4 ದಿನಗಳ ಹಿಂದಿನವರೆಗೂ ಅಭಿಷೇಕ್‌ ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಒಬ್ಬ ಪ್ರೀತಿಯ ಹೆಂಡತಿ, ಮುದ್ದಾದ ಮಕ್ಕಳ ಸಂಸಾರ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂಬಂತಿತ್ತು. ಮಕ್ಕಳ ಕಿಲಕಿಲ ನಗು, ಚಟುವಟಿಕೆಗಳಿಂದ ಮನೆ ನಂದಗೋಕುಲವಾಗಿತ್ತು. ಆದರೆ ನೋಡ ನೋಡುತ್ತಿದ್ದಂತೆ 4 ದಿನಗಳ ಅವಧಿಯಲ್ಲಿ ಎಲ್ಲವೂ ಬದಲಾಗಿ ಹೋಯ್ತು. ವಿಧಿ ಕ್ರೂರ ಅಟ್ಟಹಾಸ ಬೀರಿತ್ತು. ಅವವ ಪತ್ನಿಗೆ ಕೊರೋನಾ ತಗುಲಿ ಅವಳು 23 ದಿನಗಳಲ್ಲೇ ಆಸ್ಪತ್ರೆ ಸೇರಿ, ಸಾವನ್ನು ಅಪ್ಪಿದಳು!

ಸಾಲದ್ದಕ್ಕೆ ಅಭಿ ಸಹ ಸ್ವಯಂ ಕೊರೋನಾ ಪಾಸಿಟಿವ್ ಆಗಿದ್ದ. ಕೊರೋನಾ ಸಾವಿನ ಕಾರಣ, ಇವನ ಪತ್ನಿಯ ಅಂತ್ಯಕ್ರಿಯೆಗೆ ಬೆರಳೆಣಿಕೆಯಷ್ಟು ಜನರಿದ್ದರು. ಕೊರೋನಾ ಮಹಾಮಾರಿಯ ಕಾಟದಿಂದ ಪರಿಸ್ಥಿತಿ ಬಹಳ ಕೆಟ್ಟಿತ್ತು. ಕೇವಲ ಅವನ ತಾಯಿ, ತಂಗಿ, ಅತ್ತೆ ಮಾವ ಒಂದಿಬ್ಬರು ಬಂಧುಗಳಷ್ಟೇ ಅಂತಿಮ ಕಾರ್ಯದಲ್ಲಿದ್ದರು. ಉಳಿದವರೆಲ್ಲ ದೂರದಿಂದಲೇ ಸಂತಾಪ ಸೂಚಿಸಿದ್ದರಷ್ಟೆ.

ಮಕ್ಕಳ ಸಲುವಾಗಿ ಊರಿನಿಂದ ಬಂದಿದ್ದ ಅವನ ತಾಯಿ, ತಂಗಿ ಉಳಿದಿದ್ದರು. ಅಭಿ ತಾನೇ ಐಸೋಲೇಟ್‌ಆಗಿದ್ದ. 2 ದಿನಗಳ ನಂತರ ತಂಗಿ ಅನಿವಾರ್ಯವಾಗಿ ಹೊರಡಬೇಕಾಯ್ತು. ಊರಲ್ಲಿ ಅವಳ ಪತಿ ಪಾಸಿಟಿವ್ ‌ಆಗಿದ್ದ. ಇವನ ತಾಯಿ ಒಬ್ಬರೇ ಮಕ್ಕಳಿಗೆ ದಿಕ್ಕಾದರು.

2 ತಿಂಗಳಲ್ಲಿ ಅಮ್ಮ ಸಹ ಅಳಿಯ ತೀರಿಕೊಂಡನೆಂದು ಮಗಳ ಸಂಸಾರ ಸಂಭಾಳಿಸಲು ಊರಿಗೆ ಹೊರಡಬೇಕಾಯಿತು. ಅತ್ತ ಅವನ ತಂದೆ ಸಹ ಊರಲ್ಲಿ ವ್ಯವಸಾಯ ಸುಧಾರಿಸುತ್ತಾ ಒಬ್ಬರೇ ಆಗಿಹೋಗಿದ್ದರು. ಹೀಗಾಗಿ ತಾಯಿ ಮಗಳ ಜೊತೆ ಕೆಲವು ದಿನ ಇದ್ದು ವಯಸ್ಸಾದ ಪತಿ ಬಳಿ ಹಿಂದಿರುಗಬೇಕಾಯಿತು. ಅಜ್ಜಿ ಹೊರಟ ನಂತರ ಅಭಿ ಮನೆಯಲ್ಲಿ ಆ ಅನಾಥ ಮೊಮ್ಮಕ್ಕಳನ್ನು ಗಮನಿಸುವವರು ಯಾರು? ನೆರೆಹೊರೆಯವರು ಒಂದು ಹಂತದವರೆಗೂ ಸಹಾಯ ಮಾಡಬಹುದಷ್ಟೆ.

