ಸುಜಾತಾ ಮನೆಗಾಗಿ ಕೆಲವು ಹೊಸ ಸಾಮಾನುಗಳನ್ನು ಖರೀದಿಸಲು ಇಚ್ಛಿಸಿದ್ದಳು. ಆದರೆ ಆಕೆಗೆ ಹಳೆಯ ವಸ್ತುಗಳನ್ನು ಏನು ಮಾಡುವುದೆಂದು ತಿಳಿಯುತ್ತಿರಲಿಲ್ಲ. ಮೊದಲು ಆಕೆ ಅವನ್ನು ಮಾರಿಬಿಡಬೇಕೆಂದು ಯೋಚಿಸಿದಳು. ಆದರೆ ಮಾರಲು ಹೋದಾಗ ಅದೆಷ್ಟು ಕಡಿಮೆ ಬೆಲೆಗೆ ಕೇಳಿದರೆಂದರೆ, ಅವನ್ನು ಯಾರಿಗಾದರೂ ಹಾಗೆಯೇ ಕೊಟ್ಟುಬಿಡೋಣ ಎನಿಸಿತು.

ಅದೊಂದು ದಿನ ಆಕೆಯ ಗೆಳತಿ ವಿದ್ಯಾ ವಿದೇಶದಿಂದ ಬಂದಳು. ಮಾತುಮಾತಿನಲ್ಲಿಯೇ ಸುಜಾತಾಳ ಸಮಸ್ಯೆ ಆಕೆಯ ಅರಿವಿಗೆ ಬಂದಾಗ ಆಕೆ ನೀಡಿದ ಸಲಹೆಗಳು ಹಳೆಯ ವಸ್ತುಗಳನ್ನು ಹೊಸ ರೀತಿಯಲ್ಲಿ ಪುನರ್ಬಳಕೆ ಮಾಡಿಕೊಳ್ಳಬೇಕೆಂಬ ಇಚ್ಛೆ ಜಾಗೃತವಾಯಿತು.

ವಿದ್ಯಾ ಈ ನಿಟ್ಟಿನಲ್ಲಿ ಸುಜಾತಾಗೆ ನೆರವು ನೀಡಿದಳು ಹಾಗೂ ಹಳೆಯ ವಸ್ತುಗಳಿಗೆ ಸೃಜನಶೀಲತೆಯಿಂದ ಹೊಸ ರೂಪ ನೀಡುವುದನ್ನು ತಾನೇ ತೋರಿಸಿಕೊಟ್ಟಳು.

ಡ್ರೆಸ್ಸಿಂಗ್ಟೇಬಲ್/ಮಿರರ್

ನಿಮ್ಮ ಡ್ರೆಸ್ಸಿಂಗ್‌ ಟೇಬಲ್ ಅನೇಕ ವರ್ಷಗಳಷ್ಟು ಹಳೆಯದಾಗಿದೆ. ಹೊಸದನ್ನು ಖರೀದಿಸಬೇಕೆಂದು ನಿಮ್ಮ ಮನಸ್ಸು ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಹಳೆಯದನ್ನು ಏನು ಮಾಡಬೇಕೆಂಬ ಗೊಂದಲ. ನಿಮ್ಮ ಮನಸ್ಸು ಕುಗ್ಗಿಸಿಕೊಳ್ಳಬೇಡಿ. ಹಳೆಯ ಡ್ರೆಸ್ಸಿಂಗ್‌ಟೇಬಲ್ ನ್ನು ಬಾಲ್ಕನಿ ಅಥವಾ ಗಾರ್ಡನ್‌ ನಲ್ಲಿ ಇಟ್ಟು ಅಲ್ಲಿನ ಸೌಂದರ್ಯ ವರ್ಧಿಸಬಹುದು. ಸಂಜೆ ಅಥವಾ ರಾತ್ರಿ ಅಲ್ಲಿ ಕೆಲವು ಮೇಣದಬತ್ತಿಗಳನ್ನು ಉರಿಸಿ ರೊಮ್ಯಾಂಟಿಕ್‌ ಬೆಳಕನ್ನು ಬೀರಬಹುದು. ಡ್ರೆಸ್ಸಿಂಗ್‌ ಟೇಬಲ್ ನ ಡ್ರಾಯರ್‌ ನಲ್ಲಿ ಕೆಲವು ಪುಸ್ತಕಗಳನ್ನು ಮ್ಯೂಸಿಕ್‌ ಸಿ.ಡಿ.ಗಳನ್ನು ಕೂಡ ಇಡಬಹುದಾಗಿದೆ.

