ಹೈ ಹೀಲ್ಸ್ ಧರಿಸುವುದರಿಂದ ಮುಗ್ಗರಿಸಿ ಬೀಳುವ ಅಪಾಯವಂತೂ ಇದ್ದೇ ಇರುತ್ತದೆ. ಜೊತೆಗೆ ಕಾಲುಗಳು ಅಸಹನೀಯ ನೋವು ಅನುಭವಿಸಬೇಕಾಗುತ್ತದೆ.
ನೀವು ಎಂದಾದರೂ ಹೈ ಹೀಲ್ಡ್ ಫುಟ್ ವೇರ್ ಧರಿಸಿದ್ದೀರಾ? ಹೌದು ಎಂದಾದರೆ ನೀವು ಅದನ್ನು ಧರಿಸಿ ಕೆಲವು ತೊಂದರೆಗಳನ್ನು ಅನುಭವಿಸಿರಬೇಕು. ಇದು ಅನಿವಾರ್ಯ. ಹೈ ಹೀಲ್ಡ್ ಫುಟ್ ವೇರ್ ಧರಿಸಿದವರು ಕೊನೆಗೆ ವೈದ್ಯರ ಬಳಿ ಹೋಗಲೇಬೇಕಾಗುತ್ತದೆ. ಹೈ ಹೀಲ್ಸ್ ಕಾಲುಗಳಿಗೆ ಹಾನಿಕಾರಕವೆಂದು ಹೆಚ್ಚಿನ ಮಹಿಳೆಯರಿಗೆ ಗೊತ್ತು. ಆದರೂ ಅವರು ಇದನ್ನು ಧರಿಸಲು ಹಿಂಜರಿಯುವುದಿಲ್ಲ. ಹೈ ಹೀಲ್ಸ್ ಧರಿಸಿ ಅವರಿಗೆ ಎಷ್ಟೇ ತೊಂದರೆ ಅನುಭವಿಸಬೇಕಾಗಿ ಬಂದರೂ ಅವರು ತೋರಿಸಿಕೊಳ್ಳುವುದಿಲ್ಲ.
ಮಹಿಳೆಯರು ಹೈ ಹೀಲ್ಡ್ ಫುಟ್ ವೇರ್ ನ್ನು ಫ್ಯಾಷನ್ ಮತ್ತು ಗ್ಲಾಮರ್ ನ ಪ್ರತೀಕವನ್ನಾಗಿ ಪರಿಗಣಿಸುತ್ತಾರೆ. ಇವನ್ನು ಧರಿಸುವುದರಿಂದ ಕಾಲುಗಳಲ್ಲಿ ಎಳೆತದ ಅನುಭವಾಗುತ್ತದೆ. ಕಾಲುಗಳು ಅತಿ ಹೆಚ್ಚು ಒತ್ತಡವನ್ನು ತಡೆದುಕೊಳ್ಳುವುದಿಲ್ಲ. ಅವುಗಳಲ್ಲಿ ಊತ ಬರುತ್ತದೆ. ಫುಟ್ ವೇರ್ ಆರಾಮದಾಯಕವಾಗಿಲ್ಲದಿದ್ದರೆ ಕಾಲುಗಳಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸರಿಯಾಗಿರುವುದಿಲ್ಲ. ಇಷ್ಟಾದರೂ ನೀವು ಹೈ ಹೀಲ್ಸ್ ಧರಿಸಲು ಸಿದ್ಧರಾದರೆ ಕಾಲುಗಳ ತೊಂದರೆಯನ್ನು ಹೆಚ್ಚಿಸುತ್ತಿದ್ದೀರಿ.
