ಮನೆಯ ಅಲಂಕಾರ ಎಂಬುದು ಆ ಮನೆಯೊಡತಿಯ ಅಭಿರುಚಿಗೆ ಹಿಡಿದ ಕೈಗನ್ನಡಿ. ಇದು ಅಚ್ಚುಕಟ್ಟಾಗಿರಲು ಮನೆಯವರೆಲ್ಲರ ಸಹಕಾರ ಅತ್ಯಗತ್ಯ. ನಮ್ಮ ಬಜೆಟ್‌ ಗೆ ಹೊಂದುವಂತೆ ಯಾವ ರೀತಿಯಲ್ಲಿ ಅಲಂಕರಿಸಿದರೆ ಮನೆ ಇನ್ನಷ್ಟು ಕಳೆಕಳೆಯಾಗಿರಲು ಸಾಧ್ಯ? ಇದರ ರಹಸ್ಯವೇನು? ಬನ್ನಿ, ವಿವರವಾಗಿ ತಿಳಿಯೋಣ.

ಸಾಫ್ಟ್ ವೇರ್‌ ಕಂಪನಿಯೊಂದರ ಉದ್ಯೋಗಿಯಾಗಿರುವ ದಿವ್ಯಾ, ಬೆಳಗ್ಗೆ 8 ರಿಂದ ಸಾಯಂಕಾಲ 5 ಗಂಟೆಯವರೆಗೂ ಆಫೀಸಿನಲ್ಲಿಯೇ ಸಮಯ ಕಳೆಯುತ್ತಾರೆ. ಸಾಯಂಕಾಲ 6 ಗಂಟೆಗೆ ಮನೆಗೆ ಬಂದ ಕೂಡಲೇ ತಮ್ಮ ಅಡ್ವಾನ್ಸ್ಡ್ ಡಿಸೈನರ್‌ ಕಿಚನ್‌ ಗೆ ನುಗ್ಗುತ್ತಾರೆ. ಹಾಗೆಯೇ, ಮನೋಜ್‌ ಒಬ್ಬ ಕ್ಯಾಬ್‌ಡ್ರೈವರ್‌. ತುಂಬಾ ಪರಿಶ್ರಮದಿಂದ ಫೋರ್‌ ವ್ಹೀಲರ್‌ ಗಳನ್ನು ಓಡಾಡಿಸಿ ದಣಿವಿಗೆ, ರಾತ್ರಿ 8 ಗಂಟೆಗೆ ಮನೆ ತಲುಪಿದ ತಕ್ಷಣ ಚಾಪೆ ಹಾಸಿಕೊಂಡು ಹಾರ್ಮೋನಿಯಂ ನುಡಿಸತೊಡಗುತ್ತಾರೆ. ಇನ್ನು ತಮ್ಮ ಸ್ವಂತದ ಬೊಟಿಕ್‌ ನಡೆಸುತ್ತಿರುವ ಸುಧಾಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದೇ ಒಂದು ಕಷ್ಟ. ತಡರಾತ್ರಿ ಅವರು ಮನೆಗೆ ಬಂದಾಕ್ಷಣ ತಮ್ಮ ಅವಳಿ ಮಕ್ಕಳೊಂದಿಗೆ ಸೇರಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನೀವು ಯಾವಾಗಲಾದರೂ ಸರಿ, ದುಡಿದು ದಣಿವಾಗಿ ಮನೆ ಸೇರಿಕೊಂಡಾಗ, ನಿಮ್ಮ ಮನೆ, ನಿಮಗೆ ನೆಮ್ಮದಿ ನೀಡುವಂತಿರಬೇಕು. ದಣಿದ ಜೀವಕ್ಕೆ ಚೈತನ್ಯ ನೀಡುವಂತಿರಬೇಕು. ಅದುವೇ ಸ್ವರ್ಗ!

