ಜನಪ್ರಿಯ ಧಾರಾವಾಹಿ `ಕುಂಕುಮ ಭಾಗ್ಯ’ ಹಾಗೂ `ಲವ್ ಸೋನಿಯಾ’ ಚಿತ್ರಗಳಿಂದ ಸದಾ ಚರ್ಚೆಯಲ್ಲಿರುವ ಮಾಡೆಲ್, ನಟಿ ಮೃಣಾಲ್ ಠಾಕುರ್ ಮಹಾರಾಷ್ಟ್ರದ ಧುವೆ ಜಿಲ್ಲೆಯವಳು. ಹಿಂದಿ ಮಾತ್ರವಲ್ಲದೆ, ಮರಾಠಿ ಸಿನಿಮಾ, ಧಾರಾವಾಹಿಗಳಲ್ಲೂ ಅಷ್ಟೇ ಖ್ಯಾತಿ ಪಡೆದಳು. ಇವಳ ಕೆರಿಯರ್ ಗೆ ತಾಯಿ ತಂದೆ ಬಹಳ ಸಹಕರಿಸಿದ್ದಾರೆ.
ಇವಳಿಗೆ ಬಾಲ್ಯದಿಂದಲೇ ಸಿನಿಮಾ ಎಂದರೆ ಹುಚ್ಚು. ತನ್ನ ಈ ಜರ್ನಿಯಿಂದ ಅವಳಿಗೆ ಮಹಾ ಖುಷಿ ಸಿಕ್ಕಿದೆ. ಲಾಕ್ ಡೌನ್ ಮುಗಿದ ನಂತರ ಇವಳ ಅಪೂರ್ಣವಾಗಿದ್ದ ತನ್ನ ಧಾರಾವಾಹಿ, ಚಿತ್ರಗಳನ್ನು ಮುಗಿಸುತ್ತಿದ್ದಾಳೆ. ಅವಳೊಡನೆ ನಡೆಸಿದ ಮಾತುಕಥೆ :
ಇತ್ತೀಚೆಗೆ ನೀನು ಏನು ಮಾಡುತ್ತಿರುವೆ?
ಲಾಕ್ ಡೌನ್ ನಂತರ ನನ್ನ ಅಪೂರ್ಣ ಧಾರಾವಾಹಿ, ಸಿನಿಮಾಗಳನ್ನು ಕಂಪ್ಲೀಟ್ ಮಾಡುತ್ತಿದ್ದೇನೆ. ನಾನು ಸದಾ ವಿಭಿನ್ನ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತೇನೆ. ನನ್ನ ಚಿತ್ರಗಳಾದ , `ಲವ್ ಸೋನಿಯಾ, ಸೂಪರ್, ಬಾಟ್ಲಾ ಹೌಸ್’ ರಿಲೀಸ್‌ಆದಾಗಿನಿಂದ, ಉತ್ತಮ ಸ್ಕ್ರಿಪ್ಟ್ ನನಗೆ ಬರುತ್ತಿವೆ. ಉತ್ತಮ ಅವಕಾಶಗಳು ಸಿಗತೊಡಗಿವೆ. `ತೂಫಾನ್’ ಸಹ OTT, ಸಿನಿಮಾ ಥಿಯೇಟರ್ ಗಳಲ್ಲಿ ಒಳ್ಳೆಯ ಹೆಸರು ಗಳಿಸಿತು. ಕೊರೋನಾ ಅಲೆ ತಗ್ಗಿದೆ, ಹೀಗಾಗಿ ಚಂಡೀಘಡಕ್ಕೆ ಒಂದು `ಜರ್ಸಿ’ ಚಿತ್ರೀಕರಣದಲ್ಲಿ ಬಿಝಿ ಆಗಿದ್ದೇನೆ. ಜೊತೆಗೆ 90 ಮಕ್ಕಳನ್ನು ಒಳಗೊಂಡ, `ಪ್ರಿಯಾಸ್ ಮಾಸ್ಕ್’ ನಮ್ಮ ದೇಶದ ಮೊಟ್ಟ ಮೊದಲ ಸಂಪೂರ್ಣ ಅನಿಮೇಟೆಡ್ ಕಮರ್ಷಿಯಲ್ ಚಿತ್ರವಾಗಲಿದೆ. ಕೋವಿಡ್ ಜಾಗೃತಿ ಮೂಡಿಸುವ ಚಿತ್ರವಿದು. ಇಲ್ಲಿ ನಾನು ನಾಯಕಿ ಪ್ರಿಯಾಳಿಗೆ ಧ್ವನಿ ನೀಡಿದ್ದೇನೆ.
