ಇಂದು ಶಬನಮ್ ಈವರೆಗೂ ಆಸ್ಪತ್ರೆಗೆ ಬಂದಿರಲಿಲ್ಲ. 2 ಗಂಟೆ ಆಗುತ್ತಾ ಬಂದಿತ್ತು, ಆದರೂ ಬರಲಿಲ್ಲ. ಹಾಗೆ ನೋಡಿದರೆ ಅವಳು ಬೆಳಗ್ಗೆ 10ಕ್ಕೆ ಆಸ್ಪತ್ರೆ ತಲುಪುತ್ತಿದ್ದಳು. ಅವಳೆಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಅವಳ ಬಗ್ಗೆ ಚಿಂತಿಸತೊಡಗಿದೆ.
ಇತ್ತೀಚಿನ ದಿನಗಳಲ್ಲಿ ಕೊರೋನಾದ ತೊಂದರೆ ವಿಪರೀತವಾಗಿತ್ತು. ಅವಳು ಸಹ ನನ್ನೊಂದಿಗೆ ರೋಗಿಗಳ ಸೇವೆಯಲ್ಲಿ ತಲ್ಲೀನಳಾಗಿರುತ್ತಿದ್ದಳು. ನಾನು ಡಾಕ್ಟರ್ ಮತ್ತು ಅವಳು ನರ್ಸ್. ಅವಳಿಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಎಷ್ಟೊಂದು ಮಾಹಿತಿ ಇತ್ತೆಂದರೆ, ನಾನಿಲ್ಲದಿದ್ದರೂ ಅವಳು ರೋಗಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಳು. ಇಂದು ನಾನು ರೋಗಿಗಳನ್ನು ಏಕಾಂಗಿಯಾಗಿಯೇ ಸಂಭಾಳಿಸುತ್ತಿದ್ದೆ. ಆಸ್ಪತ್ರೆಯ ಮತ್ತೊಬ್ಬಳು ನರ್ಸ್ ಗೀತಾ ನನ್ನ ಸಹಾಯಕ್ಕೆ ಬಂದಾಗ, ನಾನು ಅವಳನ್ನು ಕೇಳಿದೆ, ``ಯಾಕೆ ಇವತ್ತು ಶಬನಮ್ ಬರಲಿಲ್ಲ? ಅವಳ ಆರೋಗ್ಯವಾಗಿದ್ದಾಳೆ ತಾನೇ?''
``ಹೌದು ಅವಳು ಆರೋಗ್ಯದಿಂದಿದ್ದಾಳೆ. ಆದರೆ ನಿನ್ನೆ ಸಂಜೆ ಮನೆಗೆ ಹೋಗುವಾಗ ಅವಳು ಅಕ್ಕಪಕ್ಕದ ಜನ ತನಗೆ ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು. ಅವಳು ಮುಸ್ಲಿಂ ಅಲ್ವ, ಜಮಾತ್ ನ ಕೇಸ್ ಗಳು ಹೆಚ್ಚಾದಾಗಿನಿಂದ ಮತಾಂಧ ಜನರು ಅವಳನ್ನು ತಪ್ಪಿತಸ್ಥೆ ಎಂದು ಹೇಳತೊಡಗಿದ್ದಾರಂತೆ. ಅವಳನ್ನು ಅಪಾರ್ಟ್ ಮೆಂಟ್ ನಿಂದ ಹೊರಹಾಕಬೇಕೆಂದು ಒತ್ತಡ ಹೇರತೊಡಗಿದ್ದಾರಂತೆ. ಅವಳನ್ನು ದ್ರೋಹಿ ಎಂದು ಹೇಳುತ್ತಾ ದ್ವೇಷದಿಂದ ಕಾಣುತ್ತಾರಂತೆ. ಬಹುಶಃ ಅವಳು ಇದೇ ಕಾರಣದಿಂದ ಇಂದು ಬಂದಿಲ್ಲ ಅನಿಸುತ್ತೆ,'' ಎಂದಳು.