ಹೀಗೆ ಮನೆ ಪ್ರವೇಶಿಸಿದ ಕೂಡಲೇ ಆಪ್ಯಾಯಮಾನದ ಅನುಭೂತಿಯಾಗುವುದು ಕೇವಲ ಮನೆಯ ಒಡೆಯರಿಗೇ ಮಾತ್ರವಲ್ಲ. ಮಕ್ಕಳು, ಹಿರಿಯರು, ಸ್ನೇಹಿತರು, ಅತಿಥಿಗಳು ಯಾರಾದರೂ ಸರಿ ಮನೆ ಮಂದಿಗೆಲ್ಲ ಮುದ ನೀಡುತ್ತದೆ. ಮನೆ ಎನ್ನುವುದು ಶಾಂತಿ ನೆಮ್ಮದಿ ನೀಡುವುದರ ಜೊತೆಗೆ ನೈಸರ್ಗಿಕ ಸಮಸ್ಯೆಗಳನ್ನೆಲ್ಲ ಬಾಗಿಲಿನ ಆಚೆಗೆ ತಡೆಹಿಡಿಯುವ ವೈಯಕ್ತಿಕ ನೆಲೆ ಎಂದರೆ ಅತಿಶಯೋಕ್ತಿಯೇನಲ್ಲ.

ಅಂದಿನ ಕಾಲದಲ್ಲಿ ನನ್ನ ಅಜ್ಜಿ `ನಗುವೇ ಹೆಣ್ಣಿಗೆ ಬಹು ದೊಡ್ಡ ಆಭರಣ,’ ಎಂದು ಹೇಳುತ್ತಿದ್ದರು. ಅಂತೆಯೇ ಈಗ `ಮನೆಯ ಸೌಂದರ್ಯ, ಅದು ಹೇಗೆ ನಿಮ್ಮನ್ನು ಸ್ವಾಗತಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ,’ ಎಂದು ಹೇಳಿದರೆ ತಪ್ಪೇನಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನ ಮನೆಯನ್ನು ತನ್ನ ಅಭಿರುಚಿ, ಅನುಕೂಲ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅಲಂಕರಿಸುವುದು ಸಹಜವಾಗಿದೆ. ಬಹುಶಃ ನಿಮ್ಮ ಅನುಭವಕ್ಕೂ ಬಂದಿರಬಹುದಾದ ಸಂಗತಿ ಏನೆಂದರೆ, ಯಾವುದಾದರೂ ಮನೆಗೆ ಹೋಗಿದ್ದಾಗ, ಮನೆಯ ಒಳಗೆ ಹೆಜ್ಜೆಯಿಟ್ಟ ಕೂಡಲೇ ಅದೇನೋ ಒಂದು ಪ್ರಶಾಂತತೆ, ಶಿಸ್ತುಬದ್ಧ ಆಕರ್ಷಣೆ, ಸ್ವಚ್ಛ ಶುಭ್ರ ನೆಮ್ಮದಿಯ ವಾತಾವರಣವನ್ನು ನೀವು ಅನುಭವಿಸಿರಬಹುದು. ಮತ್ತೆ ಮತ್ತೆ ಆ ಮನೆಗೆ ಹೋಗಬೇಕು ಎಂದೂ ಅನಿಸಿರಬಹುದು. ಅಂದಮೇಲೆ ಒಂದು ಸಿನಿಮಾದ ಯಶಸ್ಸನ್ನು ಬಾಕ್ಸ್ ಆಫೀಸಿನಿಂದ ತೂಗಿದರೆ, ಒಂದು ಮನೆಯ ಯಶಸ್ಸನ್ನು ಆ ಮನೆಯಲ್ಲಿರುವ ನೆಮ್ಮದಿ ಸಂತೋಷ ನಗುವಿನಿಂದ ಅಳೆಯಬಹುದಲ್ಲವೇ?

ಹಾಗಾದ್ರೆ ಈಗ ಹೇಳಿ, ನಿಮ್ಮ ಮನೆಯನ್ನು ನೀವು ಹೇಗೆ ಅಲಂಕರಿಸಬೇಕು ಎಂದುಕೊಂಡಿರುವಿರಿ?

ಒಂದು ವಿಧದಲ್ಲಿ ಹೇಳಬೇಕಂದ್ರೆ, ಒಂದು ಸಾಮಾನ್ಯ 3d ಸೂತ್ರವನ್ನು ಅನುಸರಿಸಬೇಕು. 3 d ಎಂದರೆ ಡಿಗ್ನಿಟಿ, ಡಿಲೈಟ್‌ ಮತ್ತು ಡಿಫರೆನ್ಸ್. ಇದನ್ನು ಅನುಸರಿಸಿದ್ದಾದಲ್ಲಿ ನಿಮ್ಮ ಗೃಹಾಲಂಕಾರ ಅತ್ಯಾಕರ್ಷಕವಾಗುವುದರಲ್ಲಿ ಸಂಶಯವಿಲ್ಲ.

