ಕೆಲವು ದಿನಗಳ ಹಿಂದೆ ನ್ಯೂಯಾರ್ಕ್‌ ನ ವೈದ್ಯರೊಬ್ಬರ ಬಳಿ ಯುವತಿಯೊಬ್ಬಳು ತನ್ನ ಕಾಲಿನ ಉಗುರಿನ ಸಮಸ್ಯೆಯೊಂದಿಗೆ ಬಂದಿದ್ದಳು. ಅವಳ ಕಾಲಿನ ಉಗುರುಗಳು ಕಪ್ಪಗಾಗಿದ್ದವು. ಅಷ್ಟೇ ಅಲ್ಲ, ಅವು ಕಿತ್ತು ಬಂದಿದ್ದವು. ಆಕೆಯ ಕುಟುಂಬದಲ್ಲಿ ಬೇರಾರಿಗೂ ಈ ರೋಗದ ಇತಿಹಾಸ ಇರಲಿಲ್ಲ. ಪರೀಕ್ಷೆಯ ಬಳಿಕ ತಿಳಿದು ಬಂದ ಸಂಗತಿಯೆಂದರೆ, 6 ತಿಂಗಳ ಹಿಂದೆ ಆಕೆ `ಫಿಶ್ ಪೆಡಿಕ್ಯೂರ್‌’ ಮಾಡಿಸಿಕೊಂಡಿದ್ದಳು. ಈ ವಿಧಾನದಲ್ಲಿ ಕಾಲುಗಳನ್ನು ಫಿಶ್‌ ಟ್ಯಾಂಕ್‌ ನಲ್ಲಿ ಇಳಿಬಿಟ್ಟು ಕುಳಿತುಕೊಳ್ಳಬೇಕಾಗುತ್ತದೆ. ಮೀನುಗಳು ಆಕೆಯ ಉಗುರುಗಳ ಅಕ್ಕಪಕ್ಕದ ಚರ್ಮವನ್ನು ತಿಂದು ಹಾಕಿದ್ದವು. ಹೀಗಾಗಿ ಆಕೆಗೆ `ಆನಿಕೊಮೊಡೆಸಿಸ್‌’ ಎಂಬ ರೋಗ ಬಂದಿತ್ತು. ಈ ರೋಗ ಬಂದುಬಿಟ್ಟರೆ ಉಗುರುಗಳ ಬೆಳವಣಿಗೆ ನಿಂತು ಹೋಗುತ್ತದೆ. ಜೊತೆಗೆ ಅವು ಚರ್ಮದಿಂದ ಬೇರ್ಪಡುತ್ತವೆ.

ಈ ಪ್ರಕರಣ ತ್ವಚೆ ರೋಗಗಳ ಪತ್ರಿಕೆ `ಜಾಮಾ ಡರ್ಮಾಟಾಲಜಿ’ಯಲ್ಲಿ ಕೂಡ ಪ್ರಕಟವಾಗಿತ್ತು. ಫಿಶ್‌ ಪೆಡಿಕ್ಯೂರ್‌ ನಿಂದ ಸ್ಟೆಫ್ಟಿಯೊಕಾಕಸ್‌ ಮತ್ತು ಮೈಕೊ ಬ್ಯಾಕ್ಟೀರಿಯಾಸಿಸ್‌ ಎಂಬ ರೋಗ ಉಂಟಾಗುತ್ತದೆ. ಅದರಿಂದ ಚರ್ಮಕ್ಕೆ ಸಂಬಂಧಪಟ್ಟ ಹಲವು ರೋಗಗಳು ಇಡೀ ದೇಹಕ್ಕೆ ವ್ಯಾಪಿಸಬಹುದು.

