ಬೆಂಗಳೂರಿನಿಂದ ಕಾರವಾರ ಹಾಗೂ ಕಾರವಾರದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಹಗಲು ರೈಲು ಸಂಚರಿಸುತ್ತದೆ. ಈ ರೈಲು ಬೆಂಗಳೂರಿನಿಂದ ಉಡುಪಿ -ಕುಂದಾಪುರ ಮಾರ್ಗದಲ್ಲಿ ಕಾರವಾರಕ್ಕೆ ಹೋಗುತ್ತದೆ. ಕಾರವಾರದಿಂದ ಇದೇ ಮಾರ್ಗದಲ್ಲಿ ಬೆಂಗಳೂರು ತಲುಪುತ್ತದೆ. ಯಶವಂತಪುರ ರೈಲು ನಿಲ್ದಾಣದಿಂದ ಸೋಮವಾರ ಬುಧವಾರ ಶುಕ್ರವಾರ ಬೆಳಗ್ಗೆ ಹೊರಟು ರಾತ್ರಿ ವೇಳೆಗೆ ಕಾರವಾರ ತಲುಪುತ್ತದೆ. (ರೈಲು ಸಂಖ್ಯೆ 6515). ಕಾರವಾರದಿಂದ ಮಂಗಳಾರ ಗುರುವಾರ ಶನಿವಾರ ಬೆಳಗ್ಗೆ ಹೊರಟು ರಾತ್ರಿ ವೇಳೆಗೆ ಯಶವಂತಪುರ ತಲುಪುತ್ತದೆ. (ರೈಲು ಸಂಖ್ಯೆ 6516) ಪಶ್ಚಿಮ ಘಟ್ಟಗಳ ಮಧ್ಯೆ ಅತಿ ಎತ್ತರದಲ್ಲಿ ಸಾಗುವ ಈ ರೈಲು ಮುಂಚೆ ಮಂಗಳೂರುವರೆಗೆ ಮಾತ್ರ ಹೋಗುತ್ತಿತ್ತು. ಈಗ ಕಾರವಾರದವರೆಗೆ ವಿಸ್ತರಿಸಲಾಗಿದೆ. ಮಂಗಳೂರಿನಿಂದ ಕಾರವಾರಕ್ಕೆ ಸಮುದ್ರದ ಅಂಚಿನಲ್ಲಿಯೇ ಹೋಗುವವ ಈ ರೈಲಿನ ಪ್ರಯಾಣ ಹಿತಕರವಾಗಿರುತ್ತದೆ. ಕಾರವಾರದಿಂದ ಬೆಳಗ್ಗೆ ಬರುವಾಗ ಮರಂತೆ ಬೀಚ್ ನೋಡಬಹುದು.
ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಹಿತಕರ ಅನುಭವ. ಸಕಲೇಶಪುರ ದಾಟಿದ ನಂತರ 10 ಕಿ.ಮೀ. ದೂರದಲ್ಲಿರುವ `ದೋಣಿಗಾಲ್’ ರೈಲು ನಿಲ್ದಾಣದಿಂದ ಮುಂದಕ್ಕೆ ಕಣ್ಮನ ಸೆಳೆಯುವ ನಿಸರ್ಗ ಸೌಂದರ್ಯ ಪ್ರಾರಂಭವಾಗುತ್ತದೆ. ಬೆಟ್ಟ ಗುಡ್ಡಗಳು, ಗಿರಿ ಕಂದರಗಳು, ಕಣಿವೆಗಳು, ಬೆಳ್ಳನೆ ನೊರೆಯಂತೆ ಕಾಣುವ ಝರಿಗಳು, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಹಸಿರಿನ ವನರಾಶಿ ಕಾಣಿಸುತ್ತವೆ. ಈ ರೈಲು ಮಾರ್ಗದಲ್ಲಿ ಚಲಿಸುವ ರೈಲು ಸುರಂಗಗಳ ಮೂಲಕ ಹಾಗೂ ಅತ್ಯಂತ ಆಳವಿರುವ ಕಣಿವೆಗಳು ಮತ್ತು ಎತ್ತರವಿರುವ ಸೇತುವೆಗಳ ಮಧ್ಯೆ ಸಾಗುತ್ತದೆ. ಪ್ರಕೃತಿಯ ಮಡಿಲಲ್ಲಿ ಸುಮಾರು 55 ಕಿ.ಮೀ. ದೂರ ಕ್ರಮಿಸುವ ಈ ರೈಲು ಮಾರ್ಗದಲ್ಲಿ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ 57 ಸುರಂಗಗಳು, 80-100 ಸಣ್ಣ ಹಾಗೂ ದೊಡ್ಡ ಪ್ರಮಾಣದ ಸೇತುವೆಗಳಿವೆ. ಸೇತುವೆಗಳಲ್ಲಿ ಅರ್ಧ ಚಂದ್ರಾಕೃತಿಯ ಸೇತುವೆಯು ಅತಿ ಸುಂದರವಾಗಿದೆ. ಸುಮಾರು ಅರ್ಧ ಕಿ.ಮೀ. ಉದ್ದದ ಸುರಂಗಗಳೂ ಇವೆ.