ಅವನು ವರ್ಕ್‌ ಫ್ರಂ ಹೋಮ್ ಮಾಡುತ್ತಾ, ಐಸೋಲೇಶನ್‌ ಮಧ್ಯೆ ಹೇಗೋ ಅಫೀಸು, ಮಕ್ಕಳ ಜವಾಬ್ದಾರಿ ನಿಭಾಯಿಸಬೇಕಿತ್ತು.  ಮಕ್ಕಳನ್ನು ಬಿಟ್ಟು ಆಫೀಸಿಗೆ ಹೊರಡಬೇಕೆನ್ನುವ ಟೆನ್ಶನ್‌ ಇರಲಿಲ್ಲ. ಅಂತೂ ಐಸೋಲೇಶನ್‌ ವನವಾಸ ಮುಗಿಸಿ, ಆಫೀಸ್‌ ಕೆಲಸ ನಿಭಾಯಿಸುತ್ತಲೇ, ಮಕ್ಕಳ ಆನ್‌ ಲೈನ್‌ ಕ್ಲಾಸ್‌, ಮನೆಯ ಸಮಸ್ತ ಜವಾಬ್ದಾರಿ ವಹಿಸಬೇಕಾಯಿತು. ಆದರೆ ಆಫೀಸ್‌ ಕರ್ತವ್ಯಕ್ಕೂ ಲೋಪ ಮಾಡುವಂತಿರಲಿಲ್ಲ. ಅದರ ಮಧ್ಯೆ ಆ ಚಿಕ್ಕ ಮಕ್ಕಳ ಜವಾಬ್ದಾರಿ, ಖಂಡಿತಾ ಸುಲಭವಾಗಿರಲಿಲ್ಲ. ಕೊರೋನಾ ಕೃಪೆಯಿಂದಾಗಿ ಮನೆ ಕೆಲಸದವಳು ಬರುವ ಹಾಗೇ ಇರಲಿಲ್ಲ. ತಾಯಿ ಹೊರಡುವಾಗ ಅವನಿಗೆ ಮತ್ತೊಂದು ಮದುವೆ ಮಾಡಿಕೊಳ್ಳುವ ಸಲಹೆ ಇತ್ತರು. ಆದರೆ ಅವನಿಗೆ ಆ ವಿಚಾರ ಇಷ್ಟವಿರಲಿಲ್ಲ. ಅವನಿಗೆ ತನ್ನ ಮಕ್ಕಳು ಮಲತಾಯಿಯ ಕಾಟಕ್ಕೆ ಸಿಲುಕುವುದು ಬೇಕಿರಲಿಲ್ಲ. ಹೇಗಾದರೂ ಸರಿ, ಮಕ್ಕಳ ಜವಾಬ್ದಾರಿ ತನಗೇ ಇರಲಿ ಎಂದು ದೃಢ ಮನಸ್ಸಿನಿಂದ ನಿರ್ಧರಿಸಿದ್ದ.

ಇದಕ್ಕಾಗಿ ಅವನು ಕೆಲವು ವಿಶೇಷ ತಯಾರಿಗಳನ್ನು ಶುರು ಮಾಡಬೇಕಾಯಿತು. ಹೀಗಾಗಿ ಒಂದು ಸ್ಪೆಷಲ್ ಟೈಂಟೇಬಲ್ ಹಾಕಿಕೊಂಡ. ಯಾವ ವಸ್ತುಗಳು ಯಾವಾಗ ಬೇಕಾಗುತ್ತವೆ, ಅಂಗಡಿಯಿಂದ ಯಾವ ಯಾವ ಸಾಮಗ್ರಿ  ಯಾವಾಗ ತರಿಸಿಟ್ಟಿಕೊಳ್ಳುವುದು, ಇತ್ಯಾದಿಗಳ ಪಟ್ಟಿ ತಯಾರಿಸಿದ. ಮಕ್ಕಳ ಜೊತೆ ಕುಳಿತು ತನ್ನ ಅನಿವಾರ್ಯ ಕಷ್ಟ, ಹೆಚ್ಚಿದ ಹೊಣೆಗಾರಿಕೆ ಬಗ್ಗೆ ವಿವರವಾಗಿ ಚರ್ಚಿಸಿದ. ಅವರೂ ಸಹ ಅಪ್ಪನಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ವಿವರಿಸಿದ. ಯೂಟ್ಯೂಬ್‌ ನೋಡುತ್ತಲೇ, ಅಮ್ಮ ತಂಗಿಯರ ವಿಡಿಯೋ ಚ್ಯಾಟ್‌ ನೆರವಿನಿಂದ ಅಡುಗೆಯಲ್ಲಿ ಸಾಕಷ್ಟು ಸುಧಾರಣೆ ಕಲಿತುಕೊಂಡ. ಹೀಗೆ 4-5 ತಿಂಗಳಲ್ಲಿ ಅಭಿಯ ಸಂಸಾರ ಒಂದು ಹಂತಕ್ಕೆ ಸುಧಾರಿಸುವಂತಾಯಿತು. ಆದರೆ ಆ ಕಾಲಚಕ್ರದ ವಿಷಘಳಿಗೆಯನ್ನು ಮಕ್ಕಳೊಂದಿಗೆ ಅವನು ಹಲ್ಲು ಕಚ್ಚಿ ಸಹಿಸಬೇಕಾಯಿತು. ಈಗ ಅವನು ಮಕ್ಕಳಿಗೆ ಪ್ರೀತಿಯ ತಂದೆ ಮಾತ್ರವಲ್ಲದೆ, ಮುದ್ದು ಮಾಡುವ ತಾಯಿಯೂ ಆಗಿದ್ದ! ಮಕ್ಕಳ ಹೋಂವರ್ಕ್‌ ತಿದ್ದುವ, ಪಾಠ ಕಲಿಸುವ ಗುರು ಆಗಿದ್ದ. ಮನೆಗೆ ಆದಾಯ ತರುವ ಏಕಮಾತ್ರ ವ್ಯಕ್ತಿ ಮಾತ್ರವಲ್ಲದೆ, ಮನೆಯ ಗೃಹಿಣಿಯ ಜವಾಬ್ದಾರಿ ನಿರ್ವಹಿಸುವ ಹೊಣೆಯೂ ಸೇರಿತ್ತು.