ನೀವು ಕನ್ನಡಿಯನ್ನು ಬೇಕಾದರೆ ಒಡೆದು ಅದರ ಚೂರುಗಳಿಂದ ಯಾವುದಾದರೂ ಡೆಕೊರೇಟಿವ್ ‌ಪೀಸ್‌ ನ್ನು ತಯಾರು ಮಾಡಿಕೊಳ್ಳಬಹುದು. ಈ ತುಂಡುಗಳನ್ನು ಅಂಟಿಸಲು ಬೇಸ್‌ ವುಡನ್‌ ನಿಮಗೆ ಡ್ರೆಸ್ಸಿಂಗ್‌ ಟೇಬಲ್ ನಿಂದಲೇ ದೊರಕುತ್ತದೆ. ಇದರ ಫ್ರೇಮಿಂಗ್‌ ಗೂ ಕೂಡ ಡ್ರೆಸಿಂಗ್‌ ಟೇಬಲ್ ನ ವುಡನ್‌ ನ್ನೇ ಉಪಯೋಗಿಸಿಕೊಳ್ಳಬಹುದು. ಇದಕ್ಕಾಗಿ ನಿಮಗೆ ಕಾರ್ಪೆಂಟರ್‌ನ ನೆರವು ಪಡೆದುಕೊಳ್ಳಬೇಕಾಗಿ ಬರಬಹುದು.

ಕನ್ನಡಿಯ ಸಣ್ಣ ಸಣ್ಣ ತುಂಡುಗಳನ್ನು ಹೂದಾನಿಯ ಮೇಲೆ ಅಂಟಿಸಿ ಅದಕ್ಕೆ ಹೊಸದೊಂದು ಲುಕ್‌ ಕೊಡಬಹುದು. ಡ್ರೆಸ್ಸಿಂಗ್ ಟೇಬಲ್ ನಿಂದ ಕನ್ನಡಿಯನ್ನು ಬೇರ್ಪಡಿಸಿದ ಬಳಿಕ ಅದರ ಉದ್ದನೆಯ ಬೇಸ್‌ ವುಡನ್‌ ನ್ನು ಗೋಡೆಯ ಮೇಲೆ ಉಪಯೋಗಿಸಬಹುದು. ಅದರ ಮೇಲೆ ಏನು ಬೇಕೊ ಅದನ್ನು ಅಂಟಿಸಬಹುದು. ಒಂದು ಸುಂದರ ಚಿತ್ರ ಅಂಟಿಸಿ ಕೋಲಾಜ್ ಮಾಡಿ ಅಥವಾ ಮಕ್ಕಳ ಕೋಣೆಯಲ್ಲಿ ಅದನ್ನು ಖಾಲಿಯಾಗಿಯೇ ತೂಗುಬಿಡಿ. ಅವರ ಇಷ್ಟದ ಮೇರೆಗೆ ಅದನ್ನು ಬಳಸಿಕೊಳ್ಳಲು ಬಿಡಿ.

ಟೇಬಲ್

November-011

ಟೇಬಲ್ ಚಿಕ್ಕದಾಗಿರಬಹುದು ಅಥವಾ ದೊಡ್ಡದು, ಅದನ್ನು ಯಾವುದೇ ರೀತಿಯಲ್ಲಾದರೂ ಅಚ್ಚುಕಟ್ಟಾಗಿ ಬಳಸಿಕೊಳ್ಳಬಹುದು. ಮನೆಯಲ್ಲಿಟ್ಟ ಹಳೆಯ ಟೇಬಲ್ ಮೇಲೆ ವಾಟರ್‌ ಪ್ರೂಫ್‌ ವಾರ್ನಿಶ್‌ ಮಾಡಿಸಿ ನೀವು ಅದನ್ನು ಗಾರ್ಡನ್‌ ನಲ್ಲಿ ಇಡಬಹುದು.

