ಅನಿತಾಳಿಗೆ ಅಂದು ಬಹಳ ಬೇಸರದ ದಿನ. ಹೊರಗೆ ಜೋರು ಮಳೆ, ಒಳಗೆ ವಿದ್ಯುತ್‌ ಇಲ್ಲದೆ ಕತ್ತಲೆ. ಬೇರೆ ಮನೆಗಳಲ್ಲಿ ದೀಪಗಳು ಉರಿಯುತ್ತಿವೆ. ತನ್ನ ಮನೆಯಲ್ಲಿ ಏನಾಯ್ತು ಎಂದು ಅವಳಿಗೆ ಆತಂಕ. ಇಂತಹ ಮಳೆಯಲ್ಲಿ ರಿಪೇರಿ ಮಾಡಲು ಯಾರು ತಾನೇ ಬರುತ್ತಾರೆ? ತಂಪು ವಾತಾವರಣದಲ್ಲಿ ಬಟ್ಟೆ ಒಣಗಿಸುವ ಸಮಸ್ಯೆ ಬೇರೆ ಇತ್ತು. ಆಗ ಮಗ ಕೋಣೆಯಲ್ಲಿ ಹಗ್ಗ ಕಟ್ಟಿ ಬಟ್ಟೆ ಹಾಕಬಹುದಲ್ವಾ ಎಂದು ಹೇಳಿದ. ಮಗನ ಬುದ್ಧಿವಂತಿಕೆ ಅವಳಿಗೆ ಹಿಡಿಸಿತಾದರೂ, ಮೊಳೆ ಹೊಡೆಯುವವರಾರು ಎಂಬ ಪ್ರಶ್ನೆ ಅವಳಿಗೆ ಕಾಡಿತು.

ಈ ಮಧ್ಯೆ ಮಹಡಿ ಮನೆಯ ಮನೋರಮಾ ಕೆಳಗೆ ಬಂದು ನಿಮ್ಮ ಮನೆಯಲ್ಲಷ್ಟೇ ಕತ್ತಲೆ ಏಕೆ ಎಂದು ಕೇಳಿ ಫ್ಯೂಸ್‌ ತೆಗೆದು ನೋಡಿದರು. ಅವರ ಸಂದೇಹ ಸರಿಯಾಗಿತ್ತು. ಮನೋರಮಾ ಅದಕ್ಕೆ ತಂತಿ ಹಾಕಿ ಸರಿಪಡಿಸಿದರು. ದೀಪಗಳು ಪುನಃ ಬೆಳಗಿದವು. ಬಳಿಕ ಆಕೆ ತಮ್ಮ ಮಗನಿಗೆ ಫೋನ್‌ ಮಾಡಿ ಟೂಲ್ ‌ಬಾಕ್ಸ್ ತರಿಸಿ ಡ್ರಿಲ್ ‌ಮೆಷಿನ್‌ ನಿಂದ ರಂಧ್ರ ಮಾಡಿ ಎರಡು ಮೊಳೆ ಹೊಡೆಸಿ ಹಗ್ಗ ಕಟ್ಟಲು ಅನುಕೂಲ ಮಾಡಿಕೊಟ್ಟರು. ಕೆಲವೇ ನಿಮಿಷಗಳಲ್ಲಿ ಆಕೆ ಅನಿತಾಳ ಸಮಸ್ಯೆಯನ್ನು ನಿವಾರಿಸಿದರು. ಅನಿತಾ ಮನೋರಮಾರ ಕೌಶಲ ಕಂಡು ದಂಗಾಗಿ ಹೋದಳು. ಆಗ ಮನೋರಮಾ ಅನಿತಾಳಿಗೆ ತಿಳಿವಳಿಕೆ ಹೇಳಿದರು. ನಾವು ಗೃಹಿಣಿ ಅಥವಾ ಉದ್ಯೋಗಸ್ಥೆ ಯಾರೇ ಆಗಿರಬಹುದು, ಕೆಲವು ಸಣ್ಣಸಣ್ಣ ದುರಸ್ತಿ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಜೀವನ ಸುಲಭಗೊಳಿಸಲು ಮತ್ತು ಉಪಯುಕ್ತವಾಗಿಸಲು ಈ ಕೌಶಲಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಕೆಲವು ಸ್ಕಿಲ್ಸ್ ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬರದೇ ಇರಬಹುದು. ಆದರೆ ಸಂದರ್ಭ ಬಂದಾಗ ಅವನ್ನು ಉಪಯೋಗಿಸಿ ನೀವು ಹಲವು ಬಗೆಯ ತೊಂದರೆಗಳಿಂದ ಪಾರಾಗಬಹುದು.

