ಸಾಮಾನ್ಯವಾಗಿ ದೀಪ್ತಿಯ ಕಾಲುಗಳು ನೀಟಾಗಿರುವುದಿಲ್ಲ. ಅವಳ ಪಾದಗಳಂತೂ ಸದಾ ಒಡೆದಿರುತ್ತವೆ. ಒಮ್ಮೊಮ್ಮೆ ಬೇಸಿಗೆ ಅಥವಾ ಚಳಿಗಾಲದಲ್ಲಿ ಅದರಿಂದ ರಕ್ತ ತೊಟ್ಟಿಕ್ಕುತ್ತದೆ. ಆಫೀಸ್ ನಲ್ಲಂತೂ ದೀಪ್ತಿ ತನ್ನ ಪಾದಗಳು ಕಾಣದಿರಲು ಸಾಕ್ಸ್ ಧರಿಸುತ್ತಾಳೆ. ಒಂದು ದಿನ ಅವಳು ಮಾರ್ಕೆಟ್ ನಿಂದ ಮೆಟಲ್ ಸ್ಕ್ರಬರ್ ತಂದಳು ಹಾಗೂ ಅದರಿಂದ ತನ್ನ ಹಿಮ್ಮಡಿಯನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದಳು. ಅದನ್ನು ಒರೆಸಿದ ನಂತರ ಮಾಯಿಶ್ಚರೈಸರ್ ಹಚ್ಚಿದಳು. ಆದರೆ ಮಾರನೇ ದಿನ ಹಿಮ್ಮಡಿಗಳಲ್ಲಿ ಹೆಚ್ಚಿನ ನವೆಯುಂಟಾಗಿ ಅವು ಕೆಂಪು ಬಣ್ಣಕ್ಕೆ ತಿರುಗಿದ. ಅವಳು ತಕ್ಷಣ ವೈದ್ಯರ ಬಳಿ ಹೋದಾಗ, ಅವರು ದೀಪ್ತಿಗೆ ಫಂಗಲ್ ಇನ್ಫೆಕ್ಷನ್ ಆಗಿದೆ ಎಂದರು, ಅದರ ಚಿಕಿತ್ಸೆ ಬಹಳ ದಿನ ನಡೆಯಿತು. ಬಹಳಷ್ಟು ಮಂದಿ ತಮ್ಮ ಮುಖ ಹಾಗೂ ಕೇಶ ಸೌಂದರ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾರೆಯೇ ವಿನಾ ಕಾಲುಗಳ ಕಡೆ ನಿರ್ಲಕ್ಷ್ಯ ತೋರುತ್ತಾರೆ. ಕ್ರಮೇಣ ವಯಸ್ಸಾದ ಹಾಗೆ ಇದರ ಪರಿಣಾಮ ಕಾಣಿಸುತ್ತದೆ. ಕಾಲುಗಳು ನಿಮ್ಮ ಇಡೀ ದೇಹದ ತೂಕ ಹೊರುತ್ತವೆ, ಆದ್ದರಿಂದ ಅವುಗಳನ್ನು ಎಂದೂ ನಿರ್ಲಕ್ಷಿಸಬೇಡಿ. ಹಾಗಿದ್ದರೆ ಯಾವ ಯಾವ ಋತುವಿನಲ್ಲಿ ಕಾಲುಗಳ ಸಂರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕೆಂದು ವಿವರವಾಗಿ ತಿಳಿಯೋಣವೇ?
ಮಳೆಗಾಲದಲ್ಲಿ ಆರೈಕೆ
ಮಳೆಗಾಲದ ದಿನಗಳಲ್ಲಂತೂ ಕಾಲುಗಳನ್ನು ಬಲು ವಿಶೇಷವಾಗಿ ನೋಡಿಕೊಳ್ಳಬೇಕು. ಏಕಂದರೆ ಜಿಟಿ ಜಿಟಿ ಮಳೆಯಿಂದಾಗಿ ಈ ಕಾಲದಲ್ಲಿ ಫಂಗಲ್ ಇನ್‌ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚು. ಅದಕ್ಕಾಗಿಯೇ ಮಳೆಗಾಲದಲ್ಲಿ ಮಧುಮೇಹ ಹಾಗೂ ಆಸ್ತಮಾ ರೋಗಿಗಳು ತಮ್ಮ ಕಾಲುಗಳನ್ನು ಬಲು ಎಚ್ಚರಿಕೆಯಿಂದ ಗಮನಿಸಿಕೊಳ್ಳತಕ್ಕದ್ದು. ಏಕೆಂದರೆ ಅಂಥವರು ಬಲು ಬೇಗ ಸೋಂಕಿಗೆ ಈಡಾಗುತ್ತಾರೆ. ಹಾಗಾದರೆ ಮಳೆಗಾಲದಲ್ಲಿ ಕಾಲುಗಳ ಆರೈಕೆ ಹೇಗೆ ಮಾಡಬೇಕು?