ಡಿಗ್ನಿಟಿ ಒಬ್ಬ ಮಹಿಳೆ ಹೇಗೆ ತನ್ನ ಸೌಂದರ್ಯವನ್ನು ಆಕರ್ಷಕ ಮತ್ತು ವಿಶಿಷ್ಟವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾಳೋ ಹಾಗೆಯೇ ತನ್ನ ಮನೆಯನ್ನೂ ನೋಡಿಕೊಳ್ಳುವುದರಲ್ಲಿ ಸಂಶಯವಿಲ್ಲ. ಪ್ರತಿಯೊಂದು ಮನೆಗೂ ತನ್ನದ ಆದ ವೈಯಕ್ತಿಕ ವೈಶಿಷ್ಟ್ಯ ಇದ್ದೇ ಇರುತ್ತದೆ. ಹಾಗಾದರೆ ಒಂದು ಮನೆಯನ್ನು ಹೇಗೆ ಆಕರ್ಷಕವಾಗಿ ಮತ್ತು ವಿಶಿಷ್ಟವಾಗಿ ಅಲಂಕರಿಸಬಹುದು ಎನ್ನುವುದನ್ನು ನೋಡೋಣ ಬನ್ನಿ.

ಮೊಟ್ಟ ಮೊದಲು `ನಮ್ಮ ಮನೆ’ ಎಂಬ ಅಭಿಮಾನ ನಿಮಗಿರಲಿ. ಮನೆಯಲ್ಲಿರುವ ಎಲ್ಲ ವಸ್ತುಗಳೂ ಸರಿಯಾದ ಜಾಗಗಳಲ್ಲಿರುವಂತೆ ನೋಡಿಕೊಳ್ಳಿ. ಅಲ್ಲದೇ ಅವುಗಳನ್ನೇ ಸ್ವಲ್ಪ ಆಕರ್ಷಕವಾಗಿ ಕಾಣುವಂತೆ ಜೋಡಿಸಿ ಇಡುವುದನ್ನೂ ಅರಿತುಕೊಳ್ಳಿ. ಮನೆಗೆ ತಂದಿರುವ ಹೊಸ ರೀಡಿಂಗ್‌ ಟೇಬಲ್ ನಿಮಗೆ ತುಂಬಾ ಮೆಚ್ಚುಗೆಯಾಯಿತೇ? ಜೊತೆಗೆ ಹಳದಿ ಬಣ್ಣದ ಬೆಡ್‌ ಶೀಟ್‌ ಕೂಡ ಬೆಡ್‌ ರೂಮಿನಲ್ಲಿ ಚೆನ್ನಾಗಿ ಮ್ಯಾಚ್‌ ಆಗಿದೆಯೇ? ಆದರೂ ಯಾಕೋ ಫ್ರಿಜ್‌ ತುಂಬಾ ಹಳೆಯದಾಯಿತು. ಡೈನಿಂಗ್‌ ಟೇಬಲ್ ಬಳಸಿ ಬಳಸಿ ಮಸುಕಾಗಿಬಿಟ್ಟಿದೆ. ಅದರ ಅಂಚುಗಳೆಲ್ಲ ಮುಕ್ಕಾಗಿವೆ. ಪರದೆಗಳನ್ನೆಲ್ಲ ಹೊಲಿಸಿ ಐದು ವರ್ಷಗಳೇ ಆಯಿತು ಎಂದೆಲ್ಲ ಮನಸ್ಸಿನಲ್ಲಿ ಹಳೆತನದ ಕೀಳರಿಮೆ ಬೆಳೆಯಲು ಬಿಡಬೇಡಿ.