ಸುಲಭವಲ್ಲ ಈ ಜವಾಬ್ದಾರಿ

ಇತ್ತೀಚೆಗೆ ಈ ಬಗೆಯ ವೈಪರೀತ್ಯ ಎಲ್ಲೆಲ್ಲೂ ಕಂಡಬರುವಂತಾಗಿದೆ. ಒಂದು ಸರ್ವೆ ಪ್ರಕಾರ, ಇಂಥ ಸಿಂಗಲ್ ಫಾದರ್‌ ಗೆ ನೆರವಾಗಲು ಎಲ್ಲರೂ ಇಚ್ಛಿಸುತ್ತಾರೆ. ಇಂಥವರಿಗೆಂದೇ ಆಫೀಸುಗಳಲ್ಲಿ ಇತರರಿಗೆ ಹೋಲಿಸಿದಾಗ 21% ಬೋನಸ್‌ ಹೆಚ್ಚುವರಿಯಾಗಿ ಸಿಗುತ್ತದೆ! ಒಂಟಿ ತಂದೆಯರ ಜೊತೆ ಇಂಥ ಮಾನವೀಯ ವ್ಯವಹಾರ ಫಾದರ್‌ ಹುಡ್‌ ಬೋನಸ್‌ ಎಂಬ ಹೆಸರು ಪಡೆಯಿತು. ಇಂಥ ಒಂಟಿ ತಂದೆಯರಿಗೆ ನೆರವಾಗಲು, ಹೆಚ್ಚುವರಿ ವರ್ಕ್‌ ಫ್ರಂ ಹೋಂ ಅವಕಾಶಗಳೂ ಇವೆ. ಆದರೆ ಒಬ್ಬಂಟಿಯಾಗಿ ನಿಂತು ಮನೆ, ಮಕ್ಕಳು, ಆಫೀಸ್‌ ಕರ್ತವ್ಯ ನಿರ್ವಹಿಸುವುದು ಒಬ್ಬ ಗಂಡಸಿಗೆ ಖಂಡಿತಾ ಸುಲಭದ ಕೆಲಸವಲ್ಲ.

ಹಿಂದಿನ ಕಾಲದವರ ತರಹ ಆಡದೆ, ಇಂದಿನ ಕಾಲದ ಗಂಡಸರು ಮನೆಗೆಲಸಗಳಲ್ಲಿ ಪತ್ನಿಗೆ ನೆರವಾಗುತ್ತಾರೆ ಎಂಬುದು ನಿಜ. ಅಗತ್ಯ ಬಿದ್ದಾಗ, ಮಕ್ಕಳ ನ್ಯಾಪಿ ಬದಲಾಯಿಸುವುದರಿಂದ ಹಿಡಿದು ಅವರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿಸುವವರೆಗೂ ಹೊಣೆ ಹೊರಬಲ್ಲರು. ಪತ್ನಿಗೆ ಆರೋಗ್ಯ ತಪ್ಪಿದಾಗ ಅಥವಾ ಇನ್ನಾವುದೇ ವಿಶೇಷ ಸಂದರ್ಭಗಳಲ್ಲಿ ಇಂಥ ಪರಿಸ್ಥಿತಿ ಎದುರಿಸಲು ತಕ್ಕಮಟ್ಟಿಗೆ ಕಲಿತಿರುತ್ತಾರೆ.

ಪತ್ನಿಯ ನೇತೃತ್ವದಲ್ಲಿ ಮಕ್ಕಳ ಪಾಲನೆ ಪೋಷಣೆ ಸುಲಭ ನಿಜ, ಆದರೆ ಗಂಡಸು ಒಬ್ಬ ಸಿಂಗಲ್ ಫಾದರ್‌ ಆಗಿಹೋದಾಗ, ಮಕ್ಕಳ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದು ಖಂಡಿತಾ ಸುಲಭದ ವಿಷಯವಲ್ಲ.ಅಸಲಿಗೆ ತಾಯಿ ಯಾವಾಗಲೂ ಮಕ್ಕಳಿಗೆ ಬಹಳ ಹತ್ತಿರ ಆಗುತ್ತಾಳೆ. ಹೀಗಾಗಿ ಪತ್ನಿಯ ಸಾವು ಅಥವಾ ವಿಚ್ಛೇದನದ ಕಾರಣ, ಗಂಡಸರಿಗೆ ಅಮ್ಮಂದಿರ ಎಲ್ಲ ಕೆಲಸ ಮಾಡಬೇಕಾಗುತ್ತದೆ. ಅನೇಕ ವರ್ಷಗಳಿಂದ ಹೆಂಗಸರು ಸಲೀಸಾಗಿ ಯಾವ ಕೆಲಸಗಳನ್ನು ನಿಭಾಯಿಸುತ್ತಾ ಬಂದಿದ್ದಾರೋ, ಅದನ್ನು ಗಂಡಸರು ಮಾಡಲು ಹೋದರೆ ಕಷ್ಟವೇ ಎದುರಾಗುತ್ತದೆ. ಜೊತೆಗೆ ಗಂಡಸರಿಗೆ ತಮ್ಮದೇ ಆದ ಕೆಲಸವನ್ನು ನಿಭಾಯಿಸಬೇಕು. ಹೀಗಾಗಿ ಈ 2 ಬಗೆಯ ಜವಾಬ್ದಾರಿಗಳನ್ನು ನಿಭಾಯಿಸಲಾಗದೆ ಎಷ್ಟೋ ಜನ ಸೋತು ಸೊಪ್ಪಾಗುತ್ತಾರೆ, ಹತಾಶರಾಗಿ ಕೈ ಚೆಲ್ಲುತ್ತಾರೆ. ಅನಿವಾರ್ಯವಾಗಿ ಅವರು ಮಕ್ಕಳಿಗೆ ತಂದೆ, ತಾಯಿ ಎರಡೂ ಆಗಿ ಸಾಕಬೇಕಾಗುತ್ತದೆ.

