ನಾನು 3 ಸಲ ಕೀರ್ತನಾಳ ಮನೆ ಬೆಲ್ ಬಾರಿಸಿದರೂ ಬಾಗಿಲು  ತೆರೆಯದಿದ್ದಾಗ ಮನಸ್ಸಿಗೆ ಗೊಂದಲವಾಯಿತು. ಅದೇನು ವಿಷಯ ಇರಬಹುದು, ಅವಳೇಕೆ ಬಾಗಿಲು ತೆರೆಯುತ್ತಿಲ್ಲ? ಅವಳೇ ತಾನೇ ಫೋನ್‌ ಮಾಡಿ ಕರೆದದ್ದು, `ಮನಸ್ವಿನಿ ಬಾರೆ, ಇಂದು ನಾನು ಫ್ರೀ ಆಗಿರುವೆ. ಉಮೇಶ್‌ ಟೂರ್‌ ಗೆಂದು ಮುಂಬೈಗೆ ಹೋಗಿದ್ದಾನೆ. ಇಬ್ಬರೂ ಕುಳಿತು ಸ್ವಲ್ಪ ಹೊತ್ತು ಹರಟೆ ಹೊಡೆಯೋಣ,’ ಅಂತಾ ಕೀರ್ತನಾ ಆಹ್ವಾನ ಕೊಟ್ಟು ನನ್ನನ್ನು ಕರೆಸಿಕೊಂಡಿದ್ದಳು.

ನನಗೆ ಇಲ್ಲಿ ಮೈಸೂರಿನಲ್ಲಿ ಗಂಡನ ಆಫೀಸಿನಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ಹೆಂಡತಿಯರನ್ನು ಹೊರತುಪಡಿಸಿ ಬೇರಾರ ಬಗ್ಗೆಯೂ ತಿಳಿದಿರಲಿಲ್ಲ. ಕೀರ್ತನಾಳಿಗೆ ಮಾತ್ರ ಅದೆಷ್ಟೋ ಜನರು ಗೊತ್ತು. ತನ್ನ ಮನದ ವಿಚಾರ ಹಂಚಿಕೊಳ್ಳಲು ಅವಳಿಗೆ ಅದೆಷ್ಟೋ ಜನರು ಸ್ನೇಹಿತರಿದ್ದರು.

ಮನಸ್ವಿನಿ ಹಾಗೂ ಕೀರ್ತನಾ ಇಬ್ಬರೂ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ‌ನಲ್ಲಿ ಒಂದೇ ಕೋಣೆಯಲ್ಲಿ 3 ವರ್ಷ ಕಳೆದಿದ್ದರು. ಹೀಗಾಗಿ ಅವರ ನಡುವೆ ಸ್ನೇಹ ಬೆಳೆಯದೇ ಇರಲು ಹೇಗೇ ಸಾಧ್ಯ? ಹೀಗಾಗಿ ಪರಸ್ಪರರ ಮೇಲೆ ನಂಬಿಕೆ ಇತ್ತು. ಮದುವೆಯ ನಂತರ ಇಬ್ಬರೂ ಫೋನ್‌ ಹಾಗೂ ಇಮೇಲ್ ಮೂಲಕ ಸತತ ಸಂಪರ್ಕದಲ್ಲಿದ್ದರು. ಬಳಿಕ ಮನಸ್ವಿನಿಯ ಗಂಡನಿಗೆ, ಕೀರ್ತನಾ ತನ್ನ ಗಂಡನೊಂದಿಗೆ ವಾಸಿಸುತ್ತಿದ್ದ ಮೈಸೂರಿಗೆ ವರ್ಗವಾಯಿತು. ಹಾಗಾಗಿ…..

ಮನಸ್ವಿನಿ ಇಷ್ಟು ಯೋಚಿಸುವಷ್ಟರಲ್ಲಿಯೇ ಅವಳ ಯೋಜನೆಗಳಿಗೆ ವಿರಾಮ ಕೊಡುತ್ತಾ ಕೀರ್ತನಾ ಬಾಗಿಲು ತೆರೆದಾಗ, ಅವಳ ಮುಖದಲ್ಲಿ ಮುಗುಳ್ನಗೆ ಚಿಮ್ಮಿತು. ಮನಸ್ವಿನಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಒಳಗೆ ಎಳೆದುಕೊಳ್ಳುತ್ತಾ ಕೀರ್ತನಾ ಹೇಳಿದಳು, “ನೀನು ಯಾವಾಗ ಬಂದೆ? ನೀನು ಹಲವು ಸಲ ಬೆಲ್ ‌ಮಾಡಿದೀಯಾ ಅನಿಸುತ್ತೆ. ನಾನು ಬೆಡ್‌ ರೂಮಿನಲ್ಲಿದ್ದೆ. ಹೀಗಾಗಿ ನನಗೆ ಕೇಳಿಸಲಿಲ್ಲ.”

ಕೀರ್ತನಾ ಮುಖದಲ್ಲಿ ಮುಗುಳ್ನಗು ಅರಳಿದ್ದರೂ ಅವಳ ಧ್ವನಿಯಲ್ಲಿ ಅವಳು ಸಾಕಷ್ಟು ಅತ್ತಿದ್ದಾಳೆ ಎನ್ನುವುದನ್ನು ತಿಳಿದುಕೊಳ್ಳಲು ಮನಸ್ವಿನಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಕೀರ್ತನಾಳ ಮುಖದಲ್ಲಿ ಸ್ವಲ್ಪ ಉದಾಸತನದ ಜೊತೆಗೆ ಒಂದು ನಿಶ್ಚಿತ ಭಾವನೆ ಕೂಡ ಎದ್ದು ಕಾಣುತ್ತಿತ್ತು.

ಮನಸ್ವಿನಿ ಮುಗುಳ್ನಗುತ್ತಾ, “ಕೀರ್ತನಾ, ಒಂದು ಮಾತಂತೂ ಸತ್ಯ. ನೀನು ಅತ್ತ ಬಳಿಕ ನಿನ್ನ ಕಣ್ಣುಗಳು ಸುಂದರವಾಗಿ ಕಾಣುತ್ತವೆ ಅಂತ ಉಮೇಶ್‌ ಹೇಳ್ತಿದ್ದ,” ಎಂದಳು.

ಕೀರ್ತನಾಳ ಮುಖದಲ್ಲಿ ಸಾಧಾರಣ ಮುಗುಳ್ನಗೆಯ ಜೊತೆಗೆ ಅವಳ ಕಣ್ಣುಗಳ ಅಂಚಿನಲ್ಲಿ ಸ್ವಲ್ಪ ತೇವ ಎದ್ದು ಕಾಣುತ್ತಿತ್ತು. ಆದರೆ ಅವಳು ಮಾತನ್ನು ತೇಲಿಸುತ್ತಾ, “ಬಾ ಮನಸ್ವಿನಿ, ಇಬ್ಬರೂ ಆರಾಮವಾಗಿ ಕುಳಿತು ಕಾಫಿ ಕುಡಿಯೋಣ,” ಎಂದಳು.

ಮನಸ್ವಿನಿ ಅವಳ ಕೈ ಹಿಡಿದು ಕೂರಿಸುತ್ತಾ, “ಏನು ವಿಷಯ ಕೀರ್ತನಾ?” ಎಂದು ಕೇಳಿದಳು.

“ಅಂಥದ್ದೇನು ವಿಷಯವಿಲ್ಲ ಮನಸ್ವಿನಿ. ನಾನಿಂದು ಒಂದು ವೈರಸ್‌ ನ್ನು ನಿವಾರಿಸಿರುವೆ. ಅದು ಜೀವನದ ವಿಂಡೋವನ್ನು ನಾಶ ಮಾಡುತ್ತಿತ್ತು…..” ಎಂದಳು.

ವಿಷಯವನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ಆರಂಭಿಸಿದ್ದಳು. ಆದರೆ ಆ ವಿಷಯವನ್ನು ಮುಗಿಸುವ ಹೊತ್ತಿಗೆ ಅವಳ ಹೃದಯ ತುಂಬಿಬಂದಿತ್ತು.

“ನೀನು ಆದರ್ಶನ ಬಗ್ಗೆ ಹೇಳುತ್ತಿರುವೆ ತಾನೇ…?” ಎಂದು ಮನಸ್ವಿನಿ ಕೇಳಿದಳು.