ಮನೋರಮಾರ ಮಾತಿನಿಂದ ಅನಿತಾ ಬಹಳ ಪ್ರಭಾವಿತಳಾದಳು.

ಪ್ರತಿಯೊಬ್ಬ ಮಹಿಳೆಯೂ ಕಲಿಯಬೇಕು

ಚಿಕ್ಕಪುಟ್ಟ ರಿಪೇರಿ : ಇದು ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯ ಎಂದು ನೀವು ಯೋಚಿಸುತ್ತಿದ್ದರೆ ತಪ್ಪು. ವಿದೇಶದಲ್ಲಿ ಇದನ್ನು ಒಂದು ವಿಷಯದಂತೆ ಕಾಲೇಜಿನಲ್ಲಿ ಬೋಧಿಸಲಾಗುತ್ತದೆ. ಇದರನ್ವಯ ಮನೆಗೆ ಸಂಬಂಧಪಟ್ಟ ಹಲವು ಕೌಶಲಗಳನ್ನು ಪ್ರ್ಯಾಕ್ಟಿಕಲ್ ಆಗಿ ತಿಳಿಸಿಕೊಡಲಾಗುತ್ತದೆ. ಇಲ್ಲಿ ನಾವು ಅವರಿವರಿಂದ ಈ ವಿಷಯ ಕರಗತ ಮಾಡಿಕೊಳ್ಳಬಹುದಾಗಿದೆ.

ಅಂದಹಾಗೆ ಇದರಲ್ಲಿ ಹೌಸ್‌ ಪೇಂಟಿಂಗ್‌, ಪ್ಲಂಬಿಂಗ್‌ (ನಲ್ಲಿ ಮುಂತಾದವುಗಳ ದುರಸ್ತಿ), ಕಾರ್ಪೆಂಟರಿ, ಎಲೆಕ್ಟ್ರಿಕ್‌ ವರ್ಕ್‌, ಮನೆ ನಿರ್ವಹಣೆ ಹಾಗೂ ವಿವಿಧ ದುರಸ್ತಿಗೆ ಸಂಬಂಧಪಟ್ಟ ಹಲವು ಸಂಗತಿಗಳಿವೆ. ಮುಖ್ಯ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಆದರೆ ಕೆಲವು ಅತ್ಯಗತ್ಯ ಸಂಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಫ್ಯೂಸ್‌ ಹೋಗಿದ್ದರೆ, ಅದಕ್ಕೆ ಹೊಸದಾಗಿ ತಂತಿ ಸರಿಪಡಿಸುವುದು, ಕುಕ್ಕರ್‌ ಗಳ ಹ್ಯಾಂಡ್‌ ಸಡಿಲವಾಗಿದ್ದರೆ ಸ್ಕ್ರೂ ಡ್ರೈವರ್‌ನಿಂದ ಸರಿಪಡಿಸಬಹುದು. ಇವರಿಂದ ಕೆಲಸ ಕಾರ್ಯಗಳು ಸುಲಭವಾಗುತ್ತವೆ.

ಚಲಿಸುವ ಗಾಡಿ ನಿಲ್ಲದಿರಲಿ : ಈಗ ಪ್ರತಿಯೊಂದು ಮನೆಯಲ್ಲೂ ಸ್ಕೂಟಿ, ಸ್ಕೂಟರ್‌, ಬೈಕ್‌ ಅಥವಾ ಕಾರ್‌ ಕೂಡ ಇರುತ್ತದೆ. ಈಗ ಅವು ಐಷಾರಾಮಿ ಸಾಧನಗಳಲ್ಲ, ಉದ್ಯೋಗಸ್ಥರ ಅತ್ಯಗತ್ಯ ಸಾಧನಗಳು. ಸಣ್ಣಪುಟ್ಟ ತೊಂದರೆ ಉಂಟಾಗಿ, ಅವು ಎಲ್ಲೋ ಒಂದು ಕಡೆ ನಿಂತುಬಿಟ್ಟಾಗ ನಮ್ಮ ಧೈರ್ಯ ಕೈಕೊಡುತ್ತದೆ. ದುರಸ್ತಿಯವರು ಯಾರೂ ಸಿಗದೇ ಇದ್ದಾಗ ತುಂಬಾ ಕಸಿವಿಸಿಯಾಗುತ್ತದೆ.

