ಮದುವೆ ಎನ್ನುವುದು ಗಂಡು ಹೆಣ್ಣನ್ನು ಒಂದಾಗಿಸುತ್ತದೆ. ಅದೇ ಸಂಬಂಧ ಮತ್ತೊಬ್ಬರ ಜೊತೆಗೂ ನಮ್ಮ ನಂಟು ಬೆಳೆಸುತ್ತದೆ. ಅದೇ ಅತ್ತೆ ಸೊಸೆಯ ಸಂಬಂಧ. ಅದೊಂದು ಕಾಲವಿತ್ತು, ಆಗ ಸಿನಿಮಾದಲ್ಲಿ ಅತ್ತೆಯ ಪಾತ್ರ ನಿಭಾಯಿಸಲು ನಿರ್ದಯಿ ಇಮೇಜ್ ಹೊಂದಿರುವ ರಮಾದೇವಿ, ಬಡ್ಡಿ ಬಂಗಾರಮ್ಮರಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುತ್ತಿತ್ತು. ಜೀವನವೇ ಆಗಿರಬಹುದು ಅಥವಾ ಪರದೆ ಎರಡರಲ್ಲೂ ಅತ್ತೆ ಸೊಸೆಯ ಸಂಬಂಧ ಕಹಿಯಿಂದ ತುಂಬಿರುತ್ತಿತ್ತು. ಆದರೆ ಅದೀಗ ಕಳೆದುಹೋದ ದಿನಗಳು. ಇಂದಿನ ದಿನಗಳಲ್ಲಿ ಸೊಸೆಯಂದಿರು ಸಾಕಷ್ಟು ಓದಿದವರಾಗಿದ್ದಾರೆ. ನೌಕರಿ ಕೂಡ ಮಾಡುತ್ತಿದ್ದಾರೆ, ಫ್ಯಾಷನ್ ಪ್ರಿಯರಾಗುತ್ತಿದ್ದಾರೆ. ಈ ಎಲ್ಲ ನಿಟ್ಟಿನಲ್ಲೂ ಅವರೀಗ ಸ್ಮಾರ್ಟ್‌ ಆಗುತ್ತಿದ್ದಾರೆ. ಅತ್ತೆಯರು ಕೂಡ ಹಿಂದೆ ಬಿದ್ದಿಲ್ಲ, ಇಂದಿನ ಅತ್ತೆಯರು ತಮ್ಮ ಹಳೆಯ ವ್ಯಕ್ತಿತ್ವವನ್ನು ಕಿತ್ತೆಸೆದಿದ್ದಾರೆ. ಏಕೆಂದರೆ ಮಗನ ಜೊತೆಗೆ ಜೀವನಪೂರ್ತಿ ಒಳ್ಳೆಯ ಸಂಬಂಧ ಕಾಯ್ದುಕೊಂಡು ಹೋಗಲು ಸೊಸೆಯ ಜೊತೆಗೂ ಒಳ್ಳೆಯವಳಾಗಿರುವುದು ಅತ್ಯವಶ್ಯ ಎನ್ನುವುದು ಆಕೆಗೆ ಗೊತ್ತಿದೆ.

ಪರಸ್ಪರರ ಸಂಬಂಧವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರೇ ಸ್ಮಾರ್ಟ್‌ ಅತ್ತೆ ಸೊಸೆ. ಅತ್ತೆಯೊಂದಿಗಿನ ಕಿತ್ತಾಟ ತನ್ನ ಸಂಸಾರದಲ್ಲಿ ಕ್ಲೇಶವುಂಟು ಮಾಡುತ್ತದೆ ಎನ್ನುವುದು ಸೊಸೆಗೆ ಗೊತ್ತು. ಸೊಸೆಯ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಹೋದರೆ ಇಡೀ ಕುಟುಂಬ ಖುಷಿಯಿಂದಿರುತ್ತದೆ. ಅದರಿಂದ ವೃದ್ಧಾಪ್ಯದಲ್ಲಿ ಆಸರೆ ಸಿಗುತ್ತದೆ ಎನ್ನುವುದು ಅತ್ತೆಗೂ ತಿಳಿದಿದೆ. ಇಬ್ಬರ ನಡುವಿನ ಸಂಬಂಧ ಮಾಧುರ್ಯದಿಂದ ಕೂಡಿದ್ದರೆ, ಸೊಸೆಯನ್ನು ಮಗಳಂತೆ ಕಂಡರೆ ಸೊಸೆಗೆ ಅದಕ್ಕಿಂತ ಖುಷಿ ಮತ್ತೊಂದಿರಲಾರದು. ಆದರೆ ಇದಕ್ಕಾಗಿ ತಕ್ಕಡಿಯ ಎರಡೂ ಪಟ್ಟಿಯಲ್ಲಿ `ಸ್ಮಾರ್ಟ್‌ ನೆಸ್‌’ ಅನ್ನುವುದು ಇರಬೇಕು. ಈ ಅತ್ಯಮೂಲ್ಯ ಸಂಬಂಧದ ಮಹತ್ವವನ್ನು ಅರಿತು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವವರೇ ನಿಜವಾದ ಸ್ಮಾರ್ಟ್ ಅತ್ತೆ ಸೊಸೆಯಂದಿರಾಗಿದ್ದಾರೆ.