ಅವೆಲ್ಲವುಗಳೂ ಅದೆಷ್ಟೇ ಹಳೆಯಾದರೂ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಏನಾದರೂ ಕೊರತೆ ಆಗಿದೆಯೇ? ಇಲ್ಲಿಂದ ಮೇಲೆ ಅವನ್ನು ನಿರ್ಲಕ್ಷಿಸುವುದರ ಬದಲಾಗಿ, ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳಿ. ಆಗಿಂದಾಗ್ಗೆ ಪರದೆಗಳನ್ನು ಡ್ರೈಕ್ಲೀನ್‌ ಮಾಡಿಸಿ, ಫ್ರಿಜ್‌ ನ್ನು ಶುಭ್ರಗೊಳಿಸಿ, ಡೈನಿಂಗ್‌ ಟೇಬಲ್ ಗೆ ವುಡ್‌ ಗಾರ್ಡ್‌ದ್ರಾವಣ ಹಚ್ಚಿ. ಹೀಗೆ ಮಾಡುವುದರಿಂದ ಅವುಗಳ ಬಗ್ಗೆ ನಿಮ್ಮಲ್ಲೂ ಪ್ರೀತಿ ಬೆಳೆಯುತ್ತದೆ ಮತ್ತು ಅವು ಕೂಡ ಸದೃಢ ಮತ್ತು ಸುಂದರವಾಗಿ ಕಂಗೊಳಿಸುತ್ತವೆ.

ಮನೆ ತುಂಬ ಹರಡಿಕೊಳ್ಳುವ, ಉಪಯೋಗಕ್ಕೆ ಬಾರದ ಸಾಮಾನುಗಳು ಮನೆಯ ಅಂದವನ್ನು ಹಾಳು ಮಾಡುತ್ತವೆ. ಅವಶ್ಯವಿಲ್ಲದ ವಸ್ತುಗಳನ್ನು ಸ್ಟೋರ್‌ ರೂಮಿನಲ್ಲಿ ಹಾಕಿಬಿಡಿ. ಏಕೆಂದರೆ ಈಗ ಅನಾವಶ್ಯಕ ಎನಿಸುವ ಆ ವಸ್ತುಗಳು ಮುಂದೆ ಯಾವತ್ತಾದರೂ ಅವಶ್ಯಕ ಎನಿಸಬಹುದು. ಹಾಗೆಯೇ ಆಗಾಗ ಪೀಠೋಪಕರಣಗಳನ್ನೂ ಸ್ಥಾನ ಪಲ್ಲಟಗೊಳಿಸುತ್ತಿರಿ. ಹೀಗೆ ಮಾಡುವುದರಿಂದ ಆ ಜಾಗವನ್ನು ಶುಚಿಗೊಳಿಸಲು ಅನುಕೂಲವಾಗುತ್ತದೆ.

ಕರಕುಶಲ ವಸ್ತುಗಳು ಬಹುಬೇಗ ನೋಡುಗರ ಆಸಕ್ತಿಯನ್ನು ಕೆರಳಿಸುತ್ತವೆ ಹಾಗೂ ಇವುಗಳು ಮನೆಯ ವಾತಾವರಣದ ಅಂತಸ್ತನ್ನು ಇಮ್ಮಡಿಗೊಳಿಸುತ್ತವೆ. ಕಲಾಕೃತಿಗಳು ನಿಮ್ಮ ಮನೆಯಲ್ಲಿ ಕಣ್ಮನ ಸೆಳೆಯುವಂತಿರಲಿ. ಕಂಚಿನಲ್ಲಿ ನಿರ್ಮಿಸಿದ ಕಲಾಕೃತಿಗಳು, ಗಾಜಿನಲ್ಲಿ ಅರಳಿದ ಕಲೆಗಳು, ಮರದ ಕೆತ್ತನೆಗಳು ಮತ್ತು ಬಹುವರ್ಣ ಚಿತ್ರಕಲೆಗಳು ನಿಮ್ಮ ಮನೆಯ ಆಂತರಿಕ ಗೃಹಾಲಂಕಾರಕ್ಕೆ ಅತ್ಯಂತ ಸೂಕ್ತವಾದವು. ಇವುಗಳ ಜೊತೆಗೆ, ಎಲ್ಲೋ ಒಂದು ಕಡೆ ಆಯಕಟ್ಟಿನ ಸ್ಥಳದಲ್ಲಿ ವಿದ್ಯುತ್‌ ಅಲಂಕಾರಿಕ ಝಗಮಗಿಸುವ ಒಂದು ಪುಟ್ಟ ಝೂಮರ್‌ ಹಾಕಿದರೆ ಮನಮೋಹಕವಾಗಿರುತ್ತದೆ. ಇವನ್ನು ಈ ಎಲ್ಲ ಕಲಾಕೃತಿಗಳನ್ನು ಧೂಳು ಮೆತ್ತಿಕೊಳ್ಳಲು ಬಿಟ್ಟರೆ ಅದಕ್ಕಿಂತ ಕೆಟ್ಟದ್ದು ಬೇರೇನೂ ಇಲ್ಲ. ಆದ್ದರಿಂದ ಕಲಾಕೃತಿಗಳನ್ನು ಆಯ್ದುಕೊಳ್ಳುವಾಗಲೇ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು ಮತ್ತು ನಿರಂತರವಾಗಿ ಅವುಗಳನ್ನು ಶುಚಿಗೊಳಿಸುತ್ತ ಇರಬೇಕು.