ಕೀರ್ತನಾ ಮೆಲ್ಲನೆ ಒಪ್ಪಿಗೆಯಿಂದ ತಲೆ ಅಲ್ಲಾಡಿಸುತ್ತ “ಹೌದು,” ಎಂದಳು.

ಆದರ್ಶ್‌ ಕೀರ್ತನಾಳಿಗೆ ಏನಾಗಿದ್ದ ಅಥವಾ ಅವಳು ಆದರ್ಶನಿಗೆ ಏನಾಗಿದ್ದಳು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಅವರಿಬ್ಬರೂ ವರ್ಷಾನುವರ್ಷಗಳಿಂದ ಪರಸ್ಪರರ ಸಂಪರ್ಕದಲ್ಲಿದ್ದರು. ಅವರ ವಿಷಯವೇ ವಿಭಿನ್ನವಾಗಿರುತ್ತಿತ್ತು. ಅವಳು ಬಹಳ ಸುಂದರಿಯೇನೂ ಆಗಿರಲಿಲ್ಲ. ಆದರೆ ಅವಳ ದೊಡ್ಡ ದೊಡ್ಡ ಕಪ್ಛು ಕಣ್ಣುಗಳಲ್ಲಿ ವಿಶಿಷ್ಟ ಆಕರ್ಷಣೆಯಿತ್ತು. ಯಾರಾದರೂ ಅವಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತಿತ್ತು. ಅವಳಲ್ಲಿಯೇ ಕಳೆದುಹೋಗಿ ಬಿಡುತ್ತಿದ್ದರು. ತುಟಿಯಲ್ಲಿ ಸದಾ ಮುಗುಳ್ನಗೆ, ಯಾರೊಂದಿಗೂ ಜಗಳಗಳಿಲ್ಲ, ಅವಳು ಎಲ್ಲರಿಗೂ ನೆರವಾಗುವ ಸ್ವಭಾವದವಳು. ಅವಳ ಮನಸ್ಸಿನಲ್ಲಿ ದಯೆಯ ವಿಶಾಲ ಸಾಗರವೇ ಇತ್ತು. ಅವಳು ಬೇರೊಬ್ಬರಿಗೆ ಎಂದೂ ತದ್ವಿರುದ್ಧವಾಗಿ ಯೋಚಿಸುತ್ತಿರಲಿಲ್ಲ. ಅವಳು ಚಂಚಲ ಹಾಗೂ ಸದಾ ಖುಷಿಯಿಂದಿರುತ್ತಿದ್ದಳು.

ಅದೊಂದು ದಿನ ಹಾಸ್ಟೆಲ್ ‌ನ ಫೋನ್‌ ಖಾಲಿ ಇತ್ತು. ತನ್ನ ಹಸನ್ಮುಖಿ ಸ್ವಭಾವದ ಕಾರಣದಿಂದ ಅವಳು ಒಂದು ರಾಂಗ್‌ ನಂಬರಿಗೆ ಫೋನ್‌ ಮಾಡಿದಳು. ಆಮೇಲೆ ಅವಳಿಗೆ ಅದೇ ಅಭ್ಯಾಸವಾಗಿ ಹೋಯಿತು. ಹಾಸ್ಟೆಲ್‌ ನ ಫೋನ್‌ ಖಾಲಿ ಇದ್ದಾಗೆಲ್ಲ ಅವಳು ಯಾವುದೊ ತೋಚಿದ ನಂಬರಿಗೆ ಡಯಲ್ ಮಾಡಿ ಸದಾ ನಗುನಗುತ್ತಾ ಮಾತನಾಡುತ್ತಿದ್ದಳು.

ಅದೇ ರೀತಿ ಒಂದು ದಿನ ಹೀಗೆಯೇ ಯಾರಿಗೊ ರಾಂಗ್‌ ನಂಬರಿಗೆ ಫೋನ್‌ ಮಾಡಿದಾಗ, ಅತ್ತ ಕಡೆಯಿಂದ ಯಾರೂ ಊಹಿಸಲಾಗದ, ಹೃದಯವನ್ನು ತಮ್ಮತ್ತ ಸೆಳೆಯುವ ಒಂದು ಧ್ವನಿ ಕೇಳಿಸಿತು. ಕಿವಿಗೆ ಇಂಪಾದ ಧ್ವನಿಯಿಂದ ಮಾತನಾಡುತ್ತಿದ್ದ ವ್ಯಕ್ತಿಯ ಜೊತೆಗೆ ಅವಳು ಹೇಗೆ ಮಾತನಾಡಲು ಆರಂಭಿಸಿದಳೆಂದರೆ ಆ ವ್ಯಕ್ತಿ ತನಗೆ ಮೊದಲೇ ಚಿರಪರಿಚಿತ ಎಂಬಂತೆ. ಸ್ವಲ್ಪ ಹೊತ್ತು ಮಾತನಾಡಿದ ಬಳಿಕ ಅವಳು ಖುಷಿಯಿಂದ ಫೋನ್‌ ಇಡುವ ಮೊದಲು, “ನಿಮ್ಮೊಂದಿಗೆ ಮಾತನಾಡಿ ಬಹಳ ಖುಷಿಯಾಯಿತು. ಆದರ್ಶ್‌ ನಿಮ್ಮ ಜೊತೆಗೆ ಮತ್ತಷ್ಟು, ಮಗದಷ್ಟು ಮಾತನಾಡ್ತೀನಿ. ಬೈ,” ಎಂದು ಹೇಳುತ್ತಾ ಫೋನ್‌ ಕಟ್ ಮಾಡಿದ್ದಳು.

ಫೋನ್‌ ಇಟ್ಟ ಕೀರ್ತನಾ ಹಿಂತಿರುಗಿ ಮನಸ್ವಿನಿಯ ಕೊರಳಿಗೆ ತನ್ನೆರಡು ಬಾಹುಗಳನ್ನು ಚಾಚಿ, “ಇವತ್ತು ಬಹಳ ಖುಷಿ ಸಿಕ್ಕಿತು. ಇಂದು ಮೊದಲ ಬಾರಿಗೆ ಒಬ್ಬ ಹುಡುಗನ ಜೊತೆ ಮಾತನಾಡಿದ ಬಳಿಕ ಅವನ ಜೊತೆ ಮತ್ತೆ ಮಾತನಾಡುವ ಮನಸ್ಸಾಗುತ್ತಿದೆ,” ಎಂದಳು.

“ಬಿಡು ನನ್ನನ್ನು….. ನನಗೆ ಓದಲು ಬಹಳಷ್ಟಿದೆ. ನಿನ್ನ ಹಾಗೆ ನಾನು ಜಾಣೆಯಂತೂ ಅಲ್ಲ,” ಎಂದು ಹೇಳುತ್ತಾ ಮನಸ್ವಿನಿ ತನ್ನ ಕೋಣೆಗೆ ಹೋದಳು.

ಅವಳ ಹಿಂದೆಯೇ ಕೀರ್ತನಾ ಕೂಡ ಬಂದಳು. ಅವಳು ಅದೆಷ್ಟು ಖುಷಿಯಾಗಿದ್ದಳೆಂದರೆ, ಐಎಎಸ್‌ ಪಾಸಾಗಿದ್ದಾಳೇನೋ ಎಂಬಂತೆ. ಕೀರ್ತನಾ ಹೆಚ್ಚೇನೂ ಓದುತ್ತಿರಲಿಲ್ಲ. ಆದರೂ ಅವಳು ಒಳ್ಳೆಯ ಮಾರ್ಕ್ಸ್ ತೆಗೆದು ಪಾಸಾಗುತ್ತಿದ್ದಳು. ಮನಸ್ವಿನಿ ಬಹಳ ಕಷ್ಟಪಟ್ಟು ಓದುತ್ತಿದ್ದಳು. ಹಾಗಾಗಿ ಅವಳಿಗೂ ಅಷ್ಟೇ ಮಾರ್ಕ್ಸ್ ಬರುತ್ತಿದ್ದವು.

