ನೀವು ಪ್ರೇಮಿಗಳಾಗಿದ್ದು ಆಗಾಗ ಪಾರ್ಕ್ ನಲ್ಲಿ ಭೇಟಿಯಾಗುತ್ತಿದ್ದರೆ, ಈ ಮಾಹಿತಿ ನಿಮಗಾಗಿಯೇ ಇದೆ. ಯುವಕ ಯುವತಿಯರು ಪರಸ್ಪರ ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು ಸಹಜ. ಆ ಪ್ರೀತಿ ಮುಂದುವರಿಯಬೇಕಾದರೆ ಅವರು ಆಗಾಗ ಭೇಟಿ ಮಾಡುತ್ತಿರಬೇಕು. ಪ್ರೇಮಿಗಳಿಗೆ ಭೇಟಿ ಮಾಡುವುದೇ ಒಂದು ತೊಡಕಾಗಿಬಿಡುತ್ತದೆ. ಕಾಲೇಜು ಅಥವಾ ವರ್ಕಿಂಗ್ ಪ್ಲೇಸ್ ನಲ್ಲಿ ಸಂಬಂಧಿಸಿದರೆ ಲೈಲಾ-ಮಜ್ನು ಎಂಬ ಹಣೆಪಟ್ಟಿ ಸಿದ್ಧವಾಗಿಬಿಡುತ್ತದೆ. ಯಾವುದಾದರೂ ಪಬ್ಲಿಕ್ ಪ್ಲೇಸ್ ನಲ್ಲಿ ಭೇಟಿ ಮಾಡಿದರೆ ಪುಂಡರು ಹಿಂದೆ ಬೀಳುತ್ತಾರೆ.
ಹಾಗೆ ನೋಡಿದರೆ ಇಂದಿನ ದಿನಗಳಲ್ಲಿ ಇಂತಹ ಭೇಟಿಗೆ ಮಾಲ್ ಗಳು ಸೂಕ್ತ ಸ್ಥಳವೆನಿಸುತ್ತದೆ. ಆದರೆ ಅಲ್ಲಿ ಪರಿಚಿತರ ಕಣ್ಣಿಗೆ ಬೀಳುವ ಸಂಭವವಿರುತ್ತದೆ. ಜೊತೆಗೆ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗುವ ಸಾಧ್ಯತೆಯೂ ಇರುತ್ತದೆ. ಇವೆಲ್ಲಕ್ಕಿಂತ ಪಾರ್ಕ್ ನಂತಹ ಸ್ಥಳದಲ್ಲಿ ಇದಾವ ಭಯವೂ ಇರುದಿಲ್ಲ. ಅನಗತ್ಯ ಖರ್ಚೂ ಬೀಳುವುದಿಲ್ಲ ಎಂದು ಲೆಕ್ಕ ಹಾಕಿದರೆ, ಅಲ್ಲಿ ಪುಂಡ ಪೋಕರಿಗಳ ಕಾಟವನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.
ಹಿಂದೆ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಕಾತರಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಈ ಪ್ರೀತಿಯ ಪಕ್ಷಿಗಳು ಬಹಿರಂಗವಾಗಿ ಪ್ರಣಯ ಲೀಲೆಯಲ್ಲಿ ಮೈಮರೆತಿರುತ್ತವೆ. ಕೆಲವರು ಪಾರ್ಕ್ ನಲ್ಲಿ, ಕೆಲವರು ನಿರ್ಜನ ರಸ್ತೆಯ ಬದಿಯಲ್ಲಿದ್ದರೆ ಮತ್ತೆ ಕೆಲವರು ಖಾಲಿ ಕಟ್ಟಡಗಳ ಮರೆಯಲ್ಲಿ ಕುಳಿತು ಪ್ರೇಮ ಸಂಭಾಷಣೆಯಲ್ಲಿ ತಲ್ಲೀನರಾಗಿರುತ್ತಾರೆ.
