ಚಳಿಗಾಲ ರೊಮಾನ್ಸ್ ನಿಂದ ಕೂಡಿದ್ದರೂ ಸೌಂದರ್ಯದ ದೃಷ್ಟಿಯಿಂದ ಹಾನಿಕಾರಿಯಾಗಿದೆ. ತ್ವಚೆ ಶುಷ್ಕವಾಗುವುದು, ಕೈಕಾಲು ಒರಟಾಗುವುದು, ಉಗುರುಗಳು ಒಡೆಯುವುದು, ತುಟಿ ಒಡೆಯುವುದು ಇತ್ಯಾದಿ ಸಮಸ್ಯೆಗಳು ಚಳಿಗಾಲದ ಕೊಡುಗೆಯಾಗಿವೆ. ಕೆಳಗಿನ ಕೆಲವು ಟಿಪ್ಸ್ ಅನುಸರಿಸಿದರೆ ಚಳಿಗಾಲದ ಸಮಸ್ಯೆಗಳಿಂದ ಪಾರಾಗಬಹುದು.
ದಿನ (15 ರಿಂದ 30 SPFನ) ಮಾಯಿಶ್ಚರೈಸರ್ ಅಗತ್ಯವಾಗಿ ಹಚ್ಚಿ.
ಚರ್ಮ ಒಡೆಯುತ್ತಿದ್ದರೆ 1 ಚಮಚ ಗ್ಲಿಸರಿನ್ ಗೆ 1 ಚಮಚ ಗುಲಾಬಿಜಲ ಸೇರಿಸಿ ಪ್ರಭಾವಿತವಾಗಿರುವ ಜಾಗಕ್ಕೆ ಹಚ್ಚಿ. ನಂತರ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಹಚ್ಚಿ.
ವಾರಕ್ಕೊಮ್ಮೆ ಮೊಟ್ಟೆಯ ಹಳದಿ ಭಾಗದ ಮಾಸ್ಕ್ ಅಥವಾ ಬೇರಾವುದೇ ಮಾಯಿಶ್ಚರೈಸರ್ ಯುಕ್ತ ಮಾಸ್ಕ್ ಹಚ್ಚಿ. ಅದರಿಂದ ತ್ವಚೆ ಪುನರ್ಜೀವಿತವಾಗುವುದು.
ಶರೀರದ ಆರ್ದ್ರತೆ ಖಾಯಮ್ಮಾಗಿರಲು ಚೆನ್ನಾಗಿ ನೀರು ಕುಡಿಯಿರಿ. ಕನಿಷ್ಠ 8-10 ಗ್ಲಾಸ್ ನೀರನ್ನು ದಿನ ಕುಡಿಯಿರಿ.
ಹೆಚ್ಚು ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡಬೇಡಿ. ನಿಮ್ಮ ತ್ವಚೆ ಹೆಚ್ಚುವರಿ ಆರ್ದ್ರತೆಯನ್ನು ಹೀರಿಕೊಳ್ಳುತ್ತದೆ. ಸ್ನಾನವಾದ ಕೂಡಲೇ ಮಾಯಿಶ್ಚರೈಸರ್ ಅಥವಾ ಎಣ್ಣೆ ಅಗತ್ಯವಾಗಿ ಹಚ್ಚಿ.
ಒಂದು ವೇಳೆ ನಿಮ್ಮ ತ್ವಚೆಯ ಶುಷ್ಕತೆ ಹೆಚ್ಚುತ್ತಲೇ ಇದ್ದರೆ ಯಾವುದೇ ರೀತಿಯ ಪೀಲಿಂಗ್, ಮಾಸ್ಕ್, ಆಲ್ಕೋಹಾಲ್ ಬೇಸ್ಡ್ ಟೋನರ್ ಅಥವಾ ಆ್ಯಸ್ಟ್ರಿಂಜೆಂಟ್ ಗಳನ್ನು ಮರೆತೂ ಉಪಯೋಗಿಸಬೇಡಿ. ಇವೆಲ್ಲಾ ತ್ವಚೆಯ ಹೆಚ್ಚುವರಿ ಆರ್ದ್ರತೆಯನ್ನು ಹೀರಿಕೊಳ್ಳುತ್ತವೆ. ಅವುಗಳ ಬದಲು ಕ್ಲೆನ್ಸಿಂಗ್ ಮಿಲ್ಕ್, ಆಲ್ಕೋಹಾಲ್ ರಹಿತ ಟೋನರ್ ಉಪಯೋಗಿಸಬಹುದು.
ಶುಷ್ಕತನದ ಸಮಸ್ಯೆ ಇದ್ದರೆ ನಲ್ಲಿಯ ನೀರಿನಿಂದ ಮುಖ ತೊಳೆಯಬೇಡಿ. ಏಕೆಂದರೆ ಅದರಲ್ಲಿ ಕ್ಲೋರಿನ್, ಫ್ಲೋರೈಡ್ ಇರುತ್ತವೆ. ಅದರ ಬದಲು ಮಿನರಲ್ ವಾಟರ್, ಆಲ್ಕೋಹಾಲ್ ಫ್ರೀ ಕ್ಲೆನ್ಸಿಂಗ್ ಲೋಶನ್ ಅಥವಾ ಟೋನರ್ ನಿಂದ ಮುಖ ತೊಳೆಯಿರಿ.
