಳನ್ನು ಗಳಿಸಲು ಇಚ್ಛಿಸುತ್ತಾರೆ. ಅವರನ್ನು ಗೆಲ್ಲಿಸಿದವರು ಧರ್ಮದ ಅಂಗಡಿಗಳನ್ನು ತೆರೆದರು. ಅವರು ದಾನ, ಜಾತಕ, ವಾಸ್ತು, ಪೂಜೆ ಮತ್ತು ತೀರ್ಥಯಾತ್ರೆಗಳ ಹೆಸರಿನಲ್ಲಿ ಗಳಿಸುತ್ತಿದ್ದಾರೆ. ಜಯಲಲಿತಾಗೆ ಶಿಕ್ಷೆಯಾಗಿದೆಯೆಂದರೆ ಅದರ ಅರ್ಥ ದೇಶದಲ್ಲಿ ಭ್ರಷ್ಟಾಚಾರ ಮುಗಿಯಿತು ಎಂದಲ್ಲ. ಜಯಲಲಿತಾ ಒಳಸಂಚಿಗೆ ಗುರಿಯಾದರು ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳಲಾಗಲಿಲ್ಲ. ಗಂಭೀರ ಆರೋಪಗಳಿರುವ ಇನ್ನೂ ಅನೇಕ ರಾಜಕಾರಣಿಗಳು ತಪ್ಪಿಸಿಕೊಳ್ಳುವ ವಿಧಾನಗಳನ್ನು ಬಳಸಿ ಪಾರಾಗುತ್ತಿದ್ದಾರೆ.
ಧನದ ಬಗ್ಗೆ ಮೋಹ ಅಧಿಕಾರದೊಂದಿಗೆ ಬಂದೇ ಬರುತ್ತದೆ. ನಿಮ್ಮೊಂದಿಗೆ ಇರುವವರು ಬರೀ ಕೋಟಿಗಳಲ್ಲ, ನೂರಾರು ಕೋಟಿಗಳನ್ನು ಸಂಪಾದಿಸುವಾಗ ನೀವು ನಿಮ್ಮ ಕಮೀಷನ್ ಪಡೆಯುವುದಿಲ್ಲವೇ? ಜಯಲಲಿತಾ ಮಾಡಿದ್ದು ಇದನ್ನೇ, ಹೊಸ ಸರ್ಕಾರ ತೈಲ, ಕಲ್ಲಿದ್ದಲು, ರಸ್ತೆಗಳು, ವಿಮಾನಗಳು, ಜಮೀನುಗಳು, ಆಯುಧಗಳ ವ್ಯಾಪಾರ ಮಾಡುತ್ತದೆ ಹಾಗೂ ಎದುರಿನವರು ಕೋಟಿಗಟ್ಟಲೆ ಕಮೀಷನ್ ಅಥವಾ ಲಾಭ ಸಂಪಾದಿಸುತ್ತಿದ್ದರೆ, ತಮ್ಮವರಿಗೆ ಲಾಭ ಮಾಡಿಕೊಳ್ಳಲು ಬಿಡದಿರಲು ಹೇಗೆ ಸಾಧ್ಯ? ತಮಗೆ ಮಕ್ಕಳಿಲ್ಲದಿರುವುದು, ವಿವಾಹ ಆಗದೇ ಇರುವುದು ಲಂಚವಾಗಿ ಬಂದ ಚಿನ್ನದ ಪೌಡರ್ ಕೈಗಳಿಗೆ ತಗುಲದಂತೆ ನೋಡಿಕೊಳ್ಳುವುದಕ್ಕೆ ಕಾರಣವೇನಲ್ಲ. ಚಿನ್ನದ ಹೊಳಪಿಗೆ ಮರುಳಾಗದವರಾರು? ನೀವು ತಿನ್ನದಿರುವುದು ನಿಮ್ಮ ಇಚ್ಛೆ. ಆದರೆ ಬೇರೆಯವರು ತಿನ್ನುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ.