ಆ್ಯನಿ ಚಾಪ್‌ ಮೆನ್‌ ಹೆಸರಾಂತ ಸಂಗೀತಗಾರ್ತಿ ಹಾಗೂ ಭಾಷಣಗಾರ್ತಿ. ಅವರು ಅತ್ತೆ ಸೊಸೆಯ ಸಂಬಂಧ ಕುರಿತಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. `ದಿ ಮದರ್‌ ಇನ್‌ ಡ್ಯಾನ್ಸ್,’ `ಓವರ್‌ ಕಮಿಂಗ್‌ ನೆಗೆಟಿವ್ ‌ಡ್ಯಾನ್ಸ್,’ `10 ಲೇಸ್‌ ಟೂ ಪ್ರಿಪೇರ್ ಡಾಟರ್‌ ಫಾರ್‌ ಲೈಫ್‌’ ಇವು ಅವರ ಶೀರ್ಷಿಕೆಗಳು. ಅವರು ಇಬ್ಬರ ನಡುವಿನ ಸಂಬಂಧ ಸುಧಾರಣೆಗೆ ಹಲವಾರು ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಅತ್ತೆಯಾದವಳು ತನ್ನ ಸೊಸೆಯನ್ನು ಮಗಳಿಗೆ ಹೋಲಿಸಬಾರದು ಹಾಗೂ ಸೊಸೆ ತನ್ನ ಅತ್ತೆಯನ್ನು ಅಮ್ಮನಿಗೆ ಹೋಲಿಸಬಾರದು. ಪರಸ್ಪರರ ವ್ಯಕ್ತಿತ್ವವನ್ನು ಅರಿಯಲು ಇಬ್ಬರೂ ಪ್ರಯತ್ನಿಸಬೇಕು. ಒಂದು ವೇಳೆ ಒಬ್ಬರು ಹಠಮಾರಿ ಸ್ವಭಾವದವರಾಗಿದ್ದರೆ, ಅವರು ಅದನ್ನು ಬಿಟ್ಟು ನಮ್ರ ಸ್ವಭಾವ ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಹೊಸ ಸೊಸೆ ಹೊಸ ಅತ್ತೆ

ಸೊಸೆ ಆ ಮನೆಗೆ ಹೇಗೆ ಹೊಸಬಳಾಗಿರುತ್ತಾಳೊ, ಅದೇ ರೀತಿ ಅತ್ತೆಯಾದವಳಿಗೂ ತಾನು ಅತ್ತೆ ಆಗಿರುವುದು ಹೊಸ ಅನುಭವವಾಗಿರುತ್ತದೆ. ಇಬ್ಬರಿಗೂ ಹೊಸ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿರುತ್ತದೆ. ಹೀಗಾಗಿ ಇಬ್ಬರಿಗೂ ಸಾಕಷ್ಟು ಸಮಯಾವಕಾಶ ದೊರಕಬೇಕು. ಅಂಗೈಯಲ್ಲಿ ಸಸಿ ಹುಟ್ಟುವುದಿಲ್ಲ. ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಒಬ್ಬರು ಮತ್ತೊಬ್ಬರಿಗೆ ಸಾಕಷ್ಟು ಸಮಯ ಹಾಗೂ ಸ್ಪೇಸ್‌ ಕೊಡಬೇಕು.

ಲೇಖಕಿ ಚಂದ್ರಿಕಾರವರ ಮನೆಗೆ ಒಬ್ಬರು ಹೊಸ ಅತಿಥಿ ಬರಲಿದ್ದಾಳೆ ಎನ್ನುವುದನ್ನು ಅವರು ಮನಸಾರೆ ಒಪ್ಪಿಕೊಳ್ಳುತ್ತಾರೆ. ತಾನು ಇನ್ನು ಮುಂದೆ ಅವಳಿಗೆ ಯಾವುದೇ ನಿರ್ದೇಶನ ಕೊಡುವ ಹಾಗಿಲ್ಲ ಎನ್ನುವುದನ್ನು ಕೂಡ ಸ್ಪಷ್ಟಪಡಿಸುತ್ತಾರೆ. ಅಡುಗೆ ಮಾಡುವುದು, ಎಂತಹ ಪೋಷಾಕು ಧರಿಸಬೇಕು, ಎಲ್ಲಿಗೆ ಹೋಗಬೇಕು ಎನ್ನುವುದನ್ನು ಅವಳೇ ನಿರ್ಧರಿಸುತ್ತಾಳೆ. ಮಗ ನನ್ನವನೇ, ಈಗಷ್ಟೇ ನೆಟ್ಟಿರುವ ಒಂದು ಸಸಿಗೆ ಪಾಲನೆ ಪೋಷಣೆ ಮಾಡಿದರೆ ಅದು ನಮ್ಮ ಮನೆಯಂಗಳದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವುದು ಚಂದ್ರಿಕಾ ಅವರಿಗೆ ಗೊತ್ತು.

ಮದುವೆಯಾದ 6 ವರ್ಷಗಳ ಬಳಿಕ ಅತ್ತೆ ಸೊಸೆ ನಡುವೆ ಯಾವುದೇ ತಪ್ಪು ಕಲ್ಪನೆಗೂ ಅವಕಾಶ ಸಿಕ್ಕಿಲ್ಲ. ಸೊಸೆ ಆ ಮನೆಯಲ್ಲಿ ಅವರದೇ ವಾತಾವರಣಕ್ಕೆ ತಕ್ಕಂತೆ ತನ್ನನ್ನು ತಾನು ಹೊಂದಾಣಿಕೆ ಮಾಡಿಕೊಂಡಳು. ಆದರೆ ತನ್ನ ಮೂಲಸ್ವಭಾವದಲ್ಲಿ ಹೆಚ್ಚೇನೂ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಉಂಟಾಗಲಿಲ್ಲ. ಅವಳು ಶಾಪಿಂಗ್ ಗೆ ಹೋಗುವಾಗ ಅತ್ತೆಯ ಜೊತೆಗೇ ಹೋಗುತ್ತಾಳೆ, ಇಬ್ಬರೂ ಒಂದೇ ರೀತಿಯ ಪೋಷಾಕು ಧರಿಸುತ್ತಾರೆ. ಇಬ್ಬರೂ ತಮಗಿಷ್ಟವಾದುದನ್ನು ಇಷ್ಟಪಟ್ಟು ತಿನ್ನುತ್ತಾರೆ. ಈ ಬಗ್ಗೆ ಚಂದ್ರಿಕಾ ಅವರು ಹೇಳುವುದು ಹೀಗೆ, “ನೀವು ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ. ಆಗ ಎದುರಿಗಿನ ದೃಶ್ಯ ಕೂಡ ಅಷ್ಟೇ ಸೊಗಸಾಗಿ ಗೋಚರಿಸುತ್ತದೆ.”