ಉಗುರು ಬೆಚ್ಚಗಿನ ನೀರಿನಲ್ಲಿ ಓಟ್ ಮೀಲ್ ಅಥವಾ ಸೋಡಾ ಹಾಕಿ ಸ್ನಾನ ಮಾಡಿದರೆ ತ್ವಚೆಯ ಶುಷ್ಕತೆ ದೂರವಾಗುತ್ತದೆ.
ಮನೆಯಲ್ಲಿ ಆರ್ದ್ರತೆಯ ವಾತಾವರಣ ಉಂಟುಮಾಡಲು ಹೀಟರ್ ಮುಂದೆ ಒಂದು ಪ್ಲೇಟ್ ನಲ್ಲಿ ನೀರನ್ನು ತುಂಬಿಡಿ. ಹೀಟರ್ ನ ಬಿಸಿಯಿಂದ ತ್ವಚೆ ಶುಷ್ಕವಾಗಬಾರದು. ನೀರಿಗೆ ರೋಸ್ ವಾಟರ್ ಹಾಕಬಹುದು.
ಒಂದು ವೇಳೆ ನಿಮ್ಮ ತ್ವಚೆ ಸಂವೇದನಾಶೀಲವಾಗಿದ್ದರೆ ಪೆಟ್ರೋಲಿಯಂ ಅಂಶ ಹೆಚ್ಚಾಗಿರುವ ಸೌಂದರ್ಯ ಉತ್ಪನ್ನಗಳನ್ನು ಬಳಸಬೇಡಿ. ನ್ಯಾಚುರಲ್ ಅಥವಾ ಆರ್ಗ್ಯಾನಿಕ್ ಸ್ಕಿನ್ ಕೇರ್ ರೇಂಜ್ ಉಪಯೋಗಿಸಿ. ದಿನ ವ್ಯಾಯಾಮ ಮಾಡಿ.
ಟ್ಯಾನಿಂಗ್ ತಡೆಯಲು ಸೂರ್ಯನ ಕಿರಣಗಳನ್ನು ದೇಹದ ತೆರೆದ ಭಾಗಗಳ ಮೇಲೆ ನೇರವಾಗಿ ಬೀಳದಂತೆ ನೋಡಿಕೊಳ್ಳಿ.
ಕ್ಯೂಟಿಕಲ್ಸ್ ತೆಗೆಯಬೇಡಿ. ಏಕೆಂದರೆ ಕೈಗಳ ತ್ವಚೆ ಕಠಿಣವಾಗುತ್ತದೆ.
ಕೈಗಳನ್ನು ತೊಳೆದು ಒರೆಸಿದ ನಂತರ ದಿನಕ್ಕೊಮ್ಮೆ ಯಾವುದಾದರೂ ಅರೋಮಾ ಥೆರಪಿ ಆಯಿಲ್ ನಿಂದ ಅಗತ್ಯವಾಗಿ ಮಸಾಜ್ ಮಾಡಿ. ಕೈಗಳನ್ನು ಒರೆಸಿಕೊಂಡ ನಂತರ ಆಲ್ಮಂಡ್ ಅಥವಾ ಆ್ಯಪ್ರೋಕಾಟ್ ಸ್ಕ್ರಬ್ ನಿಂದ ಮಸಾಜ್ ಮಾಡಿ.
ಹಿಮ್ಮಡಿಗಳು ಒಡೆಯುವುದನ್ನು ತಡೆಯಲು ಎಣ್ಣೆ ಅಥವಾ ಮಾಯಿಶ್ಚರೈಸರ್ ಹಚ್ಚಿ.
ನಿಮ್ಮ ಡಯೆಟ್ ನಲ್ಲಿ ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ.
ಕೈಗಳನ್ನು ತೊಳೆದ ನಂತರ ಅವುಗಳ ಮೇಲೆ ಕೆಲವು ತೊಟ್ಟು ನಿಂಬೆರಸ ಹಚ್ಚಿ.
ವಿಟಮಿನ್ `ಸಿ’ ತೆಗೆದುಕೊಳ್ಳಿ. ಪದೇ ಪದೇ ಉಂಟಾಗುವ ಶೀತದಿಂದ ನೆಮ್ಮದಿ ಸಿಗುತ್ತದೆ.
ಮಾಯಿಶ್ಚರೈಸರ್ ಯುಕ್ತ ಲಿಪ್ ಬಾಮ್ ಉಪಯೋಗಿಸಿ. ಡ್ರೈಫ್ರೂಟ್ಸ್, ಕಾಳುಗಳು, ಮೊಟ್ಟೆಯ ಹಳದಿ ಭಾಗ, ಸೋಯಾ ಇತ್ಯಾದಿಗಳ ಸೇವನೆ ಉಗುರುಗಳನ್ನು ಸದೃಢಗೊಳಿಸುತ್ತದೆ.
– ಕೆ. ವಿನುತಾ