ಗುಣಮಟ್ಟದೊಂದಿಗೆ ಹೊಂದಾಣಿಕೆ ಕೂಡದು
ನರೇಂದ್ರ ಮೋದಿ ಸರ್ಕಾರ ದೇಶಿ ಉತ್ಪಾದಕರಿಗೆ ನಿರಾಳತೆ ದೊರಕಿಸಿಕೊಳ್ಳಲು ತಾನೇ ಗುಣಮಟ್ಟದ ಪ್ರಮಾಣಪತ್ರ ನೀಡುವ ಸಲಹೆಯನ್ನು ಒಪ್ಪಿಕೊಂಡಿದೆ. ಅನೇಕ ವರ್ಷಗಳ ಹಿಂದೆ ಸರ್ಕಾರ ಭಾರತೀಯ ಮಾನಕ ಸಂಸ್ಥೆ ರಚಿಸಿ ಅದರ ಅಧಿಕಾರವನ್ನು ತನ್ನ ಕೈಯಲ್ಲಿಯೇ ಇಟ್ಟುಕೊಂಡಿತ್ತು. ಲಂಚ ಹೊಡೆಯುವ ನೂರಾರು ತಂತ್ರಗಳಲ್ಲಿ ಇದೂ ಕೂಡ ಒಂದಾಗಿತ್ತು. ಅದರಿಂದಾಗಿ ಬಹಳಷ್ಟು ಉತ್ಪನ್ನಗಳು ಇನ್‌ಸ್ಪೆಕ್ಟರ್‌ಗಳ ಸಹಕಾರವಿಲ್ಲದೆ ಮಾರುಕಟ್ಟೆಗೆ ಬರುತ್ತಿರಲೇ ಇಲ್ಲ. ಉತ್ಪಾದಕರ ಮೇಲೆ ಸಾಕಷ್ಟು ಸರ್ಕಾರಿ ನಿರ್ಬಂಧಗಳಿರುತ್ತಿದ್ದವು.
ಗುಣಮಟ್ಟದ ಉತ್ಪಾದನೆ ಇರುವ ದೇಶದಲ್ಲಿ ಉತ್ಪಾದಕ ಯಾವುದೇ ವಿಶೇಷ ಕಾಳಜಿ ವಹಿಸುವುದಿಲ್ಲ ಎಂದು ಹೇಳಬಹುದು. ಆದರೆ ಇದರಿಂದಾಗಿ ಉತ್ಪಾದಕರ ನಿರ್ಲಕ್ಷ್ಯತನ ಅಥವಾ ಲಾಭಕೋರತನ ಕಡಿಮೆ ಇದೆ, ಕಡಿಮೆ ಬೆಲೆಯಲ್ಲಿ ಹೆಚ್ಚು ವಸ್ತು ಮಾರುವ ಸಾಧ್ಯತೆ ಇದೆ.
ನಮ್ಮ ಹೆಚ್ಚಿನ ಗ್ರಾಹಕರಿಗೆ ಗುಣಮಟ್ಟದ ಮಹತ್ವ ಏನು ಎಂಬುದು ಗೊತ್ತೇ ಇರುವುದಿಲ್ಲ. ಪ್ರತಿಯೊಂದು ಮನೆಯಲ್ಲೂ ಮುರಿದುಹೋದ ಹ್ಯಾಂಡಲ್‌ಗಳ ಪಾತ್ರೆಗಳು, ತೂಗಾಡುತ್ತಿರುವ ಬಲ್ಬುಗಳ ಹೋಲ್ಡರ್‌ಗಳು, ಅಡ್ಡಾದಿಡ್ಡಿ ರೆಕ್ಕೆಗಳ ಫ್ಯಾನ್‌ಗಳು, ಬೇಕಾಬಿಟ್ಟಿ ಸದ್ದು ಮಾಡುವ ಏರ್ ಕಂಡೀಷನರ್‌ಗಳು ಕಣ್ಣಿಗೆ ಬೀಳುತ್ತವೆ.
ವಿದೇಶಿ ಕಂಪನಿಗಳು ಯಾವಾಗ ಮಾನಕ ಸಂಸ್ಥೆಯ ಸಹಾಯವಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿವೆ, ಆಗಿನಿಂದ ಇಲ್ಲಿ ಸರ್ಕಾರಿ ಪ್ರಮಾಣ ಪತ್ರದಿಂದ ಗುಣಮಟ್ಟಕ್ಕೆ ಯಾವುದೇ ಮಹತ್ವ ಇಲ್ಲವಾಗಿದೆ. ಅದ್ದೂರಿ ಪ್ರಚಾರ ಮತ್ತು ಅತ್ಯುತ್ತಮ ಗುಣಮಟ್ಟದ ಆಧಾರದ ಮೇಲೆ ವಿದೇಶಿ ವಸ್ತುವನ್ನು ಭಾರತೀಯ ಮಾರುಕಟ್ಟೆಯಲ್ಲಿ ತರಲು ಸಾಧ್ಯವಾಗಿದೆ.
