ಒಂದು ಬಡ ಮಧ್ಯಮ ವರ್ಗದ ಹಳ್ಳಿಯಲ್ಲಿ ಜನಿಸಿ ದಿಲ್ಲಿಯಲ್ಲಿ ಯು.ಪಿ.ಎಸ್.ಸಿ ಗೆದ್ದ ಚೈತ್ರಾಳ ಜೈತ್ರಯಾತ್ರೆ ನೋಡೋಣ ಬನ್ನಿ.......
ಯು.ಪಿ.ಎಸ್.ಸಿ ಪರೀಕ್ಷೆಯನ್ನು ಸಾಮಾನ್ಯಾವಾಗಿ `ಭಾರತದ ಕಠಿಣ ಮತ್ತು ಪ್ರತಿಷ್ಠಿತ ಪರೀಕ್ಷೆ' ಎಂದು ಕರೆಯುತ್ತಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್, ಸಿಎಸ್ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಪರೀಕ್ಷೆಗಳನ್ನು ಮತ್ತು ಸಂದರ್ಶನವನ್ನು ನಡೆಸಿ ಆಯ್ಕೆ ಮಾಡುತ್ತದೆ. ಅದಕ್ಕಾಗಿ ಸಿಎಸ್‌ಸಿ, ಇಎಸ್‌ಸಿ, ಐಎಸ್‌ಎಸ್‌ಮತ್ತು ಇತರ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.
ನಮ್ಮ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಆವಲತ್ತೂರು ಗ್ರಾಮದ ಚೈತ್ರಾ, ಇಂತಹ ಕಠಿಣ ಪರೀಕ್ಷೆಯನ್ನು ಸತತ ಪ್ರಯತ್ನಗಳೊಂದಿಗೆ ಪ್ರಯತ್ನಿಸಿ, ಉತ್ತೀರ್ಣರಾಗಿ 31ನೇ ರಾಂಕ್ ಪಡೆದ ಯಶೋಗಾಥೆ ನೋಡೋಣ ಬನ್ನಿ.
ವೈಯಕ್ತಿಕ ಹಿನ್ನೆಲೆ
ಮೊದಲು ನಿಮ್ಮ ಪರಿಚಯವನ್ನು ಮಾಡಿಕೊಡಿ.
ನಾನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಆವಲತ್ತೂರು ಗ್ರಾಮ, ನಮ್ಮ ತಾಯಿ ಜಯಲಕ್ಷ್ಮಿ ಮತ್ತು ತಂದೆ ಮಹದೇವೇಗೌಡ ವ್ಯವಸಾಯಗಾರ ಕುಟುಂಬದಿಂದ ಬಂದಿದ್ದು. ನನ್ನ ಪ್ರಾರಂಭಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆದದ್ದು. ನಮ್ಮ ಸ್ವಗ್ರಾಮದಲ್ಲೇ ಒಂದರಿಂದ ನಾಲ್ಕನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಹಾಗೂ ನಾನು ನಮ್ಮ ಊರಿನ ಸಮೀಪಕ್ಕೆ ಇವರು ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಶಾಲಾ ಕಾಲೇಜಿನ ವಿದ್ಯಾಭ್ಯಾಸ ಅಂದರೆ ಪ್ರೌಢ ಕೆ.ಎಸ್.ಎನ್ ಶಾಲೆ ಮತ್ತು ಕಾಲೇಜು ಡಿ.ಬಿ.ಜೆ.ಸಿ ಪಿ.ಯು.ಸಿಯವರೆಗೆ ಓದಿದ್ದು.

ಎಂಜಿನಿಯರಿಂಗ್ ಆಯ್ಕೆ ಮಾಡಲು ಕಾರಣವೇನು?
