ಗುರುವಂದನಾ ಕಾರ್ಯಕ್ರಮ :
ಇತ್ತೀಚೆಗೆ ಬೆಂಗಳೂರಿನ ವಿಜಯನಗರದಲ್ಲಿ ಶ್ರೀ ಸಂಕಷ್ಟಹರ ನಗೆ ಯೋಗ ಕೂಟ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ, ಕಮಲಾ ಹೆಗಡೆ ಕಟ್ಟೆಯವರಿಗೆ ಸನ್ಮಾನ ನಡೆಸಿತು.
ಬೆಂಗಳೂರು ಬಾಲೆಯ ಮೇರುಪ್ರತಿಭೆ :
ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿರುವ 10 ವರ್ಷದ ಅಂಜನಾ ಪದ್ಮನಾಭನ್ ಸೋನಿ ಚಾನ್ ಪ್ರಸಾರಿಸುವ ರಾಷ್ಟ್ರೀಯ ಮಟ್ಟದ `ಇಂಡಿಯನ್ ಐಡ್ ಜೂನಿಯರ್’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 5ನೇ ವಯಸ್ಸಿನಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಗಾಯನ ಕಲಿಯಲಾರಂಭಿಸಿದ ಅಂಜನಾ, ಅಂತಿಮ ಸುತ್ತಿನ 10 ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಮುಡಿಗೇರಿಸಿದ್ದಾರೆ. ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಈ ಪ್ರಶಸ್ತಿ ವಿತರಿಸಿ, ಹರಸಿದರು.
ಸ್ವಾತಂತ್ರ್ಯೋತ್ಸದ ಸಂಭ್ರಮ :
ಕನ್ನಡ ಯುವಜನ ಸಂಘದ ಆಶ್ರಯದಲ್ಲಿ ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ವಿಜ್ಞಾನಿ ಡಾ. ಸಿ. ಅಶ್ವತ್ಥ್ ಧ್ವಜಾರೋಹಣ ನಡೆಸಿಕೊಟ್ಟರು. ಗಂಗಮ್ಮ ಹೊಂಬೇಗೌಡ ಶಾಲಾಮಕ್ಕಳಿಂದ ರಾಷ್ಟ್ರಗೀತೆ ಮತ್ತು ದೇಶಭಕ್ತಿಗೀತೆಗಳ ಗಾಯನ ನಡೆಯಿತು.
ಭರತನಾಟ್ಯ ರಂಗಪ್ರವೇಶ :
ಇತ್ತೀಚೆಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕುಮಾರಿ ರಿತು ರಾಯ್ ಅವರ ಭರತನಾಟ್ಯ ರಂಗಪ್ರವೇಶ ಶಾಸ್ತ್ರೋಕ್ತವಾಗಿ ನೆರವೇರಿತು. ಗುರು ಡಾ. ಪದ್ಮಜಾ ಸುರೇಶ್ ರ ನೇತೃತ್ವದಲ್ಲಿ ತರಬೇತಿ ಪಡೆದಿದ್ದ ರಿತು, ತನ್ನ ಅಮೋಘ ನೃತ್ಯಾರ್ಪಣೆಯಿಂದ ಜನಮಾನಸವನ್ನು ಗೆದ್ದುಕೊಂಡಳು.
ಮಧುರ ಉಲಿಯ ಇಂಚರ :
ಇತ್ತೀಚೆಗೆ ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಏರ್ಪಡಿಸಿದ್ದ ತಿಂಗಳ ಸರಣಿಯ `ಇಂಚರ 25′ ಕಾರ್ಯಕ್ರಮದಲ್ಲಿ ಎಸ್. ಅಪೂರ್ವಾ ಹಾಗೂ ಸುಕೃತಾ ಪ್ರಸಿದ್ಧ ಕವಿಗಳ ಭಾವಗೀತೆಗಳನ್ನು ಸುಮಧುರವಾಗಿ ಹಾಡಿದರು. ಇವರಿಗೆ ಎಸ್. ಅಭಿಜಿತ್ ಹಾರ್ಮೋನಿಯಂ ಹಾಗೂ ಗುರುನಂದನ್ ರಾವ್ ತಬಲ ಮೂಲಕ ಸಹಕಾರ ನೀಡಿದರು.
ಪುಸ್ತಕ ಲೋಕಾರ್ಪಣೆ :
ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮೌನೇಶ್ ಬಡಿಗೇರರ `ಮಾಯಾ ಕೋಲಾಹಲ’ ಎಂಬ ಕಥಾಸಂಗ್ರಹವನ್ನು ಬಿಡುಗಡೆ ಮಾಡಲಾಯಿತು. ಇದು ಈ ವರ್ಷದ ಛಂದ ಪುಸ್ತಕ ಪ್ರಕಾಶನದಡಿ ಪ್ರಕಟಗೊಂಡು, ಪ್ರಶಸ್ತಿ ಗಳಿಸಿತು. ಕಥೆಗಾರರ ಜೊತೆ ಪ್ರಕಾಶಕರಾದ ಸುಧೇಂದ್ರ, ವಿಮರ್ಶಕ ಟಿ.ಸಿ. ಅಶೋಕ್, ಕೃತಿಕಾರ ಆನಂದ ಝಂಜರಾಡ ಹಾಜರಿದ್ದರು.
