ನಾನು 3 ಸಲ ಕೀರ್ತನಾಳ ಮನೆ ಬೆಲ್ ಬಾರಿಸಿದರೂ ಬಾಗಿಲು ತೆರೆಯದಿದ್ದಾಗ ಮನಸ್ಸಿಗೆ ಗೊಂದಲವಾಯಿತು. ಅದೇನು ವಿಷಯ ಇರಬಹುದು, ಅವಳೇಕೆ ಬಾಗಿಲು ತೆರೆಯುತ್ತಿಲ್ಲ? ಅವಳೇ ತಾನೇ ಫೋನ್ ಮಾಡಿ ಕರೆದದ್ದು, `ಮನಸ್ವಿನಿ ಬಾರೆ, ಇಂದು ನಾನು ಫ್ರೀ ಆಗಿರುವೆ. ಉಮೇಶ್ ಟೂರ್ ಗೆಂದು ಮುಂಬೈಗೆ ಹೋಗಿದ್ದಾನೆ. ಇಬ್ಬರೂ ಕುಳಿತು ಸ್ವಲ್ಪ ಹೊತ್ತು ಹರಟೆ ಹೊಡೆಯೋಣ,' ಅಂತಾ ಕೀರ್ತನಾ ಆಹ್ವಾನ ಕೊಟ್ಟು ನನ್ನನ್ನು ಕರೆಸಿಕೊಂಡಿದ್ದಳು.
ನನಗೆ ಇಲ್ಲಿ ಮೈಸೂರಿನಲ್ಲಿ ಗಂಡನ ಆಫೀಸಿನಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ಹೆಂಡತಿಯರನ್ನು ಹೊರತುಪಡಿಸಿ ಬೇರಾರ ಬಗ್ಗೆಯೂ ತಿಳಿದಿರಲಿಲ್ಲ. ಕೀರ್ತನಾಳಿಗೆ ಮಾತ್ರ ಅದೆಷ್ಟೋ ಜನರು ಗೊತ್ತು. ತನ್ನ ಮನದ ವಿಚಾರ ಹಂಚಿಕೊಳ್ಳಲು ಅವಳಿಗೆ ಅದೆಷ್ಟೋ ಜನರು ಸ್ನೇಹಿತರಿದ್ದರು.
ಮನಸ್ವಿನಿ ಹಾಗೂ ಕೀರ್ತನಾ ಇಬ್ಬರೂ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಒಂದೇ ಕೋಣೆಯಲ್ಲಿ 3 ವರ್ಷ ಕಳೆದಿದ್ದರು. ಹೀಗಾಗಿ ಅವರ ನಡುವೆ ಸ್ನೇಹ ಬೆಳೆಯದೇ ಇರಲು ಹೇಗೇ ಸಾಧ್ಯ? ಹೀಗಾಗಿ ಪರಸ್ಪರರ ಮೇಲೆ ನಂಬಿಕೆ ಇತ್ತು. ಮದುವೆಯ ನಂತರ ಇಬ್ಬರೂ ಫೋನ್ ಹಾಗೂ ಇಮೇಲ್ ಮೂಲಕ ಸತತ ಸಂಪರ್ಕದಲ್ಲಿದ್ದರು. ಬಳಿಕ ಮನಸ್ವಿನಿಯ ಗಂಡನಿಗೆ, ಕೀರ್ತನಾ ತನ್ನ ಗಂಡನೊಂದಿಗೆ ವಾಸಿಸುತ್ತಿದ್ದ ಮೈಸೂರಿಗೆ ವರ್ಗವಾಯಿತು. ಹಾಗಾಗಿ.....
ಮನಸ್ವಿನಿ ಇಷ್ಟು ಯೋಚಿಸುವಷ್ಟರಲ್ಲಿಯೇ ಅವಳ ಯೋಜನೆಗಳಿಗೆ ವಿರಾಮ ಕೊಡುತ್ತಾ ಕೀರ್ತನಾ ಬಾಗಿಲು ತೆರೆದಾಗ, ಅವಳ ಮುಖದಲ್ಲಿ ಮುಗುಳ್ನಗೆ ಚಿಮ್ಮಿತು. ಮನಸ್ವಿನಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಒಳಗೆ ಎಳೆದುಕೊಳ್ಳುತ್ತಾ ಕೀರ್ತನಾ ಹೇಳಿದಳು, ``ನೀನು ಯಾವಾಗ ಬಂದೆ? ನೀನು ಹಲವು ಸಲ ಬೆಲ್ ಮಾಡಿದೀಯಾ ಅನಿಸುತ್ತೆ. ನಾನು ಬೆಡ್ ರೂಮಿನಲ್ಲಿದ್ದೆ. ಹೀಗಾಗಿ ನನಗೆ ಕೇಳಿಸಲಿಲ್ಲ.''
ಕೀರ್ತನಾ ಮುಖದಲ್ಲಿ ಮುಗುಳ್ನಗು ಅರಳಿದ್ದರೂ ಅವಳ ಧ್ವನಿಯಲ್ಲಿ ಅವಳು ಸಾಕಷ್ಟು ಅತ್ತಿದ್ದಾಳೆ ಎನ್ನುವುದನ್ನು ತಿಳಿದುಕೊಳ್ಳಲು ಮನಸ್ವಿನಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಕೀರ್ತನಾಳ ಮುಖದಲ್ಲಿ ಸ್ವಲ್ಪ ಉದಾಸತನದ ಜೊತೆಗೆ ಒಂದು ನಿಶ್ಚಿತ ಭಾವನೆ ಕೂಡ ಎದ್ದು ಕಾಣುತ್ತಿತ್ತು.
ಮನಸ್ವಿನಿ ಮುಗುಳ್ನಗುತ್ತಾ, ``ಕೀರ್ತನಾ, ಒಂದು ಮಾತಂತೂ ಸತ್ಯ. ನೀನು ಅತ್ತ ಬಳಿಕ ನಿನ್ನ ಕಣ್ಣುಗಳು ಸುಂದರವಾಗಿ ಕಾಣುತ್ತವೆ ಅಂತ ಉಮೇಶ್ ಹೇಳ್ತಿದ್ದ,'' ಎಂದಳು.
ಕೀರ್ತನಾಳ ಮುಖದಲ್ಲಿ ಸಾಧಾರಣ ಮುಗುಳ್ನಗೆಯ ಜೊತೆಗೆ ಅವಳ ಕಣ್ಣುಗಳ ಅಂಚಿನಲ್ಲಿ ಸ್ವಲ್ಪ ತೇವ ಎದ್ದು ಕಾಣುತ್ತಿತ್ತು. ಆದರೆ ಅವಳು ಮಾತನ್ನು ತೇಲಿಸುತ್ತಾ, ``ಬಾ ಮನಸ್ವಿನಿ, ಇಬ್ಬರೂ ಆರಾಮವಾಗಿ ಕುಳಿತು ಕಾಫಿ ಕುಡಿಯೋಣ,'' ಎಂದಳು.
ಮನಸ್ವಿನಿ ಅವಳ ಕೈ ಹಿಡಿದು ಕೂರಿಸುತ್ತಾ, ``ಏನು ವಿಷಯ ಕೀರ್ತನಾ?'' ಎಂದು ಕೇಳಿದಳು.
``ಅಂಥದ್ದೇನು ವಿಷಯವಿಲ್ಲ ಮನಸ್ವಿನಿ. ನಾನಿಂದು ಒಂದು ವೈರಸ್ ನ್ನು ನಿವಾರಿಸಿರುವೆ. ಅದು ಜೀವನದ ವಿಂಡೋವನ್ನು ನಾಶ ಮಾಡುತ್ತಿತ್ತು.....'' ಎಂದಳು.
ವಿಷಯವನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ಆರಂಭಿಸಿದ್ದಳು. ಆದರೆ ಆ ವಿಷಯವನ್ನು ಮುಗಿಸುವ ಹೊತ್ತಿಗೆ ಅವಳ ಹೃದಯ ತುಂಬಿಬಂದಿತ್ತು.
``ನೀನು ಆದರ್ಶನ ಬಗ್ಗೆ ಹೇಳುತ್ತಿರುವೆ ತಾನೇ...?'' ಎಂದು ಮನಸ್ವಿನಿ ಕೇಳಿದಳು.