ಮಾತುಗಳ ಆಟ

ಒಂದು ಸಂಗತಿ ನೆನಪಿನಲ್ಲಿರಲಿ, ಅತ್ತೆ ಸೊಸೆ ಇಬ್ಬರೂ ಬೇರೆ ಬೇರೆ ಕಡೆಯಿಂದ ಬಂದವರು. ಇಬ್ಬರೂ ಪ್ರಬುದ್ಧರು. ಈವರೆಗೆ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುತ್ತ ಬಂದಿದ್ದಾರೆ. ನಾವಾಡುವ ಮಾತುಗಳು ಸಂಬಂಧವನ್ನು ಬಲಿಷ್ಠಗೊಳಿಸಬಹುದು. ಇಲ್ಲಿ ಗಾಜಿನ ಹಾಗೆ ಚೂರು ಚೂರು ಕೂಡ ಮಾಡಿಬಿಡಬಲ್ಲದು. ಹೀಗಾಗಿ ಯೋಚಿಸಿ ಮಾತುಗಳ ಪ್ರಯೋಗ ಮಾಡಿ. ಎದುರಿಗಿನ ವ್ಯಕ್ತಿಯ ಭಾವನೆಗಳನ್ನು ಅರಿತು ಮಾತನಾಡಿ. ಒಂದು ಸಲ ಹೊರಟ ಮಾತಿನ ಬಾಣ ಮತ್ತೆಂದೂ ವಾಪಸ್‌ ಬರುವುದಿಲ್ಲ. ಮಾತಿನ ಬಾಣದಿಂದ ಆದ ಗಾಯವನ್ನು ನಿವಾರಣೆ ಮಾಡುವುದು ಕಷ್ಟಕರ. ಮೌನವಾಗಿರಲು ಸಾಧ್ಯವಾದರೆ ಮೌನವಾಗಿದ್ದು ಬಿಡಿ.

ಸ್ಮಾರ್ಟ್‌ ಸೊಸೆ ಆಗಿರಿ

ಸೊಸೆ ತನ್ನ ಕುಟುಂಬ, ಅಮ್ಮ, ಅಪ್ಪ, ಸಂಬಂಧಿಕರನ್ನೆಲ್ಲ ಬಿಟ್ಟು ಅತ್ತೆ ಮನೆಗೆ ಬಂದಿರುತ್ತಾಳೆ. ಅಮ್ಮನ ಮನೆಯ ಪ್ರೀತಿಯನ್ನು ಅತ್ತೆ ತನ್ನ ಮನೆಯಲ್ಲಿ ಸೊಸೆಗೆ ಕೊಡಲು ಪ್ರಯತ್ನಿಸುತ್ತಾಳೆ. ಅತ್ತೆ ತನ್ನ ಮಗನ ಸ್ವಭಾವ, ಆಸಕ್ತಿ ಅನಾಸಕ್ತಿ, ಹವ್ಯಾಸಗಳ ಬಗೆಗೂ ಸಾಕಷ್ಟು ತಿಳಿಸುತ್ತಾಳೆ. ಅಷ್ಟೇ ಅಲ್ಲ ಮನೆಯ ಇತರ ಸದಸ್ಯರ ಅವಶ್ಯಕತೆಗಳ ಬಗೆಗೂ ಮನವರಿಕೆ ಮಾಡಿಕೊಡುತ್ತಾಳೆ. ಹೊಸ ಮನೆಯ ರೀತಿ ರಿವಾಜು, ಪರಂಪರೆಗಳನ್ನು ಕೂಡ ಕಲಿಸುತ್ತಾಳೆ. ಇಂತಹ ಸ್ಥಿತಿಯಲ್ಲಿ ಸೊಸೆ ತನ್ನ ಸ್ಮಾರ್ಟ್‌ ನೆಸ್ ಮುಖಾಂತರ ಆ ಸಂಬಂಧವನ್ನು ಮಧುರಗೊಳಿಸಲು ಪ್ರಯತ್ನಿಸಬೇಕು.

ಅತ್ತೆ ಹಿರಿಯರಷ್ಟೇ ಅಲ್ಲ, ಅನುಭವಿ ಕೂಡ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದರಿಂದ ಅವರ ಕಾಲದ ತಮಾಷೆಯ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಿ. ಅವರ ಬಾಲ್ಯದ ದಿನಗಳು, ಮದುವೆ ನಂತರದ ದಿನಗಳ ಬಗ್ಗೆ, ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಪಟ್ಟ ಘಟನೆಗಳ ಬಗ್ಗೆ ಆಲಿಸಿ, ಇದರಿಂದ ಸಂಬಂಧ ಬಲಗೊಳ್ಳಲು ಸಹಾಯವಾಗುತ್ತದೆ.

ಸೊಸೆ ಅತ್ತೆಯಿಂದ ಸಲಹೆ ಪಡೆಯುವಾಗ ಯಾವುದೇ ಹಿಂಜರಿಕೆ ತೋರಬಾರದು. ಅವರ ಸಲಹೆಗಳ ಬಗ್ಗೆ ನಿಮಗೆ ಅಷ್ಟಾಗಿ ಒಲವು ಇರದಿದ್ದರೂ, ಅವರ ಹಿರಿಮೆಗೆ ಗೌರವ ಕೊಟ್ಟು ಸಲಹೆ ಪಡೆಯಿರಿ. ಸಲಹೆಯನ್ನು ಒಪ್ಪಿಕೊಳ್ಳುವುದು ನಿಮ್ಮ ಇಚ್ಛೆಯನ್ನು ಅವಲಂಬಿಸಿರುತ್ತದೆ. ನಿಮಗಿಷ್ಟವಾದರೆ ಒಪ್ಪಿಕೊಳ್ಳಿ. ಇಲ್ಲವಾದರೆ ಅದರ ಬಗ್ಗೆ ಅತ್ತೆಗೆ ಮನವರಿಕೆ ಮಾಡಿಕೊಡಿ.

