ಮಿನಿಕಥೆ - ಉಮಾ ಶೂರ್ಪಾಲಿ
ತುಂಬಿದ ಮನೆಗೆ ಆದರ್ಶ ಸೊಸೆಯಾಗಿ ಬಂದು ಸಾರ್ಥಕ ಜೀವನ ನಡೆಸಿದ ಶಾಂತಮ್ಮ, ಪತಿಯ ಅಕಾಲಿಕ ಮರಣದಿಂದ ನಿಡುಸುಯ್ದರು. ಮುಂದೆ ಮಗನೇ ಆಧಾರ ಎಂದು ಜೀವವನ್ನು ಕೊರಡಾಗಿ ತೇಯ್ದು, ಮಕ್ಕಳನ್ನು ಮುಂದೆ ತಂದರು. ಪುತ್ರ ವ್ಯಾಮೋಹ ಅವರಿಗೆ ನೆಮ್ಮದಿ ನೀಡಿತೇ......?
ಸಾರ್ಥಕ ಜೀವನದ ಸಂಧ್ಯಾಕಾಲದಲ್ಲಿ ಮಗನನ್ನು ಕಾಣಲೆಂದೇ ಜೀವ ಕೈಯಲ್ಲಿ ಹಿಡಿದು ಕಾಯುತ್ತಿರುವ ಶಾಂತಮ್ಮ ಅವನ ಬರುವಿಕೆಯ ನಿರೀಕ್ಷೆಯಲ್ಲಿ ಮುಂಬಾಗಿಲಿನತ್ತ ತದೇಕ ಚಿತ್ತದಿಂದ ನೋಡುತ್ತಾ ಮಲಗಿದ್ದರೆ, ದೀಪಿಕಾ ಅಮ್ಮನ ತಲೆಯ ಮೇಲೆ ಕೈಯಾಡಿಸುತ್ತಾ ಸಮಾಧಾನಪಡಿಸುತ್ತಿದ್ದಳು.
ಶಾಂತಮ್ಮನವರ ಕಣ್ಣಂಚು ತುಂಬಿ ಮಸುಕಾದ, ಜೊತೆಗೆ ಹಳೆ ನೆನಪುಗಳ ಸುರುಳಿ ಬಿಚ್ಚಿತು.
ಹೊಸಬಾಳು ಸೊಗಸೆಂದುಕೊಂಡು ಶ್ಯಾಮರಾಯರ ಕೈ ಹಿಡಿದು ಮನೆ ಮನಕ್ಕೆ ನಂದಾದೀಪವಾಗಿ ತುಂಬು ಕುಟುಂಬವನ್ನು ಪ್ರೀತಿಸುತ್ತಾ ಗಂಧದ ಕೊರಡಿನಂತೆ ಜೀವ ತೇಯುತ್ತಾ ಪಾಲಿಗೆ ಬಂದದ್ದನ್ನು ಪಂಚಾಮೃತವನ್ನಾಗಿ ಸ್ವೀಕರಿಸಿ ಮುನ್ನಡೆದಾಗ ಮುತ್ತಿನಂತಹ ಒಂದು ಗಂಡು, ಒಂದು ಹೆಣ್ಣು ಮಗು ತಮ್ಮ ಮಡಿಲನ್ನು ತುಂಬಿ ಸ್ವರ್ಗವೇ ಧರೆಗಿಳಿದಂತೆ ಸಂಭ್ರಮಿಸಿದ್ದರು!
ಕಾಲಕ್ರಮೇಣ ಮೈದುನ ನಾದಿನಿಯರ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಇನ್ನು ಮುಂದೆ ತಮ್ಮ ಜೀವನದ ಕುರಿತಾಗಿ ಚಿಂತಿಸಬೇಕು ಎನ್ನುವಷ್ಟರಲ್ಲಿ ಶ್ಯಾಮರಾಯರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಾಗ, ಶಾಂತಮ್ಮನವರಿಗೆ ದಿಕ್ಕೇ ತೋಚದಂತಾಗಿ ನಾದಿನಿ ಮೈದುನರಿಗೆ ವಿಷಯ ತಿಳಿಸಲು ಮಗಳು ದೀಪಿಕಾಗೆ ಹೇಳಿದರು.
ಅವರೆಲ್ಲಾ ತೋರಿಕೆಗಾಗಿ ಅಣ್ಣನನ್ನು ನೋಡಲು ಬಂದರೆ ವಿನಾ, ಮುಂದಿನ ಚಿಕಿತ್ಸೆಗಾಗಿ ಕರೆದೊಯ್ಯಲು ಯಾವ ರೀತಿಯ ಸಹಾಯಕ್ಕೂ ಮುಂದಾಗದೆ ಇದ್ದಾಗ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಶ್ಯಾಮರಾಯರು ತೀರಿಕೊಂಡರು.