ಆ ದಿನದ ಬಳಿಕ ಆದರ್ಶ್‌ ಹೆಚ್ಚು ಕಡಿಮೆ ದಿನ ಫೋನ್‌ ಮಾಡುತ್ತಿದ್ದ. ಒಮ್ಮೊಮ್ಮೆ 2 ಸಲವಾದರೂ ಫೋನ್‌ ಮಾಡುತ್ತಿದ್ದ. ಆ ದಿನ ಆದರ್ಶ್‌ ಅವಳನ್ನು ಭೇಟಿಯಾಗಲು ಹಾಸ್ಟೆಲ್ ‌ಗೆ ಬರುವವನಿದ್ದ. ಆ ಕಾರಣದಿಂದ ಕೀರ್ತನಾ ಬಹಳೇ ಖುಷಿಯಾಗಿದ್ದಳು. ಅವಳ ಮನಸ್ಸಿಗೆ ಅಷ್ಟೇ ಗಾಬರಿ ಕೂಡ ಆಗುತ್ತಿತ್ತು. ಏಕೆಂದರೆ ಅದಕ್ಕೂ ಮೊದಲು ಅವಳು ಯಾವುದೇ ಹುಡುಗನ ಜೊತೆ ಈ ರೀತಿ ಭೇಟಿ ಆಗಿರಲಿಲ್ಲ ಹಾಗೂ ಮುಖಾಮುಖಿಯಾಗಿ ಮಾತನಾಡಿರಲಿಲ್ಲ.

11 ಗಂಟೆ ಸುಮಾರಿಗೆ ಹಾಸ್ಟೆಲ್ ‌ಗೇಟ್‌ ಹತ್ತಿರ ಕುಳಿತುಕೊಳ್ಳುವ ಸರಳಾ, “ಕೀರ್ತನಾ, ನಿನ್ನನ್ನು ಭೇಟಿಯಾಗಲು ಯಾರೋ ಬಂದಿದ್ದಾರೆ,” ಎಂದು ಕೂಗಿ ಹೇಳಿದಳು.

ಮನಸ್ವಿನಿ ಕೂಡ ಕೀರ್ತನಾಳ ಹಿಂದೆಯೇ ಓಡಿದಳು. ಕೀರ್ತನಾಳ ಬಾಯ್‌ ಫ್ರೆಂಡ್‌ ಹೇಗಿದ್ದಾನೆಂದು ಅವಳಿಗೆ ನೋಡಬೇಕಿತ್ತು. ಏಕೆಂದರೆ ಕೀರ್ತನಾ ಯಾವಾಗಲೂ ತನ್ನ ಬಾಯ್‌ ಫ್ರೆಂಡ್‌ ಕುರಿತೇ ಗುಣಗಾನ ಮಾಡುತ್ತಿದ್ದಳು.

ಆದರ್ಶ್‌ ಬಹಳ ಹ್ಯಾಂಡ್ಸಮ್ ಯುವಕನಾಗಿದ್ದ. ಇಬ್ಬರೂ ಹಾಸ್ಟೆಲ್ ನ ಪಾರ್ಕಿನಲ್ಲಿ ಪರಸ್ಪರ ಎದುರುಬದುರು ಕುಳಿತುಕೊಂಡಿದ್ದರು. ಆದರ್ಶ್‌ ಅವಳ ಮುಂದೆ ಹಾಗೇ ಸುಮ್ಮನೆ ಕುಳಿತುಕೊಂಡಿದ್ದ. ಅವನಿಗೆ ಏನು ಮಾತನಾಡಬೇಕೆಂದು ತೋಚುತ್ತಿಲ್ಲ ಎನ್ನುವುದು ಮನಸ್ವಿನಿಗೆ ದೂರದಿಂದಲೇ ಗೊತ್ತಾಯಿತು. ಕೀರ್ತನಾ ಹೇಳಿದ ಪ್ರಕಾರ, ಅವನು ನಿರರ್ಗಳಿ ಆಗಿರಲಿಲ್ಲ. ಅವನಿಗೆ ಅದು ಯಾವುದೊ ಹುಡುಗಿಯ ಜೊತೆ ಮೊದಲ ಭೇಟಿ ಆಗಿದ್ದಿರಬಹುದು. ಅದೂ ಕೂಡ ಗರ್ಲ್ಸ್ ಹಾಸ್ಟೆಲ್ ‌ನಲ್ಲಿ. ಬಹುಶಃ ಅವನು ರಿಸ್ಕ್ ತೆಗೆದುಕೊಂಡು ಮಾತನಾಡಲೆಂದು ಅಲ್ಲಿಗೆ ಬಂದಿದ್ದ ಅನಿಸುತ್ತಿತ್ತು.

ಕೀರ್ತನಾ ಕೂಡ ಉತ್ಸುಕಳಾಗಿದ್ದಳು. ಅವಳಿಗೆ ಸುಮ್ಮನೇ ಇರಲಾಗಲಿಲ್ಲ. ಅವಳು ಆದರ್ಶನ ಕೈಮೇಲಿನ ಒಂದು ಕಪ್ಪು ಗುರುತಿನ ಬಗ್ಗೆ, “ಇದೇನು ಸ್ಕೂಟರ್‌ ಗ್ರೀಸ್‌ ತಗುಲಿದೆಯಾ ಅಥವಾ ಏನಾದರೂ ಸುಟ್ಟಿದೆಯಾ…..?” ಎಂದು ಕೇಳಿದಳು.

ಆದರ್ಶ್‌ ಮುಗುಳ್ನಕ್ಕ. ಈಗ ಅವನಿಗೆ ಮಾತುಕತೆ ನಡೆಸುವ ನೆಪ ಸಿಕ್ಕಿತು. ಹೀಗಾಗಿ ಅವನು, “ಇಲ್ಲ ಇಲ್ಲ….. ಇದು ನನ್ನ ಬರ್ತ್‌ ಮಾರ್ಕ್‌,” ಎಂದು ಹೇಳಿದ.

ಸ್ವಲ್ಪ ಹೊತ್ತು ಇಬ್ಬರೂ ಅದು ಇದೂ ಮಾತನಾಡುತ್ತಿದ್ದರು. ಬಳಿಕ ಆದರ್ಶ್‌ ಹೊರಟುಹೋದ. ಅವನಿಗೆ ಹಾಡು ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು. ಆದರೆ ಕೀರ್ತನಾಗೆ ಅದು ಇಷ್ಟವಿರಲಿಲ್ಲ. ಅವಳಿಗೆ ಮಲಗುವುದೆಂದರೆ ಹೆಚ್ಚು ಇಷ್ಟವಾಗುತ್ತಿತ್ತು.

ಅದೊಂದು ದಿನ ಅವಳು ಮಲಗಿ ನಿದ್ರಿಸುತ್ತಿದ್ದಾಗ ಸರಳಾ ಅವಳನ್ನು ಕೂಗಿ, “ಕೀರ್ತನಾ, ನಿನಗೆ ಫೋನ್‌ ಬಂದಿದೆ,” ಎಂದಳು.

ಸ್ವಲ್ಪ ಹೊತ್ತು ಮಾತನಾಡಿ ರೂಮಿಗೆ ವಾಪಸ್ಸಾದ ಬಳಿಕ ಅವಳು ಜೋರು ಜೋರಾಗಿ ನಗತೊಡಗಿದಳು. ಮನಸ್ವಿನಿ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದಳು. ನಕ್ಕು ಸಹಜ ಸ್ಥಿತಿಗೆ ಬಂದ ಬಳಿಕ ಕೀರ್ತನಾ, “ಇವತ್ತಂತೂ ಆದರ್ಶ್‌ ಫೋನಿನಲ್ಲೇ ಹಾಡು ಹಾಡಿದ. ಅವನ ಕಂಠ ಕೂಡ ಚೆನ್ನಾಗಿದೆ,” ಎಂದಳು.

“ಯಾವ ಹಾಡು ಹಾಡಿದ?” ಮನಸ್ವಿನಿ ಕೇಳಿದಳು.

“ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ….ಈ ಹಾಡು ಹಾಡಿದ. ಅವನು ನನಗೆ ಸ್ವಯಂವರ ಸಿನಿಮಾ ನೋಡಲು ಕೂಡ ಹೇಳ್ತಿದ್ದ. ನಾನು ಇಲ್ಲ ಅಂತ ಹೇಳಲಿಲ್ಲ. ಅವನು ಅದೆಷ್ಟು ಮುಗ್ಧ. ಒಂದಿಷ್ಟು ಮೂರ್ಖ ಕೂಡ. ಮನಸ್ವಿನಿ ನೀನೂ ಕೂಡ ನನ್ನ ಜೊತೆಗೆ ಬಾ. ನಾನು ಅವನೊಂದಿಗೆ ಏಕಾಂಗಿಯಾಗಿರಲು ಆಗುವುದಿಲ್ಲ. ಅದು ಸರಿ ಕೂಡ ಅನಿಸುವುದಿಲ್ಲ,” ಎಂದಳು.

ಅದೊಂದು ದಿನ ಆದರ್ಶ್‌ ಕೀರ್ತನಾಳನ್ನು ಕರೆದುಕೊಂಡು ಸಿನಿಮಾ ನೋಡಲು ಹೋದ. ಅವರ ಜೊತೆ ಮನಸ್ವಿನಿ ಕೂಡ ಹೋಗಿದ್ದಳು. ಸಿನಿಮಾಕ್ಕೆ ಹೋಗಿ ಬಂದ ನಂತರ ಮನಸ್ವಿನಿ ಕೇಳಿದಳು, “ಕತ್ತಲೆಯಲ್ಲಿ ಅವನು ನಿನ್ನ ಕೈ ಹಿಡಿದುಕೊಳ್ಳಲಿಲ್ಲ ತಾನೇ…..?”

ಕೀರ್ತನಾ ಚಕಿತಳಾಗಿ, “ಏಕೆ? ಅದೇನು ಹೆದರಿಕೆ ಹುಟ್ಟಿಸುವ ಸಿನಿಮಾನಾ…. ಹೆದರಿ ಕೈ ಹಿಡಿದುಕೊಳ್ಳೋಕೆ?” ಎಂದು ಕೇಳಿದಳು.

ಮನಸ್ವಿನಿಗೆ ಜೋರಾಗಿ ನಗು ಬಂತು. ಆದರೆ ಕೀರ್ತನಾಗೆ ಅರ್ಥ ಆಗಲಿಲ್ಲ.

“ಆದರ್ಶ್‌ ಬೇರೆ ಕೆಲಸಕ್ಕೆ ಸೇರಿದಿದ್ದರೆ ಅವನು ಒಬ್ಬ ಗಾಯಕನಾಗಬಹುದು. ಇಂದು ಅವನು `ಜೊತೆಯಾಗಿ ಹಿತವಾಗಿ ಸೇರಿ ನಡೆ, ಸೇರಿ ನುಡಿ,’ ಹಾಡು ಹಾಡಿದ,” ಎಂದಳು ಕೀರ್ತನಾ.

ಮನಸ್ವಿನಿ ನಗುತ್ತಲೇ ಅವಳ ಕಾಲೆಳೆಯುತ್ತಾ, “ಅವನಿಗೆ ನಿನ್ನ ಮೇಲೆ ಪ್ರೀತಿಯೇನಾದರೂ ಆಗಿಬಿಟ್ಟಿದೆಯಾ?” ಎಂದು ಕೇಳಿದಳು.

ಕೀರ್ತನಾ ನಿರಾಳ ಮನಸ್ಸಿನಿಂದ ನಗುತ್ತಾ, “ಅದು ಪ್ರೀತಿ ಗೀತಿ ಏನೂ ಆಗಿರುವುದಿಲ್ಲ. ಅದು ಒಂದು ಕೆಮಿಕಲ್ ನ ಪರಿಣಾಮ ಆಗಿರುತ್ತದೆ. ನೀನು ಆ ವಿಷಯ ಬಿಟ್ಟುಬಿಡು. ಊಟಕ್ಕೆ ಹೋಗೋಣ ನಡೆ,” ಎಂದಳು.

ಆ ಬಳಿಕ ನಾವು ಓದು ಹಾಗೂ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದೆ. ಕೀರ್ತನಾಳ ಪರೀಕ್ಷೆ ಮೊದಲು ಮುಗಿಯಿತು. ಹಾಗಾಗಿ ಅವಳು ಊರಿಗೆ ಹೋಗಲು ಸಿದ್ಧತೆ ಮಾಡತೊಡಗಿದಳು. ಬೆಳಗ್ಗೆ 7 ಗಂಟೆಗೆ ಅವಳಿಗೆ ಬಸ್‌ ಇತ್ತು. ಅವಳನ್ನು ಬಸ್‌ ಸ್ಟಾಂಡಿಗೆ ತಲುಪಿಸಲು ನನ್ನ ಗೆಳತಿ ಬಿಂದು ಕೂಡ ಬಂದಿದ್ದಳು. ಅವಳನ್ನು ಊರಿಗೆ ಕಳಿಸಲು ಆದರ್ಶ್‌ ಕೂಡ ಬಂದಿದ್ದ. ಹೋಗುತ್ತಾ ಹೋಗುತ್ತಾ ಅವಳು ವಿಶಿಷ್ಟ ರೀತಿಯಲ್ಲಿ ಕೈ ಕುಲುಕಿದಳು. ಅವಳು ಸ್ವತಃ ಆದರ್ಶನಿಗೆ ಶೇಕ್‌ ಹ್ಯಾಂಡ್‌ ಮಾಡಿದಳು. ಬಿಂದೂಳ ಕೈ ಸಹ ಕುಲುಕಿದಳು.

“ಮನಸ್ವಿನಿ, ನಿಜ ಹೇಳಬೇಕೆಂದರೆ ನನಗೆ ಅಲ್ಲಿಂದ ಹೋಗಲಾಗಲಿಲ್ಲ. ಈಗಲೂ ಅವನ ಕೈಹಿಡಿದು ಅಲ್ಲಿಯೇ ನಿಂತಿರುವಂತಿದೆ. ನಾನು ಅನನತ್ತ ಕೈ ಚಾಚಿ ಅನನ ಕಣ್ಣಲ್ಲಿ ಇಣುಕಿದಾಗ ಅಲ್ಲಿ ಏನು ಕಂಡು ಬಂತು ಎನ್ನುವುದನ್ನು ನನಗೆ ಆಗ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಅವನಾಡಿದ ಮಾತು, ಅವನು ಹಾಡಿದ ಹಾಡು ಇನ್ನೂ ನನ್ನ ಕಿವಿಯಲ್ಲಿ ಗುಂಯ್‌ ಗುಡುತ್ತಿದೆ. ಅವನು ನನ್ನ ನಿಶ್ಚಿತಾರ್ಥದ ಬಗ್ಗೆ ಕೇಳಿದಾಗ, ಅವನ ಮುಖವೇ ಇಳಿದುಹೋಗಿತ್ತು. ನನ್ನ ದೇಹ ಎಲ್ಲಿಯೇ ಇರಬಹುದು. ಮನಸ್ಸು ಇನ್ನೂ ಅಲ್ಲಿಯೇ ಇದೆ,” ಎಂದು ಕಣ್ಣೀರು ಒರೆಸುತ್ತಾ ಕೀರ್ತನಾ ಹೇಳಿ ಕಾಫಿ ಮಾಡಲೆಂದು ಅಡುಗೆ ಮನೆ ಕಡೆ ಹೊರಟಳು.

ಅವಳ ಹಿಂದೆಯೇ ಮನಸ್ವಿನಿ ಕೂಡ ಹೋದಳು, “ಆ ಬಳಿಕ ಫೇಸ್‌ ಬುಕ್‌ ನಲ್ಲಿ ಅವನ ಸಂಪರ್ಕಕ್ಕೆ ಬಂದೆಯಾ?” ಎಂದು ಕೇಳಿದಳು.