ಎಷ್ಟೋ ಜನರು ಸ್ಕೂಟಿ, ಬೈಕ್‌, ಕಾರನ್ನೇನೊ ನಡೆಸುತ್ತಾರೆ. ಆದರೆ ಅವುಗಳ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದಿಲ್ಲ. ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಅವುಗಳನ್ನು ಸರ್ವೀಸ್‌ ಸೆಂಟರ್‌ ಗೆ ಒಯ್ದು ಸ್ವಚ್ಛಗೊಳಿಸುವುದು ಆಗುಹೋಗದ ಸಂಗತಿ. ಹೀಗಾಗಿ ವಾಹನದ ನಿರ್ವಹಣೆಗೆ ಸಂಬಂಧಪಟ್ಟ ಸಂಗತಿಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.

ವಾಹನದ ಸ್ವಚ್ಛತೆಯ ವಿಧಾನ, ಆಯಿಲ್ ‌ಬದಲಿಸುವುದು, ಟೈರ್‌ ನ ಪ್ರೆಶರ್‌ ಚೆಕ್‌ ಮಾಡುವುದು, ಚಿಕ್ಕಪುಟ್ಟ ತಾಂತ್ರಿಕ  ತೊಂದರೆ ಸರಿಪಡಿಸಲು ಕಲಿಯಬೇಕು. ನೀವು ಕಾರು ಓಡಿಸುವವರಾಗಿದ್ದರೆ, ನಿಮಗೆ ಸಮಯ ಬಂದಾಗ ಅದರ ಟಯರ್‌ ಬದಲಿಸಲು ಕೂಡ ತಿಳಿದಿರಬೇಕು.

SM273287-(1)

 

ಪ್ರಥಮ ಚಿಕಿತ್ಸೆ : ಮನೆಯಲ್ಲಿ ಯಾರಿಗಾದರೂ ಏನಾದರೂ ಗಾಯ ಉಂಟಾದರೆ, ಆಗ ಧೈರ್ಯಗೆಡದೆ ತಕ್ಷಣಕ್ಕೆ ಏನು ಚಿಕಿತ್ಸೆ ಮಾಡಿದರೆ ಸೂಕ್ತ ಎಂದು ಯೋಚಿಸಿ. ಗಾಯಗೊಂಡ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಹೀಗಾಗಿ ಕೆಲವು ಔಷಧಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವೆಂದರೆ ಆ್ಯಂಟಿ ಸೆಪ್ಟಿಕ್‌ ಮುಲಾಮು, ಬ್ಯಾಂಡೇಜ್‌, ಪೇನ್‌ ಕಿಲ್ಲರ್‌ ಮಾತ್ರೆಗಳು. ಅದರ ಜೊತೆ ಪ್ರಥಮ ಚಿಕಿತ್ಸೆಯ ತರಬೇತಿ ಸಹ ಪಡೆದುಕೊಳ್ಳಬೇಕು. ಜೊತೆ ಜೊತೆಗೆ ಬಾಡಿ ಸ್ಟ್ರೋಕ್‌, ಹೃದಯಾಘಾತ, ಹೀಟ್‌ ಸ್ಟ್ರೋಕ್‌ ನಂತಹ ಸಂದರ್ಭದಲ್ಲಿ ಯಾವ ರೀತಿ ಎಚ್ಚರ ವಹಿಸಬೇಕು, ಆ ವ್ಯಕ್ತಿಗೆ ಯಾವ ರೀತಿಯ ಪ್ರಥಮ ಚಿಕಿತ್ಸೆ ಕೊಟ್ಟು ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದನ್ನೂ ಕೂಡ ತಿಳಿದುಕೊಳ್ಳಬೇಕು.