ರೀಸೈಕ್ಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸುದರ್ಶನ್‌ ಅವರ ಪ್ರಕಾರ, ನಿರುಪಯುಕ್ತವಾಗಿ ಬಿದ್ದ ಯಾವುದೇ ಫರ್ನೀಚರ್‌ ನ್ನು ಪುನರ್ಬಳಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮಗೆ ಒಬ್ಬ ಕಾರ್ಪೆಂಟರ್‌ ನ ಸಹಾಯ ಬೇಕಾಗಬಹುದು. ನೀವು ಟೇಬಲ್ ನ ಕಾಲುಗಳನ್ನು ಪೇಂಟಿಂಗ್‌ ನ ಫ್ರೇಮ್ ಗಳಿಗಾಗಿಯೂ ಬಳಸಿಕೊಳ್ಳಬಹುದು. ಅದನ್ನು ಉಪಯೋಗಿಸಿಕೊಳ್ಳುವ ಇನ್ನೊಂದು ವಿಧಾನವೆಂದರೆ, ಅದರ ಕಾಲುಗಳನ್ನು ಕಿರಿದುಗೊಳಿಸಿ, ಅದನ್ನು ಬೆಡ್‌ ಮೇಲೆ ಕುಳಿತುಕೊಂಡೇ ಬರೆಯಲು ಅಥವಾ ಲ್ಯಾಪ್‌ ಟಾಪ್‌ ಇಡಲು ಉಪಯೋಗಿಸಬಹುದು.

ಕಂಪ್ಯೂಟರ್ಕೀ ಬೋರ್ಡ್

ಕಂಪ್ಯೂಟರ್‌ ನ ಕೀಬೋರ್ಡ್‌ ಹಾಳಾದಾಗ, ಅದನ್ನು ಬದಿಗಿಟ್ಟು ನೀವು ಹೊಸದನ್ನು ಖರೀದಿಸಲು ಇಚ್ಛಿಸುತ್ತೀರಿ. ಆಗ ಹಳೆಯದನ್ನು ಏನು ಮಾಡಬೇಕು ಎಂಬ ಯೋಚನೆ ನಿಮಗೆ ಕಾಡಬಹುದು. ಗೊಂದಲಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಸ್ವಲ್ಪ ತಲೆ ಉಪೂೕಗಿಸಿ. ಕೀಬೋರ್ಡ್‌ ನ ಕೀಗಳ ಸಂದುಗಳ ಮಧ್ಯೆ ಮಣ್ಣು ಹಾಕಿ. ಅಲ್ಲಿ ಪುಟ್ಟ ಸಸಿಗಳ ಬೀಜಗಳನ್ನು ಹಾಕಿ. ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೊಡೆಯುತ್ತವೆ. ನೀವು ಕೀಬೋರ್ಡ್‌ ನ್ನು ಕೈ ತೋಟದ ಮಧ್ಯೆ ಇಡಬಹುದು ಇಲ್ಲಿ ಒಂದು ಟೇಬಲ್ ಮೇಲೆ ಇಟ್ಟು ಅದನ್ನು ಅಲಂಕರಿಸಬಹುದು.

ಲ್ಯಾಂಪ್ಶೇಡ್

ಲ್ಯಾಂಪ್‌ ನಿಮಗೆ ಬಹಳ ಇಷ್ಟ. ಅದರ ಜೊತೆಗೆ ಲ್ಯಾಂಪ್‌ ಶೇಡ್‌ ಕೂಡ. ಇದೇ ಕಾರಣದಿಂದ ನಿಮ್ಮ ಬಳಿ ಅನೇಕ ಲ್ಯಾಂಪ್‌ ಶೇಡ್ ಗಳು ಜಮೆಯಾಗಿರಬಹುದು. ಅವುಗಳನ್ನು ನೀವು ಹಣ್ಣು ಹಾಗೂ ತರಕಾರಿಗಳನ್ನು ಇಟ್ಟುಕೊಳ್ಳಲು ಬಳಸಿಕೊಳ್ಳಬಹುದು. ಲ್ಯಾಂಪ್ ಶೇಡ್‌ ನ ಮೇಲೆ ಅಲಂಕಾರಿಕ ಕಾಗದಗಳನ್ನು ಇಲ್ಲಿ ರಿಬ್ಬನ್‌ ಗಳನ್ನು ಅಂಟಿಸಿದರೆ ಅದು ಆಕರ್ಷಕವಾಗಿ ಕಂಗೊಳಿಸುತ್ತದೆ. ಇದಕ್ಕಾಗಿ ನೀವು ಬಣ್ಣದ ಬಟ್ಟೆಗಳನ್ನು ಕೂಡ ಉಪಯೋಗಿಸಬಹುದು.