ಇತ್ತೀಚೆಗೆ ಬಹುತೇಕ ಚಿತ್ರಗಳು OTT ಮೂಲಕ ರಿಲೀಸ್ ಆಗುತ್ತಿವೆ. ಇದಕ್ಕೆ ನಿನ್ನ ಅಭಿಪ್ರಾಯ?
ಸಣ್ಣ ಮತ್ತು ಕಡಿಮೆ ಬಜೆಟ್ ನ ಚಿತ್ರಗಳಿಗೆ OTT ಒಂದು ಉತ್ತಮ ಪ್ಲಾಟ್ ಫಾರ್ಮ್ ಆಗಿದೆ. ಆದರೆ ನನ್ನ ಬಹುತೇಕ ಚಿತ್ರಗಳು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿವೆ. ಆಗ ವೀಕ್ಷಕರಿಗೂ ಶಿಳ್ಳೆ ಹೊಡೆದು, ಚಪ್ಪಾಳೆ ಮೂಲಕ ಅಲ್ಲಿ ಎಂಜಾಯ್ ಮಾಡಬಹುದು! ನನ್ನ 2 ಹೊಸ ಚಿತ್ರಗಳೂ ಕ್ರೀಡೆ ಆಧರಿಸಿದ ಲವ್ ಸ್ಟೋರಿಗಳು. ಆದರೆ ಎರಡರಲ್ಲೂ ನನ್ನ ಪಾತ್ರ ವಿಭಿನ್ನ.
ನೀನು ಬಾಲ್ಯದಲ್ಲಿ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದೆಯಾ?
ಹೌದು, ನಾನು ಮೊದಲಿನಿಂದಲೂ ಸ್ಪೋರ್ಟ್ಸ್ ಮನ್, ನಾನು ಜಿಲ್ಲಾ ಮಟ್ಟದಲ್ಲಿ ಬಾಸ್ಕೆಟ್ ಬಾಲ್, ಫುಟ್ ಬಾಲ್ ಆಡಿ ಪ್ರಶಸ್ತಿ ಗಳಿಸಿದ್ದೇನೆ!
ನೀನು ಬಾಲಿವುಡ್ ಗೆ ಬಂದದ್ದು ಹೇಗೆ?
ನಮ್ಮ ಮನೆಯವರಿಗೂ ಬಾಲಿವುಡ್ ಗೂ ಸಂಬಂಧವೇ ಇಲ್ಲ. ನಾನು ಸಿನಿಮಾ ನೋಡುವಾಗೆಲ್ಲ, ನಾನು ಬೆಳ್ಳಿತೆರೆಯಲ್ಲಿ ಮಿಂಚಬಲ್ಲನೇ ಎಂಬ ಹಗಲುಗನಸಲ್ಲಿ ತೇಲುತ್ತಿದ್ದೆ…..
`3 ಈಡಿಯಟ್ಸ್’ ಚಿತ್ರ ನೋಡಿದ ಮೇಲೆ, ನಮಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆಯೋ ಅದನ್ನೇ ಮಾಡಬೇಕು ಎಂಬುದನ್ನು ಪ್ರಾಕ್ಟಿಕಲ್ ಆಗಿ ಕಲಿತೆ. ಪಿಯುಸಿ ಓದುತ್ತಿದ್ದ ಆಗ ನನಗೆ ನನ್ನ ಕೆರಿಯರ್ ಎಲ್ಲಿಂದ ಆರಂಭಿಸಬೇಕು? ಎಂಬ ಪರಿಜ್ಞಾನವೇ ಇರಲಿಲ್ಲ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಮೆಡಿಸಿನ್ ಗೆ ಸೀಟ್ ಸಿಗುವ ಅವಕಾಶ ಇದ್ದರೂ, ಅದನ್ನೆಲ್ಲ ಬಿಟ್ಟು ಈ ಗ್ಲಾಮರ್ ಲೋಕಕ್ಕೆ ಕಾಲಿಟ್ಟೆ. ಸಿನಿಮಾಗಳಿಂದ ಪ್ರೇರಿತಳಾದ ನಾನು ಅದರ ಮೂಲಕ ಜನರಿಗೆ ಏನಾದರೂ ತಿಳಿಸ ಬಯಸುತ್ತೇನೆ.
