ಧಾವಂತದ ಈ ಬದುಕಿನಲ್ಲಿ ಕೆಲವು ಕ್ಷಣಗಳನ್ನು ನಿಮ್ಮವರೊಂದಿಗೆ ಖುಷಿಯಿಂದ ಕಳೆಯುವಂತಾದರೆ ಎಷ್ಟು ಸೊಗಸು? ಹಬ್ಬಗಳ ಸೀಸನ್‌ ತನ್ನೊಂದಿಗೆ ಇಂತಹ ಅನೇಕ ಕ್ಷಣಗಳನ್ನು ಹೊತ್ತು ತರುತ್ತದೆ. ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೇ ಸೇರಿ ಮನೆಯನ್ನು ಅಲಂಕರಿಸುತ್ತಾರೆ ಮತ್ತು ಸಂತಸದ ಸವಿ ಕ್ಷಣಗಳ ಆನಂದ ಹೊಂದುತ್ತಾರೆ.

ಈಗ ಹಬ್ಬಗಳ ಸೀಸನ್‌ ಆಗಿದ್ದು ಶುಭಾಶಯಗಳನ್ನು, ಅಭಿನಂದನೆಗಳನ್ನು ತಿಳಿಸಲು ಅತಿಥಿಗಳು ಖಂಡಿತಾ ಬರುತ್ತಾರೆ. ಅವರನ್ನು ಸ್ವಾಗತಿಸಲು ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಿದರೆ ಸಂತೋಷದ ಜೊತೆಗೆ ಪ್ರಶಂಸೆಗಳ ರಂಗೂ ಸೇರಿಕೊಳ್ಳುತ್ತದೆ.

ಈವೆಂಟ್‌ ಕ್ರಿಯೇಶನ್ಸ್ ನ ಕವಿತಾ ಗುಪ್ತಾ ಇಂತಹ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅವುಗಳ ಸಹಾಯದಿಂದ ನೀವು ಬಹಳ ಸುಂದರವಾಗಿ ನಿಮ್ಮ ಮನೆಯ ರೂಪುರೇಷೆಗಳನ್ನು ಬದಲಿಸಬಹುದು. ಹಬ್ಬಗಳಲ್ಲಿ ಮನೆಯ ಶೋಭೆ ಹೆಚ್ಚುತ್ತದೆ. ಜೊತೆಗೆ ಪರಸ್ಪರ ಪ್ರೀತಿ ಹೆಚ್ಚುತ್ತದೆ. ಇಂತಹ ಅವಕಾಶಗಳನ್ನು ಕಳೆದುಕೊಳ್ಳುವುದು ತಪ್ಪು. ಅತಿಥಿಗಳೂ ನಿಮ್ಮ ಮನೆಯನ್ನು ಕಂಡು, “ವಾಹ್, ಎಷ್ಟು ಚೆನ್ನಾಗಿ ಇಟ್ಟುಕೊಂಡಿದ್ದೀರಿ,” ಎನ್ನುತ್ತಾರೆ.

ಮನೆಯ ಸಿಂಗಾರಕ್ಕಾಗಿ ಕವಿತಾ ಕೊಟ್ಟ ಸಲಹೆಗಳು ಹೀಗಿವೆ :