ಗಮನಿಸಬೇಕಾದ ವಿಷಯವೆಂದರೆ, ವೈದ್ಯರೂ ಸಹ 2 ಇಂಚಿಗಿಂತ ಹೆಚ್ಚಿನ ಹೀಲ್ಸ್ ಧರಿಸುವುದು ಅಪಾಯಕಾರಿ ಎನ್ನುತ್ತಾರೆ. ಹೈ ಹೀಲ್ಸ್ ಮತ್ತು ಅನ್ ಫಿಟ್ ಶೂಸ್ ಧರಿಸಿದ್ದರಿಂದ ಉಂಟಾದ ತೊಂದರೆಗಳಿಗೆ ಸಂಬಂಧಿಸಿದಂತೆ ಅನೇಕ ಪೇಶೆಂಟ್ ಗಳು ನಮ್ಮಲ್ಲಿಗೆ ಬರುತ್ತಾರೆ. ಆಗ ನಾವು ಎಲ್ಲಕ್ಕೂ ಮೊದಲು ಹೈ ಹೀಲ್ಸ್ ಧರಿಸಬೇಡಿ ಎಂದು ಹೇಳುತ್ತೇವೆ. ಅದಕ್ಕೆ ಅವರು ಒಪ್ಪದಿದ್ದರೆ ಕಡಿಮೆ ಹೀಲ್ಸ್ ಧರಿಸಲು ಸಲಹೆ ನೀಡುತ್ತೇವೆ ಎನ್ನುತ್ತಾರೆ, ದೆಹಲಿಯ ಅಪೋಲೋ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಆರ್ಥೊಪೆಡಿಕ್ ಸರ್ಜನ್ ಡಾ. ಕೆ.ಬಿ. ಅತ್ರಿ ಹೆಸರಾಂತ ಫಿಸಿಶಿಯನ್.
ಡಾ. ಮಿಶ್ರಾ, ಕಾಲುಗಳು ನಿಮ್ಮ ಶರೀರದ ಭಾರವನ್ನು ಹೊರುತ್ತವೆ. ಅದರ ಅರ್ಥ ನೀವು ಎಲ್ಲಿಯವರೆಗೆ ಶಾರೀರಿಕವಾಗಿ ಸಕ್ರಿಯವಾಗಿರುತ್ತೀರೋ, ಅಲ್ಲಿಯವರೆಗೂ ನಿಮ್ಮ ಕಾಲುಗಳು ಅದೇ ರೀತಿ ಸಕ್ರಿಯವಾಗಿರುತ್ತವೆ. ಕಾಲುಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ನಿಮ್ಮ ಶರೀರ ಎಲ್ಲೋ ಒಂದು ಕಡೆ ಶಿಥಿಲವಾಗತೊಡಗುತ್ತದೆ. ಶರೀರದ ಇತರ ಭಾಗಗಳೂ ಯಾವುದಾದರೊಂದು ತೊಂದರೆ ಅನುಭವಿಸುತ್ತವೆ ಎನ್ನುತ್ತಾರೆ.
ಸ್ಟೆಲಿಟೋ (ತೆಳುವಾದ ನೀಳ ಹೀಲ್ಸ್) ಮತ್ತು ಅಂತಹ ಇತರ ಹೈ ಹೀಲ್ಸ್ ಮೊಣಕಾಲುಗಳಿಗೆ ಹಾಗೂ ಬ್ಯಾಕ್ ಪೇನ್ ಗೆ ಕಾರಣವಾಗುತ್ತವೆ. ಹೈ ಹೀಲ್ಸ್ ಧರಿಸುವುದರಿಂದ ಮುಗ್ಗರಿಸಿ ಬೀಳುವ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಇದರಿಂದ ನಡಿಗೆಯಲ್ಲೂ ಅಸಮತೋಲನ ಮತ್ತು ಕಾಫ್ ಮಸಲ್ಸ್ ಗಳಲ್ಲಿ ಎಳೆತಂಟಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲೂ ಹೈ ಹೀಲ್ಸ್ ಶೋಕಿಯುಳ್ಳವರು ಅದನ್ನು ಧರಿಸದೇ ಇರುವುದಿಲ್ಲ. ಕೊಂಚ ಸಮಯ ಮಾತ್ರ ಇಗ್ನೋರ್ ಮಾಡುತ್ತಾರೆ. ಸುಮಾರು ಶೇ.20ರಷ್ಟು ಮಹಿಳೆಯರು ಆರಾಮದಾಯಕವಲ್ಲದ ಶೂಸ್ ಧರಿಸುತ್ತಾರೆ. ಅವರಲ್ಲಿ ಶೇ.73ರಷ್ಟು ಮಹಿಳೆಯರು ಪಾದರಕ್ಷೆಗಳಿಗೆ ಸಂಬಂಧಿಸಿದ ಕಾಲುಗಳ ಸಮಸ್ಯೆಗಳನ್ನು ಮತ್ತು ಕಾಯಿಲೆಗಳನ್ನು ಅನುಭವಿಸುತ್ತಿದ್ದಾರೆ.
ಹೈ ಹೀಲ್ಸ್ ನಿಂದಾಗುವ ತೊಂದರೆಗಳು
ಕ್ಯಾಲಸ್ (ಕಾಲುಗಳ ಚರ್ಮ ಒರಟಾಗುವುದು ಮತ್ತು ಹಿಮ್ಮಡಿಗಳಲ್ಲಿ ಒಂದೇ ಸಮನೆ ನೋವುಂಟಾಗುವುದು).
