ಕಪ್ಪು ಕಲೆಯ ನಿವಾರಣೆಗಾಗಿ ಇಂಥ ಕೆಲವು ಪ್ರಾಕೃತಿಕ ಹಾಗೂ ಪ್ರಭಾವಿ ಉಪಾಯಗಳ ಕುರಿತು ತಿಳಿದುಕೊಳ್ಳಿ.......
ಕಪ್ಪುಕಲೆ ಅಥವಾ ಚರ್ಮದ ಅಸಮಾನ ಬಣ್ಣ ಒಂದು ದೊಡ್ಡ ಸೌಂದರ್ಯ ಸಮಸ್ಯೆ ಎನಿಸಿದೆ, ಇದರಿಂದ ಬಾಧೆಗೆ ಒಳಗಾಗದ ಹೆಂಗಸರಿಲ್ಲ. ತುಟಿ, ಗಲ್ಲ, ಮಂಡಿ, ಮೊಣಕೈ, ಕುತ್ತಿಗೆ, ಕಂಕುಳ, ನಿತಂಬಗಳವರೆಗೂ ಈ ಕಪ್ಪುಕಲೆ ತೆಳು ಪ್ಯಾಚೆಸ್ ತರಹ ಹರಡಿಕೊಂಡು ಕಿರಿಕಿರಿ ಎನಿಸುತ್ತದೆ.
ಇದಕ್ಕೆ ಕಾರಣ ಹಲವು. ಬಿಸಿಲಿನಲ್ಲಿ ಸದಾ ತಿರುಗಾಟ, ಪರಿಸರ ಮಾಲಿನ್ಯ, ಅನುಚಿತ ಸ್ಕಿನ್ ಕೇರ್ ರೊಟೀನ್, ಹಾರ್ಮೋನ್ ಬದಲಾವಣೆ ಇತ್ಯಾದಿ. ಇದರಿಂದ ಮುಕ್ತಿ ಪಡೆಯುವುದು ಅಸಾಧ್ಯವೇನಲ್ಲ.
ತುಟಿಗಳ ಕಪ್ಪಾಗುವಿಕೆ
ತುಟಿಗಳ ಕಪ್ಪಾಗುವಿಕೆ ಒಂದು ಸಾಧಾರಣ ಸಮಸ್ಯೆ. ಮುಖ್ಯವಾಗಿ ಧೂಮಪಾನ ಮಾಡುವವರಿಗೆ ಇದು ತಪ್ಪಿದ್ದಲ್ಲ. ಬಿಸಿಲಿನ ನೇರ ಪ್ರಕೋಪ ತುಟಿಗಳ ಮೇಲೆ ಹೆಚ್ಚಾದಷ್ಟೂ ಹೀಗಾಗುತ್ತದೆ. ಇದರ ಜೊತೆಗೆ, ತುಟಿಗಳನ್ನು ನಿಯಮಿತವಾಗಿ ಮಾಯಿಶ್ಚರೈಸ್ ಮಾಡದಿದ್ದರೆ, ತುಟಿಗಳು ಬೇಗ ಶುಷ್ಕಗೊಂಡು ಕಪ್ಪಾಗ ತೊಡಗುತ್ತವೆ.
ಪರಿಹಾರ
ನಿಂಬೆ-ಜೇನಿನ ಮಿಶ್ರಣ : ನಿಂಬೆಯಲ್ಲಿನ ನೈಸರ್ಗಿಕ ಬ್ಲೀಚಿಂಗ್ ಗುಣ, ತುಟಿಗಳ ಕಪ್ಪಾಗುವಿಕೆಯನ್ನು ದೂರಗೊಳಿಸಲು ನೆರವಾಗುತ್ತದೆ. ಜೇನಿನ ಮಾಯಿಶ್ಚರೈಸಿಂಗ್, ಆ್ಯಂಟಿ ಬ್ಯಾಕ್ಟೀರಿಯ್‌ಆ್ಯಂಟಿ ಆಕ್ಸಿಡೆಂಟ್ ಗುಣಗಳು ತುಟಿಯ ಕಪ್ಪನ್ನು ತಗ್ಗಿಸಲು ನೆರವಾಗುತ್ತವೆ. ಒಂದು ಹೋಳು ನಿಂಬೆಯಿಂದ ರಸ ಹಿಂಡಿಕೊಂಡು, ಅದಕ್ಕೆ 1 ಚಮಚ ಜೇನುತುಪ್ಪ ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ಇದನ್ನು ತುಟಿಗಳಿಗೆ ನೀಟಾಗಿ ಸರಿ, 15-20 ನಿಮಿಷ ಹಾಗೇ ಬಿಡಿ. ಹೀಗೆ 1 ತಿಂಗಳು ಮಾಡುವುದರಿಂದ ತುಟಿಗಳ ಬಣ್ಣ ಕ್ರಮೇಣ ತೇಲುತ್ತದೆ.