ಡಿಲೈಟ್‌ ಒಂದು ಒಳ್ಳೆಯ ಮನೆ ಎಂದರೆ ಆ ಮನೆಯ ತುಂಬ ನಗು ಮತ್ತು ಸಂತೋಷದ ಅಲೆಗಳೇ ತುಂಬಿರುತ್ತವೆ. ಆದರೆ ಇತ್ತೀಚಿನ ಆಧುನಿಕ ಯುಗದ ಜನರು ತಂತಮ್ಮ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಬಸವಳಿಯುತ್ತಿದ್ದಾರೆ. ಗೃಹಾಲಂಕಾರದತ್ತ ಗಮನ ಕೊಡಲು ಯಾರಿಗೂ ಬಿಡುವು ಸಿಗುತ್ತಿಲ್ಲ.

ಆದರೆ ಎಲ್ಲರಿಗೂ ತಂತಮ್ಮ ವಿಶೇಷ ಸಂದರ್ಭಗಳು ಇದ್ದೇ ಇರುತ್ತವಲ್ಲವೇ?

ಹಾಗಾಗಿ ತಮ್ಮ ಮನೆಯ ಅಲಂಕಾರದ ಬಗ್ಗೆ ಗಮನ ಹರಿಸಲೇಬೇಕಾಗುತ್ತದೆ. ಯಾವುದೇ ಸಮಾರಂಭಕ್ಕೂ ನಮ್ಮ ಮನೆಯ ಅಂದ ಚೆಂದ ಒಗ್ಗುವಂತಿದ್ದರೆ, ಆ ಸಮಾರಂಭದ ಕಳೆ ಇನ್ನೂ ಹೆಚ್ಚಾಗುತ್ತದೆ, ಅವಿಸ್ಮರಣೀಯವಾಗುತ್ತದೆ.

ಯಾವುದೇ ಸಮಾರಂಭವಿರಲಿ, ವಿಶೇಷ ಸಂದರ್ಭವಿರಲಿ, ಅದರ ಸೊಗಸನ್ನು ಅನುಭವಿಸಿದಾಗಲೇ ತಿಳಿಯುತ್ತದೆ. ಹೀಗೆ ಸಂಭ್ರಮ ತುಂಬಿದ ಸಂತಸದ ಕ್ಷಣಗಳನ್ನೂ ನಾವು ಹುಟ್ಟುಹಾಕಬಹುದು. ಹೇಗೆ ಅಂತೀರಾ….?

ನಿಮ್ಮ ಸಮಾರಂಭಗಳು ಆಗಿಂದಾಗ್ಗೆ ಸಹಜವಾಗಿ ಗೋಚರಿಸುವಂತಿರಲಿ ಎಂದಾದರೆ, ಆ ಸಮಾರಂಭದ ವಿಶಿಷ್ಟ ಫೋಟೋಗಳನ್ನು  ಎನ್‌ ಲಾರ್ಜ್‌ ಮಾಡಿಸಿ ಫ್ರೇಮ್ ಹಾಕಿ ಹಾಲ್ ನಲ್ಲಿ ನೇತುಹಾಕಿ. ಅದು ನಿಮ್ಮ ಕುಟುಂಬದ್ದಾಗಿರಲಿ, ಪ್ರವಾಸದ್ದಾಗಿರಲಿ ಯಾವುದಾದರೊಂದು ವಿಶೇಷ ಫೋಟೋ ಆಗಿರಲಿ ಸಾಕು. ಜೊತೆಗೆ ಮನೆಯ ಬೇರೆ ಬೇರೆ ಗೋಡೆಗಳ ಮೇಲೆ ವಿಶಿಷ್ಟ ಕಲಾಕೃತಿ ಅಥವಾ ಮಕ್ಕಳು ಸ್ವತಃ ತಯಾರಿಸಿದ ಪೇಂಟಿಂಗ್‌ ಅಥವಾ ಗ್ರೀಟಿಂಗ್‌ ಕಾರ್ಡ್‌ ನೇತುಹಾಕಿ.

