ಇಂದು ಶಬನಮ್ ಈವರೆಗೂ ಆಸ್ಪತ್ರೆಗೆ ಬಂದಿರಲಿಲ್ಲ. 2 ಗಂಟೆ ಆಗುತ್ತಾ ಬಂದಿತ್ತು, ಆದರೂ ಬರಲಿಲ್ಲ. ಹಾಗೆ ನೋಡಿದರೆ ಅವಳು ಬೆಳಗ್ಗೆ 10ಕ್ಕೆ ಆಸ್ಪತ್ರೆ ತಲುಪುತ್ತಿದ್ದಳು. ಅವಳೆಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಅವಳ ಬಗ್ಗೆ ಚಿಂತಿಸತೊಡಗಿದೆ.

ಇತ್ತೀಚಿನ ದಿನಗಳಲ್ಲಿ ಕೊರೋನಾದ ತೊಂದರೆ ವಿಪರೀತವಾಗಿತ್ತು. ಅವಳು ಸಹ ನನ್ನೊಂದಿಗೆ ರೋಗಿಗಳ ಸೇವೆಯಲ್ಲಿ ತಲ್ಲೀನಳಾಗಿರುತ್ತಿದ್ದಳು. ನಾನು ಡಾಕ್ಟರ್‌ ಮತ್ತು ಅವಳು ನರ್ಸ್‌. ಅವಳಿಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಎಷ್ಟೊಂದು ಮಾಹಿತಿ ಇತ್ತೆಂದರೆ, ನಾನಿಲ್ಲದಿದ್ದರೂ ಅವಳು ರೋಗಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಳು. ಇಂದು ನಾನು ರೋಗಿಗಳನ್ನು ಏಕಾಂಗಿಯಾಗಿಯೇ ಸಂಭಾಳಿಸುತ್ತಿದ್ದೆ. ಆಸ್ಪತ್ರೆಯ ಮತ್ತೊಬ್ಬಳು ನರ್ಸ್‌ ಗೀತಾ ನನ್ನ ಸಹಾಯಕ್ಕೆ ಬಂದಾಗ, ನಾನು ಅವಳನ್ನು ಕೇಳಿದೆ, “ಯಾಕೆ ಇವತ್ತು ಶಬನಮ್ ಬರಲಿಲ್ಲ? ಅವಳ ಆರೋಗ್ಯವಾಗಿದ್ದಾಳೆ ತಾನೇ?”

“ಹೌದು ಅವಳು ಆರೋಗ್ಯದಿಂದಿದ್ದಾಳೆ. ಆದರೆ ನಿನ್ನೆ ಸಂಜೆ ಮನೆಗೆ ಹೋಗುವಾಗ ಅವಳು ಅಕ್ಕಪಕ್ಕದ ಜನ ತನಗೆ ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು. ಅವಳು ಮುಸ್ಲಿಂ ಅಲ್ವ, ಜಮಾತ್‌ ನ ಕೇಸ್‌ ಗಳು ಹೆಚ್ಚಾದಾಗಿನಿಂದ ಮತಾಂಧ ಜನರು ಅವಳನ್ನು ತಪ್ಪಿತಸ್ಥೆ ಎಂದು ಹೇಳತೊಡಗಿದ್ದಾರಂತೆ. ಅವಳನ್ನು ಅಪಾರ್ಟ್‌ ಮೆಂಟ್‌ ನಿಂದ ಹೊರಹಾಕಬೇಕೆಂದು ಒತ್ತಡ ಹೇರತೊಡಗಿದ್ದಾರಂತೆ. ಅವಳನ್ನು ದ್ರೋಹಿ ಎಂದು ಹೇಳುತ್ತಾ ದ್ವೇಷದಿಂದ ಕಾಣುತ್ತಾರಂತೆ. ಬಹುಶಃ ಅವಳು ಇದೇ ಕಾರಣದಿಂದ ಇಂದು ಬಂದಿಲ್ಲ ಅನಿಸುತ್ತೆ,” ಎಂದಳು.

`ಇದೆಂಥ ಜಗತ್ತು? ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾರೊಬ್ಬರನ್ನೂ ಜಡ್ಜ್ ಮಾಡುವುದು ಎಷ್ಟರಮಟ್ಟಿಗೆ ಸರಿ? ನರ್ಸ್ ಒಬ್ಬಳು ಹಗಲುರಾತ್ರಿ ಜನರ ಸೇವೆಯಲ್ಲಿ ನಿರತಳಾಗಿದ್ದು, ಅವಳ ಮೇಲೆ ಇಷ್ಟೊಂದು ಹೀನ ಆರೋಪವೇ?’ ನನ್ನೊಳಗೆ ಕೋಪದ ಲಾವಾ ಸಿಡಿಯಿತು. ಗೀತಾ ಕೂಡ ಶಬನಮ್ ಬಗ್ಗೆ ಚಿಂತೆಗೊಳಗಾಗಿದ್ದಳು.