ಗೋಡೆಗಳಿಗೆ ಸಂತಸದ ಬಣ್ಣ ಹಚ್ಚಿ ಹಬ್ಬದ ಸಂದರ್ಭದಲ್ಲಿ ಗೋಡೆಗಳು ನಿರ್ಜೀವವಾಗಿ ಕಾಣುವುದು ಸರಿಯಲ್ಲ. ನಿಮ್ಮ ಮನೆಗೆ ಹೊಸ ಲುಕ್‌ ಕೊಡಲು ಗೋಡೆಗಳಿಗೆ ಪೇಂಟ್‌ ಮಾಡಿಸುವುದು ಅಗತ್ಯ. ಪ್ರತಿ ಕೋಣೆಯ ಗೋಡೆಗೂ ಬೇರೆ ಬೇರೆ ಬಣ್ಣ ಹಾಕಿಸಲು ಇಚ್ಛಿಸಿದರೆ ಯಾವುದಾದರೂ ಪೇಂಟ್‌ ಶಾಪ್‌ ಗೆ ಹೋಗಿ ಪೇಂಟ್‌ ಬುಕ್‌ ಲೆಟ್‌ ನಿಂದ ಮಾಹಿತಿ ಪಡೆಯಬಹುದು. ಈಗ ಪೇಂಟ್‌ ನೊಂದಿಗೆ ಅನೇಕ ಟೆಕ್ಸ್ ಚರ್‌ ಗಳೂ ಚಾಲನೆಯಲ್ಲಿವೆ. ನಿಮಗಿಷ್ಟವಾದ ಥೀಮ್ ನೊಂದಿಗೆ ಸರಿಯಾದ ಟೆಕ್ಸ್ ಚರ್‌ ನ ಆಯ್ಕೆಯನ್ನು ಸುಲಭವಾಗಿ ಮಾಡಬಹುದು. ಮಾರುಕಟ್ಟೆಯಲ್ಲಿ ಕೆಳಕಂಡ ಟೆಕ್ಸ್ ಚರ್‌ ಗಳ ವಿಶೇಷ ಟ್ರೆಂಡ್‌ ಇದೆ :

ಗೋಲ್ಡನ್‌ ಟಚ್‌ ಟೆಕ್ಸ್ ಚರ್‌

ಮಾರ್ಬಲ್ ಸ್ಟೋನ್‌ ಟೆಕ್ಸ್ ಚರ್‌

ಆ್ಯಬ್‌ ಸ್ಟ್ರಾಕ್ಟ್ ಟೆಕ್ಸ್ ಚರ್‌

ಗ್ಲಾಸಿ ಟೆಕ್ಸ್ ಚರ್‌

ಪ್ರತಿ ಮೂಲೆಯ ವೈಭವ ಶೋಪೀಸ್‌ ಆಗಲಿ

ಈ ಎಲ್ಲ ಸಿದ್ಧತೆಗಳಲ್ಲದೆ ಮನೆಯ ಪ್ರತಿ ಮೂಲೆಯ ಶೋಭೆ ಹೆಚ್ಚಿಸಲು ಮಾರುಕಟ್ಟೆಯಿಂದ ಮನಮೋಹಕ ಶೋಪೀಸ್‌ ತಂದು ಮನೆಯ ಪ್ರತಿ ಮೂಲೆಯನ್ನೂ ಅಲಂಕರಿಸಿ. ಏನೂ ಇಲ್ಲದಿದ್ದರೆ ಸುಂದರವಾದ ಫ್ಲವರ್‌ ವಾಸ್‌ ಇಡಬಹುದು.

ಲೈಟ್ನಿಂದ ಝಗಮಗಿಸುವ ಮನೆ

ಯಾವುದೇ ಸೆಲೆಬ್ರೇಶನ್‌ ಲೈಟ್‌ ಹೊಳಪಿಲ್ಲದೆ ಹೇಗೆ ಪೂರ್ಣಗೊಳ್ಳುತ್ತದೆ? ಲೈಟ್‌ ಝಗಮಗಿಸುತ್ತಿದ್ದರೆ ನಿಮ್ಮ ಸಂತಸಕ್ಕೆ ಇನ್ನೆರಡು ಕೋಡು ಮೂಡುತ್ತದೆ. ಸಂತಸ ನಿಮ್ಮ ಬದುಕಿನಲ್ಲಿ ಬರುವ ಹೊಸ ಪ್ರಕಾಶದ ಸೂಚಕವಾಗಿದೆ. ನಿಮ್ಮ ಗೋಡೆಗಳು, ಕಿಟಕಿಗಳು, ಕೋಣೆಗಳು ಮತ್ತು ಬಾಗಿಲುಗಳನ್ನು ಒಳ್ಳೆಯ ಝಗಮಗಿಸುವ ಸೀರಿಯಲ್ ಸೆಟ್‌ ಮತ್ತು ಬೆಲ್ಟ್ ಗಳಿಂದ ಅಲಂಕರಿಸಿ. ಛಾವಣಿಯನ್ನು ಅಲಂಕರಿಸಲು ಸುಂದರವಾದ ಝೂಮರ್‌ ನ್ನೂ ಉಪಯೋಗಿಸಬಹುದು. ನಿಮ್ಮ ಮನೆಯ ಗೋಡೆಗಳು, ಬಾಗಿಲುಗಳ ಬಣ್ಣದೊಂದಿಗೆ ಮ್ಯಾಚ್‌ ಆಗುವಂತಹ ಲೈಟ್‌ ಗಳನ್ನು ಅಳವಡಿಸಿ. ಯಾವುದೇ ಡಬಲ್ ಡಾರ್ಕ್‌ ಶೇಡ್‌ ನದು ಆಗಿರಬಾರದು. ಅದರಿಂದ ನಿಮ್ಮ ಮನೆಯ ಮೂಲೆಗಳು ನಿರ್ಜೀವವಾಗಿ ಮತ್ತು ಕತ್ತಲಲ್ಲಿ ಇದ್ದಂತೆ ಅನ್ನಿಸುತ್ತದೆ.

