ತಾಯಿ ತನ್ನ ಮಗುವಿನ ಒಳ್ಳೆಯ ಭವಿಷ್ಯಕ್ಕೆ ಯಾವ ರೀತಿ ಹೂಡಿಕೆ ಮಾಡಬೇಕು? ಯಾವ ಕ್ಷಣದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೊ, ಆಗಿನಿಂದಲೇ ಅವಳಿಗೆ ತನ್ನ ಮಗುವಿನ ಭವಿಷ್ಯದ ಕಾಳಜಿ ಬಾಧಿಸುತ್ತದೆ. ಪ್ರತಿದಿನದ ಚಿಕ್ಕಪುಟ್ಟ ಅವಶ್ಯಕತೆಗಳಿಂದ ಹಿಡಿದು ಅದರ ಸುರಕ್ಷಿತ ಭವಿಷ್ಯಕ್ಕಾಗಿ ಆಕೆ ಎಲ್ಲವನ್ನೂ ಅತ್ಯುತ್ತಮ ರೀತಿಯಲ್ಲಿ ಕೊಡಬಯಸುತ್ತಾಳೆ. ಮಗುವಿನ ಒಳ್ಳೆಯ ಭವಿಷ್ಯ ನೀಡುವ ಜವಾಬ್ದಾರಿ ಕೇವಲ ತಂದೆಯೊಬ್ಬನದೇ ಅಲ್ಲ, ಇದರಲ್ಲಿ ತಾಯಿಯೂ ಕೂಡ ಪರಿಪೂರ್ಣ ಸಹಕಾರ ಕೊಡುತ್ತಿದ್ದಾಳೆ.
ಈ ನಿಟ್ಟಿನಲ್ಲಿ ನಾವು ಅನಿತಾ ಚಂದ್ರಕುಮಾರ್ ಉದಾಹರಣೆಯನ್ನು ಗಮನಿಸೋಣ. 35 ವರ್ಷದ ಅನಿತಾ ತನ್ನ ಪತಿ ಹಾಗೂ 12 ಮತ್ತು 7 ವರ್ಷದ ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಸದ್ಯದ ಸ್ಥಿತಿಯಲ್ಲಿ ಒಂದು ಮಗುವನ್ನೇ ನಿರ್ವಹಿಸುವುದು ಕಷ್ಟ. ಇನ್ನೂ ಎರಡೆರಡು ಮಕ್ಕಳ ಖರ್ಚು ನಿಭಾಯಿಸುವುದು ನಿಜಕ್ಕೂ ಸವಾಲಿನ ವಿಷಯವೇ ಸರಿ.
ಭಾರತದಲ್ಲಿ ಶಿಕ್ಷಣದ ಖರ್ಚೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. 2012-2018ರ ಅವಧಿಯಲ್ಲಿ ಸರಾಸರಿ 6.42% ವಾರ್ಷಿಕ ಹೆಚ್ಚಳವಾಗಿತ್ತು. ಈಗ ಅದರ ಹೆಚ್ಚಳ ಶೇ.10ರಷ್ಟು ಇದೆ. ನಾವು 20 ವರ್ಷಗಳಲ್ಲಿ ಶೇ.7ರಷ್ಟು ವಾರ್ಷಿಕ ಹೆಚ್ಚಳವನ್ನು ಗಮನಕ್ಕೆ ತೆಗೆದುಕೊಂಡರೂ 4 ವರ್ಷದ ಬಿಟೆಕ್ ಎಂಜಿನಿಯರಿಂಗ್ ಪಠ್ಯಕ್ರಮಕ್ಕೆ ಸದ್ಯದ ಖರ್ಚು 8 ಲಕ್ಷ ರೂ. ಆಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಈ ಖರ್ಚು 30 ಲಕ್ಷ ರೂ. ಆಗುತ್ತದೆ. ಹೀಗಾಗಿ ಅನಿತಾರಂತಹ ಪ್ರತಿಯೊಬ್ಬ ಮಹಿಳೆ ತಮ್ಮ ಮಕ್ಕಳ ಶೈಕ್ಷಣಿಕ ಖರ್ಚಿಗಾಗಿ ಈಗಿನಿಂದಲೇ ಯೋಜನೆ ರೂಪಿಸುವುದು ಅನಿವಾರ್ಯವಾಗಿದೆ.