ಕೀರ್ತನಾ ಹೌದೆಂಬಂತೆ ತಲೆ ಆಡಿಸುತ್ತಾ, “ಹಾಸ್ಟೆಲಿನಿಂದ ಮನೆಗೆ ಬಂದ ಬಳಿಕ ಕೆಲವೇ ದಿನಗಳಲ್ಲಿ ಉಮೇಶ್‌ ಜೊತೆ ನನ್ನ ಮದುವೆಯಾಯಿತು. ಉಮೇಶ್‌ ಬಹಳ ಒಳ್ಳೆಯ ಸ್ವಭಾವದ, ಪ್ರಾಮಾಣಿಕ ಪತಿ. ಅವರ ಜೀವನದ ಏಕೈಕ ಧ್ಯೇಯವೆಂದರೆ `ಜೀವಿಸುವ ಮತ್ತು ಜೀವಿಸಲು ಬಿಡು.’ ಪಾರ್ಟಿಯ ಹವ್ಯಾಸದ ಉಮೇಶ್‌ ಸುತ್ತಾಡುವ ಮತ್ತು ಸುತ್ತಾಡಿಸುವ ಹವ್ಯಾಸವುಳ್ಳವರು. ಅವರು ಎಲ್ಲಿಯೇ ಹೋದರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಮಗನ ಓದಿಗೆ ತೊಂದರೆಯಾಗಬಾರದೆಂದು ಅವರು ಅವನನ್ನು ಹಾಸ್ಟೆಲ್‌ಗೆ ಸೇರಿಸಿದರು. ಆದರೆ ನನ್ನ ಜೊತೆಗಿರುವುದನ್ನು ಬಿಡಲಿಲ್ಲ.”

“ಮಾತು ಅಷ್ಟೇ ನಿಜ ಕೂಡ ಆಗಿತ್ತು. ನಾನು ಯಾವಾಗ ಫೋನ್‌ ಮಾಡಿದರೂ ಕೂಡ ಅವಳು ಹೇಳುತ್ತಿದ್ದುದು ಒಂದೇ, `ಮದುವೆಯಾದ 15 ವರ್ಷಗಳ ಬಳಿಕ ಇನ್ನೂ ಉಮೇಶನ ಹನಿಮೂನ್‌ ಮುಗಿದಿಲ್ಲ. ಅದೆಷ್ಟೊ ನಗಿಸುತ್ತಿದ್ದ. ತಮ್ಮಿಬ್ಬರ ಮಧ್ಯೆ ಯಾವುದಾದರೂ ಜೋಡಿ ಬಂದು ಹೋದರೆ ಸಾಕು, ಅವನು ನನ್ನಲ್ಲಿ ಕಳೆದುಹೋಗುತ್ತಿದ್ದ.”

ಹೀಗೆಯೇ ಒಂದು ದಿನ ಉಮೇಶ್‌, “ಬಾ ನಾವೊಂದು ಫೇಸ್‌ ಬುಕ್‌ ಪೇಜ್‌ ಓಪನ್‌ ಮಾಡೋಣ. ನಮ್ಮ ಹಳೆಯ ಸ್ನೇಹಿತರನ್ನು ಹುಡುಕೋಣ. ನಮ್ಮ ಹಳೆಯ ಸ್ನೇಹಿತರನ್ನು ಮತ್ತೆ ಪಡೆದುಕೊಳ್ಳಲು ಇದೊಂದು ಒಳ್ಳೆಯ ಉಪಾಯ,” ಎಂದು ಹೇಳಿದ.

ಆ ಬಳಿಕ ಇಬ್ಬರೂ ತಮ್ಮ ತಮ್ಮ ಸ್ಮಾರ್ಟ್‌ ಫೋನುಗಳಲ್ಲಿ ಫೇಸ್‌ ಬುಕ್‌ ಪೇಜ್‌ ತೆರೆದರು.

ಅದೊಂದು ದಿನ ಕೀರ್ತನಾ ಏಕಾಂಗಿಯಾಗಿದ್ದಳು. ಫೇಸ್‌ ಬುಕ್‌ ನಲ್ಲಿ ತನ್ನ ಸ್ನೇಹಿತರಿಗಾಗಿ ಹುಡುಕಾಡುತ್ತಿದ್ದಾಗ ಆಕಸ್ಮಿಕವಾಗಿ ಅವಳ ಮನಸ್ಸಿನಲ್ಲಿ ಒಂದು ಯೋಚನೆ ಬಂತು. ಆದರ್ಶನಿಗೆ ಕೂಡ ಫೇಸ್‌ ಬುಕ್‌ ಅಕೌಂಟ್‌ ಇರಬಹುದು. ಅವಳು ಅವನನ್ನು ಹುಡುಕಲು ಆರಂಭಿಸಿದಳು. ಅಲ್ಲಿ ನೂರಾರು ಜನ ಆದರ್ಶ್‌ ಗಳಿದ್ದರು. ಅವರಲ್ಲಿ ತನ್ನ ಆದರ್ಶ್‌ ಯಾರೆಂದು ಹೇಗೆ ಕಂಡುಹಿಡಿಯುವುದು? ಆಗ ಅವಳ ಗಮನ ಒಂದು ಚಿತ್ರದ ಮೇಲೆ ಹೋಯಿತು. ಅದನ್ನು ನೋಡಿ ಅವಳು ಚಕಿತಳಾದಳು. ಬಹುಶಃ ಅವನೇ ಅವಳ ಆದರ್ಶ್‌ ಇರಬಹುದೇ? ಈಗ ಅವಳ ಬಳಿ ಅವನ ಯಾವುದೇ ಪೋಟೋ ಇರಲಿಲ್ಲ. ಕೇವಲ ನೆನಪೊಂದೇ ಇತ್ತು. ಅವಳು ಅವನ ಪ್ರೊಫೈಲ್ ‌ತೆರೆದು ನೋಡಿದಳು. ಅವನ ಹುಟ್ಟಿದ ದಿನಾಂಕ, ನಗರ ಅದೇ ಆಗಿತ್ತು. ಅವಳು ತಕ್ಷಣ ಮೆಸೆಂಜರ್‌ ನಲ್ಲಿ ಸಂದೇಶ ಕಳಿಸಿದಳು. ಕೊನೆಯಲ್ಲಿ ಅವಳು `ನಾನು ಇನ್ನೂ ನಿಮ್ಮ ನೆನಪಿನಲ್ಲಿ ಇದ್ದೇನೆಯೇ?’ ಎಂದು ಕೇಳಿದಳು.

ನಂತರ ಅವಳಿಗೆ ಸಂಕೋಚ ಎನಿಸತೊಡಗಿತು. ಏಕೆಂದರೆ ಆ ವ್ಯಕ್ತಿ ಬೇರೆ ಆಗಿದ್ದರೆ ನನ್ನ ಬಗ್ಗೆ ಅದೆಷ್ಟು ತಪ್ಪು ಕಲ್ಪನೆ ಮಾಡಿಕೊಳ್ಳಬಹುದು. ಕೀರ್ತನಾ ಪುನಃ ಅವನ ಪ್ರೊಫೈಲ್ ‌ಚೆಕ್‌ ಮಾಡಿದಳು ಅವನ ಫೋಟೋ ಗಮನಿಸತೊಡಗಿದಳು. ಅವನ ಫೋಟೋ ನೋಡಿ ಅವಳ ಕಣ್ಣು ತೇವವಾದವು. ಅವನು ಅವಳದೇ ಆದರ್ಶ್‌ ಆಗಿದ್ದ. ಫೋಟೋದಲ್ಲಿ ಕೈ ಮೇಲೆ ಕಪ್ಪು ಗುರುತು ಅಂದರೆ ಬರ್ತ್‌ ಮಾರ್ಕ್‌ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.

ಮರುದಿನವೇ ಆದರ್ಶನಿಂದ ಸಂದೇಶ ಬಂತು “ಹೌದು.”

ಈಗ ಈ `ಹೌದು’ ಅರ್ಥವನ್ನು ಎರಡು ರೀತಿಯಲ್ಲಿ ಮಾಡಬಹುದಿತ್ತು. ಒಂದು `ಹೌದು’ ಇದರ ಅರ್ಥ ನಾನೇ ಆದರ್ಶ್‌ ಎಂದು. ಮತ್ತೊಂದರ ಅರ್ಥ ನೀನು ನನ್ನ ನೆನಪಿನಲ್ಲಿರುವೆ. ಆದರೆ ಕೀರ್ತನಾಳಿಗೆ ಎರಡರ ಅರ್ಥದಲ್ಲಿ `ಹೌದು’ ಎನಿಸಿತು.

