ಗೋವಾದ ಪಣಜಿ ಸಮೀಪದ “ಬಿರ್ಚ್ ರೊಮಿಯೋ ಲೇನ್” ನೈಟ್ ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಗಢಕ್ಕೆ ನಿರ್ವಹಣೆ ವೈಫಲ್ಯವೇ ಕಾರಣ ಎಂಬುದು ಕಂಡುಬಂದಿದೆ.
ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ನೈಟ್ ಕ್ಲಬ್ ನಡೆಸುತ್ತಿದ್ದ ಮಾಲೀಕರು, ವ್ಯವಸ್ಥಾಪಕ ನಿರ್ಲಕ್ಷ್ಯದಿಂದ 25 ಜನರು ಜೀವ ತೆತ್ತಿದ್ದಾರೆ. ದುರ್ಘಟನೆಗೆ ಎಲೆಕ್ಟಿಕಲ್ ಫೈರ್ ಕ್ರ್ಯಾಕರ್ಸ್ ಕಾರಣ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಬಹುದೊಡ್ಡದಾದ ಕ್ಲಬ್ಗೆ ಕಿರಿದಾದ ಆಗಮನ, ನಿರ್ಗಮನ ದ್ವಾರಗಳು ಇದ್ದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಶನಿವಾರ ತಡರಾತ್ರಿ ದುರಂತ ಘಟಿಸಿದ ಕ್ಲಬ್ನಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿಗರು ರಾತ್ರಿ ಪಾರ್ಟಿಯ ಮೋಜು ಮಸ್ತಿಯಲ್ಲಿದ್ದರು. ಡಾನ್ಸರ್ ಸುತ್ತ ಡಾನ್ಸ್ ಮಾಡುತ್ತಿದ್ದರು. ಆಗ ನೃತ್ಯ ಮಾಡುತ್ತಿದ್ದ ಯುವತಿ ಹಿಂದೆ ದಿಢೀರ್ ಅಗ್ನಿ ಜ್ವಾಲೆ ಕಾಣಿಸಿತು. ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಕುಡಿದ ಮತ್ತಿನಲ್ಲಿದ್ದ ಪ್ರವಾಸಿಗರು ಬೆಂಕಿ ಬಿದ್ದಿರುವುದನ್ನು ಅರಿಯದೆ ನಿಂತಲ್ಲಿಯೇ ಡಾನ್ಸ್ ಮಾಡುತ್ತಿದ್ದರು.
ತಕ್ಷಣವೇ ಅಗ್ನಿಯ ಜ್ವಾಲೆ ಇಡೀ ಕೊಠಡಿ ಆವರಿಸಿತು. ಸಂಗೀತಗಾರರು ವಾದ್ಯಗಳನ್ನು ಬಿಟ್ಟು ಸುರಕ್ಷಿತ ಸ್ಥಳದತ್ತ ಓಡಿ ಹೋದರು. ಬೆಂಕಿ ಕೆನ್ನಾಲಿಗೆ ಹೆಚ್ಚುತ್ತಿದ್ದಂತೆ ನಶೆಯಲ್ಲಿದ್ದ ಪ್ರವಾಸಿಗರು, ನೃತ್ಯಗಾರ್ತಿಯರು ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಹೋಗಲು ಯತ್ನಿಸಿದರು.
ಬೆಂಕಿಯ ಜ್ವಾಲೆ ಆವರಿಸುತ್ತಿದ್ದಂತೆ ಕ್ಲಬ್ನಲ್ಲಿ ಗದ್ದಲ ಉಂಟಾಯಿತು. ಹೊರಗೆ ಓಡಿ ಹೋಗಲಾಗದ ಮಟ್ಟಿಗೆ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತು. ಮೊದಲ ಮಹಡಿಯಲ್ಲಿ ನೂರಾರು ಜನರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನೆಲ ಮಹಡಿಯಲ್ಲಿದ್ದ ಅಡುಗೆ ಮನೆಗೆ ಓಡಿ ಹೋದರು. ಅಲ್ಲಿದ್ದ ಸಿಬ್ಬಂದಿ ಜೊತೆ ಸಿಲುಕಿ ಕೆಲವರು ಹೊರಗೆ ಬರಲಾಗದೇ ಜೀವಂತವಾಗಿ ದಹನವಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾತ್ಕಾಲಿಕ ಹಟ್ಗಳು: ಅಪೋರಾ ನದಿಯ ಹಿನ್ನೀರಿನಲ್ಲಿ ತಲೆ ಎತ್ತಿದ ಕ್ಲಬ್ನಲ್ಲಿ ತಾಳೆ ಗರಿಗಳಿಂದ ರೂಪಿಸಲಾದ ತಾತ್ಕಾಲಿಕ ಹಟ್ಗಳಿದ್ದವು. ಬೆಂಕಿಯ ಕೆನ್ನಾಲಿಗೆ ಕ್ಷಿಪ್ರವಾಗಿ ಹರಡಲು ತಾಳೆಗರಿಗಳು ಕಾರಣ. ಜೊತೆಗೆ ಕಿರಿದಾದ ಮಾರ್ಗದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳ ತಲುಪಲು ಸಾಧ್ಯವಾಗದಿರುವುದು ಹೆಚ್ಚಿನ ಸಾವುನೋವಿಗೆ ಕಾರಣವಾಗಿದೆ ಎನ್ನಲಾಗಿದೆ.