ಕಿಟಕಿ, ಬಾಗಿಲುಗಳ ನಕ್ಷೆ ಬದಲಿಸಿ

ಯಾವುದೇ ಹಬ್ಬವನ್ನು ಸುಂದರಗೊಳಿಸಬೇಕೆಂದರೆ ಕಿಟಕಿ ಮತ್ತು ಬಾಗಿಲುಗಳಿಗೆ ಹೊಸ ಲುಕ್‌ ಕೊಡುವುದು ಅಗತ್ಯ. ಕಿಟಕಿ ಬಾಗಿಲುಗಳನ್ನು ಅಲಂಕರಿಸಲು ಸುಂದರ ಬಣ್ಣಗಳು, ಡಿಸೈನ್‌ ಇರುವ ಪ್ರಿಂಟ್‌ ಗಳ ಪರದೆಗಳನ್ನು ಆರಿಸಿ ಮತ್ತು ಅವನ್ನು ಮಾಡರ್ನ್‌ ಸ್ಟೈಲ್ ‌ನಲ್ಲಿ ಹೊಲಿಸಿ. ಅದರಿಂದ ನಿಮ್ಮ ಮನೆಗೆ ರಿಫ್ರೆಶಿಂಗ್‌ ಮತ್ತು ಮಾಡರ್ನ್‌ ಟಚ್‌ ಸಿಗುತ್ತದೆ. ಪರದೆಗಳ ಬಣ್ಣ ಮತ್ತು ಪ್ರಿಂಟ್‌ ನಿಮ್ಮ ಗೋಡೆಗಳ ಅನುಸಾರವಾಗಿಯೇ ಆರಿಸಿ.