ನೀನು ನಟನೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುವೆ ಎಂದಾಗ ನಿನ್ನ ತಾಯಿ ತಂದೆಯರ ಅಭಿಪ್ರಾಯ ಹೇಗಿತ್ತು?
ಎಲ್ಲಾ ಮಧ್ಯಮ ವರ್ಗದ ಪೋಷಕರಂತೆ ಅವರೂ, ಮೊದಲು ಈ ಗ್ಲಾಮರ್ ಫೀಲ್ಡ್ ಬೇಡ ಎಂದೇ ಹೇಳಿದರು. ನನ್ನ ವೈಯಕ್ತಿಕ ಪಬ್ಲಿಸಿಟಿ (ಅದು ಸಿನಿಮಾಗೆಂದೇ ಇರಬಹುದು) ಅವರಿಗೆ ಇಷ್ಟವಿರಲಿಲ್ಲ. ಅವರ ಪ್ರಕಾರ ನಾನು ಒಂದು ಸುರಕ್ಷಿತ ನೌಕರಿಗೆ ಸೇರಬೇಕಿತ್ತು. ಇಂದಿನ ಸಿನಿ ಜೀವನ ಕ್ಷಣಿಕ ಅಂತಾರೆ. ನನಗೆ ಧಾರಾವಾಹಿ ಆಫರ್ಸ್ ಬಂದಾಗ, ಅವರಿಗೆ ಶೂಟಿಂಗ್ ಕುರಿತಾದ ಎಲ್ಲಾ ವಿವರ ತೋರಿಸಿದೆ. ಈ ಮೂಲಕ ಅವರಿಗೆ ಎಲ್ಲಾ ಅರ್ಥವಾಗಿ ನನ್ನನ್ನು ತಡೆಯಲು ಹೋಗಲಿಲ್ಲ. ನನ್ನ ಗೆಳತಿಯರೆಲ್ಲ ತಮ್ಮ ಇಷ್ಟದ ಕೆಲಸ ಮಾಡಲು ಹೆತ್ತವರೊಡನೆ ಹೋರಾಡಿದ್ದಾರೆ. ನನ್ನ ವಿದ್ಯಾಭ್ಯಾಸದ ಕುರಿತು, ಕರೆಸ್ಪಾಂಡೆನ್ಸ್ ಶಿಕ್ಷಣ ಮುಂದುವರಿಸಿ ಡಿಗ್ರಿ ಪಡೆದುಕೋ ಎಂದು ಸಲಹೆ ನೀಡಿದರು. ಹೊರಗಿನ ಪ್ರಪಂಚದಿಂದ ಕಲಿಯಬೇಕಾದುದು ಬಹಳಷ್ಟಿದೆ ಎಂದು ಎಚ್ಚರಿಸಿದರು. ಒಬ್ಬ ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ನಾನು, ಬಹಳ ಧೈರ್ಯವಹಿಸಿ ಈ ಫೀಲ್ಡಿಗೆ ಹೆಜ್ಜೆ ಇರಿಸಿದೆ!
ಮೊದಲ ಬ್ರೇಕ್ ಸಿಕ್ಕಿದ್ದು ಹೇಗೆ?
ನಾನು ಆಗ ಮುಂಬೈ ಕಾಲೇಜಿನಲ್ಲಿ ಓದುತ್ತಿದ್ದೆ. ಆಗ ಫ್ರೆಂಡ್ಸ್ ಆಡಿಶನ್ ಕುರಿತು ಹೇಳಿದರು. ಅಲ್ಲಿಗೆ ಹೋದಾಗ, ಆ ಮೋನೊಲಾಗ್ ಗೆ ನಾನು ಸೆಲೆಕ್ಟ್ ಆದೆ! ನನ್ನ ಕೆಲಸ ಮೆಚ್ಚಿದ ನಿರ್ದೇಶಕರು ಮುಂದಿನ ಧಾರಾವಾಹಿಗಳಲ್ಲೂ ಕೆಲಸ ಕೊಟ್ಟರು. ಮೂಲ ಮರಾಠಿಗಳಾದ ನನ್ನ ಹಿಂದಿ ಉಚ್ಚಾರಣೆ ಸ್ಪಷ್ಟ ಇರಲಿಲ್ಲ. ಅದನ್ನು ನಾನು ಬಹಳ ಸರಿಪಡಿಸಿಕೊಂಡೆ. ಮುಂದೆ ಮರಾಠಿ ಚಿತ್ರದ ನಾಯಕಿಯಾದ ನನಗೆ, ಹಿಂದಿ ಚಿತ್ರಗಳತ್ತ ಮನಸ್ಸಾಯಿತು. ಧಾರಾವಾಹಿಗಳಲ್ಲಿ ನನ್ನ ನಾಯಕಿ ಪಾತ್ರ ಯಶಸ್ವಿ ಆದಂತೆ ಬಾಲಿವುಡ್ ನಿಂದಲೂ ಬುಲಾವ್ ಬಂತು!