ಹೂಡಿಕೆಯ ಯೋಜನೆ ರೂಪಿಸಿ
ಎಲ್ಲಕ್ಕೂ ಮುಂಚೆ ಅನಿತಾ ತಮ್ಮ ಗುರಿಗಳನ್ನು ಮೊದಲು ನಮೂದಿಸಬೇಕು. ಮುಂದಿನ ದಿನಗಳಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕಾಗಿ ಬರಬಹುದು ಎಂದು ಅಂದಾಜಿಸಬೇಕು. ಉದಾಹರಣೆಗಾಗಿ ಉನ್ನತ ಶಿಕ್ಷಣಕ್ಕೆ ಹೋಲಿಸಿದರೆ ಪ್ರಿಪ್ರೈಮರಿ ಶಿಕ್ಷಣಕ್ಕೆ ಕಡಿಮೆ ಖರ್ಚು ಬರಬಹುದು. ಅದೇ ರೀತಿ ಡಿಗ್ರಿ ಶಿಕ್ಷಣಕ್ಕೆ ಹೋಲಿಸಿದರೆ ಡಿಗ್ರಿ ನಂತರದ ಶಿಕ್ಷಣಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಟ್ಯೂಷನ್ ಫೀಸ್ ಹೊರತಾಗಿ ಹಾಸ್ಟೆಲ್ ಹಾಗೂ ಇತರೆ ಖರ್ಚುಗಳ ಬಗೆಗೂ ಗಮನಕೊಡಬೇಕು. ಇದರ ಜೊತೆಗೆ ತನ್ನ ಮಗುವಿನ ಉನ್ನತ ಶಿಕ್ಷಣ ಭಾರತದಲ್ಲಿ ಆಗಬೇಕಾ ಅಥವಾ ವಿದೇಶದಲ್ಲಿ ಆಗಬೇಕಾ ಎನ್ನುವುದನ್ನು ಕೂಡ ನಿರ್ಧರಿಸಬೇಕು.
ಈ ಎಲ್ಲ ಸಂಗತಿಗಳನ್ನು ಚಾರ್ಟ್ ನಲ್ಲಿ ಬರೆದಿಡುವುದರಿಂದ ಅಗತ್ಯ ಗುರಿಗೆ ತಕ್ಕಂತೆ ಹಣ ಉಳಿಸಲು ಸಹಾಯವಾಗುತ್ತದೆ. ಮಗುವಿನ ಹುಟ್ಟುಹಬ್ಬ ಹಾಗೂ ಹಬ್ಬದ ದಿನಗಳಲ್ಲಿ ಉಡುಗೊರೆ ರೂಪದಲ್ಲಿ ದೊರಕುವ ಹಣವನ್ನು ಒಂದೇ ಕಂತಿನಲ್ಲಿ ಹೂಡಿಕೆ ಮಾಡಬೇಕು.
ಹೂಡಿಕೆಯ ಪರಿಣಾಮಕಾರಿ ದಾರಿ
ಮಗುವಿಗೆ ಸಂಬಂಧಪಟ್ಟ ಗುರಿಗೆ ಹೂಡಿಕೆ ಮಾಡಲು ಹಲವು ದಾರಿಗಳಿವೆ. 8.5% ಬಡ್ಡಿ ದರ ನೀಡುವ ಸುಕನ್ಯಾ ಸಮೃದ್ಧಿ ಯೋಜನೆ ಅಥವಾ 910% ರಿಟರ್ನ್ ಕೊಡುವ ಯೂನಿಟ್ ಲಿಂಕ್ಡ್ ಇನ್‌ವೆಸ್ಟ್ ಮೆಂಟ್ ಪ್ಲಾನ್ (ಯೂಲಿಪ್) ಒಂದು ಆದರ್ಶ ಹೂಡಿಕೆ ಆಗಬಹುದು. ಅಂದಹಾಗೆ ಒಂದು ಡೈರ್ಸಿಫೈಡ್ ಮ್ಯೂಚುವಲ್ ಫಂಡ್ ಹೂಡಿಕೆಯು ಅತ್ಯಂತ ಪರಿಣಾಮಕಾರಿ ದಾರಿ ಎನಿಸಬಹುದು. ಒಂದು ನಿಶ್ಚಿತ ಅವಧಿಯಲ್ಲಿ ಈ ಚಿಕ್ಕ ಉಳಿತಾಯ ಭಾರಿ ಯೋಜನೆಗಳಿಗಿಂತ ದೊಡ್ಡ ಮೊತ್ತವಾಗಲು ಸಹಾಯಕವಾಗುತ್ತದೆ.