ಬೂನಿಯನ್ (ಕಾಲುಗಳ ಹೆಬ್ಬೆರಳುಗಳ ಸಂಧುಗಳು ದೊಡ್ಡದಾಗುವುದು), ಹೆಬ್ಬೆರಳುಗಳಲ್ಲಿ ಊತ ಬರುವುದು, ಬೆರಳುಗಳಲ್ಲಿ ಬಾಗುವಿಕೆ ಮತ್ತು ವಕ್ರತೆ ಉಂಟಾಗುವಿಕೆ.
ನ್ಯೂರೋಮಸ್ (ಕಾಲುಗಳ ನರಗಳಲ್ಲಿ ಎಳೆತ ಮತ್ತು ನೋವು, ಉಗುರುಗಳು ಬೆಳೆಯದಿರುವುದು ಇತ್ಯಾದಿ)
ಆ್ಯಕ್ಲೀಜ್ ಟೆಂಡನ್, ಹಿಮ್ಮಡಿಯ ಮೂಳೆಗಳಿಗೆ ಸಂಬಂಧಿಸಿದ ತೊಂದರೆ ಹೈ ಹೀಲ್ಸ್ ನಿಂದ ಶರೀರದ ಒತ್ತಡ ಸತತವಾಗಿ ಪಾದಗಳ ಮೇಲೆ ಬೀಳುವುದರಿಂದ ಉಗುರುಗಳಿಗೆ ತೊಂದರೆ ಉಂಟಾಗುತ್ತದೆ. ಅದರಿಂದಾಗಿ ಉಗುರುಗಳು ಕಠಿಣ ಹಾಗೂ ದಪ್ಪಗಾಗುತ್ತವೆ. ಅವುಗಳಲ್ಲಿ ದುರ್ವಾಸನೆಯುಕ್ತ ಫಂಗಸ್ ಉಂಟಾಗುವ ಅಪಾಯ ಇರುತ್ತದೆ. ಈ ಫಂಗಸ್ ಹೆಚ್ಚು ಹೊತ್ತು ಇರುವುದರಿಂದ ನೋವಿಗೆ ಕಾರಣವಾಗುತ್ತದೆ.
ಅನೇಕ ಬಾರಿ ಕಾಲುಗಳಲ್ಲಿ ಇಡೀ ದಿನ ಊತ ಇರುತ್ತದೆ. ಇಷ್ಟಾದರೂ ಮಹಿಳೆಯರು ಹೀಲ್ಸ್ ಅಥವಾ ಅನ್ ಫಿಟ್ ಶೂ ಧರಿಸದೇ ಇರುವುದಿಲ್ಲ. ಅದರಿಂದಾಗಿ ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆ. ಒಮ್ಮೊಮ್ಮೆ ನೋವು ಅಸಹನೀಯವಾಗುತ್ತದೆ. ಕಾಲಿನ ಮೂಳೆಗಳಲ್ಲಿ ತೀವ್ರ ನೋವು ಅಥವಾ ಒಳಗಿನ ಪೆಟ್ಟಿನಿಂದ ನೋವು ನಿರಂತರವಾಗಿರುತ್ತದೆ. ನೋವು ಹೆಚ್ಚಾದಾಗ ಆರ್ಥೊಪೆಡಿಕ್ ಸರ್ಜನ್ ಅಥವಾ ಫಿಸಿಶಿಯನ್ ಬಳಿ ಹೋಗುವುದು ಅಗತ್ಯ. ಆರ್ಥೋಪೆಡಿಕ್ ಸರ್ಜನ್ ರಂತೂ ಹೈ ಹೀಲ್ಸ್ ಧರಿಸುವ ಅಭ್ಯಾಸ ಬಿಡಲು ಸಲಹೆ ನೀಡುತ್ತಾರೆ.