“ನೀವು ಸರಿಯಾಗೇ ಹೇಳುತ್ತಿದ್ದೀರಿ ಸರ್‌, ಶಬನಮ್ ತನ್ನ ಜೀವನವನ್ನು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನೆದುರು ಹಿಂದೂ ರೋಗಿ ಇದ್ದಾನೋ, ಮುಸ್ಲಿಂ ರೋಗಿ ಇದ್ದಾನೋ ಎನ್ನುವುದನ್ನು ನೋಡದೆ ಅವಳು ಸೇವೆ ನೀಡುತ್ತಾಳೆ. ಆದಾಗ್ಯೂ ಅವಳ ಜಾತಿಯನ್ನೇಕೆ ನೋಡಲಾಗುತ್ತದೆ? ದೇಶವನ್ನು ವಿಭಜನೆ ಮಾಡುವ ಮತಾಂಧರು ಇಂತಹ ತಪ್ಪು ಯೋಚನೆಗೆ ಗಾಳಿ ತುಂಬಿಸುತ್ತಾರೆ,” ಎಂದಳು ಗೀತಾ.

ಆಗ ನನ್ನ ಮೊಬೈಲ್ ‌ಫೋನ್‌ ರಿಂಗ್‌ ಆಯ್ತು. ಅದು ಶಬನಮ್ ಳ ಫೋನ್‌ ಆಗಿತ್ತು. “ಹಲೋ ಶಬನಮ್, ನೀನು ಆರೋಗ್ಯದಿಂದ ಇದ್ದೀಯಾ ತಾನೇ?” ನಾನು ಚಿಂತಾಪರ ಧ್ವನಿಯಲ್ಲಿ ಕೇಳಿದೆ.

“ಇಲ್ಲ ಸರ್‌, ನಾನು ಆರೋಗ್ಯದಿಂದಿಲ್ಲ. ಅಪಾರ್ಟ್‌ ಮೆಂಟಿನ ಒಂದಷ್ಟು ಜನರು ನಾನು ಹೊರಗಡೆ ಬರಲು ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಒಂದು ರೀತಿಯಲ್ಲಿ ಕಣ್ಗಾವಲಿನಲ್ಲಿ ಇಟ್ಟಿದ್ದಾರೆ. ಈ ಮಧ್ಯೆ ನಾನು ಮಧ್ಯಾಹ್ನ ಬಾಥ್‌ ರೂಮಿನಲ್ಲಿ ಬಿದ್ದೆ. ನಾನು ಹೊರಗಡೆ ಹೋಗಿ ಔಷಧಿ ತರಲು ಕೂಡ ಸಾಧ್ಯವಾಗುತ್ತಿಲ್ಲ,” ಎಂದು ತನ್ನ ನೋವನ್ನು ಹೊರಹಾಕಿದಳು.

“ನೀನು ಗಾಬರಿಯಾಗಬೇಡ. ಒಂದೆರಡು ಗಂಟೆ ವಿಶ್ರಾಂತಿ ತೆಗೆದುಕೋ. ನಾನೇ ಸ್ವತಃ ನಿನಗಾಗಿ ಬ್ಯಾಂಡೇಜ್‌ ಹಾಗೂ ಔಷಧಿಗಳನ್ನು ತೆಗೆದುಕೊಂಡು ಬರುತ್ತೇನೆ,” ಎಂದು ಹೇಳುತ್ತಾ ಫೋನ್‌ ಕಟ್‌ ಮಾಡಿದೆ.

ಈಗ ನಾನು ಶಬನಮ್ ಳ ಬಗ್ಗೆ ನನ್ನ ಜವಾಬ್ದಾರಿ ನಿಭಾಯಿಸಬೇಕಿತ್ತು. ಈವರೆಗೆ ಅವಳು ನನಗೆ ಸಾಥ್‌ ಕೊಟ್ಟಿದ್ದಳು. ಈಗ ನಾನು ಮಾನವೀಯತೆಯ ನೆಲೆಯಲ್ಲಿ ಅವಳ ನೆರವಿಗೆ ಧಾವಿಸುವುದು ನನ್ನ ಧರ್ಮವಾಗಿತ್ತು.

