ಮನೆಯ ಅಲಂಕಾರ ಎಂಬುದು ಆ ಮನೆಯೊಡತಿಯ ಅಭಿರುಚಿಗೆ ಹಿಡಿದ ಕೈಗನ್ನಡಿ. ಇದು ಅಚ್ಚುಕಟ್ಟಾಗಿರಲು ಮನೆಯವರೆಲ್ಲರ ಸಹಕಾರ ಅತ್ಯಗತ್ಯ. ನಮ್ಮ ಬಜೆಟ್ ಗೆ ಹೊಂದುವಂತೆ ಯಾವ ರೀತಿಯಲ್ಲಿ ಅಲಂಕರಿಸಿದರೆ ಮನೆ ಇನ್ನಷ್ಟು ಕಳೆಕಳೆಯಾಗಿರಲು ಸಾಧ್ಯ? ಇದರ ರಹಸ್ಯವೇನು? ಬನ್ನಿ, ವಿವರವಾಗಿ ತಿಳಿಯೋಣ.
ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ದಿವ್ಯಾ, ಬೆಳಗ್ಗೆ 8 ರಿಂದ ಸಾಯಂಕಾಲ 5 ಗಂಟೆಯವರೆಗೂ ಆಫೀಸಿನಲ್ಲಿಯೇ ಸಮಯ ಕಳೆಯುತ್ತಾರೆ. ಸಾಯಂಕಾಲ 6 ಗಂಟೆಗೆ ಮನೆಗೆ ಬಂದ ಕೂಡಲೇ ತಮ್ಮ ಅಡ್ವಾನ್ಸ್ಡ್ ಡಿಸೈನರ್ ಕಿಚನ್ ಗೆ ನುಗ್ಗುತ್ತಾರೆ. ಹಾಗೆಯೇ, ಮನೋಜ್ ಒಬ್ಬ ಕ್ಯಾಬ್‌ಡ್ರೈವರ್. ತುಂಬಾ ಪರಿಶ್ರಮದಿಂದ ಫೋರ್ ವ್ಹೀಲರ್ ಗಳನ್ನು ಓಡಾಡಿಸಿ ದಣಿವಿಗೆ, ರಾತ್ರಿ 8 ಗಂಟೆಗೆ ಮನೆ ತಲುಪಿದ ತಕ್ಷಣ ಚಾಪೆ ಹಾಸಿಕೊಂಡು ಹಾರ್ಮೋನಿಯಂ ನುಡಿಸತೊಡಗುತ್ತಾರೆ. ಇನ್ನು ತಮ್ಮ ಸ್ವಂತದ ಬೊಟಿಕ್ ನಡೆಸುತ್ತಿರುವ ಸುಧಾಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದೇ ಒಂದು ಕಷ್ಟ. ತಡರಾತ್ರಿ ಅವರು ಮನೆಗೆ ಬಂದಾಕ್ಷಣ ತಮ್ಮ ಅವಳಿ ಮಕ್ಕಳೊಂದಿಗೆ ಸೇರಿಕೊಳ್ಳುತ್ತಾರೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನೀವು ಯಾವಾಗಲಾದರೂ ಸರಿ, ದುಡಿದು ದಣಿವಾಗಿ ಮನೆ ಸೇರಿಕೊಂಡಾಗ, ನಿಮ್ಮ ಮನೆ, ನಿಮಗೆ ನೆಮ್ಮದಿ ನೀಡುವಂತಿರಬೇಕು. ದಣಿದ ಜೀವಕ್ಕೆ ಚೈತನ್ಯ ನೀಡುವಂತಿರಬೇಕು. ಅದುವೇ ಸ್ವರ್ಗ!
ಹೀಗೆ ಮನೆ ಪ್ರವೇಶಿಸಿದ ಕೂಡಲೇ ಆಪ್ಯಾಯಮಾನದ ಅನುಭೂತಿಯಾಗುವುದು ಕೇವಲ ಮನೆಯ ಒಡೆಯರಿಗೇ ಮಾತ್ರವಲ್ಲ. ಮಕ್ಕಳು, ಹಿರಿಯರು, ಸ್ನೇಹಿತರು, ಅತಿಥಿಗಳು ಯಾರಾದರೂ ಸರಿ ಮನೆ ಮಂದಿಗೆಲ್ಲ ಮುದ ನೀಡುತ್ತದೆ. ಮನೆ ಎನ್ನುವುದು ಶಾಂತಿ ನೆಮ್ಮದಿ ನೀಡುವುದರ ಜೊತೆಗೆ ನೈಸರ್ಗಿಕ ಸಮಸ್ಯೆಗಳನ್ನೆಲ್ಲ ಬಾಗಿಲಿನ ಆಚೆಗೆ ತಡೆಹಿಡಿಯುವ ವೈಯಕ್ತಿಕ ನೆಲೆ ಎಂದರೆ ಅತಿಶಯೋಕ್ತಿಯೇನಲ್ಲ.