ಯಾವುದೇ ಒಂದು ಮಗುವಿನ ಉನ್ನತ ಶಿಕ್ಷಣ ಒಂದು ದೀರ್ಘಕಾಲಿಕ ಗುರಿಯಾಗಿದೆ. ಹೀಗಾಗಿ 20 ವರ್ಷದ ತನಕ ಪ್ರತಿ ತಿಂಗಳು 10,000 ರೂ. ಸೇರಿಸಿದರೂ ಅದು 17 ಲಕ್ಷ ರೂ. ಮೊತ್ತವಾಗಬಹುದು. ಮ್ಯೂಚುವಲ್ ಫಂಡ್ ನಲ್ಲಿ ತೊಡಗಿಸಿದ ಹಣ ಶೇ.18ರಷ್ಟು ಲಾಭ ಕೊಟ್ಟರೆ ಡೈರ್ಸಿಫೈಡ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ದೀರ್ಘಾವಧಿಯ ಹೂಡಿಕೆ
ಕುಟುಂಬದಿಂದ ನಿಮಗೆ ಆಗಾಗ ದೊರೆಯುಲ ಹಣದ ಹೊರತಾಗಿ ನೀಲಪ ಎಸ್‌ಐಪಿಯಂತಹ ಯೇಜನೆಗಳಲ್ಲಿ ಹೂಡಿಕೆ ಮಾಡಬಹುದು. ನಿಯಮಿತವಾಗಿ ದೀರ್ಘಾವಧಿಗಾಗಿ ಮಾಡುವ ಈ ಹೂಡಿಕೆ ಕೂಡ ಒಳ್ಳೆಯ ಮೊತ್ತವನ್ನು ಕೊಡಬಹುದು. ಉದಾಹರಣೆಗಾಗಿ 15 ವರ್ಷಗಳಿಗಾಗಿ ಎನ್‌ಐಪಿಯಲ್ಲಿ ಪ್ರತಿ ತಿಂಗಳು 15 ಸಾವಿರ ಹೂಡಿಕೆ ಮಾಡಿದರೆ ಪ್ರತಿ ವರ್ಷ ರಿಟರ್ನ್ 18% ಎಂದು ಲೆಕ್ಕ ಹಾಕಿದರೆ ಕೊನೆಯಲ್ಲಿ 40 ಲಕ್ಷ ರೂ. ಬರಬಹುದು. ಕೊನೆಯಲ್ಲೊಂದು ಮಾತು. ನಿಯಮಗಳು ಹಾಗೂ ಕಾನೂನಿನ ಹಿತದೃಷ್ಟಿಯಿಂದ ನಿರ್ವಹಣೆಗೆ ಸಂಬಂಧಪಟ್ಟ ಅನಾವಶ್ಯಕ ಕಿರಿಕಿರಿಯಿಂದ ಬಚಾವಾಗಲು ಮಹಿಳೆ ಸ್ವತಃ ತನ್ನ ಹೆಸರಿನಿಂದಲೇ ಹೂಡಿಕೆ ಮಾಡಬೇಕು. ಮಗುವಿನ ಹೆಸರನ್ನು ನಾಮಿನಿ ಮಾಡಬೇಕು.
ಒಬ್ಬ ಒಳ್ಳೆಯ ತಾಯಿಯಾಗಲು ತನ್ನ ಮಗುವಿಗೆ ಉಜ್ವಲ ಭವಿಷ್ಯ ನೀಡುವ ಪ್ರತಿಯೊಂದು ಜವಾಬ್ದಾರಿಯನ್ನು ಪೂರ್ತಿಗೊಳಿಸುವುದೂ ಸೇರಿದೆ. ನೀವು ಈ ಜವಾಬ್ದಾರಿಯನ್ನು ನಿಭಾಯಿಸಲೇಬೇಕು. ನಿಮಗಿಂತ ನಿಮ್ಮ ಮಗುವಿನ ಭವಿಷ್ಯ ಉತ್ತಮಗೊಳ್ಳಬೇಕು.
– ರಾಜಶ್ರೀ