5 ಗಂಟೆಯ ಬಳಿಕ ನಾನು ರೋಗಿಗಳ ಸೇವೆ ಮುಗಿಸಿ ಫಸ್ಟ್ ಏಡ್‌ ಬಾಕ್ಸ್, ಅವಶ್ಯಕ ಔಷಧಿಗಳು ಹಾಗೂ ಹಣ್ಣುಗಳೊಂದಿಗೆ ಅವಳ ಅಪಾರ್ಟ್‌ ಮೆಂಟ್‌ ತಲುಪಿದೆ. ಅವಳು ವಾಸಿಸುತ್ತಿದ್ದ ಅಪಾರ್ಟ್‌ ಮೆಂಟ್‌ ಹೊರಗಡೆ ಪೊಲೀಸರು ನಿಂತಿದ್ದರು. ನಾನು ಡಾಕ್ಟರ್ ಆಗಿದ್ದೂ ಕೂಡ ಸಾಕಷ್ಟು ವಿಚಾರಣೆ ಹಾಗೂ ಸ್ಕ್ರೀನಿಂಗ್‌ ಬಳಿಕ ನನಗೆ ಒಳಗೆ ಹೋಗಲು ಅವಕಾಶ ಕೊಟ್ಟರು. ಶಬನಮ್ ಳ ಮನೆ 2ನೇ ಮಹಡಿಯಲ್ಲಿತ್ತು. ನಾನು ಅವಳ ಮನೆಯ ಡೋರ್‌ ಬೆಲ್ ‌ಒತ್ತುತ್ತಿದ್ದಂತೆ ಕುಂಟುತ್ತಾ ಬಂದು ಶಬನಮ್ ಬಾಗಿಲು ತೆರೆದಳು. ನನ್ನನ್ನು ನೋಡುತ್ತಿದ್ದಂತೆ ಅವಳ ಮುಖದಲ್ಲಿ ನೆಮ್ಮದಿಯ ಮುಗುಳ್ನಗೆ ಕಾಣಿಸಿತು.

“ಡಾ. ಅವಿನಾಶ್‌ ಸರ್‌, ಸ್ವತಃ ನೀವೇ ಬಂದುಬಿಟ್ಟಿರಿ?”

“ಹೌದು ಶಬನಮ್. ನಿನಗೆಲ್ಲಿ ಏಟಾಗಿದೆ ತೋರಿಸು.”

“ನನ್ನ ಬಳಿ ಬ್ಯಾಂಡೇಜ್‌ ಸಲಕರಣೆ ಇತ್ತು. ನಾನೇ ಹಾಕಿಕೊಂಡಿದ್ದೆ.”

“ಸರಿ. ಆದಾಗ್ಯೂ ಈ ಅತ್ಯವಶ್ಯ ಔಷಧಿಗಳನ್ನು ನಿನ್ನ ಬಳಿ ಇಟ್ಟುಕೊ ಮತ್ತು ಈ ಹಣ್ಣುಗಳನ್ನು ಕೂಡ.”

“ಥ್ಯಾಂಕ್ಯೂ ವೆರಿಮಚ್‌ ಸರ್‌,” ಎಂದು ಹೇಳುತ್ತಾ ಶಬನಮ್ ಳ ಕಣ್ಣುಗಳಲ್ಲಿ ಕೃತಜ್ಞತೆಯ ಕಣ್ಣೀರು ಉಕ್ಕಿ ಬಂತು. ನಾನು ಅವಳ ಭುಜವನ್ನು ನೇವರಿಸಿ ಹೊರಗೆ ಬರುತ್ತಾ ಹೇಳಿದೆ, “ನೋಡು ಶಬನಮ್, ನಿನಗೆ ಏನೇ ಬೇಕಿದ್ದರೂ ನಿಸ್ಸಂಕೋಚವಾಗಿ ಹೇಳು. ಅಂದಹಾಗೆ, ನಿನ್ನನ್ನು ಈ ಅಪಾರ್ಟ್‌ ಮೆಂಟ್‌ ನಿಂದ ಹೊರಗೆ ಕರೆದುಕೊಂಡು ಹೋಗಬೇಕೆನ್ನುವುದು ನನ್ನ ಯೋಚನೆಯಾಗಿದೆ. ಆಸ್ಪತ್ರೆಯ ಸಮೀಪವೇ ನನ್ನ 2 ಕೋಣೆಯ ಮನೆ ಇದೆಯಲ್ಲ, ಅಲ್ಲೇ ನಿನಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡ್ತೀನಿ. ಇತ್ತೀಚೆಗೆ ನಾನೂ ಕೂಡ ಅಲ್ಲೇ ಇರ್ತೀನಿ. ನನ್ನ ಕಾರಣದಿಂದ ನಮ್ಮ ಮನೆಯವರಿಗೆ ಕೊರೋನಾ ಪಸರಿಸಬಾರದು ಎನ್ನುವುದು ನನ್ನ ಯೋಚನೆ.”