ಸುಲಭ ಪರಿಹಾರ ಎಂಬಂತೆ 2ನೇ ಮದುವೆಯಾಗಿ ಮಕ್ಕಳಿಗೆ ಮಲತಾಯಿ ತರುತ್ತಾರೆ. ಆದರೆ ಎಷ್ಟೋ ಮಂದಿ ದೃಢ ಮನಸ್ಕರಾಗಿ 2ನೇ ಮದುವೆ ಬೇಡ ಎನ್ನುತ್ತಾರೆ. ಸಿಂಗಲ್ ಫಾದರ್‌ ಜವಾಬ್ದಾರಿಯನ್ನು ಬಲು ಕಷ್ಟದಿಂದಲೇ ನಿರ್ವಹಿಸುತ್ತಾರೆ. ಅವಿವಾಹಿತರಾಗಿಯೇ ಉಳಿಯುವ ಗಂಡಸರ ಕಷ್ಟ ಒಂದು ಪರಿಯಾದರೆ, ಪತ್ನಿ ವಿಯೋಗದಿಂದ ಮರು ಮದುವೆ ಬಯಸದೆ, ಮಕ್ಕಳ ಜವಾಬ್ದಾರಿ ನಿರ್ವಹಿಸುವ ಏಕಾಂಗಿ ತಂದೆಯರ ಪಾಡು ಬಲು ಕಷ್ಟಕರ. ಏಕೆಂದರೆ ಮಕ್ಕಳಿಗೆ ತಾಯಿಯ ಸಾನ್ನಿಧ್ಯ ಮನದಲ್ಲಿ ಅಚ್ಚೊತ್ತಿರುತ್ತದೆ. ಸಿಂಗಲ್ ಫಾದರ್‌ ಪರ್ಫೆಕ್ಟ್ ಡ್ಯಾಡಿ ಆಗಲು ಇಲ್ಲಿವೆ ಕೆಲವು ಸಲಹೆಗಳು :

ಎಲ್ಲಕ್ಕೂ ಮುಖ್ಯ ಶಿಸ್ತು

ಸಾಮಾನ್ಯವಾಗಿ ಗಂಡಸರನ್ನು ಕಠಿಣ ಹೃದಯದವರು ಎನ್ನುತ್ತಾರೆ. ಪ್ರತಿ ಕುಟುಂಬದಲ್ಲೂ ತಂದೆ ಶಿಸ್ತಿಗೆ, ತಾಯಿ ಪ್ರೀತಿ ವಾತ್ಸಲ್ಯಕ್ಕೆ ಹೆಸರಾಗುತ್ತಾಳೆ. ಆದರೆ ಯಾವ ಮನೆಯಲ್ಲಿ ಏಕಾಂಗಿ ತಂದೆ ತಾಯಿಯ ಕರ್ತವ್ಯವನ್ನೂ ನಿಭಾಯಿಸಬೇಕೋ ಅಲ್ಲವೋ, ಈ ಸಿಂಗಲ್ ಫಾದರ್‌ ತನ್ನ ಸ್ವಭಾವವನ್ನು ತುಸು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅವನು ಮಕ್ಕಳನ್ನು ಅತಿ ಪ್ರೀತಿ ವಾತ್ಸಲ್ಯಗಳಿಂದ, ಮೃದು ವ್ಯವಹಾರದಲ್ಲಿ ಪಳಗಿಸಬೇಕು.