ಆದರೆ ಈ ಜೋಡಿಗಳ ಪ್ರಣಯಲೀಲೆ ನಿರ್ವಿಘ್ನವಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರನ್ನು ಬೆದರಿಸಿ ಸುಲಿಗೆ ಮಾಡುವ ಮಂದಿ ಅಲ್ಲೇ ಸುಳಿದಾಡುತ್ತಿರುತ್ತಾರೆ. ಇಂಥವರು ವೇಷ ಬದಲಿಸಿ ಬರುವುದರಿಂದ ಅವರನ್ನು ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ.
ರೇಖಾ ಮತ್ತು ಸುನೀಲ್ ಒಳ್ಳೆಯ ಸ್ನೇಹಿತರು. ಕ್ರಮೇಣ ಅವರ ಸ್ನೇಹ ಪ್ರೇಮಕ್ಕೆ ತಿರುಗಿ ಅವರು ಆಗಾಗ ಭೇಟಿಯಾಗುತ್ತಿದ್ದರು. ಹೀಗೇ ಒಂದು ದಿನ ಅವರು ಪಾರ್ಕ್ ನಲ್ಲಿ ಬೆಂಚಿನ ಮೇಲೆ ಕುಳಿತು ಪ್ರೇಮ ಸಲ್ಲಾಪದಲ್ಲಿ ಮುಳುಗಿದರು. ರೊಮ್ಯಾಂಟಿಕ್ ಮೂಡ್ ನಲ್ಲಿದ್ದ ಅವರಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ಕಡೆಗೆ ಕತ್ತಲು ಮುಸುಕಿದಾಗ ರೇಖಾ ಎಚ್ಚೆತ್ತಳು.“ಸುನೀಲ್, ನಾವಿನ್ನು ಹೊರಡೋಣ ಬಹಳ ತಡವಾಗಿದೆ,” ಎಂದಳು ರೇಖಾ.
ಹೊರಡುವ ಮೊದಲು ಇಬ್ಬರೂ ಪ್ರೀತಿಯ ಆಲಿಂಗನದಲ್ಲಿ ಮೈ ಮರೆತಿದ್ದಾಗ ಇಬ್ಬರು ಪೊಲೀಸ್ ರು ಅಲ್ಲಿಗೆ ಬಂದರು. ಅವರಲ್ಲಿ ಒಬ್ಬನು ಸುನೀಲ್ ನ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ. ಮತ್ತೊಬ್ಬನು ರೇಖಾಳನ್ನು ಕೆಕ್ಕರಿಸಿ ನೋಡಿದ. ಸುನೀಲ್ ಮತ್ತು ರೇಖಾರಿಗೆ ಏನಾಗುತ್ತಿದೆ ಎಂದೇ ಅರ್ಥವಾಗಲಿಲ್ಲ. ಪೊಲೀಸರು ರೇಖಾಳ ಉಂಗುರ, ಸರ ಮತ್ತು ಸುನೀಲ್ ನ ಎಟಿಎಂ ಕಾರ್ಡ್ ಮತ್ತು ಮನಿಪರ್ಸ್ ನ್ನು ಕಿತ್ತುಕೊಂಡರು. ಅಲ್ಲದೆ, ಮತ್ತೆ ಈ ಪಾರ್ಕ್ ಗೆ ಬರಬಾರದೆಂದೂ ಮತ್ತು ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದೂ ಎಚ್ಚರಿಕೆ ನೀಡಿದರು.
ಆಗ ರೇಖಾ ಮತ್ತು ಸುನೀಲ್ ಬಹಳ ಹೆದರಿದರು. ಒಂದೂ ಮಾತನಾಡದೆ ಅಲ್ಲಿಂದ ಹೊರಟುಹೋದರು. ಆದರೆ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಸುಳಿದಾಡಿದವು. ಪೊಲೀಸ್ ನವರು ಹೀಗೇಕೆ ಮಾಡಿದರು? ಹೆಚ್ಚೆಂದರೆ ಗದರಿಸುತ್ತಾರೆ, ಎಚ್ಚರಿಸುತ್ತಾರೆ. ಆದರೆ ನಮ್ಮನ್ನು ಲೂಟಿ ಮಾಡಿದರಲ್ಲ ಎಂದು ಚಿಂತಿಸಿದರು. ಕಡೆಗೆ ಇಬ್ಬರೂ ಪೊಲೀಸ್ ಸ್ಟೇಷನ್ ಗೆ ಹೋಗೋಣವೆಂದು ಆಲೋಚಿಸಿದರು.