ನಿಮ್ಮ ಅಭ್ಯಾಸ ಬದಲಿಸಿ
ನಿಮಗೆ ಹೀಲ್ಸ್ ಇಲ್ಲದೆ ಇರಲಾಗದಿದ್ದರೆ ಬೇರೆ ಬೇರೆ ಸ್ಟೈಲ್ ನ ಹೀಲ್ಸ್ ಗಳಿರುವ ಫುಟ್ ವೇರ್ ಗಳನ್ನು ಧರಿಸಲು ಅಭ್ಯಾಸ ಮಾಡಿ. ತೆಳುವಾದ, ಉದ್ದವಾದ ಮತ್ತು ಪೆನ್ಸಿಲ್ ಹೀಲ್ ಬದಲು ಪ್ಲ್ಯಾಟ್ ಫಾರಂ ಹೀಲ್, ಫ್ಲ್ಯಾಟ್ ಹೀಲ್, ಚಪ್ಪಟೆ, ಅಗಲ ಇತ್ಯಾದಿ ಸ್ಟೈಲ್ ಗಳ ಹೀಲ್ಸ್ ನ ಫುಟ್ ವೇರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಯಾವುದಾದರೂ ಕೆಲಸಕ್ಕಾಗಿ ಬಹಳಷ್ಟು ದೂರ ನಡೆದೇ ಹೋಗಬೇಕಾದರೆ ಟೆನಿಸ್ ಶೂಸ್ ಅಥವಾ ಫ್ಲ್ಯಾಟ್ ಶೂಸ್ ನ್ನು ಉಪಯೋಗಿಸಿ. ಮನೆಯಿಂದ ಆಫೀಸ್ ಮತ್ತು ಆಫೀಸ್ ನಿಂದ ಮನೆಗೆ ಹೋಗಿ ಬರಲು ಫ್ಲ್ಯಾಟ್ ಹೀಲ್ಸ್ ಮತ್ತು ಇತರ ಕೆಲಸಗಳಿಗಾಗಿ ಸಾಧಾರಣ ಹೀಲ್ಸ್ ಧರಿಸಬಹುದು.
ದಿನವಿಡೀ ಕಾಲುಗಳ ನೋವು ಮತ್ತು ಸಾಮಾನ್ಯ ಊತವನ್ನು ಕೊನೆಗಾಣಿಸಲು ಮನೆ ತಲುಪಿದ ಕೂಡಲೇ ಹೀಲ್ಸ್ ಗಳನ್ನು ಬಿಚ್ಚಿ ಕಾಲುಗಳಿಗೆ ಕೊಂಚ ಆರಾಮ ನೀಡಿ. ಒಂದು ವೇಳೆ ಆಫೀಸ್ ಅಥವಾ ಎಲ್ಲಾದರೂ ಒಂದು ಕಡೆ ಕುಳಿತಿದ್ದರೆ ಸ್ವಲ್ಪ ಹೊತ್ತು ಪಾದರಕ್ಷೆ ತೆಗೆಯಬಹುದು. ಇದರಿಂದ ಕಾಲುಗಳಿಗೆ ವಿಶ್ರಾಂತಿ ಸಿಗುತ್ತದೆ.
ತೊಂದರೆಗಳು ಎಂಥವು ಮತ್ತು ಏಕೆ?
ಮೊಣಕಾಲು : ಹೈ ಹೀಲ್ಡ್ ಫುಟ್ ವೇರ್ ಧರಿಸುವುದರಿಂದ ನಡೆಯುವ ವಿಧಾನದಲ್ಲಿ ಬದಲಾವಣೆಯಾಗುತ್ತದೆ. ಹಾಗೆ ನಡೆಯುವಾಗ ಪೂರ್ಣ ಒತ್ತಡ ಮೊಣಕಾಲುಗಳ ಮೇಲೆ ಬೀಳುತ್ತದೆ. ವಾತರೋಗದಿಂದ ಬಳಲು ಮಹಿಳೆಯರಿಗೆ ಮೊಣಕಾಲುಗಳು ನೋವುಂಟು ಮಾಡುತ್ತವೆ. ಒಂದು ಅಧ್ಯಯನದ ಪ್ರಕಾರ, ಹೈ ಹೀಲ್ಸ್ ಧರಿಸಿದರೆ ಮೊಣಕಾಲುಗಳ ಮೇಲಿನ ಒತ್ತಡ ಶೇ.26ರಷ್ಟು ಹೆಚ್ಚಾಗುತ್ತದೆ.
ಪೋಸ್ಚರ್ : ಹೈ ಹೀಲ್ಸ್ ಶರೀರದ ಮಧ್ಯಭಾಗವನ್ನು ಮುಂದುಗಡೆ ತಳ್ಳುತ್ತದೆ. ಅದರಿಂದ ಹಿಪ್ಸ್ ಮತ್ತು ಸ್ಪೈನಲ್ ನ ಅಲೈನ್ಮೆಂಟ್ ಹಾಳಾಗುತ್ತದೆ. ಇದರಿಂದ ಶರೀರದ ಎಲ್ಲ ಪೋಸ್ಚರ್ ಗಳೂ ಡಿಸ್ಟರ್ಬ್ ಆಗುತ್ತವೆ.