ದೋಣಿಗಾಲ್ ರೈಲು ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣದವರೆಗಿನ 55 ಕಿ.ಮೀ. ಅತ್ಯಂತ ಕಠಿಣವಾದ ಮಾರ್ಗ. ಈ ಭಾಗದಲ್ಲಿ ರೈಲು ಒಂದು ಸಾವಿರ ಅಡಿಗಳ ಎತ್ತರದಲ್ಲಿ ಬೆಟ್ಟಗುಡ್ಡಗಳ ನಡುವೆ, ಸುರಂಗ ಸೇತುವೆಗಳ ಮಧ್ಯೆ ಸಂಚರಿಸುತ್ತದೆ. ಇವೆರಡು ನಿಲ್ದಾಣಗಳ ಮಧ್ಯೆ ಎಡಕುಮೇರಿ ಹಾಗೂ ಶಿರಿಬಾಗಿಲು ಎಂಬ ರೈಲು ನಿಲ್ದಾಣಗಳಿವೆ. ಎಡಕುಮೇರಿ ನಿಲ್ದಾಣದಲ್ಲಿ ಕಾಣುವ ಪರ್ವತಗಳು ಸೂರ್ಯೋದಯ ಹಾಗೂ ಸೂರ್ಯಾಸ್ತಮಾನದಲ್ಲಿ ಬಂಗಾರದ ಹೊಂಬಣ್ಣದಂತೆ ಕಾಣಿಸುತ್ತವೆ. ಈ ಭಾಗದಲ್ಲಿ ಬರುವ ಶಿರಿಬಾಗಿಲು ಸೇತುವೆ 583 ಮೀಟರ್ ಉದ್ದವಿದ್ದು, 120 ಅಡಿಗಳಷ್ಟು ಎತ್ತರವಿದೆ.
ದೋಣಿಗಾಲ್ ನಿಂದ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣದ ಕಡೆಗೆ ಪ್ರಯಾಣಿಸುವಾಗ ಬಲಭಾಗದಲ್ಲಿ ಕೆಂಪು ಹೊಳೆ, ಹಾವಿನಂತೆ ಅಂಕುಡೊಂಕಾಗಿ ಕಾಣುವ ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಅಲ್ಲಿ ಸಾಗುವ ಬಸ್ಸು, ಲಾರಿ, ಕಾರುಗಳು ಬೆಂಕಿಪೊಟ್ಟಣದ ಗಾತ್ರದಲ್ಲಿ ಕಾಣಿಸುತ್ತವೆ. ಎಡಭಾಗದಲ್ಲಿ ಮುಗಿಲೆತ್ತರಕ್ಕೆ ಬೆಳೆದ ಮರಗಳು, ಗಿರಿಶಿಖರಗಳು ಕಾಣಿಸುತ್ತವೆ.
ಸಕಲೇಶಪುರದಿಂದ ಮಂಗಳೂರು 140 ಕಿ.ಮೀ. ದೂರವಿದ್ದು, ರೈಲು ಪ್ರತಿ 50 ಮೀಟರ್ ಕ್ರಮಿಸಿದಾಗ ಒಂದು ಮೀಟರ್‌ಕೆಳಗಿಳಿಯುವಂತೆ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. ಅಂದರೆ, ಒಂದು ಕಿ.ಮೀ. ದೂರಕ್ಕೆ ರೈಲು 20 ಮೀಟರ್ ಕೆಳಗಿಳಿಯುತ್ತದೆ. ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಘಟ್ಟ ಪ್ರದೇಶವಾಗಿದ್ದು, ರೈಲು ಇಳಿಜಾರಿನಲ್ಲಿ ಹೋಗುವುದರಿಂದ ರೈಲಿಗೆ ಮುಂಭಾಗದಲ್ಲಿ ಮತ್ತೊಂದು ಎಂಜಿನ್ ಜೋಡಿಸುತ್ತಾರೆ. ಎರಡನೇ ಎಂಜಿನ್ ಬ್ರೇಕ್ ನಂತೆ ಕೆಲಸ ಮಾಡಿ ಸರಿದೂಗಿಸಿಕೊಂಡು ಹೋಗಲು ಈ ವ್ಯವಸ್ಥೆ ಮಾಡಿರುತ್ತಾರೆ. ಹಾಗೆಯೇ ಕುಕ್ಕೆಸುಬ್ರಹ್ಮಣ್ಯದಿಂದ ಸಕಲೇಶಪುರದ ಕಡೆಗೆ ಏರು ದಾರಿ ಇರುವುದರಿಂದ ಮುಂಭಾಗ ಹಾಗೂ ಹಿಂಭಾಗದಲ್ಲಿ ಒಂದೊಂದು ಎಂಜಿನ್ ಜೋಡಿಸುತ್ತಾರೆ.
ಈ ರೈಲು ಮಾರ್ಗಕ್ಕೆ 50ರ ದಶಕದಲ್ಲಿ ಸರ್ವೆ ನಡೆದು 60ರ ದಶಕದಲ್ಲಿ ಕಾಮಗಾರಿ ಆರಂಭವಾಗಿ 1979ರಲ್ಲಿ ರೈಲು ಸಂಚಾರ ಪ್ರಾರಂಭವಾಯಿತು. ಕುಟುಂಬದ ಸದಸ್ಯರೊಂದಿಗೆ ಈ ರೈಲಿನಲ್ಲಿ ಪ್ರಯಾಣ ಮಾಡಿ ಪ್ರಕೃತಿಯ ನೋಟವನ್ನು ಸವಿಯಿರಿ.
– ಡಿ.ಎಸ್. ಚಂದ್ರಕುಮಾರ್