ಕೊಳೆತ ಕಾಲುಗಳ ಆಹಾರ

ಸ್ಟೆಪಿಯೋಕಾಕಸ್‌ ಒಂದು ರೀತಿಯ ಗುಪ್ತಗಾಮಿನಿ. ಅದು ಹಲವು ವರ್ಷಗಳ ಕಾಲ ದೇಹದಲ್ಲಿ ನಿಷ್ಕ್ರಿಯಾಗಿರುತ್ತದೆ. ಒಮ್ಮೆ ಅದು ಸಕ್ರಿಯಗೊಂಡರೆ ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ರಕ್ತದಲ್ಲಿ ಪ್ರವೇಶಿಸಿ ಈ ಬ್ಯಾಕ್ಟೀರಿಯಾ ದೇಹದ ಬೇರೆ ಅಂಗಗಳಿಗೂ ದಾಳಿ ಮಾಡಬಹುದು. ಆ ಸಮಯದಲ್ಲಿ ಆ್ಯಂಟಿಬಯಾಟಿಕ್‌ ಕೊಡದೇ ಹೋದರೆ ಬದುಕುಳಿಯುವ ಸಾಧ್ಯತೆ ಶೇ.20ರಷ್ಟು ಮಾತ್ರ ಇರುತ್ತದೆ. ಆ್ಯಂಟಿಬಯಾಟಿಕ್‌ ನಿಂದ ಚಿಕಿತ್ಸೆ ಸಾಕಷ್ಟು ಫಲಪ್ರದ ಎನಿಸುತ್ತದೆ.

ಫಿಶ್‌ ಪೆಡಿಕ್ಯೂರ್‌ ವಾಸ್ತವದಲ್ಲಿ ಕುರುಡು ಮೋಹದ ಫ್ಯಾಷನ್‌ ನಡಿಗೆಯಾಗಿದ್ದು, ದೇಶದ ಬಹಳಷ್ಟು ಪಾರ್ಲರ್‌ ಗಳಲ್ಲಿ ಅದರ ಅಂಧಾನುಕರಣೆ ನಡೆಯುತ್ತಿದೆ. ಥೈಲ್ಯಾಂಡ್‌, ಕಾಂಬೋಡಿಯಾ, ಸಿಂಗಪುರ ಮುಂತಾದ ಕಡೆ ಮಾರುಕಟ್ಟೆಯ ಟ್ಯಾಂಕ್‌ ಗಳಲ್ಲಿ ತೇಲುವ ಮೀನುಗಳು ಕಂಡುಬರುತ್ತವೆ. ಅದರಲ್ಲಿ ಜನರು ಕಾಲುಗಳನ್ನು ಇಳಿಬಿಟ್ಟುಕೊಂಡು `ಫಿಶ್‌ ಪೆಡಿಕ್ಯೂರ್‌’ ಮಾಡಿಕೊಳ್ಳುತ್ತಾರೆ. ಇದೊಂದು ಪ್ರಚಾರದ ಚಂತ್ರ. ಮೀನುಗಳು ವೈದ್ಯರಾಗಿರದಿದ್ದರೂ ಅವನ್ನು ಪೆಡಿಕ್ಯೂರ್‌ ಎಕ್ಸ್ ಪರ್ಟ್‌ ಎಂದು ಭಾವಿಸಲಾಗುತ್ತದೆ.

`ಗಾರಾ ರಫಾ’ ಹೆಸರಿನ ಚಿಕ್ಕ ಮೀನುಗಳು ಕಾಲಿನ ಚರ್ಮದ ಚಿಕ್ಕ ಚಿಕ್ಕ ತುಂಡುಗಳನ್ನು ತಿಂದುಬಿಡುತ್ತವೆ. ಏಕೆಂದರೆ ಅವನ್ನು ಹಸಿವಿನಿಂದ ಇಡಲಾಗುತ್ತದೆ. ಈ ಮೀನುಗಳನ್ನು ಭಾರತಕ್ಕೆ ಆಮದು ಮಾಡಲಾಗುತ್ತದೆ. ಅವುಗಳಿಗೆ ನೈಸರ್ಗಿಕ ಆಹಾರ ದೊರೆಯುವುದಿಲ್ಲ. ಗ್ರಾಹಕರ ಕಾಲುಗಳ ಕೊಳೆತ ಚರ್ಮವನ್ನೇ ತಿನ್ನಬೇಕಾದ ಅನಿವಾರ್ಯತೆ ಅವುಗಳಿಗಿರುತ್ತದೆ. ಅವುಗಳ ಕಚ್ಚುವಿಕೆಯಿಂದ ಆಗುವ ಕಚಗುಳಿಯನ್ನೇ ಗ್ರಾಹಕರು ಪೆಡಿಕ್ಯೂರ್‌ ಎಂದು ಭಾವಿಸುತ್ತಾರೆ.

