ಟೀಮ್ ಇಂಡಿಯಾ ಬ್ಯಾಟಿಂಗ್ ಸ್ಟಾರ್ ಸ್ಮೃತಿ ಮಂಧಾನ ತಮ್ಮ ಮದುವೆಯನ್ನು ರದ್ದುಗೊಳಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು, ಊಹಾಪೋಹಗಳನ್ನು ನಿಲ್ಲಿಸುವಂತೆ ಮಾಧ್ಯಮಗಳು ಹಾಗೂ ಅಭಿಮಾನಿಗಳನ್ನು ಕೋರಿದ್ದಾರೆ.
ಸ್ಮೃತಿ ಮಂಧಾನ ಬಹುಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಅದರಂತೆ ಕಳೆದ ತಿಂಗಳು (ನ.23) ಮದುವೆಯಾಗಬೇಕಿತ್ತು. ಆದರೆ ಅನಿರೀಕ್ಷಿತ ಘಟನೆಗಳಿಂದಾಗಿ ಪಲಾಶ್-ಸ್ಮೃತಿ ವಿವಾಹವನ್ನು ರದ್ದುಗೊಳಿಸಲಾಗಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನಾ ತಮ್ಮ ವಿವಾಹದ ಕುರಿತಾಗಿ ಕೇಳಿ ಬಂದ ಊಹಾಪೋಹಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಪಲಾಶ್ ಮುಚ್ಚಲ್ ಜೊತೆಗಿನ ಮದುವೆಯನ್ನು ಕ್ಯಾನ್ಸಲ್ ಮಾಡಲಾಗಿದ್ದು, ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಇನ್ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ಮೃತಿ ಮಂಧಾನ, “ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಈ ಸಮಯದಲ್ಲಿ ಈ ಬಗ್ಗೆ ನಾನು ಮಾತನಾಡುವುದು ಮುಖ್ಯ ಎಂದು ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ. ಆದಾಗ್ಯೂ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸುತ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಮುಂದುವರಿಯಲು ಅವಕಾಶ ನೀಡಬೇಕೆಂದು ನಾನು ವಿನಂತಿಸುತ್ತೇನೆ.” ಎಂದಿದ್ದಾರೆ.
“ನಮ್ಮೆಲ್ಲರನ್ನೂ ಒಂದು ಉದ್ದೇಶ ಮುನ್ನಡೆಸುತ್ತದೆ ಎಂದು ಭಾವಿಸುತ್ತೇನೆ. ನನಗೆ, ಅದು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ನಾನು ಭಾರತಕ್ಕಾಗಿ ದೀರ್ಘಕಾಲ ಆಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಲು ಆಶಿಸುತ್ತೇನೆ. ಅದುವೇ ನನ್ನ ಗಮನವಾಗಿರುತ್ತದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಮುಂದುವರಿಯುವ ಸಮಯ ಇದು” ಎಂದು ಸ್ಮೃತಿ ಇನ್ಸ್ಟಾಗ್ರಾಮ್ ಹೇಳಿದ್ದಾರೆ.
ಸ್ಮೃತಿ ಮದುವೆ ನ.23 ರಂದು ನಡೆಯಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದಿಂದಾಗಿ ಸಮಾರಂಭವನ್ನು ಮುಂದೂಡಲಾಯಿತು. ಆದರೆ ಇದೀಗ ಪಲಾಶ್ ಮುಚ್ಚಲ್ ಜೊತೆಗಿನ ವಿವಾಹವನ್ನು ರದ್ದುಗೊಳಿಸಿರುವುದಾಗಿ ಸ್ಮೃತಿ ಮಂಧಾನ ತಿಳಿಸಿದ್ದಾರೆ.