ಗುಲಾಬಿಜಲ-ಗ್ಲಿಸರಿನ್ : ಗುಲಾಬಿಜಲ ತುಟಿಗಳಿಗೆ ಹೆಚ್ಚಿನ ತಾಜಾತನ, ಮೃದುತ್ವ ತುಂಬುತ್ತದೆ. ಗ್ಲಿಸರಿನ್ ತುಟಿಗಳನ್ನು ಮಾಯಿಶ್ಚರೈಸ್ ಗೊಳಿಸಿ, ಕೋಮಲ ಆಗಿಸುತ್ತದೆ. ರಾತ್ರಿ ಮಲಗುವ ಮುನ್ನ, ತುಸು ಗುಲಾಬಿಜಲಕ್ಕೆ ಗ್ಲಿಸರಿನ್ ಹನಿ ಬೆರೆಸಿಕೊಂಡು ತುಟಿಗಳಿಗೆ ಹಚ್ಚಿ ನಿದ್ದೆ ಮಾಡಿ.
ಸಕ್ಕರೆಯ ಸ್ಕ್ರಬ್ : ಸಕ್ಕರೆಯ ಸಣ್ಣ ಕಣಗಳು ಡೆಡ್ ಸ್ಕಿನ್ ತೊಲಗಿಸುಲ್ಲಿ ಸಹಕಾರಿ. ಸಕ್ಕರೆ ಕೊಬ್ಬರಿ ಎಣ್ಣೆಯ ಮಿಶ್ರಣ ಉತ್ತಮ ಸ್ಕ್ರಬ್ ಆಗಿ ತುಟಿಗಳ ಮೇಲೆ ಕೆಲಸ ಮಾಡುತ್ತದೆ. ಈ ಮಸಾಜ್ ನಿಂದ ತುಟಿ ಸ್ವಚ್ಛ, ಶುಭ್ರ, ಮೃದುವಾಗಿ, ಗುಲಾಬಿ ದಳಗಳಂತಾಗುತ್ತವೆ.
ಮೊಣಕೈ ಮಂಡಿಯ ಕಪ್ಪಾಗುವಿಕೆ
ಮೊಣಕೈ ಮಂಡಿ ಬಳಿ ಕಪ್ಪು ಕಲೆ, ಸಾಮಾನ್ಯವಾಗಿ ಅಲ್ಲಿನ ಒರಟು ಚರ್ಮದಿಂದಾಗಿ ಆಗುತ್ತದೆ. ಈ ಜಾಗ ಸದಾ ಘರ್ಷಣೆಗೆ ಒಳಗಾಗುತ್ತಿರುತ್ತದೆ, ಆ ಕಾರಣ ಆ ಭಾಗದ ಚರ್ಮ ಒರಟಾಗಿ, ಕಪ್ಪಾಗುತ್ತದೆ.
ಪರಿಹಾರ
ನಿಂಬೆ ಬೇಕಿಂಗ್ ಸೋಡ : ಇದರ ಮಿಶ್ರಣದಿಂದ ಮೊಣಕೈ ಮಂಡಿ ಭಾಗಕ್ಕೆ ಹೆಚ್ಚಿನ ಲಾಭವಿದ್ದು, ಆ ಭಾಗದ ಕಪ್ಪು ಕಲೆ ತಾನಾಗಿ ದೂರಾಗುತ್ತದೆ. ಒಂದು ಹೋಳು ನಿಂಬೆಯ ಮೇಲೆ ಬೇಕಿಂಗ್ ಸೋಡ ಉದುರಿಸಿ. ಇದನ್ನು ಆ ಭಾಗಕ್ಕೆ ಸರಿ ನಿಧಾನವಾಗಿ ಮಸಾಜ್ ಮಾಡಿ. ಇದು ಅಲ್ಲಿನ ಡೆಡ್ ಸ್ಕಿನ್ ತೊಲಗಿಸಿ, ಕಪ್ಪು ಬಣ್ಣ ಹೋಗಿಸಿ, ಆ ಭಾಗದ ಚರ್ಮದ ಬಣ್ಣವನ್ನು ತೇಲಿಸುತ್ತದೆ. ಒಂದು ತಿಂಗಳವರೆಗೂ ದಿನಕ್ಕೆ 1-2 ಸಲ ಹೀಗೆ ಮಾಡಿ.





