ನ್ಯೂಟ್ರಿಶನ್ನಿಂದ ತುಂಬಿ ಹೋಗಿರುವ ಕಡಲೆಹಿಟ್ಟು ನಮ್ಮ ದೈನಂದಿನ ವ್ಯಂಜನಗಳಾದ ಪಕೋಡ, ಜುಣಕ, ಬೋಂಡ, ಬಜ್ಜಿ, ಡೋಕ್ಲಾ, ದಿಢೀರ್ ದೋಸೆ…… ಇತ್ಯಾದಿಗಳ ರುಚಿ ಸೊಗಸಾಗಿಸುವುದಲ್ಲದೆ, ಗ್ರಾಮ್ ಫ್ಲೋರ್ ಎನಿಸಿರುವ ಇದು ನಮ್ಮ ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಷ್ಟೇ ಮುಖ್ಯ ಎಂಬುದು ನಿಮಗೆ ಗೊತ್ತೇ? ಇದು ಪ್ರೋಟೀನಿನ ಭಂಡಾರವೇ ಆಗಿದ್ದು, ಆರೋಗ್ಯದ ದೃಷ್ಟಿಯಿಂದ ಅತ್ಯಧಿಕ ಲಾಭಕಾರಿ ಆಗಿದೆ. ಇದು ಕೇವಲ ನಮ್ಮ ದೇಹಕ್ಕೆ ಆಂತರಿಕವಾಗಿ ಲಾಭ ಒದಗಿಸುವುದಲ್ಲದೆ, ಚರ್ಮಕ್ಕೆ ಹೊಳೆಹೊಳೆಯುವ ಕಾಂತಿ ನೀಡುತ್ತದೆ. ಅಂದ್ರೆ ಇದು ನಿಮಗೆ ಆಂತರಿಕ ಹಾಗೂ ಬಾಹ್ಯ ಎರಡೂ ರೂಪದಲ್ಲಿ ಉಪಕಾರ ಮಾಡುವುದರಿಂದ, ನಾವೇಕೆ ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಬಳಸಬೇಕೆಂದು ನೋಡೋಣವೇ? :
ದೇಹ ತೂಕ ನಿಯಂತ್ರಿಸಲು ವರ್ಕ್ ಫ್ರಂ ಹೋಂ ಕಾರಣ ನಮ್ಮ ಜೀವನ ಶೈಲಿ (ಅದರಲ್ಲೂ ಹೆಚ್ಚಾಗಿ ಚಳಿಗಾಲದಲ್ಲಿ) ಸೋಮಾರಿತನದತ್ತ ಹೆಚ್ಚು ವಾಲುತ್ತಿದೆ. ಹೀಗಾಗಿ ನಮ್ಮ ಆರೋಗ್ಯದ ಕಡೆ ಮೊದಲಿಗಿಂತ 2 ಪಟ್ಟು ಹೆಚ್ಚಾಗಿ ಕಾಳಜಿ ವಹಿಸಬೇಕಾಗಿದೆ. ಹೀಗಾಗಿ ನಮ್ಮ ಆಹಾರ ತಜ್ಞರ ಸಲಹೆ ಎಂದರೆ, ನೀವು ನಿಮ್ಮ ದೇಹತೂಕ ನಿಯಂತ್ರಿಸ ಬಯಸಿದರೆ, ನೀವು ನಿಮ್ಮ ಆಹಾರದಲ್ಲಿ ಹೈ ಫೈಬರ್ರಿಚ್ ಪ್ರೋಟೀನ್ ಡಯೆಟ್ ಸೇವಿಸಬೇಕು, ಇದರಿಂದ ನಿಮ್ಮ ದೇಹದ ಅಗತ್ಯಗಳು ಪೂರೈಸುವುದಲ್ಲದೆ ಹಾಗೂ ಬಹಳ ಹೊತ್ತಿನವರೆಗೂ ನಿಮಗೆ ಹಸಿವು ಆಗಬಾರದು, ಏಕೆಂದರೆ ಮಾಂಸಖಂಡಗಳನ್ನು ಸರಿಯಾಗಿ ಮೇಂಟೇನ್ ಮಾಡಲು ಈ ರಿಚ್ ಪ್ರೋಟೀನ್ ಅತ್ಯಂತ ಅವಶ್ಯಕ ಎನಿಸಿದೆ.
