ಗುಂಡ ಆಫೀಸಿನಿಂದ ಸಂಜೆ ಮನೆಗೆ ಮರಳಿದಾಗ ಇಡೀ ಮನೆ ರಣರಂಗವಾಗಿತ್ತು, ಎಲ್ಲೆಲ್ಲೂ ಗಲೀಜು ಹರಡಿ ಹೋಗಿತ್ತು.
ಮಕ್ಕಳಿಬ್ಬರೂ ಕೊಳಕು ಬಟ್ಟೆಯಲ್ಲೇ, ಕೆದರಿದ ತಲೆ, ಸಿಂಬಳ ಸುರಿಸಿಕೊಂಡು ಆಟ ಆಡುತ್ತಿದ್ದರು. ಮನೆ ತುಂಬಾ ಅವರ ಆಟಿಕೆಗಳು ಹರಡಿಹೋಗಿದ್ದವು. ಒಗೆದ ಬಟ್ಟೆಗಳು ಮಡಿಸದೆ ಸೋಫಾ ಮೇಲೆ, ಟೂಥ್ ಪೇಸ್ಟ್, ಬ್ರಶ್, ಸೋಪು ಇತ್ಯಾದಿ ಡೈನಿಂಗ್ ಟೇಬಲ್ ಮೇಲೆ ಹರಡಿದ್ದವು. ಮಕ್ಕಳು ತಿಂದು ಬಿಸಾಡಿದ ಬಿಸ್ಕೆಟ್ ರಾಪರ್, ಸಿಹಿ ತಿನಿಸುಗಳ ಕವರ್, ಚೆಲ್ಲಾಡಿದ್ದವು ಕಡಲೆಪುರಿ ನೆಲದಲ್ಲಿ ಅನಾಥವಾಗಿ ಬಿದ್ದಿತ್ತು.
ಗುಂಡನಿಗಂತೂ ಇದನ್ನೆಲ್ಲ ಕಂಡು ಗಾಬರಿಯೇ ಆಯ್ತು. ಬಹುಶಃ ಹೆಂಡತಿಗೆ ಜ್ವರ ಬಂದು ತೀರಾ ಮಲಗಿಬಿಟ್ಟಿದ್ದಾಳೇನೋ ಎನಿಸಿತು. ಒಳಗೆ ಹೋಗಿ ನೋಡಿದರೆ ಅವಳು ಆರಾಮಾಗಿ ಮಲಗಿ, ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಿದ್ದಾಳೆ!
ಗುಂಡನನ್ನು ನೋಡುತ್ತಲೇ ಪುಟ್ನಂಜಿ ಆನಂದದಿಂದ ಕೇಳಿದಳು, ``ಡಾರ್ಲಿಂಗ್, ಹೇಗಿತ್ತು ಈ ದಿನ ಆಫೀಸ್ ಕೆಲಸ?''
ಕಕ್ಕಾಬಿಕ್ಕಿಯಾಗುತ್ತಾ ಗುಂಡ ಪ್ರಶ್ನಿಸಿದ, ``ಡಿಯರ್, ನೀನು ಹುಷಾರಾಗಿದ್ದಿ ತಾನೇ? ಇದ್ಯಾಕೆ ಮನೆ ಹೀಗೆ ಹಾಳು ಕೊಂಪೆ ಆಗಿದೆ?''
``ಪ್ರತಿ ದಿನ ಆಫೀಸಿನಿಂದ ಬಂದು ಕಾಫಿ ಕುಡಿಯುತ್ತಾ ನೀವು ಹೇಳುವುದು ಒಂದೇ ಮಾತು, ಇಡೀ ದಿನ ಏನು ಮಾಡ್ತಾ ಇರ್ತೀಯಾ.... ಕೆಲಸವಿಲ್ಲ, ಕಾರ್ಯವಿಲ್ಲ ಅಂತ.... ಇವತ್ತು ಅದನ್ನು ನಿಜವಾಗಿಸೋಣ ಅಂತ ಏನೂ ಮಾಡದೆ ಹಾಯಾಗಿ ಕುಳಿತಿದ್ದೇನೆ ರಾತ್ರಿ ಡಿನ್ನರ್ ಗೆ ಯಾವ ಹೋಟೆಲ್ ಗೆ ಕರೆದುಕೊಂಡು ಹೋಗ್ತೀರಿ?'' ಎನ್ನುವುದೇ?
ಆಸ್ಟ್ರೇಲಿಯಾ ತುಂಬಾ ದುಬಾರಿ ದೇಶವಾದರೂ, ಅಲ್ಲಿನ ಸಾಮಾನ್ಯ ನಾಗರಿಕರಿಗಾಗಿ ಅವರ ಆರೋಗ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಕಾಳಜಿ ಮತ್ತು ಗುಣಮಟ್ಟ ಅತ್ಯುನ್ನತ!