ಅವರು ಪೊಲೀಸ್ ಸ್ಟೇಷನ್ ಗೆ ಹೋಗಿ ಇನ್‌ಸ್ಪೆಕ್ಟರ್ ಜೊತೆಯಲ್ಲಿ ನಡೆದ ವಿಷಯವನ್ನೆಲ್ಲ ತಿಳಿಸಿದರು. ಹಾಗೆ ಮಾಡಿದವರು ಪೊಲೀಸ್ ರಲ್ಲ ಎಂದು ಇನ್‌ಸ್ಪೆಕ್ಟರ್ ಹೇಳಿದಾಗ ರೇಖಾ ಮತ್ತು ಸುನೀಲ್ ಬೆರಗಾಗಿ ಪರಸ್ಪರ ಮುಖ ನೋಡಿಕೊಂಡರು. ಪೊಲೀಸ್ ಅಲ್ಲದಿದ್ದರೆ ಅವರು ಮತ್ತಾರು ಎಂಬ ಪ್ರಶ್ನೆ ಅವರ ಮನಸ್ಸನ್ನು ಕೊರೆಯಿತು.`ಇಂತಹ ಜನರು ಬಹಳಷ್ಟು ಮಂದಿ ಇದ್ದು, ಅವರು ಪೊಲೀಸ್ ಅಥವಾ ಇತರೆ ವೇಷದಲ್ಲಿ ಹೊಂಚು ಹಾಕುತ್ತಾರೆ. ಪಾರ್ಕ್ ನಲ್ಲಿ ಭೇಟಿಯಾಗಿ ಮೈಮರೆತಿರುವ ಹದಿಹರೆಯದ ಜೋಡಿಗಳನ್ನು ಬೆದರಿಸಿ ಲೂಟಿ ಮಾಡುತ್ತಾರೆ. ಆದ್ದರಿಂದ ಅಂತಹ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು,’ ಎಂದು ಇನ್‌ಸ್ಪೆಕ್ಟರ್ ಸುನೀಲ್ ಮತ್ತು ರೇಖಾರಿಗೆ ತಿಳಿಸಿ ಹೇಳಿದರು. ನೀವು ಒಬ್ಬ ಪ್ರೇಮಿಯಾಗಿದ್ದು, ಪಾರ್ಕ್ ಗೆ ಹೋಗುವವರಾಗಿದ್ದರೆ ಅಲ್ಲಿ ಪುಂಡರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ವಿಷಯಗಳನ್ನು ಗಮನದಲ್ಲಿಡಿ :
ಭೇಟಿಯ ಸಮಯ ನಿಯಮಿತವಾಗಿರಲಿ.
ಆಭರಣ ಮತ್ತು ಹೆಚ್ಚು ಹಣ ಜೊತೆಯಲ್ಲಿ ಬೇಡ.
ಪೆಪ್ಪರ್ ಸ್ಪ್ರೇ ನಿಮ್ಮಲ್ಲಿರಲಿ.
ನಿರ್ಜನ ಪ್ರದೇಶಲ್ಲಿ ಸಾಯಂಕಾಲ ತಡವಾಗಿ ಉಳಿಯಬೇಡಿ.
ಒಂದೇ ಸ್ಥಳಕ್ಕೆ ನೀವು ಮತ್ತೆ ಮತ್ತೆ ಹೋದರೆ, ನಿಮ್ಮ ಉಡುಗೆ ತೊಡುಗೆ ಸರಳವಾಗಿರಲಿ.