ಕಾಂಪ್ಯಾಕ್ಟ್ ಡಿಸ್ಕ್

ಈಗ ಹಾಡುಗಳನ್ನು ಇಂಟರ್‌ ನೆಟ್‌ ನಿಂದ ಡೌನ್‌ ಲೋಡ್‌ ಮಾಡಿಕೊಂಡು ಕೇಳುವ ಕಾಲ. ಕಾಂಪ್ಯಾಕ್ಟ್ ಡಿಸ್ಕ್ ಗಳನ್ನು ಬಳಸುವುದು ಕಡಿಮೆಯೇ ಆಗಿಬಿಟ್ಟಿದೆ. ನಿಮ್ಮ ಮನೆಯಲ್ಲಿ ಅನೇಕ ಸಿ.ಡಿಗಳು ಹಾಗೆಯೇ ಇದ್ದುಕೊಂಡಿರಬಹುದು. ಅವನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು. ಸಿಡಿಗಳನ್ನು ವಾಲ್ ‌ಹ್ಯಾಂಗಿಂಗ್‌ ನಂತೆ ಬಳಸುವುದನ್ನು ನೀವು ಕೇಳಿರಬಹುದು. ಸಿಡಿಗಳನ್ನು ಕೋಸ್ಟರ್‌ ನಂತೆಯೂ ಬಳಸಬಹುದು. ಅದರ ಮೇಲೆ ಅಂಟು ಲೇಪಿಸಿ ಫೆಲ್ಟ್ ಟಾಯ್ಸ್ ನಲ್ಲಿ ಅಳವಡಿಸುವ ಮೃದುವಾದ ಎಳೆಗಳನ್ನು ಅಂಟಿಸಿ ಡೈನಿಂಗ್‌ ಟೇಬಲ್ ಮೇಲೆ ಇಡಿ.

ಇದರ ಹೊರತಾಗಿ ಸಿಡಿಗಳನ್ನು ಅಡುಗೆಮನೆಯ ಸ್ವಚ್ಛತೆಯ ಕೆಲಸದಲ್ಲೂ ಬಳಸಬಹುದು. ಸಿಡಿಯನ್ನು ಕತ್ತರಿಯಿಂದ ಮಧ್ಯ ಭಾಗದಲ್ಲಿ ಕತ್ತರಿಸಿಟ್ಟುಕೊಳ್ಳಿ. ಅಡುಗೆ ಮನೆಯಲ್ಲಿ ಕೊಳೆ ಮೆತ್ತಿಕೊಂಡಿದ್ದರೆ ಕತ್ತರಿಸಲ್ಪಟ್ಟ ಸಿಡಿಯಿಂದ ಚೆನ್ನಾಗಿ ಸ್ವಚ್ಛಗೊಳಿಸಬಹುದು. ನೀವು ಕಾರ್ಪೆಟ್‌ ಮೇಲೆ ಪೀಠೋಪಕರಣಗಳನ್ನು ಇಡುತ್ತಿದ್ದಲ್ಲಿ, ಕಾರ್ಪೆಟ್‌ ಮೇಲೆ ಅದರ ಕಾಲಿನ ಗುರುತುಗಳು ಬೀಳುತ್ತವೆ. ಒಂದು ವೇಳೆ ನೀವು ಕಾಲುಗಳ ಕೆಳಭಾಗದಲ್ಲಿ ಸಿಡಿ ಇಟ್ಟರೆ ಕಾರ್ಪೆಟ್‌ ಮೇಲೆ ಯಾವುದೇ ಗುರುತುಗಳು ಬೀಳುವುದಿಲ್ಲ. ನೀವು ಮನೆಯಲ್ಲಿ ಪೇಂಟ್‌ ಮಾಡುವವರಿದ್ದಲ್ಲಿ ಬಣ್ಣ ಮಿಕ್ಸ್ ಮಾಡಲು ಸಿಡಿಯನ್ನು ಉಪಯೋಗಿಸಬಹುದು.