ಒಮ್ಮೆ ಉ.ಕರ್ನಾಟಕದ ಮಧ್ಯಮ ವರ್ಗದ ಕುಟುಂಬವೊಂದು ರಜೆಗಾಗಿ 15 ದಿನಗಳ ಮಟ್ಟಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದಿತ್ತು. ದಂಪತಿ, ಅವರ ತಂದೆ, ಮೊಮ್ಮಕ್ಕಳು ಕಾರಿನಲ್ಲಿ ಸಿಡ್ನಿಯಿಂದ ಮೆಲ್ಬೋರ್ನ್ ಗೆ ಸುತ್ತಾಟಕ್ಕೆಂದು ಹೊರಟಿದ್ದರು.
ಇವರ ಹಿಂದಿದ್ದ ಕಾರಿನಲ್ಲಿ 80+ ಆಸ್ಟ್ರೇಲಿಯನ್ ಅಜ್ಜಿ ಸಹ ಮೆಲ್ಬೋರ್ನ್ ಗೆ ಹೊರಟು ಇವರ ಹಿಂದೆಯೇ ಬರುತ್ತಿದ್ದರು. ಈ ಮೊಮ್ಮಕ್ಕಳು ಆ ಅಜ್ಜಿಗೆ ಆಗಾಗ ಸ್ನೇಹದಿಂದ ಕೈ ಬೀಸುತ್ತಾ ಹುರಿದುಂಬಿಸುತ್ತಿದ್ದರು. ಆ ಅಜ್ಜಿಗೂ ಖುಷಿಯೋ ಖುಷಿ!
ಸ್ವಲ್ಪ ಹೊತ್ತಿನಲ್ಲಿಯೇ ಈ ಅಜ್ಜಿ ಗಮನಿಸುತ್ತಿದ್ದಂತೆ, ಭಾರತೀಯ ಕುಟುಂಬದ ಹಿರಿಯ ತಾತಾ, ಕಿಟಕಿ ಹೊರಗೆ ತಲೆ ಹಾಕಿ ಆಗಾಗ ರಕ್ತ ವಾಂತಿ ಕಾರತೊಡಗಿದರು! ಇದು ಆಗಾಗ ಪುನರಾವರ್ತನೆಗೊಂಡಾಗ ಬೀ ಶಾಕ್ ಆದ ಅಜ್ಜಿ, ಭಾರತೀಯ ಕುಟುಂಬ ಹೊಸಬರೆಂದು ಗುರುತಿಸಿ, ಅವರ ಸಹಾಯಕ್ಕೆ ತಕ್ಷಣ ಸಜ್ಜಾದರು.
ತಮ್ಮ ಕಾರನ್ನು ಬದಿಗೆ ನಿಲ್ಲಿಸಿ ಅಜ್ಜಿ ತುರ್ತು ಕರೆ ಮಾಡಿದರು. ಕ್ಷಣಾರ್ಧದದಲ್ಲಿ ಆಸ್ಟ್ರೇಲಿಯನ್ ಸರ್ಕಾರದ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಕಾಣಿಸಿಕೊಂಡು ತಾತನ ಕಾರಿನ ಮುಂದೆ ಬಂದು ನಿಂತು, ಇವರನ್ನು ತಡೆಯಿತು. ಅದರಲ್ಲಿದ್ದ ಉನ್ನತ ವೈದ್ಯಕೀಯ ಸಿಬ್ಬಂದಿ, ತಕ್ಷಣ ತಾತನ ಹೃದಯಬಡಿತ ಇತ್ಯಾದಿ ತಪಾಸಣೆಗೆ ಬೇಕಾದ ಚಿಕಿತ್ಸೆ ನೀಡಿ, ಆಮ್ಲಜನಕದ ವ್ಯವಸ್ಥೆ ಮಾಡಿದರು. ಆ ಕಡೆಯಿಂದ ವಿಡಿಯೋದಲ್ಲಿ ಕಾಣಿಸಿದ ತಜ್ಞರು, ಎಲ್ಲಾ ಸೂಚನೆ ನೀಡಿ, ಆಪತ್ಕಾಲದಲ್ಲಿ ಅತಿ ಸುರಕ್ಷಿತವಾಗಿ ಜೀವ ಕಾಪಾಡಿದರು. ಸಮಯಕ್ಕೆ ಸಹಕರಿಸಿದ ಆ ಅಜ್ಜಿಗೆ ವಂದಿಸಿ ಇವರನ್ನು ಬೀಳ್ಕೊಂಡರು. ಈ ಎಲ್ಲಾ ಸೇವೆಗಾಗಿ ನಮ್ಮ ಭಾರತೀಯ ಕುಟುಂಬಕ್ಕೆ ಕೇವಲ 3,500 ಡಾಲರ್ (ಸುಮಾರು ರೂ. 2,75,000/) ಮಾತ್ರ ಖರ್ಚಾಯಿತು.