(ವುಮನ್) ಹೆಲ್ಪ್ ಲೈನ್ ನಂಬರ್ ಜೊತೆಯಲ್ಲಿರಿಸಿಕೊಳ್ಳಿ.
ನಿಮ್ಮ ಫೋನ್‌ಲೊಕೇಶನ್ ಆನ್ ಆಗಿರಲಿ.
ಬೇರೆಯವರನ್ನು ನಿಮ್ಮತ್ತ ಆಕರ್ಷಿಸುವಂತಹ ಯಾವುದೇ ಕೆಲಸ ಮಾಡಬೇಡಿ.
ಇಂದಿನ ದಿನಗಳಲ್ಲಿ ಸುಲಿಗೆ ಮಾಡುವುದು ಒಂದು ಕಸುಬಾಗಿಬಿಟ್ಟಿದೆ. ಪ್ರೇಮಿಗಳು ಇರುವೆಡೆಯಲ್ಲೇ ಸುಲಿಗೆಕೋರರು ಸುತ್ತುತ್ತಿರುತ್ತಾರೆ.
ಆದ್ದರಿಂದ ನಿರ್ಜನ ಸ್ಥಳಗಳಲ್ಲಿ ಏಕಾಂತದಲ್ಲಿ ಕೂರದಿರುವುದು ಒಳ್ಳೆಯದು. ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಪಾರ್ಟ್‌ನರ್ ನ್ನು ಭೇಟಿ ಮಾಡಿ. ಆಗ ಯಾರೂ ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಾಗುವುದಿಲ್ಲ.
– ಪ್ರೇಮಲತಾ
ಪೊಲೀಸರ ಯೂನಿಫಾರ್ಮ್ ಕಂಡರೆ ಜನರು ಹೆದರುತ್ತಾರೆ. ಆ ಡ್ರೆಸ್ ಗೆ ಅಂತಹ ವರ್ಚಸ್ಸು ಇರುತ್ತದೆ. ಹಾಗಿರುವಾಗ ಅಂತಹ ಡ್ರೆಸ್ ತೊಟ್ಟಿರುವ ಕಪಟಿ ಪೊಲೀಸರನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನಕಲಿ ಪೊಲೀಸರನ್ನು ಪತ್ತೆ ಹಚ್ಚಲು ಇಲ್ಲಿದೆ ಕೆಲವು ಟಿಪ್ಸ್ :
ನಕಲಿ ಪೊಲೀಸರ ಶರ್ಟ್ ಮೇಲೆ ನೇಮ್ ಬ್ಯಾಡ್ಜ್ ಇರುವುದಿಲ್ಲ.
ಪೊಲೀಸರ ಬೂಟುಗಳು ಬ್ರೌನ್ ಬಣ್ಣದ್ದಾಗಿರುತ್ತವೆ. ನಕಲಿ ಪೊಲೀಸರು ಈ ಬಗ್ಗೆ ಹೆಚ್ಚು ಗಮನ ಕೊಡದೆ ಯಾವುದೋ ಬೂಟನ್ನು ಧರಿಸಿರುತ್ತಾರೆ. ಇದರಿಂದ ಅವರನ್ನು ಪತ್ತೆ ಹಚ್ಚಬಹುದು.
ಯಾವುದೇ ಪೊಲೀಸರು ಸಣ್ಣಪುಟ್ಟ ವಿಷಯಕ್ಕೆ ನಿಮ್ಮ ಮೇಲೆ ಕೈ ಮಾಡುವುದಿಲ್ಲ ಮತ್ತು ಬಾಯಿಗೆ ಬಂದಂತೆ ಮಾತನಾಡುವುದಿಲ್ಲ.
ಅವರ ಕೂದಲಿನ ರೀತಿ ಒಂದು ನಮೂನೆಯಾಗಿರುತ್ತದೆ.
ನಿಜವಾದ ಪೊಲೀಸರು ನಿಮ್ಮೊಂದಿಗೆ ಶಿಷ್ಟಾಚಾರದಿಂದ ವರ್ತಿಸುತ್ತಾರೆ.