ಕೀರ್ತನಾ ಆ ಸಂದೇಶಕ್ಕೆ ಪ್ರತ್ಯುತ್ತರ ಎಂಬಂತೆ ತನ್ನ ಫೋನ್‌ ನಂಬರ್‌ ಕೊಟ್ಟಳು. ಸ್ವಲ್ಪ ಹೊತ್ತಿನಲ್ಲಿಯೇ ಆದರ್ಶ್‌ ಆನ್‌ ಲೈನ್ ನಲ್ಲಿ ಇರುವುದನ್ನು ಕಂಡು ತಾವು 15 ವರ್ಷಗಳ ಮುಂದೆ ಹೋಗಿಬಿಟ್ಟಿದ್ದೇವೆ ಎಂಬುದನ್ನು ಮರೆತರು. ಕೀರ್ತನಾ ಒಂದು ಮಗುವಿನ ತಾಯಿಯಾಗಿದ್ದರೆ, ಆದರ್ಶ್‌ ಇಬ್ಬರು ಮಕ್ಕಳ ತಂದೆಯಾಗಿದ್ದ. ಆ ಬಳಿಕ ಇಬ್ಬರ ನಡುವೆ ಮಾತುಕತೆ ಮುಂದುವರಿಯಿತು. ಆಗ ಕೀರ್ತನಾ, “ಆದರ್ಶ್‌, ನೀವು ನಿಮ್ಮ ಮನೆಯಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಾ?” ಎಂದು ಕೇಳಿದಳು.

ಆದರ್ಶ್‌ ನ ತಾಯಿಗೆ ಮಗ ಹಾಗೂ ಕೀರ್ತನಾ ನಡುವೆ ಸಾಕಷ್ಟು ಮಾತುಕತೆ ನಡೆಯುತ್ತಿದೆ ಎಂಬುದು ಗೊತ್ತಿತ್ತು. ಆದರ್ಶ್‌ ತನ್ನ ತಾಯಿಗೆ ಕೀರ್ತನಾಳ ನಿಶ್ಚಿತಾರ್ಥದ ಬಗ್ಗೆ ತಿಳಿಸಿದಾಗ, ಅವರು ನಿರಾಳತೆಯ ನಿಟ್ಟುಸಿರುಬಿಟ್ಟಿದ್ದರು. ಈ ವಿಷಯವನ್ನು ಆದರ್ಶನೇ ಕೀರ್ತನಾಳಿಗೆ ತಿಳಿಸಿದ್ದ. ಅದು ಆದರ್ಶ್‌ ಮೇಲೆ ಏನು ಪರಿಣಾಮ ಬೀರಿತು ಅದನ್ನು ತಿಳಿದುಕೊಳ್ಳದೆಯೇ ಅವಳು ಸಾಕಷ್ಟು ನಕ್ಕಿದ್ದಳು. ಆದರ್ಶ್‌ ಕೇವಲ ಮುಖ ನೋಡುತ್ತಾ ಉಳಿದುಬಿಟ್ಟಿದ್ದ.

“ಹೌದು, ಅಂದಹಾಗೆ ನೀನು ಈ ವಿಷಯದ ಬಗ್ಗೆ ಮನೆಯಲ್ಲಿ ಏಕೆ ಕೇಳಲಿಲ್ಲ?” ಎಂದು ಅವಳು ಪ್ರಶ್ನಿಸಿದರೆ, ಆದರ್ಶ್‌ ಪುನಃ ನಕ್ಕ. ತನ್ನ ನಗುವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತಾ ಹೇಳಿದ, “ನಾನು ಹೇಳಲೇ ಇಲ್ಲ. ಹೇಳುವುದೂ ಇಲ್ಲ. ಅಮ್ಮ ಅಂತೂ ಈಗ ಇಲ್ಲ. ನನ್ನ ಹೆಂಡತಿ ನನ್ನ ಮೇಲೆ ಸಂದೇಹ ಪಡುತ್ತಾಳೆ. ಹೀಗಾಗಿ ಅವಳಿಗೆ ಏನನ್ನಾದರೂ ಹೇಳುವ ಧೈರ್ಯವನ್ನು ನಾನು ಮಾಡುವುದಿಲ್ಲ.”

ಇಬ್ಬರೂ ಚಾಟಿಂಗ್‌ ಮತ್ತು ಮಾತುಕತೆಯನ್ನು ಮುಂದುವರಿಸಿದರು. ಆದರ್ಶ್‌ ಯಾವಾಗಲೂ ಹೇಳುತ್ತಿದ್ದ ಮಾತೆಂದರೆ, ಅವಳೇ ತನ್ನನ್ನು ತೊರೆದುಹೋದಳು.

ಆದರ್ಶ್‌ ಮೇಲಿಂದ ಮೇಲೆ ಅದೇ ಮಾತನ್ನು ಹೇಳತೊಡಗಿದಾಗ, ಕೀರ್ತನಾ, “ಅವಳು ಹೇಗೆ ಹೋಗದೇ ಇರಲಿ. ನೀವು ನನ್ನನ್ನು ತಡೆದ್ರಾ? ಯಾವ ಭರವಸೆಯ ಮೇಲೆ ನಿಲ್ಲಬೇಕಿತ್ತು?” ಎಂದು ಕೇಳದಳು.

kya-yah-prem-tha-story2-b

“ಒಂದು ವಿಷಯ ಕೇಳ್ಲಾ? ಆದರೆ ಈಗ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ ಮತ್ತು ಅದಕ್ಕೆ ನೀನು ಏನು ಉತ್ತರ ಕೊಡಬಹುದು ಎಂಬುದು ಕೂಡ ನನಗೆ ಗೊತ್ತು. ಆದರೂ ನೀನು ನನಗೆ ಉತ್ತರಿಸಬೇಕು. ಅದೇನೆಂದರೆ, ನಾನು ನಿನ್ನತ್ತ ಕೈ ಚಾಚಿದ್ರೆ ನೀನು ನಿರಾಕರಿಸುತ್ತಿರಲಿಲ್ಲ ಅಲ್ವಾ? ಆದರೆ ಈಗಿನ ವಿಷಯವೇ ಬೇರೆ ಆಗಿದೆ,” ಎಂದು ಹೇಳಿದ.

ನಿಜವಾಗಿಯೂ ಈ ಪ್ರಶ್ನೆಗೆ ಕೀರ್ತನಾಳ ಬಳಿ ಯಾವುದೇ ಉತ್ತರ ಇರಲಿಲ್ಲ ಮತ್ತು ಯಾವುದೇ…..ಒಂದು ದಿನ ಆದರ್ಶ್‌ ನಗುತ್ತ ಪ್ರಶ್ನಿಸಿದ್ದ, “ಕೀರ್ತನಾ, ಸಮಯ ಹಿಂದೆ ತೆಗೆದುಕೊಳ್ಳುವ ಯಾವುದಾದರೂ ಯಂತ್ರ ಇದ್ದಿದ್ದರೆ, ನವಾ 15 ವರ್ಷ ಹಿಂದೆ ಹೋಗಬಹುದಿತ್ತು.”

“ನಾನಂತೂ ಇನ್ನೂ ಅಲ್ಲಿಯೇ ಇದ್ದೇನೆ. ಆದರೆ ನೀವೆಲ್ಲಿದ್ದೀರಾ? ನಾನು ನಿಮ್ಮ ಹಿಂದೆ ನಿಂತಿದ್ದೇನೆ.”

ಆದರ್ಶ್‌ ಜೋರಾಗಿ ನಕ್ಕು, “ಆದರೆ ನೀನು ಬಹಳ ಸುಳ್ಳುಗಾತಿ. ನೀನು ನನಗೆ ಕಾಣಿಸುತ್ತಲೇ ಇಲ್ಲ,” ಎಂದೆನ್ನುತ್ತಾ ಒಂದು ಹಾಡು ಹಾಡಿದ.

ಕೀರ್ತನಾ ಕೂಡ ಜೋರಾಗಿ ನಕ್ಕಳು. “ನಿಮ್ಮ ಹಾಡಿನ ಅಭ್ಯಾಸ ಇನ್ನೂ ನಿಂತಿಲ್ಲ. ನಿಮ್ಮ ಈ ಅಭ್ಯಾಸದ ಅರ್ಥ ನನಗೆ ಚೆನ್ನಾಗಿ ಆಗುತ್ತದೆ. ಆದರೆ ಈಗ ಅದರಿಂದ ಲಾಭವೇನು?”