ಯಾವುದೇ ಸಾಧನೆಯ ಪದಕಗಳಿದ್ದಲ್ಲಿ, ಕೆಲವು ಪ್ರಮುಖವಾದವುಗಳನ್ನು ಚೆನ್ನಾಗಿ ಗೋಚರಿಸುವಂತಹ ಸ್ಥಳದಲ್ಲಿ ತೂಗುಹಾಕಿ. ವಿಜಯೋತ್ಸಾಹದ ಈ ಗುರುತುಗಳು ಮತ್ತೊಂದು ಸಾಧನೆಗೆ ಸ್ಛೂರ್ತಿ ನೀಡಬಲ್ಲವು. ಸ್ನೇಹಿತರು, ಅತಿಥಿಗಳು ಬಂದಾಗ ಅವರಿಗೂ ಈ ಸಾಧನೆಯ ಬಗ್ಗೆ ಗೊತ್ತಾಗುತ್ತದೆ. ನೀವು ಚಿಕ್ಕಂದಿನಲ್ಲಿ ಆಟವಾಡಿದ ಆಟಿಕೆಗಳು ಇನ್ನೂ ನಿಮ್ಮಲ್ಲಿದ್ದರೆ, ತಾತಾ ಕೊಟ್ಟಿದ್ದ ಯಾವುದಾದರೂ ಗಿಫ್ಟ್ ಇದ್ದರೆ, ಅಥವಾ ಯಾರಾದರೂ ಸಹೋದ್ಯೋಗಿಗಳು ನೀಡಿದ ಪೆನ್‌ ಹೋಲ್ಡರ್‌ ಇದ್ದರೆ, ಹೂವಿನಂತೆ ಎತ್ತಿ ಶೋಕೇಸ್‌ ನಲ್ಲಿ ಇಟ್ಟುಬಿಡಿ.

ಅವುಗಳಿಗೂ ಗೌರವಯುತ ಸ್ಥಾನ ದೊರೆತಂತಾಗುವುದು. ಇಂತಹ ವಸ್ತುಗಳೇ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಸಂತೋಷ ಉಕ್ಕಿಸುವ ಚಿಲುಮೆಗಳಾಗಿರುತ್ತವೆ. ನೀವು ಪ್ರತಿಸಲ ಅವುಗಳತ್ತ ದೃಷ್ಟಿ ಹಾಯಿಸಿದಾಗೆಲ್ಲ, ನಿಮ್ಮ ಮನಸ್ಸಿನಲ್ಲಿ ಮಧುರ ಭಾವನೆಗಳು ಉಕ್ಕಿ ಹರಿಯುತ್ತವೆ.

ಡಿಫರೆನ್ಸ್ ಉತ್ತಮ ಮನೆಯು ಆ ಮನೆ ಸದಸ್ಯರ ಅಭಿರುಚಿಯನ್ನು ಪ್ರತಿಬಿಂಬಿಸುತ್ತದೆ. ಅಂತಹ ಮನೆಯೊಳಗೆ ಹೋದಾಗ, ಮನೆಯವರ ಕಾಳಜಿ ಮತ್ತು ಅಭಿಪ್ರಾಯಗಳು ಅವರ ಗೃಹಾಲಂಕಾರದಲ್ಲೇ ಪ್ರಸ್ತುತಗೊಳ್ಳುತ್ತವೆ. ಅಲ್ಲಿನ ಪೀಠೋಪಕರಣಗಳಂತೂ ಅವರ ಭಾವನೆಗಳನ್ನೇ ತೋರಿಸಬಹುದು.

ಒಂದು ಹಳೆಯ ಕಾಲದ ಗಟ್ಟಿಮುಟ್ಟಾಗಿರುವ ಆರಾಮದಾಯಕ ಕುರ್ಚಿ ಮತ್ತು ಅದರ ಜೊತೆಗೆ ಇರುವ ಊರುಗೋಲು, ಆ ಮನೆಯಲ್ಲಿ ಒಬ್ಬ ಹಿರಿಯ ತಲೆಮಾರಿನ ಯಜಮಾನ ಇರುವುದನ್ನು ಸೂಚಿಸುತ್ತದೆ.