ಹಳೆಯ ಜೀನ್ಸ್

ಹಳೆಯ ಬಟ್ಟೆಗಳನ್ನು ನಾವು ಅನೇಕ ರೀತಿಯಲ್ಲಿ ಉಪಯೋಗಿಸುತ್ತೇವೆ. ಆದರೆ ಜೀನ್ಸ್ ಅದೆಷ್ಟು ದಪ್ಪಗಿರುತ್ತದೆಂದರೆ, ಅದನ್ನು ಸ್ವಚ್ಛತೆ ಕೆಲಸದಲ್ಲಾಗಲಿ ದಿಂಬಿನ ಕವರ್‌ ನ ರೂಪದಲ್ಲಾಗಲಿ ಬಳಸಲು ಆಗುವುದಿಲ್ಲ.

ಜೀನ್ಸ್ ನಿಂದ ನೀವು ಬ್ಯಾಗ್‌ ತಯಾರಿಸಿಕೊಳ್ಳಬಹುದು. ಬ್ಯಾಗ್‌ ಮೇಲೆ ನಿಮಗೆ ಇಷ್ಟವಾಗುವ ಡಿಸೈನ್‌ ಕೂಡ ಹಾಕಿಸಿಕೊಳ್ಳಬಹುದು, ಸ್ಟಿಕರ್‌ ಕೂಡ ಅಂಟಿಸಿ ಅದಕ್ಕೆ ಇನ್ನಷ್ಟು ಸುಂದರ ರೂಪ ಕೊಡಬಹುದು. ಜೀನ್ಸ್ ಪ್ಯಾಂಟಿನ ಜೇಬುಗಳನ್ನು ಕತ್ತರಿಸಿಕೊಂಡು ಅದನ್ನು ಡೈರಿ ಇಡಲು ಬಳಸಬಹುದಾಗಿದೆ. ಫೋನ್‌ ಅಥವಾ ಟೇಬಲ್ ಮೇಲಿನ ಡೈರಿಯ ಬಳಿ ಇಟ್ಟು ಅದರಲ್ಲಿ ಪೆನ್‌ ಹಾಗೂ ಪೇಪರ್‌ ಕೂಡ ಇಡಬಹುದು.

ಜೀನ್ಸ್ ನ್ನು ನೀವು ಕಾಲೊರೆಸುವ ಸಾಧನವಾಗಿ ಬಳಸಬಹುದು. ಜೀನ್ಸ್ ನ ಮತ್ತೊಂದು ಒಳ್ಳೆಯ ಕೆಲಸವೆಂದರೆ ವ್ಯಾಕ್ಸಿಂಗ್‌. ನೀವು ಮೇಲಿಂದ ಮೇಲೆ ಮಾರುಕಟ್ಟೆಯಿಂದ ಖರೀದಿಸುವ ಬದಲು ಜೀನ್ಸ್ ನಿಂದ ತೆಳ್ಳನೆಯ ಸ್ಟ್ರಿಪ್ಸ್ ಕತ್ತರಿಸಿಕೊಂಡು ವ್ಯಾಕ್ಸಿಂಗ್ ನ್ನು ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಿ. ಬಳಿಕ ಅವನ್ನು ನೀರಿನಲ್ಲಿ ಅದ್ದಿ ಸ್ಪಚ್ಛ ಮಾಡಿಕೊಳ್ಳಿ.

ಸೈಕಲ್/ಕಬ್ಬಿಣದ ಇತರೆ ಸಾಮಗ್ರಿಗಳು

 

ನಿಮ್ಮ ಸೈಕಲ್ ಹಳೆಯದಾಗಿದೆ. ಮನೆಯ ಎಲ್ಲರೂ ಅದನ್ನು ಮಾರಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ನಿಮ್ಮ ಹಾಗೂ ನಿಮ್ಮ ಮಕ್ಕಳ ನೆನಪು ಅದರೊಂದಿಗೆ ತಳುಕು ಹಾಕಿಕೊಂಡಿವೆ. ಹೀಗಾಗಿ ನೀವು ಅದನ್ನು ಮಾರಲು ಹಿಂದೇಟು ಹಾಕುತ್ತಿದ್ದೀರಿ. ಆದರೆ ಅದು ಮನೆಯಲ್ಲಿ ಸಾಕಷ್ಟು ಜಾಗ ಬೇರೆ ಆಕ್ರಮಿಸಿಕೊಂಡಿದೆ.