ಮೂಲತಃ ಮುಂಬೈನವಳಲ್ಲ ಎಂಬ ಕಾರಣಕ್ಕೆ ನಿನಗೆ ಈ ಹಂತ ತಲುಪಲು ಬಹಳ ಕಷ್ಟ ಪಡಬೇಕಾಯಿತೇ?
ಇಲ್ಲ, ನನಗೆ ಅಂಥ ಭೇದಭಾವ ಎಲ್ಲೂ ಕಂಡುಬರಲಿಲ್ಲ. ಏಕೆಂದರೆ ನನ್ನನ್ನು ನಾನು ಹೊರಗಿನವಳು ಎಂದು ಭಾವಿಸುವುದೇ ಇಲ್ಲ! ಧಾರಾವಾಹಿಗಳಲ್ಲಿ ಎಂಟ್ರಿ ಪಡೆದಾಗಲೇ ಬಾಲಿವುಡ್ ಗೆ ಸೇರಿದಳು ಎಂದೇ ಭಾವಿಸುತ್ತದೆ. ನನ್ನ ಜರ್ನಿ ಚೆನ್ನಾಗಿದೆ, ನಿಮ್ಮಲ್ಲಿ ನಿಜವಾಗಿಯೂ ಯೋಗ್ಯತೆ ಇದೆಯಾದರೆ, ಆತ್ಮವಿಶ್ವಾಸದಿಂದ ಬಂದದ್ದನ್ನು ಎದುರಿಸುವೆ ಎನಿಸಿದರೆ, ನಿಮ್ಮ ಯಾವುದೇ ಗುರಿ ಮುಟ್ಟುವುದೂ ಅಸಾಧ್ಯವೇನಲ್ಲ!
ಯಾವ ಶೋ ನಿನ್ನ ಜೀವನ ಬದಲಾಯಿಸಿತು ಅಂತೀಯಾ?
`ಕುಂಕುಮ ಭಾಗ್ಯ’ ಧಾರಾವಾಹಿ ನಿಜಕ್ಕೂ ನನ್ನ ಜೀವನ ಬದಲಾಯಿಸಿತು ಎಂದೇ ಹೇಳಬೇಕು. ಇದರಿಂದ ನಾನು ಬಹಳಷ್ಟು ಸಂಗತಿ ಕಲಿತಿರುವೆ. ಸಿನಿಮಾಗಳಲ್ಲಿ ಮಿಂಚ ಬಯಸುವವರು ಕಿರುತೆರೆಯ ಸಹವಾಸಕ್ಕೆ ಹೋಗಬಾರದು ಎಂಬ ಒಂದು ಮೂಢನಂಬಿಕೆ ಮುಂಬೈನಲ್ಲಿ ದಟ್ಟವಾಗಿದೆ, ಆದರೆ ಇದನ್ನು ನಾನು ಒಪ್ಪುವುದಿಲ್ಲ. ನಾನು ಕಲಿತಿದ್ದೆಲ್ಲ ಟಿ.ವಿ.ಯಿಂದಲೇ! ಹೊಸ ಕಲಾವಿದರು ಟಿ.ವಿ.ಯಿಂದ ಹಿರಿ ತೆರೆಗೆ ಬಂದರೆ ಉತ್ತಮ ಎಂದೇ ಭಾವಿಸುವೆ. ಇದರಿಂದ ಅವರು ಬಹಳಷ್ಟು ಕಲಿಯಬಹುದು. ಹೆಚ್ಚು ಟೆನ್ಶನ್ ಆದಾಗ ಏನು ಮಾಡ್ತೀಯಾ?
