ಎಲ್ಲ ಮಹಿಳೆಯರೂ ಸುಂದರವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಅವರಿಗೆ ತಮ್ಮನ್ನು ಗಮನಿಸಿಕೊಳ್ಳಲು ಸಮಯವೇ ಸಿಗುವುದಿಲ್ಲ. ಸಂಸಾರದ ಜಂಜಾಟ, ನೌಕರಿಯಿಂದ ಸುಸ್ತಾಗಿ ಮನೆಗೆ ಬರುವುದು ಪ್ರತಿದಿನ ಇದೇ ಪದ್ಧತಿ. ಸ್ವಲ್ಪ ಸಮಯ ಸಿಕ್ಕರೂ, ಬ್ಯೂಟಿಪಾರ್ಲರ್ ನಲ್ಲಿ ಬಹಳ ಹೊತ್ತು ಕಾಯುವಿಕೆ ಹಾಗೂ ಹೆಚ್ಚಿನ ಬಿಲ್ ಮುಖವನ್ನು ದಣಿದಂತೆ ಮಾಡಿಬಿಡುತ್ತದೆ.
ಆದರೆ ಈಗ ನೀವು ಬ್ಯೂಟಿಪಾರ್ಲರ್ ಗಳಲ್ಲಿ ಬಹಳ ಹೊತ್ತು ಕಾಯುವುದು ಮತ್ತು ದುಬಾರಿ ಬಿಲ್ ಕೊಡುವುದನ್ನು ಬಿಟ್ಟು ಮನೆಯಲ್ಲಿಯೇ ನಿಮ್ಮನ್ನು ಅಲಂಕರಿಸಿಕೊಳ್ಳಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗಿ ನಿಮ್ಮ ಸೌಂದರ್ಯದಲ್ಲೂ ಹೊಳಪು ಬರುತ್ತದೆ.
ಈಗ ನಿಮ್ಮ ಅಡುಗೆಮನೆಯಲ್ಲಿಯೇ ಸಿಗುವ ಇಕೋಫ್ರೆಂಡ್ಲಿ ಪೇಸ್ಟ್ ನ ಸಾಮಗ್ರಿಗಳ ಬಗ್ಗೆ ಗಮನಿಸೋಣ :
ಓಟ್ಸ್ ಪೇಸ್ಟ್
ಬ್ರೆಡ್ ನಂತೆಯೇ ಓಟ್ಸ್ ಪೇಸ್ಟ್ ತ್ವಚೆಗೆ ಹೊಳಪನ್ನು ಕೊಡುತ್ತದೆ. ಕೊಂಚ ಹಸಿ ಹಾಲಿನಲ್ಲಿ ಓಟ್ಸ್ ನ್ನು ಒಂದು ಗಂಟೆ ಕಾಲ ನೆನೆಸಿಡಿ. ಇದು ಹಿಗ್ಗಿದಾಗ ಇದನ್ನು ಮುಖದ ಮೇಲೆ ಪೇಸ್ಟ್ ನಂತೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ತ್ವಚೆ ಕಾಂತಿಯುತವಾಗುವುದು.
ಮಂಜಿನ ಚಮತ್ಕಾರ
ಮುಖಕ್ಕೆ ಅದ್ಭುತ ಕಾಂತಿ ಕೊಡಲು ಇಬ್ಬನಿಯ ಹನಿಗಳನ್ನು ಹಚ್ಚಿ. ಬೆಳಗಿನ ಜಾವ ಹೂವು ಮತ್ತು ಎಲೆಗಳ ಮೇಲೆ ಇರುವ ಇಬ್ಬನಿಯನ್ನು ಹತ್ತಿಯಿಂದ ಸಂಗ್ರಹಿಸಿ. ಅದರಿಂದ ನಿಧಾನವಾಗಿ ಮುಖದ ಮೇಲೆ ಉಜ್ಜಿ ಮತ್ತು ಇಬ್ಬನಿಯಿಂದ ಮುಖವನ್ನು ಒದ್ದೆ ಮಾಡಿ. ಸತತವಾಗಿ ಇಬ್ಬನಿಯನ್ನು ಹಚ್ಚುವುದರಿಂದ ಮುಖ ಸುಂದರ ಹಾಗೂ ಕೋಮಲವಾಗುತ್ತದೆ.
ಸಾಸುವೆ ಹೂಗಳ ಪೇಸ್ಟ್
ಸಾಸುವೆಯ ಹಳದಿ ಹೂವುಗಳನ್ನು ತೆಗೆದುಕೊಳ್ಳಿ. ಅದರಲ್ಲಿ ಹಸಿರು ಕಡ್ಡಿಗಳು ಇರಬಾರದು. ಹಳದಿ ಹೂಗಳನ್ನು ಕಡಲೆ ಹಿಟ್ಟಿನೊಂದಿಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದು ಮುಖಕ್ಕೆ ಕಾಂತಿ ತರಲು ಉತ್ತಮವಾದ ಪೇಸ್ಟ್ ಆಗಿದೆ.
ಕಡಲೆಹಿಟ್ಟಿನ ಪೇಸ್ಟ್
1 ದೊಡ್ಡ ಚಮಚ ಕಡಲೆ ಹಿಟ್ಟಿಗೆ ಕೆನೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಅದಕ್ಕೆ ಕೊಂಚ ನಿಂಬೆರಸ ಹಾಕಿ. ಜೊತೆಗೆ 1 ಚಿಟಕಿ ಅರಿಶಿನ ಹಾಕಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಕೈಗಳಿಂದ ಉಜ್ಜಿ. ಅದರಿಂದ ತ್ವಚೆ ಸ್ವಚ್ಛವಾಗುತ್ತದೆ. ಈ ಪೇಸ್ಟ್ ನ್ನು ಮುಖದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ನಂತರ ಮುಖ ತೊಳೆಯಿರಿ.
ಬ್ರೆಡ್ ಪೇಸ್ಟ್
ಹಸಿ ಹಾಲಿನಲ್ಲಿ ಬ್ರೆಡ್ ನೆನೆಸಿ. ಸ್ವಲ್ಪ ಹೊತ್ತಿನ ನಂತರ ಅದು ಹಿಗ್ಗುತ್ತದೆ. ಅದನ್ನು ಚೆನ್ನಾಗಿ ಕಲಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮೊದಲು ಮುಖ ತೊಳೆದುಕೊಂಡು ನಂತರ ಇದನ್ನು ಹಚ್ಚಿ. ಅರ್ಧ ಗಂಟೆಯ ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತ್ವಚೆ ಸ್ವಚ್ಛವಾಗುತ್ತದೆ ಹಾಗೂ ಕಲೆಗಳೂ ಇರುವುದಿಲ್ಲ.
ಮೊಟ್ಟೆಯ ಬಿಳಿ ಭಾಗ
ಮೊಟ್ಟೆಯ ಬಿಳಿ ಭಾಗಕ್ಕೆ ಕೊಂಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆರಸ ಸೇರಿಸಿ ಮುಖದ ಮೇಲೆ ಪ್ಯಾಕ್ ನಂತೆ ಹಾಕಿ ಒಣಗಲು ಬಿಡಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖದಲ್ಲಿ ಬಿಗಿತ ಬರುತ್ತದೆ ಮತ್ತು ತ್ವಚೆಯೂ ಹೊಳೆಯುತ್ತದೆ.