ಪೇಂಟಿಂಗ್ಮತ್ತು ಫೋಟೋಗಳಿಂದ ಪ್ರತಿ ಮೂಲೆ ಅಲಂಕರಿಸಿ

ಪೇಂಟಿಂಗ್‌, ಫೋಟೋಗಳು ಮತ್ತು ಕಲಾಕೃತಿಗಳಿಂದ ಮನೆಯನ್ನು ಅಲಂಕರಿಸಿದರೆ ಮನೆ ಜೀವಂತಿಕೆಯಿಂದ ತುಂಬುತ್ತದೆ. ನಿಮ್ಮ ಮನೆಯ ಗೋಡೆಗಳಿಗೆ ಸುಂದರ, ಮನಮೋಹಕ ಪೇಂಟಿಂಗ್ಸ್ ಅಳವಡಿಸಿದರೆ ಗೋಡೆಗಳು ಖಾಲಿಯಾಗಿ ನಿರ್ಜೀವವಾಗಿ ಕಂಡುಬರುವುದಿಲ್ಲ. ಉತ್ತಮ ಪೇಂಟಿಂಗ್ಸ್ ಆರಿಸಲು ಯಾವುದಾದರೂ ಪೇಂಟಿಂಗ್‌ ಶಾಪ್‌ ಗೆ ಹೋಗಿ ಸಲಹೆ ಪಡೆಯಬಹುದು. ಇದಲ್ಲದೆ ನಿಮ್ಮ ಫ್ಯಾಮಿಲಿ ಫೋಟೋಗಳಿಗೆ ಫ್ರೇಮ್ ಹಾಕಿಸಿ ಗೋಡೆಗಳಿಗೆ ತೂಗುಹಾಕಿ. ಈ ಫ್ಯಾಮಿಲಿ ಫೋಟೋಗಳು ಆ ಮನೆಯಲ್ಲಿ ತಮ್ಮತನದ ಒಂದು ಸುಗಂಧದ ಅನುಭವ ಮೂಡಿಸುತ್ತದೆ. ಜೊತೆಗೆ ನಿಮ್ಮ ಅತಿಥಿಗಳಿಗೂ ನಿಮ್ಮ ಸೌಂದರ್ಯ ಹಾಗೂ ಸುಂದರ ನೆನಪುಗಳನ್ನು ಮುಖಾಮುಖಿಯಾಗಿಸುತ್ತದೆ. ನಿಮಗೆ ಪೇಂಟಿಂಗ್‌ ಮಾಡುವ ಆಸಕ್ತಿ ಇದ್ದರಂತೂ ಚಿನ್ನಕ್ಕೆ ಪುಟವಿಟ್ಟಂತೆಯೇ ಸೈ.

ಮನೆ ತುಂಬಾ ಹೂಗಳ ಸುವಾಸನೆಯಿರಲಿ

ಹೂಗಳು ಮನೆಯ ಹೊರಗೆ ತೋಟದ ಶೋಭೆ ಹೆಚ್ಚಿಸುವುದಲ್ಲದೆ, ಮನೆಯೊಳಗೂ ಪ್ರತಿ ಮೂಲೆಯಲ್ಲೂ ಸುವಾಸನೆ ಬೀರುತ್ತವೆ. ಹೂಗಳಿಂದ ಅಲಂಕೃತವಾದ ಮನೆಯಲ್ಲಿ ಸದಾ ಪಾಸಿಟಿವ್ ‌ಆಲೋಚನೆಗಳು ಮತ್ತು ಎನರ್ಜಿ ಇರುತ್ತವೆ. ಮನೆಯಲ್ಲಿ ಪಾರ್ಟಿ ಇದ್ದಾಗ ಹೂಗಳ ಸುವಾಸನೆ ಎಲ್ಲ ಕೊರತೆಗಳನ್ನೂ ಮುಚ್ಚಿಹಾಕುತ್ತದೆ. ಮನೆಯ ಪ್ರತಿ ಮೂಲೆ, ಟೇಬಲ್ ಇತ್ಯಾದಿಗಳನ್ನು ಹೂಗಳಿಂದ ಅಲಂಕರಿಸಿ. ಹೂವಿನ ಹಾರಗಳಿಂದ ನಿಮ್ಮ ಮನೆಯ ಮೆಟ್ಟಿಲುಗಳು, ಬಾಗಿಲುಗಳು ಮತ್ತು ಕಿಟಕಿಗಳನ್ನೂ ಅಲಂಕರಿಸಬಹುದು.

ಕಾರ್ಪೆಟ್ಕೂಡ ಜೀವಂತಿಕೆಯಿಂದಿರಲಿ

ಫ್ಲೋರಿಂಗ್‌ ಮನೆಯ ಆಧಾರವಾಗಿದೆ. ಅದನ್ನು ನಿರ್ಜೀವದಂತೆ ಹೇಗೆ ಇಡಲಾಗುತ್ತದೆ. ನೆಲವನ್ನು ಸಿಂಗರಿಸಲು ಫಿನಿಶಿಂಗ್ ಮಾಡಿಸಬಹುದು ಅಥವಾ ಸುಂದರವಾದ ಕಾರ್ಪೆಟ್‌ ಅಥವಾ ರಂಗೋಲಿಯಿಂದಲೂ ಅಲಂಕರಿಸಬಹುದು. ಮನೆಯ ಎಲ್ಲ ಕೋಣೆಗಳು, ಡ್ರಾಯಿಂಗ್‌ ರೂಮ್, ಬೆಡ್‌ ರೂಮಿನಲ್ಲಿ ಬೇರೆ ಬೇರೆ ರೀತಿಯ ಕಂಬಳಿಗಳನ್ನು ಹರಡಿ ಮತ್ತು ಸುಂದರವಾದ ಫುಟ್ ರಗ್‌ ಗಳನ್ನು ಹಾಕಿ.