“ಸರ್‌, ನೀವು ಹೇಗೆ ಹೇಳ್ತಿರೊ ಹಾಗೆಯೇ ಆಗಲಿ,” ಎಂದು ಹೇಳುತ್ತಾ ಅವಳು ನನ್ನನ್ನು ಬೀಳ್ಕೊಟ್ಟಳು.

ಆ ಬಳಿಕ 2-3 ಸಲ ನಾನು ಅವಳ ಅಪಾರ್ಟ್‌ ಮೆಂಟ್‌ ಗೆ ಹೋಗಿ ಔಷಧಿ ಹಾಗೂ ಹಣ್ಣುಹಂಪಲು ಕೊಟ್ಟು ಬಂದೆ. ಅಪಾರ್ಟ್ ಮೆಂಟ್‌ ನವರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದರು. ಅದೊಂದು ದಿನವಂತೂ ಆಘಾತಕಾರಿ ಘಟನೆ ನಡೆದುಹೋಯಿತು. ಅಪಾರ್ಟ್ ಮೆಂಟ್‌ ನವರ ಹೇಳಿಕೆಯ ಮೇರೆಗೆ ಪೊಲೀಸ್‌ ಇನ್ಸ್ ಪೆಕ್ಟರ್‌ ನನ್ನ ಮೇಲೆ ಲಾಠಿ ಎತ್ತಿದ. ನಾನು ಚೀರಿದೆನಲ್ಲದೆ, “ಒಬ್ಬ ಡಾಕ್ಟರ್‌ ಜೊತೆಗೆ ನಿಮ್ಮ ಈ ದುರ್ವರ್ತನೆ ಎಷ್ಟು ಸರಿ?” ಎಂದು ಕೇಳಿದೆ.

“ನೀವು ಡಾಕ್ಟರ್‌ ಆಗಿದ್ದರೆ, ಆ ಮುಸ್ಲಿಂ ಹುಡುಗಿಯ ಮನೆಗೆ ಏಕೆ ಮೇಲಿಂದ ಮೇಲೆ ಬರುತ್ತಿರುತ್ತೀರಿ? ನೀವಿಬ್ಬರೂ ಪ್ರೇಮಿಗಳಾ? ಇಬ್ಬರೂ ಪರಸ್ಪರ ಭೇಟಿ ಆಗಿ ಏನು ಮಾಡುತ್ತಿರುತ್ತೀರಿ….”

“ಸರ್‌, ನಾನು ಡಾಕ್ಟರ್‌. ಆಕೆ ನನ್ನ ಜೊತೆ ಕೆಲಸ ಮಾಡುವ ನರ್ಸ್‌. ನಮ್ಮಿಬ್ಬರ ಸಂಬಂಧ ಇಷ್ಟೆ. ನಮ್ಮಲ್ಲಿ ಉಚ್ಚ ಕೀಳು, ಹಿಂದೂ ಮುಸ್ಲಿಂ ಎಂಬ ಭೇದಭಾವ ಇಲ್ಲ,” ಎಂದು ಹೇಳುತ್ತಾ ನಾನು ನನ್ನ ಮನೆಕಡೆ ಹೊರಟೆ. ಆದರೆ ಶಬನಮ್ ಳ ಕುರಿತಂತೆ ನನ್ನ ಚಿಂತೆ ಹೆಚ್ಚುತ್ತಲೇ ಹೊರಟಿತ್ತು.

ಮರುದಿನವೇ ನಾನು ಅವಳನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಆ ಮನೆ ಆಸ್ಪತ್ರೆಗೆ ಹತ್ತಿರದಲ್ಲಿಯೇ ಇತ್ತು. ಹೀಗಾಗಿ ಆಸ್ಪತ್ರೆಗೆ ಹೋಗಿಬರಲು ಬಹಳ ಅನುಕೂಲ ಆಗುತ್ತಿತ್ತು. ಅವಳು ನನ್ನ ಮನೆಗೆ ಬಂದ ನಂತರ ವಿಶ್ರಾಂತಿ ಪಡೆಯುವುದನ್ನು ಬಿಟ್ಟು ಕುಂಟುತ್ತಲೇ ಆಸ್ಪತ್ರೆಗೆ ಬಂದು ರೋಗಿಗಳ ಸೇವೆಯಲ್ಲಿ ನಿರತಳಾಗಿದ್ದಳು. ಅದನ್ನು ಕಂಡು ಅವಳ ಬಗ್ಗೆ ನನಗೆ ಗೌರವ ಹೆಚ್ಚುತ್ತಾ ಹೊರಟಿತ್ತು. ನಾನು ಆ ಮೊದಲು ಆಸ್ಪತ್ರೆಯ ಕ್ಯಾಂಟೀನ್‌ ನಲ್ಲಿಯೇ ಅದು ಇದು ತಿಂದು ಹೇಗೊ ದಿನ ಕಳೆಯುತ್ತಿದ್ದೆ. ಆದರೆ ಶಬನಮ್ ನನ್ನ ಮನೆಗೆ ಬಂದಾಗಿನಿಂದ ಅಡುಗೆ ಮನೆಯ ಜವಾಬ್ದಾರಿಯನ್ನು ಅವಳೇ ವಹಿಸಿಕೊಂಡಿದ್ದಳು. ಅವಳು ನನಗಿಷ್ಟವಾದ ಊಟ, ತಿಂಡಿ ಮಾಡಿ ಬಡಿಸುತ್ತಿದ್ದಳು. ನಾನು ಮನೆಯಿಂದ ದೂರ ಇದ್ದೇನೆ ಎಂಬ ಅನುಭವ ಆಗದಂತೆ ನೋಡಿಕೊಳ್ಳುತ್ತಿದ್ದಳು.