ಹೃದಯದಿಂದ ಪ್ರಾಮಾಣಿಕಳಾಗಿದ್ದ ಕೀರ್ತನಾಳಿಗೆ ತಾನು ಮಾಡುತ್ತಿರುವುದು ತಪ್ಪು ಎನಿಸಿತು. ಆದರೂ ಅವಳು ಈ ವಿಷಯವನ್ನು ಪತಿ ಉಮೇಶ್‌ ಗೆ ಹೇಳಲು ನಿರ್ಧರಿಸಿದಳು. ರಾತ್ರಿ ಊಟದ ಬಳಿಕ ಅವಳು ಎಲ್ಲ ವಿಷಯವನ್ನೂ ಉಮೇಶನಿಗೆ ತಿಳಿಸಿದಳು.

ಕೊನೆಯಲ್ಲಿ, “ಇದರಲ್ಲಿ ಎಲ್ಲ ತಪ್ಪು ನನ್ನದೇ. ನಾನೇ ಆದರ್ಶ್‌ ನನ್ನು ಹುಡುಕಿದ್ದು. ಈಗ  ನನಗೆ ಸುಳ್ಳು ಹೇಳಲು ಆಗುವುದಿಲ್ಲ. ಈಗ ನಿಮಗೆ ಏನು ಯೋಚಿಸಬೇಕಾಗಿದೆಯೋ ಯೋಚಿಸಿ,” ಎಂದು ಹೇಳಿದಳು.

ಮೊದ ಮೊದಲು ಉಮೇಶ್‌ ಸ್ವಲ್ಪ ಕಸಿವಿಸಿಗೊಂಡ. ಬಳಿಕ, “ಕೀರ್ತನಾ, ನೀನು ಸುಳ್ಳು ಹೇಳ್ತಿರುವೆ. ತಮಾಷೆ ಮಾಡ್ತಿರುವೆ. ನಿಜ ಹೇಳು ನನ್ನ ಹೃದಯದ ಗತಿ ನಿಲ್ಲುತ್ತದೆ,” ಎಂದ.

“ಇಲ್ಲ ಉಮೇಶ್‌, ಇದು ಸತ್ಯ,” ಕೀರ್ತನಾ ಹೇಳಿದಳು.

ಎಲ್ಲ ವಿಷಯಗಳನ್ನು ಉಮೇಶನಿಗೆ ಹೇಳಿದ್ದಳು. ಆದರೆ ಹಾಡು ಕೇಳಿಸಿಕೊಳ್ಳುವ ಹಾಗೂ ಸಿನಿಮಾ ನೋಡಿದ ವಿಷಯವನ್ನು ಮಾತ್ರ ಅವನ ಮುಂದೆ ಹೇಳಿರಲಿಲ್ಲ. ಬಹುಶಃ ಅದನ್ನು ಹೇಳಲು ಅವಳಿಗೆ ಧೈರ್ಯ ಆಗಿರಲಿಲ್ಲವೇನೊ. ಉಮೇಶ್‌ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

“ಇರಲಿ ಬಿಡು. ಯಾವುದೇ ಸಮಸ್ಯೆ ಇಲ್ಲ, ಈ ರೀತಿ ನಡೀತಾನೇ ಇರುತ್ತೆ. ಜೀವನದಲ್ಲಿ ಇದೆಲ್ಲ ಸಾಮಾನ್ಯ.”

ಮರುದಿನ ಕೀರ್ತನಾ ಎಲ್ಲ ವಿಷಯವನ್ನು ಆದರ್ಶನಿಗೆ ಹೇಳಿದಾಗ, ಅವನು ಚಕಿತಗೊಂಡು ಹೇಳಿದ, “ಕೀರ್ತನಾ, ನೀನು ಬಹಳ ಅದೃಷ್ಟವಂತೆ. ಏಕೆಂದರೆ ನಿನಗೆ ಅಂತಹ ಸಂಗಾತಿ ಸಿಕ್ಕಿದ್ದಾನೆ. ಆದರೆ ಇಲ್ಲಿ ಸುರಭಿ ನನ್ನನ್ನು ಕೈದಿಯಂತೆ ಮಾಡಿದ್ದಾಳೆ.”

“ಇದರಲ್ಲಿ ತಪ್ಪು ನಿನ್ನದೇ. ಏಕೆಂದರೆ ನೀನು ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.”

“ಇಲ್ಲ. ಅಂತಹ ವಿಷಯವೇನೂ ಇಲ್ಲ. ನಾನು ಬಹಳ ಪ್ರಯತ್ನ ಮಾಡಿದೆ. ಸುರಭಿ ಕೂಡ ನನ್ನ ಜೊತೆಗೆ ವಕೀಲಳಾಗಿದ್ದಾಳೆ. ಆದರೆ ಅವಳು ಹೀಗೇಕೆ ಮಾಡುತ್ತಾಳೆ ಎನ್ನುವುದು ನನಗೆ ಗೊತ್ತಿಲ್ಲ.”

ಅದೊಂದು ದಿನ ಆದರ್ಶ್‌, ಕೀರ್ತನಾಳ ವಿಷಯವನ್ನು ಸುರಭಿಗೆ ಹೇಳಿದ. ಅವಳು ಕೀರ್ತನಾಳ ಜೊತೆ ಬೆಣ್ಣೆಯಂತೆ ಮಾತನಾಡಿದಳು. ಆದರೆ ಆ ಬಳಿಕ ಆದರ್ಶ್‌ ನ ಜೀವನ ನರಕವೇ ಆಗಿಬಿಟ್ಟಿತು.

ಅವಳು ಆದರ್ಶನಿಗೆ ಸ್ಪಷ್ಪವಾಗಿ ಹೇಳಿದಳು, “ನೀವು ಕೀರ್ತನಾಳ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು. ಇಲ್ಲದಿದ್ದರೆ ನಾನು ಸಾವಿಗೆ ಶರಣಾಗಬೇಕಾಗುತ್ತದೆ.”

ಮರುದಿನ ಆದರ್ಶ್‌ ನ ಸಂದೇಶವಿತ್ತು, `ಕೀರ್ತನಾ, ನಾನು ನಿನ್ನೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಸುರಭಿ ಆ ಬಗ್ಗೆ ಕಟ್ಟಪ್ಪಣೆ ಹೊರಡಿಸಿದ್ದಾಳೆ.’

ಆ ಸಮಯದಲ್ಲಿ ಕೀರ್ತನಾ ಮತ್ತು ಉಮೇಶ್‌ ತಿಂಡಿ ತಿನ್ನುತ್ತಿದ್ದರು. ಸಂದೇಶ ಗಮನಿಸಿ ಕೀರ್ತನಾಳಿಗೆ ಕಣ್ಣೀರು ಬಂದುಬಿಟ್ಟಿತು. ಪತಿ ಉಮೇಶ್‌ಈ ಬಗ್ಗೆ ಕೇಳಿದಾಗ, ಅವಳು ಮಗನ ನೆನಪಾಯಿತೆಂದು ನೆಪ ಹೇಳಿದಳು. ಅನೇಕ ದಿನಗಳ ಕಾಲ ಅವಳು ಅದೇ ದುಃಖದಲ್ಲಿದ್ದಳು. ಫೋನ್‌ ಕೂಡ ಮಾಡಿದಳು. ಆದರೆ ಆದರ್ಶ್‌ ಮಾತಾಡಲಿಲ್ಲ. ಕೊನೆಗೊಮ್ಮೆ ಬೇಸತ್ತು ಅವಳು ಸಂದೇಶ ಕಳಿಸಿದಳು, `ನೀನು ನನ್ನ ಜೊತೆಗೆ ಒಂದು ಸಲವಾದರೂ ಮಾತನಾಡಲೇಬೇಕು. ಅಂಥದ್ದೇನು ಘಟಿಸಿತು ಎಂದು ಹೇಳಬೇಕು.’ಆಗ ಆದರ್ಶ್‌ ನಿಂದ ಫೋನ್‌ ಬಂತು, “ಇಲ್ಲ……ವೆ ಏನೂ ಸರಿಯಾಗಿಲ್ಲ. 3 ದಿನದಿಂದ ನಾನು ಸರಿಯಾಗಿ ನಿದ್ರಿಸಿಲ್ಲ. ಸುರಭಿಗೆ ನಮ್ಮ ನಿಸ್ವಾರ್ಥ ಸ್ನೇಹದ ಬಗ್ಗೆ ತೀವ್ರ ಆಕ್ಷೇಪಣೆ. ಈಗ ನಾನು ನಿನಗೆ ವಿನಂತಿಸುವುದಿಷ್ಟೇ. ನನ್ನನ್ನು ಕ್ಷಮಿಸು. ನಿನಗೆಷ್ಟು ದುಃಖ ಆಗ್ತಿರಬಹುದು ಎನ್ನುವುದು ನನಗೆ ಗೊತ್ತು. ನಿನಗೆ ಇದೆಲ್ಲ ಹೇಳೋಕೆ ನನಗೂ ಕಷ್ಟ ಆಗುತ್ತಿದೆ. ವಿಧಿಗೂ ಅದೇ ಇಷ್ಟವಾಗುತ್ತಿದೆ ಅನಿಸುತ್ತೆ. ನಾವು ಅದನ್ನು ಒಪ್ಪಲೇಬೇಕು, ಅನುಸರಿಸಲೇಬೇಕು,” ಎಂದು ಹೇಳಿದ.