`ಇದೆಂಥ ಜಗತ್ತು? ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾರೊಬ್ಬರನ್ನೂ ಜಡ್ಜ್ ಮಾಡುವುದು ಎಷ್ಟರಮಟ್ಟಿಗೆ ಸರಿ? ನರ್ಸ್ ಒಬ್ಬಳು ಹಗಲುರಾತ್ರಿ ಜನರ ಸೇವೆಯಲ್ಲಿ ನಿರತಳಾಗಿದ್ದು, ಅವಳ ಮೇಲೆ ಇಷ್ಟೊಂದು ಹೀನ ಆರೋಪವೇ?' ನನ್ನೊಳಗೆ ಕೋಪದ ಲಾವಾ ಸಿಡಿಯಿತು. ಗೀತಾ ಕೂಡ ಶಬನಮ್ ಬಗ್ಗೆ ಚಿಂತೆಗೊಳಗಾಗಿದ್ದಳು.
``ನೀವು ಸರಿಯಾಗೇ ಹೇಳುತ್ತಿದ್ದೀರಿ ಸರ್, ಶಬನಮ್ ತನ್ನ ಜೀವನವನ್ನು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನೆದುರು ಹಿಂದೂ ರೋಗಿ ಇದ್ದಾನೋ, ಮುಸ್ಲಿಂ ರೋಗಿ ಇದ್ದಾನೋ ಎನ್ನುವುದನ್ನು ನೋಡದೆ ಅವಳು ಸೇವೆ ನೀಡುತ್ತಾಳೆ. ಆದಾಗ್ಯೂ ಅವಳ ಜಾತಿಯನ್ನೇಕೆ ನೋಡಲಾಗುತ್ತದೆ? ದೇಶವನ್ನು ವಿಭಜನೆ ಮಾಡುವ ಮತಾಂಧರು ಇಂತಹ ತಪ್ಪು ಯೋಚನೆಗೆ ಗಾಳಿ ತುಂಬಿಸುತ್ತಾರೆ,'' ಎಂದಳು ಗೀತಾ.
ಆಗ ನನ್ನ ಮೊಬೈಲ್ ಫೋನ್ ರಿಂಗ್ ಆಯ್ತು. ಅದು ಶಬನಮ್ ಳ ಫೋನ್ ಆಗಿತ್ತು. ``ಹಲೋ ಶಬನಮ್, ನೀನು ಆರೋಗ್ಯದಿಂದ ಇದ್ದೀಯಾ ತಾನೇ?'' ನಾನು ಚಿಂತಾಪರ ಧ್ವನಿಯಲ್ಲಿ ಕೇಳಿದೆ.
``ಇಲ್ಲ ಸರ್, ನಾನು ಆರೋಗ್ಯದಿಂದಿಲ್ಲ. ಅಪಾರ್ಟ್ ಮೆಂಟಿನ ಒಂದಷ್ಟು ಜನರು ನಾನು ಹೊರಗಡೆ ಬರಲು ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಒಂದು ರೀತಿಯಲ್ಲಿ ಕಣ್ಗಾವಲಿನಲ್ಲಿ ಇಟ್ಟಿದ್ದಾರೆ. ಈ ಮಧ್ಯೆ ನಾನು ಮಧ್ಯಾಹ್ನ ಬಾಥ್ ರೂಮಿನಲ್ಲಿ ಬಿದ್ದೆ. ನಾನು ಹೊರಗಡೆ ಹೋಗಿ ಔಷಧಿ ತರಲು ಕೂಡ ಸಾಧ್ಯವಾಗುತ್ತಿಲ್ಲ,'' ಎಂದು ತನ್ನ ನೋವನ್ನು ಹೊರಹಾಕಿದಳು.
``ನೀನು ಗಾಬರಿಯಾಗಬೇಡ. ಒಂದೆರಡು ಗಂಟೆ ವಿಶ್ರಾಂತಿ ತೆಗೆದುಕೋ. ನಾನೇ ಸ್ವತಃ ನಿನಗಾಗಿ ಬ್ಯಾಂಡೇಜ್ ಹಾಗೂ ಔಷಧಿಗಳನ್ನು ತೆಗೆದುಕೊಂಡು ಬರುತ್ತೇನೆ,'' ಎಂದು ಹೇಳುತ್ತಾ ಫೋನ್ ಕಟ್ ಮಾಡಿದೆ.