ತಡೆ ಹಿಂಜರಿಕೆ ಆಗದಿರಲಿ : ಇದನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಇದು ಸತ್ಯ. ಈಗಲೂ ಬಹಳಷ್ಟು ಮಹಿಳೆಯರು ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡಲು ಹಿಂದೇಟು ಹಾಕುತ್ತಾರೆ. ನಾವು ಸರಿಯಾಗಿ ಮಾತನಾಡದಿದ್ದರೆ ನಮ್ಮ ಕೆಲಸ ಕೆಟ್ಟು ಹೋಗುತ್ತದೆಂದು ಅವರು ಭಾವಿಸುತ್ತಾರೆ.

ಶಾಲೆಯ ಅಡ್ಮಿಶನ್‌ ಗೆ ಯಾರಾದರೂ ಸರ್ಕಾರಿ ಕಛೇರಿಗೆ ಬ್ಯಾಂಕಿಗೆ ಡಾಕ್ಟರ್‌ ಬಳಿ ಹೋಗಲು ಯಾರಾದರೂ ಜೊತೆ ಇರಬೇಕೆನ್ನುತ್ತಾರೆ. ಇಲ್ಲವೇ, ಅವರನ್ನೇ ಕಳಿಸಿಕೊಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಕಮ್ಯುನಿಕೇಶನ್ ಸ್ಕಿಲ್ ‌ಹೆಚ್ಚಿಸಿಕೊಳ್ಳಬೇಕು.

ಆಗದಿರಿ ಮುಕ್ತ ಪುಸ್ತಕ (ಓಪನ್ಬುಕ್‌) : ಸೈಬರ್‌ ಕ್ರೈಮ್ ನಲ್ಲಿ ಆಗುತ್ತಿರುವ ಹೆಚ್ಚಳ ಗಮನಿಸಿದರೆ ಸ್ತ್ರೀಯರು ಮುಕ್ತ ಪುಸ್ತಕದಂತೆ ಆಗಬಾರದು ಎಂದು ಹೇಳಬೇಕಾಗುತ್ತದೆ. `ಕೂಲ್ ಮಾಮ್ ಟೇಕ್‌ ಡಾಟ್‌ ಕಾಮ್’ನ ಲಿಜ್‌ ಗಂಬೊನರ್‌ ಹೀಗೆ ಹೇಳುತ್ತಾರೆ, ನೀವು ಆನ್‌ ಲೈನ್‌ ಶಾಪಿಂಗ್‌ ಮಾಡುತ್ತಿದ್ದರೆ, ಆ ವೆಬ್‌ ಅಡ್ರೆಸ್‌ ನ ಆರಂಭ ಗಮನಿಸಿ. ಒಂದು ವೇಳೆ ಎಚ್‌ಟಿಟಿಪಿಯ ಬಳಿಕ 5 ಇರದೇ ಇದ್ದರೆ ನಿಮ್ಮ ಕ್ರೆಡಿಟ್‌ ಕಾರ್ಡ್‌ ನ ಡೇಟಾ ಅಲ್ಲಿ ಕಳ್ಳತನಾಗಬಹುದು. ಅದೇ ರೀತಿ ನಿಮ್ಮ ಫೇಸ್‌ ಬುಕ್‌ ಖಾತೆಯ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು. ನಿಮ್ಮ ವೈಯಕ್ತಿಕ ಫೋಟೋಗಳನ್ನು ಅಪ್‌ ಲೋಡ್‌ ಮಾಡಬೇಡಿ. ಸೆಟ್ಟಿಂಗ್‌ ಮೂಲಕ `ಸ್ನೇಹಿತರಿಗೆ ಮಾತ್ರ’ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇಂಟರ್‌ ನೆಟ್‌ ನಲ್ಲಿ ನೀವು ಅಪ್‌ ಲೋಡ್‌ ಮಾಡುವ ವಿಷಯ ಬೇರೆ ಎಲ್ಲಿಯಾದರೂ ಶೇರ್‌ ಆಗಬಹುದು.