ತಾಯಿ ಇಲ್ಲದ ತಬ್ಬಲಿಗಳು ಎಂದು ಬಹಳ ಶಿಸ್ತಾಗಿ ಇರಬಾರದು ಎಂಬ ಕಾರಣಕ್ಕೆ ಸಿಂಗಲ್ ಫಾದರ್‌, ಎಷ್ಟೋ ಕಡೆ ಮಕ್ಕಳಿಗೆ ಅತಿ ಸಲುಗೆ, ಸ್ವಾತಂತ್ರ್ಯ ಕೊಟ್ಟುಬಿಡುತ್ತಾನೆ. ಹೀಗಾದಾಗ ಶಿಸ್ತು ಮಾಯವಾಗುತ್ತದೆ. ಇದರ ಪರಿಣಾಮ ಎಷ್ಟೋ ಸಲ ಮಕ್ಕಳು ಸ್ವೇಚ್ಛಾಚಾರಿಗಳಾಗಿ ಬಿಡುತ್ತಾರೆ. ಮುಂದೆ ತಂದೆಯ ಮಾತುಗಳನ್ನು ಕೇಳುವ ಹಂತ ದಾಟಿ ಹೋಗುತ್ತಾರೆ. ಹೀಗಾಗಿ ಸದಾ ಬ್ಯಾಲೆನ್ಸ್ ಮೇಂಟೇನ್‌ ಮಾಡಿ. ಮಕ್ಕಳಿಗೆ ಅಗತ್ಯವಾಗಿ ಕೆಲವು ನಿಯಮ, ಕಟ್ಟಳೆಗಳನ್ನು ಕಲಿಸಿ ಅವನ್ನು ಶಿಸ್ತಾಗಿ ಪಾಲಿಸುವಂತೆ ಮಾಡಿ. ಶಿಸ್ತು ತುಂಬಾ ಕಠೋರ ಆಗದಿರಲಿ, ಆದರೆ ಮಕ್ಕಳಿಗೆ ತಾವು ಶಿಸ್ತನ್ನು ಪಾಲಿಸದಿದ್ದರೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಭಯವಿರಲಿ. ಉದಾ : ಮಕ್ಕಳ ಟಿಫನ್‌ ಬಾಕ್ಸಿಗೆ ಹಾಕಿಕೊಟ್ಟದ್ದನ್ನು ತಿಂದು ಪೂರೈಸಿಕೊಂಡೇ ಬರಬೇಕು ಎಂಬ ನಿಯಮವಿರಲಿ. ಹಾಗೆಂದು ಪ್ರತಿದಿನ ಪೌಷ್ಟಿಕ ಆಹಾರ ಬೇಡ, ಒಮ್ಮೊಮ್ಮೆ ಅವರಿಗೆ ಇಷ್ಟವಾಗುವ ಜಂಕ್‌ ಫುಡ್‌ ಸಹ ಕಳಿಸಿಕೊಡಿ. ಮನೆಯ ಅತಿ ಶಿಸ್ತಿನ ಆಹಾರದಿಂದ ಬೇಸರ ಹೊಂದಿ, ಅವರು ಹೊರಗಿನ ಆಹಾರ ಬಯಸುವಂತೆ ಆಗಬಾರದು. ಭಯದ ಕಾರಣ ತಮ್ಮ ಡಬ್ಬಿಯನ್ನು ಇತರರಿಗೆ ಕೊಟ್ಟುಬಿಡುವಂತೆ ಆಗಬಾರದು.

ಮಲ್ಟಿ ಟಾಸ್ಕರ್‌ ಆಗಿರಿ

ಹೆಂಗಸರ ಹಾಗೆ ಒಂಟಿ ತಂದೆ ಸಹ ಮಲ್ಟಿ ಟಾಸ್ಕರ್‌ ಆಗಲೇಬೇಕು. ಮನೆ ಆಫೀಸಿನ ಕೆಲಸಗಳಲ್ಲಿ ಬ್ಯಾಲೆನ್ಸ್ ನಿಭಾಯಿಸಿ. ಎಲ್ಲಾ ಕೆಲಸಗಳನ್ನು ನೀವು ತೀರಾ ಅಚ್ಚುಕಟ್ಟಾಗಿ ಪರ್ಫೆಕ್ಟ್ ಆಗಿ ಮಾಡಲಾಗದಿದ್ದರೂ ಪ್ರಯತ್ನ ಬಿಟ್ಟು ಕೊಡಬೇಡಿ. ಅಗತ್ಯವೆನಿಸಿದರೆ ನಿಮ್ಮ ಬಾಸ್‌ ಬಳಿ ಈ ಬಗ್ಗೆ ಚರ್ಚಿಸಿ ಬೇಕಾದ ಕಡೆ ಪೂರ್ವಾನುಮತಿ ಪಡೆದುಕೊಳ್ಳಿ. ಆ ರೀತಿ ನಿಮ್ಮ ಟೈಂ ಫ್ಲೆಕ್ಸಿಬಲ್ ಆಗಿರುವಂತೆ ಮಾಡಿಕೊಳ್ಳಿ.

ಮನೆಯ ಯಾವ ಕೆಲಸಗಳನ್ನು ಹಿಂದಿನ ರಾತ್ರಿಯೇ ಮಾಡಿಟ್ಟುಕೊಳ್ಳಬಹುದೋ, ಅಂಥದನ್ನು ಮರೆಯದೆ ಮುಗಿಸಿಕೊಳ್ಳಿ. ಅಭ್ಯಾಸ ಬಲದಿಂದ ನಾಳೆ ಮಾಡಿದರಾಯಿತು ಎಂಬ ಧೋರಣೆ ಬೇಡ. ಉದ್ಯೋಗಸ್ಥ ವನಿತೆಯರು ಹೀಗೆ ಮಾಡಿಯೇ ಎರಡೂ ಕಡೆ ಸೈ ಎನಿಸುತ್ತಾರೆ. ತರಕಾರಿ ಬಿಡಿಸುವ, ಹೆಚ್ಚಿಡುವ, ಏನಾದರೂ ನೆನೆಹಾಕುವ, ಬೆಳಗಿನ ತಿಂಡಿಯ ಪೂರ್ವ ತಯಾರಿ ಎಲ್ಲವನ್ನೂ ಮೊದಲೇ ಮಾಡಿಟ್ಟುಕೊಳ್ಳಿ. ಮಕ್ಕಳ ಬಟ್ಟೆ ಮೊದಲೇ ಇಸ್ತ್ರಿ ಮಾಡಿಡುವ, ಶೂ ಪಾಲಿಶ್‌ ಹಾಕಿಡುವ ಕೆಲಸ ಮರೆಯಬೇಡಿ. ಅಂದ್ರೆ ನಿಮ್ಮ ಪೂರ್ವ ತಯಾರಿ ಸದಾ  ಚುರುಕಾಗಿರಬೇಕು.