ಈ ಕಾಲದಲ್ಲಿ ಆದಷ್ಟೂ ತೆರೆದ ಭಾಗವಿರುವ ಚಪ್ಪಲಿಯನ್ನೇ ಧರಿಸಿರಿ, ಆಗ ಅವು ಸುಲಭವಾಗಿ ಒಣಗುತ್ತವೆ.
ನೀವು ಹೊರಗಿನಿಂದ ಬರುವಾಗ ಮಳೆಯಲ್ಲಿ ನೆನೆದಿದ್ದರೆ, ಮೊದಲು ಮಾಮೂಲಿ ತಣ್ಣೀರಿನಿಂದಲೇ ಕಾಲು ತೊಳೆದು, ಉತ್ತಮ ಟವೆಲ್ ನಿಂದ ಅವನ್ನು ಒರೆಸಿ, ಮನೆಯಲ್ಲಿ ಹವಾಯಿ ಚಪ್ಪಲಿ ಧರಿಸಿ ಓಡಾಡಿರಿ.
ಮನೆಯ ಒಳಗೆ ಅಥವಾ ಹೊರಗೆ ಬರಿಗಾಲಲ್ಲಿ ಓಡಾಡಬೇಡಿ.
ನೀವು ಹೊರಗಿನ ಓಡಾಟಕ್ಕೆ ಶೂಸ್ ಬಯಸಿದರೆ ನೈಲಾನ್ ಬದಲಿಗೆ ಕಾಟನ್ ಸಾಕ್ಸ್ ನ್ನೇ ಧರಿಸಿ.
ಮನೆಯಿಂದ ಹೊರಗೆ ಹೋಗುವಾಗ, ಸದಾ ಒಂದು ಜೊತೆ ಎಕ್ಸ್ ಟ್ರಾ ಸಾಕ್ಸ್ ಇಟ್ಟುಕೊಳ್ಳಿ. ಆಕಸ್ಮಿಕವಾಗಿ ಸಾಕ್ಸ್ ಒದ್ದೆಯಾದರೆ, ಇನ್ನೊಂದನ್ನು ಧರಿಸಬಹುದು.
ಎಂದೂ ಒದ್ದೆಮುದ್ದೆ ಶೂಸ್ ಧರಿಸಬೇಡಿ. ಅವನ್ನು ಮಳೆ ಬರುವಾಗ ಒಣಗಿಸುವುದೂ ಕಷ್ಟ. ಆದರೂ ಮಳೆ ಬೀಳದ ಕಡೆ, ಅವನ್ನು ಪೇಪರ್ ಮೇಲೆ ಹರಡಿ ಒಣಗಿಸಲು ಪ್ರಯತ್ನಿಸಿ.
ಈ ಸಮಸ್ಯೆ ನಿವಾರಿಸಲು ಮಳೆಗಾಲದಲ್ಲಿ ಕನಿಷ್ಠ 2-3 ಜೊತೆ ಶೂ, ಚಪ್ಪಲಿ ಅಥವಾ ಸ್ಯಾಂಡಲ್ಸ್ ಇರಲಿ.
ಮಧುಮೇಹ, ಆಸ್ತಮಾದಿಂದ ಬಳಲುತ್ತಿರುವ ರೋಗಿಗಳಂತೂ ಈ ಕಾಲದಲ್ಲಿ ತಮ್ಮ ಕಾಲುಗಳ ಸಂರಕ್ಷಣೆಯತ್ತ ವಿಶೇಷ ಗಮನಹರಿಸಬೇಕು, ಏಕೆಂದರೆ ಈ ಸಂದರ್ಭದಲ್ಲಿ ಅವರ ಪಾದಗಳಿಗೆ ಸೋಂಕು ತಗುಲುವ ಸಂಭವ ಹೆಚ್ಚು.