ಅಂದಿನ ಕಾಲದಲ್ಲಿ ನನ್ನ ಅಜ್ಜಿ `ನಗುವೇ ಹೆಣ್ಣಿಗೆ ಬಹು ದೊಡ್ಡ ಆಭರಣ,' ಎಂದು ಹೇಳುತ್ತಿದ್ದರು. ಅಂತೆಯೇ ಈಗ `ಮನೆಯ ಸೌಂದರ್ಯ, ಅದು ಹೇಗೆ ನಿಮ್ಮನ್ನು ಸ್ವಾಗತಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ,' ಎಂದು ಹೇಳಿದರೆ ತಪ್ಪೇನಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನ ಮನೆಯನ್ನು ತನ್ನ ಅಭಿರುಚಿ, ಅನುಕೂಲ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅಲಂಕರಿಸುವುದು ಸಹಜವಾಗಿದೆ. ಬಹುಶಃ ನಿಮ್ಮ ಅನುಭವಕ್ಕೂ ಬಂದಿರಬಹುದಾದ ಸಂಗತಿ ಏನೆಂದರೆ, ಯಾವುದಾದರೂ ಮನೆಗೆ ಹೋಗಿದ್ದಾಗ, ಮನೆಯ ಒಳಗೆ ಹೆಜ್ಜೆಯಿಟ್ಟ ಕೂಡಲೇ ಅದೇನೋ ಒಂದು ಪ್ರಶಾಂತತೆ, ಶಿಸ್ತುಬದ್ಧ ಆಕರ್ಷಣೆ, ಸ್ವಚ್ಛ ಶುಭ್ರ ನೆಮ್ಮದಿಯ ವಾತಾವರಣವನ್ನು ನೀವು ಅನುಭವಿಸಿರಬಹುದು. ಮತ್ತೆ ಮತ್ತೆ ಆ ಮನೆಗೆ ಹೋಗಬೇಕು ಎಂದೂ ಅನಿಸಿರಬಹುದು. ಅಂದಮೇಲೆ ಒಂದು ಸಿನಿಮಾದ ಯಶಸ್ಸನ್ನು ಬಾಕ್ಸ್ ಆಫೀಸಿನಿಂದ ತೂಗಿದರೆ, ಒಂದು ಮನೆಯ ಯಶಸ್ಸನ್ನು ಆ ಮನೆಯಲ್ಲಿರುವ ನೆಮ್ಮದಿ ಸಂತೋಷ ನಗುವಿನಿಂದ ಅಳೆಯಬಹುದಲ್ಲವೇ?
ಹಾಗಾದ್ರೆ ಈಗ ಹೇಳಿ, ನಿಮ್ಮ ಮನೆಯನ್ನು ನೀವು ಹೇಗೆ ಅಲಂಕರಿಸಬೇಕು ಎಂದುಕೊಂಡಿರುವಿರಿ?
ಒಂದು ವಿಧದಲ್ಲಿ ಹೇಳಬೇಕಂದ್ರೆ, ಒಂದು ಸಾಮಾನ್ಯ 3d ಸೂತ್ರವನ್ನು ಅನುಸರಿಸಬೇಕು. 3 d ಎಂದರೆ ಡಿಗ್ನಿಟಿ, ಡಿಲೈಟ್ ಮತ್ತು ಡಿಫರೆನ್ಸ್. ಇದನ್ನು ಅನುಸರಿಸಿದ್ದಾದಲ್ಲಿ ನಿಮ್ಮ ಗೃಹಾಲಂಕಾರ ಅತ್ಯಾಕರ್ಷಕವಾಗುವುದರಲ್ಲಿ ಸಂಶಯವಿಲ್ಲ.