ಹಲವು ಪರೀಕ್ಷೆಗಳ ಹೊರತಾಗಿಯೂ ಭಾರತೀಯ ಮಾನಕ ಸಂಸ್ಥೆ ಭಾರತೀಯ ಗೃಹಿಣಿಯ ನಿಕಟವರ್ತಿ ಆಗಲೇ ಇಲ್ಲ. ಇದಂತೂ ಉತ್ಪಾದಕರು ಮತ್ತು ಬಳಕೆದಾರನ ನಡುವಿನ ಮತ್ತೊಬ್ಬ ಮಧ್ಯಸ್ಥಿಕೆದಾರನಾಗುತ್ತಿದೆ. ಈ ಅಡೆತಡೆಯನ್ನು ಕೊಡದೇ ತೆಗೆದುಕೊಳ್ಳದೆ ದಾಟುವುದು ಸಾಧ್ಯವೇ ಇರಲಿಲ್ಲ.
ಈಗ ಆನ್‌ಲೈನ್ ರಿವ್ಯೂ ಮಾಡುವ ಪದ್ಧತಿ ಜಾರಿಯಲ್ಲಿರುವುದರಿಂದ ಗುಣಮಟ್ಟಕ್ಕಾಗಿ ಸರ್ಕಾರಿ ಹಸ್ತಕ್ಷೇಪಕ್ಕಿಂತ ಗ್ರಾಹಕರ ಹಸ್ತಕ್ಷೇಪ ಅಗತ್ಯ ಎನ್ನುವುದು ಸಾಬೀತಾಗಿದೆ.
ಗೃಹಿಣಿಯರು ತಮಗೆ ಒಂದು ವಸ್ತುವಿನ ಬಗ್ಗೆ ತೃಪ್ತಿ ಎನಿಸಿದರೆ, ಅದರ ಬಗ್ಗೆ ತಮಗಿಷ್ಟವಾದ ಪತ್ರಿಕೆಗಳಲ್ಲಿ ಆ ವಸ್ತು ಹೇಗೆ ಉಪಯುಕ್ತ ಅಥವಾ ಅದರಲ್ಲಿ ಏನೇನು ಸುಧಾರಣೆ ಮಾಡಬಹುದು ಎಂಬುದರ ಬಗ್ಗೆ ಬರೆಯುವಂತಾಗಬೇಕು. ಎಲ್ಲಿಯವರೆಗೆ ಗ್ರಾಹಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕೊಡಲು ಮುಂದೆ ಬರುವುದಿಲ್ಲವೋ, ಅಲ್ಲಿಯವರೆಗೆ ಈ ಸರ್ಕಾರಿ ಪ್ರಮಾಣಪತ್ರ ನಿರರ್ಥಕ ಎನಿಸಿಕೊಳ್ಳುತ್ತದೆ.
ಸೆಲ್ಫ್ ಸರ್ಟಿಫಿಕೇಶನ್ ಬೇಡಿಕೆಯನ್ನು ಉದ್ಯಮ ಜಗತ್ತು ಕಳೆದ ಅನೇಕ ದಶಕಗಳಿಂದ ಸಲ್ಲಿಸುತ್ತಲೇ ಇತ್ತು. ಆದರೆ ಅದು ಭ್ರಷ್ಟಾಚಾರಿ ಕಿವಿಗಳಿಗೆ ಕೇಳಿಸುತ್ತಲೇ ಇರಲಿಲ್ಲ. ಅಂದಹಾಗೆ ಈ ರಿಯಾಯಿತಿ ಉದಾರತೆಯಲ್ಲ, ಈಗ ಮಾರುಕಟ್ಟೆಯಲ್ಲಿ ಎಷ್ಟೊಂದು ಸರಕುಗಳಿವೆಯೆಂದರೆ, ಅವೆಲ್ಲಗಳ ಪರೀಕ್ಷೆ ಮಾಡುವುದು ಕಷ್ಟಕರ ಎನಿಸಿಬಿಟ್ಟಿದೆ. ನಿರೀಕ್ಷೆ ಮಾಡುವ ಉದ್ಯಮಿಗಳ ಸಂಖ್ಯೆ ಈಗ ಹೇರಳವಾಗಿದೆ. ಹಾಗಾಗಿ ಭಾರತೀಯ ಮಾನಕ ಸಂಸ್ಥೆ ಸ್ವತಃ ಈ ಕೆಲಸವನ್ನು ಕಡಿಮೆ ಮಾಡಲು ಇಚ್ಛಿಸುತ್ತಿದೆ.