ಪ್ರೆಶರ್ : ಹೈ ಹೀಲ್ಸ್ ಕಾಲುಗಳನ್ನು ಉದ್ದವಾಗಿ ತೋರಿಸುತ್ತದೆ. ಆದರೆ ಹೀಲ್ಸ್ ನ ಹೈಟ್ ಹೆಚ್ಚಾದಂತೆಲ್ಲಾ ಕಾಲುಗಳ ಮುಂದಿನ ಭಾಗಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.
1 ಇಂಚ್ ಹೀಲ್ ಗೆ 22% ಒತ್ತಡ ಹೆಚ್ಚಾಗುತ್ತದೆ.
2 ಇಂಚ್ ಹೀಲ್ ಗೆ 50%
3 ಇಂಚ್ ಹೀಲ್ ಗೆ 76%
ಕಾಫ್ ಮಸಲ್ಸ್ : ಹೈ ಹೀಲ್ಸ್ ಧರಿಸುವುದರಿಂದ ಕಾಫ್ ಮಸಲ್ಸ್ ಆ ಹೀಲ್ ನ ಆ್ಯಂಗಲ್ ನಲ್ಲಿ ಅಡ್ಜಸ್ಟ್ ಆಗುತ್ತವೆ. ಅದರಿಂದ ಮಾಂಸಖಂಡಗಳು ಬಿರುಸಾಗುತ್ತವೆ.
ಪಂಬ್ ಬಂಪ್ : ಫುಟ್ ವೇರ್ ನ ಹಿಂದಿನ ಬಿರುಸಾದ ಸ್ಟ್ರ್ಯಾಪ್ ಹಿಮ್ಮಡಿಯ ಹಿಂದಿನ ಭಾಗವನ್ನು ಬಿರುಸಾಗಿಸುತ್ತದೆ ಮತ್ತು ಅಲ್ಲಿ ಉರಿಯುಂಟಾಗುತ್ತದೆ.
ಆ್ಯಂಕಲ್ : ಹೈ ಹೀಲ್ಸ್ ಶರೀರದ ಸಮತೋಲನವನ್ನು ಹಾಳು ಮಾಡುತ್ತದೆ. ಇವನ್ನು ಧರಿಸುವವರಿಗೆ ಯಾವಾಗಲೂ ಮುಗ್ಗರಿಸಿ ಬೀಳುವ ಅಪಾಯ ಇರುತ್ತದೆ. ಅದರಿಂದ ಪಾದದ ಕೀಲುಗಳು ಮುರಿಯುವ ಅಥವಾ ವಕ್ರವಾಗುವ ಸಂಭವವಿರುತ್ತದೆ.
ಆ್ಯಕ್ಲೀಜ್ ಟೆಂಡನ್ (ಹಿಮ್ಮಡಿಯ ಮೇಲ್ಭಾಗ) : ಹೈ ಹೀಲ್ಸ್ ಧರಿಸಿದಾಗ ಕಾಲುಗಳ ಅಂದರೆ ಪಾದದ ಮುಂಭಾಗ ಹಿಮ್ಮಡಿಗಿಂತ ಸಾಕಷ್ಟು ಕೆಳಗೆ ಹೋಗುತ್ತದೆ. ಅದರಿಂದ ಆ್ಯಕ್ಲೀಜ್ ಟೆಂಡನ್ ಎಳೆತದಿಂದ ಬಿಗಿಯಾಗುತ್ತದೆ. ಹೀಗಾಗಿ ನೋವು ಹಾಗೂ ತೊಂದರೆಗಳು ಉಂಟಾಗುತ್ತವೆ.
ಹ್ಯಾಮರ್ ಟೋಜ್ : ಟೈಟ್ ಫಿಟಿಂಗ್ ಶೂಸ್ ನಿಂದಾಗಿ ಕಿರುಬೆರಳು ಇತರ ಚಿಕ್ಕ ಬೆರಳುಗಳ ಮೇಲೆ ಒತ್ತಡ ಹಾಕಿ ಅದರಿಂದ ಮೂರೂ ಬೆರಳುಗಳು ನೇರವಾಗಿರುವುದಿಲ್ಲ. ಬೆರಳುಗಳಲ್ಲಿ ವಕ್ರತೆ ಹಾಗೂ ಬಾಗುವಿಕೆ ಉಂಟಾಗುತ್ತದೆ.
– ಪ್ರತಿನಿಧಿ