ಟೈಂ ಮ್ಯಾನೇಜ್‌ ಮೆಂಟ್‌

ಒಂಟಿ ತಂದೆಗೆ ಎಲ್ಲಕ್ಕಿಂತ ಛಾಲೆಂಜ್‌ ಎಂದರೆ ಟೈಂ ಮ್ಯಾನೇಜ್‌ ಮೆಂಟ್‌. ನಿಮ್ಮ ಬಳಿ ಯಾವಾಗಲೂ, ಯಾವುದಕ್ಕೂ ಪುರಸತ್ತೇ ಇರುವುದಿಲ್ಲ. ಏಕೆಂದರೆ ಒಂದೇ ಸಲ ಅನೇಕ ಕೆಲಸ ಮಾಡಬೇಕಾಗುತ್ತದೆ. ಪ್ರತಿಯೊಂದು ಕೆಲಸಕ್ಕೂ ಇದಿದೇ ಹೊತ್ತು ಎಂದು ಮೊದಲೇ ನಿಗದಿಪಡಿಸಿ ಇಟ್ಟುಕೊಳ್ಳಿ. ಹೀಗೆ ಸದಾ ಕೆಲಸದಲ್ಲೇ ಬಿಝಿ ಆಗಿದ್ದು ಬಿಡಬೇಡಿ, ನಿಮಗಾಗಿಯೂ ತುಸು ಟೈಂ ಮೀಸಲಿರಿಸಿಕೊಳ್ಳಿ. ಅದೇ ತರಹ ಮಕ್ಕಳ ಜೊತೆ ಕ್ವಾಲಿಟಿ ಟೈಂ ಕಳೆಯುವುದು ಕೂಡ ಬಲು ಮುಖ್ಯ. ಅಪ್ಪ ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ, ಬೋರಿಂಗ್‌ ಎಂದು ಚಿಕ್ಕ ಮಕ್ಕಳಿಗೆ ಬೇಸರ ಕಾಡಬಾರದು. ಬೆಳಗ್ಗೆ 5 ಗಂಟೆಗೇ ಏಳುವ ಅಭ್ಯಾಸ ಮಾಡಿಕೊಳ್ಳಿ. ಆಗ ಎಲ್ಲಾ ಕೆಲಸಗಳೂ ಸಲೀಸಾಗಿ ಟೈಂ ಟೈಮಿಗೆ ಮುಗಿಯುತ್ತದೆ. ಎಲ್ಲಾ ಗೃಹಿಣಿಯರೂ ಈ ತತ್ವಕ್ಕೆ ಅಂಟಿಕೊಳ್ಳುವುದರಿಂದ ಅವರು ಸದಾ ಎಲ್ಲರಿಗಿಂತ ಮುಂಚೆ ಎದ್ದಿರುತ್ತಾರೆ.

ಕಮ್ಯುನಿಕೇಶನ್‌ ಗ್ಯಾಪ್‌ ಕಾಡದಿರಲಿ

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಮಕ್ಕಳು ತಂದೆಗೆ ಹೆಚ್ಚು ಹೆದರುತ್ತಾರೆ. ಅವರೊಂದಿಗೆ ಮಾತುಕಥೆ ಕಡಿಮೆ. ಮಕ್ಕಳು ತಮ್ಮೆಲ್ಲ ಸಣ್ಣಪುಟ್ಟ ವಿಷಯಗಳನ್ನೂ ಅಮ್ಮನ ಬಳಿ ಹೇಳಿಕೊಳ್ಳುತ್ತವೆ. ಆದರೆ ಒಂಟಿ ತಂದೆ ಕೇಸಲ್ಲಿ ಆತ ತಾಯಿಯೂ ಆಗಬೇಕಿರುವುದರಿಂದ, ಹಿಂದಿನ ಹಾಗೆ ಕೇವಲ ಔಪಚಾರಿಕತೆ ಅಥವಾ ಅಗತ್ಯಕ್ಕೆ ತಕ್ಕಂತೇ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕಳಿಸಿಬಿಡವುದು ಸರಿಯಲ್ಲ. ಹೀಗಾಗಿ ಮಕ್ಕಳ ಜೊತೆ ಸಾಧ್ಯವಾದಷ್ಟೂ ಜಾಸ್ತಿ ಮಾತನಾಡಿ, ಅವರ ಪ್ರತಿಯೊಂದು ನಡೆಯ ಬಗ್ಗೆ ಕಣ್ಣಿರಿಸಿ.