ಸಂಬಂಧದಲ್ಲಿ ಸ್ಪೇಸ್‌ ಕೊಡುವುದು ಕೂಡ ಅಷ್ಟೇ ಅತ್ಯವಶ್ಯ. ನಿಮ್ಮ ಗಂಡ ಈವರೆಗೆ ಅತ್ತೆಗೆ ಕೇವಲ ಮಗ ಮಾತ್ರ ಆಗಿದ್ದ. ಅಮ್ಮ ಹೇಳಿದ್ದಷ್ಟೇ ಅವನಿಗೆ ವೇದವಾಕ್ಯವಾಗಿತ್ತು. ಮದುವೆಯ ಬಳಿಕ ಅವನಲ್ಲಿ ಬದಲಾವಣೆ ಉಂಟಾಗುವುದು ಸಹಜ. ಅದರಿಂದ ಅಮ್ಮನಲ್ಲಿ ಅಷ್ಟಿಷ್ಟು ಅಸುರಕ್ಷತೆಯ ಭಾವನೆ ಉಂಟಾಗುತ್ತದೆ. ಅದು ಅವರ ಮಾತಿನಲ್ಲಿ ಸಿಡುಕಿನ ಮೂಲಕ ಹೊರಹೊಮ್ಮಬಹುದು. ಸ್ಮಾರ್ಟ್‌ ಸೊಸೆಯ ಕರ್ತವ್ಯ ಏನಾಗಬೇಕೆಂದರೆ, ಆಕೆ ಅಮ್ಮ ಮಗನ ನಡುವಿನ ಸಂಬಂಧದಲ್ಲಿ ಬಿರುಕನ್ನುಂಟು ಮಾಡಲು ಪ್ರಯತ್ನಿಸಬಾರದು. ಅಮ್ಮ ಮಗನ ನಡುವೆ ಮಾತುಕಥೆ ನಡೆಯುತ್ತಿದ್ದರೆ, ಸೊಸೆ ಅದರ ಬಗ್ಗೆ ತಪ್ಪು ಭಾವಿಸಬಾರದು. ಜೊತೆಗೆ ಅವರಲ್ಲಿ ಹಸ್ತಕ್ಷೇಪ ಕೂಡ ಮಾಡಬಾರದು. ಹೊಸ ಕುಟುಂಬದಲ್ಲಿ ಸಮತೋಲನ ಕಾಯ್ದುಕೊಂಡು ಹೋಗಲು ಪರಸ್ಪರರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ಕೊಡಿ.

ಸ್ಮಾರ್ಟ್‌ ಅತ್ತೆ ಆಗಿ

ಹೊಸ ಸೊಸೆ ತಮ್ಮ ಮನೆಯ ಹೊಸ ಸದಸ್ಯೆಯಾಗಿದ್ದಾಳೆ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡರೇ ಸ್ಮಾರ್ಟ್‌ ಅತ್ತೆ. ಮನೆಯ ವಾತಾವರಣ ಸೀರಿಯಸ್‌ ಆಗಿರಬಾರದು. ಸೊಸೆ ತನಗೆ ಏನನ್ನು ಹೇಳಬೇಕಾಗಿದೆಯೋ, ಅವಳು ಯಾವುದೇ ಅಳುಕಿಲ್ಲದೆ ಹೇಳಬೇಕು. 24-25ನೇ ವಯಸ್ಸಿನಲ್ಲಿ ಸೊಸೆ ಮನೆಗೆ ಬಂದಿರುತ್ತಾಳೆ. ಅವಳ ಕೆಲವು ಅಭ್ಯಾಸಗಳು ಹೇಗಿರುತ್ತವೆಂದರೆ, ಅ ನಿಮಗೆ ಇಷ್ಟವಾಗದೆ ಹೋಗಬಹುದು. ಆದರೂ ನೀವು ಒತ್ತಡ ಹೇರಿ ನಿಮ್ಮದೇ ಆದ ರೀತಿಯಲ್ಲಿ ನಿಮ್ಮದೇ ಆದ ಅಭ್ಯಾಸ ಹವ್ಯಾಸ ರೂಢಿಸಿಕೊಳ್ಳಲು ಹೇಳಬಾರದು. ಅವಳಿಗೆ ತನ್ನದೇ ಆದ ಹವ್ಯಾಸಗಳನ್ನು ಪೂರೈಸಿಕೊಳ್ಳಲು ಸಹಕರಿಸಿ. ಆಗಲೇ ಅವಳು ನಿಮ್ಮನ್ನೇ ತಮ್ಮವರಂತೆ ಆದರಿಸಬಹುದು.

ಸೊಸೆಯ ಚಿಕ್ಕಪುಟ್ಟ ತಪ್ಪುಗಳನ್ನು ಮಗಳು ಮಾಡಿದ ತಪ್ಪು ಎಂಬಂತೆ ನಿರ್ಲಕ್ಷಿಸಿ. ಅವಳಿಗೆ ತಾಯಿಯ ಪ್ರೀತಿ ಕೊಟ್ಟು ನೋಡಿ. ನಿಮ್ಮ ಮನೆ ನಂದನವಾಗುತ್ತದೆ.

ಸೊಸೆ ನಿಮ್ಮ ಮನೆಯ ಆತ್ಮೀಯ ಸದಸ್ಯಳು ಎಂಬಂತೆ ಭಾವಿಸಿ. ಅತ್ತೆ ಸೊಸೆಯ ಮಧುರ ಸಂಬಂಧ ಇಡೀ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಅದರಿಂದಾಗಿ ಕುಟುಂಬದಲ್ಲಿ ಯಾವುದೇ ವ್ಯರ್ಥ ಒತ್ತಡ ಉಂಟಾಗದು.