ಎಲ್ಲರಂತೆ ನಾನೂ ಕೂಡ ಮುಂದೆ ಸಹಜವಾಗಿಯೇ ಪದವಿ ಎಂದರೆ ಬಿ.ಎಸ್ಸಿ ಮಾಡಲು ನಿರ್ಧರಿಸಿದ್ದು. ಆಕಸ್ಮಿಕವಾಗಿ ಎಂಜಿನಿರಿಂಗ್ ಗಾಗಿ ಎಂಟ್ರೆನ್ಸ್ ಪರೀಕ್ಷೆ ಎದುರಿಸಿದ್ದು. ಅದರಲ್ಲಿ ಉತ್ತಮ ಅಂಕ ಬಂದಿದ್ದರಿಂದ ಈ ವಿದ್ಯಾಭ್ಯಾಸವನ್ನೇ ಆಯ್ಕೆ ಮಾಡಿಕೊಂಡೆ. ಎಟಿಎಂಇ ಕಾಲೇಜ್ ಆಫ್ ಎಂಜಿನಿಯರಿಂಗ್ ಮೈಸೂರ್ ನಲ್ಲಿ ಪ್ರವೇಶ ಪಡೆದೆ. ಪ್ರಾರಂಭದಲ್ಲಿ ನನಗೆ ವೈಯಕ್ತಿಕ ವಿವರಗಳನ್ನು ಇಂಗ್ಲಿಷ್ ನಲ್ಲಿ ಕೊಡಲು ಕಷ್ಟವೇ ಆಗಿತ್ತು. ಆದರೂ ನನ್ನ ಗುರುಗಳ ಮತ್ತು ಮನೆಯವರ ಸಹಕಾರದಿಂದ ಕಲಿಯಬೇಕು ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಇದ್ದುದರಿಂದ ಶ್ರದ್ಧೆಯಿಟ್ಟು ಓದಲು ಪ್ರಾರಂಭಿಸಿದೆ.
ಹಾಲು ಉತ್ಪಾದಕರ ಸಹಕಾರ ಸಂಘದವರು ಉಚಿತವಾಗಿ ಹಾಸ್ಟೆಲ್ ನಡೆಸುತ್ತಿದ್ದರು. ಇದು ಕೇವಲ ಹಾಲು ಉತ್ಪಾದಕರಿಗೆ ಮಾತ್ರ ಇದ್ದದ್ದು, ಇದನ್ನು ನಾನು ಬಳಸಿಕೊಂಡೆ, ನಾನು ಅಲ್ಲೇ ಸೇರಿ ನನ್ನ ಓದನ್ನು ಮುಂದುವರಿಸಿ ಎಂಜಿನಿಯರಿಂಗ್ ನಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಟಾಪರ್ ಆಗಿದ್ದೆ. ನಮ್ಮ ಕುಟುಂಬದಲ್ಲಿ ಪದವಿ ಪಡೆದದ್ದು ನಾನೇ ಮೊದಲು.
ಯು.ಪಿ.ಎಸ್.ಸಿ/ಇ.ಎಸ್.ಇ ಬರೆಯಬೇಕು ಎಂಬ ಕನಸು ಹೇಗೆ ಹುಟ್ಟಿತು?
ಗುರುಗಳ ಸಲಹೆಯ ಮೇರೆಗೆ ಎಂಜಿನಿಯರಿಂಗ್ ನಲ್ಲಿ ಒಳ್ಳೆಯ ಅಂಕಗಳು ಬಂದಿದ್ದರಿಂದ ಎಂ.ಟೆಕ್ ಮಾಡಲು ಎಂಟ್ರೆನ್ಸ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ನಾನು ಹೈದರಾಬಾದಿಗೆ ಹೋದೆ. ಗೇಟ್ ಐಇಎಸ್ ಪರೀಕ್ಷೆಗಳನ್ನು ಬರೆಯಲು ಎರಡು ವರ್ಷಗಳ ಕಲಿಕೆಯ ಜೊತೆಗೆ ಆನ್ ಲೈನ್ ಟ್ಯೂಟರ್ ಆಗಿ ಕೆಲಸ ಮಾಡುತ್ತಾ ನನ್ನ ಓದನ್ನು ಮುಂದುವರಿಸುವುದರ ಜೊತೆಗೆ ನನ್ನ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತಿದ್ದೆ. ಹೀಗೆ ಮುಂದುವರಿಯುವ ಹಾದಿಯಲ್ಲಿ ಅಲ್ಲಿ ತರಬೇತಿ ಕೇಂದ್ರಗಳಲ್ಲಿ ಇ.ಎಸ್.ಇ (ಎಂಜಿನಿಯರಿಂಗ್ ಸರ್ವೀಸ್ ಎಗ್ಸಾಮಿನೇಶನ್) ಬಗ್ಗೆ ಸ್ಪಷ್ಟ ಅರಿವು ಉಂಟಾಯಿತು. ಅದಕ್ಕಾಗಿ ಶ್ರದ್ಧೆಯಿಟ್ಟು ಪ್ರಯತ್ನಿಸಿದೆ.