ಮಧ್ಯ ವಯಸ್ಸಿನ ಶಾಂತಮ್ಮ ಹೇಗೋ ಕಷ್ಟಪಟ್ಟು ಅವರಿವರ ಮನೆಯಲ್ಲಿ ಅಡುಗೆ ಕೆಲಸ ಮತ್ತು ದೇವರ ಪಾತ್ರೆಗಳನ್ನು ತೊಳೆದುಕೊಂಡು ಜೀವನವನ್ನು ಸವೆಸುತ್ತ ಮಕ್ಕಳಿಬ್ಬರಿಗೂ ಉಜ್ವಲ ಭವಿಷ್ಯ ರೂಪಿಸಿಕೊಡುವಲ್ಲಿ ಯಶಸ್ವಿಯಾದರು.
ದೇವರ ಕೃಪೆಯಿಂದ ಮಗ ಆದಿತ್ಯನ ಓದು ಮುಗಿಯುತ್ತಲೇ ಸರ್ಕಾರಿ ಕೆಲಸ ಸಿಕ್ಕು ಇನ್ನು ತಮ್ಮೆಲ್ಲಾ ಕಷ್ಟಗಳು ಕಳೆದಂತೆಯೇ ಎಂದು ಸಂಭ್ರಮಪಟ್ಟಿದ್ದೇ ಬಂತು....! ಮಗನಿಗಾಗಿ ಒಂದು ಸಂಬಂಧ ಕೂಡಿ ಬಂದಿತು. ಮನೆ ಮನ ಬೆಳಗುವ ನಂದಾದೀಪ ಎಂದುಕೊಂಡರೆ, ಬಂದಂತಹ ಸೊಸೆಯಿಂದ ಪಟ್ಟಪಾಡು ಅಷ್ಟಿಷ್ಟಲ್ಲ.
ಹೊಸಿಲ ಹಣತೆಯಾಗಿ ಆಗಮಿಸಿದ ಈ ಹೆಣ್ಣು ಹುಣ್ಣಾಗಿ ನೀಡಿದ ಕಷ್ಟ, ಮಾಡಿದ ಅಪಮಾನ ಒಂದಾ.... ಎರಡಾ....! ದಿನದಿಂದ ದಿನಕ್ಕೆ ಕೊರಗುತ್ತಾ ಮಗಳು ದೀಪಿಕಾಳಿಗಾಗಿ ಮೌನವಾಗಿ ಎಲ್ಲವನ್ನೂ ಸಹಿಸಿದ್ದಾಯಿತು. ಮಗಳ ಜಾಣ್ಮೆ ಮತ್ತು ಸೌಂದರ್ಯ ಕಂಡು ಮತ್ಸರದಿಂದ ಕುದಿಯುತ್ತಾ ಸೊಸೆ ಯಾಮಿನಿ, ಆದಷ್ಟು ಬೇಗನೇ ಅವಳ ಜವಾಬ್ದಾರಿಯಿಂದ ಮುಕ್ತರಾಗಲು ಹೊಂಚು ಹಾಕಿ ಅವಳಿಗಿಂತ ಹದಿನಾರು ವರ್ಷ ಅಂತರವಿದ್ದರೂ ಯೋಚಿಸದೇ ದೇವಸ್ಥಾನವೊಂದರಲ್ಲಿ ಮದುವೆ ಮಾಡಿ ಕೈ ತೊಳೆದುಕೊಂಡಳು.

ಅಲ್ಲಿಂದ ಪ್ರಾರಂಭವಾದ ದಿನನಿತ್ಯದ ಕಿರುಕುಳದಿಂದ ಸೋತು ಜೀವನವೇ ಭಾರ ಎನಿಸಿದಂತಾಯಿತು. ಮುಪ್ಪಿನ ಶಾಂತಮ್ಮನವರ ಪುಣ್ಯದ ಫಲ ಎಂಬಂತೆ ಮಗಳು ದೀಪಿಕಾ ಮತ್ತು ಅಳಿಯ ನಿತಿನ್ ತಮ್ಮ ಕೈ ಹಿಡಿದು ಆಸರೆಯಾಗಿ ಕರೆದುಕೊಂಡು ಹೋಗಲು ನಿರ್ಧರಿಸಿದಾಗ, ತಮಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲದಂತೆ ನಿರ್ಲಿಪ್ತರಾಗಿದ್ದ ಆದಿತ್ಯ ಮತ್ತು ಯಾಮಿನಿಯರ ನಡೆನುಡಿಯಿಂದ ಹೆತ್ತಕರುಳು ಕಣ್ಣೀರು ಸುರಿಸಿತು.