ಈವರೆಗೆ ನಿಮ್ಮ ಪ್ರೀತಿ ತುಂಟಾಟದಲ್ಲಿ ಮಗನೊಬ್ಬನೇ ಪಾಲುದಾರನಾಗಿದ್ದ. ಇನ್ನು ಮುಂದೆ ಅದನ್ನು ನಿಮ್ಮ ಸೊಸೆಗೂ ಒಂದಿಷ್ಟು ಹಂಚಿ.

ಮಾಟ ಮಂತ್ರದ ಜಗತ್ತು

ಅತ್ತೆ ಸೊಸೆಯ ಜಗಳ ಎಂತಹ ಒಂದು ವಿಷಯವೆಂದರೆ, ಅದು ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಪ್ರತಿ ಮನೆಯಲ್ಲೂ ಒಮ್ಮಿಂದೊಮ್ಮೆ ಇಂತಹದೊಂದು ಘಟನೆ ಘಟಿಸುತ್ತದೆ. ಹೀಗಾಗಿ ಜ್ಯೋತಿಷಿಗಳು, ಧಾರ್ಮಿಕ ಗುತ್ತಿಗೆದಾರರು ಈ ವಿಷಯದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುತ್ತಾರೆ.

ರಾಜಸ್ಥಾನದ ವೈದಿಕ ಅನುಷ್ಠಾನ ಸಂಸ್ಥೆಯ ಆಚಾರ್ಯ ಅಜಯ್‌ ದ್ವಿವೇದಿ ಹೀಗೆ ಹೇಳುತ್ತಾರೆ, `ಓಂ ಕ್ರಾಂ…. ಕ್ರೀಂ ಕ್ರಾಂ…’ ಮಂತ್ರವನ್ನು 108 ಸಲ ಜಪಿಸಬೇಕು. ಅತ್ತೆ ತನ್ನ ಬೆಡ್‌ ರೂಮಿನಲ್ಲಿ ಪ್ರೀತಿ ವಾತ್ಸಲ್ಯದ ಪ್ರತೀಕವಾಗಿರುವ ನವಿಲು ಗರಿಯನ್ನು ಇಡಿ. ಇದರ ಜೊತೆಗೆ ಸೊಸೆ ಹುಣ್ಣಿಮೆ ವ್ರತ ಪಾಲಿಸಬೇಕು. ಇದರಿಂದ ಇಬ್ಬರ ನಡುವಿನ ನಕಾರಾತ್ಮಕ ಭಾವನೆಗಳು ಕೊನೆಗೊಳ್ಳುತ್ತವೆ.

Saasbahu

ವೆಬ್‌ ದುನಿಯಾ ಹೆಸರಿನ ಆನ್‌ ಲೈನ್‌ ಚಾನೆಲ್ ‌ಒಂದು ಹೀಗೆ ಹೇಳುತ್ತದೆ, “ಅತ್ತೆ ಸೊಸೆ ನಡುವೆ ಸಂಬಂಧ ಬಿಕ್ಕಟ್ಟಿನದಾಗಿದ್ದರೆ, ಸೊಸೆ ಬೆಳ್ಳಿಯ ಚೌಕಾಕಾರದ ತುಂಡವೊಂದನ್ನು ತನ್ನ ಬಳಿ ಇಟ್ಟುಕೊಳ್ಳಬೇಕು. ಜೊತೆಗೆ ಶುಕ್ಲ ಪಕ್ಷದ ಮೊದಲ ಗುರುವಾರದಿಂದ ತನ್ನ ಹಣೆಯ ಮೇಲೆ ಅರಿಶಿನದ ಬೊಟ್ಟೊಂದನ್ನು ಇಡಬೇಕು. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಯಾರಿಂದಲೂ ಬಿಳಿ ಬಣ್ಣದ ವಸ್ತುವನ್ನು ಪಡೆದುಕೊಳ್ಳಬಾರದು.”

ಇದಕ್ಕೆ ತದ್ವಿರುದ್ಧದ ಉಪಾಯವೊಂದನ್ನು ಆ್ಯಸ್ಟ್ರೊ ಮದರ್‌ ತ್ರಿಶಾಲಾ ಹೇಳುತ್ತಾರೆ, “ಪ್ರತಿ ಸೋಮವಾರದಂದು ಸೊಸೆ ತನ್ನ ಅತ್ತೆಗೆ ಯಾವುದಾದರೂ ಬಿಳಿ ಪದಾರ್ಥವನ್ನು ತಿನ್ನಿಸಬೇಕು. ಅತ್ತೆ ಸೊಸೆಯ ಫೋಟೊ ಫ್ರೇಮ್ ಮಾಡಿಸಿ ಉತ್ತರ ದಿಕ್ಕಿನಲ್ಲಿ ಹಾಕಬೇಕು. ಪ್ರತಿ ತಿಂಗಳು ಬರುವ ಚೌತಿಯಂದು ಸೊಸೆಗೆ ತಿಲಕ ಇಡುತ್ತ  ಗಣೇಶನ ಜಪ ಮಾಡಬೇಕು. ಸೊಸೆ ಒಂದು ಮುಷ್ಟಿ ಗೋಧಿಯನ್ನು ಒಂದು ಮೂಲೆಗೆ ಇಡುತ್ತಾ, `ದೇವರೆ, ಅತ್ತೆ ಸೊಸೆಯ ಸಂಬಂಧ ತಾಯಿ ಮಗಳ ಸಂಬಂಧದಂತೆ ಮಾಡು,’ ಎಂದು ಬೇಡಿಕೊಳ್ಳಬೇಕು.