ಹೀಗಾಗಿ ಕಡಲೆಹಿಟ್ಟು ಹೈ ಫೈಭರ್, ರಿಚ್ ಪ್ರೋಟೀನ್ ಸ್ರೋತವಾಗಿರುವುದರಿಂದ, ನೀವು ದೇಹ ತೂಕ ನಿಯಂತ್ರಿಸಬೇಕಾದರೆ, ವೇಗವಾಗಿ ಅದನ್ನು ಕಂಟ್ರೋಲ್ ಮಾಡುವ ಕೆಲಸ ಮಾಡುತ್ತದೆ. `ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್’ ಸಮೀಕ್ಷೆಯ ಪ್ರಕಾರ, 100 ಗ್ರಾಂ ಕಡಲೆಹಿಟ್ಟಿನಲ್ಲಿ 32 ಗ್ರಾಂ ಪ್ರೋಟೀನ್ ಮತ್ತು 11 ಗ್ರಾಂ ಫೈಬರ್ ಇದೆ. ಜೊತೆಗೆ ಇದರಲ್ಲಿ ಕೊಲೆಸ್ಟ್ರಾಲ್, ಉತ್ತಮ ಕಬ್ಬಿಣಾಂಶಗಳೂ ಇವೆ. ಇದು ಆರೋಗ್ಯಪರ ಆಹಾರಕ್ಕೆ ಅತ್ಯಗತ್ಯ ಬೇಕು.
ಡಯಾಬಿಟಿಕ್ ಫ್ರೆಂಡ್ಲಿ
ನೀವು ಮಧುಮೇಹ ಪೀಡಿತರೆ ಅಥವಾ ಆನುವಂಶಿಕವಾಗಿ ಈ ರೋಗ ನಿಮ್ಮ ಕುಟುಂಬದಲ್ಲಿ ಸಾಗಿಬಂದಿದ್ದರೆ, ಅಗತ್ಯವಾಗಿ ನಿಮ್ಮ ಡಯೆಟ್ನಲ್ಲಿ ನೀವು ಕಡಲೆಹಿಟ್ಟನ್ನು ಬೆರೆಸಿಕೊಳ್ಳಲೇ ಬೇಕು. ಏಕೆಂದರೆ ಇದರಲ್ಲಿ ಕಾಂಪ್ಲೆಕ್ಸ್ ಕಾರ್ಬೊಹೈಡ್ರೇಟ್ಸ್, ಲೋ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು. ಇದು ಮಧುಮೇಹಿಗಳಿಗೆ ವರದಾನವೆಂದೇ ತಿಳಿಯಲಾಗಿದೆ. ಜೊತೆಗೆ ಇದರಲ್ಲಿ ಮೆಗ್ನೀಶಿಯಂ, ನಾರಿನಂಶ ಹೇರಳವಾಗಿರುವುದರಿಂದ, ದೇಹದಲ್ಲಿ ಇನ್ಸ್ಯುಲಿನ್ ರೆಸ್ಪಾನ್ಸ್ ನ್ನು ಹೆಚ್ಚಿಸುತ್ತದೆ. ಏಕೆಂದರೆ ದೇಹದಲ್ಲಿ ಮೆಗ್ನಿಶಿಯಂ ಪ್ರಮಾಣ ಬಹಳ ಕಡಿಮೆ ಆದಾಗ, ಪ್ಯಾಂಕ್ರಿಯಾಸ್ ಅಗತ್ಯದ ಪ್ರಮಾಣದಷ್ಟು ಇನ್ಸ್ಯುಲಿನ್ ಉತ್ಪಾದಿಸುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಆದರೆ ಕಡಲೆಹಿಟ್ಟು ಇದನ್ನು ಸುಲಭವಾಗಿ ನಿಯಂತ್ರಿಸಬಲ್ಲದು.