ಏಕಾಂಗಿ ಪ್ರಯಾಣ : ಬಹಳಷ್ಟು ಮಹಿಳೆಯರು ಈಗಲೂ ಒಂದು ಊರಿನಿಂದ ಇನ್ನೊಂದು ಊರಿಗೆ ಏಕಾಂಗಿಯಾಗಿ ಪ್ರಯಾಣ ಮಾಡಲು ಹೆದರುತ್ತಾರೆ. ಇದು ಒಂದು ರೀತಿಯಲ್ಲಿ ಅವರ ದೌರ್ಬಲ್ಯ. ಗಸ್ಟಿ ಟ್ರ್ಯಾವೆಲರ್‌ ಡಾಟ್‌ ಕಾಮ್ ನ ಸಿಇಓ ಬೊಂಡ್‌ ಹೀಗೆ ಹೇಳುತ್ತಾರೆ, “ನೀವು ಒಂದು ಬಾರಿ ಏಕಾಂಗಿಯಾಗಿ ಪ್ರಯಾಣ ಮಾಡುವ ಸಾಹಸ ತೋರಿಸಬೇಕು. ಅದಕ್ಕಾಗಿ ಯಾರ ಸಲಹೆ, ನೆರವನ್ನಾಗಲಿ ಪಡೆಯಬಾರದು.

“ಏಕಾಂಗಿಯಾಗಿ ಪ್ರವಾಸ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ಲ್ಯಾನಿಂಗ್‌ ಮಾಡುವ ಅಭ್ಯಾಸ ಹೆಚ್ಚಾಗುತ್ತದೆ. ಜನರೊಂದಿಗೆ ಹೇಗೆ ಮಾತನಾಡಬೇಕು ಎಂಬ ಹಿಂಜರಿಕೆ ಹೊರಟುಹೋಗುತ್ತದೆ. ಹೊಸ ಹೊಸ ಆ್ಯಪ್ಸ್ ಬಳಸುವ ಅಭ್ಯಾಸ ಬೆಳೆಯುತ್ತದೆ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆರಂಭದಲ್ಲಿ ನೀವು ಕಡಿಮೆ ದೂರದ ಪ್ರಯಾಣ ಆರಂಭಿಸಿ ಕ್ರಮೇಣ ಅಂತರ ಹೆಚ್ಚಿಸುತ್ತ ಹೋಗಿ.”

160927-flat-tire

ನಿಮ್ಮ ಹಣಕಾಸನ್ನು ನಿಯಂತ್ರಣದಲ್ಲಿಡಿ : ಇಂದಿನ ಅರ್ಥ ಪ್ರಧಾನ ವಿಶ್ವದಲ್ಲಿ ಎಲ್ಲಕ್ಕೂ ಮುಖ್ಯವಾದುದೆಂದರೆ ಹಣ. ನಿಮ್ಮ ಹಣಕಾಸು ಆಗುಹೋಗುಗಳ ಬಗ್ಗೆ ನೀವು ಗಮನಹರಿಸಬೇಕು.

ನಿಮ್ಮ ಆದಾಯ ಎಷ್ಟು, ಖರ್ಚು ಎಷ್ಟು, ಉಳಿತಾಯ ಎಷ್ಟಿದೆ ಎಂಬುದು ನಿಮಗೆ ಗೊತ್ತಿರಬೇಕು. ನಿಮ್ಮ ಆರೋಗ್ಯ ವಿಮೆ ಎಷ್ಟಿದೆ? ಅದರಿಂದ ನಿಮಗೆ ಎಷ್ಟರ ಮಟ್ಟಿಗೆ ಲಾಭ ದೊರೆಯಬಹುದು ಎಂಬ ಮಾಹಿತಿ ನಿಮಗೆ ಗೊತ್ತಿರಬೇಕು. ಯಾವ ಮ್ಯೂಚ್ಯುವಲ್ ‌ಫಂಡ್‌ ನಲ್ಲಿ ಹೂಡಿಕೆ ಮಾಡಬಹುದು, ಯಾವ ಭಾಗದಲ್ಲಿ ಆಸ್ತಿ ಖರೀದಿ ಸೂಕ್ತ ಎನ್ನುವುದರ ಅರಿವು ನಿಮಗೆ ಇರಬೇಕು.

ಅಪರ್ಣಾ ಎಸ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