ಯೂ ಟ್ಯೂಬ್‌ನಲ್ಲಿ `ಆಪ್‌ ಕೆ ಸಿತಾರೆ’ ಹೆಸರಿನ ಚಾನೆಲ್ ‌ನಡೆಸುವ ವೈಭವನಾಥ್‌ ಶರ್ಮ ಹೀಗೆ ಹೇಳುತ್ತಾರೆ, “ಅತ್ತೆ ಸೊಸೆಯ ಜಗಳ ಕೊನೆಗೊಳಿಸಲು ಹಸುವಿನ ಸಗಣಿಯ ಬೆರಣಿ ತಟ್ಟಿ ಒಣಗಿಸಬೇಕು. ಅದರ ಮೇಲೆ ಒಂದಿಷ್ಟು ಬೆಲ್ಲ ಇಟ್ಟು ಸುಡಬೇಕು. ಇದನ್ನು ಮನೆಯ ಮುಖ್ಯ ದ್ವಾರದ ಬಳಿ ಮಾಡಬೇಕು. ಅದರಿಂದ ಅತ್ತೆ ಸೊಸೆಯ ಕೆಟ್ಟ ಭಾವನೆ ದೂರಾಗುತ್ತದೆ.

ಮೇಲೆ ಕೊಟ್ಟ ಉಪಾಯಗಳು ಕೇವಲ ಟ್ರೇಲರ್‌ ಅಷ್ಟೇ. ಸಿನಿಮಾ ಇನ್ನೂ ಬಾಕಿ ಇದೆ. ಇಂತಹ ಹಾದಿ ಬೀದಿ ಉಪಾಯಗಳು ಏಕೆ ಅಷ್ಟು ಪ್ರಸಿದ್ಧವಾಗಿದೆಯೆಂದರೆ, ಜನರು ತಮ್ಮ ತಿಳಿವಳಿಕೆಯ ಮೇಲೆ ನಂಬಿಕೆ ಇಡದೆ, ಮೂಢನಂಬಿಕೆಯ ಕೂಪದಲ್ಲಿ ಬೀಳಲು ಇಷ್ಟಪಡುತ್ತಾರೆ. ನೀವು ಈ ರೀತಿ ಮಾಡಲು ಹೋಗಬೇಡಿ. ಯಾರದೇ ಮಾತಿಗೆ ಮರುಳಾಗಿ ಯಾವುದೊ ನಿರ್ಧಾರಕ್ಕೆ ಬರಬೇಡಿ.

ಯಾರದೊ ಮಾತುಗಳನ್ನು ಕೇಳಿಸಿಕೊಂಡು ನಿಮ್ಮ ಜೀವನವನ್ನು ಕಷ್ಟಕ್ಕೆ ಒಡ್ಡಿಕೊಳ್ಳಬೇಡಿ. ನಿಮ್ಮ ಆಸುಪಾಸಿನ ಮನೆಗಳ ಅತ್ತೆ ಸೊಸೆಯಂದಿರಿಂದ ಏನಾದರೂ ಪಾಠ ಕಲಿಯಲು ಸಾಧ್ಯವಾದರೆ ಕಲಿತುಕೊಳ್ಳಿ.

ಕೆಲವು ವಾಸ್ತವ ಉದಾಹರಣೆಗಳು

ಬೆಂಗಳೂರಿನ ಮಾಲತಿ ಅವರ ಗಂಡ ಬಹಳ ಮೊದಲೇ ತೀರಿ ಕೊಂಡಿದ್ದರು. ಅವರು ನೌಕರಿ ಮಾಡಿ ತಮ್ಮ ಮಕ್ಕಳನ್ನು ಬೆಳೆಸಿ ಓದಿಸಿದರು. ಈಗ ಅವರ ಮಕ್ಕಳಿಗೆ ಮದುವೆಯಾಗಿದೆ. ಇಬ್ಬರು ಸೊಸೆಯಂದಿರು ಈ ಕಾಲದವರು. ಅವರು ಅತ್ತೆಯನ್ನು ಮಾಲುಗಳಿಗೆ, ಪಾರ್ಕುಗಳಿಗೆ ಕರೆದುಕೊಂಡು ಹೋಗುತ್ತಾರೆ. ಆಧುನಿಕ ಪೋಷಾಕು ಧರಿಸಲು ಆಗ್ರಹ ಮಾಡುತ್ತಾರೆ. ಮೊದ ಮೊದಲು ಅದೆಲ್ಲ ನನಗೇಕೆ ಎನ್ನುತ್ತಿದ್ದ ಮಾಲತಿ, ಇದೆಲ್ಲ ಸೊಸೆಯಂದಿರ ಪ್ರೀತಿ ಎನ್ನುತ್ತಾರೆ. ಈ ಮಾಡರ್ನ್ ಅತ್ತೆ ಸೊಸೆಯಂದಿರನ್ನು ಕಂಡು ಜನ ಬೆರಗಾಗುತ್ತಾರೆ. ಮಾಲತಿಯವರ ತಿಳಿವಳಿಕೆಯಿಂದಲೇ ಇದೆಲ್ಲ ಸಾಧ್ಯವಾಯಿತು.

ಮೈಸೂರಿನ ಗೌರಿಗೆ ಪ್ರತಿ ಮಧ್ಯಾಹ್ನ ಮಲಗುವ ಅಭ್ಯಾಸವಿತ್ತು. ಆದರೆ ಮನೆಗೆ ಸೊಸೆ ಬಂದ ಬಳಿಕ ಬಹಳಷ್ಟು ಬದಲಾವಣೆಯಾಯಿತು. ಇಬ್ಬರ ಪತಿಯಂದಿರು ಕೆಲಸಕ್ಕೆ ಹೋದ ಬಳಿಕ ಅತ್ತೆ ಸೊಸೆ ಶಾಪಿಂಗ್‌, ಸಿನಿಮಾಗೆಂದು ಆಗಾಗ ಹೊರಗೆ ಹೋಗುತ್ತಿದ್ದರು. ಗೌರಿಗೆ ಈಗ ತನ್ನ ಮಧ್ಯಾಹ್ನ ವಿಶ್ರಾಂತಿ ಪಡೆಯುವ ಅಭ್ಯಾಸ ಮರೆತೇ ಹೋಯಿತು. ಗೌರಿಯ ತಂಗಿ ಒಂದು ಸಲ ಮನೆಗೆ ಬಂದಾಗ ಸೊಸೆಯನ್ನುದ್ದೇಶಿಸಿ ಹೇಳಿದಳು, “ನಿನ್ನ ಅತ್ತೆ ಮಧ್ಯಾಹ್ನ ಯಾರು ಬಂದರೂ ಮಲಗಿಕೊಳ್ಳದೇ ಇರುತ್ತಿರಲಿಲ್ಲ. ಈಗ ನಿನ್ನಿಂದಾಗಿ ಅವರು ಬದಲಾಗಿಬಿಟ್ಟರು,” ಎಂದು ಹೇಳಿದಾಗ ಸೊಸೆಯ ಮನಸ್ಸಿನಲ್ಲಿ ಅತ್ತೆಯ ಬಗ್ಗೆ ಗೌರವ ಭಾವನೆ ಮೂಡಿತು.