IB134558_134558140729840_SM340781

ಅವರಮ್ಮನ ಹಾಗೇ ನೀವು ಹೆಚ್ಚಿನ ಸಹನೆಯಿಂದ ಮಕ್ಕಳ ಮಾತು ಆಲಿಸಬೇಕು. ಪ್ರೀತಿ ವಾತ್ಸಲ್ಯದಿಂದ ತಟ್ಟುತ್ತಾ, ಅವರ ತಲೆಗೂದಲಲ್ಲಿ ಬೆರಳಾಡಿಸುತ್ತಾ, ಆತ್ಮೀಯತೆ ಪ್ರಕಟಿಸಿ. ಹೀಗೆ ನಿಮ್ಮ ವಾತ್ಸಲ್ಯದಿಂದ ಪ್ರೇರಿತರಾಗಿ ಮಕ್ಕಳು ಪ್ರತಿಯೊಂದು ವಿಷಯವನ್ನೂ ನಿಮ್ಮಲ್ಲಿ ಹಂಚಿಕೊಳ್ಳಲು ಧಾವಿಸುತ್ತಾರೆ. ನೀವು ಸ್ಟ್ರಿಕ್ಟ್ ಫಾದರ್‌ ಮಾತ್ರವಲ್ಲದೆ, ಅವರ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಆಗಿ ನೋಡಿ. ಆಗ ಮಕ್ಕಳು ನಿಮ್ಮಲ್ಲಿ ಅಪಾರ ಅಕ್ಕರೆ ಹೊಂದಿ, ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ.

ಸಹಾಯ ಪಡೆಯಲು ಹಿಂಜರಿಯದಿರಿ

ಯಾವ ಸಂದರ್ಭದಲ್ಲೇ ಆಗಲಿ, ನೀವು ಬೇರೆಯವರಿಂದ ಸಹಾಯ ಪಡೆಯಲು ಸಂಕೋಚಪಡಬಾರದು, ನಾಚಿಕೊಳ್ಳಬೇಡಿ. ನೀವು ಇಬ್ಬಿಬ್ಬರ ವ್ಯಕ್ತಿತ್ವ ಹೊಂದಿರುವುದರಿಂದ, ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಎಲ್ಲಿ ಏನೇ ಸಮಸ್ಯೆ ಬಂದರೂ ನಿಮ್ಮ ಹತ್ತಿರದ ಅಕ್ಕ, ತಂಗಿ, ತಾಯಿ, ಅತ್ತೆ….. ಮುಂತಾದವರಿಗೆ ಫೋನ್‌ ಮಾಡಿ ಸಲಹೆ ಪಡೆಯಿರಿ. ನೆರೆಹೊರೆ, ಸಹೋದ್ಯೋಗಿಗಳ ಸಹಾಯ ಕೇಳಿ ಪಡೆಯಿರಿ.

ಎಂದೂ ಸಹನೆ ಕಳೆದುಕೊಳ್ಳಬೇಡಿ

ನೀವು ಮನೆ ಆಫೀಸ್‌ ಎರಡೂ ಸಂಭಾಳಿಸುವಾಗ ಸಹಜವಾಗಿಯೇ ಕಷ್ಟಗಳು ಹೆಚ್ಚುವುದರಿಂದ, ಅಗತ್ಯ ಮನೆಗೆಲಸದವಳು ಇರಲಿ. ಮಕ್ಕಳ ತುಂಟತನದಿಂದ ರೋಸಿಹೋಗಿದ್ದರೆ, ಅವರು ನಿಮಗೆ ಹೆಚ್ಚು ಸಹಾಯ ಮಾಡಲಾಗುತ್ತಿಲ್ಲ ಎಂದು ದುಃಖವಾದರೆ, ಸಹನೆ ಕಳೆದುಕೊಳ್ಳಬೇಡಿ. ಅದಕ್ಕಾಗಿ ಅವರ ಮೇಲೆ ರೇಗಾಡಬೇಡಿ. ಸಾಧ್ಯವಾದಷ್ಟೂ ಸಹನೆ, ಸಂಯಮದಿಂದ ಅವರಿಗೆ ತಿಳಿಹೇಳಿ. ಪ್ರಸ್ತುತ ಪರಿಸ್ಥಿತಿಯನ್ನು ಆಗಾಗ ಮನದಟ್ಟುಪಡಿಸಿ, ಅವರು ನಿಮಗೆ ಹೇಗೆ ಸಹಾಯ ಮಾಡಬಹುದೆಂದು ತಿಳಿಯಪಡಿಸಿ.

ಮಕ್ಕಳ ಟೈಂಟೇಬಲ್ ಮಾಡಿಡಿ

ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತುಬದ್ಧ ಜೀವನಕ್ಕೆ ಅಂಟಿರಬೇಕೆಂದು ಕಲಿಸಿರಿ. ಅವರ ಜೊತೆ ವಿಚಾರ ವಿಮರ್ಶೆ ನಡೆಸಿ ಒಂದು ರೆಗ್ಯುಲರ್‌ ಟೈಂಟೇಬಲ್ ಫಿಕ್ಸ್ ಮಾಡಿಡಿ, ಪ್ರತಿದಿನ ಅವರು ಅದಕ್ಕೆ ಬದ್ಧರಾಗಿ ನಡೆಯಬೇಕು. ಬೆಳಗ್ಗೆ ಬೇಗ ಏಳುವುದು, ತುಸು ವ್ಯಾಯಾಮ, ಬೆಳಗಿನ ಕಲಿಕೆ, ಸ್ನಾನ, ತಿಂಡಿ, ಶಾಲೆಗೆ ರೆಡಿ, ಮನೆಗೆ ಬಂದ ಮೇಲೆ  ಊಟ, ವಿಶ್ರಾಂತಿ, ಆಟ, ನಂತರ ಹೋಂವರ್ಕ್‌, ಪಾಠಗಳು ಮಧ್ಯೆ ಮಧ್ಯೆ ಒಂದಿಷ್ಟು  ಸಹಾಯ, ಟಿವಿ, ರಾತ್ರಿ 10 ಗಂಟೆಗೆ ನಿದ್ದೆ…… ಇವೆಲ್ಲ ಅವರಿಗೆ ರೆಗ್ಯುಲರ್‌

ಆಗಿ ಕರಗತವಾಗಬೇಕು. ಅವರು ಏನು ಓದುತ್ತಿದ್ದಾರೆ, ನೋಚ್ಸ್, ರೆಕಾರ್ಡ್ಸ್ ಅಪ್‌ ಡೇಟ್‌ ಆಗಿದೆಯೇ, ಅಸೈನ್‌ ಮೆಂಟ್‌, ಪ್ರಾಜೆಕ್ಟ್ ಪೂರೈಸುತ್ತಿದ್ದಾರಾ ಇತ್ಯಾದಿ ಅವರಮ್ಮ ಮಾಡುತ್ತಿದ್ದಂತೆಯೇ ಮಾಡಿ.