ಆಸ್ಪತ್ರೆಯಲ್ಲಂತೂ ಅವಳು ನನ್ನ ಸಹಾಯಕಿಯಾಗಿದ್ದಳು. ಮನೆಯಲ್ಲೂ ಅವಳು ನನ್ನ ಪ್ರತಿಯೊಂದು ಅಗತ್ಯವನ್ನು ಗಮನಿಸುತ್ತಿದ್ದಳು. ನಾವಿಬ್ಬರೂ ಗೊತ್ತಿಲ್ಲದ ಹಾಗೆ ಒಂದು ರೀತಿಯ ಬಂಧನದಲ್ಲಿ ಸಿಲುಕುತ್ತಾ ಹೊರಟಿದ್ದೆವು. ಅವಳ ಕಷ್ಟಗಳು ನನ್ನ ಅನುಭವಕ್ಕೆ ಬರುತ್ತಿದ್ದವು. ನನ್ನ ತೊಂದರೆ ತಾಪತ್ರಯಗಳನ್ನು ಅವಳು ತನ್ನ ಹೆಗಲಿಗೇರಿಸಿಕೊಳ್ಳಲು ಸಿದ್ಧಳಾಗಿದ್ದಳು. ನಮ್ಮ ಧರ್ಮ, ಜಾತಿ ಬೇರೆ. ಆದರೆ ಮನಸ್ಸು ಮಾತ್ರ ಒಂದೇ ಆಗಿತ್ತು. ನಾವು ಒಬ್ಬರನ್ನೊಬ್ಬರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆ.

ಇತ್ತ ಅಕ್ಕಪಕ್ಕದವರು ನಮ್ಮಿಬ್ಬರ ಕುರಿತು ಗುಸುಗುಸು ಮಾತನಾಡಲು ಶುರು ಮಾಡಿದ್ದರು. ಅವಳು ನನ್ನ ಮನೆಯಲ್ಲಿ ನನ್ನೊಂದಿಗೆ ಹೇಗೆ ಇರುತ್ತಾಳೆ ಎಂಬ ಹುಳು ಅವರ ತಲೆಯನ್ನು ಕೊರೆಯುತ್ತಿತ್ತು. ಅವಳೊಂದಿಗೆ ನನ್ನ ಸಂಬಂಧವೇನು? ಶಬನಮ್ ಳ ಅಪಾರ್ಟ್‌ ಮೆಂಟ್‌ ನ ಕೆಲವರು ನನ್ನ ಕೆಲವು ನೆರೆಹೊರೆಯವರ ಮನಸ್ಸು ಕೆಡಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ಈವರೆಗೆ ಯಾರೊಬ್ಬರೂ ನನ್ನ ಮುಂದೆ ಬಂದು ಹೇಳಿರಲಿಲ್ಲ. ಆದರೆ ಅವರ ಕಣ್ಣುಗಳಲ್ಲಿ ಪ್ರಶ್ನೆಗಳು ಕಂಡುಬರುತ್ತಿದ್ದವು.