ಜೀವನ ಹೂವಿನ ಹಾಸಿಗೆ ಅಲ್ಲ
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸದೇ ಇದ್ದರೆ, ಒಳ್ಳೆಯ ನೌಕರಿ ಇದ್ದರೂ ಏನು ಪ್ರಯೋಜನ? ವಿದೇಶ ಸೇವೆ ದೇಶದ ಅತ್ಯಂತ ಸುಖ ಸೌಲಭ್ಯಗಳುಳ್ಳ ಉದ್ಯೋಗ ಎಂದು ಭಾವಿಸಲಾಗುತ್ತದೆ. ವಿದೇಶಿ ವಾತಾವರಣದಲ್ಲಿ ಅಲ್ಲಿನ ಕರೆನ್ಸಿಯಲ್ಲಿಯೇ ಭಾರಿ ಪ್ರಮಾಣದಲ್ಲಿ ಖರ್ಚು ಮಾಡುವ ಅವಕಾಶ ದೊರೆಯುತ್ತದೆ. ವಿದೇಶಿ ಸೇವೆಯ ಉದ್ಯೋಗಿಗಳ ಶಕ್ತಿ ಅಪಾರ. ಒಂದು ಸಲ ಅವರಿಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪೋಸ್ಟಿಂಗ್ ದೊರೆತುಬಿಟ್ಟರೆ ಆ ದೇಶದಲ್ಲಿನ ಹುದ್ದೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಅವರು ತಯಾರಿರುವುದಿಲ್ಲ.
ಒಂದು ಪ್ರಕರಣದಲ್ಲಿ ಸರ್ಕಾರಿ ಸೇವೆಗಳಿಗಾಗಿಯೇ ಇವರು ಆಡಳಿತಾತ್ಮಕ ನ್ಯಾಯಾಲಯ ಒಬ್ಬ ವಿದೇಶಿ ಅಧಿಕಾರಿಯ ವರ್ಗಾವಣೆ ಬೇಡ ಎಂಬ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿತು. ಆ ಅಧಿಕಾರಿ ತನ್ನ ಮಗ ಅರಬ್ ಒಕ್ಕೂಟದ ಒಂದು ಶಾಲೆಯಲ್ಲಿ ಓದುತ್ತಿದ್ದಾನೆ, ಅವನು ಭಾರತಕ್ಕೆ ಮರಳಲು ಇಚ್ಛಿಸುತ್ತಿಲ್ಲ, ಅದಕ್ಕಾಗಿ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದ್ದ.
ಭಾರತಕ್ಕೆ ವಾಪಸ್ಸಾಗುವುದರ ಅರ್ಥ ಮಗುವನ್ನು ಹೊಸ ಶಾಲೆಗೆ ಸೇರಿಸಬೇಕಾಗುತ್ತದೆ ಹಾಗೂ ತಂದೆಯ ಸಕಲ ಸೌಲಭ್ಯಗಳು ಮುಕ್ತಾಯವಾಗಿಬಿಡುತ್ತವೆ ಎಂಬುದಾಗಿತ್ತು.
ಆಡಳಿತಾತ್ಮಕ ನ್ಯಾಯಾಲಯಗಳ ಮುಂದೆ ಇಂತಹ ಪ್ರಕರಣಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಕೌಟುಂಬಿಕ ಕಾರಣಗಳಿಗಾಗಿ ವರ್ಗಾವಣೆ ರದ್ದುಪಡಿಸುವುದು, ಹೆಚ್ಚು ವೇತನದ ಬೇಡಿಕೆ, ರಜೆ ನೀಡುವುದು, ಗಂಡ ಹೆಂಡತಿ ಜೊತೆ ಜೊತೆಗೆ ಇರಲು ಅವಕಾಶ ಕೊಡುವುದು ಮುಂತಾದವುಗಳ ಬೇಡಿಕೆ ಇರುತ್ತವೆ. ಎಷ್ಟೋ ಸಲ ಉದ್ಯೋಗಿಗಳು ತಂದೆ ತಾಯಿಯ ಅನಾರೋಗ್ಯ ಅಥವಾ ಅವರ ಉಸ್ತುವಾರಿಯ ಕಾರಣ ನೀಡಿ ವರ್ಗಾವಣೆ ಬಯಸುತ್ತಾರೆ ಅಥವಾ ಅದನ್ನು ರದ್ದುಪಡಿಸಲು ಬೇಡಿಕೆ ಮಂಡಿಸುತ್ತಾರೆ.