ನಾನು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್! ಆದರೆ ಎಲ್ಲಿ ಅದರಿಂದ ಡಿಸ್ಟೆನ್ಸ್ ಮೆಯಿಂಟೇನ್ ಮಾಡಬೇಕು ಅಂತಾನೂ ಗೊತ್ತು. ಅನಗತ್ಯ ಟ್ರೋಲಿಂಗ್ ನಿಂದ ನನ್ನ ಬುದ್ಧಿ ಕೆಟ್ಟು ಟೆನ್ಶನ್ ಹೆಚ್ಚಿದ್ದೂ ಇದೆ. ಹೀಗಾದಾಗೆಲ್ಲ ಅಮ್ಮ ಅಪ್ಪನ ಬಳಿ ಡಿಸ್ಕಸ್ ಮಾಡಿ, ಮಾಮೂಲಿ ಮೂಡ್ ಗೆ ಮರಳುತ್ತೇನೆ.
ಎಂದಾದರೂ ರಿಜೆಕ್ಷನ್ ಎದುರಿಸಿದ್ದೂ ಉಂಟಾ?
ಬೇಕಾದಷ್ಟು ಸಲ! ಆಗಲೂ ನನ್ನ ಹೆತ್ತವರ ಬಳಿ ಚರ್ಚಿಸಿ ಸಲಹೆ ಪಡೆಯುತ್ತೇನೆ, ನಾರ್ಮಲ್ ಆಗ್ತೇನೆ. ನಮಗೆಲ್ಲರಿಗೂ ಗೆಲುವನ್ನು ಸ್ವಾಗತಿಸಿ ಸಂಭ್ರಮಿಸಲು ಗೊತ್ತೇ ಹೊರತು, ಸೋಲು ಎದುರಾದಾಗ ಹೇಗೆ ಅದನ್ನು ಎದುರಿಸಬೇಕೋ ಗೊತ್ತಾಗೋದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಇದನ್ನು ನಡುನಡುವೆ ಕಲಿಸುವ ಅಗತ್ಯವಿದೆ. ಆಗ ಮಕ್ಕಳು ಎಂಥ ಟೆನ್ಶನ್ ಎದುರಿಸಲಿಕ್ಕೂ ಸಿದ್ಧರಾಗ್ತಾರೆ.
ಸಿನಿಮಾದಲ್ಲಿ ಇಂಟಿಮೇಟ್ ಸೀನ್ಸ್ ಮಾಡುವಾಗ ಸಹಜತೆ ಇರುತ್ತಾ?
ನಾನು ಸ್ಕ್ರಿಪ್ಟ್ ಓದುವಾಗಲೇ, ಈ ಚಿತ್ರಕ್ಕೆ ಇಂಥ ದೃಶ್ಯ ಅನಿವಾರ್ಯವೋ ಅಲ್ಲವೋ ಚಿಂತಿಸುತ್ತೇನೆ. ಲವ್ ಸ್ಟೋರಿಯಲ್ಲಿ ಇಂಥ ದೃಶ್ಯ ಬಂದರೆ, ಓ.ಕೆ. ಆದರೆ ಡ್ರೀಮ್ ಸಾಂಗ್, ಹೆಸರಲ್ಲಿ ಹುಚ್ಚುಚ್ಚಾಗಿ ನೀರಿಗೆ ಅದ್ದುವುದು, ಪಾರ್ಕ್ ನಲ್ಲಿ ಉರುಳಾಡುವುದು…. ನನಗೆ ಬೇಕಿಲ್ಲ!
ಮುಂದಿನ ಪೀಳಿಗೆಯ ಉದಯೋನ್ಮುಖ ನಟಿಯರಿಗೆ ಏನಾದರೂ ಮೆಸೇಜ್?
ಎಲ್ಲ ತಾಯಿ ತಂದೆಯರಲ್ಲೂ ನನ್ನದೊಂದು ವಿನಂತಿ, ನಿಮ್ಮ ಮಕ್ಕಳು ಏನಾಗ ಬಯಸುತ್ತಾರೋ ಅದಕ್ಕೆ ಅವಕಾಶ ಮಾಡಿಕೊಡಿ, ನಿಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ! ಅದೇ ರೀತಿ ಹೆಣ್ಣುಮಕ್ಕಳೂ ಸಹ ಅವರ ಮಾರ್ಗದರ್ಶನದಲ್ಲೇ ನಡೆಯಬೇಕು. – ಜಿ. ಸುಮಾ