ಕಾಶಿಗಿದುಂ ಮಿಗಿಲು ಕೇದಾರಕ್ಕಿಂತ ಅಧಿಕ ಶ್ರೀಶೈಲಕ್ಕಂ ಮೇಲು ಹಂಪಿಗಿದಂ

ಪೆರ್ಚು ವೀರ ಶೈವಾಚಾರ ಸಂಪನ್ನರಿಂ ವಿಪುಳ

ವೀರ ಮಾಹೇಶ್ವರ ಸಂದೋಹದಿಂ ಪರಮವೀರ ನಿಷ್ಠರಿಂ ದುಷ್ಟ ನಿಗ್ರಹ ಶಿಷ್ಟ

ಪರಿಪಾಲರಿಂ ಮಾರರಿಪು ಪೌರಾಣ ಶಾಸ್ತ್ರ ಕಾವ್ಯ ಗಳಂ ಚಾರು ಸದ್ಭಕ್ತಿಯಿಂ

ಕೇಳಿ ಉತ್ಸಾಹಗೈ ವೀರಭಕ್ತ ಪ್ರತೀತಿಯಿಂ ದೊರೆತಪ್ಪುದಾ ಶಿವನ ಕೊರಳ ಮಾಲೆ

ಪೂಮಾಲೆ ಹೂಲಿ   (ಗುರುರಾಜ ಚರಿತ್ರೆ)

ಹೀಗೆ ಇತಿಹಾಸ ಮತ್ತು ಪುರಾಣ ಶಾಸ್ತ್ರಗಳಲ್ಲಿ ವರ್ಣಿತವಾದ ನೂರೊಂದು ದೇವಾಲಯಗಳು ನೂರೊಂದು ಬಾವಿಗಳನ್ನು ಹೊಂದಿದ ಗ್ರಾಮ ಹೂಲಿ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಐತಿಹಾಸಿಕ ಸ್ಥಳ. ಇದನ್ನು ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ. ಪ್ರಮುಖ ಸಾಂಸ್ಕೃತಿಕ ನೆಲೆಯಾಗಿ, ಸಾವಿರ ಪಂಡಿತರಿಂದ ಶೋಭಿಸಿದ ಅಗ್ರಹಾರವಾಗಿದ್ದ ಹೂಲಿಯ ದೇವಾಲಯಗಳಿಂದು ಪೋಷಣೆಯಿಲ್ಲದೆ ಸೊರಗುತ್ತಿವೆ.

ಹೂಲಿ ಗ್ರಾಮ ಸವದತ್ತಿಯಿಂದ ಪೂರ್ವಕ್ಕೆ ಸುಮಾರು 9 ಕಿ.ಮೀ. ಅಂತರದಲ್ಲಿದ್ದು ಸವದತ್ತಿಯಿಂದ ರಾಮದುರ್ಗ, ಜಮಖಂಡಿ, ವಿಜಾಪುರಗಳಿಗೆ ಸಂಚರಿಸುವ ಎಲ್ಲ ಬಸ್‌ ಗಳೂ ನಿಲುಗಡೆ ಹೊಂದಿವೆ. ಕೃತಯುಗದಲ್ಲಿ ಕಾರ್ತವೀರ್ಯಾರ್ಜುನನ ರಾಜಧಾನಿಯೆಂದೂ ಎಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾದ ಹೂಲಿಯನ್ನು ಇಲ್ಲಿ ಲಭ್ಯವಾದ  ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ, ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಎಲ್ಲಮ್ಮ ಚರಿತೆಯಲ್ಲಿ ಧರ್ಮವರ್ಧನ ಎಂಬ ರಾಜನು ಇಲ್ಲಿ ಆಳುತ್ತಿದ್ದನಂತೆ.

ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳುಹಿಸುತ್ತಾನೆ ಎಂಬ ದೃಷ್ಟಾಂತ, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತಮುತ್ತಲಿನ ಸ್ಥಳಗಳ ಕೆಲವು ದೃಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿ ಹೂಲಿ ಖ್ಯಾತಿಯಾಗಿದೆ.

ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದ ವೀರಗಲ್ಲುಗಳು, ಮಹಾಸತಿಕಲ್ಲು, ಶಾಸನಗಳು, ವೈಷ್ಣವ, ಶೈವ, ಜೈನ ದೇವಾಲಯಗಳು, ಮಠಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವಂಥ ದಾಖಲೆಗಳು ಇಲ್ಲಿ ಲಭ್ಯ. ನೂರೊಂದು ದೇಗುಲಗಳಲ್ಲಿ ಬಹಳಷ್ಟು ದೇವಾಲಯಗಳು ಹಾಳಾಗಿದ್ದು ಅವುಗಳಿಗೆ ರಕ್ಷಣೆ ಇಲ್ಲದಾಗಿದ್ದು ಕೆಲವು ದೇವಾಲಯಗಳು ಮಾತ್ರ ತಮ್ಮ ವಾಸ್ತುಶಿಲ್ಪ ಕಲೆಯನ್ನು ಉಳಿಸಿಕೊಂಡಿವೆ. ಮದನೇಶ್ವರ ದೇವಾಲಯ, ಅಂಧಕೇಶ್ವರ ದೇವಾಲಯ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ ದೇವಾಲಯ, ವೀರಭದ್ರ, ಕಲ್ಲೇಶ್ವರ, ಅಗಸ್ತ್ಯೇಶ್ವರ, ಪಂಚಲಿಂಗೇಶ್ವರ ದೇವಾಲಯಗಳು ಹಾಗೂ ಪುರಾತನ ಬಾವಿಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಗ್ರಾಮದ ಬಸ್‌ ನಿಲ್ದಾಣದಿಂದ ಇಳಿದು ಕಾಲ್ನಡಿಗೆಯಿಂದ ಬಂದರೆ ಸಿಗುವ ದೇಗುಲವೇ ಪಂಚಲಿಂಗೇಶ್ವರ ದೇವಾಲಯ. ಇದನ್ನು ಪುರಾತತ್ವ ಇಲಾಖೆಯವರು ಸಂರಕ್ಷಿಸಿದ್ದು, ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ. 1044ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು, ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನೂ ಈ ದೇವಾಲಯ ಒಳಗೊಂಡಿದೆ.

ಈ ದೇವಾಲಯದಲ್ಲಿ ವಿಶಾಲವಾದ 20 ಕಂಬಗಳ ಅಂತರಾಳವಿದೆ. ಮೇಲ್ಛಾವಣಿಯಲ್ಲಿ ಕಮಲಗಳನ್ನು ಬಿಡಿಸಲಾಗಿದ್ದು ಎದುರಿನ ವಿಶಾಲವಾದ ಮುಖಮಂಟಪದಲ್ಲಿ 50 ಕಂಬಗಳಿದ್ದು ಇದು ಮೂರು ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿಂದ ಕೂಡಿದ ಭವ್ಯವಾದ ಮುಖಮಂಟಪ ಹೊಂದಿದೆ. ಸುಂದರ ವಿನ್ಯಾಸದ ಆಕರ್ಷಕ ಕೆತ್ತನೆ ಇದರ ವಿಶೇಷ, ಗರ್ಭಗೃಹಕ್ಕೆ ಎದುರಾಗಿ ನಂದಿ, ಅದರ ಬಲಕ್ಕೆ ವಿಷ್ಣು, ಎಡಕ್ಕೆ ಗಣೇಶ ವಿಗ್ರಹಗಳಿವೆ. ಹೂಲಿ ಆರಂಭದಲ್ಲಿ ಜೈನ ಪರಂಪರೆಯನ್ನು ಹೊಂದಿದ್ದು ಕಾಲಾನಂತರ ಇಲ್ಲಿ ಆಳಿದ ರಾಜಮಹಾರಾಜರು ಶೈವ, ವೈಷ್ಣವರಾಗಿರುವ ಕಾರಣ ಇಲ್ಲಿ ಸರ್ವಧರ್ಮಗಳ ಸಮನ್ವಯತೆ ಕಾಣಬಹುದು. ರಾಘವಾಂಕ ಕವಿ, ಲೇಖಕ ಚಿಕ್ಕ ನಂಜೇಶ ಈ ಗ್ರಾಮಕ್ಕೆ ಸೇರಿದರು. ಈತ ಹೂಲಿಯನ್ನು ಪೂಲ್ಲಿ ಎಂದು ಕರೆದಿರುವನು. ಇನ್ನು ಮದನೇಶ್ವರ ದೇವಾಲಯದಲ್ಲಿ ದೊರೆತ ದಾಖಲೆಗಳ ಪ್ರಕಾರ ಹೂಲಿ ದೇವಗುರು ಪರಂಪರೆ ಹೊಂದಿದ್ದು ಈ ಪರಂಪರೆಯಲ್ಲಿ ವ್ಯಾಕರಣ ತರ್ಕಗಳಲ್ಲಿ ಸಾಕಷ್ಟು ವಿದ್ವತ್ತು ಸಾಧಿಸಿದ ವಿದ್ವಾಂಸರು, ಋಷಿಮುನಿಗಳು ಇದ್ದರೆಂದು ತಿಳಿಯಬಹುದು.