ಇಂತಹದರಲ್ಲಿ ಅದನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು. ಕ್ರಿಯೇಟಿವ್ ಡಿಸೈನರ್‌ ನಿರ್ಮಲಾ ಶರ್ಮ ಅವರು ಹೀಗೆ ಹೇಳುತ್ತಾರೆ, “ಅದನ್ನು ಮನೆಯ ಮುಖ್ಯ ಗೇಟಿಗೆ ಯಾಕೆ ಅಳವಡಿಸಿಕೊಳ್ಳಬಾರದು? ಗೇಟು ನಿರ್ಮಿಸಿಕೊಳ್ಳುವಾಗ ಸೈಕಲ್ ನ್ನು ಅದರ ಮಧ್ಯೆ ವೆಲ್ಡಿಂಗ್‌ ನಿಂದ ಫಿಟ್‌ ಮಾಡಿಸಿಕೊಳ್ಳಿ. ಹೀಗೆ ಮಾಡುವುದು ಅತ್ಯಂತ ಆಕರ್ಷಕ ಹಾಗೂ ವಿನೂತನ ಎನಿಸುತ್ತದೆ. ನಿಮ್ಮ ಈ ಸೃಜನಶೀಲತೆಯನ್ನು ಮನೆಗೆ ಬರುವ ಅತಿಥಿಗಳು ಹೊಗಳದೆ ಇರಲಾರರು. ಮನೆಯ ಇತರೆ ವ್ಯರ್ಥ ಲೋಹದ ವಸ್ತುಗಳನ್ನು ಕೂಡ ಹೀಗೆಯೇ ವಿಶಿಷ್ಟವಾಗಿ ಬಳಸಿಕೊಳ್ಳಬಹುದು.

ಕೂಲರ್‌/ಟ್ರಂಕ್

IMG_4496

ನಿರ್ಮಲಾ ಅವರ ಪ್ರಕಾರ, ನಿಮ್ಮ ಮನೆಯಲ್ಲಿ ಹಳೆಯ ದೊಡ್ಡದಾದ ಕಬ್ಬಿಣದ ಪೆಟ್ಟಿಗೆ ಇದ್ದು, ಅದನ್ನು ಈಗ ಬಳಸುತ್ತಿಲ್ಲ ಎಂದಾದರೆ, ಅದನ್ನು ಯಾವುದಾದರೂ ಮೂಲೆಯಲ್ಲಿಟ್ಟು ಕುಳಿತುಕೊಳ್ಳುವ ಸಾಧನವಾಗಿ ಬಳಸಬಹುದು. ಅದರ ಮೇಲೆ ಪೇಂಟ್ ಮಾಡಿಸಿ ಇಲ್ಲವೇ ಯಾವುದಾದರೊಂದು ಒಳ್ಳೆಯ ಡಿಸೈನಿನ ಬಟ್ಟೆ ಹೊದಿಸಿದರೆ ಅದರ ಆಕರ್ಷಣೆ ಮತ್ತಷ್ಟು ಹೆಚ್ಚುತ್ತದೆ. ಅದನ್ನು ಕೋಣೆಯ ಮೂಲೆಯಲ್ಲಿಟ್ಟು, ಅದರ ಮೇಲೆ ಫೋಟೋ ಫ್ರೇಮ್, ಹೂದಾನಿಯನ್ನಿಟ್ಟು ಸಾಕಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಕೂಲರ್‌ ಅಥವಾ ಕಬ್ಬಿಣದ ಪೆಟ್ಟಿಗೆಯಲ್ಲಿ ಯಾವಾಗಲಾದರೊಮ್ಮೆ ಬಳಕೆಯಾಗುವ ವಸ್ತುಗಳನ್ನು ಇಡಲು ಕೂಡ ಉಪಯೋಗಿಸಬಹುದು.

ಜಿ. ಸುಧಾರಾಣಿ.  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