ಮಂಗಳೂರಿನ ಸಂಧ್ಯಾ ಮದುವೆಯ ಬಳಿಕ ಅವಿಭಕ್ತ ಕುಟುಂಬವೊಂದರ ಭಾಗವಾಗಿ ಹೋದಳು. ಅತ್ತೆ ಹೇಳಿದಂತೆಯೇ ಆಕೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಕ್ರಮೇಣ ಸಂಧ್ಯಾ ಇಡೀ ಮನೆಯವರ ಮನಸ್ಸು ಗೆದ್ದ ಸೊಸೆಯೆನಿಸಿಕೊಂಡಳು. ಅವಳು ಮೀನು ಸೇವನೆಯ ಅಭ್ಯಾಸ ಹೊಂದಿದವಳಾದಾಗ್ಯೂ ಅತ್ತೆ ಮನೆಯವರ ಪ್ರೀತಿ ವಿಶ್ವಾಸಕ್ಕೆ ಪರಿಪೂರ್ಣ ಸಸ್ಯಾಹಾರಿಯಾಗಿ ಪರಿವರ್ತನೆಗೊಂಡಳು.

ಜೊತೆ ಜೊತೆಗೆ ಕೆಲಸ ಮಾಡಿ ಅನೇಕ ಟಿಪ್ಸ್ ಅತ್ತೆ ಸೊಸೆಯ ಸಂಬಂಧವನ್ನು ಮತ್ತಷ್ಟು ಮಧುರಗೊಳಿಸುತ್ತವೆ. ಅವನ್ನು ಅತ್ತೆ ಸೊಸೆ ಇಬ್ಬರೂ ಸೇರಿಯೇ ಅನುಸರಿಸಬೇಕು.

ಮನದ ಮಾತನ್ನು ಹಂಚಿಕೊಳ್ಳಿ : ಮದುವೆಯ ಬಳಿಕ ಸೊಸೆಗೆ ಹೊಸ ಮನೆಯಲ್ಲಿ ಅಲ್ಲಿನ ರೀತಿ ರಿವಾಜಿನ ಪ್ರಕಾರ ಇರಬೇಕಾಗುತ್ತದೆ. ಅವನ್ನೆಲ್ಲ ಕಲಿತುಕೊಳ್ಳಬೇಕಾಗುತ್ತದೆ. ಅತ್ತೆಯ ಮನಸ್ಸಿನಲ್ಲಿ, ತನ್ನ ಸೊಸೆ ಈ ಮನೆಗೆ ಹೊಂದಿಕೊಳ್ಳಬಹುದಾ ಎಂಬ ಚಿಂತೆಯೂ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಒಂದು ಒಳ್ಳೆಯ ಉಪಾಯವೆಂದರೆ, ಇಬ್ಬರೂ ತಮ್ಮ ಮನಸ್ಸಿನ ಮಾತುಗಳನ್ನು ಶೇರ್‌ ಮಾಡಿಕೊಳ್ಳಬೇಕು. ಇದರಿಂದ ಪರಸ್ಪರರ ವಿಚಾರಗಳ ಬಗ್ಗೆ ಗೊತ್ತಾಗುತ್ತದೆ.

ಪರಸ್ಪರರ ವಿಚಾರಗಳನ್ನು ಹೇರಬೇಡಿ : ಪ್ರತಿಯೊಬ್ಬರ ವಿಚಾರಗಳು ಭಿನ್ನವಾಗಿರುತ್ತವೆ ಎಂಬುದನ್ನು ಕೇವಲ ಅತ್ತೆಯಷ್ಟೇ ಅಲ್ಲ, ಸೊಸೆ ಕೂಡ ಅರ್ಥ ಮಾಡಿಕೊಳ್ಳಬೇಕು. ನಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರಿದರೆ ಕೋಪ ಬರುವುದು ಸಹಜ. ನೀವು ಅತ್ತೆ ಸೊಸೆಯ ಸಂಬಂಧದಲ್ಲಿ ಮಾಧುರ್ಯ ಕಾಪಾಡಿಕೊಂಡು ಹೋಗಲು ಪರಸ್ಪರರ ವಿಚಾರಗಳನ್ನು ಗೌರವಿಸಿ. ಇದರಿಂದ ನಿಮ್ಮಿಬ್ಬರ ನಡುವಿನ ಪ್ರೀತಿ ಹೆಚ್ಚುತ್ತದೆ ಹಾಗೂ ಸಂಬಂಧ ಮಧುರಗೊಳ್ಳುತ್ತದೆ.

ಪರಸ್ಪರರಿಗೆ ಧಾರಾಳ ಸಮಯ ಕೊಡಿ : ಮದುವೆಯಾದ ಹೊಸತರಲ್ಲಿ ನೀವು ಗಂಡ ಹಾಗೂ ತವರು ಮನೆಯವರಿಗೆ ಮಾತ್ರ ಸಮಯ ಕೊಡಿ ಎಂದಲ್ಲ, ಅತ್ತೆ ಕೂಡ ಸೊಸೆಯ ಜೊತೆ ಕುಳಿತು ತನ್ನ ವಿಚಾರಗಳನ್ನು ತಿಳಿಸಬೇಕು. ಇಬ್ಬರೂ ಪರಸ್ಪರರಿಗಾಗಿ ಸಮಯ ಮೀಸಲಿಡುವುದರಿಂದ, ಒಬ್ಬರು ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ ಹಾಗೂ ಇಬ್ಬರ ನಡುವಿನ ಪ್ರೀತಿ ಕೂಡ ಹೆಚ್ಚುತ್ತದೆ.