ಕೀರ್ತನಾ ಬಹಳ ಕಷ್ಟಪಟ್ಟು, “ಇರಲಿ, ನೋ ಪ್ರಾಬ್ಲಮ್. ಈಗ ನಾನು ನಿನ್ನನ್ನು ಭೇಟಿಯಾಗಲು ಮತ್ತೆ 15 ವರ್ಷ ನಿರೀಕ್ಷೆ ಮಾಡ್ತೀನಿ.”

“ಸರಿ,” ಎಂದು ಹೇಳಿ ಆದರ್ಶ್‌ ಫೋನ್‌ ಕಟ್‌ ಮಾಡಿದ.

ಕೀರ್ತನಾ ಮನಸ್ವಿನಿಯ ಕೈ ಹಿಡಿದು, “ಮನು, ನಾನು ಅವನ ನಂಬರ್‌ ಡಿಲಿಟ್‌ ಏನೋ ಮಾಡಿದೆ. ಆದರೆ ಯಾವ ನಂಬರನ್ನು ನಾನು 15 ವರ್ಷಗಳಿಂದ ಮರೆಯಲು ಆಗಲಿಲ್ಲವೋ ಅವನನ್ನು ಈ ರೀತಿ ಮರೆಯಲು ಹೇಗೆ ಸಾಧ್ಯ? ಕಾರಣ ನನಗೆ ಗೊತ್ತಿಲ್ಲ. ನನಗೆ ಅವನೊಂದಿಗೆ ಪ್ರೀತಿ ಇರಲಿಲ್ಲ. ಆದರೂ ನಾನು ಅವನನ್ನು ಮರೆಯಲಿಲ್ಲ. ಅದಕ್ಕಾಗಿ ನನ್ನ ಹೃದಯ ವಿಲವಿಲ ಎನ್ನುತ್ತಿದೆ. ನನ್ನ ಈ ಹೃದಯವನ್ನು ಸಮಾಧಾನಪಡಿಸಲು ನಾನೇನು ಮಾಡಬೇಕು ಎಂದು ನನಗೆ ಗೊತ್ತಿಲ್ಲ.

ಅವನು ಹೀಗೇಕೆ ಮಾಡಿದ ಎಂದು ನನಗೆ ಗೊತ್ತಿಲ್ಲ. ಅವನಿಗೆ ಮಾತ್ರ ಇದು ಗೊತ್ತಿತ್ತು. ಆದರೂ ಅವನು ಹೀಗೇಕೆ ಮಾಡಿದ? ಅವನಿಗೆ ಎಲ್ಲಿಯವರೆಗೆ ಹಿತಕರ ಎನಿಸಿತೋ ಅಲ್ಲಿಯವರೆಗೆ ಅವನು ನನ್ನೊಂದಿಗೆ ಮಾತನಾಡುತ್ತಿದ್ದ. ಆದರೆ ಯಾವಾಗ ಆಪತ್ತು ಉಂಟಾಯಿತೊ ಆಗ ನೀನ್ಯಾರು, ನಾನ್ಯಾರು ಎಂಬಂತಹ ಮಾತುಗಳನ್ನು ಆಡಿ ತೀರಕ್ಕೆ ದೂಡುವ ಮಾತು ಆಡುತ್ತಿದ್ದಾನೆ,” ಎಂದಳು.

ಕೀರ್ತನಾ ಹೀಗೆಲ್ಲ ಮಾತಾಡಿ ಅಳುತ್ತಲೇ ಇದ್ದಳು. ಮನಸ್ವಿನಿ ಕೂಡ ಅವಳಿಗೆ ಅಳಲು ಅವಕಾಶ ಕೊಟ್ಟಳು. ಅವಳ ಮನಸ್ಸಿನ ಹೊರೆ ಎಷ್ಟಿದೆಯೋ ಅದು ಕಣ್ಣೀರಿನ ಮುಖಾಂತರ ಹರಿದು ಹೋಗಲಿ ಎಂದು ಸುಮ್ಮನಾದಳು.

ಈಗ ಮನಸ್ವಿನಿ ಅವಳಿಗೆ ಏನು ತಾನೇ ಹೇಳುತ್ತಾಳೆ? ಅದು ಪ್ರೀತಿಯೇ ಆಗಿತ್ತು. ಹಾಗಾಗಿ ಅದನ್ನು ಅವಳು ಮರೆಯಲು ಆಗುತ್ತಿಲ್ಲ ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಒಂದು ಸಲ ಸ್ವತಃ ಅವಳೇ ಆದರ್ಶನಿಗೆ, “ಹೆಣ್ಣಿನ ಹೃದಯದಲ್ಲಿ 3 ವಿಭಾಗಗಳಿರುತ್ತವೆ. ಮೊದಲನೆಯದು ಅವಳ ತವರುಮನೆ, ಎರಡನೆಯದು ಅವಳದೇ ಮನೆ, ಮೂರನೆಯದ್ದು ಅವಳದ್ದೇ ಆದ ನೆನಪಿನ ಖಜಾನೆ. ಅಲ್ಲಿ ಸಂಗ್ರಹವಾಗಿರುವುದನ್ನು ಅವಳು ಬಿಡುವಿನ ವೇಳೆಯಲ್ಲಿ ಪರಿಶೀಲಿಸಿ ಅದರಲ್ಲಿ ಕೆಲವನ್ನು ತೆಗೆಯುವುದು, ಹೊಸದನ್ನು ಸೇರಿಸುವುದು ಮಾಡುತ್ತಿರುತ್ತಾಳೆ,” ಎಂದು ಹೇಳಿದ್ದಳು.

ಮನಸ್ವಿನಿ ಯೋಚಿಸತೊಡಗಿದಳು, `ಯಾವ ಹುಡುಗಿ ಪ್ರೀತಿಯನ್ನು ಕೆಮಿಕಲ್ ರಿಯಾಕ್ಷನ್‌ ಎಂದು ಭಾವಿಸಿದ್ದಳೊ ಮತ್ತು ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಸಾಧನ ಎಂದಷ್ಟೇ ಹೇಳುತ್ತಿದ್ದಳೊ ಈಗ ಆದರ್ಶನ ಜೊತೆಗೆ ಪ್ರೀತಿಯೇ ಇರಲಿಲ್ಲ ಎಂದು ಹೇಳುತ್ತಿದ್ದಾಳೆ.’

ಮನಸ್ವಿನಿ ಅವಳಿಗೆ ಇದನ್ನೇ ತಿಳಿಸಿ ಹೇಳಿದಳು ಹಾಗೂ ಸ್ವತಃ ಅರಿತಿದ್ದಳು ಕೂಡ. ಅವಳಿಗೆ ಏನು ಲಭಿಸಿದೆಯೊ, ಅದು ಒಳ್ಳೆಯದೇ ಲಭಿಸಿದೆ. ಯಾರೂ ವಿಧಿಯ ವಿಧಾನ ಬದಲಿಸಲು ಆಗುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