ಪಂಚಲಿಂಗೇಶ್ವರ ದೇವಾಲಯವನ್ನು ವೀಕ್ಷಿಸಿ ಕೆರೆಯ ದಡದತ್ತ ಸಾಗಿದರೆ ಅಲ್ಲಿ ಹಲವಾರು ದೇವಾಲಯಗಳು ಅನಾಥ ಸ್ಥಿತಿಯಲ್ಲಿ ನಿಮ್ಮನ್ನು ತಮ್ಮ ಅಚ್ಚರಿಯ ಶಿಲ್ಪಕಲೆ ಮೂಲಕ ಕೈಬೀಸಿ ಕರೆಯುತ್ತವೆ. ದ್ರಾವಿಡ ಶೈಲಿಯ ಅಗಸ್ತ್ಯೇಶ್ವರ ದೇವಾಲಯ, ಭೀಮೇಶ್ವರ ದೇವಾಲಯ, ಕರಿಸಿದ್ದೇಶ್ವರ ದೇವಾಲಯ ಹೀಗೆ ದೇವಾಲಯಗಳ ಸಮುಚ್ಚಯವೇ ಇದೆ. ಶಿಥಿಲಾವಸ್ಥೆಯಲ್ಲಿರುವ ಈ ಎಲ್ಲ ದೇಗುಲಗಳನ್ನು ನೋಡಿದರೆ ಕರುಳು ಕಿತ್ತುಬರುತ್ತದೆ. ಐಹೊಳೆ, ಪಟ್ಟದಕಲ್ಲಿನಲ್ಲಿ ದೇವಾಲಯಗಳನ್ನು ಸಂರಕ್ಷಿಸಿದ ಹಾಗೆ ಇವುಗಳನ್ನು ಸಂರಕ್ಷಿಸಿದ್ದರೆ ಇದು ಒಂದು ದೇವಾಲಯಗಳ ತೊಟ್ಟಿಲು ಆಗಲು ಸಾಧ್ಯವಿತ್ತು ಅನ್ನಿಸದೇ ಇರದು.

ಬೆಟ್ಟದಲ್ಲಿ ಕೋಟೆಯೊಂದು ಕಾಣುತ್ತದೆ, ಇದು ಕೂಡ ಹಾಳಾಗಿದ್ದು ಇದು ಶಿವಾಜಿಯ ಕಾಲದ್ದು ಎಂದು ಹೇಳುವರು. ವಿಜಯನಗರದ ಪತನಾನಂತರ ಇಲ್ಲಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಕಾರ್ಯ ನಡೆಯದೇ ಹೋಗಿದ್ದು ವಿಪರ್ಯಾಸ.

ಇನ್ನು ಮಠಮಾನ್ಯಗಳು ಕೂಡ ಇಂದಿಗೂ ಇಲ್ಲಿನ ಜನಮಾನಸದಲ್ಲಿ ಭಕ್ತಿಪರಂಪರೆ ಹುಟ್ಟುಹಾಕಿವೆ. ಪುರಾತನ ಚರಿತ್ರೆಯುಳ್ಳ ಸಾಂಬಯ್ಯನ ಮಠ (ಹೂಲಿ ಅಜ್ಜನ ಮಠ), ಶೀಲವಂತರ (ರಂಭಾಪುರಿ) ಮಠ, ಹಿರೇಮಠ, ಪ್ರಮುಖವಾಗಿದ್ದು ನಿರ್ಮಲ ಮತ್ತು ಮಾಣಿಕ್ಯತೀರ್ಥ ಎಂಬ ಕೆರೆಗಳು, ವಾರಕರಿ ಪಂಥದವರು ಕಟ್ಟಿಸಿದ ಹರಿಮಂದಿರ ಹೂಲಿ ಮತ್ತೊಂದು ಆಕರ್ಷಣೆಯ ಭಕ್ತಿಯ ಸಂಕೇತಗಳು.

ಹೂಲಿಯ ಬಗ್ಗೆ ಅನೇಕ ಸಂಶೋಧನಾ ಪ್ರಬಂಧಗಳು ಮಂಡನೆಯಾಗಿದ್ದು ಅವುಗಳ ಮೂಲಕ ಇಲ್ಲಿಯ ಇತಿಹಾಸ ನೋಡಬಹುದಾಗಿದ್ದರೂ ಕಣ್ಮುಂದೆ ಸೆಳೆಯುವ ದೇಗುಲಗಳು, ಕೆರೆಗಳು, ಬಾವಿಗಳು ನೈಜತೆಯನ್ನು ಬಿಂಬಿಸುತ್ತಿವೆ. ಅವುಗಳ ರಕ್ಷಣೆಗೆ ಒಂದು ಯೋಜನೆಯಿಲ್ಲದಿರುವ ಕಾರಣ ಅನಾಥವಾಗಿ ನೋಡುಗರ ಗಮನ ಸೆಳೆಯುತ್ತಿವೆ. ಹೂಲಿಯನ್ನು ನೋಡಬೇಕೆಂದರೆ ಇಡೀ ಒಂದು ದಿನ ಬೇಕು. ಕಾಲ್ನಡಿಗೆಯ ಮೂಲಕ ಊರು ಹಾಗೂ ಬೆಟ್ಟದಲ್ಲಿರುವ ದೇವಾಲಯಗಳು ಅಲ್ಲಲ್ಲಿ ಹರಿದಿರುವ ಕೆರೆಗಳು, ತಮ್ಮ ಇತಿಹಾಸ ಸಾರುತ್ತಿರುವ ಬಾವಿಗಳು, `ನಡಕೋ ಪಡಕೋ’ ಎಂದಿರುವ ಹೂಲಿ ಅಜ್ಜನ ಮಠ ಇತ್ಯಾದಿ ನೋಡುವುದೆಂದರೆ ಒಂದು ದಿನದ ಪ್ರವಾಸ ಅತ್ಯಗತ್ಯ.

ವೈ.ಬಿ. ಕಡಕೋಳ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