ಒಂದು ರೂಮ್ ನಲ್ಲಿ ಕೇವಲ ಟೇಬಲ್, ಕುರ್ಚಿ, ಕಂಪ್ಯೂಟರ್‌, ಪುಸ್ತಕಗಳನ್ನು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಇದು ಮಕ್ಕಳಾಗಲಿ ದೊಡ್ಡವರಾಗಲಿ ಎಲ್ಲರಿಗೂ ರೀಡಿಂಗ್‌ ರೂಮ್ ಎಂದು ಗುರುತಿಸಬಹುದು. ಇನ್ನೂ ಹತ್ತು ಹಲವಾರು ವಿಷಯಗಳನ್ನು ಗೃಹಾಲಂಕಾರದಿಂದಲೇ ಗುರುತಿಸಬಹುದು. ಹೀಗೆ ಪೀಠೋಪಕರಣಗಳು ಒಳ್ಳೆಯ ವಿಚಾರಗಳನ್ನು ತಿಳಿಸಿದರೆ, ಮನೆ ಮುಂದಿರುವ ಗಾರ್ಡನ್‌ ನಲ್ಲಿ ಒಣಗಿಹೋದ ಸಸಿಗಳು, ಬಾಡಿದ ಹೂಗಳೆಲ್ಲ ಇನ್ನೇನೋ ಬೇರೆಯದನ್ನೇ ಸೂಚಿಸುತ್ತವೆ.

ಹೀಗೆಯೇ ಪುಸ್ತಕಗಳು ನಮಗೆ ಮನರಂಜನೆ ನೀಡುವುದರೊಂದಿಗೆ ಜ್ಞಾನದ ಬೆಳಕನ್ನೂ ಬೆಳಗುತ್ತವೆ. ಆಟಿಕೆಗಳು, ಬಣ್ಣಗಳು, ಕೆಣಕು ತಿಣುಕುಗಳು ನಮ್ಮ ಮೆದುಳಿಗೆ ಮೇವು ಹಾಕುವುದ್ದಲ್ಲದೇ, ಸದಾ ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತವೆ. ವಿವಿಧ ವಯೋಮಾನಗಳಲ್ಲಿ ಅಭಿರುಚಿಗಳು ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ನಿಮ್ಮ ಪ್ರವಾಸಗಳು, ಪುಣ್ಯಕ್ಷೇತ್ರಗಳ ಭೇಟಿ ಮುಂತಾದವುಗಳ ಫೋಟೋಗಳನ್ನು ಆಲ್ಬಮ್ ಮಾಡಿ ಕೈಗೆ ಎಟುಕುವಂತೆ ಇಟ್ಟಿರಿ. ನಿಮ್ಮ ಮನೆಗೆ ಸ್ನೇಹಿತರು ಸಂಬಂಧಿಕರು ಬಂದಾಗ, ಮಾತುಕಥೆಯ ಮಧ್ಯೆ ಈ ಆಲ್ಪಮ್ ತುಂಬಾ ಪ್ರಯೋಜನಕಾರಿಯಾಗುತ್ತದೆ.

ಮನೆಯ ಎಲ್ಲ ಸದಸ್ಯರ ಹವ್ಯಾಸಗಳು ಮತ್ತು ಅಭಿರುಚಿಗಳು ವಿಧ ವಿಧವಾಗಿರುತ್ತವೆ. ಆದ್ದರಿಂದ ಒಟ್ಟಾರೆಯಾಗಿ ಒಂದು ಸದಭಿರುಚಿಯ ಗೃಹಾಲಂಕಾರದಿಂದ ಎಲ್ಲರೂ ಸುಖ ಶಾಂತಿಯಿಂದ ಜೀವಿಸಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ವಾತಾವರಣಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳು ಅತ್ಯಂತ ಅವಶ್ಯವಾಗಿರುತ್ತವೆ.

ಹೀಗಾಗಿ, ಗೃಹಾಲಂಕಾರ ಎನ್ನುವುದು ನೆಮ್ಮದಿಯ ಬದುಕಿಗೆ ಮತ್ತು ಉದಾತ್ತ ಯೋಚನೆಗಳಿಗೆ ಪೂರಕವಾಗಿರುತ್ತದೆ. ಅಲ್ಲದೆ, ಗೃಹಾಲಂಕಾರ ಅವರವರ ಅಭಿರಚಿಗೆ ಹಿಡಿದ ಕೈಗನ್ನಡಿ!

ರತ್ನಾ ರಾವ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