ಅಂದಹಾಗೆ ಈ ನ್ಯಾಯಾಲಯಗಳು ಸರ್ಕಾರಿ ಕಾಯ್ದೆ ಕಾನೂನುಗಳ ಪ್ರಕಾರವೇ ತೀರ್ಪು ನೀಡುತ್ತವೆ. ಅರ್ಜಿ ಸಲ್ಲಿಕೆಯಿಂದ ತೀರ್ಪು ನೀಡುವತನಕ 3-4 ವರ್ಷ ಕಳೆದುಹೋಗುತ್ತದೆ. ಕುಟುಂಬದ ಖುಷಿಗಾಗಿಯೇ ಜನರು ನೌಕರಿ ಮಾಡುತ್ತಾರೆ ಹಾಗೂ ಎಲ್ಲವನ್ನೂ ಕಾನೂನು ಕಟ್ಟಳೆಗಳಲ್ಲಿ ಬಂಧಿಸಿಡಲಾಗದು ಎನ್ನುವುದನ್ನು ಕೂಡ ಮರೆಯಲಾಗದು. ಮನೆಗೆ ಏನೇನು ಅವಶ್ಯಕತೆ ಇರುತ್ತೋ, ಅದು ಒಂದು ಹಂತದ ತನಕ ನಮ್ಮ ಇಚ್ಛೆಗನುಗುಣವಾಗಿಯೇ ನಡೆಯುತ್ತದೆ. ಮಹಿಳೆಯರಂತೂ ವಿಶೇಷ ಹಕ್ಕುಗಳ ಬಗ್ಗೆ ಮಂಡಿಕೆ ಸಲ್ಲಿಸಬಾರದು. ಅವುಗಳಿಂದ ಅವರು ತಾವು ದುರ್ಬಲರು ಎಂದು ಸಾಬೀತುಪಡಿಸಿದಂತಾಗುತ್ತದೆ. ಅದೇ ಪುರುಷರು ಮನೆಯವರ ಕಾರಣದಿಂದಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಬಯಸುತ್ತಾರೆ. ಕುಟುಂಬದ ಕಾರಣದಿಂದಾಗಿಯೇ ಅವರು ತಮ್ಮ ದೌರ್ಬಲ್ಯ ಬಹಿರಂಗಪಡಿಸುತ್ತಾರೆ.
ಜೀವನ ಎಂದೂ ಹೂವಿನ ಹಾಸಿಗೆಯಲ್ಲ. ಹೂವಿನ ಹಾಸಿಗೆಯನ್ನು ಸಿದ್ಧಪಡಿಸಲು ಕೂಡ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಜೀವನವೊಂದು ಸಂಘರ್ಷ. ಇದರ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಅಡೆತಡೆಗಳು ಬರುತ್ತವೆ. ಅದಕ್ಕಾಗಿ ಜೀವನವನ್ನು ತಡೆಹಿಡಿಯುವುದಕ್ಕಂತೂ ಆಗುವುದಿಲ್ಲ. ಹಿಂದಕ್ಕೂ ಸರಿಯಾಗುವುದಿಲ್ಲ. ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಇಲ್ಲವೋ ಅವುಗಳನ್ನು ದಾಟಿ ಹೋಗುವುದೇ ಯಶಸ್ಸು.
ಒಂದು ವೇಳೆ ನ್ಯಾಯಾಲಯ ತಂದೆಯ ವಿರುದ್ಧ ತೀರ್ಪು ನೀಡಿದರೆ, ಅದಕ್ಕಾಗಿ ಕಣ್ಣೀರು ಸುರಿಸುವುದು ಸರಿಯಲ್ಲ. ಹಲವಾರು ಶತಮಾನಗಳಿಂದ ಜನರು ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ದೂರ ಹೋಗುತ್ತಿದ್ದಾರೆ. ಏಕೆಂದರೆ ಏನನ್ನಾದರೂ ಹೊಸದನ್ನು ಅರಿಯಲು ಹಾಗೂ ಸಾಕಷ್ಟು ಗಳಿಸಲು.