ಅದೊಂದು ದಿನ ನಾನು ಮನೆಗೆ ಮರಳಿದಾಗ, ನನ್ನ ಆರೋಗ್ಯ ಹದಗೆಟ್ಟಿರುವುದು ಅರಿವಿಗೆ ಬಂತು. ಗಂಟಲಿನಲ್ಲಿ ಕಿರಿಕಿರಿಯ ಜೊತೆಗೆ ತಲೆ ಕೂಡ ನೋಯುತ್ತಿತ್ತು. ನನ್ನನ್ನು ನಾನು ಕ್ವಾರಂಟೈನ್‌ ಮಾಡಿಕೊಂಡೆ. ನಾನು ಶಬನಮ್ ಗೆ ನನ್ನ ಮನೆಯಿಂದ ಹೊರಟುಹೋಗಲು ಹೇಳಿದೆ. ಆದರೆ ಅವಳು ನನ್ನನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದಳು. ನಾನು ಅವಳನ್ನು ನನ್ನ ಕೋಣೆಗೆ ಬರದಂತೆ ಸೂಚನೆ ಕೊಟ್ಟೆ. ಅವಳು ದೂರದಿಂದಲೇ ನನ್ನ ಬಗ್ಗೆ ಕಾಳಜಿ ವಹಿಸತೊಡಗಿದಳು.

ಒಂದು ದಿನ ನೆರೆಮನೆಯ ಇಬ್ಬರು ನನ್ನ ಮನೆಗೆ ಬಂದು ಶಬನಮ್ ಳ ಬಗ್ಗೆ ಪ್ರಶ್ನಿಸತೊಡಗಿದರು. ನಾನು ಅವರಿಗೆ ಸತ್ಯಸಂಗತಿ ಅರುಹಿದೆ. ಮರುದಿನ ಬೆಳಗ್ಗೆ ಎದ್ದಾಗ, ಮನೆಯ ಎದುರುಗಡೆ ಸಾಕಷ್ಟು ಘಟನೆಗಳು ನಡೆಯುತ್ತಿದ್ದವು. ಇತ್ತ ನನ್ನ ಆರೋಗ್ಯ ಹದಗೆಟ್ಟಿದ್ದರೆ, ಅತ್ತ ಮನೆಯೆದುರು ಮತಾಂಧ ಜನರು ಸೇರಿಕೊಂಡು ಘೋಷಣೆ ಕೂಗುತ್ತಿದ್ದರು. ನನ್ನನ್ನು ಧರ್ಮದ್ರೋಹಿ ಎಂದು ಹೇಳುತ್ತಿದ್ದರು. ಶಬನಮ್ ಳ ಜೊತೆ ನನ್ನ ಹೆಸರು ಸೇರಿಸಿ ಅವಳನ್ನು ನಮ್ಮ ಅಪಾರ್ಟ್‌ ಮೆಂಟ್‌ ನಿಂದಲೂ ಹೊರಹಾಕುವ ಪ್ರಯತ್ನಗಳು ನಡೆಯುತ್ತಿದ್ದವು.

ಬಹಳ ಹೊತ್ತಿನ ತನಕ ಗೊಂದಲ ಗಲಾಟೆಗಳು ನಡೆಯುತ್ತಿದ್ದವು. ಅಲ್ಲಿಯವರೆಗೂ ಶಬನಮ್ ತನ್ನ ಬಟ್ಟೆಗಳನ್ನು ಪ್ಯಾಕ್‌ ಮಾಡಲು ಆರಂಭಿಸಿದ್ದಳು. ಅವಳು ಗೊಂದಲದ ಮನಸ್ಥಿತಿಯಲ್ಲಿದ್ದಳು, “ಸರ್‌, ನಾನು ಇನ್ಮುಂದೆ? ಇಲ್ಲಿರಲು ಸಾಧ್ಯವಿಲ್ಲ. ನನ್ನ ಕಾರಣದಿಂದ ನೀವು ತೊಂದರೆಪಡಬೇಕಾಗಿ ಬರುತ್ತದೆ. ಸರ್‌, ನೀವು ಇಲ್ಲಿರದೆ ಆಸ್ಪತ್ರೆಯಲ್ಲಿ ಇರುವುದು ಒಳ್ಳೆಯದು. ನೀವು ಇಷ್ಟಪಟ್ಟರೆ ನಾನು ನಿಮ್ಮ ಮನೆಯವರನ್ನು ಇಲ್ಲಿಗೆ ಕರೆಸಿಕೊಳ್ಳಲಾ?” ಎಂದು ಕೇಳಿದಳು.

“ಬೇಡ ಬೇಡ….. ನಮ್ಮ ಮನೆಯವರಿಗೆ ಹೇಳುವುದು ಬೇಡ. ಅವರು ಗಾಬರಿಗೊಳ್ಳುತ್ತಾರೆ. ನೀನು ಹೊರಡು. ನನ್ನನ್ನು ನಾನು ಸಂಭಾಳಿಸಿಕೊಳ್ಳುತ್ತೇನೆ.”