ಹೃದಯದ ಆರೋಗ್ಯಕ್ಕೂ ಲಾಭಕಾರಿ
ಭಾರತದಲ್ಲಿ ಪ್ರತಿ ವರ್ಷ ಹೃದ್ರೋಗಗಳಿಂದ ನರಳಿ ಸಾಯುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದಂತೂ ದೇಶದಲ್ಲಿ ಹೆಚ್ಚಿನ ಸಾವಿಗೆ ಕಾರಣವಾಗಿದೆ. 2016ರಲ್ಲಿ `ಗ್ಲೋಬಲ್ ಬರ್ಡನ್ ಆಫ್ ಡಿಸೀಸ್’ನ ವರದಿ ಪ್ರಕಾರ, ನಮ್ಮ ದೇಶದಲ್ಲಿ ಹೃದ್ರೋಗದ ಕಾರಣ ಸಾಯುವವರ ಸಂಖ್ಯೆ 1.7 ವಿಲಿಯನ್ ಹಾಗೂ ಇಡೀ ವಿಶ್ವದಲ್ಲಿ ಇದು 19.3 ಮಿಲಿಯನ್ ಆಗಿದೆ. ಹೀಗಾಗಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅಗತ್ಯ. ನೀವು ಆರೋಗ್ಯಕರ ಹೃದಯ ಬಯಸುವಿರಾದರೆ, ಕಡಲೆಹಿಟ್ಟಿನೊಂದಿಗೆ ದೋಸ್ತಿ ಬೆಳೆಸಿರಿ. ಏಕೆಂದರೆ ಇದರಲ್ಲಿ ಕರಗುವ ನಾರಿನಂಶ ಹೆಚ್ಚಿದ್ದು ಇದು ಹೃದಯಕ್ಕೆ ಹೆಚ್ಚು ಲಾಭಕಾರಿ ಎಂದು ಸಿದ್ಧವಾಗಿದೆ. ಇದರಿಂದ ಬಿ.ಪಿ. ಕಂಟ್ರೋಲ್ ಆಗುವ ಜೊತೆ ಜೊತೆಗೆ, ಹೊಟ್ಟೆಯಲ್ಲಿ ಉರಿ ಮತ್ತು ಅಸಿಡಿಟಿ ಎರಡನ್ನೂ ತಗ್ಗಿಸುತ್ತದೆ. ಇದರಲ್ಲಿ ಲಭ್ಯವಿರುವ ನಾರು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ರಕ್ತ ಸಂಚಾರ ಚುರುಕಾಗಿಸಿ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಇದರಿಂದ ಹೃದ್ರೋಗಗಳು ದೂರಾಗುತ್ತವೆ.
ಅಲರ್ಜಿಯ ರಿಸ್ಕ್ ಇಲ್ಲ
ಬಹಳಷ್ಟು ಜನರಿಗೆ ದವಸಧಾನ್ಯ ಎಂದರೆ ಅಲರ್ಜಿ. ಅದರಿಂದ ಎಷ್ಟೋ ವೈದ್ಯರು ಅಂಥವರಿಗೆ ದವಸಧಾನ್ಯ ಬೇಡ ಎಂದೇ ಸಲಹೆ ನೀಡುತ್ತಾರೆ. ಈ ಅಲರ್ಜಿ ಉಂಟಾಗಲು ಮುಖ್ಯ ಕಾರಣವೆಂದರೆ, ಇಂಥ ಧಾನ್ಯಗಳಲ್ಲಿ ಗ್ಲೂಟನ್ ಅಧಿಕವಾಗಿರುತ್ತದೆ ಹಾಗೂ ಕೆಲವು ಮಂದಿಗೆ ಇದು ಸೂಟ್ಆಗುವುದಿಲ್ಲ. ಇದು ಒಂದು ಬಗೆಯ ಪ್ರೋಟೀನ್ ಆಗಿದ್ದು, ಸಾಮಾನ್ಯವಾಗಿ ಧಾನ್ಯಗಳಲ್ಲಿ ಅಡಗಿರುತ್ತವೆ. ಆದರೆ ಕಡಲೆಹಿಟ್ಟು ಮಾತ್ರ ಗ್ಲೂಟನ್ ಫ್ರೀ ಆಗಿರುತ್ತದೆ, ಹಾಗಾಗಿ ಇಂಥ ಅಲರ್ಜಿಗಳ ತಂಟೆ ತಕರಾರಿಲ್ಲ. ಹೀಗಾಗಿ ಯಾರಿಗೆ ಗ್ಲೂಟನ್ ಅಲರ್ಜಿ ಇದೆಯೋ ಅಂಥವರು ಕಡಲೆಹಿಟ್ಟಿನ ರೊಟ್ಟಿ, ದೋಸೆ ಸೇವಿಸಿ, ತಮ್ಮ ಆಹಾರ ಸೇವನೆ ಪೂರ್ಣ ಮಾಡಿಕೊಳ್ಳುವ ಜೊತೆಯಲ್ಲಿ, ಸ್ವಯಂ ತಮ್ಮ ತೂಕವನ್ನೂ ಕಂಟ್ರೋಲ್ನಲ್ಲಿ ಇಡಬಹುದು. ಜೊತೆಗೆ ಕಡಲೆಹಿಟ್ಟು ನಮ್ಮ ಇಮ್ಯೂನ್ ಸಿಸ್ಟಂನ್ನು ಸ್ಟ್ರಾಂಗ್ಗೊಳಿಸುವುದರಿಂದ, ನಮ್ಮ ದೇಹ ಸುಲಭವಾಗಿ ಇತರ ನ್ಯೂಟ್ರಿಯೆಂಟ್ಸ್ನ್ನು ಹೀರಿಕೊಳ್ಳಬಲ್ಲದು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಆಹಾರದಲ್ಲಿ ಇದನ್ನು ಅಗತ್ಯ ಹೆಚ್ಚಿಸಿಕೊಳ್ಳಿ.
ಬ್ರೆಸ್ಟ್ ಕ್ಯಾನ್ಸರ್ನಿಂದ ದೂರ
ಭಾರತದಲ್ಲಿ ಹಳ್ಳಿ ಅಥವಾ ನಗರ ಪ್ರದೇಶವೇ ಆಗಿರಲಿ, ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲಿವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರಲ್ಲಿ ಇದು 3ನೇ 4ನೇ ಹಂತ ತಲುಪಿದ ನಂತರವೇ ಪತ್ತೆಯಾಗುತ್ತದೆ. ಅಷ್ಟು ಹೊತ್ತಿಗೆ ಬಹಳ ಹಾನಿ ಆಗಿಹೋಗಿರುತ್ತದೆ. ವರದಿಯ ಪ್ರಕಾರ, 2018ರಲ್ಲಿ 6 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಬ್ರೆಸ್ಟ್ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ಇದಂತೂ ಬಹಳ ಗಾಬರಿಗೊಳಿಸುವ ಅಂಕಿಅಂಶಗಳಾಗಿವೆ. ಜಾಗೃತಿಯ ಜೊತೆಗೆ ನಿಮ್ಮ ಆಹಾರ ಕ್ರಮದಲ್ಲೂ ಬದಲಾವಣೆ ತಂದಾಗ ಮಾತ್ರ, ಈ ಸಾವು ನೋವು ತಪ್ಪಿಸಬಹುದು.
ಉತ್ತಮ ನಿದ್ದೆಗೆ ಸಹಾಯಕ
ಉತ್ತಮ ನಿದ್ದೆ ಒಂದೇ ಒಳ್ಳೆಯ ಆರೋಗ್ಯಕ್ಕೆ ಮೂಲ. ನಿದ್ದೆ ಅಪೂರ್ಣ ಆಗಿಹೋದರೆ ನಾವು ಅತ್ತ ಲವಲವಿಕೆಯಿಂದ ಖುಷಿಯಾಗಿರಲು ಸಾಧ್ಯವಿಲ್ಲ ಅಥವಾ ನಮ್ಮ ದೈನಂದಿನ ಕೆಲಸದಲ್ಲಿ ಚುರುಕಾಗಿರಲಿಕ್ಕೂ ಸಾಧ್ಯವಿಲ್ಲ. ಏಕೆಂದರೆ ನಿದ್ದೆ ನೇರವಾಗಿ ನಮ್ಮ ದೈಹಿಕ ಮಾನಸಿಕ ಆರೋಗ್ಯವನ್ನೇ ಅವಲಂಬಿಸಿದೆ. ಹೀಗಾಗಿ 8-9 ಗಂಟೆಗಳ ಧಾರಾಳ ನಿದ್ದೆ ಬೇಕೇಬೇಕು. ಆದರೆ ಮತ್ತೊಂದು ಅಗತ್ಯ ಎಂದರೆ, ಸಂಪೂರ್ಣ ನಿದ್ದೆಯ ಜೊತೆಗೆ, ಉತ್ತಮ ನಿದ್ದೆ ಬರಿಸುವಂಥ ಸಾಮಗ್ರಿಗಳನ್ನು ಮರೆಯದೆ ನಿಮ್ಮ ಆಹಾರದಲ್ಲಿ ಬೆರೆಸಿಕೊಳ್ಳಿ.