ಅವರಿಗೆ ಎಲ್ಲಿ? ಏನು ಕಷ್ಟವಾಗಿದೋ ಸಾಧ್ಯವಾದಷ್ಟೂ ನೀವೇ ಟ್ಯೂಷನ್‌ ಹೇಳಿಕೊಡಿ. ಎಲ್ಲರದರ ಮಧ್ಯೆ ಬಿಡುವು ಮಾಡಿಕೊಂಡು ಅವರೊಂದಿಗೆ ಕ್ವಾಲಿಟಿ ಟೈಂ ಕಳೆಯಿರಿ.

ಬೆಳೆದ ಹೆಣ್ಣುಮಕ್ಕಳು

ನೋಡನೋಡುತ್ತಿದ್ದಂತೆ ಹೆಣ್ಣುಮಕ್ಕಳು ಬೇಗ ಬೆಳೆದು ಹೈಸ್ಕೂಲಿಗೆ ಬರುವಷ್ಟರಲ್ಲಿ ಮೈ ನೆರೆಯುತ್ತಾರೆ. ಭಾರತೀಯ ತಂದೆಗೆ ಈ ಘಟ್ಟ ಹ್ಯಾಂಡಲ್ ಮಾಡುವುದು ಸವಾಲೇ ಸರಿ. ನಿಮ್ಮ ಅಕ್ಕ, ತಂಗಿ, ತಾಯಿಯರ ಮೂಲಕ ಅವರಿಗೆ ಮೊದಲೇ ಸುಳಿವು ಸೂಕ್ಷ್ಮದ ಅರಿವು ಮೂಡಿಸಿ. ಬೇಕಾದ ಪ್ಯಾಡ್ಸ್ ಕೊಡಿಸಿ. ಮೊದಲ ಸಲ ಋತುಮತಿ ಆದಾಗ ಅವರೊಂದಿಗೆ ಆತ್ಮೀಯತೆಯಿಂದ ಮಾತನಾಡಿ, ಧೈರ್ಯ ಹೆಚ್ಚಿಸಿ. ಕ್ರಮೇಣ ಪ್ರತಿ ತಿಂಗಳೂ ಇದಕ್ಕೆ ಹೇಗೆ ಸಿದ್ಧಳಿರಬೇಕು, ಏನೆಲ್ಲ ಮಾಡಬೇಕು, ಬೇಡ ತಿಳಿಸಿಕೊಡಿ. ಕ್ರಮೇಣ ಎಲ್ಲಾ ರೂಢಿಯಾಗುತ್ತದೆ.

ಸ್ವಯಂ ನಿಮ್ಮನ್ನೂ ಸಂಭಾಳಿಸಿ

ಇಷ್ಟೆಲ್ಲ ಇಬ್ಬಗೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ, ನೀವು ನಿಮ್ಮನ್ನು ಕಡೆಗಣಿಸಬಾರದು. ಏಕೆಂದರೆ ನಿಮ್ಮನ್ನು ವಿಚಾರಿಸಿಕೊಳ್ಳುವ ಅರ್ಧಾಂಗಿಯ ಸಪೋರ್ಟ್‌ ಇಲ್ಲ. ಎಲ್ಲಕ್ಕೂ ಮೊದಲು ನಿಮ್ಮ ಆರೋಗ್ಯದ ಕಡೆ ಗಮನಕೊಡಿ. ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಾ ನಿಮ್ಮ ದೈಹಿಕ ಮಾನಸಿಕ ಆರೋಗ್ಯ ಬ್ಯಾಲೆನ್ಸ್ ಆಗಿರುವಂತೆ ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ಸರಿ ಇರದಿದ್ದರೆ ಅದನ್ನು ವಿಚಾರಿಸುವವರಾರು? ಇದರ ಜೊತೆಗೆ ನಿಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು ಕಾದಂಬರಿ, ಬ್ಯಾಡ್ಮಿಂಟನ್‌ ಇತ್ಯಾದಿ ಏನಾದರೂ ಆಟ, ನಿಮ್ಮ ಮೆಚ್ಚಿನ ಯಾವುದೇ ಹವ್ಯಾಸ…. ಅದರತ್ತಲೂ ಗಮನ ಕೊಡಿ. ನಿಮಗಾಗಿ ಮತ್ತು ಮಕ್ಕಳಿಗಾಗಿ ಸದಾ ಪೌಷ್ಟಿಕ ಆಹಾರ, ಫಿಟ್‌ ನೆಸ್‌ ಇತ್ಯಾದಿ ಕಡೆ ಗಮನ ಕೊಡಲು ಮರೆಯದಿರಿ.

– ಪಿ. ಗಿರಿಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