“ನಿಮ್ಮನ್ನು ಹೀಗೆ ಏಕಾಂಗಿಯಾಗಿ ಬಿಟ್ಟು ಹೋಗುವುದಿಲ್ಲ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ. ಅಂದಹಾಗೆ ಈ ಜನರು ಕೂಡ ನಿಮ್ಮನ್ನು ನೆಮ್ಮದಿಯಾಗಿ ಇರಲು ಅವಕಾಶ ಕೊಡುವುದಿಲ್ಲ. ಈಗ ನಿಮ್ಮ ಆರೋಗ್ಯ ಕೂಡ ಹದಗೆಟ್ಟಿದೆ. ನಾನು ಡಾ. ಅಕುಲ್‌ ಗೆ ಈಗಲೇ ಫೋನ್‌ ಮಾಡಿ ಹೇಳ್ತೀನಿ. ಅವರು ಬಂದು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ,” ಎಂದಳು.

“ಓ.ಕೆ. ನಿನಗೆ ಹೇಗೆ ಸರಿ ಕಾಣುತ್ತೋ ಹಾಗೆ ಮಾಡು,” ಎಂದು ನಾನು ಹೇಳಿದೆ.

ಆಗ ಒಮ್ಮೆಲೆ ಬಾಗಿಲನ್ನು ಯಾರೊ ಬಡಿದಂತಾಯಿತು. ಅಪಾರ್ಟ್‌ ಮೆಂಟ್‌ ನ ಅಧ್ಯಕ್ಷರು ಎದುರಿಗೆ ನಿಂತಿದ್ದರು.“ಮಿಸ್ಟರ್ ಅವಿನಾಶ್‌, ನಮ್ಮೆಲ್ಲರ ನಿರ್ಧಾರವೆಂದರೆ, ನೀವೀಗ ನಮ್ಮ ಅಪಾರ್ಟ್‌ ಮೆಂಟ್‌ ನಲ್ಲಿ ಇರಲು ಆಗದು.”

“ಸರಿ, ನಾನು ಹೊರಡುತ್ತಿದ್ದೇನೆ,” ಎಂದು ಅದುರುತ್ತಿರುವ ಧ್ವನಿಯಲ್ಲಿ ನಾನು ಹೇಳಿದೆ.

ಶಬನಮ್ ಬೇಗ ಬೇಗ ಎಲ್ಲ ವ್ಯವಸ್ಥೆ ಮಾಡಿದಳು. ನಾವು ಹೇಗೊ ಆಸ್ಪತ್ರೆ ತಲುಪಿದೆವು. ಕೊರೋನಾದ ಸಾಧ್ಯತೆಯ ಕಾರಣದಿಂದ ನನ್ನನ್ನು ಅಡ್ಮಿಟ್‌ ಮಾಡಲಾಯಿತು. ಟೆಸ್ಟ್ ರಿಪೋರ್ಟ್‌ ಪಾಸಿಟಿವ್ ‌ಬಂತು. ನನ್ನ ಆರೋಗ್ಯ ಕ್ರಮೇಣ ಹದಗೆಡುತ್ತಾ ಹೊರಟಿತ್ತು. ಆದರೆ ಶಬನಮ್ ಮಾತ್ರ ನನ್ನ ಜೊತೆಗಿದ್ದಳು ದೂರ ಹೋಗಲಿಲ್ಲ. ಅವಳು ನಿರಂತರವಾಗಿ ನನ್ನ ಆರೋಗ್ಯ ಗಮನಿಸುತ್ತಿದ್ದಳು. ನನ್ನೊಳಗೆ ಸಕಾರಾತ್ಮಕ ಶಕ್ತಿ ತುಂಬುತ್ತಿದ್ದಳು.

ದೀರ್ಘ ಚಿಕಿತ್ಸೆಯ ಬಳಿಕ ನಾನು ಕ್ರಮೇಣ ಚೇತರಿಸಿಕೊಳ್ಳಲಾರಂಭಿಸಿದೆ. 14 ದಿನಗಳ ಬಳಿಕ ನಾನು ಆಸ್ಪತ್ರೆಯಲ್ಲಿಯೇ ಉಳಿದಿದ್ದೆ.  ಈ ಮಧ್ಯೆ ನನ್ನ ಹಾಗೂ ಶಬನಮ್ ನಡುವೆ ನಿಕಟತೆ ಬೆಳೆದಿತ್ತು. ಅವಳು ಪರಿಪೂರ್ಣ ಸಮರ್ಪಣಾ ಭಾವದಿಂದ ರೋಗಿಗಳ ಹಾಗೂ ನನ್ನ ಬಗ್ಗೆ ಗಮನಹರಿಸುವುದನ್ನು ನೋಡಿ ನನಗೆ ಇವಳಿಗಿಂತ ಒಳ್ಳೆಯ ಹುಡುಗಿ ಸಿಗುವುದಿಲ್ಲ ಎಂದು ಅನಿಸತೊಡಗಿತು.