ಹಾಗಾಗಿ ಕಡಲೆಹಿಟ್ಟು ಸೌಂಡ್ ಸ್ಲೀಪ್ಗೆ ಹೆಸರುವಾಸಿ. ಏಕೆಂದರೆ ಇದರಲ್ಲಿ ಅಮೈನೋ ಆ್ಯಸಿಡ್ಸ್, ಟವೆಲ್ ರೂಲೋ ಫ್ಯಾನ್, ಸೆರೋಟೋನಿನ್ ಅಂಶಗಳು ತುಂಬಿದ್ದು, ಪರಿಪೂರ್ಣ ನಿದ್ದೆಗೆ ಇವು ಪೂರಕ. ಟ್ರಿಪ್ಟೋಫ್ಯಾನ್ ನಮ್ಮನ್ನು ಶಾಂತವಾಗಿರಿಸಿದರೆ, ಸೆರೋಟೋನಿನ್ ಉತ್ತಮ ನಿದ್ದೆಗೆ ಬಲು ಅವಶ್ಯಕ.
ಗರ್ಭಾವಸ್ಥೆಯಲ್ಲೂ ಪರಿಣಾಮಕಾರಿ
ಕಡಲೆಹಿಟ್ಟಿನಲ್ಲಿ ಫಾಲೆಟ್, ವಿಟಮಿನ್ ಬಿ6, ಕಬ್ಬಿಣಾಂಶಗಳು ಧಾರಾಳ ಅಡಗಿದ್ದು, ಗರ್ಭಿಣಿಯ ಭ್ರೂಣದ ಬೆಳವಣಿಗೆಗೆ ಹೆಚ್ಚು ಲಾಭಕಾರಿ. ಫಾಲೆಟ್ ಎಂಬುದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಸಂಪೂರ್ಣ ವಿಕಾಸಕ್ಕೆ ಸಹಕಾರಿ. ಇದರಲ್ಲಿ ಕ್ಯಾಲ್ಶಿಯಂ ಇರುವುದರಿಂದ, ಗರ್ಭವತಿಯರ ಮೂಳೆ ಹಿಗ್ಗುವ ತೊಂದರೆಯನ್ನು ತಪ್ಪಿಸುತ್ತದೆ. ಅನೇಕ ರಿಸರ್ಚ್ಗಳು ಹೇಳುವುದೆಂದರೆ, ಗರ್ಭಾವಸ್ಥೆಯಲ್ಲಿ ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಬಿ6 ತೆಗೆದುಕೊಂಡದ್ದೇ ಆದಲ್ಲಿ, ಅದು ಮಗುವಿನ ಮೆದುಳಿನ ಹಾಗೂ ಇಮ್ಯೂನ್ ಸಿಸ್ಟಂನ್ನು ಸ್ಟ್ರಾಂಗ್ಗೊಳಿಸುವುದಲ್ಲದೆ, ಗರ್ಭಿಣಿಯ ವಾಕರಿಕೆ, ಹೊಟ್ಟೆ ತೊಳೆಸುವಿಕೆಯನ್ನು ಎಷ್ಟೋ ನಿಯಂತ್ರಿಸಬಲ್ಲದು. ಹೀಗಾಗಿ ಗರ್ಭವತಿಯರು ತಮ್ಮ ದೈನಂದಿನ ಆಹಾರದಲ್ಲಿ 40 ಗ್ರಾಂ ಕಡಲೆಹಿಟ್ಟನ್ನು ಬಳಸಿಕೊಳ್ಳಬೇಕು. ಇದು ದೇಹಕ್ಕೆ ನ್ಯೂಟ್ರಿಯಂಟ್ಸ್ ಒದಗಿಸಿ ಗರ್ಭಪಾತ ಆಗದಂತೆ ರಕ್ಷಿಸುತ್ತದೆ.
– ಪಾರ್ವತಿ ಭಟ್