ಮನರಂಜನೆಯ ಹೆಸರಿನಲ್ಲಿ ನಿರ್ಲಕ್ಷ್ಯ

ಈ ಮೀನುಗಳ ನೀರು ಸಾಮಾನ್ಯವಾಗಿ ಶುದ್ಧವಾಗಿರುವುದಿಲ್ಲ. ಸತ್ತ ಮೀನುಗಳ ಅವಶೇಷ ಹಾಗೂ ಜೀವಂತ ಮೀನುಗಳ ಮಲ ಕೂಡ ನೀರಿನಲ್ಲಿ ವಿಲೀನವಾಗುತ್ತದೆ. ಇದೆಲ್ಲ ಗ್ರಾಹಕರ ಕಾಲುಗಳ ಸಂದುಗಳಲ್ಲಿ ನುಸುಳುತ್ತ ಇರುತ್ತದೆ. ಅದರಲ್ಲಿ ಬಗೆಬಗೆಯ ಬ್ಯಾಕ್ಟೀರಿಯಾಗಳು ಇರುತ್ತವೆ. ಅದರಿಂದ ಹೆಪಟೈಟಿಸ್‌ `ಸಿ’ ಹಾಗೂ ಎಚ್‌ಐವಿಯಂಥ ಮಾರಕ ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಅಂದಹಾಗೆ ಈ ಮೀನುಗಳಿಗೆ ತರಬೇತಿಯೇನೂ ಇರುವುದಿಲ್ಲ. ಹಾಗಾಗಿ ಆ ಮೀನುಗಳು ಕಾಲಿನ ಯಾವ ಭಾಗವನ್ನು ಬೇಕಾದರೂ ಕಚ್ಚಿ ಸೂಕ್ಷ್ಮ ಗಾಯಗಳನ್ನು  ಮಾಡಬಹುದು. ಆ ಗಾಯಗಳನ್ನು ಆ್ಯಂಟಿಬಯಾಟಿಕ್‌ ನಿಂದಷ್ಟೇ ಗುಣಪಡಿಸಬಹುದು. ಒಂದು ವೇಳೆ ಬ್ಯಾಕ್ಟೀರಿಯಾ ರಕ್ತನಾಳಗಳಲ್ಲಿ ಸೇರಿಕೊಂಡರೆ ಅಪಾಯ ಹೆಚ್ಚುತ್ತದೆ.

ಕೆಲವು ದೇಶಗಳಲ್ಲಿ ಈ ರೀತಿಯ ಸ್ಪಾಗಳ ಮೇಲೆ ನಿಷೇಧ ಹೇರಲಾಗಿದೆ. ಆದರೆ ಮತ್ತೆ ಕೆಲವು ದೇಶಗಳು ಪ್ರವಾಸಿಗರಿಗೆ ಮನರಂಜನೆಯ ಹೆಸರಿನಲ್ಲಿ ಅದಕ್ಕೆ ಅವಕಾಶ ಕೊಡುತ್ತಿವೆ. ಭಾರತದಲ್ಲಿ ಈವರೆಗೂ ಇದರ ಮೇಲೆ ಯಾವುದೇ ನಿಷೇಧ ಹೇರಿಲ್ಲ. 8 ರೂ.ನಿಂದ ಹಿಡಿದು 30 ರೂ.ತನಕ ಅಂತಹ ಮೀನುಗಳನ್ನು ತರಿಸಿ ಫಿಶ್‌ ಪೆಡಿಕ್ಯೂರ್‌ ನಡೆಸಲಾಗುತ್ತದೆ.

ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