ಅದೊಂದು ದಿನ ಶಬನಮ್ ದುಃಖಿತಳಾಗಿರುವುದು ನನ್ನ ಗಮನಕ್ಕೆ ಬಂತು. ನಾನು ಅವಳನ್ನು ಒತ್ತಾಯ ಮಾಡಿ ಕೇಳಿದಾಗ, ಅವಳು ಹೇಳಿದಳು,“ನೀವು ಚೇತರಿಸಿಕೊಳ್ಳುದನ್ನೇ ನಾನು ಕಾಯುತ್ತಿದ್ದೆ. ಡಾಕ್ಟರ್‌, ನಾನು ಇನ್ಮುಂದೆ ಈ ಏರಿಯಾದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಜನರು ನನ್ನನ್ನು ಹೀಯಾಳಿಸುತ್ತಿದ್ದಾರೆ. ನಿಮ್ಮ ಹೆಸರಿನೊಂದಿಗೆ ನನ್ನ ಹೆಸರನ್ನು ಸೇರಿಸಿ ನಿಮ್ಮನ್ನೂ ಕೂಡ ಅವಮಾನಿಸುತ್ತಿದ್ದಾರೆ. ನನ್ನ ತಪ್ಪೇನೂ ಇರಲಿಲ್ಲ. ಆದರೆ ನನ್ನ ವೃತ್ತಿಗೆ ಕೂಡ ಗೌರವ ಕೊಡಲಿಲ್ಲ. ನಾನು ನಿಮಗಾಗಿ ಇಷ್ಟು ದಿನ ಇಲ್ಲಿ ಉಳಿದಿದ್ದೆ. ಇನ್ನು ಮುಂದೆ ನನಗೆ ಇಲ್ಲಿಂದ ಹೋಗಲು ಅನುಮತಿ ಕೊಡಿ. ನಾನು ಈ ಆಸ್ಪತ್ರೆಯಿಂದಲೇ ಹೊರಟು ಹೋಗಲು ಇಚ್ಛಿಸುತ್ತೇನೆ,” ಎಂದಳು.

ಶಬನಮ್ ಳ ತುಂಬಿದ ಕಣ್ಣುಗಳಲ್ಲಿ ನನ್ನ ಬಗೆಗಿದ್ದ ಪ್ರೀತಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ನಾನು ಅವಳನ್ನು ತಡೆದು, “ನಿಲ್ಲು ಶಬನಮ್ ನಿಲ್ಲು….! ಯಾವುದರಿಂದ ಅವರು ನಮಗೆ ಅಪಖ್ಯಾತಿ ತರಲು ಬಳಸುತ್ತಿದ್ದಾರೋ ಅದನ್ನು ನಾನು ವಾಸ್ತವದಲ್ಲಿ ಹಾಗೆಯೇ ಜೋಡಿಸಲು ಇಚ್ಛಿಸುತ್ತೇನೆ.”

ಶಬನಮ್ ನನ್ನ ಕಡೆ ಅಚ್ಚರಿಯಿಂದ ನೋಡತೊಡಗಿದಳು. ನಾನು ಮುಗುಳ್ನಗುತ್ತಾ, “ನಾವು ಇಂದು ಇದೇ ಆಸ್ಪತ್ರೆಯಲ್ಲಿ ಏಕೆ ಮದುವೆ ಮಾಡಿಕೊಳ್ಳಬಾರದು? ತಡ ಮಾಡುವುದರಲ್ಲಿ ಅರ್ಥ ಏನಿದೆ?”

ಶಬನಮ್ ನಾಚಿಕೆಯಿಂದ ತನ್ನ ದೃಷ್ಚಿಯನ್ನು ಕೆಳಕ್ಕೆ ಹರಿಸಿದಳು. ಅವಳ ಉತ್ತರ ನನಗೆ ಸಿಕ್ಕಿಬಿಟ್ಟಿತು ಆಸ್ಪತ್ರೆಯ ಇತರ ಡಾಕ್ಟರ್ ಹಾಗೂ ನರ್ಸ್‌ ಗಳು ತಕ್ಷಣವೇ ಒಂದು ಅತ್ಯಂತ ಸರಳ ಮದುವೆಗೆ ವ್ಯವಸ್ಥೆ ಮಾಡಿದರು. ಈ ರೀತಿಯಾಗಿ ಒಬ್ಬ ಹಿಂದೂ ಡಾಕ್ಟರ್ ಹಾಗೂ ಮುಸ್ಲಿಂ ನರ್ಸ್‌ ಖಾಯಂ ಸಂಗಾತಿಗಳಾದೆವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