ಸುಂದರ ಬೆಡ್ಶೀಟ್ಮತ್ತು ಕುಶನ್

ಸುಂದರಾದ ಬೆಡ್‌ ಶೀಟ್‌ ಮತ್ತು ಕುಶನ್‌ ಗಳಿಂದಲೂ ಮನೆಯನ್ನು ಸುಂದರವಾಗಿ ಸಿಂಗರಿಸಬಹುದು. ಸಾಮಾನ್ಯವಾಗಿ ಮನೆಯ ಬೆಡ್‌ ಶೀಟ್‌ ಗಳನ್ನು ಬದಲಿಸಬಹುದು. ಆದರೆ ಪಾರ್ಟಿಯ ವಿಷಯವಾಗಿದ್ದರೆ ಕೊಂಚ ವಿಶೇಷವಾಗಿ ವ್ಯವಸ್ಥೆ ಮಾಡುವುದು ಒಳ್ಳೆಯದು. ವಿಶೇಷ ಸಂದರ್ಭಗಳಲ್ಲಿ ಸುಂದರವಾದ ಸ್ಯಾಟಿನ್‌ ಬೆಡ್‌ ಶೀಟ್‌ ಮತ್ತು ಕುಶನ್‌ ಗಳಿಂದ ನಿಮ್ಮ ಬೆಡ್‌ ಮತ್ತು ಸೋಫಾಗಳನ್ನು ಸಜ್ಜುಗೊಳಿಸಿ. ಅವುಗಳ ಬಣ್ಣ ಮತ್ತು ಪ್ರಿಂಟ್‌ ಗಳನ್ನು ಕೋಣೆಯ ಬಣ್ಣಕ್ಕೆ ತಕ್ಕಂತೆಯೇ ಆರಿಸಿ.

ಸುವಾಸನೆಭರಿತ ಮನೆ

ಸುವಾಸನೆಭರಿತ ಮನೆ ಹಬ್ಬಗಳಲ್ಲಿ ಜೀವ ತುಂಬುತ್ತದೆ. ನಿಮ್ಮ ಮನೆಯ ಜೀವಂತಿಕೆ ಹೆಚ್ಚಿಸಲು ಉತ್ತಮ ಗುಣಮಟ್ಟದ ಸುವಾಸನೆಯುಳ್ಳ ರೂಮ್ ಫ್ರೆಶ್‌ ನರ್‌ ಮತ್ತು ಪರ್ಫ್ಯೂಮ್ ಇತ್ಯಾದಿ ಸಿಂಪಡಿಸಿದರೆ ಎಲ್ಲರ ಮನಸೆಳೆಯುತ್ತದೆ. ಈ ರೀತಿ ಮನಮೋಹಕ ಸಿದ್ಧತೆಗಳನ್ನು ಮಾಡಿ ನೀವು ರಂಗುರಂಗಿನ ಹಬ್ಬಗಳ ಸಂಪೂರ್ಣ ಮೋಜು ಅನುಭವಿಸಬಹುದು. ನೀವು ಮನೆಯ ಅಲಂಕಾರಕ್ಕಾಗಿ ಶ್ರಮಪಟ್ಟಿದ್ದು ವ್ಯರ್ಥವಾಗುವುದಿಲ್ಲ. ಮನೆಗೆ ಬರುವ ಎಲ್ಲ ಅತಿಥಿಗಳೂ ನಿಮ್ಮನ್ನು ಬಾಯಿ ತುಂಬಾ ಹೊಗಳುತ್ತಾರೆ.

ಗಿರಿಜಾ ಶೈಲೇಂದ್ರ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