ಜನಪದ ಗಾಯನೋತ್ಸವ :
`ವಿಶ್ವ ಜಾನಪದ ದಿನ’ದ ಪ್ರಯುಕ್ತ ಇತ್ತೀಚೆಗೆ ಸ್ನೇಹಸೇತು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಮಾದಾವರದ ಲಕ್ಷ್ಮೀಪುರದಲ್ಲಿ `ಜನಪದ ಗಾಯನೋತ್ಸವ’ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಡಾ. ವೀರೇಶ್ ಬಳ್ಳಾರಿ, ಎಂ.ಜಿ. ನಿಂಗಪ್ಪ ಹಾಗೂ ನಾವೀನ್ಯ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಸನ್ಮಾನ ಸಮಾರಂಭ :
ಹೊರನಾಡಲ್ಲಿ ಕನ್ನಡ ಅಭಿವೃದ್ಧಿಗಾಗಿ ಮೂರು ದಶಕಗಳ ಸೇವೆ ಸಲ್ಲಿಸಿರುವ `ದೆಹಲಿ ಕನ್ನಡಿಗ’ ಪತ್ರಿಕೆಯ ಸಂಪಾದಕ ಬಾ. ಸಾಮಗ ಅವರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಕೆ. ಸುಧಾ ರಾವ್, ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.
ಗಂಧರ್ವ ಗಾಯನ :
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೈಸೂರಿನ ಕುವೆಂಪುನಗರದಲ್ಲಿರುವ ವೀಣೆ ಶೇಷಣ್ಣ ಸಭಾಂಗಣದಲ್ಲಿ, ಮಧುರೈನ ವಿದ್ವಾನ್ ಟಿ.ಎನ್. ಶೇಷಗೋಪಾಲನ್ ರವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇವರ ಗಂಧರ್ವ ಕಂಠಸಿರಿಯ ಗಾಯನ ನೆರೆದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು. ಸಿ.ಎನ್. ಚಂದ್ರಶೇಖರ್ ಪಿಟೀಲು, ತುಮಕೂರು ಬಿ. ರವಿಶಂಕರ್ ಮೃದಂಗ ಹಾಗೂ ಎಂ. ಗುರುರಾಜ್ ಮೋರ್ಚಿಂಗ್ ನೊಂದಿಗೆ ಸಹಕರಿಸಿದರು.
ಸಾಧನೆಗೆ ಸಂದ ಗೌರವ :
ಇತ್ತೀಚೆಗೆ ಕನ್ನಡ ಯುವಜನ ಸಂಘ ಹೊಂಬೇಗೌಡನಗರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಎಚ್.ಎನ್. ದೊರೆಸ್ವಾಮಿಯವರನ್ನು ಶಾಲು ಹೊದಿಸಿ ಸನ್ಮಾನಿಸಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ, ಕಾರ್ಯದರ್ಶಿ ಭದ್ರೇಗೌಡರ ಜೊತೆ ಎಸ್.ಎಂ. ನಾರಾಯಣಪ್ಪ, ಕೆ.ವಿ. ರೆಡ್ಡಿ, ವಿಜ್ಞಾನಿ ಡಾ. ಅಶ್ವತ್ಥ್ ಮುಂತಾದ ಗಣ್ಯರು ಹಾಜರಿದ್ದರು.
ರಾಷ್ಟ್ರೀಯ ಏಕತಾ ಸಮ್ಮಾನ್ ಪ್ರಶಸ್ತಿ :
ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜಿ.ಎಸ್.ಎಸ್ ಅಕಾಡೆಮಿ ಆಫ್ ಟೆಕ್ನಿಕ್ ಎಜುಕೇಷನ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಡಿ.ವಿ. ಅಶೋಕ್ ಅವರಿಗೆ, ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಜಿ ರಾಜ್ಯಪಾಲ ಭೀಷ್ಮ ನರೇನ್ ಸಿಂಗ್ `ರಾಷ್ಟ್ರೀಯ ಏಕತಾ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿದರು.
ಗಮನಸೆಳೆದ ಕೀಬೋರ್ಡ್ ವಾದನ :
ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ನಡೆಸಿದ ತಿಂಗಳ ಸರಣಿ `ಇಂಚರ 24′ ಕಾರ್ಯಕ್ರಮವನ್ನು ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಏರ್ಪಡಿಸಿತ್ತು. ಇದರಲ್ಲಿ ಯುವ ಪ್ರತಿಭಾವಂತ ಕೀಬೋರ್ಡ್ ವಾದಕ ಎಸ್. ಪ್ರಣವ್, ತಮ್ಮ ಅಪೂರ್ವ ಕೀಬೋರ್ಡ್ ವಾದನದ ಮೂಲಕ ಕಲಾಸಕ್ತರನ್ನು ರಂಜಿಸಿದರು. ಇವರಿಗೆ ಎಂ. ಗುರುನಂದನ್ ರಾವ್ ತಬಲ ಮೂಲಕ ಸಹಕರಿಸಿದರು.
ರಂಜಿಸಿದ ಸಂಗೀತಸುಧೆ :
ಗೋಕುಲಾಷ್ಟಮಿ ನಿಮಿತ್ತ ಇತ್ತೀಚೆಗೆ ಬೆಳಗಾವಿಯ ಟಿಳಕವಾಡಿ ಅಮಾಶಿ ಕ್ಲಾಸಿಸ್ ನಲ್ಲಿ ಭಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಸ್ಥಳೀಯ ಕಲಾವಿದರಾದ ವಿದ್ಯಾ ಉಪೇಂದ್ರ ಹಾಗೂ ಉಪೇಂದ್ರ ರಂಜನೀಯವಾಗಿ ಈ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ಹರ್ಷ ಮರೊಡೆ ತಬಲಾದೊಂದಿಗೆ ಸಹಕರಿಸಿದರು.