ಉದ್ಯಮ ಕ್ಷೇತ್ರದಲ್ಲೂ ಅತ್ತೆ ಸೊಸೆ

ರುಚಿ ಇನ್‌ ವೆಸ್ಟ್ ಮೆಂಟ್‌ ಬ್ಯಾಂಕರ್‌ ಆಗಿದ್ದಾಳೆ. ಅದೊಂದು ಸಲ ಆಕೆ ರಜೆಯ ಸಂದರ್ಭದಲ್ಲಿ ತನ್ನೂರಿಗೆ ಹೋದಳು. ಆ ಸಂದರ್ಭದಲ್ಲಿ ಆಕೆಗೆ ಮಿಥಿಲಾ ಪೇಂಟಿಂಗ್‌ಗೆ ಸಂಬಂಧಪಟ್ಟಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರನ್ನು ಭೇಟಿಯಾಗುವ ಅವಕಾಶ ಲಭಿಸಿತು. ಆ ಪೇಂಟಿಂಗ್‌ ಗಳನ್ನು ನೋಡಿ ನಾನು ಈ ಕಲೆಯನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬೇಕೆಂದು ಯೋಚಿಸಿದಳು. ರುಚಿ ಕಾರ್ಪೋರೇಟ್‌ ಜಗತ್ತಿನಿಂದ ಹೊರಬಂದು ತನ್ನದೇ ಆದ ಕೆಲಸವೊಂದನ್ನು ಶುರು ಮಾಡಲು ನಿರ್ಧರಿಸಿದಳು. ಆಗ ತನ್ನ ಜೊತೆಗೆ ಯಾರಾದರೊಬ್ಬರು ಬೇಕೇ ಬೇಕು ಎಂದು ಅನ್ನಿಸಿತಾದರೂ ಅದಕ್ಕಾಗಿ ಯಾರನ್ನೂ ಹುಡುಕಬೇಕಾದ ಅವಶ್ಯಕತೆ ಉಂಟಾಗಲಿಲ್ಲ. ಅತ್ತೆಯೇ ತನಗೆ ಒಳ್ಳೆಯ ಸಹಾಯಕರೆಂದು ಆಕೆಗೆ ಅನ್ನಿಸಿತು. ಇಬ್ಬರೂ ಸೇರಿಕೊಂಡು ಮಿಥಿಲಾ ಹ್ಯಾಂಡಿ ಕ್ರಾಫ್ಟ್ ಅಂಡ್‌ ಹ್ಯಾಂಡ್‌ ಲೂಮ್ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ತಮ್ಮ ಇ-ಕಾಮರ್ಸ್‌ ಫ್ಲಾಟ್‌ ಫಾರ್ಮ್ `ಐ ಮಿಥಿಲಾ’ದ ಮೂಲಕ ತಮ್ಮದೇ ಆದ ವಿಶಿಷ್ಟ ಪಡಿಯಚ್ಚು ಮೂಡಿಸಿದರು. ಸ್ಥಳೀಯ ಕಲಾವಿದರಿಗೂ ತಮ್ಮ ಕಲೆ ಬಿಂಬಿಸಲು ಒಂದು ವೇದಿಕೆ ಕಲ್ಪಿಸಿದರು.

ರುಚಿ ಅತ್ತ ಮಾರ್ಕೆಟಿಂಗ್‌ ಕೆಲಸವನ್ನು ಸಂಭಾಳಿಸಿದರೆ, ಅತ್ತೆ ಈ ಹಿಂದೆ ಕೃಷಿ ವಿಜ್ಞಾನದಲ್ಲಿ ಪ್ರೊಫೆಸರ್‌ ಆಗಿದ್ದರು, ಈಗ ಮಧುಬನಿ ಆರ್ಟ್‌ಕಲಾವಿದರೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಾರೆ. ಈ ಅತ್ತೆ ಸೊಸೆಯ ಜೋಡಿ ಸೂಪರ್‌ ಸ್ಮಾರ್ಟ್ ಅಪ್‌ ಜೋಡಿಯ ಪ್ರಶಸ್ತಿಯನ್ನು ಗೆದ್ದಿದೆ.

ಅತ್ತೆ ಸೊಸೆಯ ಸಂಬಂಧ ಎಷ್ಟು ಪ್ರೀತಿಪಾತ್ರವಾಗಿರುತ್ತೊ, ಅಷ್ಟೇ ಸೂಕ್ಷ್ಮ ಕೂಡ ಆಗಿರುತ್ತದೆ. ಇಡೀ ಕುಟುಂಬದ ಪ್ರೀತಿ ಹಾಗೂ ಹೊಂದಾಣಿಕೆ ಇದೇ ಸಂಬಂಧನ್ನು ಅವಲಂಬಿಸಿರುತ್ತದೆ. ಒಂದಿಷ್ಟು ತಿಳಿವಳಿಕೆ ಈ ಸಂಬಂಧವನ್ನು ಮತ್ತಷ್ಟು ಸುಮಧುರಗೊಳಿಸಬಲ್ಲದು. ಈ ಸಂಬಂಧವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವ ಸ್ಮಾರ್ಟ್‌ ನೆಸ್‌ ನ್ನು ಅತ್ತೆ ಸೊಸೆ ಇಬ್ಬರೂ ಅನುಸರಿಸುವ ಅವಶ್ಯಕತೆ ಇದೆ.

– ಶ್ಯಾಮಲಾ ಪ್ರಸಾದ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